ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸೃಜನಶೀಲತೆ

1 min read

ಪ್ರೊ. ಜೆ. ತೊಣ್ಣನ್ನವರ್
ನಿವೃತ್ತ ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಕಲಬುರಗಿ
ಇ-ಮೇಲ್ : : jtonannavar.kud.phys@gmail.com  

ಪ್ರೊ. ಬಿ. ಜಿ. ಮೂಲಿಮನಿ
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ಇ-ಮೇಲ್: bgmulimani70@gmail.com

ಕನ್ನಡಕ್ಕೆ ಅನುವಾದ: ಡಾ. ಆನಂದ್ ಆರ್.,
ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ನಾಗರಿಕತೆಗಳ ಉಗಮಕ್ಕೆ ಒಂದು ಸಂವೇಗವನ್ನು ತಂದ ‘ಚಕ್ರ’ ಅಥವಾ ‘ಗಾಲಿ’ ಯನ್ನು ಆವಿಷ್ಕಾರಿಸಿದ ಮೊದಲ ಮಾನವನಿಗೆ ನಾವು ಯಾವಾಗಲೂ ಕೃತಜ್ಞತೆಯ ಋಣವನ್ನು ಹೊಂದಿರಬೇಕು ಎಂದು ಹೇಳಲಾಗುತ್ತದೆ. ಹೋಮೋ ಸೇಪಿಯನ್ಸ್ ಎನ್ನುವ ಈ ಆಧುನಿಕ ಮನುಷ್ಯನು 100,000 ವರ್ಷಗಳಷ್ಟು ಹಳೆಯವನಾದರೂ ಅವನು ಪಡೆದ ಸೃಜನಶೀಲ ಗುಣಲಕ್ಷಣಗಳು ಇಷ್ಟು ವರ್ಷಗಳಲ್ಲಾದ ಅವನ ವಿಕಾಸಕ್ಕೆ ಸಾಕ್ಷಿಳಾಗಿವೆ. ಅಲ್ಲದಿದ್ದರೆ, ಆಧುನಿಕ ಮನುಷ್ಯನು ತನ್ನ ಹತ್ತಿರದ ಸಂಬಂಧಿ ಚಿಂಪಾಂಜಿಗಳಿಂದ ಬೇರ್ಪಟ್ಟಿರುತ್ತಿರಲಿಲ್ಲ. ‘ಚಕ್ರ’ವು ಮನುಷ್ಯನ ವಿಕಾಸ ಪ್ರೇರೇಪಿತ ಸ್ವಯಂ-ಅಭಿವ್ಯಕ್ತಿ ಬಯಕೆಯ ಮೊದಲ ಕುರುಹು ಆಗಿದ್ದಿರಬಹುದಾಗಿದ್ದು, ಕಾಲಕ್ರಮೇಣ ಮೊನಚುಗೊಂಡು ವಿನ್ಯಾಸಗೊಳಿಸಲ್ಪಟ್ಟು, ಅನುವರ್ತಿಗಳಿಗೆ ಹಸ್ತಾಂತರಗೊಂಡಿತು. ಡಾರ್ವಿನಿಯನ್ ವಿಕಸನ ಸಿದ್ಧಾಂತದ ಪ್ರಕಾರ, ವಿಕಾಸವನ್ನು ಮುಂದುವರಿಸುವ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದವರು ಮುಂದುವರಿದು ‘ಅತಿಯೋಗ್ಯ ಪ್ರಭೇದಗಳು’ ಎನಿಸಿಕೊಳ್ಳುತ್ತವೆ ಮತ್ತು ಉಳಿದವುಗಳು ಹಿಂದುಳಿಯುತ್ತವೆ. ಪಕ್ಷಿಗಳು ಗೂಡುಗಳನ್ನು ನಿರ್ಮಿಸಿದ್ದರೆ, ಮನುಷ್ಯರು ನಾಗರಿಕತೆಗಳನ್ನು ನಿರ್ಮಿಸಿದ್ದಾರೆ, ಕಲೆ, ಧರ್ಮ ಮತ್ತು ಸಂಸ್ಕೃತಿಯನ್ನು ರಚಿಸಿದ್ದಾರೆ. ಆದ್ದರಿಂದ, ಸೃಜನಶೀಲತೆಯು ಮನುಷ್ಯನಿಗೆ ಬದುಕುಳಿಯುವ ತಂತ್ರ ಹಾಗೂ ಸಂತೋಷ ಮತ್ತು ಮೌಲ್ಯದ ಅಂತಃಪ್ರೇರಣೆಯ ಮೂಲ, ಎರಡೂ ಆಗಿರಬೇಕು. ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, ಸೃಜನಶೀಲತೆಯು ‘ಸ್ವಂತಿಕೆಯ  ಮತ್ತು  ಅಸಾಮಾನ್ಯ  ಕಲ್ಪನೆಯ ಉತ್ಪತ್ತಿ  ಅಥವಾ ಬಳಸುವ ಸಾಮರ್ಥ್ಯವಾಗಿದೆ’. ಸೃಜನಶೀಲತೆಯನ್ನು ಪೋಷಿಸಬಹುದು ಅಥವಾ ಬೆಳೆಸಬಹುದು, ಇದು ಆವಿಷ್ಕಾರಗಳು, ಅನ್ವೇಷಣೆಗಳು ಮತ್ತು ನಾವಿನ್ಯತೆಗಳಿಗೆ ಕಾರಣವಾಗಬಹುದು. ಸೃಜನಶೀಲತೆ ಪ್ರತಿಭಾವಂತರಿಗೆ ಮಾತ್ರವಿರುವ ವಿಶಿಷ್ಟ ಗುಣವೇ? ಮಾರ್ಕ್ ಟ್ವೈನ್ ಹೇಳುವಂತೆ ‘ನಿಜವಾಗಿಯೂ ಶ್ರೇಷ್ಠ ವ್ಯಕ್ತಿಗಳು ನೀವು ಸಹ ಶ್ರೇಷ್ಠರಾಗಬಹುದು ಎಂಬ ಭಾವನೆಯನ್ನು ನಿಮ್ಮಲ್ಲಿ ತರುತ್ತಾರೆ’. ವಿದ್ವಾಂಸರು, ಕಲಾವಿದರು, ರಾಜಕಾರಣಿಗಳು, ಬರಹಗಾರರು, ವಿಜ್ಞಾನಿಗಳು, ತಂತ್ರಜ್ಞಾನಿಗಳು ಮತ್ತು ಜನಸಾಮಾನ್ಯರು ಅವರ ಸಹಜಗುಣದಲ್ಲಿ ಸೃಜನಶೀಲರೇ. ಆದರೆ, ಸೃಜನಶೀಲತೆಯ ಸ್ವರೂಪ, ತೀವ್ರತೆ ಮತ್ತು ಪ್ರಭಾವವು ವ್ಯಾಪಕವಾಗಿ ಬದಲಾಗುತ್ತದೆ. ತಂತ್ರಜ್ಞಾನಿಗಳ ಸೃಷ್ಟಿಗಳು ಸಾಮಾನ್ಯ ವ್ಯಕ್ತಿಯ ಸೃಜನಶೀಲತೆಗಿಂತ ಹೆಚ್ಚು ವ್ಯಾಪಕವಾಗಿ ಸಮಾಜದ ಮೇಲೆ ಪರಿಣಾಮ ಬೀರಬಹುದು ಆದರೆ ಸಾಮಾನ್ಯ ವ್ಯಕ್ತಿಯ ಸೃಜನಶೀಲತೆ, ಎಷ್ಟೇ ಚಿಕ್ಕದಾಗಿದ್ದರೂ, ಮೌಲ್ಯಯುತವಾಗಿರುತ್ತದೆ. ತಂತ್ರಜ್ಞಾನಿಯು ದೊಡ್ಡದೊಂದು ಸವಾಲನ್ನು ಎದುರಿಸಲು ಆವಿಷ್ಕಾರಿಸಿದರೆ, ಕಲಾವಿದನು ಶಾಶ್ವತ ಮೌಲ್ಯದ ವರ್ಣಚಿತ್ರವನ್ನು ರಚಿಸುತ್ತಾನೆ, ರೈತ ತನ್ನ ಜಮೀನಿನಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುತ್ತಾನೆ. ಈ ಎಲ್ಲಾ ಮೂರು ವೃತ್ತಿಗಳ ಸೃಷ್ಟಿಗಳು ಮೌಲ್ಯಯುತವಾಗಿದ್ದರೂ, ಅವುಗಳ ಪ್ರಭಾವದಲ್ಲಿ ಭಿನ್ನವಾಗಿವೆ. ಮೇಧಾವಿಗಳು ಅಸಾಧಾರಣ ಹಾಗೂ ಕ್ರಾಂತಿಕಾರಿ ಮನಸ್ಸನ್ನು ಹೊಂದಿದ್ದಾರೆ ಎಂಬುದು ಖಂಡಿತವಾಗಿಯೂ ನಿಜ, ಪ್ರತಿಭೆ ಎಂಬ ಮುದ್ರೆಯು ಸೃಜನಶೀಲತೆ ಅಥವಾ ಸೃಜನಶೀಲ ಚಿಂತನೆಯಲ್ಲಿ ಅನನ್ಯತೆಯನ್ನು ಹೊಂದಿರುವುದಾಗಿದೆ. ಉದಾಹರಣೆಗೆ, ಮಹಾತ್ಮಾ ಗಾಂಧೀಜಿ ಮತ್ತು ಸಮಾಜ ಸುಧಾರಕ ಬಸವೇಶ್ವರರು ಆಧ್ಯಾತ್ಮಿಕ ಮೇಧಾವಿಗಳು; ಗ್ರೀಕ್ ವಿದ್ವಾಂಸ ಪ್ಲೇಟೋ ಮಾನವನ ಪ್ರೀತಿಯ ಲೋಕಜ್ಞಾನವನ್ನು ಹೆಚ್ಚಿಸಿದರು; ಕ್ಯಾಥೊಲಿಕ್  ಪಾದ್ರಿ ಮತ್ತು ಪುನರುಜ್ಜೀವನ ಖಗೋಳಶಾಸ್ತ್ರಜ್ಞ ಕೋಪರ್ನಿಕಸ್ ಸೂರ್ಯ ಕೇಂದ್ರಿತ ಸೌರವ್ಯೂಹದ ವಿಚಾರ ವಿಶ್ವದ ಬಗೆಗಿನ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿತು; ಷೇಕ್ಸ್ ಪಿಯರ್ ನ ನಾಟಕಗಳಲ್ಲಿನ ನಿರೂಪಣೆಗಳು ನಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಸ್ಪರ್ಶಿಸಿದವು; ಮತ್ತು ನೈಸರ್ಗಿಕ ವಾದಿ ಡಾರ್ವಿನ್ ತೀಕ್ಷ್ಣವಾದ ಅವಲೋಕನದಿಂದ ಮಾನವನ ವಂಶಾವಳಿಯ ಗಹನತೆಯನ್ನು ಪ್ರಕೃತಿಯಿಂದ ಬಿಚ್ಚಿಡಬಹುದು ಎಂಬುದನ್ನು ತೋರಿಸಿದರು. ಪ್ರಸ್ತುತ ಲೇಖನದಲ್ಲಿ ಸೃಜನಶೀಲತೆಯು ಮಾನವನ ಹೆಬ್ಬಯಕೆಯನ್ನು ಪೂರೈಸಲು, ನಾಗರಿಕತೆಗಳನ್ನು ರಚಿಸಲು ಮತ್ತು ಅವನ ಜ್ಞಾನವನ್ನು ಮುನ್ನಡೆಸಲು ಹೇಗೆ ಪ್ರಭಾವ ಬೀರಿದೆ ಎಂಬುದನ್ನು ವಿಷ್ಲೇಸಲಾಗಿದೆ. ಸೃಜನಶೀಲತೆಯ ವಿಸ್ತರಣೆ ವಿಶಾಲವಾಗಿದ್ದು, ಅನಿರ್ಬಾಧಿತವಾಗಿ ಆಯ್ಕೆ ಮಾಡಿದ ಕೆಲವು ಕ್ಷೇತ್ರಗಳಿನ ಮನುಷ್ಯನ ಪ್ರಯತ್ನಗಳಿಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಂಡಿದ್ದೇವೆ.

ಕಲೆಯು ಅದರ ಎಲ್ಲಾ ರೂಪಗಳಲ್ಲಿ ಸಂಸ್ಕೃತಿಗಳನ್ನು ಸೃಷ್ಟಿಸಿತು; ತನ್ನ ಆದಿ ಮತ್ತು ಅಂತ್ಯವನ್ನು ತಿಳಿದುಕೊಳ್ಳುವ ಮನುಷ್ಯನ ಬಯಕೆ ಧರ್ಮವನ್ನು ಸೃಷ್ಟಿಸಿತು; ನಮಗೆಲ್ಲರಿಗೂ ತಿಳಿದಿರುವಂತೆ ವಿಜ್ಞಾನವು ಇತ್ತೀಚಿನ ಮಾನವ ಪ್ರಯತ್ನವಾಗಿದ್ದು, ಪ್ರಕೃತಿಯನ್ನು ನಿರಾಕಾರ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಾಗಿದೆ. ಆಳವಾದ ಮಟ್ಟದಲ್ಲಿ, ಪ್ರಕೃತಿಯು ಸುಂದರವಾಗಿದೆ ಮತ್ತು ಬಲವಾದ ಧೀಮಂತ ಆಕರ್ಷಣೆಯನ್ನು ಹೊಂದಿದೆ; ಪ್ರಾಯೋಗಿಕ ಮಟ್ಟದಲ್ಲಿ, ಮನುಷ್ಯನು ತಾನು ಗಳಿಸಿದ ವೈಜ್ಞಾನಿಕ ಜ್ಞಾನದಿಂದ ಪರವಶನಾಗಿದ್ದಾನೆ ಮತ್ತು ಸಶಕ್ತನಾಗಿದ್ದಾನೆ. ಕಲೆ, ಧರ್ಮ ಮತ್ತು ವಿಜ್ಞಾನದಲ್ಲಿ ಮನುಷ್ಯ ಏನನ್ನು ಸಾಧಿಸಿದ್ದಾನೆ ಎಂಬುದರ ಅಂತರಂಗದಲ್ಲಿ ಅವನ ‘ಸೃಜನಶೀಲತೆ’ ಅಡಗಿದೆ ಎಂದು ನಾವು ಭಾವಿಸುತ್ತೇವೆ. ಇಂದು ವಿಜ್ಞಾನಿ ಮತ್ತು ತಂತ್ರಜ್ಞಾನಿಗಳು ಪ್ರಕೃತಿಯ ಪ್ರಕ್ರಿಯೆಗಳ ಬಗ್ಗೆ ಬಹಳಷ್ಟು ತಿಳುವಳಿಕೆಯನ್ನು ಹೊಂದಿದ್ದಾರೆ. ಪರಿಣಾಮವಾಗಿ, ಅವರು ಇತರರೊಂದಿಗೆ ಆಧುನಿಕ ನಾಗರಿಕತೆಯ ಚಾಲಕರಾಗಿದ್ದಾರೆ. ಅಮೆರಿಕಾದ ವಿಜ್ಞಾನಿ ಇ. ಬ್ರೈಟ್ ವಿಲ್ಸನ್ ಹೇಳುವಂತೆ ‘ವೈಜ್ಞಾನಿಕ ಸಂಶೋಧನೆ’ ಎಂಬುದು ವಾಡಿಕೆಯ ಪ್ರಕ್ರಿಯೆಯಲ್ಲ ಆದಕ್ಕೆ ಸ್ವಂತತೆ ಮತ್ತು ಸೃಜನಶೀಲ ಚಿಂತನೆಯ ಅಗತ್ಯವಿದ್ದು, ವಿಜ್ಞಾನಿಯ ಮಾನಸಿಕ ಸ್ಥಿತಿಗೆ ಇದು ತುಂಬಾ ಸಂವೇದನಾಶೀಲವಾಗಿದೆ. ಜರ್ಮನ್.ನ ಮಹಾವಿದ್ವಾಂಸ ಹರ್ಮನ್ ವಾನ್ ಹೆಲ್ಮ್ ಹೋಲ್ಟ್ಸ್ ಸೃಜನಶೀಲತೆಯ ಮೂರು ಹಂತಗಳನ್ನು ವಿವರಿಸುತ್ತಾರೆ, ‘ಪೂರಣ, ಮನನ, ಜ್ಞಾನಪ್ರಕಾಶ”. ಇದಕ್ಕೆ ಫ್ರೆಂಚ್ ವಿಜ್ಞಾನಿ ಹೆನ್ರಿ ಪೊಯಿನ್ಕೇರ್  ‘ಪರಿಶೀಲನೆ’ ಎಂದು ಸೇರಿಸಿ, ಹೊಸ ಆಲೋಚನೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಾಲ್ಕು ಹಂತಗಳನ್ನು ಪರಿಗಣಿಸುವುದಾದರೆ ವಿಜ್ಞಾನಿಗಳು ತಮ್ಮ ಸೃಜನಶೀಲತೆಯ ಸ್ವರೂಪ ಮತ್ತು ಪರಿಣಾಮಕಾರಿತ್ವದಲ್ಲಿ ಇನ್ನೂ ಭಿನ್ನರಾಗಿದ್ದಾರೆ ಎಂದು ತಿಳಿಯುತ್ತದೆ. ಆದ್ದರಿಂದ ಸೃಜನಶೀಲತೆಗೆ ಸಂಭಂಧಿಸಿದ ವಿಶಾಲವಾದ ಕೆಲವು ಅಂಶಗಳನ್ನು  ನಾವು  ಹೀಗೆ ಗುರುತಿಸಿದ್ದೇವೆ:  ದೃಷ್ಟಿಕೋನ, ಸೂತ್ರೀಕರಣ, ಪರಿಹಾರ ಮತ್ತು ಏಕೀಕೃತ ಚಿತ್ರಣ. ಮುಂದಿನ ಪುಟಗಳಲ್ಲಿ ನಾವು ಈ ಅಂಶಗಳನ್ನು ದೃಷ್ಟಾಂತಗಳ ಮೂಲಕ ಪರಿಶೀಲಿಸುತ್ತೇವೆ.

19ನೇ  ಶತಮಾನದಲ್ಲಿ ವಿದ್ಯುತ್ ಮತ್ತು ಕಾಂತೀಯತೆಯ ನಿಯಮಗಳನ್ನು ಅವುಗಳ ನಡುವೆ ಇರುವ ಸಾಮಾನ್ಯತೆಯನ್ನು ತಿಳಿಯದೆ ಬೇರೆ ಬೇರೆ ವಿಜ್ಞಾನಿಗಳು ಕಂಡುಹಿಡಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅತ್ಯಂತ ಪ್ರಸಿದ್ಧ ವಿಜ್ಞಾನಿ ಜೇಮ್ಸ್ ಮ್ಯಾಕ್ಸ್.ವೆಲ್.ರವರು ಈ ಎರಡೂ ವಿದ್ಯಮಾನಗಳ ಬೃಹತ್ ಮತ್ತು ಏಕೀಕೃತ ಚಿತ್ರವನ್ನು ಕಲ್ಪಿಸಿಕೊಂಡರು ಮತ್ತು ಎಲ್ಲಾ ನಿಯಮಗಳು ಅವರ ವಿದ್ಯುತ್ಕಾಂತೀಯ ಸಿದ್ಧಾಂತದಿಂದ ಪಡೆಯಬಹುದಾಗಿದೆ ಎಂದು ತೋರಿಸಿದರು. ಇದಲ್ಲದೆ, ಬೆಳಕಿನ ವಿಕಿರಣಗಳು ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳ ಕಂಪನದಿಂದ ಉಂಟಾದ  ವಿದ್ಯುತ್ಕಾಂತೀಯ ತರಂಗಗಳಾಗಿವೆ ಎಂದು ಅವರು ತೋರಿಸಿದರು. ಮ್ಯಾಕ್ಸ್ ವೆಲ್.ರವರು ಯಾವುದೇ ನಿಯಮಗಳನ್ನು ಕಂಡುಹಿಡಿಯದಿದ್ದರೂ, ವಿದ್ಯುತ್ ಮತ್ತು ಕಾಂತೀಯ ವಿಭಿನ್ನ ವಿದ್ಯಮಾನಗಳನ್ನು ವಿದ್ಯುತ್ಕಾಂತೀಯ ಏಕೀಕೃತ ಅಭಿವ್ಯಕ್ತಿಯಾಗಿ ಕಲ್ಪಿಸಿಕೊಂಡರು. ಇದು ವಿಜ್ಞಾನದಲ್ಲಿ ಸೃಜನಶೀಲತೆಯ ಅತ್ಯುನ್ನತ ರೂಪವಾಗಿದೆ. ಆಧುನಿಕ ಸಂವಹನ ಮತ್ತು ಇತರೆ ತಂತ್ರಜ್ಞಾನಗಳು ವಿದ್ಯುತ್ಕಾಂತೀಯ ಸಿದ್ಧಾಂತದಿಂದ ಹೊರಹೊಮ್ಮುತ್ತವೆ. 19ನೇ  ಶತಮಾನದ ಬ್ರಿಟಿಷ್ ನೈಸರ್ಗಿಕ ತಜ್ಞ ಚಾರ್ಲ್ಸ್ ಡಾರ್ವಿನ್, ಯಾವುದೇ ಅಸಾಧಾರಣ ಗುಣಗಳನ್ನು ಹೊಂದಿಲ್ಲದಿದ್ದರೂ ಪ್ರಾಣಿಗಳು ಮತ್ತು ಸಸ್ಯಗಳ ಆಧ್ಯಯನ ಮಾಡಿದರು, ಅವುಗಳ ಪಳೆಯುಳಿಕೆಗಳನ್ನು ಸಂಗ್ರಹಿಸಿ ಶೋಧಿಸಿದರು, ಹಲವಾರು ವರ್ಷಗಳ ವರೆಗೆ ಚಿಂತನಶೀಲರಾಗಿ ಉಳಿದರು ಮತ್ತು ಅಂತಿಮವಾಗಿ ಭೂಮಿಯ ಮೇಲಿನ ಅಸಂಖ್ಯಾತ ಜೀವರೂಪಗಳ ಆಧಾರವಾಗಿರುವ ಪ್ರಕಾಂಡ ಪಾಂಡಿತ್ಯದ ಸಿದ್ಧಾಂತವನ್ನು ಹೊರತಂದರು. ಆರಂಭಿಕವಾಗಿ ಸರಳ ರೀತಿಯ ಜೀವನದಿಂದ ಪ್ರಾಣಿ ಮತ್ತು ಸಸ್ಯಗಳು ಎರಡೂ ಜಟಿಲ ಸ್ವರೂಪಗಳಾಗಿ ವಿಕಸನಗೊಂಡಿದ್ದು,  ನೈಸರ್ಗಿಕ ಆಯ್ಕೆಯಿಂದ ಪ್ರೇರಿತವಾಗಿ ಬದಲಾವಣೆಗೆ ಹೊಂದಿಕೊಳ್ಳುವವು ಬದುಕುಳಿಯುತ್ತವೆ ಮತ್ತು ಇತರೆ ಅಳಿದುಹೋಗುತ್ತವೆ ಎಂದು ಅವರು ವಾದಿಸುತ್ತಾರೆ. ಸಹಸ್ರಮಾನಗಳಿಂದ ನಡೆಯುತ್ತಿರುವ ಪ್ರಕೃತಿಯ ಕೈಚಳಕದ ಚಾತುರ್ಯಗಳ ಸಾರಸ್ವ ಮತ್ತು ಡಾರ್ವಿನ್.ನ ಭವ್ಯ ದೃಷ್ಟಿಕೋನವನ್ನು ಅವರ ಶ್ರೇಷ್ಠ ಪುಸ್ತಕ ‘ದಿ ಆರಿಜಿನ್ ಆಫ್ ಸ್ಪೀಸೀಸ್’ ನಲ್ಲಿ ಕಾಣಬಹುದಾಗಿದೆ.

19ನೇ ಶತಮಾನದಲ್ಲಿ ಪರಮಾಣು ಸಿದ್ಧಾಂತಗಳ ಉದಯದೊಂದಿಗೆ ರಸಾಯನಶಾಸ್ತ್ರವು ವೈಜ್ಞಾನಿಕವಾಗುತ್ತಿದ್ದಂತೆ, ಆವರ್ತಕ ಧಾತುಗಳ ಕೋಷ್ಟಕವು ಅದರ ಪೂರ್ವವರ್ತಿಯಾಯಿತು. ರಷ್ಯಾದ ರಸಾಯನಶಾಸ್ತ್ರಜ್ಞ ದಿಮಿತ್ರಿ ಮೆಂಡಲೀವ್ ಅವರ  ಕನಸು  ಆವರ್ತಕ ಕೋಷ್ಟಕದ ರಚನೆಗೆ ಕಾರಣವಾಯಿತು. ಅವರು ಘಟನೆಯ ಬಗ್ಗೆ ನೆನಪಿಸಿಕೊಳ್ಳುತ್ತಾ, ‘ನಾನು ಕನಸಿನಲ್ಲಿ ಒಂದು ಕೋಸ್ಟಕವನ್ನು ನೋಡಿದೆ, ಅಲ್ಲಿ ಎಲ್ಲಾ ಧಾತುಗಳು ಸೂಕ್ತವಾದ ಜಾಗದಲ್ಲಿ ಬಿದ್ದವು. ಎದ್ದ ಮೇಲೆ ನಾನು ತಕ್ಷಣವೇ ಅದನ್ನು ಕಾಗದದ ಮೇಲೆ ಬರೆದೆ, ನಂತರ ಅಗತ್ಯವೆಂದು ತೋರಿದ ಒಂದು ಸ್ಥಳದಲ್ಲಿ ಮಾತ್ರ ತಿದ್ದುಪಡಿ ಮಾಡಿದೆ’. ಮೆಂಡೆಲೀವ್ ಕೋಷ್ಟಕದಲ್ಲಿ ರಾಸಾಯನಿಕ ಗುಣಲಕ್ಷಣಗಳ ಆಧಾರದ ಮೇಲೆ ತಿಳಿದಿರುವ ಎಲ್ಲಾ ಧಾತುಗಳನ್ನು ವಿಶಿಷ್ಟ ಸ್ಥಾನಗಳಿಗೆ ಹಾಕುತ್ತಿದ್ದಂತೆ, ಹೊಸ ಧಾತುಗಳಾದ ಜರ್ಮೇನಿಯಂ, ಗ್ಯಾಲಿಯಮ್ ಮತ್ತು ಸ್ಕ್ಯಾಂಡಿಯಂಗಳನ್ನು ಊಹಿಸಲು ಅವರಿಗೆ ಸಾಧ್ಯವಾಯಿತು. ಮೆಂಡಲೀವ್ ಕಥೆಯಲ್ಲಿ, ಮೇಲೆ ಉಲ್ಲೇಖಿಸಲಾದ ಎಲ್ಲಾ ನಾಲ್ಕು ಹಂತಗಳು ಸಂಭವಿಸಿವೆ: ಕಲ್ಪನೆಯಿಂದ ಅವನ ಮನಸ್ಸು ಪೂರಣಗೊಂಡ ನಂತರ,  ಮನನ ಉಂಟಾಗಿ,  ಕನಸಿನ ಮೂಲಕ ಜ್ಞಾನಪ್ರಕಾಶಕ್ಕೆ  ಎಡೆಯಾಗಿ ಅಂತಿಮವಾಗಿ ಆವರ್ತಕ ಕೋಷ್ಟಕವು ಹುಟ್ಟಿಗೆ ಕಾರಣವಾಯಿತು ಮತ್ತು ಪರಿಶೀಲಿಸಲ್ಪಟ್ಟಿತು. ಇಂದು ಆವರ್ತಕ ಕೋಷ್ಟಕವು ಆಧುನಿಕ ರಸಾಯನಶಾಸ್ತ್ರದ ತಳಹದಿಯಾಗಿದೆ. ಸೃಜನಶೀಲತೆಯು ಯಾವಾಗಲೂ ಅಂತ್ಯದ ಸಾಧನವಾಗಿರಬೇಕಾದ ಅಗತ್ಯವಿಲ್ಲ; ಅದು ಸ್ವತಃ ಒಂದು ಅಂತ್ಯವಾಗಿರಬಹುದು. ಇದನ್ನು 20ನೇ  ಶತಮಾನದ ಗಣಿತಜ್ಞರಾದ ಎ.ಎನ್.ವೈಟ್.ಹೆಡ್ ಮತ್ತು ಬರ್ಟ್ರಾಂಡ್ ರಸ್ಸೆಲ್ ಅವರ ಮಹಾನ್ ಕೃತಿಯಲ್ಲಿ ಕಾಣಬಹುದು. ಅವರು ಎಲ್ಲಾ ಗಣಿತದ ಹೇಳಿಕೆಗಳು ಸಾಂಕೇತಿಕ ತರ್ಕಕ್ಕೆ ಮಿತಿಯಾಗಬಹುದು ಎಂದು ತೋರಿಸಿಕೊಟ್ಟರು ಹಾಗೂ ಅವರ ಜಂಟಿ ಅಧ್ಯಯನವು ‘ಪ್ರಿನ್ಸಿಪಿಯಾ ಮ್ಯಾಥಮೆಟಿಕಾ’ ಎಂಬ ಮೂರು ಸಂಪುಟಗಳ ಪುಸ್ತಕಗಳ ಪ್ರಕಟಣೆಗೆ ಕಾರಣವಾಗಿದೆ. ನಂತರ ಕರ್ಟ್ ಗೋಡೆಲ್ ಎಂಬ ಇನ್ನೊಬ್ಬ ಪ್ರಸಿದ್ಧ ಗಣಿತಜ್ಞ ತನ್ನ ಪ್ರಸಿದ್ಧ ಆವಿಷ್ಕಾರ ‘ಅಪೂರ್ಣತೆಯ ಪ್ರಮೇಯ’ದ ಮೂಲಕ ಎಲ್ಲಾ ಗಣಿತವನ್ನು ಈ ರೀತಿಯ ಸಾಂಕೇತಿಕ ತರ್ಕದ ಸ್ಥಿರ ವ್ಯವಸ್ಥೆಗೆ ಮಿತಿಗೊಳಿಸುವುದನ್ನು ಸಾಬೀತು ಮಾಡಲು ಆಗದೆಂದು ತೋರಿಸಿದರು. ಏಕೆಂದರೆ, ವ್ಯವಸ್ಥೆಯು ಸಾಬೀತಾಗದ ಹೇಳಿಕೆಗಳನ್ನು ಒಳಗೊಂಡಿರುತ್ತದೆ. ಮೊದಲು ‘ಪ್ರಿನ್ಸಿಪಿಯಾ ಮ್ಯಾಥಮೆಟಿಕಾ’ವನ್ನು  ಅನೇಕರು ಒಂದು ಮಹಾನ್ ಕೃತಿಯೆಂದು ಶ್ಲಾಘಿಸಿದರೆ, ಗೋಡೆಲ್ ಪ್ರತಿಪಾದನೆಯ ನಂತರ, ಇದನ್ನು ಒಂದು ಅಗಾಧವಾದ ವೈಫಲ್ಯ ಎಂದೂ ವಿವರಿಸಲಾಯಿತು! ಆದರೆ, ವೈಟ್ ಹೆಡ್-ರಸ್ಸೆಲ್ ಜೋಡಿಯ ಅಧ್ಯಯನವು ಸಾಂಕೇತಿಕ ತರ್ಕ ಮತ್ತು ಗಣಿತದ ತತ್ವಶಾಸ್ತ್ರದಲ್ಲಿ ಪ್ರಗತಿಯನ್ನು ಪ್ರೇರೇಪಿಸಿತು ಎಂಬುದು ಶುದ್ಧವಾದಿಗಳ ವಾದ. ಹೇಗಾದರೂ ಇರಲಿ, ಅವರ ಸೃಜನಶೀಲ ಕೆಲಸವು ಮೌಲ್ಯಯುತವಾಗಿ ಕಲೆಯ ಶುದ್ಧ ರೂಪದಂತೆ ಉಳಿದಿದೆ.

ನಾವು ವಿಜ್ಞಾನದಿಂದ ಸ್ವಲ್ಪ ವಿಮುಖರಾಗಿ ಸೃಜನಶೀಲತೆಯ ಇತರ ಆಯಾಮಗಳನ್ನು ನೋಡುವುದಾದರೆ, ಸಾಹಿತ್ಯವು ಉತ್ತಮ ಉದಾಹರಣೆಗಳನ್ನು ನೀಡುತ್ತದೆ. ತಲೆಮಾರುಗಳಿಂದ ಅನೇಕ ವಿದ್ವಾಂಸರು ರಾಮಾಯಣ  ಮತ್ತು  ಮಹಾಭಾರತದ ಮಹಾಕೃತಿಗಳನ್ನು ಕಥೆಯ ಸಾರವನ್ನು ಹಾಗೇ ಉಳಿಸಿಕೊಂಡು ರೂಪ ಮತ್ತು ವಿಷಯವನ್ನು ಸೇರಿಸಿ ಪುನರ್ಲೇಖನಿಸಿದ್ದಾರೆ. ಇವೆಲ್ಲವೂ ಸೃಜನಶೀಲತೆಯ ಕೃತಿಗಳೇ ಆಗಿವೆ. ಸೃಜನಶೀಲತೆಯು ಎಲ್ಲಾ ಸಮಾಜಗಳಲ್ಲಿ ಹಾಸುಹೊಕ್ಕಾಗ ಹೊಸ ರಾಜಕೀಯ ಅಥವಾ ಧಾರ್ಮಿಕ ಚಿಂತನೆಯನ್ನು ಉತ್ತೇಜಿಸುವ ಅದರ ಪ್ರವೃತ್ತಿಯು ಕ್ರಾಂತಿಗಳು, ಸುಧಾರಣೆಗಳು ಮತ್ತು ಪದೇ ಪದೇ ಆಧಿಪತ್ಯಗಳಿಂದ ಪ್ರತಿರೋಧವನ್ನು ಎದುರಿಸುತ್ತದೆ. ಮಹಾತ್ಮಾ ಗಾಂಧೀಜಿಯವರ ಆಧ್ಯಾತ್ಮಿಕ ಪ್ರತಿಭೆಯು, ಅಹಿಂಸೆಯನ್ನು ಮೂಲ ತತ್ವವಾಗಿ ಹೊಂದಿದ್ದ ರಾಜಕೀಯ ಚಳುವಳಿಯನ್ನು ಮುನ್ನಡೆಸಿತು. ಗಾಂಧೀಜಿಯವರು ಸರಿಯಾದ ನಾಡಿಯನ್ನು ಮೀಟಿ ಲಕ್ಷಾಂತರ ಭಾರತೀಯರ ಹೃದಯದಲ್ಲಿ ಮನೆಮಾಡುತ್ತಿದ್ದಂತೆ, ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ತೊರೆಯಬೇಕಾಯಿತು. ಅವರನ್ನು ‘ಭಗವಾನ್ ಬುದ್ಧನ ನಂತರದ ಅಹಿಂಸೆಯ ಪ್ರವಾದಿ’ ಎಂದು ವರ್ಣಿಸಲಾಗಿದ್ದರೆ, ಜಗತ್ತಿನ ರಾಜಕೀಯ ಇತಿಹಾಸದಲ್ಲಿ, ಗಾಂಧೀಜಿ ಒಬ್ಬ ಮಹಾನ್ ಮುತ್ಸದ್ದಿ ಮತ್ತು ಮೇಧಾವಿ ಹಾಗೂ ನೈತಿಕ ತತ್ವಶಾಸ್ತ್ರದಲ್ಲಿ ಅವರು ಅನುಕರಣೀಯರಾಗಿದ್ದಾರೆ.

‘ಆವಶ್ಯಕತೆಯೇ ಆವಿಷ್ಕಾರದ ಮೂಲ’ ಎಂಬ ಹಳೆಯ ಗಾದೆಯು ಸೃಜನಶೀಲತೆಗೆ ಒತ್ತು ನೀಡುತ್ತದೆ. ಅನುಕ್ರಮ ಕೈಗಾರಿಕಾ ಕ್ರಾಂತಿಗಳು ಇದಕ್ಕೆ ಸಾಕ್ಷಿಯಾಗಿವೆ. ಪಾಶ್ಚಿಮಾತ್ಯ ಸಮಾಜಗಳು ಸಮೃದ್ಧವಾಗಿವೆ. ಏಕೆಂದರೆ, ಅವು ಹೆಚ್ಚು ಸೃಜನಶೀಲವಾಗಿದ್ದು, ಹೊಸ ತಂತ್ರಜ್ಞಾನಗಳನ್ನು ತಯಾರಿಸಲು ಮತ್ತು ಅವುಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟಿವೆ. ಎರಡನೆಯದಾಗಿ, ಅವರ ಉದಾರ ರಾಜಕೀಯ ವ್ಯವಸ್ಥೆಯು ಎಲ್ಲಾ ಮಾನವ ಪ್ರಯತ್ನಿತ ಕ್ಷೇತ್ರಗಳಲ್ಲಿ ಸೃಜನಶೀಲ ಅನ್ವೇಷಣೆಗಳಿಗೆ ಅನುಕೂಲಕರವಾಗಿದೆ. ಆದರೆ, ಎಲ್ಲೆಲ್ಲಿ ಸರ್ವಾಧಿಕಾರದ ಆಡಳಿತದಿಂದ ಸೃಜನಶೀಲತೆಯು ದಮನಗೊಂಡಿರುವುದೋ ಆ ಸಮಾಜಗಳಲ್ಲಿ ಜ್ಞಾನದ ಪ್ರಗತಿಯು ನಿಶ್ಚೇಷ್ಟಿತಗೊಂಡಿದ್ದು, ಇದು ಇತಿಹಾಸಗಳಲ್ಲಿ ಸ್ಪಷ್ಟವಾಗಿದೆ. 17ನೇ ಶತಮಾನದ ಅತ್ಯಂತ ಶ್ರೇಷ್ಠ ಇಟಾಲಿಯನ್ ವಿಜ್ಞಾನಿ ಗೆಲಿಲಿಯೋ ರೋಮನ್ ಕ್ಯಾಥೊಲಿಕ್ ಚರ್ಚಿನ ಪಾರುಪತ್ಯದೆದುರು ಧೈರ್ಯಮಾಡಿ, ಅವಲೋಕನಗಳು ಮತ್ತು ಪರಿಕಲ್ಪನೆಗಳನ್ನು ಪರೀಕ್ಷಿಸಲು ವೈಜ್ಞಾನಿಕ ವಿಧಾನವನ್ನು ರೂಪಿಸಿದರು. ಅವರು ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನದಲ್ಲಿ ಅನೇಕ ಮೂಲಭೂತ ಆವಿಷ್ಕಾರಗಳನ್ನು ಮಾಡಿದರು ಮತ್ತು ಅಂತಿಮವಾಗಿ ‘ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆ’ ಎಂದು ಪ್ರತಿಪಾದಿಸಿದರು. ಇದು ಅರಿಸ್ಟಾಟೆಲ್ ತತ್ವದ ಹಿನ್ನಲೆಯ ವಿಶ್ವ ದೃಷ್ಟಿಕೋನವನ್ನು ಪ್ರಶ್ನಿಸಿತು. ಅರಿಸ್ಟಾಟೆಲ್ ತತ್ವಕ್ಕೆ ಪರವಾಗಿದ್ದ ಚರ್ಚಿನ ಪೋಪ್ ಗೆಲಿಲಿಯೋನ ದಿಟ್ಟ ಪ್ರತಿಪಾದನೆಗಾಗಿ ಅವರನ್ನು ಸೆರೆಮನೆಗೆ ತಳ್ಳಿದರು ಹಾಗೂ ಅಂತಹ ಸಮರ್ಥನೆಗಳಲ್ಲಿ ಪಾಲ್ಗೊಳ್ಳದಂತೆ ಇತರರಿಗೆ ಎಚ್ಚರಿಕೆ ನೀಡಿದರು. ಈ ವಿಷಯದಲ್ಲಿ ಚರ್ಚ್ ಯಶಸ್ವಿಯಾಯಿತು. ಇದರಿಂದಾಗಿ ದೀರ್ಘಕಾಲದವರೆಗೆ ಇಟಲಿಯು ಗೆಲಿಲಿಯೋ ನಂತಹ ಶ್ರೇಷ್ಠ ವ್ಯಕ್ತಿಯನ್ನು ನೋಡಲಿಲ್ಲ.

ಒಂದು ಸೃಜನಶೀಲ ಪರಿಕಲ್ಪನೆಯು ಪ್ರಬಲ ಪರಿಣಾಮ ಹೊಂದಿರುವ ಮತ್ತೊಂದನ್ನು ಹುಟ್ಟು ಹಾಕಬಹುದು. 1930ರ ದಶಕದ ಆರಂಭದಲ್ಲಿ ಎಲೆಕ್ಟ್ರಾನ್ ಸೂಕ್ಷ್ಮದರ್ಶಕವನ್ನು ಕಂಡುಹಿಡಿಯುವ ಸಮಯದಲ್ಲಿ ಜರ್ಮನ್.ನ ಯುವ ಎಂಜಿನಿಯರ್ ಅರ್ನ್ಸ್ಟ್ ರುಸ್ಕಾರವರು ಬೆಳಕಿನ ಅಲೆಗಳಂತೆಯೇ ಎಲೆಕ್ಟ್ರಾನ್ ಗಳು ಚಲನೆಯನ್ನು ಹೊಂದಿವೆ ಎಂದು ತಿಳಿದರು. ಈ ಪರಿಕಲ್ಪನೆಯು ಫ್ರೆಂಚ್ ಭೌತಶಾಸ್ತ್ರಜ್ಞ ಲೂಯಿಸ್ ಡಿ ಬ್ರೊಗ್ಲಿ ಅವರಿಂದ ಬಂದಿರುವುದಾಗಿದ್ದು, ಅವರು, ಎಲೆಕ್ಟ್ರಾನ್ ಗಳು ಸಹ ತರಂಗಗಳಂತೆ ವರ್ತಿಸುತ್ತವೆ, ಅವುಗಳ ವೇಗಕ್ಕನುಗುಣವಾಗಿ ವಿಲೋಮವಾಗಿ ತರಂಗಾಂತರ (ಆವರ್ತನ ದೂರ)ವು ಬದಲಾಗುತ್ತದೆ ಎಂದಿದ್ದರು. ಎಲೆಕ್ಟ್ರಾನ್ ಗಳ ವೇಗವನ್ನು ಕಡಿಮೆ ಮಾಡುವ ಮೂಲಕ, ಬೆಳಕಿನ ತರಂಗಗಳಿಗಿಂತ ಐದು ಶ್ರೇಣಿಗಳ ಕಡಿಮೆ ಪ್ರಮಾಣದ ತರಂಗಾಂತರಗಳನ್ನು ರುಸ್ಕಾ ಸಾಧಿಸಿದರು. ಇದು ಸಾಂಪ್ರದಾಯಿಕ ಆಪ್ಟಿಕಲ್ ಸೂಕ್ಷ್ಮದರ್ಶಕವನ್ನು ಮೀರಿಸುವ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಆವಿಷ್ಕಾರಕ್ಕೆ ಕಾರಣವಾಯಿತು. ನಲವತ್ತು ವರ್ಷಗಳ ನಂತರ ರುಸ್ಕಾ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು! ಕುತೂಹಲಕಾರಿ ಸಂಗತಿಯೆಂದರೆ, ಲೂಯಿಸ್ ಡಿ ಬ್ರೊಗ್ಲಿಯ ಪರಿಕಲ್ಪನೆಯೂ ಸಹ ಬೆಳಕಿನ ತರಂಗವು ಚಲಿಸುವ ಕಣಗಳಾಗಿ ವರ್ತಿಸುತ್ತವೆ ಎಂಬ ಐನ್ ಸ್ಟೈನ್ ನ ಪರಿಕಲ್ಪನೆಯ ಮುಂದುವರಿದ ಭಾಗವಾಗಿದೆ. ಬೆಳಕಿನ ತರಂಗವು ಕಣಗಳಂತೆ ವರ್ತಿಸಿದರೆ, ಎಲೆಕ್ಟ್ರಾನ್.ಗಳು ಅಲೆಯಂತೆ ವರ್ತಿಸುತ್ತವೆ ಎಂಬುದು ಡಿ ಬ್ರೊಗ್ಲಿರವರ ವಾದ. ಎರಡೂ ಪರಿಕಲ್ಪನೆಗಳು ಎಷ್ಟು ಮೂಲಭೂತವಾಗಿವೆಯೆಂದರೆ ಅವು ವಸ್ತು ಮತ್ತು ಶಕ್ತಿಯ ಬಗ್ಗೆ ನಮ್ಮ ತಿಳುವಳಿಕೆಗೆ ಅವಿಭಾಜ್ಯವಾಗಿವೆ. ಇತರೆ ಪರಿಕಲ್ಪನೆಗಳೊಂದಿಗೆ, ಈ ಎರಡು ಪರಿಕಲ್ಪನೆಗಳು 20 ನೇ ಶತಮಾನದ ಭೌತಶಾಸ್ತ್ರವನ್ನು ಮುನ್ನೆಡೆಸಿದವು. ಐನ್ ಸ್ಟೈನ್ ಮತ್ತು ಲೂಯಿಸ್ ಡಿ ಬ್ರೊಗ್ಲಿ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು.

ಮಾನವನ ಇತಿಹಾಸದುದುದ್ದಕ್ಕೂ, ರಾಜರು ಮತ್ತು ರಾಣಿಯರು ಸೃಜನಶೀಲರಿಗೆ ಬೆಂಬಲಿಸಿ ಆಸ್ಥಾನ ಗೌರವಗಳು ಮತ್ತು ಅರ್ಹತೆಗಳನ್ನು ನೀಡಿದರು. ಇದು ಇಂದಿನ ಅಕಾಡೆಮಿಗಳು ಮತ್ತು ಸಂಸ್ಥೆಗಳಿಗೆ ಸಮಾನವಾಗಿದೆ. ಇದರ ಇನ್ನೊಂದು ಮುಖವೂ ಇದೆ. ಅಂದರೆ, ಸಂಸ್ಥಾನದ ವಿರುದ್ಧ ಮಾಡಲಾದ ಶೃಜನಶೀಲ ಕೆಲಸಗಳು, ವಿಶೇಷವಾಗಿ ಕಲೆಗಳು, ಧರ್ಮಶಾಸ್ತ್ರ, ರಾಜಕೀಯ ಸಿದ್ಧಾಂತಗಳು, ಆರ್ಥಿಕ ನೀತಿಗಳು ತಿರಸ್ಕಾರಕ್ಕೊಳಗಾದವು ಅಥವಾ ದುಷ್ಟತಮವಾದವು ಮತ್ತು ಅವುಗಳನ್ನು ನಿಗ್ರಹಿಸಲಾಯಿತು. ಪ್ರೊ. ವೆಂಡಿ ಡೊನಿಗರ್.ರವರ ‘ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಪುಸ್ತಕವನ್ನು ಕೆಲವು ಅಪ್ರಧಾನ ಗುಂಪಿನ್ನು ಮೆಚ್ಚಿಸುವುದಕ್ಕಾಗಿ ನಿಷೇಧಿಸಲಾಯಿತು. ಆಧುನಿಕ ಜಿತ್ರಕಲೆಯು ಎಷ್ಟೇ ಸೃಜನಶೀಲವಾಗಿದ್ದರೂ, ಅತ್ಯಂತ ಗೌರವಾನ್ವಿತ ಪ್ರಾಚೀನ ಕೃತಿಗಳಿಗೆ ಅನುಗುಣವಾದ ಚಿತ್ರಗಳನ್ನು ಹೊಂದಿದ್ದರೂ ಅದನ್ನು ತಿರಸ್ಕರಿಸಲಾಗುತ್ತದೆ.

ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ವಿಕಾಸದಲ್ಲಿ, ಶತಮಾನಗಳಿಂದ ಸ್ಥಾನಮಾನ, ಜಾತಿ ಮತ್ತು ಲಿಂಗವನ್ನಾಧಾರಿಸಿದ ತಾರತಮ್ಯದ ಸಾಮಾಜಿಕ ವ್ಯವಸ್ಥೆಯನ್ನು ನಮಗೆ ಹಸ್ತಾಂತರಿಸಲಾಯಿತು. ಆ ದಿನಗಳಲ್ಲಿ, ಶತಮಾನಗಳಷ್ಟು ಹಳೆಯದಾದ ಈ ತಾರತಮ್ಯವನ್ನು ತೆಗೆದುಹಾಕುವುದು ಸುಲಭದ ಕೆಲಸವಾಗಿರಲಿಲ್ಲ, ಏಕೆಂದರೆ, ಇದನ್ನು ಬದಲಾಯಿಸಲಾಗದು ಮತ್ತು ಸಾಮಾಜಿಕ ರಚನೆಯಲ್ಲಿ ಇದು ಸಾಮಾನ್ಯ ಎಂದು ಅಂಗೀಕರಿಸಲ್ಪಟ್ಟಿತ್ತು. ಆದುದರಿಂದ, ಹೀಗೆ ಜನರ ಆಚರಣೆ ಮತ್ತು ಮನಸ್ಥಿತಿ ಎರಡರಲ್ಲೂ ಆಳವಾಗಿ ಬೇರೂರಿರುವ ಪ್ರಚಲಿತ ನಂಬಿಕೆಗಳ ವ್ಯವಸ್ಥೆಗಿಂತ ಆಮೂಲಾಗ್ರವಾಗಿ ಭಿನ್ನವಾದ ಸೃಜನಶೀಲ ವಿಧಾನದ ಅಗತ್ಯವಿತ್ತು. 12ನೇ  ಶತಮಾನದಲ್ಲಿ ಕರ್ನಾಟಕದ ಉತ್ತರ ತುದಿಯ ಬಸವನಬಾಗೇವಾಡಿ ಮೂಲದ ಕವಿ-ತತ್ವಜ್ಞಾನಿ-ಮುತ್ಸದ್ದಿ ಬಸವೇಶ್ವರರು ಸಾಂಪ್ರದಾಯಿಕ ವೈದಿಕ ವ್ಯವಸ್ಥೆಯಿಂದ ಬೇರ್ಪಟ್ಟ ಹೊಸ ಧಾರ್ಮಿಕ ತತ್ವವನ್ನು ಪ್ರತಿಪಾದಿಸಿದರು. ಅವರು ಸಾಂಸ್ಥಿಕ ಧಾರ್ಮಿಕ ಆಚರಣೆಗಳನ್ನು ವೈಯಕ್ತಿಕ ಕೇಂದ್ರಿತ ಆಚರಣೆಗಳೊಂದಿಗೆ ಬದಲಾಯಿಸಿದರು. ಇದರಲ್ಲಿ ಮಾನವ ದೇಹವು ದೇವಾಲಯಕ್ಕೆ ಸಮಾನವಾಗಿದ್ದು, ಇಷ್ಟಲಿಂಗವನ್ನು ದೈವವಾಗಿ ಧರಿಸುವುದು ಮತ್ತು ಪೂಜಿಸುವುದನ್ನು ಒಳಗೊಂಡಿದ್ದು, ಎಲ್ಲಾ ಪುರುಷರು ಮತ್ತು ಮಹಿಳೆಯರು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಇದನ್ನು ಆಚರಣೆ ಮಾಡಬಹುದಾಗಿತ್ತು.. ಬಸವೇಶ್ವರರು ಆಧ್ಯಾತ್ಮಿಕ ಅನುಭವದ ಸಭಾಮಂದಿರವಾದ ‘ಅನುಭವ ಮಂಟಪ’ವನ್ನು ರಚಿಸಿದರು. ಇದು ಮಾನವ ಇತಿಹಾಸದಲ್ಲಿ ವಿಶಿಷ್ಟವಾದುದು ಎಂದು ಹೇಳಬಹುದಾಗಿದೆ. ಅಲ್ಲಿ ಅವರು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರನ್ನು ಅವರ ಜೀವನ, ವೃತ್ತಿ ಮತ್ತು ಒಳ ಅರಿವಿನ ಅನುಭವದಿಂದ ಆಯ್ದ ಆಧ್ಯಾತ್ಮಿಕತೆಯ ಬಗ್ಗೆ ಚರ್ಚಿಸಲು ಒಟ್ಟುಗೂಡಿಸುತ್ತಿದ್ದರು. ಈ ಚಳುವಳಿಯು ಮನುಷ್ಯನ ಆಧ್ಯಾತ್ಮಿಕ ಆಯಾಮಗಳು, ದೇವರು ಮತ್ತು ಪ್ರಕೃತಿಯೊಂದಿಗಿನ ಅವನ ಸಂಬಂಧದ ಆಳವಾದ ತಿಳುವಳಿಕೆಯಿಂದ ಮಂಥನಗೊಂಡ, ಅದರ ತತ್ವಗಳಿಂದ ಸಮೃದ್ಧವಾದ, ವಚನ ಸಾಹಿತ್ಯವನ್ನು ಅನುಭವ ಮಂಟಪದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ರಚಿಸಲು ಪ್ರೇರೇಪಿಸಿತು. ಇವೆಲ್ಲವು ಲಿಂಗಾಯತ ಧರ್ಮದ ಜನನದಲ್ಲಿ ಕೊನೆಗೊಂಡವು. ಅವರು ವೃತ್ತಿಯನ್ನು ಆಧ್ಯಾತ್ಮಿಕ ಪರಿಪೂರ್ಣತೆಯ ಪ್ರಾಪ್ತಿಯೊಂದಿಗೆ ಸಮೀಕರಿಸಿದರು. ಅದನ್ನು ಅವರು ತಮ್ಮ ಪ್ರಸಿದ್ಧ ಪಂಕ್ತಿ ‘ಕಾಯಕವೇ ಕೈಲಾಸ’ ಎಂಬುದರಲ್ಲಿ ವ್ಯಕ್ತಪಡಿಸಿದರು. ಬಸವೇಶ್ವರರ ಈ ಉದಾರ ಸೃಜನಶೀಲ ಕಾರ್ಯವು ಸಾಮಾಜಿಕ ಅಂತಃಸಾಕ್ಷಿಯನ್ನು ಪ್ರಚೋದಿಸಿ, ‘ಸಾಮಾಜಿಕ ಕ್ರಾಂತಿ’ಗೆ ಕಾರಣವಾಯಿತು ಮತ್ತು ಅವರನ್ನು ಸಾಮಾಜಿಕ ಸುಧಾರಣೆಯ ‘ಹರಿಕಾರನನ್ನಾಗಿ ಮಾಡಿತು. ಆದರೆ, ಅವರು ಪ್ರಭುತ್ವದ ಕೈಯಲ್ಲಿ ಧಾರ್ಮಿಕ ಹಿಂಸೆಯನ್ನು ಅನುಭವಿಸಿದರು. ಏನೇ ಇರಲಿ, ಅಂದಿನಿಂದ ಅನೇಕ ಪುರುಷರು ಮತ್ತು ಮಹಿಳೆಯರು ಅವರ ಆಲೋಚನೆಯಿಂದ ಪ್ರೇರಿತರಾಗಿದ್ದಾರೆ. ಒಂದು ರಾಷ್ಟ್ರವಾಗಿ ನಾವು ಇನ್ನೂ ಅಂತಗಾತ ಸಮಾಜಕ್ಕಾಗಿ ಶ್ರಮಿಸುತ್ತಿದ್ದೇವೆ.

ಸೃಜನಶೀಲತೆಯನ್ನು ಕಲಿಸಬಹುದೇ? ಅಥವಾ ಇದು ಸಹಜ ಲಕ್ಷಣವೇ ಅಥವಾ ಪರಿಸರದಿಂದ ಪ್ರಭಾವಿತವಾಗಿದೆಯೇ? ಎಂಬ ಅದೇ ಪ್ರಶ್ನೆಗಳನ್ನು ಮತ್ತೆ ನಾವು ಕೇಳುತ್ತೇವೆ. ಈ ಪ್ರಶ್ನೆಗಳನ್ನು ಚರ್ಚಿಸಬಹುದಾಗಿದ್ದರೂ, ಹಾಲಿ ಇರುವ ಶಿಕ್ಷಣ ಪದ್ದತಿಯ ಪರಿಸ್ಥತಿಯಲ್ಲಿ ಈ ಪ್ರಶ್ನೆಗಳನ್ನಿಟ್ಟರೆ, ಜ್ಞಾನದ ಸ್ವಾಧೀನಕ್ಕೆ ಅನಗತ್ಯ ಒತ್ತು ನೀಡುವ ವಿನ್ಯಾಸವನ್ನು ಹೊಂದಿರುವ ಔಪಚಾರಿಕ ವ್ಯವಸ್ಥೆಯನ್ನು ನಾವು ನೋಡಬಹುದಾಗಿದ್ದು, ಇದು ಮಕ್ಕಳಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸಲು ಸಾಧ್ಯವಿಲ್ಲ ಎನಿಸುತ್ತದೆ. ಔಪಚಾರಿಕ ವ್ಯವಸ್ಥೆಯ ಹೊರಗಿನ ಸೃಜನಶೀಲತೆಯನ್ನೂ ಸಹ ಗುರುತಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು. ಗಣಿತದ ಪ್ರತಿಭೆ ಶ್ರೀನಿವಾಸ ರಾಮಾನುಜನ್ ಒಬ್ಬ ವಿದ್ಯಾರ್ಥಿಯಾಗಿ ಗಣಿತವನ್ನು ಹೊರತುಪಡಿಸಿ ಇತರ ವಿಷಯಗಳನ್ನು ಅಧ್ಯಯನ ಮಾಡಲು ಯಾವುದೇ ಆಸಕ್ತಿ ಹೊಂದಿರಲಿಲ್ಲ. ಆದ್ದರಿಂದ ಅವರು ಪದವಿ ಗಳಿಸಲು ವಿಫಲರಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಖ್ಯಾತ ಗಣಿತಜ್ಞ ಜಿ.ಎಚ್.ಹಾರ್ಡಿ.ರವರು ರಾಮಾನುಜನ್ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಿದರು. ಇದಲ್ಲದೆ, ಅವರು ವ್ಯವಸ್ಥಿತ ಅಡೆತಡೆಗಳನ್ನು ಬದಿಗೊತ್ತಿ ರಾಮಾನುಜನ್ ರವರನ್ನು ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾಗುವಂತೆ ಮಾಡಿದರು, ಇದು 31 ನೇ ವಯಸ್ಸಿನಲ್ಲಿ ರಾಮಾನುಜನ್ ರವರಿಗೆ ದಕ್ಕಿದ ಉತ್ತಮ ವೃತ್ತಿಪರ ಗೌರವವಾಗಿದೆ. ಈ ಉದಾಹರಣೆಯನ್ನು ಎಲ್ಲಾ ಸನ್ನಿವೇಶಗಳಿಗೆ ಅನ್ವಯಿಸಲು ಸಾಧ್ಯವಿಲ್ಲವಾದರೂ ಇದರಲ್ಲಿ ಕಲಿಯುವ ಪಾಠವಿದೆ. ಸೃಜನಶೀಲತೆಯನ್ನು ಪೋಷಿಸಬೇಕಾದರೆ ಅದು ಮುಕ್ತ ಮತ್ತು ಅನೌಪಚಾರಿಕವಾಗಿರಬೇಕು. ಏಕೆಂದರೆ, ಔಪಚಾರಿಕ ಶಿಕ್ಷಣ ವ್ಯವಸ್ಥೆಗಳು ಸಮಾಜದ ಸಮಾನತೆಯ ಅಗತ್ಯಗಳನ್ನು ಪೂರೈಸುತ್ತವೆಯೇ ಹೊರತು ಅದು ಪರಿಣಾಮಕಾರಿಯಾಗಿ ಸೃಜನಶೀಲತೆಯನ್ನು ಪೋಷಿಸಲು ಸಾಧ್ಯವಿಲ್ಲ. ಮಾನವ ಸಂಸ್ಕೃತಿಯ ಮೌಲ್ಯವಾಗಿ ಅನಿರ್ಬಂಧಿತ ಸೃಜನಶೀಲತೆಯನ್ನು ಗೌರವಿಸಬೇಕು. ಏಕೆಂದರೆ, ಅದು ಲೌಕಿಕವಾಗಿರುವಂತೆ ಅಂತರ್ಗತವಾಗಿ ಆಧ್ಯಾತ್ಮಿಕವಾಗಿದ್ದು, ನಾಗರಿಕತೆಯ ಪ್ರಗತಿಗಾಗಿ ಅದನ್ನು ಪೋಷಿಸಬೇಕು.

ಈ ಲೇಖನದಲ್ಲಿ ನಾವು ‘ಸೃಜನಶೀಲತೆ’ಯು ಜ್ಞಾನವನ್ನು ಹೇಗೆ ಮುನ್ನಡೆಸುತ್ತದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಉಗಮಕ್ಕೆ ಕಾರಣವಾಗುತ್ತದೆ ಮತ್ತು ಮಾನವ ಸಂಸ್ಕೃತಿಯನ್ನು ಹೇಗೆ ವೃದ್ಧಿಸುತ್ತದೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿದ್ದೇವೆ. ಆದರೆ, ಚರ್ಚಿಸಲು ಅನೇಕ ಪ್ರಶ್ನೆಗಳಿದ್ದು, ‘ಪ್ರತಿಭಾನ್ವರಂತೆ ಹೇಗೆ ಯೋಚಿಸುವುದು’, ಇತಿಹಾಸ, ಸಾಂಸ್ಕೃತಿಕ ಪರಿಸರ, ಜ್ಞಾನ ಕ್ಷೇತ್ರದ ಪ್ರಭಾವ ಮತ್ತು ಅನುವಂಶಿಯ-ಬಳುವಳಿ ನಿದರ್ಶನಗಳ ಹಿನ್ನಲೆಯಲ್ಲಿ ಸೃಜನಶೀಲತೆಯು ಹೇಗೆ ಪ್ರಕಟಗೊಳ್ಳುತ್ತದೆ ಎಂಬುದರ ಬಗ್ಗೆ ಮುಂಬರುವ ಲೇಖನದಲ್ಲಿ ನಾವು ಚರ್ಚಿಸಲಿದ್ದೇವೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content