ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಮಾನವತಾವಾದ: ಕಗ್ಗೊಲೆಯಾಗುತ್ತಿದೆಯೇ?  

1 min read
Author's Photo

‘ಇತಿಹಾಸದ ಘಟನೆಯನ್ನು ನೆನಪಿಸಿಕೊಳ್ಳಲಾಗದವರು ಅದನ್ನು ಪುನರಾವರ್ತಿಸಿ ಖಂಡನೆಗೊಳಪಡುತ್ತಾರೆ’ ಎಂದು ತತ್ವಜ್ಞಾನಿ ಜಾರ್ಜ್ ಸ್ಯಾಂಟಿಯಾನ ಒಮ್ಮೆ ಹೇಳಿದ್ದರು, ಉಕ್ರೇನ್ ನಲ್ಲಿನ ಯುದ್ಧವು ಇತಿಹಾಸ ಪುನರಾವರ್ತನೆಯಾಗುತ್ತಿದೆ ಎಂದು ನಮಗೆ ನೆನಪಿಸುತ್ತದೆ. ಎರಡನೆಯ ಮಹಾಯುದ್ಧದ ನಂತರ, 1955ರಲ್ಲಿ, ಬರ್ಟ್ರಾಂಡ್ ರಸ್ಸೆಲ್.ರವರು, ಆಲ್ಬರ್ಟ್ ಐನ್.ಸ್ಟೈನ್ ಮತ್ತು ವಿಜ್ಞಾನದ ಗಣ್ಯವ್ಯಕ್ತಿಗಳ ಸಹಯೋಗದೊಂದಿಗೆ, ರಸೆಲ್ – ಐನ್.ಸ್ಟೈನ್ ಪ್ರಣಾಳಿಕೆ ಎಂದೇ ಹೆಸರಾದ ಒಂದು ಪ್ರಣಾಳಿಕೆಯನ್ನು ಪಗ್ವಾಶ್ ಸಮ್ಮೇಳನದಲ್ಲಿ ಮಂಡಿಸಿದರು. ‘ಭವಿಷ್ಯದಲ್ಲಿ ಯಾವುದೇ ಮಹಾಯುದ್ಧದ ಸಂದರ್ಭದಲ್ಲಿ ಅಣ್ವಸ್ತ್ರಗಳನ್ನು ಬಳಸಲಾಗುವ ಸಾಧ್ಯತೆಯ ವಾಸ್ತವಾಂಶದ ದೃಷ್ಟಿಯಿಂದ ಮತ್ತು ಅಂತಹ ಅಣ್ವಸ್ತ್ರಗಳು ಮನುಕುಲದ ಅಸ್ತಿತ್ವಕ್ಕೆ ಬೆದರಿಕೆ ಹಾಕುತ್ತಿದ್ದು, ತಮ್ಮ ಉದ್ದೇಶವನ್ನು ಜಾಗತಿಕ ಯುದ್ಧದಿಂದ ಸಾಕಾರಗೊಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳುವಂತೆ ಹಾಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವಂತೆ ನಾವು ಜಗತ್ತಿನ ಸರ್ಕಾರಗಳನ್ನು ಒತ್ತಾಯಿಸುತ್ತೇವೆ ಮತ್ತು ಆ ಮೂಲಕ, ತಮ್ಮ ನಡುವಿನ ವಿವಾದದ ಇತ್ಯರ್ಥಕ್ಕೆ ಶಾಂತಿಯುತ ಮಾರ್ಗಗಳನ್ನು ಕಂಡು ಹಿಡಿಯುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ’ ಎಂದು ಸಮ್ಮೇಳನದಲ್ಲಿ ಸಂಕಲ್ಪ ಮಾಡಲಾಯಿತು. ಈ ಮನವಿಯು ಇಂದಿಗೂ ಪ್ರಸ್ತುತವಾಗಿದ್ದು, ಇದು ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ಮತ್ತು ಜಪಾನ್ ಮೇಲಿನ ಅಣುಬಾಂಬ್ ದಾಳಿ ಹಾಗೂ ಇನ್ನಿತರೆ ಘಟನೆಗಳಿಂದಾದ ಆಳವಾದ ಗಾಯಗಳ  ಹಿನ್ನೆಲೆಯಲ್ಲಿ ಪ್ರೇರೇಪಿತವಾದುದಾಗಿದೆ. ಹತ್ಯಾಕಾಂಡದ ನಂತರ, ಪ್ರಸಿದ್ಧ ಮನೋವೈದ್ಯ ವಿಕ್ಟರ್ ಇ. ಫ್ರಾಂಕ್.ರವರು ತಮ್ಮ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಎಂಬ ಪುಸ್ತಕದಲ್ಲಿ, ‘ಜಗತ್ತು ಕೆಟ್ಟ ಸ್ಥಿತಿಯಲ್ಲಿದೆ, ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡದ ಹೊರತು ಎಲ್ಲವೂ ಇನ್ನೂ ಹದಗೆಡುತ್ತದೆ ಎಂದು ಎಚ್ಚರಿಸಿದ್ದಾರೆ. ಔಪ್.ವಿಟ್ಸ್ ಉದಾರಣೆಯು ಮನುಷ್ಯನು ಏನನ್ನು ಮಾಡಬಲ್ಲ ಎಂಬುದನ್ನು ನಮಗೆ ತಿಳಿಸಿದೆ ಹಾಗೂ ಹಿರೋಶಿಮಾ ಘಟನೆಯು  ಅಪಾಯದ ಬಗ್ಗೆ ಏನಿದೆ ಎಂದು ತಿಳಿಸಿದೆ. ಆದ್ದರಿಂದ ನಾವು ಜಾಗರೂಕರಾಗೋಣ. ಉಕ್ರೇನ್.ನಲ್ಲಿ ಆಗುತ್ತಿರುವಂತೆ 1946 ರಿಂದಲೂ ಯುದ್ಧದಿಂದಾಗಿ ಜನಸಾಮಾನ್ಯರ ಜೀವಕ್ಕಿರುವ ನಿಜವಾದ ಅಪಾಯದ ಅರಿವು ನಮಗಿದೆ. ಎರಡನೆಯ ಮಹಾಯುದ್ಧವನ್ನು ಹೋರಾಡಿ ಗೆದ್ದರೂ ಸಹ ಶಾಂತಿಯು ಶಾಶ್ವತವಾಗಿ ಕಳೆದು ಹೋಗಿರುವಂತೆ ಭಾಸವಾಗುತ್ತದೆ. ಆದರೂ ಪ್ರಪಂಚದಾದ್ಯಂತ ಯುದ್ಧಗಳು ನಿಯಂತ್ರಿತ ಕ್ಷಿಪಣಿಗಳಿಂದ ಮತ್ತು ದಾರಿತಪ್ಪಿಸುವ ರಾಜಕೀಯ ನಾಯಕತ್ವದಿಂದ ನಡೆಯುತ್ತಿದೆ. ನರಮೇಧಗಳು ಮುಂದುವರಿದಿವೆ. ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿ ಹೊಸ ತಾಣಗಳನ್ನು ಅರಸಿ ಹೋಗುವಂತೆ ಮಾಡಲಾಗುತ್ತಿದೆ. ಸಂತೋಷದ ಜೀವನವನ್ನು ನಡೆಸಲು ಜನರಿಗಿರುವ ಅಧಿಕಾರವನ್ನು ಅವರದಲ್ಲದ ತಪ್ಪಿನಿಂದ ಕಸಿದು ಕೊಳ್ಳಲಾಗುತ್ತಿದೆ. ಮಾನವತಾವಾದವು ನಿಧಾನವಾಗಿ ಕೊಲ್ಲಲ್ಪಡುತ್ತಿದೆಯೇ? ಎಂಬ ಮೂಲಭೂತ ಪ್ರಶ್ನೆ ಎದುರಾಗುತ್ತಿದೆ. ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ಕಾಪಾಡುವ ಸಂಸ್ಥೆಯಾಗಿದ್ದು, ಇಂದು ಅಸಹಾಯಕವಾಗಿದೆಯೆಂದು ಭಾಸವಾಗುತ್ತಿದೆ. ಅದರ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾವು ಉಕ್ರೇನ್ ನಲ್ಲಿ ಯುದ್ಧ ನಡೆಸುತ್ತಿದೆ.  ಬುದ್ದಿಜೀವಿಗಳು ಮತ್ತು ಶಾಂತಿವಾದಿಗಳ ಮೌನದಿಂದಾಗಿ ವಿಶ್ವದ ರಾಜಕಾರಣವು ದಿನದಿಂದ ದಿನಕ್ಕೆ ದಬ್ಬಾಳಿಕೆದಾರರ ಪ್ರಾಬಲ್ಯಕ್ಕೊಳಗಾಗುತ್ತಿದೆಯೇ? ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಮ್ಮನ್ನು ತಪ್ಪು ದಾರಿಗೆಳೆದಿದ್ದಾರೆಯೇ? ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವನ ಒಳಿತಿಗಾಗಿಯೇ ಇರುವುದೇ ಅಥವಾ ಅವನ ವಿನಾಶಕ್ಕಾಗಿಯೋ?  ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ರವರು, ‘ವೈಜ್ಞಾನಿಕ ಶಕ್ತಿಯು ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಮೀರಿಸಿದೆ’ ಎಂದು ಹೇಳಿದ್ದಾರೆ. ಇಂದು, ಸರ್ಕಾರಗಳು ಹಿಂದೆಂದೂ ಕಾಣದಂತಹ ಸಾಮೂಹಿಕ ವಿನಾಶದ ಅತ್ಯಂತ ಮಾರಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿವೆ. ಇದರ ಪರಿಣಾಮವಾಗಿ, ನಾವು ಸ್ವಯಂ-ವಿನಾಶಕಾರಿಗಳಾಗಿ ಮಾರ್ಪಟ್ಟಿದ್ದೇವೆಯೇ? ಸಂಶೋಧಕ ಆಲ್ಫ್ರೆಡ್ ನೊಬೆಲ್ ರವರು ಕಂಡುಹಿಡಿದ ಡೈನಮೈಟ್ ಸ್ಫೋಟಕಗಳಿಂದಾದ   ವಿನಾಶವನ್ನು ನೆನಪಿಸಿಕೊಳ್ಳುವುದು ಇಲ್ಲಿ ಅಗತ್ಯವಾಗಿದೆ. ಈ ಮಾರಣಾಂತಿಕ ಆವಿಷ್ಕಾರದ ಪ್ರಾಯಶ್ಚಿತ್ತವಾಗಿ ವಿಶ್ವಶಾಂತಿಯನ್ನು ಉತ್ತೇಜಿಸಲು ಅವರು ನೊಬೆಲ್ ಪಾರಿತೋಷಕವನ್ನು ಸ್ಥಾಪಿಸಿದರು. ನೊಬೆಲ್ ರವರಂತೆ ತಾವೂ ಸಹ ಅಪರಾಧಿ ಮನೋಭಾವದಿಂದ ಪ್ರಯತ್ನಿಸಬಹುದೇ?  ಪ್ರಸಿದ್ಧ ಬ್ರಹ್ಮಾಂಡಶಾಸ್ತ್ರಜ್ಞ ಕಾರ್ಲ್ ಸಗಾನ್ ತನ್ನ ಪುಸ್ತಕ ‘ದಿ ಡೆಮನ್-ಹಾಂಟೆಡ್ ವರ್ಲ್ಡ್ – ಸೈನ್ಸ್ ಆಸ್ ಎ ಕ್ಯಾಂಡಲ್ ಇನ್ ದಿ ಡಾರ್ಕ್’ ನಲ್ಲಿ ಮ್ಯಾನ್ಹತ್ತಾನ್ ಪರಮಾಣು ಶಸ್ತ್ರಾಸ್ತ್ರ ಯೋಜನೆಯ ವೈಜ್ಞಾನಿಕ ನಿರ್ದೇಶಕರಾಗಿದ್ದ ಜೆ. ರಾಬರ್ಟ್ ಓಪನ್ಹೈಮರ್ ಮತ್ತು ಆಗಿನ ಅಮೇರಿಕಾದ ಅಧ್ಯಕ್ಷ ಹ್ಯಾರಿ ಟ್ರೂಮನ್ ನಡುವಿನ ಭೇಟಿಯನ್ನು ಉಲ್ಲೇಖಿಸುತ್ತಾರೆ. ಸಭೆಯಲ್ಲಿ “ವಿಜ್ಞಾನಿಗಳಿಗೆ ರಕ್ತಸಿಕ್ತ ಕೈಗಳಿವೆ, ಅವರಿಗೆ ಈಗ ಪಾಪದ ಅರಿವಾಗಿದೆ” ಎಂದು ಓಪನ್ಹೈಮರ್ ಪ್ರತಿಕ್ರಿಯಿಸುತ್ತಾರೆ. ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್.ಗಳನ್ನು ಎಸೆದದ್ದರ ಬಗ್ಗೆ ಅವರ ಉಲ್ಲೇಖವಿತ್ತು. ಟ್ರೂಮನ್ ಮತ್ತೆ ಓಪನ್ಹೈಮನ್.ರವರನ್ನು ಮತ್ತೆಂದೂ ನೋಡಲು ಬಯಸಲಿಲ್ಲ ಎಂದು ತೋರುತ್ತದೆ. ಹಾಗಾದರೆ ಸರ್ಕಾರಗಳನ್ನು ಯುದ್ಧಕ್ಕೆ ಪ್ರೇರೇಪಿಸುವುದು ಯಾವುದು? ಐನ್.ಸ್ಟೈನ್ 1934ರಲ್ಲಿ ‘ಫ್ರೆಂಡ್ಸ್ ಆಫ್ ಪೀಸ್’ಗೆ ಬರೆದ ಪತ್ರದಲ್ಲಿ ‘ಶಸ್ತ್ರಾಸ್ತ್ರ ಕೈಗಾರಿಕೆಯು ನಿಜವಾಗಿಯೂ ಮನುಕುಲವನ್ನು ಆವರಿಸಿರುವ ದೊಡ್ಡ ಅಪಾಯಗಳಲ್ಲಿ ಒಂದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದು ರಾಷ್ಟ್ರೀಯತೆಯ ಹಿಂದಿರುವ ಗುಪ್ತ ದುಷ್ಟ ಶಕ್ತಿಯಾಗಿದ್ದು, ಇದು ಎಲ್ಲೆಡೆಯೂ ವ್ಯಾಪಕವಾಗಿದೆ. ಕಳೆದ ವರ್ಷ ನಾನು ಒಬ್ಬ ಪ್ರಸಿದ್ಧ ಅಮೆರಿಕನ್ ರಾಜತಾಂತ್ರಿಕ ಅಧಿಕಾರಿಯನ್ನು ‘ಜಪಾನ್ ತನ್ನ ಬಲಪ್ರಯೋಗ ನೀತಿಯಿಂದ ದೂರವಿರಲು ವಾಣಿಜ್ಯ ಬಹಿಷ್ಕಾರದಿಂದ ಏಕೆ ಒತ್ತಾಯಿಸಲ್ಪಡಲಿಲ್ಲ’ ಎಂದು ಕೇಳಿದಕ್ಕೆ “ನಮ್ಮ ವಾಣಿಜ್ಯ ಹಿತಾಸಕ್ತಿಗಳು ತುಂಬಾ ಬಲವಾಗಿವೆ” ಎಂದು ಉತ್ತರಿಸಿದರು. ಮಿಲಿಟರಿ-ಕೈಗಾರಿಕಾ ವ್ಯವಸ್ಥೆಯು ಸಂಭಾವ್ಯ ಬೆದರಿಕೆಗಳು ಮತ್ತು ವ್ಯೂಹಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಪ್ರಬಲ ರಾಷ್ಟ್ರಗಳನ್ನು ಯುದ್ಧಕ್ಕಾಗಿ ಮನವೊಲಿಸುತ್ತದೆ. ಮಿಲಿಟರಿ ಪ್ರಾಬಲ್ಯವು ಅಧಿಕಾರದಲ್ಲಿರುವ ನಾಯಕರನ್ನು ಕುರುಡರನ್ನಾಗಿಸುತ್ತದೆ. ಪೌರಾಣಿಕ ಕಥೆಗಳಲ್ಲಿ ಉಲ್ಲೇಖಿಸಿರುವಂತೆ ದೇವರಿಂದ ವರವನ್ನು ಪಡೆದ ಭಕ್ತನು ಶಸ್ತ್ರಸಜ್ಜಿತನಾಗಿ ಕ್ರೌರ್ಯವನ್ನು ಮೆರೆದು ಸಿಕ್ಕವರನ್ನೆಲ್ಲಾ ಬಲಿಪಡೆಯುತ್ತಾನೆ.  ನೊಂದವರು ರಕ್ಷಣೆಗಾಗಿ  ದೇವರನ್ನು ಪ್ರಾರ್ಥಿಸುತ್ತಾರೆ, ನಂತರ ದೇವರು ಕ್ರೂರಿಯಾದ ಭಕ್ತನನ್ನು ನಾಶಪಡಿಸುತ್ತಾನೆ. ಕೊನೆಯಲ್ಲಿ, ಒಳ್ಳೆಯದು ಕೆಟ್ಟದ್ದರ ಮೇಲೆ ಗೆಲ್ಲುತ್ತದೆ. ಆದರೆ ವಾಸ್ತವಿಕ ಜಗತ್ತಿನಲ್ಲಿ, ಯುದ್ಧದಿಂದ ರಕ್ಷಿಸುವುದು ಮನುಷ್ಯನ ಬುದ್ಧಿವಂತಿಕೆಯೇ ಹೊರತು ಮೂರ್ಖತನವಲ್ಲ, ಬೌದ್ಧ ಧರ್ಮದ  ತತ್ವವು ಸ್ವರ್ಗ ಮತ್ತು ನರಕಗಳೆರಡರ ದ್ವಾರಗಳನ್ನು ತೆರೆಯಲು ಒಂದೇ ಒಂದು ಕೀಲಿಕೈ ಇದೆ ಎಂದು ಹೇಳುತ್ತದೆ. ಅದನ್ನು ನಿರ್ಧರಿಸುವುದು ಮನುಷ್ಯನಿಗೆ ಬಿಟ್ಟದ್ದು. ‘ಬ್ರಹ್ಮಾಂಡ ಮತ್ತು ಮಾನವನ ಮೂರ್ಖತನಗಳೆರಡೂ ಅನಂತವಾಗಿವೆ ಮತ್ತು ಮೊದಲನೆಯದರ ಬಗ್ಗೆ ನನಗೆ ಖಚಿತವಿಲ್ಲ ಎಂದು ಐನ್.ಸ್ಟೈನ್ ಹೇಳಿದ್ದಾರೆ. ಸಂಘರ್ಷಗಳು, ದುಃಖ ಮತ್ತು ದುಮನಗಳಿಂದ ಮುಕ್ತವಾದ ಜಗತ್ತಿನಲ್ಲಿ ಬದುಕಲು ನಾವು ಬಯಸುತ್ತೇವೆ; ಆ ಜಗತ್ತು ಹೆಚ್ಚು ಮಾನವೀಯ, ಆಧ್ಯಾತ್ಮಿಕ ಮತ್ತು ಸಂತೋಷದಾಯಕವಾಗಿರುತ್ತದೆ.

ಪ್ರೊ. ಬಿ. ಜಿ. ಮೂಲಿಮನಿ
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ವಿಶ್ರಾಂತ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾನಿಲಯ, ಕಲಬುರಗಿ
ಇ-ಮೇಲ್: bgmulimani70@gmail.com

ಪ್ರೊ. ಜೆ. ತೊಣ್ಣನ್ನವರ್
ನಿವೃತ್ತ ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ,
ಕರ್ನಾಟಕ ವಿಶ್ವವಿದ್ಯಾನಿಲಯ, ಕಲಬುರಗಿ
ಇ-ಮೇಲ್ : : jtonannavar.kud.phys@gmail.com  

ಕನ್ನಡಕ್ಕೆ ಅನುವಾದ: ಡಾ. ಆನಂದ್ ಆರ್
ಹಿರಿಯ ವೈಜ್ಞಾನಿಕ ಅಧಿಕಾರಿ,ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content