ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನ, ಎಂಜಿನಿಯರಿಂಗ್, ಕೃಷಿ ಮತ್ತು ಕೆಲವು ಅನ್ವಯಿಕ ವಿಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಆಯ್ಕೆಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪ್ರವೃತ್ತಿಯು ನಮ್ಮ ಸುಸ್ಥಿರ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರಿಸರ, ವಿಶೇಷವಾಗಿ ಪ್ರಸ್ತುತ ಜ್ಞಾನಾಧಾರಿತ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ‘ಇಂದಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ’ ಎಂಬಂತೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸ್ನಾತಕೋತ್ತರ ವಿಶೇಷ ಉಪನ್ಯಾಸ ಮಾಲೆ/ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ.
ಉದ್ದೇಶಗಳು
- ವಿಜ್ಞಾನ, ಎಂಜಿನಿಯರಿಂಗ್, ಕೃಷಿ ಮತ್ತು ಕೆಲವು ಅನ್ವಯಿಕ ವಿಜ್ಞಾನ ವಿದ್ಯಾರ್ಥಿಗಳು ಸಮಕಾಲೀನ ವಿಷಯಗಳಲ್ಲಿ ಮತ್ತು ಆಧುನಿಕ ಸಂಶೋಧನೆಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸುವುದು
- ವಿಜ್ಞಾನ, ಎಂಜಿನಿಯರಿಂಗ್, ಕೃಷಿ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು
- ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ಆಗುತ್ತಿರುವ ಸಂಶೋಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು
- ನ್ಯಾನೊ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡುವುದು.
ಕಾರ್ಯಕ್ರಮ
- ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಂಪನ್ಮೂಲ ತಜ್ಞರು ಮತ್ತು ಹೆಸರಾಂತ ಉದ್ಯಮಿಗಳು
ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಾರೆ. - ಆಯಾ ಕ್ಷೇತ್ರಗಳಲ್ಲಿ 10-15 ಸಂಪನ್ಮೂಲ ತಜ್ಞರನ್ನು ಗುರುತಿಸಲಾಗುವುದು ಮತ್ತು ಅವರಲ್ಲಿ 8 ಸಂಪನ್ಮೂಲ ತಜ್ಞರನ್ನು ಆಯ್ಕೆ ಮಾಡಲಾಗುವುದು ಮತ್ತು ಅವರ ಲಭ್ಯತೆಯನ್ನು ಆಧರಿಸಿ, ವೆಬ್ಬಿನಾರುಗಳು ಮತ್ತು ಐಸಿಟಿ ಉಪಕರಣಗಳ ಮೂಲಕ ಉಪನ್ಯಾಸಗಳನ್ನು ನಡೆಸಲಾಗುವುದು
- ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸುವರು; ಶಿಭಿರಾರ್ಥಿಗಳ ಸಂಖ್ಯೆ 100 ಮೀರಬಾರದು. ಆತಿಥೇಯ ಸಂಸ್ಥೆ ಇದನ್ನು ಯೋಜಿಸಿ ನಿರ್ವಹಿಸುವುದು.
ಮೌಲ್ಯಮಾಪನ
- ಉಪನ್ಯಾಸ ಮಾಲೆ/ಕಾರ್ಯಾಗಾರಗಳ ಕೊನೆಯಲ್ಲಿ ಸಂಪನ್ಮೂಲ ತಜ್ಞರಿಂದ ಪಡೆದ (ತಲಾ 8-10 ಪ್ರಶ್ನೆಗಳು) ಬಹು ಆಯ್ಕೆ ರಸಪ್ರಶ್ನೆಯೊಂದಿಗೆ ಒಂದು ಗಂಟೆ ಕಾಲದ ಪರೀಕ್ಷೆಯಿಂದ ವಿದ್ಯಾರ್ಥಿಗಳ ಮೌಲ್ಯಮಾಪನ
- ಅಂಕಗಳ ದಾರದ ಮೇಲೆ ಆಯ್ಕೆ ಮಾಡಿದ ಮೊದಲ ನಾಲ್ಕು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ; ಪ್ರಥಮ: ರೂ 3,000/-; ದ್ವಿತೀಯ: ರೂ 2,000/-; ತೃತೀಯ (ಇಬ್ಬರಿಗೆ): ರೂ 1,000/-
- ಉಪನ್ಯಾಸ ಮಾಲೆ/ಕಾರ್ಯಾಗಾರದಲ್ಲಿ ಭಾಗವಹಿಸಿದ್ದರ ಪ್ರಮಾಣಪತ್ರವನ್ನು ಪಡೆಯಲು ಕನಿಷ್ಠ ಅಂಕಗಳನ್ನು ಪಡೆಯಬೇಕು.
ಆಡಳಿತ / ಆಯವ್ಯಯ
- ವಿಶ್ವವಿದ್ಯಾಲಯ/ಸಂಸ್ಥೆಗಳಲ್ಲಿ 2 ದಿನಗಳ ಕಾರ್ಯಾಗಾರಕ್ಕೆ ರೂ. 1.25 ಲಕ್ಷ (ಅತಿಥೇಯ ಸಂಸ್ಥೆಯ ಕೊಡುಗೆ ನಿರೀಕ್ಷಿಸಿದೆ) ಮತ್ತು 3 ದಿನಗಳ ಉಪನ್ಯಾಸ ಮಾಲೆಗೆ ರೂ. 1.75 ಲಕ್ಷ (ವಸತಿ, ಪ್ರಯಾಣ ಮತ್ತು ವಸತಿ ಶುಲ್ಕ ಸೇರಿ)
- ಕಾರ್ಯಕ್ರಮದ ನೋಡಲ್ ಅಧಿಕಾರಿಯು ಕಾರ್ಯಕ್ರಮ ವೇಳಾಪಟ್ಟಿ ಮತ್ತು ಸಂಪನ್ಮೂಲ ತಜ್ಞರ ಪಟ್ಟಿಯನ್ನು ಅಕಾಡೆಮಿಯಿಂದ ಅನುಮೋದನೆಯನ್ನು ಪಡೆಯಬೇಕು. ಒಂದು ಉಪನ್ಯಾಸ 90 ನಿಮಿಷಗಳು ಮತ್ತು ರೂ. 2,000/- ಗೌರವ ಸಂಭಾವನೆ. ಒಂದು ಕಾರ್ಯಕ್ರಮದಲ್ಲಿ ಒಬ್ಬ ತಜ್ಞರು ಗರಿಷ್ಠ ಎರಡು ಉಪನ್ಯಾಸಗಳನ್ನು ನೀಡಬಹುದು
- ನೋಡಲ್ ಅಧಿಕಾರಿಗೆ ರೂ 5,000/- ಗಳ ಗೌರವ ಸಂಭಾವನೆ ಸೇರಿ ಸಂಪನ್ಮೂಲ ತಜ್ಞರ ಸಂಭಾವನೆ, ಪ್ರಯಾಣ, ಲೇಖನ ಸಾಮಗ್ರಿ, ಊಟ & ಉಪಹಾರಗಳು, ಬಹುಮಾನಗಳು, ವಸತಿ, ಲೆಕ್ಕಪರಿಶೋಧನೆ ಮತ್ತು ಅಕಾಡೆಮಿಯ ಪೂರ್ವಾನುಮತಿಯೊಂದಿಗೆ ಮಾಡಲಾದ ಇತರೆ ವೆಚ್ಚಗಳು ಕಾರ್ಯಕ್ರಮದ ಆಯವ್ಯಯದಲ್ಲಿ ಸೇರಿರುತ್ತವೆ,
- ಕಾರ್ಯಕ್ರಮ ಪೂರ್ಣಗೊಂಡ ನಂತರ ನೋಂದಾಯಿತ ಲೆಕ್ಕ ಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪರಿಶೋಧನೆಯ ವರದಿಯನ್ನು ಸೂಕ್ತ ಛಾಯಾಚಿತ್ರಗಳು ಮತ್ತು ಕಾರ್ಯಕ್ರಮ ವರದಿಯ ಸಮೇತ ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಂದ ಪ್ರತಿಕ್ರಿಯೆಗಳನ್ನು ಸಹ ಒದಗಿಸಬಹುದು
- ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು, ಅಕಾಡೆಮಿಯ ಪೂರ್ವಾನುಮತಿಯೊಂದಿಗೆ, ಆತಿಥೇಯ ಸಂಸ್ಥೆಗಳು ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬಹುದಾಗಿದೆ.
- ಅಕಾಡೆಮಿಯು ಕಾರ್ಯಕ್ರಮವನ್ನು ಬಾಹ್ಯ ಸಂಸ್ಥೆಯಿಂದ ಮೌಲ್ಯಮಾಪನವನ್ನು ಕೈಗೊಳ್ಳುವುದು, ಆ ಸಮಯದಲ್ಲಿ, ಆತಿಥೇಯ ಸಂಸ್ಥೆಗಳು/ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಅಗತ್ಯ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಮಾಹಿತಿ ಒದಗಿಸುವುದು