ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಬೆನ್ನುಹುರಿ ಗಾಯದಿಂದಾದ ಪಾರ್ಶ್ವವಾಯುವಿನ ಚಿಕಿತ್ಸೆಯಲ್ಲಿ ಹೊಸ ಭರವಸೆ

1 min read

ಡಾ. ಆನಂದ್ ಆರ್
ಹಿರಿಯ ವೈಜ್ಞಾನಿಕ ಅಧಿಕಾರಿ

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಬೆನ್ನುಹುರಿ ಗಾಯದ ನಂತರ ಕ್ರಿಯಾತ್ಮಕ ಚಟುವಟಿಕೆಯನ್ನು ಯಶಸ್ವಿಯಾಗಿ ಮರುಕಳಿಸಬಹುದೆಂದು ತಮ್ಮ ಸಂಶೋಧನೆಯ ಮೂಲಕ ತೋರಿಸಿದ್ದಾರೆ. ತಂಡವು ಈ ತಮ್ಮ ಸಂಶೋಧನೆಯನ್ನು ಸೆಪ್ಟೆಂಬರ್ 21, 2023 ರಂದು ಸೈನ್ಸ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಿಸಿದೆ.

ಇದೇ ತಂಡವು ಇಲಿಗಳಲ್ಲಿ ಬೆನ್ನುಹುರಿ ಗಾಯದ ನಂತರ ನರ ಕೋಶಗಳನ್ನು ಸಂಪರ್ಕಿಸುವ ಸಣ್ಣ ನಾರುಗಳಾದ ಆಕ್ಸಾನ್ಗಳನ್ನು ಮತ್ತೆ ಬೆಳೆಯಲು ಪ್ರಚೋದಿಸುವ ಚಿಕಿತ್ಸಾ ವಿಧಾನವನ್ನು ಮತ್ತು ಬೆನ್ನುಹುರಿ ಗಾಯಗಳ ನಂತರ ನರ ನಾರುಗಳನ್ನು ಪುನರುತ್ಪಾದಿಸಬಹುದೆಂದು 2018 ರಲ್ಲಿ ನೇಚರ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಿಸಿತ್ತು.

ಭಾಗಶಃ ಹಾನಿಗೊಳಗಾದ ಬೆನ್ನುಹುರಿಯಿಂದಾಗುವ ಪಾರ್ಶ್ವವಾಯುವು ನಂತರ ಕ್ರಿಯಾತ್ಮಕ ಚೇತರಿಕೆಯನ್ನು ಕಂಡು ಕೊಳ್ಳುವುದು. ಆದರೆ, ಸಂಪೂರ್ಣ ಹಾನಿಗೊಳಗಾದ ಬೆನ್ನುಹುರಿಯಿಂದಾಗುವ ಪಾರ್ಶ್ವವಾಯುವಲ್ಲಿ ಈ ಕ್ರಿಯಾತ್ಮಕ ಚೇತರಿಕೆಯು ಸಂಭವಿಸುವುದಿಲ್ಲ. ತೀವ್ರ ಗಾಯಗಳ ನಂತರ ನರ ನಾರುಗಳ ಚೇತರಿಕೆಗೆ ಪುನರುತ್ಪಾದನೆಯನ್ನು ಉತ್ತೇಜಿಸುವ ತಂತ್ರಗಳು ಬೇಕಾಗುತ್ತವೆ. ಏಕ-ಕೋಶ ನ್ಯೂಕ್ಲಿಯರ್ ಆರ್.ಎನ್.ಎ, ಅನುಕ್ರಮವು ಇಂತದೊಂದು ತಂತ್ರವಾಗಿದ್ದು, ಇಲ್ಲಿ ಪುನರುತ್ಪಾದಿಸಬೇಕಾದ ನಿರ್ದಿಷ್ಟ ಆಕ್ಸಾನ್ ಗಳು ಕ್ರಿಯಾತ್ಮಕ ಶಕ್ತಿಯನ್ನು ಮರಳಿ ಪಡೆಯಲು ತಮ್ಮ  ವಾಸ್ತವಿಕ ಗುರಿಗಳೊಂದಿಗೆ ಮರುಸಂಪರ್ಕ ಹೊಂದುವುದು ಅಗತ್ಯವೆಂದು ಈ ಸಂಶೋಧನೆಯ ಮೂಲಕ ತೋರಿಸಿಕೊಡಲಾಗಿದೆ.

ಸೈನ್ಸ್ ಸಂಶೋಧನಾ ಪತ್ರಿಕೆಯಲ್ಲಿ ತಮ್ಮ ಹೊಸ ಅಧ್ಯಯನವನ್ನು ಪ್ರಕಟಿಸಿರುವ ಸಂಶೋಧನಾ ತಂಡವು ಮೊದಲು ಭಾಗಶಃ ಬೆನ್ನುಹುರಿ ಗಾಯದ ನಂತರ ನಡಿಗೆ ಸುಧಾರಣೆಯನ್ನು ಸಕ್ರಿಯಗೊಳಿಸುವ ನರ ಕೋಶ ಗುಂಪುಗಳನ್ನು ಗುರುತಿಸಲು ಸುಧಾರಿತ ಆನುವಂಶಿಕ ವಿಶ್ಲೇಷಣೆಯನ್ನು ಬಳಸಿತು. ನಂತರ ರಾಸಾಯನಿಕ ಸಂಕೇತಗಳನ್ನು ಬಳಸಿ ಸೊಂಟದ ಬೆನ್ನುಹುರಿಯಲ್ಲಿ ಈ ಆಕ್ಸಾನ್ ಗಳು ಅವುಗಳ ವಾಸ್ತವಿಕ ಗುರಿ ಪ್ರದೇಶದೆಡೆಗೆ ಪುನರುತ್ಪಾದನೆಗೊಳ್ಳಲು ಮಾರ್ಗದರ್ಶನ ನೀಡಿ ಆಕರ್ಷಿಸಲಾಯಿತು. ಈ ರೀತಿಯಾಗಿ ಸಂಪೂರ್ಣ ಬೆನ್ನುಹುರಿ ಗಾಯಗಳನ್ನು ಹೊಂದಿರುವ ಇಲಿಗಳು, ಭಾಗಶಃ ಗಾಯಗಳ ನಂತರ ಸ್ವಾಭಾವಿಕವಾಗಿ ನಡೆಯಲು ಪುನರಾರಂಭಿಸುವ ಇಲಿಗಳ ರೀತಿಯಲ್ಲಿ ನಡೆಯುವ ಸಾಮರ್ಥ್ಯವನ್ನು ಮರಳಿ ಪಡೆದವು.  ಈ ಮೂಲಕ ನರಘಾಸಿಯ ನಂತರ ಕ್ರಿಯಾತ್ಮಕ ಚೇತರಿಕೆಯನ್ನು ಹೊಂದುವಲ್ಲಿ ಪುನರುತ್ಪಾದಕ ಚಿಕಿತ್ಸೆಗಳು ಯಶಸ್ವಿಯಾಗಲು ಹಿಂದೆಂದೂ ತಿಳಿದಿರದ ವಿಷಯವನ್ನು ಬಹಿರಂಗಪಡಿಸಲಾಗಿದೆ. ಗಾಯಗೊಂಡ ಬೆನ್ನುಹುರಿಯಲ್ಲಿ ಅರ್ಥಪೂರ್ಣ ಚೇತರಿಕೆಯನ್ನು ಸಾಧಿಸಲು ಒಂದು ಚಿಕಿತ್ಸಾ ವ್ಯೆವಸ್ಥೆಯನ್ನು ಈ ಅಧ್ಯಯನವು ತೋರಿಸಿಕೊಟ್ಟಿದೆ. ಅಲ್ಲದೆ, ಇತರೆ ಕೇಂದ್ರ ನರಮಂಡಲದ ಗಾಯ ಮತ್ತು ಕಾಯಿಲೆಯಿಂದ ತ್ವರಿತ ಚೇತರಿಕೆಯನ್ನು ಸಾಧಿಸಲು ಈ ಅಧ್ಯಯನವು ಸಹಕಾರಿಯಾಗಲಿದೆ ಎಂದು ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ. ನಿರ್ದಿಷ್ಟ ನರಕೋಶದ ಉಪ ವಿಭಾಗಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳ ವಾಸ್ತವಿಕ ಗುರಿ ಪ್ರದೇಶಗಳಿಗೆ ಮರುಸ್ಥಾಪಿಸುವ  ತಂತ್ರವು ಮಾನವ ಮತ್ತು ಇತರೆ ದೊಡ್ಡ ಪ್ರಾಣಿಗಳಲ್ಲಿ ನರಶಾಸ್ತ್ರೀಯ ಕೆಲಸ ಕಾರ್ಯಗಳಲ್ಲಿ ಚೇತರಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಚಿಕಿತ್ಸೆಗಳ ಅಭಿವೃದ್ಧಿಗೆ ಗಮನಾರ್ಹ ಭರವಸೆಯನ್ನು ನೀಡಲಿದೆ ಎಂದು ಸಂಶೋಧಕರು ಭಾವಿಸುತ್ತಾರೆ.

– ಡಾ. ಆನಂದ್ ಆರ್
ಹಿರಿಯ ವೈಜ್ಞಾನಿಕ ಅಧಿಕಾರಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ksta.gok@gmail.com

Reference: Jordan W. Squair et al, Recovery of walking after paralysis by regenerating characterized neurons to their natural target region, Science (2023).

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content