ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಜ್ಞಾನ, ಸಮಾಜ ಮತ್ತು ವೈಜ್ಞಾನಿಕ ಮನೋಧರ್ಮ – ಪ್ರೊ ಎಚ್. ಎ. ರಂಗನಾಥ್

1 min read

ಇಂದಿನ ಅತ್ಯಂತ ಕ್ಲಿಷ್ಟಕರವಾದ ಸಮಯದಲ್ಲಿ ಕೋವಿಡ್ ವೈರಾಣುವಿನ ನಿವಾರಣೆಗಾಗಿ ಪರಿಹಾರವನ್ನು ಕಂಡು ಹಿಡಿಯಬಲ್ಲ ವಿಜ್ಞಾನಿಗಾಗಿ ಜಗತ್ತೇ ಎದುರು ನೋಡುತ್ತಿದೆ. ಪ್ರಪಂಚಕ್ಕೆ ಆಗಾಗ್ಗೆ ಬಂದೆರಗಿದ ವೈರಾಣುಗಳ ಪರಿಹಾರ ವಿಜ್ಞಾನಿಗಳಿಂದಾಗಿರುವಂತೆಯೇ ಈಗಲೂ ಅದು ಸಾಧ್ಯವಾಗುತ್ತದೆ. ರಾಷ್ಟ್ರಕವಿ ಡಾ. ಜಿ.ಎಸ್.ಶಿರುದ್ರಪ್ಪನವರು ಇಂಥ ಭರವಸೆಯಿಂದ ತಮ್ಮ `ಶ್ರೀ ವಿಜ್ಞಾನಿಗೆ’ ಎಂಬ ಕವನದಲ್ಲಿ ವಿಜ್ಞಾನಿಗಳನ್ನು ತುಂಬಾ ಗೌರವದಿಂದ ಕಂಡಿದ್ದಾರೆ. ಅವರ ಕವನದ ಕೆಲವು ಸಾಲುಗಳು ಹೀಗಿವೆ :

  • ‘ಸದಾ ಪ್ರಶ್ನೆಗಳ ಬಾಗಿಲ ಬಡಿವ
  • ಹೊಸ ವಿಸ್ಮಯಗಳ ಕಿರಣವ ತೆರೆವ
  • ಸಾಕ್ಷಾತ್ಕಾರಕೆ ಜೀವವನೆರೆವ
  • ಶ್ರೀ ವಿಜ್ಞಾನಿಗೆ ನಮೋ ನಮೋ
  • ಪಾಚಿಗಟ್ಟಿರುವ ಮೌಢ್ಯವ ತೊಡೆವ
  • ವಿಚಾರ ಶಕ್ತಿಯ ಹೊನಲನು ತರುವ
  • ಅರಿವಿನ ಪರಿಧಿಯ ವಿಸ್ತರಿಸುವ
  • ಶ್ರೀ ವಿಜ್ಞಾನಿಗೆ ನಮೋ ನಮೋ’

ಡಾ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು “ವಿಜ್ಞಾನವನ್ನು ಬೇರೆಯವರು ಪ್ರಶ್ನಿಸುವ ಅಗತ್ಯವೇ ಇಲ್ಲ! ಏಕೆ ಅಂತ ಹೇಳಿದರೆ, ಪ್ರತಿ ಹೆಜ್ಜೆಯಲ್ಲೂ ವಿಜ್ಞಾನ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಲೇ ವಿಕಾಸವಾಗುತ್ತಾ ಹೋಗುವಂಥದ್ದು.” ಎಂದು ವಿಜ್ಞಾನದ ಅಪಾರ ಶಕ್ತಿಯನ್ನು ಕೊಂಡಾಡಿದ್ದಾರೆ.ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಆಹಾರ, ಗಾಳಿ, ನೀರಿನಷ್ಟೇ ಇಂದು ವಿಜ್ಞಾನ,ಮಾಹಿತಿ ತಂತ್ರಜ್ಞಾನ ಇತ್ಯಾದಿಗಳು ಅತ್ಯಂತ ಅವಶ್ಯಕವೆನಿಸಿವೆ. ಪ್ರಾಚೀನ ಕಾಲದಿಂದಲೂ  ಜನರ ಜೀವನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ದೊರೆಯುತ್ತಲೇ ಬಂದಿದೆ. ಮಾನವ ಇದುವರೆಗೆ ಅಜ್ಞಾತವಾಗಿದ್ದ ಎಷ್ಟೋ ವಿಷಯಗಳನ್ನು ಮತ್ತು ಪ್ರಕೃತಿಯಲ್ಲಿ ಅಡಗಿರಬಹುದಾದ ಸಮಸ್ತ ರಹಸ್ಯಗಳನ್ನು ಅನಾವರಣಗೊಳಿಸಲು ಬಹುಮಟ್ಟಿಗೆ ಶಕ್ತನಾಗಿದ್ದಾನೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ವಿಜ್ಞಾನಿಗಳಿಗೆ ಅಗೋಚರವಾದ ಅಥವಾ ಅವರ ಅರಿವಿಗೆ ಬಾರದಿರುವ ಕ್ಷೇತ್ರಗಳು ಅತ್ಯಂತ ಕಡಿಮೆ. ಭೂಮಿಯ ಎಲ್ಲ ಕೌತುಕಗಳಿಗೆ,ಸಮಸ್ಯೆಗಳಿಗೆ ವಿಜ್ಞಾನ ಪರಿಹಾರವನ್ನು ನೀಡೇ ನೀಡುತ್ತದೆ ಎನ್ನಲು ಅಸಾಧ್ಯ. ಆದರೆ ಎಲ್ಲ ವಿಷಯಗಳ ಬಗ್ಗೆ ವಿಜ್ಞಾನದ  ಹುಡುಕಾಟ ನಡೆಯುತ್ತಲೇ ಇರುತ್ತದೆ. ಇದು ಅನವರತ, ಅನಂತ.ಭಾರತದಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂದಿಸಿದ ಸಂಶೋಧನೆ ಪ್ರಾಚೀನ ಕಾಲದಿಂದಲೂ ಪರಿಚಿತವಾದ ಕ್ಷೇತ್ರಗಳೇ ಆಗಿದೆ. ಈಗಲೂ ಕೆಲವು ಸಂಗತಿಗಳು ಭಾರತೀಯ ಸಂಶೋಧನೆ ಎಂದೇ ಹೆಸರು ಪಡೆದಿದೆ.  ಭೂಮಿ ಚಪ್ಪಟೆಯಾಗಿದ್ದು, ನಿಂತಲ್ಲೇ ನಿಂತಿರುತ್ತದೆ ಎಂದು ನಂಬಿಕೊಂಡಿದ್ದ ದಿನಗಳಲ್ಲಿ ಭೂಮಿ ದುಂಡಗಿದೆ, ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ತಿಳಿವಳಿಕೆ ಭಾರತೀಯರಲ್ಲಿತ್ತು. ಬಹುಶಃ ಮಾನವನ ಲೆಕ್ಕಾಚಾರಕ್ಕೆ ಅಡಿಪಾಯ ಕೊಟ್ಟಿದ್ದೇ ಸೊನ್ನೆಯ ಶೋಧನೆ. ಆರ್ಯಭಟ ಕೊಟ್ಟ ಈ ಶೂನ್ಯ ಸಂಖ್ಯೆಯ ಮೇಲೆಯೇ ಇವತ್ತಿನ ಸಂಖ್ಯಾಶಾಸ್ತ್ರ ನಿಂತಿದೆ. ಸ್ವಾತಂತ್ರ್ಯ ಬಂದ ಮೇಲೆ ಅನೇಕ ಸಂಶೋದನಾ ಕೇಂದ್ರಗಳನ್ನು ಹಾಗೂ ಆ ವಿಷಯಗಳಲ್ಲಿ ತಂತ್ರಜ್ಞಾನವನ್ನು ಕೊಡುವ ಶಿಕ್ಷಣ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಇದರ ಪರಿಣಾಮವಾಗಿ ಯಾವುದೇ ಭಾರತೀಯನು ಹೆಮ್ಮೆ ಪಡುವಷ್ಟರ ಮಟ್ಟಿಗೆ ವಿಜ್ಞಾನ,ತಂತ್ರಜ್ಞಾನ ಕ್ಷೇತ್ರ ಅಭಿವೃದ್ದಿ ಸಾಧಿಸಿದೆ. ನೈಸರ್ಗಿಕ ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯವಸಾಯ, ಪರಮಾಣು ಸಂಶೋಧನೆ, ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರ ಮುಂತಾದುವುಗಳ ಸಂಶೋಧನೆಯಲ್ಲಿ ಭಾರತೀಯರು ಅಪಾರವಾದ ಯಶಸ್ಸನ್ನು ಗಳಿಸಿದ್ದಾರೆ. ಆ ದಿಸೆಯಲ್ಲಿ ಪ್ರಯತ್ನ ಸತತವಾಗಿ ಸಾಗುತ್ತಿದೆ. ಆದರೆ ಈ ಕ್ಷೇತ್ರಗಳಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯಲ್ಲ.  

ಹಲವು ಕ್ಷೇತ್ರಗಳಲ್ಲಿ ಭಾರತವಿನ್ನೂ ಕೆಲಮಟ್ಟಿಗೆ ಪರಾವಲಂಬಿಯೇ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ವೈಜ್ಞಾನಿಕ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ. ಇವೆಲ್ಲವೂ ದೇಶವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ಸಹಕರಿಸುತ್ತಿವೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಪರಾವಲಂಬಿಗಳಾಗದೆ ದೇಶದ ವೈಜ್ಞಾನಿಕ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸುವಷ್ಟೂ ಸಾಮರ್ಥ್ಯ ಪಡೆಯುವುದೇ ಭಾರತದ ಮುಖ್ಯ ಗುರಿಯಾಗಿದೆ. ವಿಜ್ಞಾನಿಗಳ ಎಲ್ಲ ಚಿಂತನೆಗಳೂ ಸಂಶೋಧನೆಯ ಫಲಗಳೂ ದೇಶದ ಜನಸಾಮಾನ್ಯರ ಬದುಕಿನಲ್ಲಿ ಬೀರಬೇಕಾದಷ್ಟು ಪರಿಣಾಮ ಬೀರಿದೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ವ್ಯವಸಾಯದ ಕ್ಷೇತ್ರದಲ್ಲಿ ನಮ್ಮ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳ ಪರಿಣಾಮವಾಗಿ ಇಂದು ನಾವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಗಳೂ ಮತ್ತು ಸ್ವಪರಿಪೂರ್ಣರೂ ಆಗಿರುತ್ತೇವೆ. ಇಂದು ನಾವು ಬರಗಾಲ, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಸಮಯದಲ್ಲೂ ಕಂಗೆಡದಂತೆ ಅವುಗಳನ್ನು ಎದುರಿಸುವಷ್ಟು ಆಹಾರ ಧಾನ್ಯ ಸಂಗ್ರಹದಲ್ಲಿ ಸಮರ್ಥರಾಗಿದ್ದೇವೆ. ಇದರೊಂದಿಗೆ ನಾವು ಆಹಾರ ಧಾನ್ಯವನ್ನು ರಫ್ತು ಮಾಡುವ ಸ್ಥಿತಿಯಲ್ಲಿದ್ದೇವೆ. ಇದಕ್ಕೆಲ್ಲಾ ಕಾರಣ ನಮ್ಮ ವೈಜ್ಞಾನಿಕ ಸಂಶೋಧನೆ ಮತ್ತು ನಮ್ಮ ರೈತರು ನಮ್ಮ ತಂತ್ರಜ್ಞಾನದಲ್ಲಿತ್ತಿರುವ ನಂಬಿಕೆ ಹಾಗೂ ಅದರ ಸದುಪಯೋಗದಿಂದ ಸಾಧ್ಯವಾಯಿತೆಂದು ತಿಳಿಯಬಹುದು. ಆದರೂ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಪದ್ಧತಿಗಳು ಬಿಟ್ಟುಹೋಗಿಲ್ಲ. ಈ ಬಗೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿ ದೇಶದ ಅಭಿವೃದ್ದಿ ಸಾಧನೆಗೆ ನೆರವಾಗುತ್ತಿದ್ದರೂ ಸಾಧಿಸಬೇಕಾದುದು ಇನ್ನೂ ಎಷ್ಟೋ ಇವೆ. ನಮ್ಮ ಪ್ರಯೋಗಗಳು, ಸಂಶೋಧನೆಗಳು ಜನಸಾಮಾನ್ಯರನ್ನು ತಲುಪುವುದು ಅತಿ ಮುಖ್ಯವಾದುದು. ಸಾಮಾನ್ಯ ಜನರ ಜೀವನ ಸುಖಮಯವಾಗಿ ಅವರ ಬದುಕು ಹಸನು ಮಾಡುವುದೇ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಮೂಲ ಉದ್ದೇಶವಾಗಿದೆ.

ವಿಜ್ಙಾನ ಮತ್ತು ತಂತ್ರಜ್ಙನ ಮಾನವನನ್ನು ದಾಸ್ಯದತ್ತ ಕೊಂಡೊಯ್ಯಬಾರದು. ಮಹಾತ್ಮ ಗಾಂಧೀಜಿಯವರು  ವಿಜ್ಞಾನವನ್ನು ಒಪ್ಪಿಕೊಂಡಿರಲಿಕ್ಕಿಲ್ಲ ಎಂಬ ಕಾರಣಕ್ಕಾಗಿ  ಅವರನ್ನು ವಿಜ್ಞಾನ ವಿರೋಧಿ ಎಂಬೊಂದು ಅಪಕಲ್ಪನೆ ಇದೆ. ಗಾಂಧೀಜಿ ಹೇಳಿದ ಏಳು ಸಾಮಾಜಿಕ ಪಾಪಗಳಲ್ಲಿ ವಿಜ್ಞಾನ ಐದನೆಯದ್ದು. ಅವರು ವಿಜ್ಞಾನದ ವಿರೋಧಿಯೇನಲ್ಲ, ಮಾನವೀಯತೆ ಇಲ್ಲದ ವಿಜ್ಞಾನ ಪಾಪ ಎಂದು ಅವರು ಪ್ರತಿಪಾದಿಸಿದರು. ಗಾಂಧೀಜಿಯವರಿಗೆ ತಕರಾರು ಇದ್ದದ್ದು ಯಂತ್ರಗಳು ಬರುವುದರ ಬಗ್ಗೆ ಅಲ್ಲ, ಆದರೆ ಅವುಗಳಿಂದ ಸೃಷ್ಟಿಯಾಗುವ ಅಸಮಾನತೆಯ ಬಗ್ಗೆ. ಹಿಂದ್‌ ಸ್ವರಾಜ್‌ನಲ್ಲಿ ನಾಗರಿಕತೆ ಕುರಿತು ಉತ್ತರಿಸುತ್ತಾ, ಅವರು ಹೇಳಿದ ಮಾತುಗಳು ಭವಿಷ್ಯ ನುಡಿದಂತೆ ಇವೆ. ಮನುಷ್ಯ ತಮ್ಮ ಕೈ-ಕಾಲುಗಳನ್ನು ಬಳಸಬೇಕಾಗಿ ಬರುವುದಿಲ್ಲ. ಒಂದು ಬಟನ್‌ ಒತ್ತಿದರೆ, ಉಡುಪು ತಮ್ಮಲ್ಲಿಗೆ ಬರುತ್ತದೆ. ಇನ್ನೊಂದು ಬಟನ್‌ ಒತ್ತಿದರೆ ನ್ಯೂಸ್‌ ಪೇಪರ್‌ ಬರುತ್ತದೆ,ಮೂರನೆಯ ಬಟನ್ ಒತ್ತಿದರೆ, ಕಾರು ಅವರಿಗಾಗಿ ಕಾಯುತ್ತಿರುತ್ತದೆ. ಬೇಕುಬೇಕಾದ್ದು ಮನುಷ್ಯನ ಎದುರು  ಬರುತ್ತವೆ. ತಂತ್ರಜ್ಞಾನವನ್ನು ಚಟದಂತೆ ಅಂಟಿಸಿಕೊಂಡಿರುವ ಈ ಕಾಲದಲ್ಲಿ ಗಾಂಧಿ ಮಾತುಗಳು ಇಂದಿನ ಬದುಕಿನ ವಿಮರ್ಶೆಯಂತೆ ಕಾಣುತ್ತದೆ. ತಂತ್ರಜ್ಞಾನ ನಮ್ಮನ್ನು ಅಗಾಧವಾಗಿ ವ್ಯಾಪಿಸಿಕೊಂಡಿರುವ ಹೊತ್ತಿನಲ್ಲಿ ಮಹಾತ್ಮ ಗಾಂಧಿ ಅವರ ಮಾನವೀಯ ನೆಲೆಯಲ್ಲಿ ವಿಮರ್ಶಕ ದೃಷ್ಟಿಕೋನದ ಅಗತ್ಯವಿದೆ ಎನಿಸುತ್ತದೆ.

’ವಸುಧೈವ ಕುಟುಂಬಕಂ’ ಎಂಬುದು ಸಾಧ್ಯವಾಗಬೇಕಾದರೆ ಮಾನವರ ದುರಾಸೆ ನಿಲ್ಲಬೇಕು, ಎಲ್ಲರಿಗೂ ಹಿತ ನೀಡುವ ವಿಜ್ಞಾನ ತಂತ್ರಜ್ಞಾನಗಳತ್ತ ಸಾಗಬೇಕು, ಮೊದಲು ಮಾನವನಾಗಬೇಕು, ಭೂಮಿಯ ಮೇಲಿನ ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದನ್ನು ಬೆಳಸಿಕೊಳ್ಳಬೇಕು. ಹಾಗಾದಾಗ ಮಾತ್ರ ಭೂಮಿ `ಸುಫಲೆ’ಯಾಗಿ, ಸಸ್ಯಶ್ಯಾಮಲೆಯಾಗಿ ಶೋಭಿಸುತ್ತಾಳೆ. ನಮ್ಮ ಇಂದಿನ ಎಲ್ಲ ಸಂಪನ್ಮೂಲ ಮುಂದಿನ ಪೀಳಿಗೆ ನಮಗಿತ್ತಿರುವ ಕೊಡುಗೆ, ಅದನ್ನು ಹಾಳುಗೆಡವದೇ ಇನ್ನಷ್ಟು ಉತ್ತಮವಾಗಿ ಅವರಿಗೆ ದಾಟಿಸುವುದು ನಮ್ಮ ಜವಾಬ್ದಾರಿ. ಈ ಸಂಪನ್ಮೂಲಗಳನ್ನು, ಹಿತಮಿತವಾಗಿ ಬಳಸುವುದಷ್ಟೇ ಅಲ್ಲದೇ ಅಭಿವೃದ್ಧಿ ಪಡಿಸುವುದನ್ನು ರೂಢಿಸಕೊಳ್ಳಬೇಕು. ಆದರೆ, ವಿಜ್ಞಾನ ಕಲಿತವರಲ್ಲಿಯೇ ಕೆಲವರು, ದೇಶ, ಜನಾಂಗಗಳನ್ನೇ ನಾಶಮಾಡುವ ತಂತ್ರಾಗಮದಲ್ಲಿ ತೊಡಗಿದ್ದಾರೆ. ಡಾ.ಕೆ ಶಿವರಾಮಕಾರಂತರು ಹೇಳುವಂತೆ ”ಭಾರತದಲ್ಲಿ ವಾಸಿಸುವ ನಮಗೆ ಪರಿಸರವನ್ನು ಕುರಿತ ಜ್ಞಾನ ತೀರ ಕಡಿಮೆ. ಪಶು ಪಕ್ಷಿಗಳಿಗೂ, ಮಾನವ ಬಳಗಕ್ಕೂ ಏನು ಸಂಬಂಧವಿದೆಯೆಂದು ನಮಗಿನ್ನೂ ತಿಳಿದಿಲ್ಲ. ಆದರೂ ನಾವು ಬುದ್ಧನಿಂದ ಅಹಿಂಸಾ ಧರ್ಮದ ಬೋಧನೆ ಪಡೆದವರು! ನಮ್ಮ ಪುರಾತನ ಋಷಿಗಳು ಅತಿ ಸೂಕ್ಷ್ಮವಾದ ಜೀವಾಣುವಿನಲ್ಲಿಯೂ ಬ್ರಹ್ಮನಿದ್ದಾನೆ ಎಂದವರು. ಹೀಗೆ ಮತ ಧರ್ಮಗಳ ಪ್ರಭಾವ ನಮ್ಮ ಮೇಲೆ ವಿಪರೀತ ಬಿದ್ದುದರಿಂದಲೋ ಏನೋ. ಆ ಬ್ರಹ್ಮನನ್ನು ನಾವು ನಿಸರ್ಗದಲ್ಲಿ ಕಾಣಲು ಬಯಸುವುದಿಲ್ಲ! ಕಲಿಯುಗದಲ್ಲಿ ಬ್ರಹ್ಮನ ಬದಲು ದುಡ್ಡೇ ಸರ್ವಸ್ವ – ಎಂಬ ಆರಾಧನೆಗೆ ತೊಡಗಿದ್ದೇವೆ. ಪ್ರಕೃತಿ ಸಂಪತ್ತನ್ನು ನಾವು ಇಂದು ದೈನಂದಿನ ನಮ್ಮ ಲಾಭಕ್ಕಾಗಿ ಸುಲಿಯುತ್ತಿದ್ದೇವೆಯೇ ಹೊರತು, ನಾಳಿನ ಯೋಚನೆ ನಮಗಿಲ್ಲ ಎಂಬಂತೆ ವರ್ತಿಸುತ್ತಿದ್ದೇವೆ.” ಆದ್ದರಿಂದ ವಿಜ್ಞಾನವನ್ನು ಸಕಲ ಜೀವರಾಶಿಯ ಒಳತಿಗಾಗಿ ಹೆಜ್ಜೆ ಇಡುವತ್ತ, ಬೆಳಕಿನತ್ತ ಸಾಗಿಸಬೇಕಿದೆ. ವಿಜ್ಞಾನ ತಿಳಿಸುವುದೇ ಎಲ್ಲಾ ಜೀವಿಗಳೊಡಗೂಡಿ ಬದುಕುವುದನ್ನು, ಪರಿಸರ ಸ್ನೇಹಿಯಾಗಿ ಬದುಕುವ ರೀತಿಯನ್ನು, ಸರಳ ಸಮೃದ್ಧಿ ಜೀವನವನ್ನು ಹಾಗೂ ನೆಮ್ಮದಿಯಾಗಿ ಸಹಬಾಳ್ವೆ ನಡೆಸುವುದನ್ನು. ವಿಜ್ಞಾನ ಬೋಧಿಸುವುದು ನೀನೂ  ಬದುಕು, ಇತರ ಜೀವಿಗಳನ್ನು ಬದುಕಲು ಬಿಡು.

ಪ್ರಸ್ತುತ ಸಮಾಜ ವಿಜ್ಞಾನ ಹಾಗೂ ತಂತ್ರಜ್ಞಾನದ ಜಗತ್ತಿನಲ್ಲಿ ಬದುಕುತ್ತಿದ್ದರೂ ಅತೀ ಕಡಿಮೆ ಕಡಿಮೆ ಜನರಿಗೆ ಇದರ ಬಗೆಗೆ ತಿಳಿವಳಿಕೆ ಇದೆ ಹೀಗಾಗಿ ವಿಜ್ಞಾನಿಗಳು ಹೊಸ ಸಂಶೋಧನೆಗಳನ್ನು ಜನರಿಗೆ ತಲುಪಿಸುವ ಬಹುದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ ಇಂದು ಸಾಮಾನ್ಯ ಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸಮರ್ಪಕವಾದ ತಿಳಿವಳಿಕೆ ಇಲ್ಲ. ಇತ್ತೀಚೆಗೆ ಕೋವಿದ್-19ನ್ನು ಎದುರಿಸುವಲ್ಲಿ ನಮ್ಮ ಜನ ನಡೆದುಕೊಂಡ ರೀತಿ ಕೂಡ ಭಯವನ್ನು ಹುಟ್ಟಿಸುತ್ತದೆ. ಇದು ಭವಿಷ್ಯದಲ್ಲಿ ಅತ್ಯಂತ ಅಪಾಯಕಾರಿ ಏಕೆಂದರೆ ಜನಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಅರಿವು ಇಲ್ಲವೆಂದಾದರೆ ಭವಿಷ್ಯದಲ್ಲಿ ಜ್ವಲಂತ ಸಮಸ್ಯೆಗಳ ಕುರಿತಂತೆ ಜನರಿಗೆ ಪ್ರಜ್ಞೆಯೇ ಇಲ್ಲವೆಂದಾದರೆ ಭವಿಷ್ಯದಲ್ಲಿ ಕಾರ್ಮೋಡ ಕವಿಯಲಿದೆ ಎಂದೇ ಅರ್ಥ. ಆಲೋಚನೆ ಮಾಡದೇ ಮಾಹಿತಿ ವರ್ಗಾವಣೆ ಮಾಡುವಲ್ಲಿ ನಮ್ಮ ಜನ ನಿಪುಣರು.ಇದರಿಂದ ಸತ್ಯಕ್ಕಿಂತ ಹೆಚ್ಚಾಗಿ ಅಸತ್ಯವೇ ಹರಡುತ್ತಿದೆ.ಇಂಥ ಸಂಧರ್ಭದಲ್ಲಿ  ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಹೇಗೆ ಬಗೆ ಹರಿಸಬೇಕು ಎಂಬುದು ವಿಜ್ಞಾನಿಗಳ ಸಮುದಾಯದ ಮುಂದೆ ಇರುವ ಬಹುದೊಡ್ಡ ಸವಾಲು. ಜನರನ್ನು ಸುಶಿಕ್ಷಿತಗೊಳಿಸುವುದೆಂದರೆ ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಮಾಹಿತಿ ಬಿತ್ತುವುದು ಹಾಗೂ ವೈಜ್ಞಾನಿಕ ಅಂಕಿ-ಅಂಶ ಕುರಿತಂತೆ ಜನರಲ್ಲಿ ಪ್ರಜ್ಞೆ ಮೂಡಿಸುವುದು ಎಂದೇ ಅರ್ಥ. ವಿಜ್ಞಾನಿಗಳ ಕೆಲಸ ಬಹುಮುಖ್ಯವಾಗಿರುವುದು ಕೇವಲ ಸಂಶೋಧನೆ, ಅನುಷ್ಠಾನ ಹಾಗೂ ಜ್ಞಾನದ ವರ್ಗಾವಣೆ ಮಾತ್ರವಲ್ಲ ಬದಲಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಸಂಶೋಧನೆಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡುವುದು ವಿಜ್ಞಾನಿಗಳ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಡಾ.ಎಚ್.ನರಸಿಂಹಯ್ಯ ತಮ್ಮ ‘ವಿಜ್ಞಾನ ಮತ್ತು ಸಮಾಜ’ ಎಂಬ ಪ್ರಬಂಧದಲ್ಲಿ ವಿವರಿಸಿರುವಂತೆ “ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಬೇರೆ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದು ಅವಶ್ಯಕ. ವಿಜ್ಞಾನಿಗಳು ಹೆಚ್ಚಿನ ಶಿಕ್ಷಣವನ್ನು ಪಡೆದ ಧೀಮಂತರಾಗಿರುವುದರಿಂದ ಅವರು ತಮ್ಮ ಜ್ಞಾನವನ್ನು ಸಾಮಾನ್ಯ ವ್ಯಕ್ತಿಗಳ ಮನೋಭಾವವನ್ನು ತಿದ್ದುವ ಕಾರ್ಯದಲ್ಲಿ ಉಪಯೋಗಿಸಿ, ಸಮಾಜದ ಸುಧಾರಣೆಗೆ ಸಹಾಯಕರಾಗಬೇಕು. ವಿಜ್ಞಾನದ ಮತ್ತು ವೈಜ್ಞಾನಿಕ ಮಾರ್ಗಗಳು ಜನಪ್ರಿಯವಾಗುವಲ್ಲಿ ವಿಜ್ಞಾನಿಯ ಪ್ರಾಮುಖ್ಯ ಬಹಳ ಹಿರಿದಾದುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾತೃಭಾಷೆಗಳಲ್ಲಿ, ಇಂಗ್ಲೀಷ್‍ನಲ್ಲಿ ಜನಪ್ರಿಯ ಲೇಖನಗಳನ್ನು ಬರೆಯುವುದು ಮತ್ತು ಉಪನ್ಯಾಸ ಕೊಡುವುದು ಈ ದಿಸೆಯಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕು. ವಿಜ್ಞಾನಿಯ ಮನೋಭಾವವು ಅವನು ದಂತಗೋಪುರದಲ್ಲಿರುವ ಅಪೂರ್ವ ಬುದ್ದಿಶಾಲಿ ಎಂಬ ಭಾವನೆಯನ್ನು ಜನರಲ್ಲಿ ಉಂಟು ಮಾಡುವ ರೀತಿಯಲ್ಲಿ ಇರಬಾರದ್ದು. ಸಾಮಾನ್ಯ ಜನತೆ ವಿಜ್ಞಾನಿಯನ್ನು ವಿಶೇಷ ಜಾತಿಗೆ ಸೇರಿದ ಪ್ರಾಣಿ ಎಂದು ಅಂದುಕೊಳ್ಳುವಂತಾಗಬಾರದು. ಒಟ್ಟು ಸಮಾಜದ ದುಡಿಮೆಯಲ್ಲಿ, ಶಿಕ್ಷಣವನ್ನು ಪಡೆದಿರುವ ವಿಜ್ಞಾನಿ ಸಾಮಾನ್ಯ ಜನರ ಯೋಚನಾಶಕ್ತಿಯನ್ನು ಬೆಳೆಯಿಸುವಲ್ಲಿ ಶ್ರಮಿಸುವುದು ಆತನ ಕರ್ತವ್ಯವೇ ಹೊರತು ಉಪಕಾರವೇನೂ ಅಲ್ಲ. ಇಂತಹ ಸನ್ನಿವೇಶಗಳು ನಡೆಯುವ ಸಂದರ್ಭಗಳಲ್ಲಿ ಜನಪ್ರಿಯ ಉಪನ್ಯಾಸಗಳನ್ನು, ಉಪಯುಕ್ತ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಿದರೆ ವಿಜ್ಞಾನದಲ್ಲಿ ಆಸಕ್ತರಾಗಿರುವ ಬಹುಸಂಖ್ಯಾತ ವಿದಾರ್ಥಿಗಳಿಗೆ, ಸಾರ್ವಜನಿಕರಿಗೆ ಸಹಾಯಕವಾಗುತ್ತದೆ.”

ವಿದೇಶದ ವಿಜ್ಞಾನಿಗಳು ನಮಗಿಂತ ಬಹುಮುಂದೆ ಹೋಗಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅವರು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ ಪ್ರಯತ್ನ ಮಾಡದಿರುವುದು. ಅಷ್ಟೇ ಅಲ್ಲ ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಜನಸಾಮಾನ್ಯರಿಗೆ ವಿಜ್ಞಾನದ ಅರಿವು ಮೂಡಿಸುವುದಷ್ಟೇ ಅಲ್ಲದೆ ಆಗಾಗ್ಗೆ ಹೊರಬಂದು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದೂ ಮುಖ್ಯ. ಇತ್ತೀಚೆಗಂತೂ ಕೋವಿಡ್ ನಂಥ ವಿಚಾರಗಳಲ್ಲಿ ವಿಜ್ಞಾನಕ್ಕಿಂತ ಸಾಮಾಜಿಕ ಮಾಧ್ಯಮಗಳೇ ಸದ್ದು ಮಾಡುತ್ತಿವೆ. ಅದನ್ನು ಸತ್ಯಸ್ಯ ಸತ್ಯವೆಂದು ನಂಬಿಬಿಡುವ ಜನರೂ ಇದ್ದಾರೆ. ಇದರಿಂದ ಕೋವಿಡ್ ರೋಗಿಗಳ ಸಂಖ್ಯೆ ಏರುತ್ತಿದೆಯೇ ಹೊರತು ತಿಳಿವಳಿಕಸ್ಥರ ಸಂಖ್ಯೆ ಏರುತ್ತಿಲ್ಲ. ಇಂಥ ಹಲವು ಉದಾಹರಣೆಗಳನ್ನು ನೀಡಬಹುದು.

ನಮ್ಮ ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ ಕುಳಿತು ಸಂಶೋಧನೆ ನಡೆಸುವವರು. ತಮ್ಮ ಸಂಶೋಧನಾ ಫಲಿತಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಿಸುತ್ತಾರೆ. ಅದು ಸರಿ, ಆದರೆ ಅದನ್ನೇ ದೇಶ ಭಾಷೆಗಳಲ್ಲಿ ಸಾಮಾನ್ಯರಿಗೆ ತಿಳಿವಂತೆ ಮಾಡಲು ಪ್ರಯತ್ನಿಸುವುದಿಲ್ಲ. ಜನಸಾಮಾನ್ಯರಿಗೆ ಅವುಗಳನ್ನು ವಿವರಿಸುವುದರಲ್ಲಿ ಅರ್ಥವಿಲ್ಲ ಎಂಬುದು ಬಹುತೇಕ ವಿಜ್ಞಾನಿಗಳ ತಿಳಿವಳಿಕೆ. ಇಲ್ಲಿ ನನಗೆ ಡಾ. ಶಿವರಾಮ ಕಾರಂತರ ನೆನಪಾಗುತ್ತದೆ. ಅವರು ಪ್ರಯೋಗಾಲಯದಲ್ಲಿ ಕೂತ ಹಲವು ಪದವಿಗಳನ್ನು ಪಡೆದ ವಿಜ್ಞಾನಿಯಲ್ಲ. ಅವರು ಮಕ್ಕಳಿಗಾಗಿ ಮೂರು ಸಂಪುಟಗಳ ಬಾಲಪ್ರಪಂಚ, ನಂತರ ಮೂರು ಸಂಪುಟಗಳ ವಿಜ್ಞಾನ ಪ್ರಪಂಚ ಹೊರತಂದರು. ಈ ಸಂಪುಟಗಳು ಕನ್ನಡ ವಿಜ್ಞಾನ ಸಾಹಿತ್ಯದ ಮೈಲಿಗಲ್ಲುಗಳು. ಶಿವರಾಮಕಾರಂತರು ಹಲವು ವಿಜ್ಞಾನ ಪುಸ್ತಕಗಳನ್ನು ಬರೆದರು. ಮನಸ್ಸಿಗೆ ಮುದ ನೀಡಿದ ಇಂಗ್ಲೀಷಿನ ವಿಜ್ಞಾನ ಪುಸ್ತಕ ದೊರೆತರೆ ಕನ್ನಡದ ಜನರಿಗಾಗಿ ಅನುವಾದಿಸಲು ಕಾರಂತರು ಮುಂದಾಗುತ್ತಿದ್ದರು. ಇಂಗ್ಲೀಷಿನಲ್ಲಿ ರಾಶೆಲ್ ಕಾರ್ಸನ್ ಸುಪ್ರಸಿದ್ದ ಜನಪ್ರಿಯ ವಿಜ್ಞಾನ ಲೇಖಕರು. ಅವರ “ The Sea Around Us” ಪುಸ್ತಕವನ್ನು ಓದಿದ ಕಾರಂತರಿಗೆ ಕನ್ನಡಕ್ಕೆ ಅನುವಾದಿಸುವ ಉತ್ಸಾಹ ಹುಟ್ಟಿತು. ಅದರ ಫಲವೇ ”ನಮ್ಮ ಸುತ್ತಲಿನ ಕಡಲು”, ನಂತರದ ದಿಗಳಲ್ಲಿ ಹಲವಾರು ಪುಸ್ತಕಗಳನ್ನು ಹೊರತಂದು ವಿಜ್ಞಾನ ಸಾಹಿತ್ಯ ಬೆಳೆಸಿದ್ದಾರೆ

ವಿಜ್ಞಾನದ ಬಗೆಗಿನ ತಿಳಿವಳಿಕೆಯಷ್ಟೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಜವಾಬ್ದಾರಿ ವಿಜ್ಞಾನಿಗಳದ್ದೂ ಆಗಿದೆ. ಈಗ ಈ ಪ್ರಯತ್ನವನ್ನು ವಿಜ್ಞಾನದ ಪದವಿ ಪಡೆಯದವರೇ ಹೆಚ್ಚು ಮಾಡುತ್ತಿದ್ದಾರೆ.  ನಮ್ಮ ಭಾರತದ ಸಂವಿಧಾನದಲ್ಲೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಎಲ್ಲಾ ನಾಗರಿಕರ ಮೂಲಭೂತ ಕರ್ತವ್ಯ ಎಂದು ಹೇಳಿದೆ.  ವೈಜ್ಞಾನಿಕ ಮನೋಭಾವ ಎನ್ನುವುದು ಒಂದು ಒಂದು ನಿಲುವು ಅಥವಾ ಜೀವನ ವಿಧಾನ.    ಜ್ಞಾನವನ್ನು ಬಳಸಲು ಬುಧ್ದಿವಂತಿಕೆಯೂ ಬೇಕು ನೈತಿಕತೆಯೂ ಇರಬೇಕು.  ವೈಜ್ಞಾನಿಕ ಮನೋಭಾವದ ಪ್ರಭಾವವು ನೇರವಾಗಿ ವಿಜ್ಞಾನದ ಮೇಲೆ ಹೆಚ್ಚಾಗಿ ಆಗುವುದಕ್ಕಿಂತಲೂ, ಸಮಾಜ ಮತ್ತು ಮಾನವರು ಯೋಚಿಸುವ, ಪ್ರತಿಕ್ರಿಯಿಸುವ ಅಥವಾ ವ್ಯವಹರಿಸುವ ವಿವಿಧ ವಿಧಾನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ.    

ಇಂದಿನ ಯುವಜನತೆ ವಿಜ್ಞಾನವನ್ನು ಒಂದು ಶೋಧದ, ಸೃಜನಶೀಲ ಚಟುವಟಿಕೆಯ ವಿಷಯವನ್ನಾಗಿ ಪರಿಗಣಿಸುವುದೇ ಇಲ್ಲ. ಅದು ಹಣ ಗಳಿಸಿಕೊಡುವ ಒಂದು ಮಾರ್ಗ ಮಾತ್ರವಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ ಬಿಟ್ಟರೆ ಬದುಕೇ ಇಲ್ಲವೇನೋ ಎಂಬ ಧೋರಣೆ ಬೆಳೆದಿದೆ. ಸಹಜ ವಿಜ್ಞಾನದ ಕಡೆಗೆ ಗಮನ ನೀಡುವವರ ಸಂಖ್ಯೆ ಇಳಿಮುಖವಾಗಿದೆ. ವಿಜ್ಞಾನ ಎಂಬುದು ಪ್ರೀತಿಯ ವಸ್ತುವಾಗಲೇ ಇಲ್ಲ. ಇದಕ್ಕೆ ನಮ್ಮ ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ವ್ಯವಸ್ಥೆ ಕಾರಣವಾಗಿದೆ. ಇದರಿಂದ ಯುವಕರನ್ನು ಹೊರತರುವ ಕೆಲಸವಾಗಬೇಕಿದೆ.

ವೈಜ್ಞಾನಿಕ ಮನೋಧರ್ಮ ಎಲ್ಲರಿಗೂ ಅಗತ್ಯ. ಆದರೆ ವಿಶೇಷವಾಗಿ ವಿದ್ಯಾರ್ಥಿಗಳನ್ನು ಈ ಮನೋಧರ್ಮಕ್ಕೆ ಹೊಂದಿಸಬೇಕು.  ಶಾಲೆಗೆ ಬರುವ ಮಕ್ಕಳಲ್ಲಿ ಸಾಮಾಜಿಕವಾದ ಹಲವು ಪೂರ್ವಾಗ್ರಹಗಳಿರುತ್ತವೆ. ಅವುಗಳನ್ನು ಪರಿಶೀಲಿಸಿ ಸೂಕ್ತವಾದದ್ದನ್ನು ಉಳಿಸಿ ಹೊಸ ಮಾರ್ಗ ತೋರಿಸುತ್ತಾ ಸಮರ್ಥ ವ್ಯಕ್ತಿಯನ್ನಾಗಿ ಮಾಡುವುದರ ಜೊತೆಯಲ್ಲಿ ಭಾರತದ ಅಮೂಲ್ಯ ನಾಗರೀಕರನ್ನಾಗಿ ಸಜ್ಜುಗೊಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ ಮತ್ತು ಅನ್ವೇಷಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು. ಇವು ನಮ್ಮ ಮೂಲಭೂತ  ಕರ್ತವ್ಯಗಳಾಗಿವೆ. ಮಹಾಕವಿ ಕುವೆಂಪು ಅವರ ಮಾತು ಇಲ್ಲಿ ಗಮನಾರ್ಹವಾಗಿದೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವ ಮಾನವನನ್ನಾಗಿ ಮಾಡುವುದು ಶಿಕ್ಷಣದ ಕರ್ತವ್ಯವಾಗಬೇಕು”. ವಿದ್ಯಾರ್ಥಿಗಳಿಗೆ  ಒಮ್ಮೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದರೆ ಅದು ಸುಲಭ ಹಾಗೂ ನಿಮ್ಮಲ್ಲಿ ಅನ್ವೇಷಿಸುವ, ಅನ್ವಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಉನ್ನತ ವಿದ್ಯಾಭ್ಯಾಸದ ಹಂತದಲ್ಲಿ ಯಾವುದೇ ವಿಭಾಗದಲ್ಲಿ ಕಲಿತರೂ ಆ ವಿಷಯಗಳಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳನ್ನು ತೊಡಗಿಸಿಕೊಳ್ಳಲು ಸಹಾಯಕ. ಜನರನ್ನು ಮೌಢ್ಯದಿಂದ ತಿಳಿವಳಿಕೆಯತ್ತ ತರಬೇಕಿದೆ. ವಿಜ್ಞಾನಿಗಳು ಈ ಕೆಲಸ ಮಾಡಬೇಕಿದೆ. ಡಾ. ಎಚ್ ನರಸಿಂಹಯ್ಯ ಅವರ ಮಾತನ್ನು ನೆನಪಿಸಬಯಸುತ್ತೇನೆ “ನಮ್ಮ ದೇಶವು ನೂರಾರು ವರ್ಷಗಳಿಂದ ಎದುರಿಸುತ್ತಿರುವ ಜಟಿಲವಾದ ಸಮಸ್ಯೆಗಳನ್ನು ವೈಜ್ಞಾನಿಕ ಮಾರ್ಗಗಳಿಂದ ಮಾತ್ರ ಪರಿಹಾರಿಸಲು ಸಾಧ್ಯ. ನಮ್ಮ ಸಮಾಜ ಎದುರಿಸುತ್ತಿರುವ ಜಾತಿಯಂತಹ ಸಾಮಾಜಿಕ ಪಿಡುಗುಗಳ ಪರಿಹಾರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳಿಂದ ಮಾತ್ರ ಸಾಧ್ಯ. ಆಗ ಮಾತ್ರ ಮಾನವೀಯ ಮೌಲ್ಯ ಮತ್ತು ನೀತಿ ಅವಲಂಬಿತ ವಿಶ್ವಧರ್ಮ ರೂಪಿತವಾಗಬಹುದು. ಧರ್ಮವು ನೀತಿಸ್ವರೂಪವನ್ನು ಹೊಂದಿರುವಂತಹದು. ಆ ರೀತಿಯ ಧರ್ಮವು ರಾಷ್ಟ್ರೀತೆಯಗಳ ಮೂಲವಾದ ಬೇಲಿಯನ್ನು ದಾಟಿ ಸ್ಥಾಪಿತವಾಗಬೇಕಾದರೆ ವಿಶ್ವಮಾನ್ಯತೆಯನ್ನು ಹೊಂದಿರುವ ವಿಜ್ಞಾನದ ತತ್ವಗಳನ್ನು ಅನ್ವಯಿಸುವುದರಿಂದ ಮಾತ್ರ ಸಾಧ್ಯ. ವಿಜ್ಞಾನ ಮತ್ತು ಅದರ ಬಳಕೆಯು, ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯ ಪ್ರವೃತ್ತವಾದರೆ ಬಡತನದ ನಿರ್ಮೂಲನ, ಶೋಷಣೆಯ ನಾಶ ಸಾಧ್ಯ. ಅದು ಪ್ರಗತಿವಿರೋಧಿ ಸಿದ್ದಾಂತಗಳನ್ನು, ಸ್ವಹಿತಾಸಕ್ತಿಗಳನ್ನು ದೂರಮಾಡಬಲ್ಲದು. ವಿಜ್ಞಾನಿಗಳಾಗಿ ನಾವು ನಮ್ಮ ಆತ್ಮ ಸಾಕ್ಷಿಗೆ, ವಿಜ್ಞಾನಕ್ಕೆ ಹಾಗೂ ಅದರ ಮಾರ್ಗಗಳಿಗೆ ಪ್ರಾಮಾಣಿಕರಾಗಿರೋಣ. ಜೀವನೋಪಾಯ ಮಾರ್ಗವಾಗಿ ವಿಜ್ಞಾನ ಇರುವುದು ಬೇಡ. ನಮಗೆ ಅದರಲ್ಲಿ ಜೀವಂತ ನಂಬಿಕೆ ಇರಬೇಕು. ನಾವು ತರ್ಕಬದ್ದವಾಗಿ ಧೈರ್ಯದಿಂದ ವರ್ತಿಸಿದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ.”

– ಪ್ರೊ ಎಚ್.ಎ.ರಂಗನಾಥ್,

ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ಸಂದರ್ಶಕ ಪ್ರಾಧ್ಯಾಪಕರು, ಮಾನವ ತಳಿಶಾಸ್ತ್ರ ಕೇಂದ್ರ, ಬೆಂಗಳೂರು;

ಪೂರ್ವತನ ನಿರ್ದೇಶಕರು, ರಾಷ್ಟ್ರೀಯ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌)

ಪೂರ್ವತನ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ಇ-ಮೇಲ್: haranganath@gmail.com

(ಈ ಪ್ರಬಂಧದ ಕೆಲವು ವಿಷಯವನ್ನು ಕೆಲವು ಮೂಲಗಳಿಂದ ಸಂಗ್ರಹಿಸಲಾಗಿದೆ, ಆ ಎಲ್ಲ ಮೂಲ ಲೇಖಕರಿಗೆ ಈ ಪ್ರಬಂಧವನ್ನು ಓದಿ ತನ್ನ ಅಭಿಪ್ರಾಯ ಸೂಚಿಸಿದ ಗೆಳೆಯ ಡಾ.ಸತ್ಯನಾರಾಯಣ ಅವರಿಗೆ ಕೃತಜ್ಞತೆಗಳು)

ಪರಾಮರ್ಶನ ಗ್ರಂಥಗಳು:

  • ವಿಜ್ಞಾನ ಸಾಹಿತ್ಯದ ಅನುವಾದಗಳ ವೈವಿಧ್ಯ: ಶ್ರೀ ಟಿ.ಆರ್. ಅನಂತರಾಮು
  • ಪರಿಸರ ವಿಜ್ಞಾನ ಸಾಹಿತ್ಯ : ಶ್ರೀ ನಾಗೇಶ್ ಹೆಗಡೆ
  • ಕರ್ನಾಟಕದಲ್ಲಿ ಕೃಷಿ ವಿಜ್ಞಾನ: ಶ್ರೀ ಎಂ.ಸಿ. ಮಲ್ಲಿಕಾರ್ಜುನ
  • ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಜ್ಞಾನ ಪ್ರಸಾರ: ಶ್ರೀ ಎಸ್.ಎಲ್. ಶ್ರೀನಿವಾಸಮೂರ್ತಿ 
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು : ಪ್ರೊ. ಕೆ.ಎಸ್. ನಟರಾಜ್
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ: ಡಾ ಎ. ಎಂ. ರಮೇಶ್           
  • ಮಾಹಿತಿ ತಂತ್ರಜ್ಞಾನ- ಒಂದು ಸ್ಥೂಲ ನೋಟ: ಶ್ರೀ ಜಿ.ಎನ್. ನರಸಿಂಹಮೂರ್ತಿ
  • ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಪರಿಣಾಮ: ಶ್ರೀ ಅವಿನಾಶ್ ಬೈಪಾಡಿತ್ತಾಯ
  • ಸಮಗ್ರ ಗದ್ಯ (ಸಂಪುಟ 1 ಮತ್ತು 2): ರಾಷ್ಟ್ರ ಕವಿ ಕುವೆಂಪು
  • ಸ್ಮೃತಿಪಟಲದಿಂದ (೧,೨,೩): ಡಾ ಶಿವರಾಮ ಕಾರಂತ
  • ಗಾಂಧೀಜೀಯವರ ಆತ್ಮ ಚರಿತ್ರೆ – ಸತ್ಯಶೋಧನೆ: ಅನುವಾದ- ಶ್ರೀ ಬೆಟಗೇರಿ ಕೃಷ್ಣ ಶರ್ಮ
  • ತೆರೆದ ಮನ: ಡಾ ಎಚ್.ನರಸಿಂಹಯ್ಯ
  • ಸಮಗ್ರ ಕಾವ್ಯ: ಡಾ ಜಿ.ಎಸ್.ಶಿವರುದ್ರಪ್ಪ
Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content