ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರು

ಪ್ರೊ. ಎಸ್. ಅಯ್ಯಪ್ಪನ್

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕಳೆದ ಸುಮಾರು 14 ವರ್ಷಗಳಿಂದ ವಿಜ್ಞಾನ ಶಿಕ್ಷಣವನ್ನು ಸದೃಢಗೊಳಿಸುವ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದೆ. ಸದರಿ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನಾಮನಿರ್ದೇಶಿಸಿ, ಕರ್ನಾಟಕ ಸರ್ಕಾರವು 21ನೇ ಏಪ್ರಿಲ್ 2020 ರಂದು ಪುನರ್ ರಚಿಸಿದೆ. ಸುಮಾರು 12 ವರ್ಷಗಳಿಗೂ ಹೆಚ್ಚು ಕಾಲ ಅಕಾಡೆಮಿಯ ಸಂಸ್ಥಾಪನಾ ಅಧ್ಯಕ್ಷರೂ ಹಾಗೂ ಭಾರತ ಸರ್ಕಾರದ ಇಸ್ರೋ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊಫೆಸರ್ ಯು. ಆರ್. ರಾವ್ ಮತ್ತು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಇಸ್ರೋ ಸಂಸ್ಥೆಯ ಯು. ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದ ದಿವಂಗತ ಡಾ. ಎಸ್. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಳೆದು ಬಂದ ಈ ಅಕಾಡೆಮಿಯ ಒಡನಾಟದಲ್ಲಿ ಕೆಲಸ ಮಾಡಲು ಸುವರ್ಣಾವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ, ಈ ವೇದಿಕೆಯ ಮೂಲಕ ರಾಜ್ಯದ ಸೇವೆ ಮಾಡಲು ಒಂದು ಸದಾವಕಾಶವನ್ನು ಒದಗಿಸಿಕೊಟ್ಟಿರುವ ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ & ತಂತ್ರಜ್ಞಾನ ವಿಭಾಗದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ನವರಚಿತ ಆಡಳಿತ ಮಂಡಳಿಯ ವಿಶಿಷ್ಟ ಸದಸ್ಯರೆಲ್ಲರ ಪರವಾಗಿ ನಮ್ಮ ಕೃತಜ್ಞತೆಗಳನ್ನು ಸಲ್ಲಿಸ ಬಯಸುತ್ತೇನೆ.

ಇಡೀ ಮಾನವಕುಲ ಎದುರಿಸುತ್ತಿರುವ ಅಭೂತ ಪೂರ್ವ ಸವಾಲುಗಳು ಹಾಗೆಯೇ ಜೊತೆ ಜೊತೆಗೆ ಮೂಡಿ ಬರುತ್ತಿರುವ ಸಮಾಧಾನಗಳ ಮಧ್ಯೆ, ಜಗತ್ತಿನ ಒಂದು ಕುತೂಹಲಕಾರಿ ಘಟ್ಟದಲ್ಲಿ ನಾವೆಲ್ಲರೂ ಪಯಣಿಸುತ್ತಿದ್ದೇವೆ. ಪ್ರಕೃತಿಯು ತನ್ನ ಬಸಿರಿನಲ್ಲಿಟ್ಟುಕೊಂಡಿರುವ ಅವಿರತ ನಿಗೂಢ ಸಂಗತಿಗಳು ಹಾಗೂ ಕಾಲಕಾಲಕ್ಕೆ ಹೊರಹಾಕುವ ವಿಸ್ಮಯಗಳನ್ನು ಅರ್ಥೈಸಿಕೊಳ್ಳಲು, ವಿಜ್ಞಾನ ನಿರಂತರವಾಗಿ ನಮ್ಮನ್ನು ಸಿದ್ಧಗೊಳಿಸುತ್ತಾ ಬಂದಿದೆ. ಪೃಥ್ವಿಯಲ್ಲಿರುವ ಸುಮಾರು 780 ಕೋಟಿ ಜನರ ಆಚಾರ-ವಿಚಾರ ಧಾರೆಗಳು, ನೈಸರ್ಗಿಕ ಹಾಗೂ ಮಾನವ ನಿರ್ಮಿತ ಸಮಸ್ಯೆಗಳನ್ನು, ನಮ್ಮ ಸೀಮಿತ ಸಂಸಾಧನಗಳೊಂದಿಗೆ ಕೂಡ, ಸುಸ್ಥಿರತೆಯ ಹಾದಿಯಲ್ಲಿ ನಡೆಸುವಲ್ಲಿ ಯಶಸ್ವಿಯಾಗಿವೆ.

ವಿಜ್ಞಾನ ವೈಶ್ವಿಕ, ಆದರೆ, ತಂತ್ರಜ್ಞಾನ ಪ್ರಾಸ್ತಾವಿಕ ಮತ್ತು ಭೌಗೋಳಿಕ. ಇವುಗಳೊಂದಿಗೆ ಆವಿಷ್ಕಾರವೂ ಸೇರಿಕೊಂಡು, ನಮ್ಮ ಕ್ಷಿಪ್ರ, ಸುಸ್ಥಿರ ಮತ್ತು ಅಂತರ್ಗತಮುಖಿ ಬೆಳವಣಿಗೆಯ ಅಭಿವೃದ್ಧಿಯ ಧ್ಯೇಯ ಸಾಧನೆಗೆ ತ್ರಿಚಕ್ರ ಪೂರಕ ಸಾಧನಗಳಾಗಿವೆ. ಜನಸಾಮಾನ್ಯರಲ್ಲಿ ವಿಜ್ಞಾನವೆಂದರೆ ಅಧ್ಯಯನ ಪ್ರಕ್ರಿಯೆಯ ಒಂದು ವಿಷಯ ಮತ್ತು ನಮಗೆ ನೇರ ಸಂಬಂಧವಿಲ್ಲದ್ದು ಎಂಬ ತಪ್ಪು ಕಲ್ಪನೆ ಪ್ರಚಲಿತವಾಗಿದೆ. ಆದರೆ ನಮ್ಮ ಪ್ರತಿ ದಿನದ ಜೀವನದಲ್ಲಿ ಮೂಡಿಬರುವ ಪ್ರಶ್ನೆಗಳು, ಕುತೂಹಲಗಳು, ವಿಶ್ಲೇಷಣೆಗಳೇ ವಿಜ್ಞಾನದ ತಳಹದಿಯೆಂಬುದು ಸರ್ವವಿದಿತ. ವಿಜ್ಞಾನದ ಚೇತನವೇ ಸಮಾಜ ಕಲ್ಯಾಣ. ಇದನ್ನು ಗ್ರಹಿಸಲು ಮತ್ತು ಮೆಚ್ಚಲು, ವಿಜ್ಞಾನ ಸಂವಹನ ಬಹಳ ಮುಖ್ಯ. ‘ವಿಜ್ಞಾನ-ಸಾಮಾನ್ಯ ಜ್ಞಾನ-ಕೌಶಲ್ಯಗಳ ಸಮ್ಮಿಲನ, ಈ ಪ್ರಕ್ರಿಯೆಯ ಪ್ರಧಾನ ಅಂಶಗಳು. ಈ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಪ್ರತಿಭಾ ಸಾಗರ ಮತ್ತು ಜನಸಂಖ್ಯಾ ಲಾಭಾಂಶಗಳನ್ನು ಸದ್ವಿನಿಯೋಗಿಸಲು ಇದೊಂದು ಸುವರ್ಣಾವಕಾಶ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಹಲವು ವರ್ಷಗಳಿಂದ, ಮೂಲಭೂತ ವಿಜ್ಞಾನ ಮತ್ತು ಜ್ಞಾನ ಪ್ರಸಾರ, ವೈಜ್ಞಾನಿಕ ವಿಚಾರ ಪ್ರಸಾರ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆ, ಆವಿಷ್ಕಾರ ಮತ್ತು ಸಂವಹನ ಮತ್ತಿತರ ಕೆಲಸಗಳಿಂದ ತನ್ನ ಧ್ಯೇಯಗಳನ್ನು ಪೂರ್ಣಗೊಳಿಸುತ್ತ ಬಂದಿದೆ. ನಮ್ಮ ಮುಂಬರುವ ದಿನಗಳಲ್ಲಿ, ವಿಜ್ಞಾನ ಒಂದು ಅಧ್ಯಯನದ ಮತ್ತು ಚರ್ಚೆಗಳ ವಿಷಯವಾಗಷ್ಟೇ ಉಳಿಯದೆ, ಜೀವನ ಶೈಲಿಯಾಗಬೇಕಿದೆ. ಮೊದಲೇ ನಮ್ಮೆಲ್ಲಾ ಸೋದರ-ಸೋದರಿಯರು, ಹಿರಿ-ಕಿರಿಯರಲ್ಲಿ ಇರುವ ವೈಜ್ಞಾನಿಕ ಯೋಚನೆ-ಭಾವನೆಗಳಿಗೆ ಮೂರ್ತ ಸ್ವರೂಪ ಕೊಡಬೇಕಾಗಿದೆ. ಸುಪ್ತ ಕಲ್ಪನೆಗಳನ್ನು ಅಭಿವ್ಯಕ್ತಗೊಳಿಸಲು ಸೂಕ್ತ ಮಾಧ್ಯಮವನ್ನು ಕಲ್ಪಿಸಬೇಕಾಗಿದೆ.

‘ಸಮಾಜದಿಂದ-ಸಮಾಜಕ್ಕಾಗಿ ವಿಜ್ಞಾನ’ ನಮ್ಮ ದೃಷ್ಟಿಕೋನ. ‘ಉತ್ತಮ ಸಮಾಜಕ್ಕಾಗಿ ವಿಜ್ಞಾನ-ತಂತ್ರಜ್ಞಾನ-ಆವಿಷ್ಕಾರ’ ನಮ್ಮ ಗುರಿ. ವೈಜ್ಞಾನಿಕ ವಿಷಯಗಳಲ್ಲಿ ಇರಬಹುದಾದ ತಪ್ಪು ಅಭಿಪ್ರಾಯಗಳನ್ನು ದೂರಗೊಳಿಸಿ, ನಮ್ಮ ಪ್ರಚಲಿತ ಸಮಸ್ಯೆಗಳು ಹಾಗೂ ಮುಂದೊದಗಬಹುದಾದ ಸವಾಲುಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಮನದಟ್ಟು ಮಾಡುವುದು ನಮ್ಮ ಉದ್ದೇಶ. ಈ ದಿಸೆಯಲ್ಲಿ ‘ದೂರದೃಷ್ಟಿ-ಆವಿಷ್ಕಾರ-ಸಹಭಾಗಿತ್ವ’ಗಳು ಅವಶ್ಯಕ ಹಾಗೂ ಪೂರಕ ಅಂಶಗಳು. ‘ಸಂಶೋಧನೆ-ವಿಶ್ವವಿದ್ಯಾಲಯ-ವ್ಯವಸಾಯ-ಕೈಗಾರಿಕೆ-ಸಾರ್ವಜನಿಕ’ ಸಂಕೀರ್ಣದ ಕಾಳಜಿ, ಒಕ್ಕೂಟ ಮತ್ತು ಪಾಲುಗಾರಿಕೆ, ನಮ್ಮ ‘ವಿಜ್ಞಾನ-ತಂತ್ರಜ್ಞಾನ ಆವಿಷ್ಕಾರ’ದ ತ್ರಿಕೋನ ರಚನೆ ಮತ್ತು ಯಶಸ್ಸಿಗೆ ನಿರ್ಣಾಯಕವಾಗುತ್ತವೆ.

ನಮ್ಮಲ್ಲಿರುವ ಸರ್ಕಾರಿ ಮತ್ತು ಕಾರ್ಪೋರೇಟ್ ವಿಜ್ಞಾನ ಸಂಸ್ಥೆ-ಸಂಘಟನೆಗಳು, ನಿನ್ನೆಯ ಅನುಭವ ಮತ್ತು ಇಂದಿನ ಯುವ ಶಕ್ತಿಗೆ, ಬೇರೊಂದು ಸಾಟಿಯಿಲ್ಲ. ಇವೆಲ್ಲವೂ ಸೇರಿ, ತಂತ್ರಜ್ಞಾನದಲ್ಲಿ ಆಗಲೇ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಭಾರತದ ವಿಜ್ಞಾನ ನಕ್ಷೆಯಲ್ಲಿಯೂ ಕೂಡ, ಒಂದು ವಿಶೇಷ ಸ್ಥಾನ ತಂದು ಕೊಟ್ಟಿವೆ. ಈಗ ನಡೆಯುತ್ತಿರುವ ಪ್ರಯತ್ನಗಳೊಂದಿಗೆ, ಹೊಸ ವಿಜ್ಞಾನ ಶಾಖೆ-ಪ್ರಬಂಧ-ವಿನ್ಯಾಸಗಳನ್ನು ಅಧ್ಯಯಿಸಲು, ಯುವ ಜನಾಂಗದಲ್ಲಿ ವಿಜ್ಞಾನದ ಜ್ಯೋತಿ ಹಚ್ಚಲು, ಸಂಶೋಧನೆಯಲ್ಲಿ ನವ ಉತ್ಸಾಹ ಮೂಡಿಸಲು, ವೈಜ್ಞಾನಿಕ ಒಕ್ಕೂಟಗಳನ್ನು (Networks) ಸಾಧಿಸಲು ಶೈಕ್ಷಣಿಕ-ಕೈಗಾರಿಕಾ ಸೇತುವೆಗಳನ್ನು ನಿರ್ಮಿಸಲು, ಹೊಸ ತಂತ್ರಜ್ಞಾನಗಳ ಮೂಲಕ ವಿಜ್ಞಾನ ಸಂವಹನವನ್ನು ಎತ್ತರಕ್ಕೇರಿಸಲು, ಹತ್ತು ಹಲವು ಅವಕಾಶಗಳು ಈಗ ನಮ್ಮ ಮುಂದಿವೆ. ಅಕಾಡೆಮಿಯು ಒಂದು ವಿಚಾರ ವೇದಿಕೆಯಾಗಿ, ಸಂಯೋಜಕರಾಗಿ, ಇನ್‍ಕ್ಯುಬೇಟರ್ ನಂತೆ ಮನೆ-ಮನಗಳಲ್ಲಿ ವಿಜ್ಞಾನದ ಪರಿಮಳವನ್ನು ಬೀರಲು ಸನ್ನದ್ಧವಾಗಿದೆ. ಜ್ಞಾನ-ವಿಜ್ಞಾನದ ಬೆಳಕು ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾದರೆ, ಪ್ರತಿ ನಾಳೆಯೂ ಖಂಡಿತ ಉತ್ತಮವಾಗುತ್ತದೆ.

ಈ ದಿಸೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು, ನಿಮ್ಮೆಲ್ಲರಿಂದ ಸಲಹೆಗಳನ್ನು, ಕೊಡುಗೆ-ದೇಣಿಗೆಗಳನ್ನು ಮತ್ತು ಸಹಭಾಗಿತ್ವವನ್ನು ಸ್ವಾಗತಿಸುತ್ತದೆ ಮತ್ತು ಆಪೇಕ್ಷಿಸುತ್ತದೆ. ಬನ್ನಿ, ಎಲ್ಲೇ ಇರಿ, ನೀವು ಏನನ್ನೇ ಮಾಡುತ್ತಿರಿ, ಈ ಜ್ಞಾನಯಾನದಲ್ಲಿ ಭಾಗಿಯಾಗೋಣ. ವಿಜ್ಞಾನ ಎಲ್ಲರ ಸ್ವತ್ತು ಮತ್ತು ಸಂಪತ್ತು, ಕಾಳಜಿ ಮತ್ತು ಕೈಂಕರ್ಯ.

ಎಸ್. ಅಯ್ಯಪ್ಪನ್

ಮೇ 01, 2020                                                  

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content