ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಜೀವ ವಿಜ್ಞಾನಗಳ ಪ್ರಗತಿಯ ಇಣುಕುನೋಟ  

1 min read

ಭೌತ ವಿಜ್ಞಾನಗಳಿಗೆ ಹೋಲಿಸಿದರೆ ಜೀವ ವಿಜ್ಞಾನಗಳಲ್ಲಿನ ಪ್ರಗತಿಯು ಸುಮಾರು 19ನೇ ಶತಮಾನದ ಅಂತ್ಯದವರೆವಿಗೂ ನಿಧಾನ ಗತಿಯಲ್ಲಿತ್ತು. ದೇಹದ ಒಳಭಾಗ, ಅಂಗಾಂಶಗಳು ಮತ್ತು ಜೀವಕೋಶಗಳು ಮತ್ತು ಅಂತಿಮವಾಗಿ ಜೀವಿಗಳ ಆಣ್ವಿಕ ಸಂಘಟನೆ ಮತ್ತು ಕಾರ್ಯನಿರ್ವಹಣೆಯನ್ನು ಜೀವಿ ಮತ್ತು ಆಣ್ವಿಕ ಮಟ್ಟಗಳೆರಡರಲ್ಲೂ ಶೋಧಿಸಿ ಅರ್ಥಪೂರ್ಣ ಮುನ್ನಡೆಗಳನ್ನು ಸಾಧಿಸಲು ಜೀವಶಾಸ್ತ್ರಜ್ಞರಿಗೆ ಉಪಕರಣಗಳು ಮತ್ತು ತಂತ್ರಗಳ ಅಗತ್ಯವಿತ್ತು. ಆದರೆ, ಸಾಮಾನ್ಯವಾಗಿ ಉಪಕರಣಗಳು ಮತ್ತು ತಂತ್ರಗಳನ್ನು ಭೌತವಿಜ್ಞಾನಿಗಳು, ಎಂಜಿನಿಯರ್.ಗಳು ಮತ್ತು ರಸಾಯನಶಾಸ್ತ್ರಜ್ಞರು/ಜೀವರಸಾಯನಶಾಸ್ತ್ರಜ್ಞರು ನಿರ್ಮಿಸುತ್ತಾರೆ. ಜೀವಶಾಸ್ತ್ರಜ್ಞರು ಲಭ್ಯವಿರುವ ತಂತ್ರಗಳನ್ನು ಬಳಸಿ, ವಿವಿಧ ಹಂತಗಳಲ್ಲಿ ಜೀವಿಗಳ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಜೀವನದ ರಹಸ್ಯಗಳನ್ನು ಬಿಚ್ಚಿಡಲು ಪ್ರಯತ್ನಿಸುತ್ತಾರೆ.  ಉದಾಹರಣೆಗೆ, ಸರಳ ಸೂಕ್ಷ್ಮದರ್ಶಕಗಳ ನಿರ್ಮಾಣದಿಂದ, ಮಾನವನ ಕಣ್ಣಿಗೆ ಕಾಣದ ಜೀವಿಗಳನ್ನು ನೋಡಲು ಸಾಧ್ಯವಾಯಿತು. ಒಮ್ಮೆ ಅಂತಹ ಜೀವಿಗಳನ್ನು ಪತ್ತೆಹಚ್ಚಿದ ನಂತರ, ಹೆಚ್ಚಿನ ವರ್ಧನೆ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ವಿವಿಧ ರೀತಿಯ ಸೂಕ್ಷ್ಮದರ್ಶಕಗಳ (ಸಂಯುಕ್ತ, ಫ್ಲೋರೆಸೆನ್ಸ್, ಎಲೆಕ್ಟ್ರಾನ್, ಕಾನ್ಫೋಕಲ್, ಇತ್ಯಾದಿ) ಅಭಿವೃದ್ಧಿಯ ಅಗತ್ಯತೆಗೆ ನಾಂದಿಯಾಯಿತು. 19ನೇ ಶತಮಾನದಲ್ಲಿ ಅಗತ್ಯವಾದ ಉಪಕರಣಗಳು ಮತ್ತು ತಂತ್ರಗಳು ಲಭ್ಯವಾದವು ಹಾಗೂ ಅವುಗಳಿಂದಾಗಿ ಜೀವಶಾಸ್ತ್ರದಲ್ಲಿ ನಿರಂತರ ಪ್ರಗತಿಯು ನಡೆಯಿತು. ಈ ಲೇಖನವು ಮೂಲಭೂತ ಮತ್ತು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಜೀವಶಾಸ್ತ್ರದ ಬೆಳವಣಿಗೆಗಳ ಕೆಲವು ಪ್ರಮುಖ ಅಂಶಗಳ ಒಳನೋಟವನ್ನು ನೀಡಲಿದೆ

ಮೊದಲನೆಯದಾಗಿ, ವಿಶಾಲ ಜೀವವೈವಿಧ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಅಗತ್ಯವಾಗಿತ್ತು. ಈ ವಿಶಾಲವಾದ ಜೀವವೈವಿಧ್ಯತೆಯನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸುವುದು (ಸಂಬಂಧಿತ ಜೀವಿಗಳನ್ನು ವರ್ಗೀಕರಿಸುವುದು), ಅವುಗಳನ್ನು ಹೆಸರಿಸುವುದು, ಪ್ರಾಣಿಗಳು ಮತ್ತು ಸಸ್ಯಗಳ ವಿವಿಧ ಗುಂಪುಗಳ ನಡುವೆ ಸಂಬಂಧಗಳನ್ನು ಸ್ಥಾಪಿಸುವುದು, ಸಸ್ಯ ಮತ್ತು ಪ್ರಾಣಿ ಸಾಮ್ರಾಜ್ಯಗಳೊಳಗಿನ ಶ್ರೇಣೀಕರಣವನ್ನು ಅರ್ಥಮಾಡಿಕೊಳ್ಳುವುದು ಇದರಲ್ಲಿ ಸೇರಿದ್ದು, ಇವೆಲ್ಲವೂ ದ್ವಿಪದೀಯ ನಾಮಕರಣದ ವ್ಯವಸ್ಥೆ (ಕುಲವನ್ನು  ಅನುಸರಿಸಿ ಪ್ರಭೇದಗಳ ಜೋಡಣೆ. ಉದಾ:  ಹೋಮೋ ಸೇಪಿಯನ್ಸ್)ಯನ್ನು ಪ್ರಸ್ತಾಪಿಸಿದ ಕಾರ್ಲ್ ಲೆನ್ನೀಯಸ್ (1707-1778) ಅವರ ಕೆಲಸದಿಂದ ಸಾಧ್ಯವಾಯಿತು. ಅವರನ್ನು ಜೀವಿವರ್ಗೀಕರಣದ ಪಿತಾಮಹನೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ,  ಜೀವವೈವಿಧ್ಯತೆಯ ಕ್ರಮಬದ್ಧ ರಚನೆ (ಗುರುತಿಸುವಿಕೆ, ವರ್ಗೀಕರಣ ಮತ್ತು ದಾಖಲೀಕರಣ) ಲೆನ್ನೀಯಸ್.ನಿಂದಾಗಿ ಸಾಧ್ಯವಾಯಿತು.  19ನೇ ಶತಮಾನಕ್ಕೆ ಮೊದಲು, ಸಾಮಾನ್ಯವಾಗಿ, ಜೀವ ಅಧ್ಯಯನಗಳು ಹೆಚ್ಚಾಗಿ ಪಳೆಯುಳಿಕೆಗಳು, ರೂಪವಿಜ್ಞಾನ, ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಬೆಳವಣಿಗೆ ಮತ್ತು ಇತ್ಯಾದಿಗಳನ್ನು ವಿವರಿಸಲು ಸೀಮಿತವಾಗಿದ್ದವು.

ಒಂದು ಪ್ರಮುಖ ಪ್ರಗತಿ ಎಂದರೆ, ಜೀವಕೋಶಗಳು ಎಲ್ಲಾ ಜೀವಿಗಳ ಮೂಲಭೂತ ಘಟಕಗಳಾಗಿವೆ ಎಂದು ಪ್ರಸ್ತಾಪಿಸಿದ ‘ಕೋಶ ಸಿದ್ಧಾಂತ’ (1839) ಎಂಬ ಸಾಮಾನ್ಯೀಕೃತ ಸಿದ್ಧಾಂತ. ಇದು ರಾಬರ್ಟ್ ಹುಕ್ (1665), ಟಿ. ಶ್ವಾನ್ & ಎಂ. ಜೆ. ಷ್ಲೈಡೆನ್ (1839), ಇನ್ನಿತರರ ಶ್ರಮದ ಪಲಿತಾಂಶವಾಗಿದೆ.  ತದನಂತರ, ರುಡಾಲ್ಫ್ ವರ್ಚೋವ್ (1865) ಜೀವಕೋಶವು ಮೊದಲೇ ಅಸ್ತಿತ್ವದಲ್ಲಿರುವ ಜೀವಕೋಶಗಳಿಂದ ಮಾತ್ರ (ಕೋಶ ವಿಭಜನೆಯಿಂದ) ಉದ್ಭವಿಸುತ್ತದೆಯೇ ಹೊರತು  ಹೊಸತಾದ ಸೃಷ್ಟಿಯಲ್ಲ ಎಂದು ತೋರಿಸಿದರು.

ಕೋಶ ಸಿದ್ಧಾಂತದ ನಂತರ, 1858 ರಲ್ಲಿ, ಚಾರ್ಲ್ಸ್ ಡಾರ್ವಿನ್ ಮತ್ತು ರಸ್ಸೆಲ್ ವ್ಯಾಲೇಸ್.ರವರ “ನೈಸರ್ಗಿಕ ಆಯ್ಕೆಯ ಮೂಲಕ ವಿಕಸನದ ಸಿದ್ಧಾಂತ” ಪ್ರತಿಪಾದನೆಯಾಯಿತು. ಆದರೆ, ಈ ಸಿದ್ಧಾಂತದ ಮಹತ್ವವನ್ನು ಒಪ್ಪಲು ಸುಮಾರು ಒಂದು ಶತಮಾನವೇ ಬೇಕಾಯಿತು. ಈಗ, ವಿಕಸನವನ್ನು ಜೀವಶಾಸ್ತ್ರದಲ್ಲಿ ಪ್ರಮುಖ ವಿಷಯವೆಂದು ಪರಿಗಣಿಸಲಾಗಿದೆ. ಇದು ಜೀವಶಾಸ್ತ್ರದ ಎಲ್ಲಾ ಶಾಖೆಗಳನ್ನು ಜೋಡಿಸುವ ಸಂಪರ್ಕ ಕೊಂಡಿಯಾಗಿದೆ ಮತ್ತು ಬಹುತೇಕ ಜೀವ ವಿದ್ಯಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಪ್ರಯತ್ನಿಸುತ್ತದೆ. ವಿಕಸನೀಯ ಜೀವಶಾಸ್ತ್ರದ ಕಲ್ಪನೆಗಳು ಪ್ರಾಣಿಗಳ ವರ್ತನೆಗಳು (ಸೂಕ್ಷ್ಮಜೀವಿಗಳಿಂದ ಮನುಷ್ಯವರೆಗೆ ಹಾಗೂ ಸಸ್ಯಗಳು ಸೇರಿ), ಬದುಕುಳಿಯುವ ತಂತ್ರಗಳು ಮತ್ತು ಇತ್ಯಾದಿಗಳ ಬಗ್ಗೆ ನಮ್ಮ ತಿಳುವಳಿಕೆಗೆ ಬಹಳ ಸಹಾಯ ಮಾಡಿವೆ. ಇದಲ್ಲದೆ, ವಿಕಸನೀಯ ಜೀವಶಾಸ್ತ್ರದ ಕಲ್ಪನೆಗಳು ವಿಕಸನೀಯ ಔಷಧ, ವಿಕಸನೀಯ ಮನೋವೈದ್ಯಶಾಸ್ತ್ರ, ಡಾರ್ವಿನಿಯನ್ ಕೃಷಿ ಮತ್ತು ಡಾರ್ವಿನಿಯನ್ ಮೀನುಗಾರಿಕೆಯಂತಹ ಹೊಸ ವಿಭಾಗಳ ಉಗಮಕ್ಕೆ ಪರಿಣಾಮಕಾರಿಯಾದ ಕೊಡುಗೆಯನ್ನು ನೀಡಿವೆ.

ಜೀವಶಾಸ್ತ್ರದಲ್ಲಿ ಮತ್ತೊಂದು ಪ್ರಮುಖ ಆವಿಷ್ಕಾರವೆಂದರೆ ಆನುವಂಶಿಕತೆಯ ತತ್ವಗಳ ಸ್ಪಷ್ಟೀಕರಣ ಮತ್ತು  ಹಾಗೆಯೇ ಗ್ರೆಗರ್ ಜೋಹಾನ್ ಮೆಂಡಲ್ (1865) ರವರ ಡಿಸ್ಕವರಿ ಆಫ್ ಜೆನೆಟಿಕ್ಸ್ (1865). ಮೆಂಡಲ್.ರವರು ಪರಸ್ಪರ ಸಂಯೋಜನೆಯಾಗದ ಪ್ರಬಲ ಮತ್ತು ಹಿಂಜರಿತದ ಗುಣಲಕ್ಷಣಗಳ (ಈಗ ಜೀನುಗಳು ಎಂದು ಕರೆಯಲ್ಪಡುವ) ಅಸ್ತಿತ್ವವನ್ನು ತೋರಿಸಿದರು. ಮೆಂಡಲ್ ಅವರನ್ನು ಜೆನೆಟಿಕ್ಸ್.ನ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. 20ನೇ ಶತಮಾನದ ಕೊನೆಯಿಂದ ಆನುವಂಶಿಕಶಾಸ್ತ್ರವು (ಜೆನಿಟಿಕ್ಸ್) ತ್ವರಿತವಾಗಿ ಎಲ್ಲೆಗಳನ್ನು ದಾಟಿ ಬೆಳೆದು, ಎಪಿಜೆನೆಟಿಕ್ಸ್ ಎಂಬ ಒಂದು ಹೊಸ ಶಾಖೆಯ ಉಗಮಕ್ಕೆ ಕಾರಣವಾಯಿತು.

ಡಿಎನ್ಎಯ ರಚನೆಯ ಸ್ಪಷ್ಟೀಕರಣ (1953)  ನೀಡಿದ  ಜೇಮ್ಸ್ ವ್ಯಾಟ್ಸನ್, ಫ್ರಾನ್ಸಿಸ್ ಕ್ರಿಕ್ ಮತ್ತು ಮೋರಿಸ್ ವಿಲ್ಕಿನ್ಸ್  (1962 ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದವರು) ಮತ್ತು ತದನಂತರ ಹರ್ ಗೋವಿಂದ್ ಖೋರಾನಾ, ಮಾರ್ಷಲ್ ಡಬ್ಲ್ಯೂ ನಿರೆನ್ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ ಹಾಲಿ (1968ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದವರು)ರವರು ನೀಡಿದ ಆನುವಂಶಿಕ ಮಾಹಿತಿಯ ಕೋಡಿಂಗ್ ಮತ್ತು ಪ್ರಸರಣದ ತತ್ವಗಳ ಸ್ಪಷ್ಟೀಕರಣ  ಅಣು ಜೀವಶಾಸ್ತ್ರದ ಹುಟ್ಟಿಗೆ ಕಾರಣವಾಯಿತು.  ಡಿಎನ್ಎ, ಆರ್.ಎನ್.ಎ ಮತ್ತು ಪ್ರೋಟೀನ್ ನಡುವಿನ ಸಂಬಂಧದ ಜ್ಞಾನವು ಅಂತಿಮವಾಗಿ ಕೃತಕ ವಂಶವಾಹಿಗಳನ್ನು ವರ್ಧಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ನಂತರ, ಕ್ಯಾರಿ ಮುಲ್ಲಿಸ್ ಶಾಖ-ಸ್ಥಿರ (ಥರ್ಮೋ-ಸ್ಟೇಬಲ್) ಡಿಎನ್ಎ ಪಾಲಿಮರೇಸ್ ಅನ್ನು ಬಳಸಿಕೊಂಡು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ತಂತ್ರವನ್ನು ಅಭಿವೃದ್ಧಿಪಡಿಸಿದರು, ಇದಕ್ಕಾಗಿ ಅವರು ರಸಾಯನಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕವನ್ನು (1993) ಪಡೆದರು.

ಇತ್ತೀಚಿನ ದಿನಗಳಲ್ಲಿ, ವಿಜ್ಞಾನದ ಇತರ ಎಲ್ಲಾ ಶಾಖೆಗಳ ಕೊಡುಗೆ ಮತ್ತು ಜೀವನದ ರಹಸ್ಯಗಳನ್ನು ಬಿಚ್ಚಿಡಲು ನಮ್ಮಲ್ಲಿರುವ ತೀವ್ರ ಆಸಕ್ತಿಯಿಂದಾಗಿ ಜೀವ ವಿಜ್ಞಾನಗಳು ಅಗಾಧವಾಗಿ ಪ್ರಗತಿಯನ್ನು ಸಾಧಿಸಿವೆ. ಜೆನೆಟಿಕ್ಸ್ ಮತ್ತು ಎಪಿಜೆನೆಟಿಕ್ಸ್, ಆಣ್ವಿಕ ಜೀವಶಾಸ್ತ್ರ, ಔಷಧ ವಿನ್ಯಾಸ ಮತ್ತು ಜೈವಿಕ ತಂತ್ರಜ್ಞಾನಗಳಲ್ಲಿನ ಮುನ್ನಡೆಗಳು ಹಾಗೂ  ಅಂಗರಚನೆ ಜೀವಶಾಸ್ರ್ರ, ಕಂಪ್ಯೂಟೇಷನಲ್ ಬಯಾಲಜಿ, ಬಯೋಇನ್ಫರ್ಮ್ಯಾಟಿಕ್ಸ್, ಇನ್.ಸಿಲಿಕೊ ಬಯಾಲಜಿ, ಜೀನೋಮ್ ಎಡಿಟಿಂಗ್ ಮತ್ತು ಸಿಂಥೆಟಿಕ್ ಬಯಾಲಜಿಯಂತಹ ನವೀನ ಮುಂಚೂಣಿ ಸಂಶೋಧನಾ ಕ್ಷೇತ್ರಗಳ ಮುನ್ನಡೆಗಳು ಬಹುಶಿಸ್ತೀಯ ಸಂಶೋಧನೆಗಳ ಪರಿಣಾಮವಾಗಿದೆ. ಆದ್ದರಿಂದ ಆಧುನಿಕ ಜೀವಶಾಸ್ತ್ರವು ತುಂಬಾ ಸಂಕೀರ್ಣವಾಗಿದ್ದು, ಜೀವಶಾಸ್ತ್ರ ಮತ್ತು ಅದರ ಅನ್ವೇಷಣೆಯ ಯಾವುದೇ ಆಳವಾದ ತಿಳುವಳಿಕೆಗೆ ಈಗ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಅಂಕಿಅಂಶಗಳು, ಗಣಕ ವಿಜ್ಞಾನ ಮತ್ತು ಹಲವಾರು ತಂತ್ರಾಂಶಗಳು ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯ ಬಗ್ಗೆ ಉತ್ತಮ ಜ್ಞಾನದ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯು ಇತ್ತೀಚೆಗೆ ಬಹುತೇಕ ಎಲ್ಲಾ ಗುರುತಿಸಲ್ಪಟ್ಟ ಪ್ರೋಟೀನ್.ಗಳ (~350,000) ರಚನೆಗಳನ್ನು ಗುರುತಿಸಿದೆ. ಇದಲ್ಲದೆ, ಎಐ ಅನ್ನು ಬಳಸಿಕೊಂಡು ಲಂಡನ್ ಮೂಲದ ಡೀಪ್ ಮೈಂಡ್ ಕಂಪನಿಯು ಬ್ಯಾಕ್ಟೀರಿಯಾದಿಂದ ಮನುಷ್ಯನವರೆಗೆ (‘ಪ್ರೋಟೀನ್ ಯೂನಿವರ್ಸ್’) ಸುಮಾರು 200 ಮಿಲಿಯನ್ ಪ್ರೋಟೀನ್.ಗಳ ರಚನೆಗಳನ್ನು ಗುರುತಿಸಿದೆ. ವಿಜ್ಞಾನಿಗಳು ಈಗ ಅಪೇಕ್ಷಿತ ವಂಶವಾಹಿಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ವಂಶವಾಹಿಗಳನ್ನು ತಿದ್ದುವ ಪ್ರಕ್ರಿಯೆಯಲ್ಲಿ (ಜೀನ್ ಎಡಿಟಿಂಗ್) ಸಮರ್ಥರಾಗಿದ್ದಾರೆ.

ವಂಶವಾಹಿಗಳ ತಿದ್ದುವಿಕೆಗೆ CRISPR-Cas-9 ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಜೆನ್ನಿಫರ್ ಡೌಡ್ನಾ ಮತ್ತು ಇಮ್ಯಾನುಯೆಲ್ಲೆ ಚಾರ್.ಪೆಂಟಿಯರ್ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು (2020) ಪಡೆದರು. CRISPR Cas-9 ತಂತ್ರಜ್ಞಾನವನ್ನು ಬಳಸಿಕೊಂಡು ಆನುವಂಶಿಕ ರಚನೆಯನ್ನು ತಿದ್ದುವ ಪ್ರಕ್ರಿಯೆಯು ಜೀವಿಗಳಲ್ಲಿ ಅಪೇಕ್ಷಿತ ವಂಶವಾಹಿಗಳನ್ನು ತೆಗೆದುಹಾಕಲು/ಸೇರಿಸಲು ಅನುವು ಮಾಡಿಕೊಡುತ್ತದೆ. ಇದು ಮನುಷ್ಯನ ಜೀವನವನ್ನು ಸುಧಾರಿಸುವ ಹೊಸ ಭರವಸೆಗಳನ್ನು ನೀಡಿದೆ (ಉದಾ: ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಚಿಕಿತ್ಸೆ ಮತ್ತು ಕೃಷಿ ಬೆಳೆ ಸುಧಾರಣೆಗಳು ಇತ್ಯಾದಿ). ಸಂಕ್ಷಿಪ್ತವಾಗಿ ಹೇಳುವುದಾದರೆ, ಆಣ್ವಿಕ ಜೀವಶಾಸ್ತ್ರ, ಎಐ, ಕಂಪ್ಯೂಟೇಶನಲ್ ಬಯಾಲಜಿಯ ಬುದ್ದಿಮತ್ತೆ ಹಾಗೂ ವೈವಿಧ್ಯಮಯ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅವುಗಳ ಅನ್ವಯಿಕೆಯು ವೈದ್ಯಕೀಯ, ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಊಹೆಗೂ ಮೀರಿದ ಭರವಸೆಗಳನ್ನು ನೀಡಿವೆ. ಇದಲ್ಲದೆ, ಈ ಬೆಳವಣಿಗೆಗಳು ‘ಜೀವಶಾಸ್ತ್ರದಲ್ಲಿ ಡಿಜಿಟಲ್ ಯುಗ’ದ ಪ್ರಾರಂಭವನ್ನು ಗುರುತಿಸಿರುವುದಲ್ಲದೆ 21ನೇ ಶತಮಾನವು ಜೀವಶಾಸ್ತ್ರಕ್ಕೆ ಸೇರಿದೆ ಎಂಬ ದೃಷ್ಟಿಕೋನವನ್ನು ದೃಡೀಕರಿಸಿದೆ.

– ಪ್ರೊ. ಎಸ್. ಕೆ. ಸೈದಾಪುರ್
ವಿಶ್ರಾಂತ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾನಿಲಯ
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
saidapur@gmail.com

ಕನ್ನಡಕ್ಕೆ ಅನುವಾದ: ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content