ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಮಳೆಕಾಡುಗಳ ಸಂರಕ್ಷಣೆಯಲ್ಲಿರುವಂತಾ ಕಾಳಜಿ ಫೈಟೊಪ್ಲಾಂಕ್ಟನ್ ಮೇಲೆಯೂ ಇರಬೇಕಲ್ಲವೇ? – ಅನಘಾ ರಘುನಂದನ್

1 min read

ನಾವು ಉಸಿರಾಡುವ ಗಾಳಿಯೂ ಒಂದು ವೈಶಿಷ್ಟ; ಇದು ಶೇಖಡ 21 ರಷ್ಟು ಆಮ್ಲಜನಕವನ್ನು ಹೊಂದಿದೆ. ಈ ಎಲ್ಲಾ ಆಮ್ಲಜನಕ ಎಲ್ಲಿಂದ ಬರುತ್ತದೆ ಎಂದು ಆಶ್ಚರ್ಯ ಪಡುತ್ತೀರಾ? ಹಾಗೆಯೇ ಊಹಿಸೋಣ, ಮರಗಳು! ನಿಜವೇ?. ಫೈಟೊಪ್ಲಾಂಕ್ಟನ್ ಎಂದು ಕರೆಯಲ್ಪಡುವ ಸೂಕ್ಷ್ಮ, ಏಕ ಕೋಶ ಜೀವಿಗಳಿವೆ ಜಲಮೂಲಗಳ ಮೇಲ್ಮೈಯಲ್ಲಿ ತೇಲುತ್ತವೆ ಮತ್ತು ಭೂಮಿಯ ಆಮ್ಲಜನಕದ ಪೂರೈಕೆಯ ಶೇಖಡ 50 ಕ್ಕಿಂತ ಹೆಚ್ಚಿನ ಆಂಶ ಇವುಗಳ ಕೊಡುಗೆ ಎಂದು ನಾನು ಹೇಳಿದರೆ!!. ಫೈಟೊಪ್ಲಾಂಕ್ಟನ್‌ ಬಗ್ಗೆ ನಾವು ಹೆಚ್ಚು ತಿಳಿಯದಿದ್ದರೂ ಸಹ ನಾವಾಡುವ ಎರಡು ಉಸಿರುಗಳಲ್ಲಿ ಒಂದಕ್ಕೆ ಅವುಗಳಿಗೆ ಧನ್ಯವಾದ ಹೇಳಬೇಕು.

ಭೂಮಿಯು ‘ಸಾಮಾನ್ಯ’ ಮತ್ತು ‘ವಾಸಯೋಗ್ಯ’ ಎಂಬುದು ನಮ್ಮ ವ್ಯಾಖ್ಯಾನ. ನಮಗೆ ಗೋಚರಿಸುವ ಹೆಚ್ಚಿನ ಜೀವಿಗಳು 5 0C ನಿಂದ 40°0C ತಾಪಮಾನದಲ್ಲಿ ಸೀಮಿತ ವ್ಯಾಪ್ತಿಯಲ್ಲಿ ವಾಸಿಸುತ್ತವೆ ಹಾಗೂ ನಮ್ಮ ವಾತಾವರಣದಿಂದಾಗಿ ಸೂರ್ಯನ ಹಾನಿಕಾರಕ ವಿಕಿರಣದಿಂದ ರಕ್ಷಿಸಲ್ಪಡುತ್ತವೆ. ಭೂಮಿಯ ಮೇಲೆ ಜೀವದ ಆರಂಭಿಕ ಪುರಾವೆಗಳು 3.5 ಶತಕೋಟಿ ವರ್ಷಗಳಷ್ಟು ಹಿಂದಿನವು ಹಾಗೂ ಅವೆಲ್ಲವು ಕಡಿಮೆ ಅಥವಾ ಆಮ್ಲಜನಕದ ರಹಿತ ಜಗತ್ತಿನಲ್ಲಾದುವಂತಹವು. ಆಮ್ಲಜನಕರಹಿತ ಏಕಕೋಶೀಯ ಪ್ರೊಕಾರ್ಯೋಟ್‌ಗಳಾಗಿ ‘ಎಕ್ಸ್‌ಟ್ರೆಮೋಫಿಲ್ಸ್’ ಎಂದು ಕರೆಯಲ್ಪಡುವ ಈ ಜೀವಿಗಳು ಚಯಾಪಚಯ ಕ್ರಿಯೆಗೆ ಆಮ್ಲಜನಕವನ್ನು ಅವಲಂಬಿಸುವುದಿಲ್ಲ. ಬದಲಾಗಿ, ಅವುಗಳು ಗಂಧಕ, ಕಬ್ಬಿಣ ಮತ್ತು ಹೈಡ್ರೋಜನ್ ನಂತಹ ಇತರ ಅಣುಗಳನ್ನು ಬಳಸಿ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ಆಮ್ಲಜನಕರಹಿತ ಚಯಾಪಚಯ ಕ್ರಿಯೆಯಿಂದಾಗಿ ಭೂಮಿಯ ಮೇಲೆ ಜೀವದ ಉಗಮ ಸಾಧ್ಯವಾಯಿತು.

ವಿಜ್ಞಾನಿಗಳು ಭೂವೈಜ್ಞಾನಿಕ ಮತ್ತು ಆನುವಂಶಿಕ ಸಾಕ್ಷ್ಯಗಳ ಸಹಾಯದಿಂದ ಭೂಮಿಯ ಸುಮಾರು 4.6 ಶತಕೋಟಿ ವರ್ಷಗಳ ಇತಿಹಾಸವನ್ನು ಪುನರ್ನಿರ್ಮಿಸಿದ್ದಾರೆ. ಗಮನಾರ್ಹವೆಂದರೆ, ಏಕಕೋಶ ದ್ಯುತಿಸಂಶ್ಲೇಷಕ ಜೀವಿಗಳಾದ ‘ಸೈನೋಬ್ಯಾಕ್ಟೀರಿಯಾ’ ನಮಗೆ ತಿಳಿದಿರುವ ಅತ್ಯಂತ ಹಿಂದಿನ ಬ್ಯಾಕ್ಟೀರಿಯಾಗಳಾಗಿದ್ದು, ಭೂಪರಿಸರ, ಸಾಗರ, ವಾತಾವರಣವನ್ನು ತೀರ್ವವಾಗಿ ಪರಿವರ್ತಿಸಿ, ಈ ಭೂಮಿಯನ್ನು ವಾಸಯೋಗ್ಯವಾಗಿಸಲು ಕಾರಣೀಕೃತವಾಗಿವೆ. ವಿಪರೀತತೆ ಎಲ್ಲೆಡೆ ಈಗಲೂ ಅಸ್ತಿತ್ವದಲ್ಲಿದ್ದು, ಅವುಗಳಲ್ಲಿ ಸೂಕ್ಷ್ಮಜೀವಿಗಳ ಪ್ರಾಬಲ್ಯವಿದೆ. ಹಿಮಾಲಯ, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನ, ಐಸ್ಲ್ಯಾಂಡ್, ಕಮ್ಚಟ್ಕಾ, ನ್ಯೂಜಿಲೆಂಡ್, ಇಟಲಿ, ಮೌಂಟ್ ಲ್ಯಾಸೆನ್ ಹಾಗೂ ಅತಿ ಲವಣಯುಕ್ತ ಗ್ರೇಟ್ ಸಾಲ್ಟ್ ಲೇಕ್ ಮತ್ತು ಡೆಡ್ ಸೀ ಹಾಗೂ ಮುಂತಾದ ಸ್ಥಳಗಳಲ್ಲಿ ಅವು ಪ್ರಪಂಚದಾದ್ಯಂತ ಕಂಡುಬರುತ್ತವೆ.

ಈ ದ್ಯುತಿಸಂಶ್ಲೇಷಕ ಜೀವಿಗಳು ಭೂಮಿಯ ಸಸ್ಯಗಳಂತೆಯೇ ಸೂರ್ಯನ ಬೆಳಕನ್ನು ಬಳಸುತ್ತವೆ ಮತ್ತು ಇಂಗಾಲದ ಡೈಆಕ್ಸೈಡ್ (CO2), ನೀರು (H2O) ಮತ್ತು ಖನಿಜಗಳನ್ನು ಸಾವಯವ ವಸ್ತು ಮತ್ತು ಆಮ್ಲಜನಕಗಳಾಗಿ ಪರಿವರ್ತಿಸುತ್ತವೆ. ಅಷ್ಟೇ ಅಲ್ಲ, ಕೆಲವು ವಿಶಿಷ್ಟ ಫೈಟೊಪ್ಲಾಂಕ್ಟನ್.ಗಳು ಮೋಡಗಳ ರಚನೆಗೆ ಅಗತ್ಯವಾದ, ಹಾನಿಕಾರಕ ನೇರಳಾತೀತ ಕಿರಣಗಳನ್ನು ಚದುರಿಸಿ ನಮ್ಮ ಗ್ರಹವನ್ನು ತಂಪಾಗಿಡಲು ಬೇಕಾದ ಡೈಮಿಥೈಲ್ ಸಲ್ಫೈಡ್ (ಡಿಎಂಎಸ್), ಸಲ್ಫೇಟ್ ಏರೋಸಾಲ್ಗಳು ಮತ್ತು ಮೋಡದ ಘನೀಕರಣ ನ್ಯೂಕ್ಲಿಯಸ್ಗಳು (ಸಿಸಿಎನ್) ಗಳಂತಹ ಲೇಶಾನಿಲಗಳ ರಚನೆಗೆ ಸಹಕರಿಸುತ್ತವೆ. ಅಲ್ಲದೆ, ಅವು ಸಮುದ್ರದ ಅಯೋಡಿನ್ ಚಕ್ರಕ್ಕೆ, ಸಾಗರದಿಂದ ಭೂಮಿಗೆ ಅಯೋಡಿನ್ ಚಲನೆಗೆ ಮತ್ತು ಉಷ್ಣವಲಯ ಮತ್ತು ವಾಯುಮಂಡಲದ ನಡುವಿನ ಓಝೋನ್ ಮಟ್ಟವನ್ನು ಸಮತೋಲನಗೊಳಿಸಲು ಕೊಡುಗೆ ನೀಡುತ್ತವೆ.

ಪ್ಲ್ಯಾಂಕ್ಟನ್.ಗಳು ಕೂಡ ಪಳೆಯುಳಿಕೆ ಇಂಧನಗಳ ಅತಿದೊಡ್ಡ ಪೂರೈಕೆದಾರ. ಈ ಜೀವಿಗಳು ಸತ್ತು ಹೂತುಹೋಗಿ ಸಂಕುಚಿತಗೊಳ್ಳುತ್ತವೆ ಮತ್ತು ಅಂತಿಮವಾಗಿ ತೈಲ ಮತ್ತು ಅನಿಲದ ನಿಕ್ಷೇಪಗಳಾಗಿ ಬದಲಾಗುತ್ತವೆ. ಪ್ರತಿ ವರ್ಷ ನಾವು ಸಾಗರದ ತಳದಲ್ಲಿ ಸುಮಾರು ಒಂದು ದಶಲಕ್ಷ ವರ್ಷಗಳ ಕಾಲ ಹೋತುಹೋದ ಪ್ಲ್ಯಾಂಕ್ಟನ್‌ಗಳಿಗೆ ಸಮಾನವಾದ ತೈಲವನ್ನು ಉಪಯೋಗಿಸುತ್ತೇವೆ.

ಫೈಟೊಪ್ಲಾಂಕ್ಟನ್, ಯೂಫೋಟಿಕ್ ವಲಯದಲ್ಲಿ ವಾಸಿಸುತ್ತವೆ. ಯೂಫೋಟಿಕ್ ಅಂದರೆ ಸೂರ್ಯನ ಬೆಳಕು ಸಮುದ್ರದ ಮೇಲ್ಮೈ ಪದರಗಳಲ್ಲಿ ಎಲ್ಲಿಯವರೆಗೆ ನುಗ್ಗಬಲ್ಲದೊ ಆ ವಲಯ. ಹೀಗೆ ಮೇಲ್ಮೈ ಪದರದಲ್ಲಿ ರೂಪುಗೊಂಡ ಫೈಟೊಪ್ಲಾಂಕ್ಟನ್‌ ಬೃಹತ್ ಜೀವರಾಶಿಯಾಗಿ ಆಹಾರ ಸರಪಳಿಯ ತಳಹದಿಯಾಗಿದ್ದು, ದೊಡ್ಡ ಜೀವಿಗಳು ಅವುಗಳ ಮೇಲೆ ಅವಲಂಬಿತವಾಗಿವೆ. ಫೈಟೊಪ್ಲಾಂಕ್ಟನ್ ಅನ್ನು ಝೂಪ್ಲ್ಯಾಂಕ್ಟೋನಿಕ್ ಪ್ರಾಣಿಗಳ ಗುಂಪಿಗೆ ಸೇರಿದ ಪ್ರೊಟಿಸ್ಟ್‌ಗಳು ಮತ್ತು ಲಾರ್ವಾಗಳು ಸೇವಿಸುತ್ತವೆ. ಈ ಜೀವಿಗಳು ದೊಡ್ಡ ಭಕ್ಷಕಗಳಿಗೆ – ಜೆಲ್ಲಿಫಿಶ್, ಮೀನುಗಳು, ಪಕ್ಷಿಗಳು, ಸಮುದ್ರ ಸಸ್ತನಿಗಳು, ಮಾನವರು ಇತ್ಯಾದಿಗಳಿಗೆ ಆಹಾರ.

ಇತ್ತೀಚಿನ ದಿನಗಳಲ್ಲಿ ಜಲಮೂಲಗಳು ಕಲುಷಿತಗೊಳ್ಳುತ್ತಿರುವುದರಿಂದ, ಫೈಟೊಪ್ಲಾಂಕ್ಟನ್ ನಿಯಂತ್ರಣವಿಲ್ಲದೆ ಬೆಳೆದು ಹಾನಿಕಾರಕ ಪಾಚಿಯಾಗಿ ರೂಪಿತಗೊಳ್ಳುತ್ತಿವೆ. ಈ ಪಾಚಿಗಳು ಅತ್ಯಂತ ವಿಷಕಾರಿ ಸಂಯುಕ್ತಗಳನ್ನು ಉತ್ಪಾದಿಸುತ್ತವೆ ಹಾಗೂ ಮೀನು, ಚಿಪ್ಪುಮೀನು, ಸಸ್ತನಿಗಳು, ಪಕ್ಷಿಗಳು ಮತ್ತು ಜನರ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.

ಇಲ್ಲಿ ಒಂದು ಪ್ರಶ್ನೆ, ಮಳೆಕಾಡುಗಳ ಸಂರಕ್ಷಣೆಯಂತೆ ನಾವು ಫೈಟೊಪ್ಲಾಂಕ್ಟನ್ ಸಂರಕ್ಷಣೆಗೆ ಎನಾದರೂ ಮಾಡುತ್ತಿದ್ದೇವೆಯೇ? ಜಗತ್ತಿನ ಹತ್ತು ಸಾಗರಗಳಲ್ಲಿ ಎಂಟರಲ್ಲಿ ವಿಜ್ಞಾನಿಗಳು ಫೈಟೊಪ್ಲಾಂಕ್ಟನ್ ಸಾಂದ್ರತೆಯಲ್ಲಿ ಕುಸಿತವನ್ನು ಗಮನಿಸಿದ್ದಾರೆ ಹಾಗೂ ಇದು ಜಾಗತಿಕವಾಗಿ ಕಳೆದ 50 ವರ್ಷಗಳಲ್ಲಿ ವರ್ಷಕ್ಕೆ ಸರಿಸುಮಾರು ಶೇಖಡ 1.0 ರಷ್ಟಿದೆ ಎಂದು ಅಂದಾಜಿಸಿದ್ದಾರೆ. ಇದಕ್ಕೂ ನಮ್ಮ ವಾತಾವರಣದಲ್ಲಿನ ಹವಾಮಾನ ಬದಲಾವಣೆಗೂ ಪರಸ್ಪರ ಸಂಬಂಧ ಕಲ್ಪಿಸಬಹುದಾಗಿದೆ.

ಆದುದರಿಂದ ಪ್ಲ್ಯಾಂಕ್ಟನ್ ಕಡಿಮೆ ಅಥವಾ ನಶಿಸಿದರೆ, ಆಹಾರ ಸರಪಳಿಯಲ್ಲಿ ವಿನಾಶಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ; ಆಹಾರ ಮೂಲವಾಗಿ ಪ್ರಮುಖವಾಗಿ ಜಲಸಿರಿಯನ್ನು ಅವಲಂಬಿಸಿರುವ ಕರಾವಳಿಯ 60 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸುಮಾರು ಶೇಖಡ 70 ರಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ವಾತಾವರಣದಲ್ಲಿನ ಆಮ್ಲಜನಕದ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿರುವ ಪ್ಲ್ಯಾಂಕ್ಟನ್ ನಶಿಸಿದರೆ ವಾತಾವರಣದಲ್ಲಿ ಕಡಿಮೆ ಆಮ್ಲಜನಕವನ್ನು ಮತ್ತು ಹೆಚ್ಚು ಇಂಗಾಲದ ಡೈಆಕ್ಸೈಡ್ ಶೇಖರಣೆಯಿಂದ ಮುಂದಿನ ಹಿಮಯುಗಕ್ಕೆ ಕಾರಣವಾಗಬಹುದು.

ಹಾಗಾದರೆ ಏನು ಮಾಡಬೇಕು? ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಏಜೆನ್ಸಿಗಳು ಹೇಗೆ ನೀತಿಗಳನ್ನು ನಿರೂಪಿಸುತ್ತಿವೆಯೋ ಹಾಗೆಯೇ, ನೀರಿನ ಮಾಲಿನ್ಯವನ್ನು ನಿರ್ವಹಿಸಲು ಪ್ರಾರಂಭಿಸಬೇಕು. ಬಿಕ್ಕಟ್ಟನ್ನು ನಿರ್ವಹಿಸಲು ಮೊದಲ ಹೆಜ್ಜೆಯಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು.

ಹಾಗಾದರೆ, ಆ ಒಂದು ಉಸಿರಾಟಕ್ಕಾಗಿ ನಾವು ಫೈಟೊಪ್ಲಾಂಕ್ಟನ್‌ಗೆ ಧನ್ಯವಾದ ಹೇಳಬೇಕಲ್ಲವೇ?

– ಅನಘಾ ರಘುನಂದನ್
10ನೇ ತರಗತಿ, ಕೆನರಾ ಪ್ರೌಢಶಾಲೆ, ಊರ್ವ, ಮಂಗಳೂರು
anagha_r@icloud.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content