ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ರಾಷ್ಟ್ರೀಯ ಶಿಕ್ಷಣ ನೀತಿ – 2020 – ಪ್ರೊ. ಕೆ. ಬಾಲವೀರಾ ರೆಡ್ಡಿ

1 min read
  • ನಾವು ಮಾನವಿತೆ ಮತ್ತು ಸಮಾನತೆಯ ಮೌಲ್ಯಗಳ ಮೇಲೆ ನಿರ್ಮಿತವಾದ ಆಧುನಿಕ ಪ್ರಜಾಪ್ರಭುತ್ವದೊಂದಿಗಿದ್ದೇವೆ. ನಾವು ನಿರ್ಮಿಸಲು ಬಯಸುವ ಸಮಾಜದ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ನೀಡಬೇಕು

– ಡಾ. ಸರ್ವಪಲ್ಲಿ ರಾಧಾಕೃಷ್ಣನ್

ಜಗತ್ತು ತ್ವರಿತ ಬದಲಾವಣೆಗಳಿಗೆ ಒಳಗಾಗುತ್ತಿದೆ. ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಗೆ ಪ್ರತಿಕ್ರಿಯೆಯಾಗಿ ಶಿಕ್ಷಣ ವ್ಯವಸ್ಥೆಯು ಶರವೇಗದಲ್ಲಿ ವಿಕಸನವನ್ನು ಹೊಂದುತ್ತಿದ್ದು, ಬೃಹತ್ ದತ್ತಾಂಶ, ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತೆಯಂತಹ ವಿವಿಧ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳು ವಿಜ್ಞಾನ, ಸಾಮಾಜ ವಿಜ್ಞಾನ ಮತ್ತು ಮಾನವಿಕ ಸೇರಿದಂತೆ ಬಹುಶಿಸ್ತೀಯ ಸಾಮರ್ಥ್ಯಗಳನ್ನು ಹೊಂದಿರುವ ಕಾರ್ಯಪಡೆಯನ್ನು ನಿರೀಕ್ಷಿಸುತ್ತಿವೆ. ಜೊತೆಗೆ, ಸಾರ್ವತ್ರಿಕವಾಗಿ ಅನ್ವಯಿಸಬಹುದಾದ, ಯೋಚಿಸುವ, ಕಲಿಯುವ, ಕಾರ್ಯನಿರ್ವಹಿಸುವ ಮತ್ತು ಇನ್ನಿತರೆ 21ನೇ ಶತಮಾನದ ಕೌಶಲ್ಯಗಳನ್ನು ಹೊಂದಿರುವುದೂ ಸಹ ಅತ್ಯಗತ್ಯವಾಗಿದೆ. ವಿಶ್ವದ ಅತಿದೊಡ್ಡ ಶೈಕ್ಷಣಿಕ ಜಾಲವ್ಯವಸ್ಥೆ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತವನ್ನು ಜಾಗತಿಕ ಮಟ್ಟದಲ್ಲಿ ಜ್ಞಾನದ ಪರಮೋಚ್ಚ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ (ಎನ್.ಇ.ಪಿ-2020) ಯನ್ನು ಇತ್ತೀಚೆಗಷ್ಟೇ ಹೊರತಂದಿದ್ದು, ಈ ಲೇಖನವು ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನಗಳು ಮತ್ತು ಭಾರತದ ಶಿಕ್ಷಣ ಕ್ಷೇತ್ರದ ಮೇಲೆ ಅದರಿಂದಾಗುವ ಪರಿಣಾಮಗಳನ್ನು ವಿವರಿಸುತ್ತದೆ.

ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯು ಜಾಗತಿಕವಾಗಿ ಮೂರನೇ ಸ್ಥಾನವನ್ನು ಹೊಂದಿದ್ದು, ಮೊದಲೆರಡು ಸ್ಥಾನಗಳಲ್ಲಿ ಅಮೆರಿಕ ಮತ್ತು ಚೀನಾ ದೇಶಗಳಿವೆ. ಪ್ರಸ್ತುತ ಭಾರತದಲ್ಲಿ ಕೇಂದ್ರೀಯ, ರಾಜ್ಯ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ಸೇರಿ ಒಟ್ಟು 982 ವಿಶ್ವವಿದ್ಯಾಲಯಗಳು (ಯು.ಜಿ.ಸಿ, 2021) ಹಾಗೂ ಸುಮಾರು 53 ಸಾವಿರಕ್ಕೂ ಹೆಚ್ಚು ಕಾಲೇಜುಗಳಿದ್ದು, ಇವುಗಳಲ್ಲಿ ಸುಮಾರು 3.8 ಕೋಟಿಗೂ ಮಿಗಿಲಾದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರಸ್ತುತ ಒಟ್ಟು ದಾಖಲಾತಿ ಅನುಪಾತವು ಸುಮಾರು ಶೇಖಡ 26.5 ರಷ್ಟಿದ್ದು, 2035ರ ವೇಳಗೆ ಇದನ್ನು ಶೇಖಡ 50ಕ್ಕೆ ಏರಿಸುವುದು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಭಾರತವನ್ನು ಜಾಗತಿಕ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಳ್ಳುವುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಹೇಳುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನದ ಭಾರತಕ್ಕೆ ಅಡಿಪಾಯವನ್ನು ಹಾಕಲಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯರನ್ನು ಹೆಚ್ಚು ಸಬಲೀಕರಣಗೊಳಿಸುತ್ತದೆ ಮತ್ತು ಇನ್ನೂ ಹೆಚ್ಚು ಅವಕಾಶಗಳಿಗೆ ಸುಲಭವಾಗಿ ಆಕರ್ಷಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಒಂದೇ ವೃತ್ತಿಗೆ ಅಂಟಿಕೊಳ್ಳದ ಯುಗಕ್ಕೆ ನಾವು ಸಾಗುತ್ತಿದ್ದೇವೆ. ಹೀಗಾಗಿ, ಆ ವ್ಯಕ್ತಿಯು ನಿರಂತರವಾಗಿ ಕೌಶಲ್ಯ ಉನ್ನತೀಕರಣ ಮತ್ತು ಹೊಸ-ಕೌಶಲ್ಯ ಹೊಂದುತ್ತಿರಬೇಕು. ಇದನ್ನು ಗಮನದಲ್ಲಿರಿಸಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ದೂರದೃಷ್ಟಿ

ಈ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತದೆ. ಇದು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ರಾಷ್ಟ್ರವನ್ನು ಸುಸ್ಥಿರ ಮತ್ತು ಸ್ಪಂದಕ ಜ್ಞಾನ ಸಮಾಜವಾಗಿ ಪರಿವರ್ತಿಸಲು ನೇರವಾಗಿ ಕೊಡುಗೆ ನೀಡುತ್ತದೆ. ಈ ಮೂಲಕ ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ಮಾಡುತ್ತದೆ.

ನಮ್ಮ ಪಠ್ಯಕ್ರಮ ಮತ್ತು ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಆಳವಾದ ಗೌರವವನ್ನು ಬೆಳೆಸಬೇಕು. ತಮ್ಮ ದೇಶದೊಂದಿಗೆ ಬಾಂಧವ್ಯ ಹೊಂದಿರಬೇಕು ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನೀತಿಯು ಸೂಚಿಸುತ್ತದೆ.

ವಿದ್ಯಾರ್ಥಿಗಳಲ್ಲಿ ಭಾರತೀಯನಾಗಿರುವುದರ ಬಗ್ಗೆ ಆಳವಾದ ಹೆಮ್ಮೆಯನ್ನು ಚಿಂತನೆಯಲ್ಲಿ ಮಾತ್ರವಲ್ಲದೆ, ಉದ್ದೇಶ, ಬುದ್ಧಿಶಕ್ತಿ ಮತ್ತು ಕಾರ್ಯಗಳಲ್ಲಿಯೂ ಸಹ ಮೂಡಿಸುವುದು. ಹಾಗೆಯೇ ಮಾನವ ಹಕ್ಕುಗಳನ್ನು, ಸುಸ್ಥಿರ ಅಭಿವೃದ್ಧಿ ಮತ್ತು ಜೀವನ ಹಾಗೂ ಜಾಗತಿಕ ಕ್ಷೇಮವನ್ನು ಬೆಂಬಲಿಸುವ ಜ್ಞಾನ, ಕೌಶಲ್ಯ, ಮೌಲ್ಯಗಳು ಮತ್ತು ನಿಲುವುಗಳು ಬಗ್ಗೆ ಜವಾಬ್ದಾರಿಯುತ ಬದ್ಧತೆ, ತನ್ಮೂಲಕ ನಿಜವಾದ ಜಾಗತಿಕ ನಾಗರಿಕನನ್ನು ಪ್ರತಿಬಿಂಬಿಸುವುದು ಈ ನೀತಿಯ ದೃಷ್ಟಿಕೋನವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಭೂತ ತತ್ವಗಳು

ಮುಖ್ಯವಾಗಿ ಶಿಕ್ಷಣ ವ್ಯವಸ್ಥೆ ಹಾಗೂ ವೈಯಕ್ತಿಕ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ಮೂಲಭೂತ ತತ್ವಗಳೆಂದರೆ:

  • ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ- ಶಿಕ್ಷಣದಲ್ಲಿ ಎಲ್ಲಾ ಜ್ಞಾನಗಳ ಏಕತೆಯನ್ನು ಮತ್ತು ಸಮಗ್ರತೆಯನ್ನು ತರಲು ಬಹುಶಿಸ್ತೀಯ ಕಲಿಕೆಗೆ ಪ್ರೋತ್ಸಾಹ
  • ಏಕರೂಪತೆ – ದೇಶದಾದ್ಯಂತ ಶಿಕ್ಷಣದ ಎಲ್ಲಾ ಹಂತಗಳ ಪಠ್ಯಕ್ರಮಗಳಲ್ಲಿ ಏಕರೂಪತೆ ತರುವುದು
  • ಹೊಂದಿಕೊಳ್ಳುವಿಕೆ- ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಆಸಕ್ತಿಗಳ ಪ್ರಕಾರ ತಮ್ಮದೇ ಆದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು
  • ನೈತಿಕತೆ ಮತ್ತು ಮಾನವ ಮತ್ತು ಸಾಂವಿಧಾನಿಕ ಮೌಲ್ಯಗಳು-ನೀತಿವಂತಿಕೆ ಮತ್ತು ಮಾನವೀಯ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತರುವುದು
  • ತಾರ್ಕಿಕ ನಿರ್ಧಾರ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ
  • ಜೀವನ ಕೌಶಲ್ಯಗಳು- ಸಂವಹನ, ಸಹಕಾರ, ಕೂಡುಗೆಲಸದ ಮನೋಭಾವ ಮತ್ತು ಹೊಂದಿಕೊಳ್ಳುವಿಕೆ ಇತ್ಯಾದಿಗಳು
  • ಕಲಿಕೆಗಾಗಿ ನಿಯಮಿತ ರಚನಾತ್ಮಕ ಮೌಲ್ಯಮಾಪನಕ್ಕೆ ಗಮನ
  • ಅತ್ಯುತ್ತಮ, ಉತ್ತಮ ಗುಣಮಟ್ಟದ ಸಂಶೋಧನೆಗೆ ಪ್ರೋತ್ಸಾಹ
  • ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನದಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆ
  • “ಸರಳ ಆದರೆ ಬಿಗಿಯಾದ” ನಿಯಂತ್ರಕ ಚೌಕಟ್ಟು – ಸ್ವಾಯತ್ತತೆ, ಉತ್ತಮ ಆಡಳಿತ ಮತ್ತು ಸಬಲೀಕರಣದ ಮೂಲಕ ಸಮಗ್ರತೆ, ಪಾರದರ್ಶಕತೆ ಮತ್ತು ಸಂಪನ್ಮೂಲ ದಕ್ಷತೆಯ ಖಾತ್ರಿ
  • ಏಕತಾನತೆಯ ಶಿಕ್ಷಣ ಮತ್ತು ಪರೀಕ್ಷಾಧಾರಿತ ಶಿಕ್ಷಣ ಬದಲಿಗೆ ಪರಿಕಲ್ಪನಾ ತಿಳುವಳಿಕೆಗೆ ಒತ್ತು
  • ಬೋಧನೆ ಮತ್ತು ಕಲಿಕೆಯಲ್ಲಿ ಬಹುಭಾಷಾ ಬಳಕೆ ಮತ್ತು ಭಾಷೆಯ ಶಕ್ತಿಯನ್ನು ಉತ್ತೇಜಿಸುವುದು
  • ಪಠ್ಯಕ್ರಮ, ಶಿಕ್ಷಣ ಮತ್ತು ನೀತಿಗಳಲ್ಲಿ ಸ್ಥಳೀಯ ವೈವಿಧ್ಯತೆ ಮತ್ತು ಪ್ರಾದೇಶಿಕತೆಗೆ ಗೌರವ
  • ಸಂಪೂರ್ಣ ಸಮತೋಲನ ಮತ್ತು ಅಂತರ್ಗತ ಶಿಕ್ಷಣ
  • ಶಿಕ್ಷಕರು ಮತ್ತು ಅಧ್ಯಾಪಕರು ಕಲಿಕೆಯ ಪ್ರಕ್ರಿಯೆಯ ಜೀವಾಳ
  • ಶ್ರೀಮಂತ, ವೈವಿಧ್ಯಮಯ, ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳು ಹಾಗೂ ಸಂಪ್ರದಾಯಗಳನ್ನುಳ್ಳ ಭಾರತದಲ್ಲಿ ನೆಲೆ ಗಟ್ಟಿಗೊಳಿಸುವಿಕೆ ಮತ್ತು ಹೆಮ್ಮೆ ಪಡುವಂತೆ ಮಾಡುವುದು
  • ಶಿಕ್ಷಣವು ಸಾರ್ವಜನಿಕ ಸೇವೆಯಾಗಿದ್ದು, ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು
  • ಈ ಬಲವಾದ ಸಾರ್ವಜನಿಕ ಶಿಕ್ಷಣದಲ್ಲಿ ಗಣನೀಯ ಹೂಡಿಕೆ ಮಾಡಲಾಗುತ್ತಿದೆ

ಪ್ರಸ್ತುತ ವ್ಯವಸ್ಥೆಗೆ ಪ್ರಮುಖ ಬದಲಾವಣೆಗಳು

ಈ ನೀತಿಯಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಮರು ಚೈತನ್ಯಗೊಳಿಸಲು ಪ್ರಸ್ತುತ ವ್ಯವಸ್ಥೆಗೆ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ:

  • ಭಾರತದಾದ್ಯಂತ ಸ್ಥಳೀಯ/ಭಾರತೀಯ ಭಾಷೆಗಳಲ್ಲಿ ಬೋಧನಾ ಮಾಧ್ಯಮ ನೀಡುವ ದೊಡ್ಡ, ಬಹುಶಿಸ್ತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಒಳಗೊಂಡ ಉನ್ನತ ಶಿಕ್ಷಣ ವ್ಯವಸ್ಥೆಯತ್ತ ಸಾಗುವುದು
  • ಹೆಚ್ಚು ಬಹುಶಿಸ್ತೀಯ ಪದವಿಪೂರ್ವ ಶಿಕ್ಷಣದ ಕಡೆಗೆ ಸಾಗುವುದು
  • ಅಧ್ಯಾಪಕರು ಮತ್ತು ಸಾಂಸ್ಥಿಕ ಸ್ವಾಯತ್ತತೆಯತ್ತ ಸಾಗುವುದು
  • ಪಠ್ಯಕ್ರಮ, ಶಿಕ್ಷಣಶಾಸ್ತ್ರ, ಮೌಲ್ಯಮಾಪನ, ಮತ್ತು ವಿದ್ಯಾರ್ಥಿ ಬೆಂಬಲಗಳಲ್ಲಿ ಸಮಗ್ರ ಬದಲಾವಣೆ
  • ಬೋಧಕವರ್ಗ ಮತ್ತು ಸಾಂಸ್ಥಿಕ ನಾಯಕತ್ವದ ದೃಢನಿಷ್ಠೆಯನ್ನು ಪುನರುಚ್ಚರಿಸುವುದು
  • ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ
  • ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದಿರುವ ಉನ್ನತ ಅರ್ಹ ಸ್ವತಂತ್ರ ಮಂಡಳಿಗಳಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತ
  • ಉನ್ನತ ಶಿಕ್ಷಣದಲ್ಲಿ ಏಕ ನಿಯಂತ್ರಕದಿಂದ “ಸರಳ ಆದರೆ ಬಿಗಿಯಾದ” ನಿಯಂತ್ರಕ ಚೌಕಟ್ಟಿನ ಅಳವಡಿಕೆ
  • ಅವಕಾಶ, ಸಮತೋಲನ ಮತ್ತು ಸೇರ್ಪಡೆಗಳ ಹೆಚ್ಚಳ

ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣ

ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಸಮಗ್ರ ದಾಖಲೆಯಾಗಿದೆ. ಶಿಕ್ಷಣ ಕ್ಷೇತ್ರವನ್ನು ಅಂತರ್ಗತ, ಸಮಗ್ರ, ಬಹುಶಿಸ್ತೀಯ ಮತ್ತು ಹೆಚ್ಚು ಫಲಪ್ರದವಾಗಿಸುವ ಮೂಲಕ ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನಮ್ಮ ಭಾರತ ದೇಶವು ಪ್ರಾಚೀನ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ, ನಳಂದ ಇತ್ಯಾದಿಗಳಿಂದ ಸಮಗ್ರ ಮತ್ತು ಬಹುಶಿಸ್ತೀಯ ಕಲಿಕೆಯ ದೀರ್ಘ ಇತಿಹಾಸವನ್ನು ಹೊಂದಿದೆ. ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣವು ಎಲ್ಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು 21ನೇ ಶತಮಾನದ ಸಾಮರ್ಥ್ಯವನ್ನು ಹೊಂದಿರುವ ಸರ್ವಾಂಗೀಣ ವ್ಯಕ್ತಿಗಳನ್ನಾಗಿ ರೂಪಿಸಲು ಸಹಾಯ ಮಾಡುತ್ತದೆ. ಬಹು-ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳನ್ನು ನೀಡಿ-ಪ್ರಸ್ತುತ ಚಾಲ್ತಿಯಲ್ಲಿರುವ ಕಠಿಣ ಗಡಿಗಳನ್ನು ತೆಗೆದುಹಾಕಲಾಗುವುದು. ಜೀವಿತಾವಧಿಯ ಕಲಿಕೆಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾಗುವುದು, ಪಠ್ಯಕ್ರಮವನ್ನು ನಿಗದಿಪಡಿಸುವಲ್ಲಿ ಬೋಧಕವರ್ಗ ಮತ್ತು ಸಾಂಸ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸುವ ಮೂಲಕ ಪ್ರೋತ್ಸಾಹಿಸಲಾಗುವುದು. ಪದವಿ ಕಾರ್ಯಕ್ರಮಗಳ ರಚನೆ ಮತ್ತು ಅವಧಿಗಳನ್ನು ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳೊಂದಿಗೆ ಸರಿಹೊಂದಿಸಲಾಗುತ್ತದೆ. ದೇಶವನ್ನು 21 ನೇ ಶತಮಾನ ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯತ್ತ ಕೊಂಡೊಯ್ಯಲು ಭಾರತದ ಶಿಕ್ಷಣ ವ್ಯವಸ್ಥೆಗೆ ಇಂತಹ ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣದ ಅಗತ್ಯವಿದೆ.

ಶಿಕ್ಷಣ ಸಂಸ್ಥೆಗಳ ಪುನರ್ನಿರ್ಮಾಣ

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು 2035ರ ವೇಳೆಗೆ 26.3% (2018) ರಿಂದ 50% ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಅದರಂತೆ, ಪ್ರತಿಯೊಂದು ಬಹುಶಿಸ್ತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಮತ್ತು ಉನ್ನತ ಶಿಕ್ಷಣ ಕ್ಲಸ್ಟರ್.ಗಳು/ ಜ್ಞಾನ ಕೇಂದ್ರಗಳು 3,000 ಅಥವಾ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದುವ ಗುರಿಯಿದೆ. ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಸಂಸ್ಥೆಗಳ ಜಟಿಲ ನಾಮಕರಣಗಳಾದ ‘ಡೀಮ್ಡ್-ಟುಬಿ ಯುನೀವರ್ಸಿಟಿ’, ‘ಅಫಿಲಿಯೆಟಿಂಗ್ ಯುನೀವರ್ಸಿಟಿ’, ‘ಅಫಿಲಿಯೆಟಿಂಗ್ ಟೆಕ್ನಿಕಲ್ ಯುನೀವರ್ಸಿಟಿ’, ‘ಯುನಿಟರಿ ಯುನೀವರ್ಸಿಟಿ’ ಇವುಗಳನ್ನು ಸರಳವಾಗಿ  ಯುನೀವರ್ಸಿಟಿ’ (ವಿಶ್ವವಿದ್ಯಾಲಯ) ಎಂದು ಬದಲಾಯಿಸಲಾಗುವುದು. ಶ್ರೇಣೀಕೃತ ಸ್ವಾಯತ್ತತೆಯ ವ್ಯವಸ್ಥೆಯ ಮೂಲಕ ಹದಿನೈದು ವರ್ಷಗಳ ಅವಧಿಯಲ್ಲಿ ‘ಅಫಿಲಿಯೆಟೆಡ್ ಕಾಲೇಜುಗಳ’ ವ್ಯವಸ್ಥೆಯನ್ನು ಕ್ರಮೇಣ ತೆಗೆದು ಹಾಕಲಾಗುವುದು. ಕಾಲೇಜುಗಳಿಗೆ ಶ್ರೇಣೀಕೃತ ಸ್ವಾಯತ್ತತೆಯನ್ನು ನೀಡುವ ಹಂತ ಹಂತದ ಕಾರ್ಯವಿಧಾನವನ್ನು ಶ್ರೇಣೀಕೃತ ಮಾನ್ಯತೆಯ ಪಾರದರ್ಶಕ ವ್ಯವಸ್ಥೆಯ ಮೂಲಕ ಸ್ಥಾಪಿಸಲಾಗುವುದು.

ಸಂಸ್ಥೆಗಳ ಮೂರು ವರ್ಗಗಳು

ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹುಶಿಸ್ತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಕ್ಲಸ್ಟರ್ ಗಳು / ಜ್ಞಾನ ಕೇಂದ್ರಗಳಾಗಿ ಪರಿವರ್ತಿಸುವ ಮೂಲಕ ಉನ್ನತ ಶಿಕ್ಷಣದ ವಿಘಟನೆಯನ್ನು ಕೊನೆಗಾಣಿಸುವುದು ಈ ನೀತಿಯ ಮುಖ್ಯ ಅಂಶವಾಗಿದೆ. ಈ ಸಂಸ್ಥೆಗಳ ಮೂರು ವರ್ಗಗಳೆಂದರೆ:

  • ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯಗಳು: ಉತ್ತಮ ಗುಣಮಟ್ಟದ ಸಂಶೋಧನೆ ಮತ್ತು ಉತ್ತಮ ಗುಣಮಟ್ಟದ ಬೋಧನೆಗೆ ಸಮಾನ ಒತ್ತು.
  • ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯಗಳು: ಬೋಧನೆಗೆ ಹೆಚ್ಚಿನ ಒತ್ತು ಆದರೆ ಗಮನಾರ್ಹ ಗುಣಮಟ್ಟದ ಸಂಶೋಧನೆ ನಡೆಸುವುದು.
  • ಪದವಿ ನೀಡುವ ಸ್ವಾಯತ್ತ ಕಾಲೇಜು (ಆಟೊನೋಮಸ್ ಡಿಗ್ರಿ ಕಾಲೇಜು): ಪದವಿಗಳನ್ನು ನೀಡುವ ಬಹುಶಿಸ್ತೀಯ ಕಾಲೇಜು ಮತ್ತು ಪ್ರಾಥಮಿಕವಾಗಿ ಪದವಿ ಬೋಧನೆಯ ಮೇಲೆ ಕೇಂದ್ರೀಕರಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಯೋಜನೆಗಳು, ಕಾರ್ಯಗಳು ಮತ್ತು ಪರಿಣಾಮಕಾರಿತ್ವವನ್ನು ಆಧರಿಸಿ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಕ್ರಮೇಣ ಬದಲಾಯಿಸಿಕೊಳ್ಳುವ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಹೊಂದಿರುತ್ತವೆ.

ಮಾದರಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನು ಸಮಗ್ರ ಮತ್ತು ಮಲ್ಟಿಡಿಸಿಪ್ಲಿನರಿ ಶಿಕ್ಷಣಕ್ಕಾಗಿ, ‘ಐಐಟಿ’ಗಳು, ‘ಐಐಎಂ’ಗಳು ಇತ್ಯಾದಿಗಳಿಗೆ ಸಮನಾಗಿ, ‘ಮೆರು’ – (ಮಲ್ಟಿಡಿಸಿಪ್ಲಿನರಿ ಎಜುಕೇಶನ್ ಅಂಡ್ ರೀಸರ್ಚ್ ಯೂನಿರ್ವಸಿಟಿ-MERU) ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ ವಿಶ್ವವಿದ್ಯಾಲಯಗಳು ಎಂದು ಕರೆಯಲಾಗುತ್ತದೆ. ‘ಮೇರು’ ಗಳು ಗುಣಮಟ್ಟದ ಶಿಕ್ಷಣದಲ್ಲಿ ಅತ್ಯುನ್ನತ ಜಾಗತಿಕ ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಹೊಂದಿವೆ.

ಉನ್ನತ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯನ್ನು ಪರಿವರ್ತಿಸುವುದು

ಉನ್ನತ ಶಿಕ್ಷಣ ವ್ಯವಸ್ಥೆಯ i) ನಿಯಂತ್ರಣ, ii) ಮಾನ್ಯತೆ, iii) ಧನಸಹಾಯ ಮತ್ತು iv) ಶೈಕ್ಷಣಿಕ ಮಾನದಂಡಗಳನ್ನು ವಿಭಿನ್ನ, ಸ್ವತಂತ್ರ ಮತ್ತು ಸಶಕ್ತ ಸಂಸ್ಥೆಗಳಿಂದ ನಿರ್ವಹಿಸಲಾಗುವುದು. ಈ ನಾಲ್ಕು ಸ್ವತಂತ್ರ ಸಂಸ್ಥೆಗಳನ್ನು ಭಾರತೀಯ ಉನ್ನತ ಶಿಕ್ಷಣ ಆಯೋಗದ (ಹೈಯರ್ ಎಜುಕೇಶನ್ ಕಮಿಷನ್ ಆಫ್ ಇಂಡಿಯಾ – HECI) ಅಡಿಯಲ್ಲಿ ಸ್ಥಾಪಿಸಲಾಗುವುದು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್), ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯಾ (ವಿ.ಸಿ.ಐ), ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ (ಎನ್.ಸಿ.ಟಿ.ಇ), ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ (ಸಿ.ಒ.ಎ), ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಎಜುಕೇಷನ್ ಅಂಡ್ ಟ್ರೈನಿಂಗ್ (ಎನ್.ಸಿ.ವಿ.ಇಟಿ) ಮತ್ತು ಆಲ್ ಇಂಡಿಯ ಕೌನ್ಸಿಲ್ ಫಾರ್ ಟಿಕ್ನಿಕಲ್ ಎಜುಕೇಷನ್ (ಎ.ಐ.ಸಿ.ಟಿ.ಇ) ಮುಂತಾದ ವೃತ್ತಿಪರ ಮಂಡಳಿಗಳು ವೃತ್ತಿಪರ ಗುಣಮಟ್ಟ ಅಣಿಗೊಳಿಸುವ ಸಂಸ್ಥೆಗಳಾಗಿ (ಪ್ರೊಫೆಷನಲ್ ಸ್ಟ್ಯಾಂಡರ್ಡ್ ಸೆಟ್ಟಿಂಗ್ ಬಾಡೀಸ್–ಪಿ.ಎಸ್.ಎಸ್.ಬಿ) ಕಾರ್ಯನಿರ್ವಹಿಸಲಿದ್ದು, ಯಾವುದೇ ನಿಯಂತ್ರಕ ಪಾತ್ರ ಹೊಂದಿರುವುದಿಲ್ಲ. ಅವುಗಳು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಸಾರ್ವತ್ರಿಕ ಶಿಕ್ಷಣ ಮಂಡಳಿಯ (ಜಿ.ಇ.ಸಿ) ಸದಸ್ಯರಾಗಿರುತ್ತಾರೆ.

ಪರಿಣಾಮಕಾರಿ ಆಡಳಿತ ಮತ್ತು ನಾಯಕತ್ವ

ಶ್ರೇಣೀಕೃತ ಮಾನ್ಯತೆ ಮತ್ತು ಶ್ರೇಣೀಕೃತ ಸ್ವಾಯತ್ತತೆಯ ಸೂಕ್ತ ವ್ಯವಸ್ಥೆಯ ಮೂಲಕ ಹಂತಹಂತವಾಗಿ 15 ವರ್ಷಗಳ ಅವಧಿಯಲ್ಲಿ ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ಅನುಸರಿಸುವ ಸ್ವತಂತ್ರ ಸ್ವ-ಆಡಳಿತ ಸಂಸ್ಥೆಗಳಾಗುವ ಗುರಿಯನ್ನು ಹೊಂದಿರುತ್ತವೆ. ಸಂಸ್ಥೆಯು ಸೂಕ್ತವಾದ ಶ್ರೇಣೀಕೃತ ಮಾನ್ಯತೆಗಳನ್ನು ಪಡೆದ ನಂತರ ಆಡಳಿತ ಮಂಡಳಿಯನ್ನು ಸ್ಥಾಪಿಸಲಾಗುವುದು.

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ನ್ಯಾಷನಲ್ ರಿಸರ್ಚ್ ಪೌಂಡೇಷನ್) ಸ್ಥಾಪನೆ

ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಇತರ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಸಕ್ರಿಯಗೊಳಿಸುವುದು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಪ್ರಮುಖ ಗುರಿಯಾಗಿದೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸರ್ಕಾರದ ಆಡಳಿತಕ್ಕೆ ಒಳಪಡದೆ, ಅತ್ಯುತ್ತಮ ಸಂಶೋಧಕರು ಮತ್ತು  ಆವಿಷ್ಕಾರಕರನ್ನು ಒಳಗೊಂಡ ಸ್ವತಂತ್ರ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಪ್ರಾಥಮಿಕ ಚಟುವಟಿಕೆಗಳು ಹೀಗಿವೆ:

  • ಎಲ್ಲಾ ರೀತಿಯ ಮತ್ತು ಎಲ್ಲಾ ವಿಭಾಗಗಳ ಸ್ಪರ್ಧಾತ್ಮಕ, ಪರಿಣಿತರಿಂದ ಪರಾಮರ್ಶಿಸಲ್ಪಟ್ಟ ಅನುದಾನ ಪ್ರಸ್ತಾಪಗಳಿಗೆ ಹಣಕಾಸು ಸಹಾಯ ನೀಡುವುದು
  • ಸೀಮಿತ ಸಂಶೋಧನಾ ಸಾಮರ್ಥ್ಯಗಳನ್ನು ಹೊಂದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆಗೆ ಸಹಾಯ ಮತ್ತು ಪ್ರೋತ್ಸಾಹ
  • ನೀತಿ ಮತ್ತು / ಅಥವಾ ಅನುಷ್ಠಾನಗಳಲ್ಲಿ ಸೂಕ್ತ ಪ್ರಗತಿಯನ್ನು ತರಲು ಸಂಶೋಧಕರು ಮತ್ತು ಸರ್ಕಾರದ ಸಂಬಂಧಿತ ಶಾಖೆಗಳು ಮತ್ತು ಉದ್ಯಮದ ನಡುವಿನ ಸಂಬಂಧ ಸೇತುವಾಗಿ ಕಾರ್ಯನಿರ್ವಹಣೆ
  • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ), ಪರಮಾಣು ಶಕ್ತಿ ಇಲಾಖೆ (ಡಿ.ಎ.ಇ), ಜೈವಿಕ ತಂತ್ರಜ್ಞಾನ ಇಲಾಖೆ (ಡಿ.ಬಿ.ಟಿ), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್), ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐ.ಸಿ.ಹೆಚ್.ಆರ್.), ಮತ್ತು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯು.ಜಿ.ಸಿ), ಮತ್ತು ವಿವಿಧ ಖಾಸಗಿ ಮತ್ತು ಲೋಕೋಪಕಾರಿ ಸಂಸ್ಥೆಗಳು ತಮ್ಮ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸ್ವತಂತ್ರವಾಗಿ ಸಂಶೋಧನೆಗೆ ಧನಸಹಾಯವನ್ನು ನೀಡುತ್ತವೆ
  • ಅತ್ಯುತ್ತಮ ಸಂಶೋಧನೆ ಗುರುತಿಸುವಿಕೆ ಮತ್ತು ಪುರಸ್ಕಾರ

ಅಂತರರಾಷ್ಟ್ರೀಕರಣ

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದುವುದು ಮತ್ತು ಭಾರತದ ವಿದ್ಯಾರ್ಥಿಗಳು ವಿದೇಶಕ್ಕೆ ಭೇಟಿ ನೀಡಲು, ಅಧ್ಯಯನ ಮಾಡಲು, ಅಂಕಗಳನ್ನು ವರ್ಗಾಯಿಸಲು ಅಥವಾ ವಿದೇಶದಲ್ಲಿರುವ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಚಲನಶೀಲತೆಯನ್ನು ಒದಗಿಸುವುದು ಹಾಗೂ ಅದೇ ರೀತಿಯಾಗಿ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ಪ್ರೋತ್ಸಾಹ ನೀಡುವುದು. ಕೈಗೆಟುಕುವ ವೆಚ್ಚದಲ್ಲಿ ಉಚ್ಚ ದರ್ಜೆಯ ಶಿಕ್ಷಣವನ್ನು ಒದಗಿಸುವ ಜಾಗತಿಕ ಅಧ್ಯಯನ ತಾಣವಾಗಿ ಭಾರತವನ್ನು ಮೇಲ್ದರ್ಜೆಗೇರಿಸುವುದು, ಉತ್ತಮ ಗುಣಮಟ್ಟದ ವಿದೇಶಿ ಸಂಸ್ಥೆಗಳೊಂದಿಗೆ ಸಂಶೋಧನೆ / ಬೋಧನಾ ಸಹಯೋಗ ಮತ್ತು ಬೋಧಕವರ್ಗ / ವಿದ್ಯಾರ್ಥಿ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು, ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ವಿಶ್ವವಿದ್ಯಾಲಯಗಳಿಗೆ ಇತರ ದೇಶಗಳಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಹಾಗೂ ಆಯ್ದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಉದಾ., ವಿಶ್ವದ ಅಗ್ರ 100 ಸ್ಥಾನದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುವುದು ಹಾಗೂ ಅಂತಹ ಪ್ರವೇಶಕ್ಕೆ ಅನುಕೂಲವಾಗುವ ಶಾಸಕಾಂಗ ಚೌಕಟ್ಟನ್ನು ಜಾರಿಗೆ ತರುವುದು ಈ ನೀತಿಯ ಉದ್ದೇಶವಾಗಿದೆ.

ಪದವಿಗಳ ರಚನೆ ಮತ್ತು ಅವಧಿ

  • ಎ) ವೃತ್ತಿಪರೇತರ ಪದವಿಗಳು: ಪದವಿಯ ಅವಧಿ 3 ಅಥವಾ 4 ವರ್ಷಗಳಾಗಿದ್ದು, ಬಹು ಪ್ರವೇಶ / ನಿರ್ಗಮನ ಆಯ್ಕೆಗಳಿರುತ್ತವೆ. ಈ ಅವಧಿಯಲ್ಲಿ ಸೂಕ್ತ ಪ್ರಮಾಣೀಕರಣವನ್ನು ಪರಿಗಣಿಸಲಾಗುತ್ತದೆ. ನಾಲ್ಕು ವರ್ಷದ ಮಲ್ಟಿಡಿಸಿಪ್ಲಿನರಿ ಬ್ಯಾಚುಲರ್ ಪದವಿಯ ವಿದ್ಯಾರ್ಥಿಯು ಉನ್ನತ ಶಿಕ್ಷಣ ಸಂಸ್ಥೆಯು ನಿರ್ದಿಷ್ಟಪಡಿಸಿದಂತೆ ತಮ್ಮ ಪ್ರಮುಖ ಅಧ್ಯಯನ ಕ್ಷೇತ್ರಗಳಲ್ಲಿ ನಿಗದಿಪಡಿಸಲಾದ ಸೂಕ್ತ ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸಿದರೆ ‘ಸಂಶೋಧನೆಯೊಂದಿಗೆ ಪದವಿ’ (ಡಿಗ್ರಿ ವಿತ್ ರೀಸರ್ಚ್) ಪಡೆಯಬಹುದು.
  • ಬಿ) ವೃತ್ತಿಪರೇತರ ಸ್ನಾತಕೋತ್ತರ ಪದವಿಗಳು: ಸ್ನಾತಕೋತ್ತರ ಪದವಿಗಳ ವಿಭಿನ್ನ ವಿನ್ಯಾಸಗಳನ್ನು ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳು ಮುಕ್ತ ಅಧಿಕಾರ ಹೊಂದಿರುತ್ತವೆ. ಮೂರು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು, ಎರಡು ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ವರ್ಷವನ್ನು ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾಗಿಡಬೇಕು. ನಾಲ್ಕು ವರ್ಷಗಳ ಪದವಿ ಪಡೆದ ವಿದ್ಯಾರ್ಥಿಗಳು ಕೇವಲ ಒಂದು ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಿದ್ದಾರೆ. ಐದು  ವರ್ಷಗಳ ಸಂಯೋಜಿತ ಬ್ಯಾಚುಲರ್ / ಸ್ನಾತಕೋತ್ತರ ಪದವಿ ಇರುತ್ತದೆ. ನಾಲ್ಕು ವರ್ಷಗಳ ಬ್ಯಾಚುಲರ್ ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು ಪಿಎಚ್‌ಡಿ ಕಾರ್ಯಕ್ರಮವನ್ನು ಕೈಗೊಳ್ಳಲು ಅರ್ಹರಾಗಿರುತ್ತಾರೆ. ಎಂ.ಫಿಲ್ ಪದವಿ ಮುಂದುವರೆಸಲಾಗುವುದಿಲ್ಲ.

ವೃತ್ತಿಪರ ಶಿಕ್ಷಣ

ವೃತ್ತಿಪರ ಶಿಕ್ಷಣವು ನೈತಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಶಿಕ್ಷಣ ಮತ್ತು ಒಂದು ವೃತ್ತಿ ನಡೆಸಲು ಬೇಕಾಗುವ ಮೂಲ ಶಿಕ್ಷಣವನ್ನು ನೀಡಬೇಕು. ವೃತ್ತಿಪರ ಶಿಕ್ಷಣವು ಒಟ್ಟಾರೆ ಉನ್ನತ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಸ್ವತಂತ್ರ ಕೃಷಿ ವಿಶ್ವವಿದ್ಯಾಲಯಗಳು, ಕಾನೂನು ವಿಶ್ವವಿದ್ಯಾಲಯಗಳು, ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳು, ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಇತರ ಕ್ಷೇತ್ರಗಳಲ್ಲಿನ ಸ್ವತಂತ್ರ ಸಂಸ್ಥೆಗಳು ಬಹುಶಸ್ತೀಯ ಮತ್ತು ಸಮಗ್ರ ಶಿಕ್ಷಣವನ್ನು ನೀಡುವ ಸಂಸ್ಥೆಗಳಾಗುವ ಗುರಿಯನ್ನು ಹೊಂದಿವೆ. ವೇಗವಾಗಿ ಪ್ರಾಮುಖ್ಯತೆ ಪಡೆಯುತ್ತಿರುವ ಕೃತಕ ಬುದ್ಧಿಮತೆ, 3ಡಿ ಮಷೀನಿಂಗ್, ಬಿಗ್  ಡೇಟಾ  ಅನಲಿಟಿಕ್ಸ್,  ಮತ್ತು ಮಷೀನ್ ಲರ್ನಿಂಗ್ ಇತ್ಯಾದಿ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಭಾರತವು ವೃತ್ತಿಪರರನ್ನು ಸಿದ್ಧಪಡಿಸುವಲ್ಲಿ ಮುಂದಾಗಬೇಕು, ಜೀನೋಮಿಕ್ ಅಧ್ಯಯನಗಳು, ಜೈವಿಕ ತಂತ್ರಜ್ಞಾನ, ನ್ಯಾನೊತಂತ್ರಜ್ಞಾನ, ನರವಿಜ್ಞಾನ, ಆರೋಗ್ಯ, ಪರಿಸರ ಮತ್ತು ಸುಸ್ಥಿರ ಜೀವನಕ್ಕೆ ಪ್ರಮುಖವಾದ ಅನ್ವಯಿಕೆಗಳೊಂದಿಗೆ ಯುವಕರಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಅಂಶಗಳನ್ನು ಪದವಿ ಶಿಕ್ಷಣದಲ್ಲಿ ಅಳವಡಿಸಲಾಗುವುದು.

ತಾಂತ್ರಿಕ ಶಿಕ್ಷಣ ಪದವಿಗಳ ಸೂಚಿತ ರಚನೆ ಮತ್ತು ಅವಧಿ

ಪ್ರಸ್ತುತ ವೃತ್ತಿಪರ ಬ್ಯಾಚುಲರ್ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಅವಧಿ ಕ್ರಮವಾಗಿ 4 ಮತ್ತು 2 ವರ್ಷಗಳು, ಇದನ್ನು 3 ವರ್ಷದ ಬ್ಯಾಚುಲರ್ ಪದವಿ ಮತ್ತು 2 ವರ್ಷದ ಸ್ನಾತಕೋತ್ತರ ಪದವಿಗಳಂತೆ ಮರು ವಿನ್ಯಾಸಗೊಳಿಸಬಹುದು.

ಪ್ರೊಫೆಷನಲ್ ಡಿಗ್ರಿ ಕೋರ್ಸ್‌ಗಳ ಕೆಲವು ಉದಾಹರಣೆಗಳು

ವೃತ್ತಿಪರ – ಪದವಿಗಳು: ಪದವಿಯ ಅವಧಿ 4 ಅಥವಾ 5 ವರ್ಷಗಳಾಗಿದ್ದು, ಬಹು-ಪ್ರವೇಶ / ಬಹು-ನಿರ್ಗಮನ ಆಯ್ಕೆಗಳಿವೆ. ಈ ಅವಧಿಯಲ್ಲಿ ಸೂಕ್ತ ಪ್ರಮಾಣೀಕರಣವನ್ನು ಪರಿಗಣಿಸಲಾಗುತ್ತದೆ. ಐದು ವರ್ಷದ ಬಹುಶಿಸ್ತೀಯ ಬ್ಯಾಚುಲರ್ ವಿದ್ಯಾರ್ಥಿಗಳು ‘ಸುಧಾರಿತ ಇಂಟರ್ನ್‌ಶಿಪ್ ಮತ್ತು ಸಂಶೋಧನೆಯೊಂದಿಗೆ’ ಪದವಿ ಪಡೆಯಲಿದ್ದಾರೆ. ಅದೇ ರೀತಿ ಉಳಿದ ಬ್ಯಾಚುಲರ್ ಮತ್ತು ಸ್ನಾತಕೋತ್ತರ ಪದವಿ ಅವಧಿಯನ್ನು ಕೆಳಕಂಡಂತೆ ಮರು ವಿನ್ಯಾಸಗೊಳಿಸಬಹುದು:

  • (ಎ) 5 ಮತ್ತು 2 ವರ್ಷಗಳು (ಬಿ.ಆರ್ಚ್ ಮತ್ತು ಎಂ.ಆರ್ಚ್ ನಂತಹ)
  • (ಬಿ) 5 ಮತ್ತು 3 ವರ್ಷಗಳು (ಬಿಡಿಎಸ್ ಮತ್ತು ಎಂಡಿಎಸ್ ನಂತಹ)
  • (ಸಿ) 5½ ಮತ್ತು 3 ವರ್ಷಗಳು (ಉದಾ., ಎಂಬಿಬಿಎಸ್ ಮತ್ತು ಎಂಡಿ ಅಥವಾ ಎಂಎಸ್)

ಶಿಕ್ಷಣದಲ್ಲಿ ತಂತ್ರಜ್ಞಾನ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ಬಾಹ್ಯಾಕಾಶದಂತಹ ಇತರ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯನ್ನು ತಲುಪಲು ಮತ್ತು ಡಿಜಿಟಲ್ ಇಂಡಿಯಾ ಅಭಿಯಾನವು ಯಶಸ್ವಯಾಗಲು ಶಿಕ್ಷಣವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹಾಗೆಯೇ ಶೈಕ್ಷಣಿಕ ಪ್ರಕ್ರಿಯೆಗಳು ಮತ್ತು ಫಲಿತಾಂಶಗಳ ಸುಧಾರಣೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿದ್ದು, ತಂತ್ರಜ್ಞಾನ ಮತ್ತು ಶಿಕ್ಷಣದ ನಡುವಿನ ಸಂಬಂಧವು ಎಲ್ಲಾ ಹಂತಗಳಲ್ಲಿ ದ್ವಿ-ದಿಕ್ಕಿನದ್ದಾಗಿದೆ.

ಬೋಧನೆ – ಕಲಿಕೆ, ಮೌಲ್ಯಮಾಪನ, ಯೋಜನೆ ಮತ್ತು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಹಾಗೂ ಮುಕ್ತ ವಿಚಾರ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುವ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ (ನ್ಯಾಷನಲ್ ಎಜುಕೇಷನ್ ಟೆಕ್ನಾಲಜಿ ಫೊರಂ) ಎಂಬ ಸ್ವಾಯತ್ತ ಸಂಸ್ಥೆಯನ್ನು ರಚಿಸಲಾಗುತ್ತಿದೆ. ತರಗತಿಯ ಪ್ರಕ್ರಿಯೆಗಳನ್ನು ಸುಧಾರಿಸಲು, ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಬೆಂಬಲ ನೀಡಲು, ಶೈಕ್ಷಣಿಕ ಯೋಜನೆ, ಆಡಳಿತ ಮತ್ತು ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ಶಿಕ್ಷಣ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಲಾಗುವುದು. ‘ದೀಕ್ಷಾ’ ಮತ್ತು ‘ಸ್ವಯಂ’ ಗಳಂತಹ ತಂತ್ರಜ್ಞಾನ ಆಧಾರಿತ ಶಿಕ್ಷಣ ಪ್ಲಾಟ್‌ಫಾರ್ಮ್‌ಗಳನ್ನು ಉನ್ನತ ಶಿಕ್ಷಣದಾದ್ಯಂತ ಸಂಯೋಜಿಸಲಾಗುವುದು. ಕ್ರಾಂತಿಕಾರಿ ತಂತ್ರಜ್ಞಾನ (ಡಿಸ್ರೆಪ್ಟೀವ್ ಟೆಕ್ನಾಲಜಿ)ಗಳ ಬಗ್ಗೆ ಸಂಶೋಧನೆ ನಡೆಸುವಲ್ಲಿ ಸಕ್ರಿಯ ಪಾತ್ರ ವಹಿಸಲಿದೆ ಮತ್ತು ಅತ್ಯಾಧುನಿಕ ಕಾರ್ಯಕ್ಷೇತ್ರಗಳಲ್ಲಿ ಆನ್‌ಲೈನ್ ಕೋರ್ಸ್‌ಗಳು ಸೇರಿದಂತೆ ಕಲಿಕಾ ಸಾಮಗ್ರಿ ಮತ್ತು ಕೋರ್ಸ್‌ಗಳ ರಚನೆಗೆ ಪ್ರೋತ್ಸಾಹ ನೀಡಲಾಗುವುದು.

ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಶಿಕ್ಷಣ

ಹೊಸ ಸನ್ನಿವೇಶಗಳು ಮತ್ತು ವಾಸ್ತವಗಳಿಗೆ ಅನುಗುಣವಾಗಿ ಹೊಸ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಇತ್ತೀಚಿನ ಕೋವಿಡ್19 ಪಿಡುಗು ಈ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದೆ. ಸಾಂಪ್ರದಾಯಿಕ ಮತ್ತು ವ್ಯಕ್ತಿಗತ ಶಿಕ್ಷಣ ವಿಧಾನಗಳು ಎಲ್ಲೆಲ್ಲಿ ಸಾಧ್ಯವಿಲ್ಲವೋ ಅಲ್ಲಿ ನಾವು ಗುಣಮಟ್ಟದ ಶಿಕ್ಷಣದ ಪರ್ಯಾಯ ವಿಧಾನಗಳೊಂದಿಗೆ ಸಿದ್ಧರಾಗಿರಬೇಕಾಗಿದೆ.

ಅದರಂತೆ, ಶಾಲೆಗಳು ಮತ್ತು ಉನ್ನತ ಶಿಕ್ಷಣದ ಇ-ಶಿಕ್ಷಣದ ಅಗತ್ಯತೆಗಳನ್ನು ನೋಡಿಕೊಳ್ಳಲು ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ವಿಷಯ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಶಿಕ್ಷಣ ಮಂತ್ರಾಲಯ (MoE) ದಲ್ಲಿ ಸಮರ್ಪಿತ ಘಟಕವನ್ನು ರಚಿಸಲಾಗುತ್ತಿದೆ.

ಶಿಕ್ಷಕರು/ಬೋಧಕರು

ಶಿಕ್ಷಕರು ನಿರ್ವಂಚನೆಯಿಂದ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾರೆ ಮತ್ತು ಆ ಮೂಲಕ ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ. ಈ ಉದಾತ್ತ ಪಾತ್ರದಿಂದಾಗಿಯೇ ಶಿಕ್ಷಕರು ಭಾರತದ ಸಮಾಜದ ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಜ್ಞಾನ, ಕೌಶಲ್ಯಗಳು ಮತ್ತು ನೈತಿಕತೆಯನ್ನು ವಿದ್ಯಾರ್ಥಿಗಳಿಗೆ ಸೂಕ್ತವಾಗಿ ರವಾನಿಸಲು ಅಗತ್ಯವಾದುದನ್ನು ಸಮಾಜವು ಸಹ ಶಿಕ್ಷಕರಿಗೆ ಅಥವಾ ಗುರುಗಳಿಗೆ ನೀಡುತ್ತಿದೆ. ನಮ್ಮ ಮಕ್ಕಳು ಮತ್ತು ನಮ್ಮ ರಾಷ್ಟ್ರದ ಉತ್ತಮ ಭವಿಷ್ಯಕ್ಕೆ ಶಿಕ್ಷಕರ ಪ್ರೇರಣೆ ಮತ್ತು ಸಬಲೀಕರಣ ಬಹಳ ಮುಖ್ಯ.

ಹೊಸ ಮಾದರಿಯಲ್ಲಿ ಶಿಕ್ಷಕರ/ಬೋಧಕರ ಪಾತ್ರ

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಹೊಂದಲು ಶಿಕ್ಷಕರ ಪಾತ್ರ ಬಹು ಮುಖ್ಯ. ಆದುದರಿಂದ, ಶಿಕ್ಷಕರು ತಮ್ಮ ಕಸುಬಿನಲ್ಲಿ ಗಾಢಾನುರಕ್ತರಾಗಿರಬೇಕು, ಪ್ರೇರೇಪಿತರಾಗಿರಬೇಕು ಮತ್ತು ಉತ್ತಮ ಅರ್ಹತೆಯನ್ನು ಹೊಂದಿರಬೇಕು ಮತ್ತು ವಿಷಯ, ಬೋಧನಾಶಾಸ್ತ್ರ ಮತ್ತು ಅನುಸರಿಸುವ ರೀತಿಯಲ್ಲಿ ಉತ್ತಮ ತರಬೇತಿ ಹೊಂದಿರಬೇಕು. ಇದಕ್ಕೂ ಹೆಚ್ಚಾಗಿ ಹೊಸ ಮಾದರಿಯಲ್ಲಿ ಇನ್ನೂ ಅನೇಕ ಪಾತ್ರಗಳನ್ನು ವಹಿಸಬೇಕಾಗುತ್ತದೆ.

  • ಭಾರತೀಯ ಮತ್ತು ಜಾಗತಿಕ ಶಿಕ್ಷಣದ ಮತ್ತು ಪ್ರಮುಖವಾಗಿ ಉನ್ನತ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು
  • ಎಲ್ಲಾ ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ರಚನೆ – ವಸ್ತು ವಿಷಯವನ್ನು ರಚಿಸುವುದು ಮತ್ತು ನಿರ್ವಹಿಸುವುದು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ಮೌಲ್ಯಮಾಪನ ಮಾಡುವುದು
  • ತಮ್ಮ ತಮ್ಮ ವಿಷಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗಮನಿಸುವುದು ಹಾಗೂ ನಿರ್ದಿಷ್ಟ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು. ಆಧುನಿಕ ಬೋಧನೆ-ಕಲಿಕೆಯ ವಿಧಾನಗಳ ಕಲೆಯನ್ನು ತೀಕ್ಷ್ಣಗೊಳಿಸುವುದು ಮತ್ತು ಸುಧಾರಿಸುವುದು
  • ನೀತಿ ಬೋಧನೆ ಮತ್ತು ನೈತಿಕ ಮೌಲ್ಯಗಳನ್ನು ಹುಟ್ಟುಹಾಕುವುದು ಹಾಗೂ ವಿದ್ಯಾರ್ಥಿಗಳಲ್ಲಿ ಆಜೀವ ಕಲಿಕೆಯ ಅವಕಾಶಗಳ ಬಗ್ಗೆ ತಿಳಿಸಿ ಉತ್ತೇಜಿಸುವುದು
  • ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ ಇಂಟರ್ಯಾಕ್ಟಿವ್ ಮಲ್ಟಿಮೀಡಿಯಾ, 3 ಡಿ ಆನಿಮೇಷನ್, ವರ್ಚುವಲ್ ರಿಯಾಲಿಟಿ ತಂತ್ರಗಳು ಸೇರಿದಂತೆ ಮಲ್ಟಿಮೀಡಿಯಾ ತಂತ್ರಜ್ಞಾನಗಳನ್ನು ಒಳಗೊಂಡಂತೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸುವುದು ಮತ್ತು ಉತ್ತೇಜಿಸುವುದು (ವಿತರಣಾ ಶೈಲಿ, ವಿಷಯ, ಪ್ರಸ್ತುತಿ, ಶಿಷ್ಟಾಚಾರ, ವರ್ತನೆ, ಕೂಡುಗೆಲಸ, ವರ್ಗ ನಿರ್ವಹಣೆ ಇತ್ಯಾದಿ)
  • ಇತರ ವಿಶ್ವವಿದ್ಯಾಲಯಗಳು, ರಾಜ್ಯಗಳು, ಸರ್ಕಾರಗಳು ಮತ್ತು ಕಾರ್ಪೊರೇಟ್‌ಗಳಿಗೆ ಕಾರ್ಯಕ್ರಮಗಳನ್ನು ವಿಸ್ತರಿಸುವುದು ಮತ್ತು ಉತ್ತೇಜಿಸುವುದು. ಒಂದೇ ರೀತಿಯ ಚಟುವಟಿಕೆಯಲ್ಲಿ ತೊಡಗಿರುವ ಶಿಕ್ಷಣ ಸಂಸ್ಥೆಗಳ ನೆಟ್‌ವರ್ಕಿಂಗ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಬೆಂಬಲ ಮತ್ತು ಸಹಕಾರಿಯಾಗುವ  ಪಾತ್ರವನ್ನು ವಹಿಸುವುದು
  • ಉನ್ನತ ಶಿಕ್ಷಣದ ಗುರಿಗಳನ್ನು ಸಾಧಿಸಲು ಉತ್ತಮ ಬೋಧನಾ ಶೈಲಿಯನ್ನು ರೂಢಿಸಿಕೊಳ್ಳುವುದು ಮತ್ತು ಸುಧಾರಿಸಿಕೊಳ್ಳುವುದು. ಪ್ರತಿ ಕೋರ್ಸ್‌ಗೆ ಮಾದರಿ ಪಠ್ಯ ಮತ್ತು ಪಠ್ಯಕ್ರಮ (ಪಾಠಕ್ರಮ)ವನ್ನು ಅಭಿವೃದ್ಧಿಪಡಿಸುವುದು
  • ಕಾಲೇಜು / ವಿಶ್ವವಿದ್ಯಾಲಯದ ಸಂಘಟನೆ ಮತ್ತು ನಿರ್ವಹಣೆಯನ್ನು ಅರ್ಥ ಮಾಡಿಕೊಂಡು, ಒಟ್ಟು ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರವನ್ನು ಗ್ರಹಿಸಿ ಮತ್ತು ಅದಕ್ಕೆ ಅನುಗುಣವಾಗಿ ಭಾಗವಹಿಸುವುದು
  • ಹಲವಾರು ಕಲಿಕೆ ಸಂಸ್ಥೆಗಳೊಂದಿಗೆ (ಕಾಲೇಜುಗಳು, ಶ್ರೇಷ್ಠತೆಯ ವಿವಿಧ ಕೇಂದ್ರಗಳು, ವ್ಯವಹಾರ, ಉದ್ಯಮ, ಸೇವೆಗಳು, ಸರ್ಕಾರ ಇತ್ಯಾದಿಗಳ ನಡುವೆ) ಕಾರ್ಯತಂತ್ರದ ಮೈತ್ರಿಯನ್ನು ಏರ್ಪಡಿಸಿಕೊಳ್ಳುವುದು. ಶಿಕ್ಷಕರು ಮತ್ತು ಸಿಬ್ಬಂದಿಗೆ ನಿಯೋಜನಾ ಪೂರ್ವ ತರಬೇತಿ (ಇಂಡಕ್ಷನ್) ಮತ್ತು ಸೇವೆಯಲ್ಲಿನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
  • ವಿಶ್ವವಿದ್ಯಾನಿಲಯದ ಬೋಧಕರಿಗಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಓರೀಯಂಟೇಶನ್, ರೀಫ್ರೇಶರ್, ಅಲ್ಪಾವಧಿಯ ಕೋರ್ಸ್‌ಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ಇತರ ಸಂವಹನ ಕಾರ್ಯಕ್ರಮಗಳನ್ನು ಆಯೋಜಿಸುವುದು. ತರಬೇತಿ, ಸಂಶೋಧನೆ, ತರಬೇತಿ ಮೌಲ್ಯಮಾಪನ ಮತ್ತು ಅಗತ್ಯವಿರುವ ಇತರ ಚಟುವಟಿಕೆಗಳಿಗಾಗಿ ವಿಶೇಷ ಕೇಂದ್ರಗಳನ್ನು ಸ್ಥಾಪಿಸುವುದು
  • ಸ್ವಂತವಾಗಿ ಅಥವಾ ಇತರ ಏಜೆನ್ಸಿಗಳ ಮೂಲಕ ಸಂಶೋಧನೆ ಮತ್ತು ತರಬೇತಿಯನ್ನು ಕೈಗೊಳ್ಳಲು ಸಹಾಯ, ಉತ್ತೇಜನ ಮತ್ತು ಸಂಯೋಜನಾ ಕಾರ್ಯಗಳನ್ನು ಕೈಗೊಳ್ಳುವುದು.
  • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಿಬ್ಬಂದಿಗಳ ಕೌಶಲ್ಯ / ಸಾಮರ್ಥ್ಯದ ನಿರೂಪಣಾ ಪಟ್ಟಿಯನ್ನು ನಿರಂತರವಾಗಿ ಕೈಗೊಳ್ಳುವುದು. ಸದಾ ಬದಲಾಗುತ್ತಿರುವ ಜಾಗತಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಿಬ್ಬಂದಿಗಳನ್ನು ಸ್ಪರ್ಧಾತ್ಮಕವಾಗಿ ಅನುವುಗೊಳಿಸಲು ಅವರಿಗೆ ಕೌಶಲ್ಯ ಮತ್ತು ಮರು-ಕೌಶಲ್ಯಕ್ಕೆ ಸಾಕಷ್ಟು ಅವಕಾಶಗಳನ್ನು ಒದಗಿಸುವುದು
  • ಶೈಕ್ಷಣಿಕ ಸಿಬ್ಬಂದಿಯ ಮಾಹಿತಿ ಅಗತ್ಯಗಳನ್ನು ಪೂರೈಸಲು ವಿಶ್ವ ದರ್ಜೆಯ ಕಲಿಕಾ ಸಂಪನ್ಮೂಲ ಕೇಂದ್ರವನ್ನು ಅಭಿವೃದ್ಧಿಪಡಿಸುವುದು
  • ಸೃಜನಶೀಲತೆ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ಇವುಗಳ ಪೋಷಣೆ
  • ಪ್ರತಿ ಕಾರ್ಯಕ್ರಮದ ಕಲಿಕೆಯ ಗುರಿಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಸಾಧನೆಯನ್ನು ನಿರ್ಣಯಿಸುವ ಮಾನದಂಡ ಆಧಾರಿತ ಶ್ರೇಣೀಕರಣ ವ್ಯವಸ್ಥೆಯನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳುವುದು
  • ಪರೀಕ್ಷಾ ಆಧಾರಿತ ಮೌಲ್ಯಮಾಪನದ ಬದಲಾಗಿ ನಿರಂತರ ಮತ್ತು ಸಮಗ್ರ ಮೌಲ್ಯಮಾಪನಕ್ಕೆ ಒತ್ತು ಕೊಡುವುದು
  • ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಉತ್ತಮ ಗುಣಮಟ್ಟದ ಸಹಾಯ ಕೇಂದ್ರಗಳ ಸ್ಥಾಪನೆ
  • ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ವೃತ್ತಿಪರ ಶೈಕ್ಷಣಿಕ ಮತ್ತು ವೃತ್ತಿ ಸಮಾಲೋಚನಾ ಕೇಂದ್ರಗಳ ಸ್ಥಾಪನೆ
  • ಉತ್ತಮ ಗುಣಮಟ್ಟದ ಬೋಧನೆ, ಸಂಶೋಧನೆ ಮತ್ತು ಸಾಮಾಜಿಕ ಬದ್ಧತೆ ಒಳಗೊಂಡ ಪದವಿ ಮತ್ತು ಸ್ನಾತಕೊತ್ತರ ಪದವಿ ಕೋರ್ಸಗಳನ್ನೊಳಗೊಂಡ ಬಹುಶಿಸ್ತೀಯ ಸಂಸ್ಥೆಗಳ ಸ್ಥಾಪನೆ. ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳ ಸ್ಥಾಪನೆ
  • ಮೌಲ್ಯ ಆಧಾರಿತ ಶಿಕ್ಷಣ
  • ಸಾಂಸ್ಥಿಕ ಸಹಯೋಗದ ಮೂಲಕ ಶಿಕ್ಷಣದ ಅಂತರರಾಷ್ಟ್ರೀಕರಣ
  • ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪ್ಲಾಟ್‌ಫಾರ್ಮ್‌ಗಳಾದ ‘ದೀಕ್ಷಾ’ ಮತ್ತು ‘ಸ್ವಯಮ್’ಗಳ ಸಂಯೋಜನೆ
  • ಕ್ರಾಂತಿಕಾರಿ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ನಡೆಸುವಲ್ಲಿ ಸಕ್ರಿಯ ಪಾತ್ರ
  • ಅತ್ಯಾಧುನಿಕ ವಿಷಯಗಳಲ್ಲಿ ಆನ್‌ಲೈನ್ ಕೋರ್ಸ್‌ಗಳು ಮತ್ತು ಸಂಶೋಧನೆಗಾಗಿ ಉನ್ನತ ಕಲಿಕಾ ಸಂಸ್ಥೆಗಳೊಂದಿಗೆ ಒಡಂಬಡಿಕೆ
  • ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (Academic Bank of Credit ) ಸ್ಥಾಪನೆ. ಇಲ್ಲಿ ವಿವಿಧ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗಳಿಸಿದ ಶೈಕ್ಷಣಿಕ ಅಂಕಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ

ಉಪಸಂಹಾರ

ಇಂದು ನಾವು ಜಾಗತೀಕರಣದ ಯುಗದಲ್ಲಿದ್ದೇವೆ. ಜಾಗತೀಕರಣ- ಎರಡು ಅಲಗಿನ ಕತ್ತಿಯಂತಿದೆ – ವರವೋ? ಶಾಪವೋ? ಇದು ಭಾರತದ ಮೇಲೆ ಮಿಶ್ರ ಪರಿಣಾಮ ಬೀರಿದೆ. ಹೇಳಬೇಕೆಂದರೆ ಋಣಾತ್ಮಕತೆಯತ್ತ  ವಾಲಿದೆ. ಉತ್ಪಾದನಾ ನೆಲೆ ಕಡಿಮೆಯಾಗುತ್ತಿದೆ. ವೃತ್ತಿ ಸನ್ನಿವೇಶಗಳು ಗಮನಾರ್ಹವಾಗಿ ಬದಲಾಗುತ್ತಿದೆ. ಆರ್ಥಿಕ ಹಿಂಜರಿತದ ಕಾರಣ ಉದ್ಯೋಗಗಳ ಸಂಖ್ಯೆ ಕಡಿತಗೊಂಡಿದೆ. ಆದರೆ, ಮುಂದಿನ ಕೆಲವು ದಶಕಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗೆ ದಿಕ್ಸೂಚಿ ಬದಲಾಗಲಿದೆ. ಕೆಲವು ವರ್ಷಗಳಲ್ಲಿಯೇ ಉನ್ನತ ಶಿಕ್ಷಣದ ಎಲ್ಲಾ ವಿಭಾಗಗಳ “ಮಹಾಸಂಗಮ” ಏರ್ಪಟ್ಟು ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆ ಸ್ಥಾಪಿತವಾಗಲಿದೆ. ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ. ನಾವಿನ್ಯತೆಯ ಕ್ಷಮತೆ ಹೊಂದಿರುವ ನುರಿತ ಜ್ಞಾನ ಮಾನವ ಸಂಪನ್ಮೂಲ, ತತ್ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಸಕ್ರಿಯ ನಾಯಕತ್ವ, ಜ್ಞಾನ ಆಧಾರಿತ ಉದ್ಯಮಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಟೆಕ್ನೋ-ಉದ್ಯಮಶೀಲತೆಯ ಪೋಷಣೆ ಹಾಗೂ 21ನೇ ಶತಮಾನದ ಕೌಶಲ್ಯಗಳ ಮೂಲಕ ಇಂದು ನಾವು ಎದಿರುಸುತ್ತಿರುವ ಬಹಳಷ್ಟು ಸಮಸ್ಯಗಳನ್ನು ನಿವಾರಿಸಬಹುದಾಗಿದೆ.

ಕೌಶಲ್ಯಾಭಿವೃದ್ಧಿ: ಕೆಲವೊಂದು ಪ್ರಮುಖ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳೆಂದರೆ:

  • ವಿಶ್ಲೇಷಣೆ ಮತ್ತು ವಿನ್ಯಾಸ ಕೌಶಲ್ಯಗಳು
  • ಪ್ರಾಯೋಗಿಕ ಕೌಶಲ್ಯಗಳು
  • ಜ್ಞಾನ ಎಂಜಿನಿಯರಿಂಗ್ ಕೌಶಲ್ಯಗಳು
  • ಸಾಂಸ್ಥಿಕ ಕೌಶಲ್ಯಗಳು
  • ಅಂತರ್ ವ್ಯಕ್ತೀಯ ಕೌಶಲ್ಯಗಳು
  • ಸಂವಹನ ಸಾಮರ್ಥ್ಯ
  • ಉದ್ಯಮಶೀಲತಾ ಕೌಶಲ್ಯಗಳು
  • ಇತರ ವಿಶೇಷ ಕೌಶಲ್ಯಗಳು

21ನೇ ಶತಮಾನದ ಕೌಶಲ್ಯಗಳು: 21ನೇ ಶತಮಾನದ ಕೌಶಲ್ಯಗಳೊಂದಿಗೆ ಸಾಮಾನ್ಯವಾಗಿ ಸಂಯೋಜಿತವಾಗಿರುವ ಜ್ಞಾನ ಕೌಶಲ್ಯಗಳು, ವೃತ್ತಿ ಹವ್ಯಾಸಗಳು ಮತ್ತು ಚಾರಿತ್ರ್ಯ ನಿರ್ಮಾಣಗಳ ಸಂಕ್ಷಿಪ್ತ ವಿವರಣಾತ್ಮಕ ಮಾಹಿತಿಯನ್ನು ಈ ಕೆಳಗಿನ ಪಟ್ಟಿಯು ಒದಗಿಸುತ್ತದೆ.

  • ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ತಾರ್ಕಿಕತೆ, ವಿಶ್ಲೇಷಣೆ, ವ್ಯಾಖ್ಯಾನ, ಮಾಹಿತಿ ಸಂಶ್ಲೇಷಿಸುವ ಕಲೆ.
  • ಸಂಶೋಧನಾ ಕೌಶಲ್ಯ, ಪ್ರಾಯೋಗಿಕತೆ ಮತ್ತು ಪ್ರಶ್ನಿಸುವ ಅಭ್ಯಾಸ
  • ಸೃಜನಶೀಲತೆ, ಕಲಾತ್ಮಕತೆ, ಕುತೂಹಲ, ಕಲ್ಪನೆ, ನಾವೀನ್ಯತೆ, ವೈಯಕ್ತಿಕ ಅಭಿವ್ಯಕ್ತಿ
  • ಪರಿಶ್ರಮ, ಸ್ವಯಂ ನಿರ್ದೇಶನ, ಯೋಜನೆ, ಸ್ವಯಂ ಶಿಸ್ತು, ಹೊಂದಿಕೊಳ್ಳುವಿಕೆ, ಉಪಕ್ರಮ, ಮೌಖಿಕ ಮತ್ತು ಲಿಖಿತ ಸಂವಹನ, ಸಾರ್ವಜನಿಕ ಭಾಷಣ ಮತ್ತು ಪ್ರಸ್ತುತಿ, ತಾರ್ಕಿಕ ಕ್ರಿಯೆ
  • ನಾಯಕತ್ವ, ಸಾಂಘಿಕ ಕೆಲಸ, ಸಹಯೋಗ, ಸಹಕಾರ, ವರ್ಚುವಲ್ ವ್ಯವಸ್ಥೆಗಳನ್ನು ಬಳಸುವ ಸಾಮರ್ಥ್ಯ
  • ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಟಿಸಿ) ಸಾಕ್ಷರತೆ, ಮಾಧ್ಯಮ ಮತ್ತು ಇಂಟರ್ನೆಟ್ ಸಾಕ್ಷರತೆ, ದತ್ತಾಂಶ ವಿಶ್ಲೇಷಣೆ, ಕಂಪ್ಯೂಟರ್ ಪ್ರೋಗ್ರಾಮಿಂಗ್
  • ನಾಗರಿಕ ಮೌಲ್ಯ, ನೈತಿಕ ಮತ್ತು ಸಾಮಾಜಿಕ ನ್ಯಾಯಗಳ ಅರಿವು
  • ಉದ್ಯಮಶೀಲತೆ, ಹಣಕಾಸು ಮತ್ತು ಆರ್ಥಿಕ ಸಾಕ್ಷರತೆ
  • ಜಾಗತಿಕ ಜಾಗೃತಿ, ಬಹುಸಾಂಸ್ಕೃತಿಕ ಸಾಕ್ಷರತೆ, ಮಾನವೀಯತೆ
  • ವೈಜ್ಞಾನಿಕ ಸಾಕ್ಷರತೆ ಮತ್ತು ತಾರ್ಕಿಕತೆ, ವೈಜ್ಞಾನಿಕ ವಿಧಾನ ಅಳವಡಿಕೆ
  • ಪರಿಸರ ಮತ್ತು ಸಂರಕ್ಷಣೆ ಸಾಕ್ಷರತೆ, ಪರಿಸರ ವ್ಯವಸ್ಥೆಯ ತಿಳುವಳಿಕೆ
  • ಆರೋಗ್ಯ ಮತ್ತು ಸ್ವಾಸ್ಥ್ಯ ಸಾಕ್ಷರತೆ – ಪೌಷ್ಠಿಕಾಂಶ, ಆಹಾರ ಪದ್ಧತಿ, ವ್ಯಾಯಾಮ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ

ಟೆಕ್ನೋ-ಉದ್ಯಮಶೀಲತೆ

ಟೆಕ್ನೋ ಉದ್ಯಮಶೀಲತೆಯು ಅಭಿವೃದ್ಧಿಹೊಂದುತ್ತಿರುವ ಹೊಚ್ಚಹೊಸ ಪ್ರವೃತ್ತಿಯಾಗಿದೆ. ಟೆಕ್ನೋ/ತಂತ್ರಜ್ಞಾನ ಉದ್ಯಮಶೀಲತೆಯು ವ್ಯಕ್ತಿ, ಸಂಸ್ಥೆ, ಪ್ರದೇಶ ಮತ್ತು ರಾಷ್ಟ್ರದ ಸಮೃದ್ಧಿಯನ್ನು ಸುಗಮಗೊಳಿಸುವ ವಾಹನವಾಗಿದೆ. ಯುವ ಉದ್ಯಮಿಗಳ ಬಿತ್ತನೆಯು ಯಾವಾಗಲೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ನಾದಿಯಾಗುತ್ತದೆ. ಅಪ್-ಸ್ಟ್ರೀಮ್ ಮತ್ತು ಡೌನ್-ಸ್ಟ್ರೀಮ್-ಮಲ್ಟಿಪ್ಲೈಯರ್ ಪರಿಣಾಮಗಳನ್ನು ಹೊಂದಿದ್ದು, ನೇರ ಉದ್ಯೋಗಕ್ಕಿಂತ ಮಿಗಿಲಾಗಿದೆ. ಇದರ ಅಭಿವೃದ್ಧಿಗೆ ರಾಷ್ಟ್ರೀಯ ಮತ್ತು ರಾಜ್ಯ ಕೈಗಾರಿಕಾ ನೀತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸೂಕ್ತವಾದ ತರಬೇತಿ ವಿಧಾನಗಳನ್ನು ಒದಗಿಸುವುದು ಹಾಗೂ ನುರಿತ ಜ್ಞಾನ ಕಾರ್ಮಿಕರು ಮತ್ತು ಉತ್ತಮ ಟೆಕ್ನೋ ಉದ್ಯಮಿಗಳನ್ನು ಸಿದ್ಧಪಡಿಸುವುದು ಅವಶ್ಯಕ.

21 ನೇ ಶತಮಾನವು ಭಾರತಕ್ಕೆ ಸೇರಿದ್ದು, ನಮ್ಮ ದೇಶ ವಿಶ್ವಗುರುವಿನ ಪಾತ್ರವನ್ನು ನಿರ್ವಹಿಸಲಿದೆ. ಟೆಕ್ನೋ ಉದ್ಯಮಶೀಲತೆಗೆ ಬೇಕಾದ ಪ್ರತಿಭೆ, ಕೌಶಲ್ಯ ಸಾಮರ್ಥ್ಯಗಳನ್ನು ನಾವು ಹೊಂದಬೇಕಾಗಿದೆ. ನಮ್ಮಲ್ಲಿರುವ ಒಂದು ಶತಕೋಟಿಗೂ ಹೆಚ್ಚು ಜನರು ನಮ್ಮ ಬೃಹತ್ ಸಂಪನ್ಮೂಲ. ಎಲ್ಲಾ ಹಂತಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಕರ್ತರನ್ನು ಮತ್ತು ನಾಯಕರನ್ನು ಉತ್ತೇಜಿಸುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡೋಣ.

ಸರ್ ಎಂವಿ ಎಂದೇ ಚಿರಪರಿಚಿತರಾಗಿರುವ ಭಾರತ ರತ್ನ ಪುರಸ್ಕೃತ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು “ಸುಸಜ್ಜಿತ ಕೈಗಾರಿಕೆಗಳು, ದಕ್ಷ ವ್ಯವಸ್ಥಾಪಕರು, ತರಬೇತಿ ಪಡೆದ ತಂತ್ರಜ್ಞರು ಮತ್ತು ನುರಿತ ಕೆಲಸಗಾರರು ರಾಷ್ಟ್ರದ ನಿಜವಾದ ಸಂಪತ್ತು”  ಎಂದು ಅಭಿಪ್ರಾಯಪಟ್ಟಿದ್ದರು. ಅವರು “ಕೈಗಾರಿಕೀಕರಣವಾಗು ಅಥವಾ ನಾಶವಾಗು”;  “ಹೆಚ್ಚು ಕೆಲಸ ಮಾಡಿ ಮತ್ತು ಹೆಚ್ಚು ಉತ್ಪಾದಿಸಿ”; “ಭಾರತೀಯ ಕೈಗಾರಿಕೆಗಳನ್ನು ಬೆಂಬಲಿಸಿ”; “ರಾಷ್ಟ್ರೀಯ ದೃಷ್ಟಿಕೋನದಿಂದ ಯೋಚಿಸಿ” ಎಂದು ಕರೆಕಟ್ಟು ಭಾರತವನ್ನು ಸಬಲೀಕರಿಸುವ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದರು.

ಇಂದಿನ ಸಮಾಜಕ್ಕೆ “ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ ಇಲ್ಲವಾದರೆ ಪ್ರಾಮುಖ್ಯತೆ ಕಳೆದುಕೊಳ್ಳುವಿರಿ” ಎಂಬ ಉಕ್ತಿ ಅತ್ಯಂತ ಸಮಂಜಸವಾಗಿದೆ. ಅದುದರಿಂದಲೇ “ಟೆಕ್ನೋ-ಉದ್ಯಮಿಗಳು, ಸಂಪತ್ತು ಮತ್ತು ಉದ್ಯೋಗಗಳ ಸೃಷ್ಟಿಕರ್ತರು” ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ಪ್ರಾಚೀನ ಭಾರತವು ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಾದ ನಳಂದ, ತಕ್ಷಶಿಲಾ, ವಿಕ್ರಮಶಿಲಾ, ವಲ್ಲಭಿ ಇತ್ಯಾದಿಗಳನ್ನು ಹೊಂದಿತ್ತು, ಬಹುಶಿಸ್ತೀಯ ಬೋಧನೆ ಮತ್ತು ಸಂಶೋಧನೆಯ ಉನ್ನತ ಗುಣಮಟ್ಟವನ್ನು ಹೊಂದಿ ಪ್ರಪಂಚದಾದ್ಯಂತದ ಅತ್ಯಂತ ಶ್ರೇಷ್ಠ ವಿದ್ವಾಂಸರನ್ನು ಆಕರ್ಷಿಸಿತ್ತು. ಪ್ರಾಚೀನ ಶಿಕ್ಷಣ ವ್ಯವಸ್ಥೆಯು ಚರಕ, ಸುಶ್ರುತ, ಆರ್ಯಭಟ, ವರಾಹಮಿಹಿರಾ, ಭಾಸ್ಕರಚಾರ್ಯ, ಪತಂಜಲಿ, ನಾಗಾರ್ಜುನ ಮುಂತಾದ ಮಹಾನ್ ವಿದ್ವಾಂಸರನ್ನು ಜಗತ್ತಿಗೆ ನೀಡಿದ್ದು, ಗಣಿತ, ಖಗೋಳವಿಜ್ಞಾನ, ಲೋಹಶಾಸ್ತ್ರ, ವೈದ್ಯಕೀಯ ವಿಜ್ಞಾನ ಮತ್ತು ಶಸ್ತ್ರಚಿಕಿತ್ಸೆ, ಕಟ್ಟಡ ನಿರ್ಮಾಣ, ವಾಸ್ತುಶಿಲ್ಪ, ಹಡಗು ನಿರ್ಮಾಣ ಮತ್ತು ನೌಕಾಯಾನ, ಯೋಗ, ಲಲಿತಕಲೆಗಳು, ಚದುರಂಗ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ತತ್ವಶಾಸ್ತ್ರವು ಪ್ರಪಂಚದ ಮೇಲೆ ಬಲವಾದ ಪ್ರಭಾವ ಬೀರಿದೆ. ಬಾಹ್ಯ ಆಕ್ರಮಣಕಾರರ ದೆಸೆಯಿಂದ ನಮ್ಮ ಪ್ರಾಚೀನ ಸಮಯ-ಪರೀಕ್ಷಿತ ಶಿಕ್ಷಣ ವ್ಯವಸ್ಥೆಯು ನಾಶವಾಯಿತು ಮತ್ತು ಪಾಶ್ಚಾತ್ಯೀಕರಣಗೊಂಡಿತು. ಸ್ವಾತಂತ್ರ್ಯಾನಂತರ ಹಲವಾರು ಸರ್ಕಾರಗಳು ನಮ್ಮ ದೇಶದ ವೈಭವವನ್ನು ಮರಳಿ ತರಲು ಹೊಸ ಶಿಕ್ಷಣ ನೀತಿಗಳನ್ನು ಪರಿಚಯಿಸಲು ಪ್ರಯತ್ನಿಸಿದವು. ಇತ್ತೀಚೆಗೆ, ಭಾರತ ಸರ್ಕಾರವು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಪರಿಚಯಿಸಿದ್ದು, ಸಂಸ್ಥೆಗಳಿಗೆ ಉನ್ನತ ಗುಣಮಟ್ಟವನ್ನು ತರಲು ಸ್ವಾಯತ್ತತೆಯನ್ನು ಒದಗಿಸುವ ವ್ಯಾಪ್ತಿಯನ್ನು ವಿಸ್ತರಿಸಿದೆ. ನನ್ನ ಆತ್ಮೀಯ ಪ್ರಾಧ್ಯಾಪಕ ಬಂಧುಗಳೇ / ಸ್ನೇಹಿತರೇ, ರಾಷ್ಟ್ರೀಯ ಶಿಕ್ಷಣ ನೀತಿ- 2020 ರ ಯಶಸ್ವಿ ಅನುಷ್ಠಾನಕ್ಕೆ ಕೊಡುಗೆ ನೀಡಲು ಮತ್ತು ವೈಭವವನ್ನು ಮರಳಿ ತರುವ ಪ್ರಕ್ರಿಯೆಯ ಭಾಗವಾಗಲು ನಮಗೆ ಅಭೂತಪೂರ್ವ ಅವಕಾಶವಿದ್ದು, ಬನ್ನಿ ಎಲ್ಲರೂ ಕೈಜೋಡಿಸೋಣ.

ಪ್ರೊ. ಕೆ. ಬಾಲವೀರಾ ರೆಡ್ಡಿ
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ವಿಶ್ರಾಂತ ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
ಅಧ್ಯಕ್ಷರು, ಆಡಳಿತ ಮಂಡಳಿ, ರಾಷ್ಟ್ರೀಯ ಪ್ರಾದ್ಯೋಗಿಕ ಸಂಸ್ಥೆ ಕರ್ನಾಟಕ, ಸುರತ್ಕಲ್

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content