ಜೀವಂತ ಚರ್ಮ ಹೊಂದಿರುವ ರೋಬೋಟ್
ಕಿಯೋ ವಿಶ್ವವಿದ್ಯಾಲಯದ ಸಂಶೋಧಕ ತಂಡವು ಜೀವಂತ ಚರ್ಮದಿಂದ ಆವೃತವಾದ ರೋಬೊಟಿಕ್ ಬೆರಳನ್ನು ನಿರ್ಮಿಸಿದೆ. ಸಂಶೋಧಕರು ಪ್ರಯೋಗಾಲಯದಲ್ಲಿ ರೋಬೋಟ್ ಬೆರಳಿನ ಸುತ್ತಲೂ ನಿಜವಾದ ಮಾನವ ಚರ್ಮದ ಕೋಶಗಳನ್ನು ಬೆಳೆಸಿದ್ದಾರೆ. ಈ ಚರ್ಮವು ಗಾಯಗೊಂಡಾಗ ಕೊಲಾಜಿನ್ ಬ್ಯಾಂಡೇಜ್ ಸಹಾಯದಿಂದ ತನ್ನನ್ನು ತಾನೇ ಗುಣಪಡಿಸುತ್ತದೆ. ತಂಡವು ತೀವ್ರ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಕೊಲಾಜಿನ್ ನಿಂದ ಮಾಡಿದ ಹೈಡ್ರೋಜೆಲ್ ಹಾಗೂ ಜೀವಂತ ಮಾನವ ಚರ್ಮದ ಕೋಶಗಳಿಂದ ಮಾಡಲ್ಪಟ್ಟ ಚರ್ಮದಂತಹ ವಸ್ತುಗಳನ್ನು ಇದಕ್ಕೆ ಬಳಸಿಕೊಂಡರು. ಹೀಗೆ ಬೆಳೆದ ಚರ್ಮವು ಜಲ ಪ್ರತಿಬಂಧಕವಾಗಿದ್ದು, ರೋಬೋಟ್ ನ ಬೆರಳಿನ ಚಲನೆಗನುಗುಣವಾಗಿ ಸುಕ್ಕುಗಟ್ಟುತ್ತದೆ. ಕೊಲಾಜಿನ್ ಮತ್ತು ಡರ್ಮಲ್ ಫೈಬ್ರೋಬ್ಲಾಸ್ಟ್ (ಮಾನವ ಚರ್ಮದ ಮಧ್ಯದ ಪದರ) ಗಳನ್ನು ಬಳಸಿಕೊಂಡು ರೋಬೋಟ್ ಬೆರಳಿನ ಮೇಲೆ ಲೇಪಿಸುವ ಮೂಲಕ ಚರ್ಮವನ್ನು ಬೆಳೆಸಲಾಗಿದೆ. ನಂತರ, ಡರ್ಮಿಸ್ ಮೇಲೆ ಕೆರಾಟಿನೋಸೈಟ್ (ಚರ್ಮದ ಅತ್ಯಂತ ಹೊರಪದರವಾದ ಎಪಿಡರ್ಮಿಸ್ ನ ಕೋಶಗಳು) ಅನ್ನು ಲೇಪಿಸಿ, ಅಂತಿಮವಾಗಿ ರೋಬೋಟ್ ಬೆರಳಿನ ಮೇಲೆ ಮಾನವ ಚರ್ಮದಂತಹ ಹೊದಿಕೆಯನ್ನು ರೂಪಿಸಿದರು. ಮುಂದುವರೆದು ಸಂಶೋದಕ ತಂಡವು ಚರ್ಮದಲ್ಲಿ ಕಂಡುಬರುವ ಕೆಲವು ಅಂಗಾಂಶಗಳಾದ ಸಂವೇದನಾ ಕೋಶಗಳು, ಕೂದಲಿನ ಕಿರುಚೀಲಗಳು ಮತ್ತು ಬೆವರಿನ ಗ್ರಂಥಿಗಳನ್ನು ಅಭಿವೃದ್ಧಿಪಡಿಸುವತ್ತ ಸಂಶೋಧನೆಯನ್ನು ನಡೆಸುತ್ತಿದೆ.