ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿದ್ಯಾರ್ಥಿಗಳನ್ನು ಆವಿಷ್ಕಾರದತ್ತ ಪ್ರೇರೇಪಿಸುವ ಶಿಕ್ಷಣ ಬೇಕಾಗಿದೆ – ಪ್ರೊ. ರಾಜಾಸಾಬ್ ಎ. ಹೆಚ್.

1 min read

ದೇಶದ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮದಂತೆ ಪಾಠ ಮಾಡುವ ಪರಿಪಾಠವಿದೆ. ಕೆಲವೇ ಅಧ್ಯಾಪಕರು ತಯಾರಿಸಿದ ಅಥವಾ ಬೇರೆ ಕಡೆಯಿಂದ ಆಮದಾದ ಈ ಪಠ್ಯಕ್ರಮದಲ್ಲಿ ವಿದ್ಯಾರ್ಥಿಯನ್ನು ಚಿಂತನೆಗೆ ಒರೆ ಹಚ್ಚುವ ಅಂಶಗಳು ಆಶಯಗಳು ಕಡಿಮೆ. ಉಪಾಧ್ಯಾಯರು ಸಹ ಪುಸ್ತಕದಲ್ಲಿರುವುದನ್ನು ಮಾತ್ರ ಓದಿಸುವ ಗುರುಗಳಾಗುತ್ತಾರೆ-ಯಾಂತ್ರಿಕವಾಗಿ. ಈ ರೀತಿಯ ಬೋಧನಾ ವಿಧಾನದ ಬದಲಾಗಿ ಪಠ್ಯದಲ್ಲಿ  ಬದಲಾವಣೆ ಮಾಡಿಕೊಂಡು ಪ್ರಕೃತಿಯಲ್ಲಿ ಜರಗುವ ಆಗು ಹೋಗುಗಳ ಬಗ್ಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿದರೆ, ನಿತ್ಯಜೀವನದಲ್ಲಿ ಪಡೆದ ಜ್ಞಾನವನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದಲ್ಲಿ, ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಬೋಧನೆ ಮಾಡಿ, ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳನ್ನು ಸಂಶೋಧನೆಗೆ ತೊಡಗಿಸಿದಲ್ಲಿ – ಸಮಾಜಕ್ಕೆ, ವಿಜ್ಞಾನಕ್ಕೆ ಅದರಿಂದಾಗುವ ಲಾಭ ಊಹಿಸಲು ಅಸಾಧ್ಯ.

ಸದಾ ಕಾಲ ಶಾಲಾ-ಕಾಲೇಜು ಕೊಠಡಿಗಳಲ್ಲಿಯೇ ಪಾಠ ಮಾಡುವ ಬದಲಾಗಿ ವಿದ್ಯಾರ್ಥಿಗಳನ್ನು ಹೊರಗಡೆ ಕೊಂಡೊಯ್ದು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಕ್ರಿಯೆ ಪ್ರಕೃತಿಯಲ್ಲಿ ಕ್ಷಣಕ್ಷಣಕ್ಕೂ ಜರುಗುವ ಬಗೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದಲ್ಲಿ ಅವರಿಗೆ ನಿಜವಾದ ಕುತೂಹಲಕಾರಿ ಜ್ಞಾನ ಅನುಭವ ಸಿಗುತ್ತದೆ. ಇದೇ ಅನುಭವದ ಜ್ಞಾನ ಮತ್ತೊಂದು ದಿನ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತಹ ವೈಜ್ಞಾನಿಕ ಸಂಶೋಧನೆ-ಫಲ ಲಭಿಸಬಹುದು. ಜೊತೆಗೆ ಮಾನವ-ಪ್ರಾಣಿ-ಪ್ರಕೃತಿ ಸಂಬಂಧಗಳು, ವಾತಾವರಣದ ಪ್ರಾಮುಖ್ಯತೆ, ಇಂಧನದ ಸಮಸ್ಯೆ ಇತ್ಯಾದಿಗಳನ್ನು ವಿವರಿಸಿದಾಗ ಮುಂದೊಂದು ದಿನ ಯಾವುದೋ ಒಬ್ಬ ವಿದ್ಯಾರ್ಥಿ ಸಂಶೋಧನೆಗೆ, ಆವಿಷ್ಕಾರಕ್ಕೆ ಅಣಿಯಾಗಬಹುದು. ಕಾರಣ ಯಾವ ಕೇರಿಯಲ್ಲಿ, ಊರಿನಲ್ಲಿ ಗೆಲಿಲಿಯೋ ಇದ್ದಾನೋ ತಿಳಿಯದು. ಆದುದರಿಂದ ವಿದ್ಯಾರ್ಥಿಗಳನ್ನು ಆವಿಷ್ಕಾರದತ್ತ ಪ್ರೇರೇಪಿಸುವುದು ಅಧ್ಯಾಪಕರ ಹೊಣೆ ಆಗುತ್ತದೆ ಮತ್ತು ಭಾರತದಂತಹ ದೇಶಕ್ಕೆ ಇದರ ಅವಶ್ಯಕತೆ ಇದೆ.

ನಾನು ಮೂಲತಹ ಒಬ್ಬ ಜೀವ ವಿಜ್ಞಾನಿ ಆಗಿರುವುದರಿಂದ,  ಜೀವಶಾಸ್ತ್ರದ ಉದಾಹರಣೆಗಳ ಮೂಲಕ ಕುತೂಹಲ, ಸಂಶೋಧನೆ, ಆವಿಷ್ಕಾರಗಳ ಮೂಲಕ ಹೇಗೆ ಮಾನವನ ಕಲ್ಯಾಣ ಸಾಧ್ಯ ಎಂಬುದನ್ನು ವಿವರಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. 

ಟಾರ್ಡಿಗ್ರೇಡ್: ನಾವು ಅಷ್ಟಾಗಿ ಕೇಳರಿಯದ ಈ ಸೂಕ್ಷ್ಮಗಾತ್ರದ ಪ್ರಾಣಿಗಳ ದೇಹ ರಚನೆ, ಜರಗುವ ಜೈವಿಕ ಕ್ರಿಯೆಗಳೇ ಒಂದು ಸೋಜಿಗ. 20 ಡಿಗ್ರಿ ಸೆಲ್ಸಿಯಸ್ ಉಷ್ಣತೆಗೆ ಬಹು ಚಳಿ, 40 ಡಿಗ್ರಿ ಸೆಲ್ಸಿಯಸ್ ಬಹು ಸೆಕೆ ಎನ್ನುವ ನಾವು ಟ್ಯಾಡಿಗರೇಡ್ ಜೀವಿಗಳು – 4 ಡಿಗ್ರಿ ಸೆಲ್ಸಿಯಸ್ ನಲ್ಲಿ, 150 ಡಿಗ್ರಿ ಸೆಲ್ಸಿಯಸ್ ನಲ್ಲಿ ಸಹ ಬದುಕಬಲ್ಲವು ಎಂಬುದು ಆಶ್ಚರ್ಯವನ್ನುಂಟುಮಾಡುತ್ತದೆ. ನಿರ್ವಾತದಲ್ಲಿ, ಬಾಹ್ಯಾಕಾಶದಲ್ಲಿ, ಅತಿ ನೇರಳೆ ಬೆಳಕಿನಲ್ಲೂ ಬದುಕ ಬಲ್ಲವು. ಸಮುದ್ರದ ಆಳದಲ್ಲಿ ವಾತಾವರಣದ ಒತ್ತಡ 1200 ಪಟ್ಟು ಹೆಚ್ಚಾದರೂ ಸಹ ಜೀವದಿಂದ ಇರಬಲ್ಲವು, ಸಂಪೂರ್ಣವಾಗಿ ಒಣಗಿದರೂ ಸಹ (ನಿರ್ಜಲೀಕರಣ) ಒಣಗಿದ ಪಾಚಿಯಲ್ಲಿ ನೂರಿಪ್ಪತ್ತು ವರ್ಷದ ನಂತರ ಬದುಕಿ ಬಂದ ಉದಾಹರಣೆಗಳಿವೆ. ಈ  ಟಾರ್ಡಿಗ್ರೇಡ್.ಗಳ ಹೆಸರು ಮಿಲ್ನೇಸಿಯಮ್ ಟಾರ್ಡಿಗ್ರಾಡಮ್ (Milnesium tadrigradum), ಗಾತ್ರ 0.5 ಮಿಲಿ ಮೀಟರ್ ಗಿಂತಲೂ ಕಡಿಮೆ. ಸಮುದ್ರದ ಆಳದಲ್ಲಿ ಶೈವಲಗಳ ಮೇಲೆ, ಇತರೆ ಸಸ್ಯಗಳ ಮೇಲೆ ವಾಸಿಸುತ್ತವೆ. ಇವುಗಳ ದೇಹ ರಚನೆ ಆಕಾರದಿಂದ ಇವುಗಳನ್ನು ”ಸಮುದ್ರ ಕರಡಿ”  ಎನ್ನುವರು. ಈ ಪ್ರಾಣಿಗಳ ದೇಹ ರಚನೆ,  ಜೈವಿಕ ಕ್ರಿಯೆಗಳು, ಬದುಕುವ ಶಕ್ತಿಯ ಅರಿವೇ ಅನೇಕ ಸಂಶೋಧನೆಗಳಿಗೆ ಸ್ಪೂರ್ತಿದಾಯಕ.

ಈ ಜೀವಿಗಳಲ್ಲಿ ಜರಗುವ ಜೈವಿಕ ಕ್ರಿಯೆಗಳ ಅರಿವು, ಮಾನವ ಮತ್ತು ಇತರೆ ಜೀವಿಗಳು, ಪ್ರಕೃತಿ ವಿಕೋಪ ಪರಿಸ್ಥಿತಿಗಳಲ್ಲಿಯೂ ಸಹ ಜೀವ ಹಿಡಿದಿಟ್ಟುಕೊಳ್ಳಲು ಒಂದು ದಿನ ಉಪಯೋಗವಾಗಬಲ್ಲುದು (ಚಿತ್ರ 1)

ಫಾಂಗ್ ಬ್ಲೆನಿ ಮೀನು: ಇನ್ನು ಫಾಂಗ್ ಬ್ಲೆನಿ ಮೀನಿನ ಕಥೆ ಅತ್ಯಂತ ರೋಚಕವಾದದ್ದು.  ಆಸ್ಟ್ರೇಲಿಯಾದ ಹವಳದ ಬಂಡೆಗಳಲ್ಲಿ ವಾಸಿಸುವ ಈ ಮೀನು ತನಗೆ ಜೀವಕ್ಕೆ ಅಪಾಯ ಬಂದಾಗ ಅಥವಾ ತನ್ನನ್ನು ತಿನ್ನಲು ಬರುವ ದೊಡ್ಡ ಮೀನುಗಳನ್ನು ಅದರ ಬಾಚಣಿಕೆ-ಕೋರೆ ಹಲ್ಲುಗಳಿಂದ ಕಚ್ಚಿ ತಪ್ಪಿಸಿಕೊಳ್ಳುವ ಕೌಶಲ್ಯ ಹೊಂದಿದೆ. ವೈರಿಗಳನ್ನು ತನ್ನ ಹಲ್ಲಿನಿಂದ ಕಚ್ಚಿದಾಕ್ಷಣ ಒಪಿಯಾಡ್ ಪೆಪ್ಟೈಡ್ಸ್ ಎಂಬ ವಿಷಕಾರಕ ಅಮಲು ಬರಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈ ರಾಸಾಯನಿಕಗಳಿಂದ ದೊಡ್ಡ ಮೀನಿನ ರಕ್ತದೊತ್ತಡ ಏರು ಪೇರಾಗಿ ಅದರ ಚಲನೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದೇ ಸಮಯ ಉಪಯೋಗಿಸಿಕೊಂಡು ಫಾಂಗ್ ಬ್ಲೆನಿ ತಪ್ಪಿಸಿಕೊಂಡು ತನ್ನ ಜೀವ ಕಾಪಾಡಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಈ ಮೀನಿನ ಬದುಕುವ ಕಲೆ ಅರಿವಾದಲ್ಲಿ ಮುಂದೆ ಅವರು ಜೀವ ವಿಜ್ಞಾನಿಗಳಾಗಿ ಒಪಿಯಾಡ್ ಪೆಪ್ಟೈಡ್ಸ್ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದಕ್ಕೆ ಫಾಂಗ್ ಬ್ಲೆನಿ ಸ್ಪೂರ್ತಿದಾಯಕವಾದೀತು. ಹಾಗೆಯೇ ಒಪಿಯಾಡ್ ಪೆಪ್ಟೈಡ್ಸ್.ಗಳನ್ನು ವೈದ್ಯಕೀಯ ಉಪಯೋಗಗಳಿಗೆ ತೊಡಗಿಸಿಕೊಳ್ಳಬಹುದು (ಚಿತ್ರ 2).

ರೆತೆಮಾ ರೇತಮ್: ಈ ಗಿಡವನ್ನು ತಿಂದಾಗ ಒಂಟೆಯೂ ಸುಂದಾಗುತ್ತದೆ!!!. ಎಂಬುದು ಜನಪದ ನಂಬಿಕೆ.  ವೈಜ್ಞಾನಿಕವಾಗಿ ಹೇಗೆ?

ಇದು ಮರುಭೂಮಿಯಲ್ಲಿ ಪೊದೆಯಂತೆ ಬೆಳೆಯುವ ಸಸ್ಯ.  ಉತ್ತರ ಆಫ್ರಿಕಾದ ಸಹರಾ ಮರುಭೂಮಿ,  ಸೌದಿ ಅರೇಬಿಯಾ ಹಾಗೂ ಇತರೆ ಮಧ್ಯಪ್ರಾಶ್ಚ ಪ್ರದೇಶಗಳ ಮರುಭೂಮಿಯಲ್ಲಿ ಸಹಜವಾಗಿ ಬೆಳೆಯುತ್ತದೆ.  ಒಂಟೆಗಳು ತಿನ್ನುತ್ತವೆ ಆದರೆ ಅಲ್ಲಿನ ಜನಪದ ನಂಬಿಕೆ ಪ್ರಕಾರ, ಈ ಪೊದೆಯನ್ನು, ಅದರ ಹೂ, ಕಾಯಿಗಳನ್ನು ಒಂಟೆಗಳು ಅತಿ ಹೆಚ್ಚು ತಿಂದಾಗ ಒಂಟೆಗಳು ಸುಂದಾಗುವುದನ್ನು ಜನ ಕಂಡಿದ್ದಾರೆ. ನಾನೂ ಸಹ ಜನರ ಈ ಮಾತನ್ನು ಕೇಳಿ ಚಕಿತಗೊಂಡಿದ್ದೇನೆ. ಹಾಗಾದರೆ ಈ ಜನಪದ ಜ್ಞಾನಕ್ಕೆ ವಿಜ್ಞಾನ ಏನು ಹೇಳುತ್ತದೆ? ಇಂಟರ್ನೆಟ್ ಕೆದಕಿ ನೋಡಿದರೆ, ಹೌದು ಈ ಸಸ್ಯದ ಕಷಾಯವನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ, ಅವುಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿಮುಖವಾಗಿರುವುದು ಸಂಶೋಧನೆಯಿಂದ ತಿಳಿದಿದೆ. ಅಂದರೆ ಮಧುಮೇಹಕ್ಕೆ ಈ ಗಿಡ ಮದ್ದಾಗಬಹುದು. ಪುಸ್ತಕ ಜ್ಞಾನ, ಪ್ರಕೃತಿ ಅಧ್ಯಯನ, ಜನಪದ ಜ್ಞಾನ ಇವೆಲ್ಲವನ್ನೂ ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡುವಂತೆ ಪ್ರೇರೇಪಿಸುವುದು ನಿಜವಾದ ಶಿಕ್ಷಣ. (ಚಿತ್ರ 3) ಈ ಲೇಖನದ ಆಶಯವೂ ಇದೇ ಆಗಿದೆ.

ಅನಸ್ತೇಶಿಯಾ (ಅರೆವಳಿಕೆ) ಔಷದಿಯ ಅನ್ವೇಷಣೆ: ಅಮೆರಿಕದ ಹೊರೇಸ್ ವೆಲ್ಸ್ ಎಂಬ ದಂತ ವೈದ್ಯ ತನ್ನ ಕಿರಿವಯಸ್ಸಿನಲ್ಲೇ ಒಂದು ಕೌತುಕವನ್ನು ನೋಡಿ ಅನಸ್ತೇಶಿಯಾದ ಅನ್ವೇಷಣೆಗೆ ನಾಂದಿ ಹಾಡುತ್ತಾನೆ. ಹೊರೇಸ್ ವೆಲ್ಸ್  ಜೀವಾವಧಿ (1815 ರಿಂದ 1848), ಕೇವಲ 33 ವರ್ಷ. ತಾನೊಬ್ಬ ದಂತ ವೈದ್ಯನಾಗಿ ಅವನ ರೋಗಿಗಳ ಹಲ್ಲು ಕೀಳುವಾಗ ಅವರು ಪಡುವ ನೋವಿನ ಯಾತನೆ ಅರಿವಿದ್ದ ಕಾರಣ ಒಂದು ದಿನ ಒಂದು ಪವಾಡವೇ ನಡೆಯಿತು. ಆಗಿನ ಕಾಲಮಾನದಲ್ಲಿ ನೈಟ್ರಸ್ ಆಕ್ಸೈಡ್ ಉಸಿರಾಡಿ ನಗುವ, ನಲಿದಾಡುವ, ಕುಣಿದಾಡುವ, ಪಾರ್ಟಿಗಳು ಸಾಮಾನ್ಯವಾಗಿದ್ದವು. ಡಿಸೆಂಬರ್ 10ರ ಒಂದು ರಾತ್ರಿ (1844) ಹೊರೇಸ್ ವೆಲ್ಸ್ ಆತನ ಪತ್ನಿಯೊಡನೆ ಪಾರ್ಟಿಯಲ್ಲಿ ಅಕಸ್ಮಾತಾಗಿ ಒಂದು ಸೋಜಿಗ ಗಮನಿಸಿದ. ಸ್ಯಾಮ್ಯುಯೆಲ್ ಎ. ಕೂಲಿ ಎಂಬ ಒಬ್ಬ ವ್ಯಕ್ತಿ ತನ್ನ ಕಾಲಿಗೆ ಏಟು  ಬಿದ್ದಿದ್ದರೂ ನಗು ನಗುತ್ತಾ ಡ್ಯಾನ್ಸ್ ಮಾಡುತ್ತಿದ್ದ ಕಾರಣ ಎಲ್ಲರೂ ನೈಟ್ರಸ್ ಆಕ್ಸೈಡ್ (N2O)  ಸೇವಿಸಿದ್ದರು. ಇದನ್ನು ಗಮನಿಸಿ ಪ್ರೇರಿತನಾದ ಹೊರೇಸ್ ವೆಲ್ಸ್ ಮರುದಿನ ತನ್ನ ಹಾಸ್ಪಿಟಲ್.ಗೆ ಬಂದು ನೈಟ್ರಸ್ ಆಕ್ಸೈಡ್ ಸೇವಿಸಿ ದಂತ ವೈದ್ಯರಾದ ಜಾನ್ ರಿಗ್ಸ್ ರವರ ಸಹಾಯದಿಂದ ತನ್ನದೇ ಆದ ಒಂದು ಹಲ್ಲನ್ನು ಬಲವಂತವಾಗಿ ಕಿತ್ತುಕೊಂಡರೂ ಯಾವುದೇ ನೋವಿನ ಅರಿವಾಗುವುದಿಲ್ಲ. ನಂತರ ತನ್ನ 12 ಜನ ರೋಗಿಗಳಿಗೆ  ನೈಟ್ರಸ್ ಆಕ್ಸೈಡ್ ಪ್ರಯೋಗಿಸಿ ಅವರ ಹಲ್ಲುಗಳನ್ನು ಕಿತ್ತಾಗಲು ಅವರಿಗೆ ನೋವಿನ ಅರಿವಾಗುವುದಿಲ್ಲ. ಮುಂದಿನ ಇತರೇ ಅನೇಕ ಅನಸ್ಥೇಶಿಯಾ ಸಂಶೋಧನೆಗಳಿಗೆ ಇದು ನಾಂದಿಯಾಗುತ್ತದೆ. ಈಗ ಯಾವುದೇ ಸರ್ಜರಿಯನ್ನು ಅನಸ್ಥೇಶಿಯಾ ಇಲ್ಲದೆ ಮಾಡುವುದು ಅಸಾಧ್ಯ, ಕೇವಲ ಒಂದು ವೀಕ್ಷಣೆ ಹೊರೇಸ್ ವೆಲ್ಸ್.ನನ್ನು ಅಜರಾಮರವಾಗಿಸಿತು. ನಮ್ಮ ವಿದ್ಯಾರ್ಥಿಗಳಿಗೂ ಪ್ರಸ್ತುತ ವೈಜ್ಞಾನಿಕ ಸಮಸ್ಯೆಗಳನ್ನು ನಾವು ಭೋದಿಸಿದಲ್ಲಿ  ಅವರು  ಸೂಕ್ಷ್ಮವಾಗಿ ಗಮನಿಸುವ ಚೈತನ್ಯ ಹಲವು ಆವಿಷ್ಕಾರಗಳಿಗೆ ದಾರಿ ಆಗಬಹುದು.

ಇಂತಹ ಅಮೂಲ್ಯವಾದ ಸಂಶೋಧನೆಯನ್ನು ನೀಡಿದ ಹೊರೇಸ್ ವೆಲ್ಸ್ ಜೀವನ ಅನೇಕ ಕಾರಣಗಳಿಂದ ದುರಂತವಾಗುತ್ತದೆ. ತನ್ನ 33ನೇ ವಯಸ್ಸಿನಲ್ಲಿ ವೆಲ್ಸ್ ಬಾತ್ ಟಬ್.ನಲ್ಲಿ ಕ್ಲೋರೊಫಾರ್ಮ್ ಸೇವಿಸಿ ಕೈಯಲ್ಲಿನ ರಕ್ತನಾಳವನ್ನು ಕೊಯ್ದುಕೊಂಡು ಯಾವುದೇ ನೋವಿಲ್ಲದೆ ಸಾಯುತ್ತಾನೆ. 1840 ರಿಂದ ಎರಡನೇ ಮಹಾಯುದ್ದ ನಡೆಯುವವರೆಗೂ (1939-45) ಗಾಯಗೊಂಡ ಸೈನಿಕರ ಅಂಗಚೇದ ಮಾಡುವಾಗ ಕ್ಲೋರೊಫಾರ್ಮ್.ನ ಉಪಯೋಗವಾಗಿದೆ. ಹೊರೇಸ್ ವೆಲ್ಸ್ ನ ಒಂದು ಆಕಸ್ಮಿಕ ಅನ್ವೇಷಣೆ ಸರ್ಜರಿಯ ಇತಿಹಾಸವನ್ನೇ ಬದಲಿಸಿದೆ ಕ್ಲೋರೊಫಾರ್ಮ್ ಸೇವಿಸಿ ಬಗೆದುಕೊಂಡ ಸಾವೂ ಸಹ, ಒಂದು ವೈದ್ಯಕೀಯ ನೆನಪು.

ವಸಂತ ಋತು ಅರ್ಥಾತ್ ಜೀವದ ಸೆಲೆ : ಭಾರತದಲ್ಲಿ ವಸಂತ ಋತುವಿನ ಆಗಮನ ಎಂದರೆ ಅದೊಂದು ಪ್ರಕೃತಿಯಲ್ಲಿ ಜರುಗುವ ಉತ್ಸವ, ಜೀವದ ಸೆಲೆ, ಪ್ರೀತಿಯ ಉಗಮ.  ನಮ್ಮ ಕವಿಗಳು ವಸಂತ ಮಾಸದಲ್ಲಿ, ಮಾವು ಚಿಗುರುವುದನ್ನು, ಕೋಗಿಲೆ ಇಂಪಾದ ಧ್ವನಿಗೆ ಪರವಶರಾಗುತ್ತಾರೆ. ವಸಂತೋತ್ಸವವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದೂ ಸಹ ಮನಕ್ಕೆ ಮುದ ನೀಡುವ ಸಂಭ್ರಮ. ಮರಗಳು ಹಳೆಯ ಎಲೆಗಳನ್ನು ಉದುರಿಸಿ ಚಿಗುರೆಲೆಗಳೊಂದಿಗೆ ಕಂಗೊಳಿಸುತ್ತವೆ. ವರುಣನ ಆಗಮನದಿಂದ ಭೂಮಿ ತಂಪಾಗಿ ಹಸಿರು-ಕ್ರಿಮಿ ಕೀಟಗಳ ಆಹಾರವಾಗಿ ಅವುಗಳ ವಂಶಾಭಿವೃದ್ಧಿ ಯಾಗುತ್ತದೆ. ಈ ಕ್ರಿಮಿ ಕೀಟಗಳನ್ನು ತಿಂದು ಹಕ್ಕಿ ಪಕ್ಷಿಗಳು ತಮ್ಮ ಪ್ರಿಯಕರನೊಂದಿಗೆ ನಲಿದು ಗೂಡುಕಟ್ಟುತ್ತವೆ. ಚೈತ್ರದ ಚಿಗುರು, ಫಲ ಪುಷ್ಪಗಳಿಗೆ ಮರಿದುಂಬಿಗಳು ಜೋಗುಳ ಹಾಡುತ್ತವೆ. ಇದೆಲ್ಲವೂ ಪ್ರಕೃತಿಯಲ್ಲಿ ಜರಗುವ ಸಹಜ ಕ್ರಿಯೆ.  ಈ ಎಲ್ಲಾ ಕ್ರಿಯೆಗಳು ವೈಜ್ಞಾನಿಕವಾಗಿ ಒಂದನ್ನೊಂದು ಅವಲಂಬಿಸಿ ಜರಗುತ್ತವೆ. ಈ ಅವಲಂಬಿತ ಕ್ರಿಯೆ ಅನೇಕ ವೈಜ್ಞಾನಿಕ ಅನ್ವೇಷಣೆಗಳಿಗೆ ಪ್ರೇರಣೆ ನೀಡುತ್ತವೆ. ಈ ಪ್ರಕೃತಿಯಲ್ಲಿ ಜೀವಿಗಳ ನಡುವಿನ ನಂಟು- ಅದನ್ನು ಅರ್ಥ ಮಾಡಿಕೊಂಡರೆ,  ಮನುಷ್ಯ ಪ್ರಕೃತಿಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ – ಚಳಿಗಾಲದಲ್ಲಿ ಉದುರಿದ ಎಲೆಗಳು ಗೊಬ್ಬರವಾಗುವುದರ ಜೊತೆಗೆ ಮಳೆ ನೀರಿನಿಂದ ಕೊಚ್ಚಿಕೊಂಡು ಹಳ್ಳ-ಕೊಳ್ಳಗಳ ಮೂಲಕ ಹರಿದು ನದಿ ಸೇರಿ, ನದಿಯಿಂದ ಸಮುದ್ರ ಸೇರುತ್ತವೆ. ಈ ಎಲೆಗಳನ್ನು ನಾವು ಗಮನಿಸುವುದೇ ಇಲ್ಲ -ಬಿದ್ದ ಎಲೆಗಳು, ಕೊಳೆತ ಎಲೆಗಳು ಎಂದು.  ಆದರೆ ಸಮುದ್ರದ ಮುಖಜ ಭೂಮಿಯಲ್ಲಿ, ಅಂದರೆ ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿ ಮೀನುಗಳು ಈ ಎಲೆಗಳಿಗಾಗಿ ಕಾಯುತ್ತಿರುತ್ತವೆ. ಈ ಎಲೆಗಳು, ನೀರಿನಲ್ಲಿ ಹರಿದು ಬರುವ ಕ್ರಿಮಿ ಕೀಟ ಹಾಗೂ ಇತರೇ ಸಸಾರಜನಕ ವಸ್ತುಗಳು, ಚಿಕ್ಕ ಪುಟ್ಟ ಕಳೇಬರಗಳು ಮೀನಿನ ಆಹಾರ. ಹೀಗೆ ವಸಂತಾಗಮನಕ್ಕೂ-ಚೈತ್ರದ ಚಿಗುರಿಗೂ-ಉದುರುವ ಎಲೆಗೂ-ವಸಂತೋತ್ಸವ ಮುಗಿಸಿ  ಮರಣ ಹೊಂದುವ ಕ್ರಿಮಿ ಕೀಟಗಳಿಗೂ-ಮುಂಗಾರಿನ ಮಳೆಗೂ-ಸಮುದ್ರ ಮೀನಿನ ಜೀವನ-ವಂಶಾಭಿವೃದ್ಧಿಗೂ ಜೀವದ ಕೊಂಡಿ ಬೆಸೆದಿದೆ.  ಇದು ಕೂಡ ಪ್ರಕೃತಿಯ ಒಂದು ವಿಸ್ಮಯ. ಹೀಗೆ ಪ್ರಕೃತಿಯಲ್ಲಿ, ಆಕಾಶದಲ್ಲಿ, ಸಮುದ್ರದಲ್ಲಿ ಅನೇಕ ವಿಸ್ಮಯಗಳಿವೆ. ಈ ವಿಸ್ಮಯಗಳು ಜ್ಞಾನ ಸೆಲೆಗಳಾಗ ಬಲ್ಲುವು. ಆದರೆ ಅವುಗಳನ್ನು  ಕಾಣುವ ಮನಸ್ಸು ಮತ್ತು ದೃಷ್ಟಿ ಮುಖ್ಯ. ಪ್ರಕೃತಿಯಿಂದ, ಜನಪದ ಜ್ಞಾನದಿಂದ ಅಧ್ಯಾಪಕರು ಪ್ರೇರಣೆಗೊಂಡು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಆವಿಷ್ಕಾರ  ಬಗ್ಗೆ ತುಡಿತ ಹುಟ್ಟುಹಾಕಬೇಕು. ಸಮಾಜದಲ್ಲಿ ಇರುವ ಕಷ್ಟ ಸಮಸ್ಯೆಗಳೇನು? ವೈಜ್ಞಾನಿಕ ಅನ್ವೇಷಣೆ ಮೂಲಕ ಪರಿಹಾರ ಹೇಗೆ ಎಂಬುದನ್ನು ಬೋಧಿಸಬೇಕು. ಪಠ್ಯದಲ್ಲಿ ಅದು ಒಂದು ಭಾಗವಾಗಬೇಕು. ಆಗ ಕೆಲವಾದರೂ ವಿದ್ಯಾರ್ಥಿಗಳು ಮುಂದೊಂದು ದಿನ ಆವಿಷ್ಕಾರಗಳಿಗೆ ನಾಂದಿಯಾಗಬಹುದು.

ಕಳೆದ ವರ್ಷ ಯುನೈಟೆಡ್ ಕಿಂಗ್ಡಮ್.ನಲ್ಲಿರುವ ಎಡಿನ್ಬರ್ಗ್.ಗೆ ಭೇಟಿ ನೀಡಿ ಅಲ್ಲಿನ ಕ್ಯಾಸ್ಟಲ್ ನೋಡುವಾಗ ಅದರ ಸುತ್ತ ಇರುವ ಕೋಟೆಯ ದಾರಿಯಲ್ಲಿ ಕಾಣುವ ಫಲಕ ನನ್ನ ಗಮನ ಸೆಳೆಯಿತು.  ಅದರ ಮೇಲೆ ಹೀಗೆ ಬರೆದಿದ್ದಾರೆ. 

ಎಡಿನ್ಬರ್ಗ್ ಒಂದು ಪ್ರತಿಭೆಯ ತಾಣ
ವಿಶ್ವವಿದ್ಯಾಲಯವನ್ನು 1583 ರಲ್ಲಿ ಸ್ಥಾಪಿಸಲಾಯಿತು.
ಜೋಸೆಫ್ ಬ್ಲ್ಯಾಕ್ CO2  ಅನ್ನು ಕಂಡುಹಿಡಿದನು
ಡಾಲಿ ತದ್ರೂಪಿ ಕುರಿ ಸಂತಾನವು ಇಲ್ಲೆ ಹತ್ತಿರದಲ್ಲೇ ಜನಿಸಿತು.
ಆಧುನಿಕ ಭೂವಿಜ್ಞಾನದ ಸಂಸ್ಥಾಪಕನಾದ ಜಾನ್ ಹಟ್ಟನ್ ಫೆಲೋಸ್ ಆಫ್ ರಾಯಲ್ ಸೊಸೈಟಿ, ಎಡಿನ್ಬರ್ಗ್ ನ ಸದಸ್ಯ
ಸರ್ ಜೇಮ್ಸ್ ಬ್ಲ್ಯಾಕ್ – β ಬ್ಲಾಕರ್ ಹೃದ್ರೋಗ ಔಷಧಿಯ ಸಂಶೋಧಕ,
ಆಡಮ್ ಸ್ಮಿತ್ – ಆಧುನಿಕ ಅರ್ಥಶಾಸ್ತ್ರದ ಪಿತಾಮಹ.
ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ – ಎಲೆಕ್ಟ್ರೋ ಮ್ಯಾಗ್ನೆಟಿಕ್ ಪ್ರತಿಪಾಧನೆಯ ಹರಿಕಾರ

ಎಡಿನ್ಬರ್ಗ್ ಅಂತಹ ಒಂದು ಚಿಕ್ಕ ಪ್ರದೇಶದಲ್ಲಿ ಇಷ್ಟೊಂದು ಆವಿಷ್ಕಾರಗಳು ಜರುಗಿವೆ. ಭಾರತದಲ್ಲಿ ಏಕೆ ಇದು ಸಾಧ್ಯವಿಲ್ಲ ಎಂಬುದೇ ದೊಡ್ಡ ಪ್ರಶ್ನೆ.

– ಪ್ರೊ. ರಾಜಾಸಾಬ್ ಎ. ಹೆಚ್.
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ವಿಶ್ರಾಂತ ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content