ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಮಧುಮೇಹದ ತಿಳುವಳಿಕೆಗೆಯಲ್ಲಿ ಹೊಸ ಮುನ್ನಡೆ

1 min read

ತೆಳುವಾದ ಕೂದಲಿನಂತಹ ಪ್ರಕ್ಷೇಪಣಗಳಾಗಿರುವ ಯೂಕ್ಯಾರಿಯೋಟಿಕ್ ತಂತು (ಸಿಲಿಯಾ)ವನ್ನು ಚಲನಶೀಲ ಮತ್ತು ಚಲನಾರಹಿತ ವಿಧಗಳಾಗಿ ವರ್ಗೀಕರಿಸಲಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಮೇದೋಜೀರಕ ಗ್ರಂಥಿಯ ಪ್ರಧಾನ ತಂತುಗಳು ಚಲನಾರಹಿತ ನಿಷ್ಕ್ರಿಯ ಸಂವೇದಕಗಳು ಎಂದು ನಂಬಲಾಗಿದೆ. ಇವು ಕೋಶವು ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ನಡೆಸುವ ಸಂವಹನ ಕ್ರಿಯೆಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತವೆ ಮತ್ತು ಅಂಗಾಂಶದ ಸಂತುಲನವನ್ನು ನಿರ್ವಹಿಸುತ್ತವೆ. ಸಕ್ಕರೆ (ಗ್ಲೂಕೋಸ್) ಸಂತುಲನದಲ್ಲಿ ಮೇದೋಜ್ಜೀರಕ ಗ್ರಂಥಿಯ β ಜೀವಕೋಶಗಳಲ್ಲಿನ ಪ್ರಧಾನ ಸಿಲಿಯಾಗಳ ಪಾತ್ರ ಅಧ್ಯಯನಗಳಿಂದ ದೃಢಪಟ್ಟಿದೆ (ಎಫ್. ವೋಲ್ಟಾ ಮತ್ತು ಇತರರು, 2019 ಮತ್ತು ಸಿ. ಟಿ. ವು ಮತ್ತು ಇತರರು, 2021). ಆದರೆ, ಅವುಗಳ ಕ್ರಿಯಾತ್ಮಕ ಪಾತ್ರಗಳು ಮತ್ತು ಕ್ರಿಯೆಗಳ ಕಾರ್ಯವಿಧಾನಗಳಲ್ಲಿ ಸ್ಪಷ್ಟತೆಯಿಲ್ಲ. 2022 ರಲ್ಲಿ ಚೋ ಮತ್ತು ಇತರರು ನಡೆಸಿದ ಇತ್ತೀಚಿನ ಅಧ್ಯಯನವು ಮಾನವ ಮತ್ತು ಇಲಿಯ ಮೇದೋಜ್ಜೀರಕ ಗ್ರಂಥಿಯ ಪ್ರಧಾನ ತಂತುಗಳು ಗ್ಲೂಕೋಸ್-ಅವಲಂಬಿತ ಇನ್ಸುಲಿನ್ ಸ್ರವಿಸುವಿಕೆಗೆ ಅಗತ್ಯವಿರುವ ಚಲನೆಯನ್ನು ಪ್ರದರ್ಶಿಸಿರುವುದನ್ನು ದೃಢಪಡಿಸಿದೆ. ಅವರು β ಜೀವಕೋಶಗಳ ಚಲನಶೀಲತೆಯನ್ನು  ಗ್ಲೂಕೋಸ್ ಸಂವೇದನೆಗೆ ಹೋಲಿಸಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣಾ ಶರೀರಶಾಸ್ತ್ರದಲ್ಲಿ ನಿರ್ಣಾಯಕವಾಗಿದೆ. ಈ ತಂತುಗಳ ಚಲನೆಯಲ್ಲಿ ಅಡಚಣೆಯು β ಜೀವಕೋಶದಲ್ಲಿನ ಕ್ಯಾಲ್ಸಿಯಂ ಒಳಹರಿವು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ತಡೆಯುತ್ತದೆ. ಮಾನವನ β ಜೀವಕೋಶಗಳು ಬಲವರ್ಧಿತ ತಂತು ಆನುವಂಶಿಕ ಅಭಿವ್ಯಕ್ತತೆಯನ್ನು ಹೊಂದಿದ್ದು, ಟೈಪ್ 2 ಮಧುಮೇಹಿಯಲ್ಲಿ ಚಲನಶೀಲ ತಂತು ಅನುವಂಶಿಕವು ಮಾರ್ಪಾಟಾಗಿರುತ್ತದೆ. ಇವರ ಆವಿಷ್ಕಾರವು ಪ್ರಧಾನ ತಂತುಗಳು, ಸಂವೇದನಾತ್ಮಕ ಮತ್ತು ಚಲನಶೀಲ ಕಾರ್ಯಗಳೆರಡನ್ನೂ ಹೊಂದಿರುವ ಕ್ರಿಯಾತ್ಮಕ ರಚನೆಗಳೆಂದು ತಿಳಿಸುದೆ ಹಾಗೂ ಮೇದೋಜ್ಜೀರಕ ಗ್ರಂಥಿಯ ತಂತುಗಳ ಚಲನೆಯು ಇನ್ಸುಲಿನ್ ಸ್ರವಿಸುವಿಕೆಯಲ್ಲಿ ನಿಯಂತ್ರಕ ಪಾತ್ರವನ್ನು ವಹಿಸುತ್ತದೆ ಎಂದು ದೃಢಪಡಿಸಿದೆ. ಇದು ಮಧುಮೇಹದ ಬಗ್ಗೆ ಹೊಸ ತಿಳುವಳಿಕೆಗೆ ಒಂದು ಮುನ್ನಡೆಗೆ ಕಾರಣವಾಗಬಹುದು.

ಸಂಶೋಧಕರು ತಮ್ಮ ಅಧ್ಯಯದಲ್ಲಿ ಮಾನವ ಮತ್ತು ಇಲಿಗಳೆರಡರ ಜೀವಂತ ಕೋಶ ಚಿತ್ರಣವನ್ನು ಬಳಸಿ,  ಮೇದೋಜೀರಕ β ಕೋಶ ತಂತುವಿನ ಚಲನೆ ಮತ್ತು ಗ್ಲೂಕೋಸ್ ಮೇಲೆ ಅದರ ಅವಲಂಬನೆಯನ್ನು ನಿರೂಪಿಸಲು ಬಳಸಿದರು. β ಜೀವಕೋಶದ ಪ್ರಧಾನ ತಂತುವಿನ ಚಲನಶೀಲತೆಯು ಗ್ಲೂಕೋಸ್ ಸಾಂದ್ರತೆಯಿಂದ ಬಾಧಿತವಾಗುತ್ತದೆ ಮತ್ತು ಇದು Ca2+ ಪ್ರತಿಕ್ರಿಯೆಗೆ ಸಂಯೋಜಿತವಾಗಿರುತ್ತದೆ ಹಾಗೂ ಇನ್ಸುಲಿನ್ ಸ್ರವಿಸುವಿಕೆಗೆ ನಿರ್ಣಾಯಕವಾಗಿತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ. ಅವರ ಅಧ್ಯಯನದ ಆಧಾರದ ಮೇಲೆ, ತಂತುವಿನ ಚಲನಶೀಲತೆಯು β ಕೋಶದ ಕಾರ್ಯದ ಅತ್ಯಗತ್ಯ ಅಂಶವಾಗಿದೆ ಎಂದು ತೀರ್ಮಾನಿಸಿದರು. ಈ ಪರಿಕಲ್ಪನೆಯನ್ನು, ಚಲನಶೀಲ ತಂತು ಆನುವಂಶಿಕಗಳು ಮಾನವ β ಜೀವಕೋಶಗಳಲ್ಲಿ ಸಮೃದ್ಧವಾಗಿವೆ ಮತ್ತು ಅವುಗಳ ಅಭಿವ್ಯಕ್ತಿತ್ವ ಟೈಪ್2 ಮಧುಮೇಹಿಯಲ್ಲಿ (ಟಿ2ಡಿ) ಮಾರ್ಪಾಟಾಗಿರುವುದನ್ನು ಗಮನಿಸಿ, ದೃಢಪಡಿಸಲಾಗಿದೆ, ಮಾನವನ ವಿವಿಧ ವಯಸ್ಸಿನ ಗುಂಪುಗಳಲ್ಲಿ, β ಜೀವಕೋಶಗಳಲ್ಲಿನ ಚಲನಶೀಲ ತಂತು ಆನುವಂಶಿಕಗಳ ಸಮೃದ್ಧಿತ್ವವು ಮಾನವನ ಆರೋಗ್ಯದ ಮೇಲೆ ತಂತುವಿನ ಚಲನಶೀಲತೆಯ ಪಾತ್ರವನ್ನು ಬಲವಾಗಿ ಸೂಚಿಸುತ್ತದೆ. ಈ ಅಧ್ಯಯನವು ತಂತುವಿನ ಚಲನೆಯಲ್ಲಿನ ಅಡಚಣೆಯು ಮೇದೋಜೀರಕ ಗ್ರಂಥಿಯ ಕ್ರಿಯೆಯ ಅಡಚಣೆಗೆ ಕಾರಣವಾಗಬಹುದು ಎಂದು ಹಾಗೂ ಮಾನವ ಚಯಾಪಚಯ ಸಂಬಂಧಿತ ರೋಗಗಳಿಗೆ ಈ ಅಧ್ಯಯನವು ಹೊಸ ಚಿಕಿತ್ಸಕಯ ಗುರಿಯನ್ನು ನೀಡುತ್ತದೆ ಎಂದು ಅದಾಜಿಸಲಾಗಿದೆ. ಈ ಅಧ್ಯಯನವು ಸೀಮಿತ ಬಯೋಇನ್ಫರ್ಮ್ಯಾಟಿಕ್ಸ್ ವಿಶ್ಲೇಷಣೆಗಳೊಂದಿಗೆ ಪ್ರಸ್ತುತಪಡಿಸಲಾಗಿದ್ದು, ಟಿ2ಡಿ ದತ್ತಾಂಶಳಲ್ಲಿ ರೋಗ-ಸಂಬಂಧಿತ ಬದಲಾವಣೆಗಳನ್ನು ಹೋಲಿಸಲು ಚಲನಶೀಲ ತಂತು ಆನುವಂಶಿಕಗಳ ಅಭಿವ್ಯಕ್ತಿತ್ವದ ಬಗ್ಗೆ ಹೆಚ್ಚು ಸಮಗ್ರ ಅಧ್ಯಯವು ಆಗಬೇಕಿದೆ ಎಂದು ಸಂಶೋಧಕರು  ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನವು ಪ್ರಧಾನ ತಂತುವಿನ ಚಲನಶೀಲತೆ ಮತ್ತು ಇತರ ಜೀವಕೋಶ ಪ್ರಕಾರಗಳ ಸಂವೇದನಾ ಕಾರ್ಯಗಳಲ್ಲಿ ಅದರ ಸಂಭಾವ್ಯ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಒಂದು ಹೊಸ ಅವಕಾಶವನ್ನು ತೆರೆಯಲಿದೆ. 

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content