ದೈತ್ಯ ಬ್ಯಾಕ್ಟೀರಿಯಾ
1 min readಇಲ್ಲಿಯವರೆಗೆ ನಾವು ಬ್ಯಾಕ್ಟೀರಿಯಾಗಳು ಚಿಕ್ಕದಾಗಿವೆ ಮತ್ತು ಸೂಕ್ಷ್ಮದರ್ಶಕದಡಿಯಲ್ಲಿ ಮಾತ್ರ ನೋಡಬಹುದು ಎಂದು ನಂಬಿದ್ದೆವು. ಆದರೆ, ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್ ನಲ್ಲಿರುವ ಲ್ಯಾಬೋರೇಟರಿ ಫಾರ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಸಂಶೋಧನಾ ಪ್ರಯೋಗಾಲಯದ ಸಾಗರ ಜೀವಶಾಸ್ತ್ರಜ್ಞ ಜೀನ್-ಮೇರಿ ವೋಲ್ಲ್ಯಾಂಡ್ ಮತ್ತು ಅವರ ತಂಡ ಕೆರಿಬಿಯನ್ ಮ್ಯಾಂಗ್ರೋವ್ ಜೌಗು ಪ್ರದೇಶದ ನೀರಿನಲ್ಲಿ ಕೊಳೆಯುತ್ತಿರುವ ಮ್ಯಾಂಗ್ರೋವ್ ಎಲೆಗಳ ಮೇಲೆ ಅಸಾಮಾನ್ಯವಾಗಿ ದೊಡ್ಡದಾದ, ಸಲ್ಫರ್-ಆಕ್ಸಿಡೀಕರಣ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಿದ್ದಾರೆ. ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ ಎಂದು ಹೆಸರಿಸಲಾದ ಈ ದೈತ್ಯ ಬ್ಯಾಕ್ಟೀರಿಯಾವು ಒಂದು ಸೆಂಟಿಮೀಟರ್ ಉದ್ದವನ್ನು ಹೊಂದಿದ್ದು, ಬರಿಗಣ್ಣಿಗೆ ಗೋಚರಿಸುತ್ತದೆ.
ತಂಡವು, ಜಿನೋಮ್ ಸೀಕ್ವೆನ್ಸಿಂಗ್ ಜೊತೆಗೆ ಫ್ಲೋರೆಸೆನ್ಸ್, ಎಕ್ಸ್-ರೇ ಮತ್ತು ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯನ್ನು ಬಳಸಿಕೊಂಡು, ಅತಿಯಾಗಿ ಪಾಲಿಪ್ಲಾಯ್ಡ್ ಆದ ಜೀವಕೋಶಗಳನ್ನು ನಿರೂಪಿಸಿ, ಕೋಶಪರದೆಯೊಳಗೆ ಡಿಎನ್ಎ ಮತ್ತು ರೈಬೋಸೋಮ್ ಗಳು ವಿಭಾಗಿಕರಣವಾಗಿರುವುದನ್ನು ಗಮನಿಸಿದರು. ಇತರ ಬ್ಯಾಕ್ಟೀರಿಯಾಗಳ ಜೀವಕೋಶದ ಒಳಗೆ ಮುಕ್ತವಾಗಿ ತೇಲುವ ಡಿಎನ್ಎ, ಇಲ್ಲಿ ಸಸ್ಯಗಳು ಮತ್ತು ಪ್ರಾಣಿಗಳ ಗುಂಪಾದ ಯೂಕ್ಯಾರಿಯೋಟ್ಗಳಲ್ಲಿ ಕಂಡುಬರುವಂತೆ ಪದರದಿಂದ ಆವೃತವಾದ ರಚನೆಗಳಲ್ಲಿ ವಿಭಾಗಿಸಲ್ಪಡುತ್ತದೆ.
ಕೆರಿಬಿಯನ್ ನ ಲೆಸ್ಸರ್ ಆಂಟಿಲ್ಸ್ ನ ಉಷ್ಣವಲಯದ ಸಮುದ್ರ ಮ್ಯಾಂಗ್ರೋವ್ ಕಾಡುಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸುವಾಗ ಇವುಗಳನ್ನು ಮೊದಲು ಕಂಡುಹಿಡಿಯಲಾಗಿದೆ. ಉದ್ದವಾದ ಬಿಳಿ ತಂತುವಿನಂತಹ ರಚನೆಗಳುಳ್ಳ ಇವುಗಳನ್ನು ಮೊದಲಿಗೆ ಯೂಕ್ಯಾರಿಯೋಟ್ ಗಳೆಂದು ಊಹಿಸಲಾಗಿತ್ತು. ಆದರೆ, ವಾಸ್ತವವಾಗಿ ಇವುಗಳು ಬ್ಯಾಕ್ಟೀರಿಯಾಗಳೆಂದು ಆನುವಂಶಿಕ ವಿಶ್ಲೇಷಣೆಗಳು ತೋರಿಸಿದವು. ಈ ಹೊಸ ಆವಿಷ್ಕಾರವು ಬ್ಯಾಕ್ಟೀರಿಯಾಗಳ ಬಗ್ಗೆ ಹೊಸ ಆಲೋಚನೆಗೆ ನಾಂದಿಯಾಗಿದೆ.
ಡಾ. ಆನಂದ್ ಆರ್
ಹಿರಿಯ ವೈಜ್ಞಾನಿಕ ಅಧಿಕಾರಿ,
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ