ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಯ ಪೋಷಣೆ – ಪ್ರೊ. ಬಿ. ಜಿ. ಮೂಲಿಮನಿ ಮತ್ತು ಪ್ರೊ. ಜೆ. ತೊಣ್ಣನ್ನವರ್

1 min read

ವಿಜ್ಞಾನದ ಪ್ರತಿಯೊಂದು ವಿಭಾಗಲ್ಲಿಯೂ ಜ್ಞಾನದ ಸೀಮೆಗಳು ಹಿಂದೆಂದೂ ಕಂಡರಿಯದ ವೇಗದಲ್ಲಿ ಚಲಿಸುತ್ತಿವೆ. ಪ್ರತಿಯೊಂದು ದೇಶದ ಅಭಿವೃದ್ಧಿಗೆ ವಿಜ್ಞಾನವೇ ಅಡಿಪಾಯ. ನಮ್ಮ ಗಣಿತಶಾಸ್ತ್ರಜ್ಞರಾದ ಬ್ರಹ್ಮಗುಪ್ತ, ಭಾಸ್ಕರ ಮತ್ತು ಇತರರು, ‘ಸಂಖ್ಯೆ – ಸೊನ್ನೆ’ ಸೇರಿದಂತೆ, ಗಣಿತಕ್ಕೆ ನೀಡಿರುವ ಮೂಲಭೂತ ಕೊಡುಗೆಗಳು ಮಾನವನ ಅತಿ ದೊಡ್ಡ ಆವಿಷ್ಕಾರಗಳು ಎಂಬುದನ್ನು ನಾವು ಮರೆಯಬಾರದು. ಸಮೃದ್ಧ ಪ್ರಾಜ್ಞ ಪರಂಪರೆಯ ಹೊರತಾಗಿಯೂ ಸಹ ಇಂದು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ‘ಉತ್ಕೃಷ್ಟತೆ’ಯನ್ನು ಉತ್ತೇಜಿಸುವುದು ಹೇಗೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇತ್ತೀಚೆಗೆ ಸರ್ವಗ್ರಾಹಿ ಸಂಶೋಧನಾ ನಿಯತಕಾಲಿಕಗಳ ಪ್ರಕಟನೆಗಳ ಬೆಳವಣಿಗೆಯಲ್ಲಿ ಈ ಸಂದಿಗ್ಧತೆ ಎದ್ದು ಕಾಣುತ್ತಿದೆ.  ಭಾರತದಲ್ಲಿ ಸಂಶೋಧನೆಗೆ ಯು.ಜಿ.ಸಿ.ಯು ಮಾನದಂಡವನ್ನು ನಿಗದಿ ಮಾಡಬೇಕಾಗಿದೆ. ಭಾರತವು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಯುಗವನ್ನು ದಾಟಿ ಮುನ್ನೆಡುಯುತ್ತಿರುವಾಗ ವಿಜ್ಞಾನ ಬೋಧನೆ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಬೆಳೆಸುವ ಅಗತ್ಯತೆ ಹೆಚ್ಚಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಹಾಕಿಕೊಂಡಿರುವ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳ ಯಶಸ್ವಿ ಅನುಷ್ಠಾನಕ್ಕಾಗಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ವೃದ್ಧಿಸಲು ವಿಜ್ಞಾನ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದು ಅತ್ಯಗತ್ಯ. ಭಾರತದಲ್ಲಿ ಉನ್ನತ ಶಿಕ್ಷಣವು ಸಾಮಾಜಿಕ-ಸಾಂಸ್ಕೃತಿಕ ವಾತಾವರಣದಲ್ಲಿ ಬೇರೂರಿರುವ ಒಂದು ಕ್ಲಿಷ್ಟ ರಚನೆಯನ್ನು ಹೊಂದಿದ್ದು, ಪ್ರಸ್ತುತ ಲೇಖನವು ಖ್ಯಾತ ವಿಜ್ಞಾನಿಗಳ ಪ್ರೇರಣೆ ಮತ್ತು ಹೇಳಿಕೆಗಳು, ನಮ್ಮ ದೃಷ್ಟಿಕೋನಗಳು ಮತ್ತು ಸಲಹೆಗಳನ್ನೊಳಗೊಂಡ ಒಂದು ಸಂಕಲನವಾಗಿದೆ.

ಬಹಳಕಾಲದಿಂದ, ಮಾನವ ಜೀವನ ಮತ್ತು ಸಮಾಜವು, ಧರ್ಮ ಮತ್ತು ಪಾರುಪತ್ಯ ಶಕ್ತಿಗಳಿಂದ ನಿಯಂತ್ರಣಕ್ಕೊಳಪಟ್ಟಿದ್ದವು. ಇತ್ತೀಚೆಗೆ, ಹೊಸ ಚಿಂತನೆ-ವೈಜ್ಞಾನಿಕ ವಿಧಾನದ ಉಗಮದಿಂದಾಗಿ ನಾವು ಯೋಚಿಸುವ ಮತ್ತು ಬದುಕುವ ರೀತಿಯಲ್ಲಿ ಬದಲಾವಣೆಗಳಾಗಿವೆ. ವಿಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನವು ಒಂದು ಬಗೆಯ ಜ್ಞಾನವಾಗಿ, 17ನೇ ಶತಮಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂಚುಣಿಗೆ ಬಂದು, ಅದರ ಜೊತೆಗೆ ಒಂದು ನಿರುದ್ವೇಗದ ವೈಚಾರಿಕ ದೃಷ್ಟಿಕೋನವನ್ನು ತಂದಿತು. ಇಂದು ಸಾಮಾನ್ಯ ಮನುಷ್ಯರ ಮೇಲೆ ವಿಜ್ಞಾನದ ಪ್ರಭಾವವು ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವತ್ತ ಪ್ರಚೋದಿಸುವುದಕ್ಕಿಂತ ಹೆಚ್ಚಾಗಿ, ತಾಂತ್ರಿಕ ಬಳುವಳಿಗಳನ್ನು ಪರಿಚಯಿಸುವುದಾಗಿದೆ. ಇಂದು ನಮಗೆ ತಿಳಿದಿರುವ ವೈಜ್ಞಾನಿಕ ವಿಧಾನವು ಗೆಲಿಲಿಯೋಯಿಂದ ನಮಗೆ ಬಂದಂತಹದು, ಅವರು ‘ಮಹತ್ವದ ಸಂಗತಿಗಳನ್ನು ಗಮನಿಸುವುದು, ಊಹಾಸಿದ್ಧಾಂತದ ರಚನೆ, ಅದು ನಿಜವಾಗಿದ್ದರೆ, ವಾಸ್ತವಾಂಶಗಳು ಮತ್ತು ಊಹೆಗಳನ್ನು ವಿವರಿಸಿ ಅದರಿಂದಾಗುವ ಪರಿಣಾಮಗಳನ್ನು  ಪರಿಶೀಲಿಸುವುದು’ ಅದರ ಆಧಾರವೆಂದು ಪುಷ್ಟೀಕರಿಸಿದ್ದಾರೆ. ನ್ಯೂಟನ್ ತನ್ನ ಚಲನೆಯ ನಿಯಮಗಳನ್ನು ಗಣಿತದ ರೂಪದಲ್ಲಿ ಲೆಕ್ಕಹಾಕಿರುವುದು, ಅವಗಳನ್ನು ತರ್ಕಬದ್ಧ, ಪರಿಶೀಲನಾಯುಕ್ತ ಮತ್ತು ಊಹಿಸಬಲ್ಲ ರೀತಿಯಲ್ಲಿ ಮಾಡಿರುವುದು ವೈಜ್ಞಾನಿಕ ವಿಧಾನಕ್ಕೆ ಒಂದು ಉತ್ತಮ ಉದಾಹರಣೆ. ಮತ್ತೊಂದೆಡೆ, ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ಪ್ರಭೇದಗಳ ಉಗಮ ಮತ್ತು ವಿಕಾಸ ಸಿದ್ಧಾಂತವನ್ನು ವಿವರಿಸುವ ಕಾರ್ಯವಿಧಾನದ ಒಂದು ಬೃಹತ್ ಪ್ರಮಾಣದ ಪುರಾವೆಯನ್ನು ಒದಗಿಸಿದ್ದಾರೆ. ‘ಸರಳವಾದ ಆದಿಅಂತ್ಯವಿಲ್ಲದ ರೂಪಗಳಿಂದ, ಅತ್ಯಂತ ಸುಂದರವಾದ ಮತ್ತು ಅತ್ಯಂತ ಅದ್ಭುತ ರೂಪಗಳು ವಿಕಸನಗೊಂಡಿವೆ, ಮತ್ತು ವಿಕಸನಗೊಳ್ಳುತ್ತಿವ’ ಎಂದು ಅವರು ಪ್ರತಿಪಾದಿಸಿದ್ದಾರೆ. ಡಾರ್ವಿನ್.ನ ನಂತರ, ವಿಕಾಸ ಸಿದ್ಧಾಂತವು ಹಲವಾರು ಪರೀಕ್ಷೆಗಳಿಗೆ ಒಳಪಟ್ಟು, ಅದರ ವೈಜ್ಞಾನಿಕ ಅರ್ಹತೆಯನ್ನು ಸಾಬೀತಾಗಿದೆ. ತಳಿವಿಜ್ಞಾನಿ ಥೀಯೋಡೋಸಿಯಸ್ ಡಾಬ್ಝಾನ್ಸ್ಕಿರವರ ಮಾತುಗಳಲ್ಲಿ ಕೇಳಬೇಕೆಂದರೆ, ‘ಜೀವಶಾಸ್ತ್ರದಲ್ಲಿ ವಿಕಾಸದ ಬೆಳಕು ಬಿಟ್ಟರೆ ಬೇರೆ ಯಾವದಕ್ಕೂ ಅರ್ಥವಿಲ್ಲ’. ಮಾಟ್ ರಿಡ್ಲಿ ತಮ್ಮ ಇತ್ತೀಚಿನ ಪುಸ್ತಕ ‘ದಿ ಎವಲ್ಯೂಷನ್ ಆಫ್ ಎವರಿಥಿಂಗ್’ ನಲ್ಲಿ, ನಾವು ಈಗ ಕ್ರಮೇಣವಾಗಿ ಎಲ್ಲದರ ವಿಕಾಸವನ್ನು ಅರ್ಥಮಾಡಿಕೊಳ್ಳಬಹುದು ಅಥವಾ ವಿವರಿಸಬಹುದು: ಅದು ಶಿಕ್ಷಣವಾಗಿರಲಿ, ಸಂಸ್ಕೃತಿ, ನೀತಿ, ಧರ್ಮ, ಹಣ ಅಥವಾ ಅಂತರ್ಜಾಲವಾಗಿರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವೈಜ್ಞಾನಿಕ ವಿಧಾನಕ್ಕೆ ಮತ್ತೊಂದು ಹೊಸ ಆಯಾಮವನ್ನು ಸೇರಿಸಿದ ಆಲ್ಬರ್ಟ್ ಐನ್.ಸ್ಟೈನ್.ರವರು, ಆಲೋಚನಾ ಪ್ರಯೋಗಗಳ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ, ಅಂದರೆ, ಭೌತಶಾಸ್ತ್ರದ ನಿಯಮಗಳಿಗೆ ಬದ್ಧರಾಗಿರುವಂತೆ ಸನ್ನಿವೇಶಗಳನ್ನು ಹೊಸ ರೀತಿಯಲ್ಲಿ ಕಲ್ಪಿಸಿಕೊಳ್ಳುವುದು.  ಅವರ ಮಾತುಗಳಲ್ಲಿ ಹೇಳುವುದಾದರೆ, “ನಾನು ಬರ್ನ್.ನ ಪೇಟೆಂಟ್ ಆಫೀಸಿನಲ್ಲಿ ಕುರ್ಚಿಯಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು: ಒಬ್ಬ ವ್ಯಕ್ತಿ ಸ್ವತಂತ್ರವಾಗಿ ಬಿದ್ದರೆ ಅವನ ತೂಕವು ಅವನಿಗೆ ಅನುಭವವಾಗುವುದಿಲ್ಲ. ನಾನು ಚಕಿತಗೊಂಡೆ. ಈ ಸರಳ ಆಲೋಚನೆ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತು. ಅದು ನನ್ನನ್ನು ಗುರುತ್ವಾಕರ್ಷಣೆಯ ಸಿದ್ಧಾಂತದ ಕಡೆಗೆ ಕರೆದೊಯ್ದಿತು”. ಮೂಲತಃ ವೈಜ್ಞಾನಿಕ ವಿಧಾನವು 17ನೇ ಶತಮಾನದಿಂದಲೂ ಇಂದಿಗೂ ಹಾಗೆಯೇ ಉಳಿದಿದೆ, ಆದರೆ ಕೆಲವು ಸಂದರ್ಭಗಳಲ್ಲಿ ಅದರ ಅನ್ವಯಿಕತೆ ಮತ್ತು ಬಳಕೆಗಳು ಅತಿ ಜಟಿಲ. ಭೌತಶಾಸ್ತ್ರವು ಹೆಚ್ಚು ನಿಖರವಾದ ವಿಜ್ಞಾನವಾಗಿದೆ ಏಕೆಂದರೆ ಅದರ ನಿಯಮಗಳು ಗಣಿತದ ತತ್ವಗಳನ್ನು ಪಾಲಿಸುತ್ತದೆ. ರಸಾಯನಶಾಸ್ತ್ರದ ವಿಷಯದಲ್ಲೂ ಇದು ಸತ್ಯವಾಗಿದೆ. ಅಣು ಇದರ ಮೂಲವಾಗಿದ್ದು, ಅದರ ಅಭ್ಯಾಸವು ಎಷ್ಟು ವಿಜ್ಞಾನವೋ ಅಷ್ಟೇ ಕಲೆಯೂ ಆಗಿದೆ. ರಸಾಯನಶಾಸ್ತ್ರವು ಒಂದು ಮೂಲಭೂತ ವಿಜ್ಞಾನವಾಗಿ ಒಂದು ರೀತಿಯಲ್ಲಿ ವಿಜ್ಞಾನದ ಪ್ರತಿಯೊಂದು ವಿಭಾಗದ ಹೃದಯದಲ್ಲಿದೆ. ಸಮಾಜ ವಿಜ್ಞಾನದ ವಿವಿಧ ವಿಭಾಗಗಳು ಕೂಡ ವೈಜ್ಞಾನಿಕ ವಿಧಾನದ ಅನ್ವಯಿಕೆಯಿಂದಾಗಿ ಹೆಚ್ಚು ಹೆಚ್ಚು ವೈಜ್ಞಾನಿಕವಾಗುತ್ತಿವೆ.

ವೈಜ್ಞಾನಿಕ ಮನೋಭಾವ ಎಂಬುದು ಮನಸ್ಸಿನ ಧೋರಣೆಯಾಗಿದ್ದು, ವೈಜ್ಞಾನಿಕ ವಿಧಾನದಿಂದ ಒಂದು ಮಾನಸಿಕ ಅಭ್ಯಾಸವಾಗಿ ಅಳವಡಿಸಿಕೊಳ್ಳಬೇಕು. ಇದು ಅಂಧಶ್ರದ್ಧೆಗಳು ಮತ್ತು ಸಿದ್ಧಾಂತಗಳಿಂದ ಮನಸ್ಸನ್ನು ಮುಕ್ತಗೊಳಿಸುತ್ತದೆ ಎಂದು ಭಾವಿಸಲಾಗಿದೆ. ವೈಜ್ಞಾನಿಕ ದೃಷ್ಟಿಕೋನವು ಧರ್ಮ, ನೈತಿಕತೆ, ಸಮಾಜ, ಮನೋವಿಜ್ಞಾನ, ಶಿಕ್ಷಣ, ಸಾರ್ವಜನಿಕ ನೀತಿ ಮತ್ತು ಆಡಳಿತದ ಮೇಲೆ ಪ್ರಭಾವ ಬೀರಬಹುದಾದ ಮಟ್ಟಿಗೆ ವೈಜ್ಞಾನಿಕ ವಿಧಾನದ ಪಾತ್ರವನ್ನು ಉಲ್ಲೇಖಿಸುತ್ತದೆ. ಒಂದು ರಾಷ್ಟ್ರದ ಬೌದ್ಧಿಕ ಮತ್ತು ಆರ್ಥಿಕ ಪರಿಣಿತಿಯನ್ನು ಅದರ ವೈಜ್ಞಾನಿಕ ಪ್ರಗತಿಯಿಂದ ಅಳೆಯಲಾಗುತ್ತದೆ ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಪ್ರಪಂಚದ ನಾಗರಿಕತೆಗಳ ಜೀವನದಲ್ಲಿ ಕಲೆ ಬಹಳ ಪ್ರಾಚೀನವಾಗಿದೆಯಾದರೂ, ವಿಜ್ಞಾನವು ಇತ್ತೀಚಿನದು, ಆದರೆ ಆಧುನಿಕ ನಾಗರಿಕತೆಯ ಮೇಲೆ ವಿಜ್ಞಾನದ ಪ್ರಭಾವವು ಗಾಢ ಮತ್ತು ವ್ಯಾಪಕವಾಗಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ. ವೈಜ್ಞಾನಿಕ ಜ್ಞಾನ ಮತ್ತು ತಾಂತ್ರಿಕ ಪ್ರಗತಿಯು ಸ್ಪೋಟ ಮತ್ತು ಅದರ ಬಳುವಳಿಗಳು ಆಧುನಿಕ ಮಾನವನ ಸಾಮಾಜಿಕ, ಸಾಂಸ್ಕೃತಿಕ, ಬೌದ್ಧಿಕ ಮತ್ತು ಆರ್ಥಿಕ ಜೀವನದ ಮೇಲೆ ಪ್ರಭಾವ ಬೀರಿವೆ. ಫ್ರಾನ್ಸಿಸ್ ಬೇಕನ್ ನುಡಿದಂತೆ ‘ಜ್ಞಾನವೇ ಶಕ್ತಿ’ ಎಂದು ಕೈಗಾರಿಕಾ ಕ್ರಾಂತಿ ತೋರಿಸಿಕೊಟ್ಟಿತು. ಆಧುನಿಕ ವಿಜ್ಞಾನವು ಕೋಪರ್ನಿಕಸ್, ಕೆಪ್ಲರ್, ಗೆಲಿಲಿಯೋ ಮತ್ತು ನ್ಯೂಟನ್.ರೊಂದಿಗೆ ಆಕಾಶಕಾಯಗಳ ಚಲನೆಗಳನ್ನು ಅರ್ಥಮಾಡಿಕೊಳ್ಳುವ ಒಂದು ಕ್ರಿಯೆಯಾಗಿ ಪ್ರಾರಂಭವಾಗಿ ತೀಕ್ಷ್ಣದೃಷ್ಟಿಯ ಮೇಧಾವಿತನದೊಂದಿಗೆ ಪಾರುಪತ್ಯ ಮತ್ತು ಅರಿಸ್ಟೋಟೆಲಿಯನ್.ನ ಲೋಕದೃಷ್ಟಿಗೆ ಸವಾಲೊಡ್ಡುವಂತಹ ಸೂಕ್ತ ಪ್ರಶ್ನೆಗಳನ್ನು ಕೇಳಿ, ಆ ಮೂಲಕ ಪ್ರಕೃತಿಯ ರಹಸ್ಯಗಳನ್ನು ಬಿಚ್ಚಿಡುತ್ತಿದ್ದರು. ಈ ಮಹನೀಯರ ಬಗ್ಗೆ ಬರ್ಟ್ರಾಂಡ್ ರಸೆಲ್ ಹೀಗೆ ಹೇಳುತ್ತಾರೆ: ‘ಆ ಸಮಯದಲ್ಲಿ ರಸಾಭಿಜ್ಞತೆಯ ಪೂರ್ವಗ್ರಹಗಳನ್ನು ಪರಿಗಣಿಸದೆ ಒಂದು ಅಪರೂಪದ ತೀವ್ರತೆಯ ಪೂರ್ವಗ್ರಹಪೀಡಿತವಲ್ಲದ ಅವಲೋಕನದ ವೈಜ್ಞಾನಿಕ ಉತ್ಸಾಹದ ಅವಶ್ಯಕತೆಯಿತ್ತು’. ವಿಜ್ಞಾನದ ಈ ಮಹನೀಯರು ತಮ್ಮ ಸಂಶೋಧನೆಗಳ ತತ್.ಕ್ಷಣದ ಪ್ರಾಯೋಗಿಕ ಅನ್ವಯಯಿಕಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ; ಬದಲಿಗೆ, ಅವರು ಆಕಾಶಕಾಯಗಳ ಚಲನೆಯ ಮೂಲಭೂತ ನಿಯಮಗಳನ್ನು ಪರಿಶೀಲನೆ ಮತ್ತು ವ್ಯಾಖ್ಯಾಯನಕ್ಕೆ ಒಳಪಡಿಸಿ ಅವೈಯಕ್ತಿಕ ಲೋಕದೃಷ್ಟಿಯನ್ನು ನಿರ್ಣಯಿಸಲು ಪ್ರಯತ್ನಿಸಿದರು. ವೈಜ್ಞಾನಿಕ ಪ್ರಗತಿ ಮುಂದುವರಿದು ಪ್ರಕೃತಿಯ ಅಧ್ಯಯವನ್ನು ಆನಂದಿಸುವಲ್ಲಿ, ಜ್ಞಾನವನ್ನು ಪಡೆಯುವಲ್ಲಿ ಮತ್ತು ಅದನ್ನು ಬಳಕೆಗೆ ತರುವಲ್ಲಿ ವಿಜ್ಞಾನದ ಮೌಲ್ಯಗಳು ಏನೆಂಬುದೆಂದು 18 ಮತ್ತು 19ನೇ ಶತಮಾನದಲ್ಲಿ ಬಹಳ ಬೇಗನೆ ಅರ್ಥಮಾಡಿಕೊಳ್ಳಲಾಯಿತು. ಈ ಮೌಲ್ಯಗಳು ‘ವೈಜ್ಞಾನಿಕ ದೃಷ್ಟಿಕೋನ’ ಎಂದು ಕರೆಯಲ್ಪಡುತ್ತವೆ. ಅವನ್ನು ಒಂದು ಸಂಸ್ಕೃತಿ ಎಂದು ಪರಿಗಣಿಸಲು ಅರ್ಹವಾಗಿದ್ದು, ಉದಾರ ಶಿಕ್ಷಣ ನೀಡುವ ಮೌಲ್ಯಗಳಿಗೆ ಸರಿಸಮನಾಗಿದೆ. ಅಮೆರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ ಪ್ರಕಾರ, ‘ಉದಾರವಾದಿ ಶಿಕ್ಷಣವು ಮುಕ್ತ ಮನಸ್ಸಿನ ಹಾಗೂ ಪ್ರಾಂತಿಯತೆ, ತತ್ವ, ಪೂರ್ವಗ್ರಹತೆ ಮತ್ತು ಸಿದ್ಧಾಂತಗಳಿಂದ ಮುಕ್ತವಾಗಿರುವ ವ್ಯಕ್ತಿಗಳ ಉಗಮಕ್ಕೆ ಕಾರಣವಾಗುತ್ತದೆ. ತಮ್ಮ ಅಭಿಪ್ರಾಯಗಳು ಮತ್ತು ತೀರ್ಪುಗಳ ಅರಿವು, ಅವರ ಆಲೋಚನಾಪರ ಕ್ರಿಯೆಗಳು, ಸಾಮಾಜಿಕ ಮತ್ತು ನೈಸರ್ಗಿಕ ಪ್ರಪಂಚಗಳಲ್ಲಿ ಅವರ ಸ್ಥಾನಕುರಿತು ಅರಿವು ಅವರಲ್ಲಿರುತ್ತದೆ’. 19ನೇ ಶತಮಾನದವರೆಗೂ ಸಾಹಿತ್ಯ, ನೀತಿ, ತತ್ವಶಾಸ್ತ್ರ, ಇತ್ಯಾದಿಗಳ ಬೋಧನೆಯಿಂದ ಮನುಷ್ಯನ ಮನಸ್ಸು ಸಂಸ್ಕರಣಗೊಂಡು ಉನ್ನತ ಸಂಸ್ಕೃತಿಯ ರೂಪಕ್ಕೇರಿತು ಎಂದು ನಂಬಲಾಗಿತ್ತು. ಉದಾರ ಶಿಕ್ಷಣದ ಹಿನ್ನೆಲೆಯಲ್ಲಿ ವಿಜ್ಞಾನ ಬೋಧನೆಯು ಸ್ಪಷ್ಟವಾಗಿ ತನ್ನ ಸರಿಯಾದ ಸ್ಥಾನವನ್ನು ಕಂಡುಕೊಳ್ಳಲಿಲ್ಲ, ಏಕೆಂದರೆ ಅದು ಮೋಟಾರುಗಳು, ವಿಮಾನಗಳು, ಟೆಲಿಗ್ರಾಫಿ ಮತ್ತು ಔಷಧಗಳಂತಹ ಪ್ರಯೋಜನಾತ್ಮಕ ಅಂಶಗಳನ್ನು ಒಳಗೊಂಡಿದ್ದು, ಈ ಅಂಶಗಳು ಮಾನವನ ಮನಸ್ಸನ್ನು ಕಲೆ ಮತ್ತು ಸಾಹಿತ್ಯಗಳ ರೀತಿಯಲ್ಲಿ ಸಂಸ್ಕರಿಸಲಾರವು ಎಂಬ ತಪ್ಪು ಗ್ರಹಿಕೆ ಮತ್ತು ತಿಳಿವಳಿಕೆಯಿತ್ತು. ಆದರೆ, ವಿಜ್ಞಾನದ ಶೈಕ್ಷಣಿಕ ಮೌಲ್ಯವು ಸಾಹಿತ್ಯದಷ್ಟೇ ಶ್ರೇಷ್ಠವಾದ ಮಾನಸಿಕ ಶ್ರೇಷ್ಠತೆಯಾಗಿದೆ. ಒಂದು ಪ್ರಯೋಜನಾತ್ಮಕ ದೃಷ್ಟಿಕೋನದಿಂದ ನೋಡಿದಾಗ, ವಿಜ್ಞಾನದ ಬೋಧನೆಯು ಪ್ರಾಯೋಗಿಕ ಮತ್ತು ಆರ್ಥಿಕ ಗುರಿಗಳಿಗಾಗಿ ಅಪೇಕ್ಷಿತ ಮಾನವ ಸಂಪನ್ಮೂಲವಾಗಿ ಪುರುಷರು ಮತ್ತು ಮಹಿಳೆಯರನ್ನು ಸಿದ್ಧಗೊಳಿಸುತ್ತದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ ಮತ್ತು ಗಣಿತ ಬೋಧನೆಗಳಿಗೆ ಸಮಕಾಲೀನ ಉನ್ನತ ಶಿಕ್ಷಣದಲ್ಲಿ ಒತ್ತು ಕೊಡಲಾಗಿದೆ. ಏಕೆಂದರೆ, ಶಾಲೆ ಮತ್ತು ಕಾಲೇಜು ಭೋದನಾಶಾಸ್ತ್ರದಲ್ಲಿ ಈ ವಿಷಯಗಳ ಪ್ರಾಮುಖ್ಯತೆಯು ನೇರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಾನವ ಸಂಪನ್ಮೂಲದ ತರಬೇತಿಗೆ ಸಂಬಂಧಿಸಿದ್ದು. 

ವಿಜ್ಞಾನವು ಒಂದು ನಿರ್ದಿಷ್ಟ ರೀತಿಯ ಜ್ಞಾನವಾಗಿದ್ದು, ಮಹತ್ವದ ಆಧಾರಾಂಶಗಳನ್ನು ಗಮನಿಸುವ ಮೂಲಕ ಮತ್ತು ಆಧಾರಾಂಶಗಳಿಂದ ನಾವು ಸಾಮಾನ್ಯ ತತ್ವಗಳನ್ನು ನಿರೂಪಿಸುತ್ತೇವೆ.  ಆದ್ದರಿಂದ, ವೈಜ್ಞಾನಿಕ ವಿಧಾನವು ಮೊದಲನೆಯದಾಗಿ, ಆಧಾರಾಂಶಗಳನ್ನು ಅವಲೋಕಿಸುವಿಕೆಯನ್ನು ಒಳಗೊಂಡಿರುತ್ತದೆ; ಎರಡನೆಯದಾಗಿ, ಈ ಆಧಾರಾಂಶಗಳಿಗೆ ಬೆಂಬಲವಾಗಿ ಊಹಾಸಿದ್ಧಾಂತವನ್ನು ರೂಪುಗೊಳ್ಳುತ್ತವೆ; ಮೂರನೆಯದಾಗಿ, ಊಹೆ ನಿಜವಾಗಿದ್ದರೆ, ಊಹೆಯಿಂದಾದ ಉತ್ಪತ್ತಿಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಅನುಗಮನ ವಿಧಾನದ ಮೂಲಕ, ಒಂದು ಸಾಮಾನ್ಯ ತತ್ವವು ಆಧಾರಾಂಶಗಳನ್ನು ಅನುಸರಿಸುತ್ತದೆ. ಸಾಮಾನ್ಯ ತತ್ವವನ್ನು ಬಳಸಿಕೊಂಡು ನಿಗಮನಾತ್ಮಕವಾಗಿ, ನಿರ್ದಿಷ್ಟ ಆಧಾರಾಂಶಗಳನ್ನು ತಲುಪುವವರೆಗೆ ನಾವು ಹಿಮ್ಮುಖ ಕ್ರಮದಲ್ಲಿ ಮುಂದುವರಿಯುತ್ತೇವೆ. ವಿಜ್ಞಾನಿಯು ಒಂದು ನಿಯಮವನ್ನು ಅನುಗಮನದ ವಿಧಾನದ ಮೂಲಕ ಕಂಡುಹಿಡಿಯುತ್ತಾನೆ ಮತ್ತು ತರಗತಿಯಲ್ಲಿ ಶಿಕ್ಷಕರು ಅನುಗಮನವನ್ನು ಬಳಸಿಕೊಂಡು ತತ್ವದ ಸತ್ಯವನ್ನು ಪ್ರದರ್ಶಿಸುತ್ತಾರೆ. ವಿಜ್ಞಾನಿಗೆ ಮಗುವಿನಂತಹ ಕುತೂಹಲವಿದೆ ಮತ್ತು ಪ್ರಶ್ನೆಗಳನ್ನು ಕೇಳುವುದು ಅವರ ಕೆಲಸ. ಏನಿದು? ಯಾಕೆ ಹೀಗೆ? ಇದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವುದರ ಮೂಲಕ ಅವರು ಪರಿಹಾರಗಳನ್ನು ಕಂಡುಹಿಡಿಯುತ್ತಾರೆ. ಐನ್.ಸ್ಟೈನ್ ಚಿಕ್ಕ ಹುಡುಗನಾಗಿದ್ದಾಗ ‘ನಾನು ಬೆಳಕಿನ ವೇಗದಲ್ಲಿ ಚಲಿಸುತ್ತಿದ್ದರೆ ಏನನ್ನು ನೋಡುತ್ತೇನೆ?’ ಎಂದು ಕೇಳಿದರಂತೆ. ಇದರ ಉತ್ತರಕ್ಕಾಗಿ ಮಾಡಿದ ಹುಡುಕಾಟದಲ್ಲಿ ಅವರು ‘ಸಾಪೇಕ್ಷ ಸಿದ್ಧಾಂತ’ವನ್ನು ಕಂಡುಹಿಡಿದರು. ಖ್ಯಾತ ಭೌತಿಕ ರಸಾಯನಶಾಸ್ತ್ರಜ್ಞ ಇ. ಬ್ರೈಟ್ ವಿಲ್ಸನ್ ಜೂನಿಯರ್ ಹೇಳುವಂತೆ, “ಅನೇಕ ವಿಜ್ಞಾನಿಗಳು ತಮ್ಮ ಶ್ರೇಷ್ಠತೆಯನ್ನು ಮೆರೆದಿರುವುದು ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೊರುವ ಕೌಶಲ್ಯಕ್ಕಲ್ಲ, ಅವರು ಸಮಸ್ಯೆಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತೋರಿರುವ ಬುದ್ಧಿಮತಕ್ಕಾಗಿ”. ಈ ಹಿನ್ನೆಲೆಯಲ್ಲಿ ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರ ಕಥೆ ಅನುಕರಣೀಯ. ತಮ್ಮ ಆತ್ಮಚರಿತ್ರೆ ‘ಲೈಫ್ ಇನ್ ಸೈನ್ಸ್’ ನಲ್ಲಿ ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ: ‘ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ನಾನು ಗಣನೀಯ ಕೊಡುಗೆ ನೀಡಬಹುದಾದ ಒಂದು ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಲು ಪ್ರಯತ್ನಿಸಿದೆ. ನಾನು ಜನದಟ್ಟಣೆ ಇಲ್ಲದ ಕ್ಷೇತ್ರವೊಂದನ್ನು ಹುಡುಕಲು ನೋಡಿದೆ ಮತ್ತು ರಾಬರ್ಟ್ ಫ್ರಾಸ್ಟ್.ನ ಪ್ರಸಿದ್ಧ ಕವಿತೆಯಿಂದ ಮಾರ್ಗದರ್ಶನ ಪಡೆದೆ:

ಶರದೃತುವಿನ ಅರಣ್ಯದೆಡೆಗೆ ಕವಲೊಡೆದ ಎರಡು ದಾರಿ
ಕ್ಷಮಿಸಿ, ನಾನು ಎರಡು ದಾರಿಯಲ್ಲೂ ಕ್ರಮಿಸಲು ಸಾಧ್ಯವಿಲ್ಲ
ನಾನು ಕಡಿಮೆ ಕ್ರಮಿಸಿದ ದಾರಿಯನ್ನು ಆಯ್ಕೆ ಮಾಡಿಕೊಂಡೆ
ಅದು ಈ ಎಲ್ಲಾ ವ್ಯತ್ಯಾಸಗಳನ್ನು ತಂದಿತು

ಏಕಾಂಗಿ ರಸ್ತೆಯ ಆಯ್ಕೆ ಒಂದು ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇನ್ನೂ ಒಂದು ಉತ್ತಮ ಮಾರ್ಗವಾಗಿದೆ, ಆದರೆ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿಭಿನ್ನವಾಗುತ್ತಿದೆ. ವಿಜ್ಞಾನಿಗಳಿಂದಾಗುವ ವಿಜ್ಞಾನದ ವಿಕಸನ ಅನೇಕ ದೃಷ್ಟಿಕೋನಗಳನ್ನು ಹೊಂದಿರುತ್ತದೆ. ವಿಜ್ಞಾನವು ಯಾವುದಕ್ಕೆ, ಅದನ್ನು ಹೇಗೆ ಅನುಸರಿಸುವುದು ಮತ್ತು ಅದು ಅವರಿಗೆ ಹೇಗನಿಸುತ್ತದೆ ಎನ್ನುವ ಬಗ್ಗೆ ವಿವಿಧ ವಿಜ್ಞಾನಿಗಳು ಏನು ಹೇಳುತ್ತಾರೆ ಎಂಬುದನ್ನು ನೋಡೋಣ. ಸಿಎಸ್.ಐಆರ್.ನ ನಿವೃತ್ತ ಮಹಾನಿರ್ದೇಶಕರಾದ ಡಾ. ರಘುನಾಥ ಮಶೇಲ್ಕರ್ ಮಾತನಾಡಿ, ‘ಭಾರತೀಯ ವಿಜ್ಞಾನಕ್ಕೆ ಮೊದಲು ದೊಡ್ಡ ಸವಾಲು ಎಂದರೆ, ಸ್ವಲ್ಪ ಮಟ್ಟಿಗೆ ಅವಿಧೇಯತೆಯನ್ನು ತರುವುದು’. ನಮ್ಮ ವಿದ್ಯಾರ್ಥಿಗಳು ತುಂಬಾ ವಿಧೇಯರು. ವಿಜ್ಞಾನದಲ್ಲಿ ಸ್ಥಾನವಿಲ್ಲದ ಪಾರುಪತ್ಯವನ್ನು ಪ್ರಶ್ನಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಇದಕ್ಕೆ ಐಐಎಸ್ಸಿಯ ವಿಜ್ಞಾನಿ ಪ್ರೊ. ಗೌತಮ್ ದೇಸೀರಾಜು ಹೇಳುವಂತೆ, ‘ಭಾರತೀಯರು ಯಾವುದೇ ರೀತಿಯ ಪಾರುಪತ್ಯವನ್ನು ಪ್ರಶ್ನೆ ಮಾಡಲು ಬಹಳ ಭಯಪಡುತ್ತಾರೆ. ಬದಲಿಗೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಒಳಗಾಗದೆ ಅಲೆಯೊಂದಿಗೆ ಈಜಲು ಬಯಸುತ್ತಾರೆ. ಅವರ ಆಲೋಚನೆ ಭಿನ್ನವೆಂದು ತೋರಿಸಲು ಧೈರ್ಯಮಾಡುವುದಿಲ್ಲ. ಇವೆಲ್ಲವೂ ವೈಜ್ಞಾನಿಕ ನಿಲುವಿಗೆ ವಿರುದ್ಧವಾಗಿದ್ದು, ಅದು ಪ್ರಶ್ನಿಸುವ, ರೂಪಿಸುವ, ಪ್ರಯೋಗಕ್ಕೆ ಒಳಪಡಿಸುವ ಮತ್ತು ಪರಿಶೀಲಿಸುವ ಮಾರ್ಗದಲ್ಲಿ ಕ್ರಮಬದ್ಧವಾಗಿ ಸಾಗುತ್ತದೆ. ಪೋಲಿಷ್ ಮೂಲದ ಬ್ರಿಟಿಷ್ ವಿಜ್ಞಾನಿ ಮತ್ತು ಲೇಖಕ ಜಾಕುಬ್ ಬ್ರೊನೊಸ್ಕಿ ಅವರು ‘ಒಂದು ತರಲೆ ಪ್ರಶ್ನೆಯನ್ನು ಕೇಳಬೇಕು ಮತ್ತು ನೀವು ಒಂದು ಸಮಂಜಸ ಉತ್ತರದ ಹಾದಿಯಲ್ಲಿರುತ್ತೀರಿ’ ಇದೇ ವಿಜ್ಞಾನದ ಸಾರ ಎಂದು ಹೇಳುತ್ತಾರೆ. ಜಪಾನಿ ಮೂಲದ ಅಮೆರಿಕನ್ ನೊಬೆಲ್ ಪ್ರಶಸ್ತಿ ವಿಜೇತ ಲಿಯೋ ಎಸಾಕಿ, ಬೆಲ್ ಲ್ಯಾಬ್ಸ್.ನ ಮುಖ್ಯ ದ್ವಾರದಲ್ಲಿ ನಿಲ್ಲಿಸಿರುವ ಅಲೆಕ್ಸಾಂಡರ್ ಗ್ರಹಾಂ ಬೆಲ್.ನ ಪ್ರತಿಮೆಯ ಕೆಳಗಿನ ಈ ಪದಗಳಿಂದ ಸ್ಫೂರ್ತಿಗೊಂಡರು: ಆಗಾಗ ತುಳಿದ ಪರಿಚಿತವಾದ ಮಾರ್ಗ ಬಿಟ್ಟು ಕಾಡಿನೆಡೆಗೆ/ಅಪರಿಚಿತ  ಮಾರ್ಗದೆಡೆಗೆ ಪ್ರಯಾಣಿಸಿ. ನೀವು ಖಂಡಿತವಾಗಿಯೂ ಹಿಂದೆಂದೂ ನೋಡಿರದ ಏನನ್ನಾದರೊಂದನ್ನು ನೀವು ಕಂಡುಕೊಳ್ಳುತ್ತೀರಿ. ಇದರಿಂದ ಪ್ರೇರೇಪಿತರಾದ ಎಸಾಕಿ, ನ್ಯೂಯಾರ್ಕ್.ನ ಐಬಿಎಂ ಟಿ. ಜೆ. ವ್ಯಾಟ್ಸನ್ ಸಂಶೋಧನಾ ಕೇಂದ್ರಕ್ಕೆ ಸೇರಿಕೊಂಡರು, ಅಲ್ಲಿ ಅವರು ಎಲೆಕ್ಟ್ರಾನ್ ಟನಲಿಂಗ್, ಒಂದು ನವೀನ, ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ಸಾಧ್ಯವಿರುವ ಕ್ವಾಂಟಮ್ ಮೆಕಾನಿಕಲ್ ಅನ್ನು ಪ್ರದರ್ಶಿಸುವ ಡಯೋಡ್ ಅನ್ನು ಕಂಡುಹಿಡಿದರು. ಆದ್ದರಿಂದ ಯಾರೂ ತುಳಿಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಈ ಎಲ್ಲ ವ್ಯತ್ಯಾಸಗಳನ್ನು ಉಂಟುಮಾಡುತ್ತದೆ. ಇನ್ನೊಂದು ಹಂತದಲ್ಲಿ, ವಿಜ್ಞಾನವು ಏನನ್ನು ಸಾಧಿಸಲು ಬಯಸುತ್ತದೆ? ಇಂಗ್ಲಿಷ್ ತತ್ವಜ್ಞಾನಿ ಹರ್ಬರ್ಟ್ ಸ್ಪೆನ್ಸರ್ ‘ವಿಜ್ಞಾನವು ವ್ಯವಸ್ಥಿತ ಜ್ಞಾನವಾಗಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಸೂಕ್ಷ್ಮ ಜೀವವಿಜ್ಞಾನಿ ಕಾರ್ನೆಲಿಯಸ್ ವಾನ್ ನೀಲ್ ರವರು, ವಿಜ್ಞಾನವು ಬುದ್ಧಿವಂತಿಕೆ ಮತ್ತು ನಾವು ವಾಸಿಸುವ ಜಗತ್ತಿನ ಸಮಗ್ರ ಗ್ರಹಿಕೆಯ ಸಂಯೋಜನೆಯ ನಿರಂತರ ಹುಡುಕಾಟವಾಗಿದೆ’ ಎಂದು ವ್ಯಾಖ್ಯಾನಿಸಿದ್ದಾರೆ. ಆಸ್ಟ್ರಿಯಾದ ಪ್ರಾಣಿಶಾಸ್ತ್ರಜ್ಞ ಕೊನ್ರಾಡ್ ಲೊರೆಂಜ್.ರವರು ಸತ್ಯದ ಹುಡುಕಾಟವನ್ನು ಹೀಗೆ ಆಲೋಚಿಸುತ್ತಾರೆ – ಒಂದು ಕಾರ್ಯಶೀಲ ಊಹಾಸಿದ್ಧಾಂತದ ಉತ್ತಮ ಅಳವಡಿಕೆಯು ಮುಂದಿನ ಅತ್ಯುತ್ತಮವಾದ  ಊಹಾಸಿದ್ಧಾಂತಕ್ಕೆ ದಾರಿಯಾಗುವುದು ವಿಜ್ಞಾನದಲ್ಲಿನ ಸತ್ಯವೆಂದು ವ್ಯಾಖ್ಯಾನಿಸಬಹುದು. 

ಒಬ್ಬ ವಿಜ್ಞಾನಿಯನ್ನು ಅಣಿಮಾಡುವಲ್ಲಿ ಪ್ರೇರಣೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರೊ. ಸಿ. ಎನ್. ಆರ್. ರಾವ್ ಅವರ ಬಾಲ್ಯ ಜೀವನವನ್ನು ಅವಲೋಕಿಸಿದರೆ ಸ್ಫೂರ್ತಿದಾಯಕವಾಗಿದೆ. ಬೆಂಗಳೂರಿನಲ್ಲಿ ಹುಟ್ಟಿ, ವಿದ್ಯಾಭ್ಯಾಸ ಮಾಡಿದ ಅವರು ಕಲಿತ ತಂದೆ ತಾಯಿಗಳಿಂದ ಪ್ರಯೋಜನವಾಯಿತಲ್ಲದೆ ಶಾಲೆಯಲ್ಲಿಯೂ ಅತ್ಯಂತ ಪ್ರೇರಕ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಶಿಕ್ಷಕರಿಂದ ಕಲಿತಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 17ನೇ ವಯಸ್ಸಿನಲ್ಲಿ ಪದವಿ ಪಡೆದ ನಂತರ, ಅವರ ಅಧ್ಯಾಪಕರುಗಳೊಬ್ಬರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯನ್ನು ಸೇರುವ ಆಸೆಯ ಬದಲು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಸಲಹೆ ನೀಡಿದರು. ಎಂಎಸ್ಸಿಯ ನಂತರ ಐಐಎಸ್ಸಿಯಲ್ಲಿ ಕೆಲಕಾಲ ಕೆಲಸ ಮಾಡಿದ ಅವರು ನಂತರ ಖರಗ್ ಪುರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಅಧ್ಯಾಪಕರಾಗಿ ಸೇರಿದರು. ನೊಬೆಲ್ ಪ್ರಶಸ್ತಿ ವಿಜೇತ ಲೈನಸ್ ಪೌಲಿಂಗ್ ಅವರ ಪ್ರಸಿದ್ಧ ಪುಸ್ತಕ ‘ದಿ ನೇಚರ್ ಆಫ್ ಕೆಮಿಕಲ್ ಬಾಂಡ್’ ನಿಂದ ಪ್ರಭಾವಿತರಾದರು. ಅಣುಗಳು ಮತ್ತು ಅಣುಗಳ ರಚನೆಯ ಮೂಲಕ ರಸಾಯನಶಾಸ್ತ್ರದ ಮೇಲಿನ ಆ ಪುಸ್ತಕದ ದೃಷ್ಟಿಕೋನ ಅವರನ್ನು ಆಕರ್ಷಿಸಿತು. ಪೌಲಿಂಗ್ ಅವರ ಪ್ರೇರಣೆಯಂತೆ ಆಧುನಿಕ ರಸಾಯನಶಾಸ್ತ್ರದಲ್ಲಿ ಕೆಲಸ ಮಾಡಬೇಕೆಂಬ ಅವರ ಬಯಕೆ, ಐಐಟಿಯ ನಿರ್ದೇಶಕರಾಗಿದ್ದ ಸರ್ ಜೆ.ಸಿ. ಘೋಷ್ ಅವರು ದೇಶದ ಹೊರಗೆ ಅದನ್ನು ಮುಂದುವರಿಸುವಂತೆ ನೀಡಿದ ಸಲಹೆ ಅವರನ್ನು 1954ರಲ್ಲಿ ಅಮೆರಿಕಾಗೆ ಕರೆದೊಯ್ಯಿತು. ಮೆಸಾಚುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಮತ್ತು ಪರ್ಡ್ಯೂ ವಿಶ್ವವಿದ್ಯಾಲಯಗಳೆರಡರಲ್ಲೂ ಪ್ರವೇಶ ಪಡೆದ ನಂತರ, ಅವರು ಎರಡನೆಯದನ್ನು ಆರಿಸಿಕೊಂಡರು, ಏಕೆಂದರೆ ಅದು ಲಿನಸ್ ಪೌಲಿಂಗ್.ನ ಸಂಶೋಧನಾ ಗುಂಪಿನ ಸೇರಿದ ಪ್ರಾಧ್ಯಾಪಕನ ಜೊತೆ ಕೆಲಸ ಮಾಡಲು ಅವಕಾಶ ನೀಡಿತು. ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಲ್ಪಕಾಲ ನಡೆಸಿದ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯ ನಂತರ ಬೆಂಗಳೂರಿನ ಐಐಎಸ್ಸಿ ಸೇರಿದರು. ಅವರ ಜೀವನವನ್ನು ಮೂರು ನಿರ್ದೇಶಾಂಕಗಳಾದ (1) ವಿಜ್ಞಾನವು ಜೀವನ ಒಂದು ದಾರಿಯಾಗಿ; (2) ನಂಬಿಕೆಯು ಶಕ್ತಿಯ ಮೂಲವಾಗಿ ಮತ್ತು (3) ಶಿಕ್ಷಣ ಸಂಸ್ಥೆಗಳು ಹೊಸ ಜ್ಞಾನವನ್ನು ಪಡೆಯಲು ಆಕರ್ಷಕೇಂದ್ರಗಳು ಎಂಬುದಾಗಿ  ವ್ಯಾಖ್ಯಾನಿಸಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಅಹ್ಮದ್ ಝೈವೈಲ್ ಅವರು ‘ಯಶಸ್ಸಿನ ಯಾನ ಮತ್ತು ಶ್ರೇಷ್ಠತೆಯ ಮೇಲೆ ನಂಬಿಕೆಯಿರುವ ಆದರೆ ಮಿಡಿಯೋಕ್ರಿಟಿ ಮತ್ತು ಅಧಿಕಾರಶಾಹಿಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ’ ಎಂದು ಪ್ರೊ. ರಾವ್.ರವರ ವೈಜ್ಞಾನಿಕ ಜೀವನವನ್ನು ವಿವರಿಸುತ್ತಾರೆ: ಉತ್ತಮ ಶಾಲೆ ಮತ್ತು ಕಾಲೇಜು, ಪೋಷಕರ ಶೈಕ್ಷಣಿಕ ಅಭ್ಯಾಸಗಳು ಮತ್ತು ಮಕ್ಕಳಾಗಿದ್ದಾಗ ಗಣ್ಯವ್ಯಕ್ತಿಗಳ ಜತೆ ಆಕಸ್ಮಿಕ ಭೇಟಿಯಂತಹ ಅನುಕೂಲಕರ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ಕಂಡುಕೊಂಡ ನೀಲ್ಸ್ ಬೋರ್, ಹೋಮಿ ಭಾಭಾ ಮತ್ತು ಸರ್ ಸಿ. ವಿ. ರಾಮನ್.ರಂವರಂತೆ ವಿದ್ಯಾವಂತ ತಂದೆತಾಯಿಗಳ ಆರ್ಶಯದಲ್ಲಿ ಬೆಳೆಯುವುದು ಒಂದು ಅದೃಷ್ಟ.  ಬೋರ್.ನ ತಂದೆ ಶಿಕ್ಷಣ ತಜ್ಞರಾಗಿದ್ದರು ಮತ್ತು ಅವರ ಸಹೋದರ ಖ್ಯಾತ ಗಣಿತತಜ್ಞರಾದರು. ಭಾಭಾ ಒಬ್ಬ ಶ್ರೀಮಂತ ವಕೀಲರ ಮಗ, ಅವರ ತಂದೆ ಅದ್ಭುತ ಪುಸ್ತಕಗಳ ಸಂಗ್ರಹದೊಂದಿಗೆ, ಯುವ ಭಾಭಾ ಅವರನ್ನು ಪ್ರೊತ್ಸಾಹಿಸಿದರು. ಇದರಿಂದಾಗಿ ಅವರು ಬಹು ಆಸಕ್ತ ಓದುಗರಾದರು. ಅತ್ಯಂತ ಪ್ರತಿಭಾವಂತರಾಗಿದ್ದ ಭಾಭಾ ತಮ್ಮ ಹದಿನಾರನೇ ವಯಸ್ಸಿನಲ್ಲಿ ಸಾಪೇಕ್ಷತಾ ಸಿದ್ಧಾಂತವನ್ನು ಅಧ್ಯಯನ ಮಾಡಿದರು. ತಂದೆ-ತಾಯಿಗಳು ಉದ್ಯಮವನ್ನು ನಡೆಸಲು ಎಂಜಿನಿಯರ್ ಆಗಬೇಕೆಂದು ಬಯಸಿದಾಗ, ಅವರು ತಮ್ಮ ತಂದೆಗೆ ಹೀಗೆ ಹೇಳಿದರು, ‘ನಾನು ಭೌತವಿಜ್ಞಾನವನ್ನು ಮಾಡಬೇಕೆಂಬ ಕಡುಬಯಕೆಯನ್ನು ಹೊಂದಿದ್ದೇನೆ. ನಾನು ಯಾವತ್ತಾದರೂ ಅದನ್ನು ಮಾಡುತ್ತೇನೆ ಮತ್ತು ಮಾಡಲೇಬೇಕು. ಅದೊಂದೇ ನನ್ನ ಮಹತ್ವಾಕಾಂಕ್ಷೆ’. ಈ ಕಡುಬಯಕೆಯೊಂದಿಗೆ ಭಾಭಾ ಅವರು ಕೇವಲ ಅತ್ಯಂತ ಯಶಸ್ವಿ ಅಣು ಶಕ್ತಿ ವಿಜ್ಞಾನಿಯಾಗಿ ಮಾತ್ರವಲ್ಲದೆ, ಎರಡು ಸಂಸ್ಥೆಗಳನ್ನು ಸಹ ನಿರ್ಮಿಸಿದರು, ಒಂದು ಅಣು ಶಕ್ತಿಯ ಶಾಂತಿಯುತ ಬಳಕೆಗಾಗಿ, ಈಗ ಅದು ಭಾಭಾ ಅಣು ಶಕ್ತಿ ಸಂಶೋಧನಾ ಕೇಂದ್ರ (BARC) ಎಂದು ಕರೆಯಲ್ಪಡುತ್ತದೆ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಎಂದು ಕರೆಯಲ್ಪಡುವ ಮೂಲಭೂತ ಸಂಶೋಧನೆಯನ್ನು ಕೈಗೊಳ್ಳುವ ಸಂಸ್ಥೆ. ರಾಮನ್ ಒಬ್ಬ ವಿದ್ಯಾರ್ಥಿಯಾಗಿ ಓದಿದ ಅನೇಕ ಪುಸ್ತಕಗಳಲ್ಲಿ, ಅವರ ಆಧ್ಯಾತ್ಮಿಕ ಮತ್ತು ಬೌದ್ಧಿಕ ದೃಷ್ಟಿಕೋನದ ಮೇಲೆ ಪ್ರಭಾವ ಬೀರಿದ ಮೂರು ಪುಸ್ತಕಗಳೆಂದರೆ: ಎಡ್ವಿನ್ ಅರ್ನಾಲ್ಡ್.ರವರ ಬಗವಾನ್ ಬುದ್ದನ ಮೇಲೆ ಬರೆದ ‘ದಿ ಲೈಟ್ ಆಫ್ ಏಶಿಯಾ’,  ‘ಎಲಿಮೆಂಟ್ಸ್ ಆಫ್ ಯೂಕ್ಲಿಡ್’  ಮತ್ತು ಖ್ಯಾತ ಜರ್ಮನ್ ವಿಜ್ಞಾನಿ ಹರ್ಮನ್ ವಾನ್ ಹೆಲ್ಮ್ ಹೋಲ್ಟ್ಜ್ ಅವರ ‘ದಿ  ಸೆನ್ಸೇಷನ್ಸ್ ಆಫ್ ಟೋನ್’. ಮೊದಲನೆಯ ಗ್ರಂಥದ ಬಗ್ಗೆ ರಾಮನ್ ಹೀಗೆ ಹೇಳುತ್ತಾರೆ: ‘ಸಿದ್ಧಾರ್ಥನ ಮಹಾತ್ಯಾಗದ ಕಥೆ, ಸತ್ಯದ ಹುಡುಕಾಟ ಮತ್ತು ಅಂತಿಮ ಜ್ಞಾನೋದಯದ ಕಥೆಯಿಂದ ನಾನು ಬಲವಾಗಿ ಪ್ರೇರಣೆ ಪಡೆದದು ನನಗೆ ನೆನಪಿದೆ. ಇದಾದದ್ದು ನಾನು ಪ್ರಭಾವಿತನಾಗಬಲ್ಲ ವಯಸ್ಸಿನ ಯುವಕನಾಗಿದ್ದಾಗ. ಈ ಪುಸ್ತಕ ಓದಿದ್ದರಿಂದ ಉದಾತ್ತ ಗುರಿಗಳ ಅನ್ವೇಷಣೆಯಲ್ಲಿ ತ್ಯಾಗದ ಈ ಸಾಮರ್ಥ್ಯವೇ ಶ್ರೇಷ್ಠತೆಯ ಸಾರವಾಗಿದೆ ಎಂಬುದು ನನ್ನ ಮನಸ್ಸಿನಲ್ಲಿ ದೃಢವಾಗಿ ನಿಂತಿತ್ತು. ಎರಡನೆಯ ಪುಸ್ತಕದ ಬಗ್ಗೆ ಯುವಕ ರಾಮನ್.ನ ಮೌಲ್ಯಮಾಪನವು ನಿಜಕ್ಕೂ ಗಮನಾರ್ಹವಾದುದು,   “. . ಯೂಕ್ಲಿಡ್.ನ ಕಡ್ಡಾಯ ಅಧ್ಯಯನಕ್ಕೆ ನನ್ನ ಆರಂಭಿಕ ಪ್ರತಿಕ್ರಿಯೆಗಳು ಭರವಸೆ ಮೂಡಿಸುವಂತದಾಗಿತ್ತು. ಇದಕ್ಕೆ ಕಾರಣವೆಂದರೆ, ಬೌದ್ಧಿಕ ಶಿಸ್ತು ಎಂದು ವಿಷಯದ ಮೇಲೆ ಹೆಚ್ಚಿನ ಒತ್ತು ನೀಡುವುದು ಮತ್ತು ಅದರ ವಿಶಾಲ ಅಂಶಗಳಿಂದ ಭಿನ್ನವಾಗಿರುವಂತೆ ವಿವರಗಳಿಗೆ ನೀಡಲಾಗಿರುವ ಅನಗತ್ಯ ಗಮನ ಎಂದು ನಾನು ಭಾವಿಸುತ್ತೇನೆ. ‘ಯೂಕ್ಲಿಡ್.ನ ಪುಟಗಳು ಪ್ರಕೃತಿಯ ಶ್ರೇಷ್ಠ ನಾಟಕದ ಗೀತರೂಪಕದ ಆರಂಭಿಕ ಸಂಗೀತವಿದ್ದಂತೆ. ಅವರು ಅದರ ಪರದೆಯನ್ನು ಎತ್ತಿ ನಮ್ಮ ದೃಷ್ಟಿಗೆ ತನ್ನ ಅಧ್ಯಯನಕ್ಕೆ ಕಾಯುತ್ತಿದೆಯೆನೋ ಎಂಬಂತೆ ಭಾಸವಾಗುವ ಒಂದು ವಿಶಾಲವಾದ ನೈಸರ್ಗಿಕ ಜ್ಞಾನದ ಒಂದು ನೋಟವನ್ನು ತೋರಿಸುತ್ತಾರೆ ಎಂದು ರಾಮನ್ ಅಂತಿಮವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೊನೆಯ ಪುಸ್ತಕದ ಬಗ್ಗೆ ರಾಮನ್ ಹೀಗೆ ಹೇಳುತ್ತಾರೆ: ‘ಈ ಪುಸ್ತಕವನ್ನು ನಾನೇ ಕಂಡುಕೊಂಡು ಆಸಕ್ತಿಯಿಂದ ಓದಿದೆ. ಇದು ನನ್ನ ಬೌದ್ಧಿಕ ದೃಷ್ಟಿಕೋನದ ಮೇಲೆ ಗಾಢವಾದ ಪ್ರಭಾವ ಬೀರಿದೆ ಎಂದು ಉತ್ಪ್ರೇಕ್ಷೆಯಿಲ್ಲದೆ ಹೇಳಬಹುದು. ಮೊದಲ ಬಾರಿಗೆ, ವೈಜ್ಞಾನಿಕ ಸಂಶೋಧನೆಯ ಉದ್ದೇಶವೇನು ಮತ್ತು ಅದನ್ನು ಹೇಗೆ ಕೈಗೆತ್ತಿಕೊಳ್ಳಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ನಾನು ಸಂಶೋಧನೆಗಾಗಿ ಹಲವಾರು ಸಮಸ್ಯೆಗಳನ್ನು ಇದರಿಂದ ಸಂಗ್ರಹಿಸಿದೆ, ಅವು ನಂತರ ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಹಲವಾರು ವರ್ಷಗಳ ಕಾಲ ನನ್ನನ್ನು ಬಿಡುವಿಲ್ಲದಂತೆ ಮಾಡಿತು. ಸ್ಪಷ್ಟವಾಗಿ, ಹೆಲ್ಮ್ ಹೋಲ್ಟ್ಜ್.ನ ಈ ಮೇರುಕೃತಿ, ಒಬ್ಬ ಸ್ಫೂರ್ತಿದಾಯಕ ಶಿಕ್ಷಕನಂತೆ, ಯುವ ರಾಮನ್.ನ ಮೇಲೆ ಗಾಢವಾದ ಪ್ರಭಾವ ಬೀರಿತು, ಕನಿಷ್ಠ ಪಕ್ಷ ವಿಜ್ಞಾನಿಯಾಗಲು ಪ್ರೇರೇಪಿಸಿತು. ಅಣು ಭೌತಶಾಸ್ತ್ರಜ್ಞ ಡಾ. ರಾಜಾ ರಾಮಣ್ಣ ಕೂಡ ಸಹ ತಂದೆ, ಮೇದಾವಿ ನ್ಯಾಯಾಧೀಶ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದ ತಾಯಿಯಿಂದ ಪಾಲನೆ ಪೋಷಣೆಗೆ ಒಳಗಾಗಿದ್ದರು. ಕೆಲವು ವಿಜ್ಞಾನಿಗಳು ತಮ್ಮ ಯಶಸ್ಸಿಗೆ ಪಾಲನೆ ಮತ್ತು ಪುಸ್ತಕಗಳು ಭಾಗಶಃ ಕಾರಣವೆಂದು ಹೇಳಿದರೆ, ಶಿಕ್ಷಕರು, ಆಕಸ್ಮಿಕ ಘಟನೆಗಳು, ಖ್ಯಾತ ವಿಜ್ಞಾನಿಗಳ ಬಗ್ಗೆ ತಿಳಿಯುವುದು ಮತ್ತು ಭೇಟಿ ಮಾಡುವುದೂ ಸಹ ಪ್ರಭಾವವನ್ನು ಭೀರುವಲ್ಲಿ ತಮ್ಮ ಪಾಲನ್ನು ಹೊಂದಿವೆ. 20ನೇ ಶತಮಾನದ ಭಾರತದ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರಾದ ಸರ್ ಜಗದೀಶ್ ಚಂದ್ರ ಬೋಸ್.ರವರು ಕೋಲ್ಕೊತಾದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ತಮ್ಮ ಭೌತಶಾಸ್ತ್ರದ ಗುರು ಫಾದರ್ ಲಾಫಾಂಟ್.ರವರ ಪ್ರಭಾವಕ್ಕೆ ಒಳಗಾಗಿದ್ದರು ಮತ್ತು ಅವರಿಂದ ವಿಜ್ಞಾನಿಯಾಗಿ ರೂಪುಗೊಂಡರು. ಹಾಗೆಯೇ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ಅನೇಕ ವಿಜ್ಞಾನಿಗಳು ಯುವ ಬೋಸ್ ಮೇಲೆ ಪ್ರಭಾವ ಬೀರಿದರು. ಶಾಲೆಯಲ್ಲಿ ಸರ್ ಸಿ. ವಿ. ರಾಮನ್.ರವರ ಸ್ಫೂರ್ತಿದಾಯಕ ಉಪನ್ಯಾಸ ಮತ್ತು ಭಾರತೀಯ ವಿಜ್ಞಾನ ಮಂದಿರದಲ್ಲಿನ ಅವರ ಲ್ಯಾಬ್.ಗೆ ಭೇಟಿ ನೀಡುವ ಅವಕಾಶ ಪ್ರೊ. ಸಿ. ಎನ್. ಆರ್. ರಾವ್.ರವರು ‘ನನ್ನ ದೇವರೆ, ಸಿ.ವಿ.ರಾಮನ್.ರಂತಿದ್ದರೆ ಎಷ್ಟು ಅದ್ಭುತವಾಗಿರುತ್ತಿತ್ತು’ ಎಂದು ಹೇಳುವಂತೆ ಮಾಡಿತು. ಬಹುಶಃ ಆಗಲೇ ನಾನು ವಿಜ್ಞಾನಿಯಾಗುವ ದಿಸೆಯಲ್ಲಿ ಬೀಜಗಳನ್ನು ಬಿತ್ತಲಾಯಿತು ಎಂದು ಸಹ ಅಭಿಪ್ರಾಯಪಟ್ಟರು. ವಕೀಲ ವೃತ್ತಿಯಲ್ಲಿದ್ದ ತಂದೆ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್.ರವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದಿದ್ದರು. ಅವರ ವಿದ್ಯುತ್ಕಾಂತೀಯ ಸಿದ್ಧಾಂತವು ವಿಜ್ಞಾನದ ಅತ್ಯಂತ ಉನ್ನತ ಆವಿಷ್ಕಾರಗಳಲ್ಲಿ ಒಂದಾಗಿದೆ. ವಿಜ್ಞಾನಿಗಳನ್ನು ರೂಪಿಸುವ ಈ ಏಕರೂಪ ಮಾದರಿಗಳಿಗೆ ಅಪವಾದಗಳಿವೆ. ಆಲ್ಬರ್ಟ್ ಐನ್.ಸ್ಟೈನ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರೂ ಸಹ ಸ್ವಿಜರ್ಲೆಂಡ್.ನ ವ್ಯಾಯಾಮ ಶಾಲೆಯಲ್ಲಿ ಸಾಧಾರಣ ಶಿಕ್ಷಣವನ್ನು ಪಡೆದರು (ಅವರ ತಾಯಿ ಅವನಿಗೆ ವಯೋಲಿನ್ ನುಡಿಸಲು ಕಲಿಸಿದರು). ಚಾರ್ಲ್ಸ್ ಡಾರ್ವಿನ್.ನ ಪ್ರಕರಣದಲ್ಲಿ ತಂದೆ ವೈದ್ಯರಾಗಿದ್ದರು, ತನ್ನ ತಂದೆಯ ದಾರಿಯನ್ನೇ ಅನುಸರಿಸಲು ಅವರಿಗೆ ಪ್ರೋತ್ಸಾಹಿಸಲಾಯಿತಾದರೂ ಅವರು ನಿಸರ್ಗವಿಜ್ಞಾನಿಯಾಗಲು ಬಯಸಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಕೇವಲ ಪಾಸ್ ಪದವಿ ಪಡೆದರೂ, ಡಾರ್ವಿನ್ ಮಾನವ ವಿಕಾಸದ ಬಗ್ಗೆ ತನ್ನ ಕ್ರಾಂತಿಕಾರಿ ಸಿದ್ಧಾಂತದಿಂದ ಶ್ರೇಷ್ಠ ಜೀವವಿಜ್ಞಾನಿಯಾದರು. ಐಸಾಕ್ ನ್ಯೂಟನ್ ಯಾವುದೇ ಅನುಕೂಲಗಳನ್ನು ಹೊಂದಿಲ್ಲದ ಒಂದು ಕೃಷಿ ಕುಟುಂಬದಿಂದ ಬಂದವರಾಗಿದ್ದರೂ ಸಹ ಮೆಕಾನಿಕ್ಸ್ ಮತ್ತು ಆಪ್ಟಿಕ್ಸ್.ನಲ್ಲಿ ಮಾಡಿದ ಮೂಲಭೂತ ಸಂಶೋಧನೆಗಳಿಂದಾಗಿ ಶ್ರೇಷ್ಠ ವಿಜ್ಞಾನಿಯಾದರು. ನ್ಯೂಟೋನಿಯನ್ ಯುಗದಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಗಣಿತದ ಮೇಧಾವಿ ಶ್ರೀನಿವಾಸ್ ರಾಮಾನುಜನ್.ರವರ ತಂದೆ ತಾಯಿಗಳು ಯಾವುದೇ ರೀತಿಯಲ್ಲಿ ಶಿಕ್ಷಿತರಲ್ಲದಿದ್ದರೂ, ಅವರು ಮಿಲಿಯನ್.ಗೆ ಒಬ್ಬ ಗಣಿತಶಾಸ್ತ್ರಜ್ಞರಾಗಿ ಹೊರಹೊಮ್ಮಿ ತಮ್ಮ ಆವಿಷ್ಕಾರಗಳಿಂದ ಪ್ರತೀ ದಿನ ಎಲ್ಲಾ ಗಣಿತಶಾಸ್ತ್ರಜ್ಞರನ್ನು ಬಿಡುವಿಲ್ಲದಂತೆ ಮಾಡುತ್ತಿದ್ದರು.

ಮಾನವ ಮತ್ತು ಅವನ ಸಮಾಜದಲ್ಲಿ ಸಂಸ್ಕೃತಿಗಿರುವಷ್ಟೇ ಪ್ರಾಮುಖ್ಯತೆಯನ್ನು ವಿಜ್ಞಾನ ಹೊಂದಿದೆ ಎಂಬುದನ್ನು ವಿಜ್ಞಾನದ ಇತಿಹಾಸದಲ್ಲಿ ಗೆಲಿಲಿಯೋ, ನ್ಯೂಟನ್, ಡಾರ್ವಿನ್, ಐನ್.ಸ್ಟೀನ್ ಮತ್ತು ಇತರರ ಕಾಲದಿಂದಲೂ ಸಾಕ್ಷೀಯಾಧಾರವಾಗಿ ನಿರೂಪಿಸಲಾಗಿದೆ. ಮಹಾನ್ ಗಣಿತಶಾಸ್ತ್ರಜ್ಞ ಹೆನ್ರಿ ಪೊಯಿನ್ ಕೇರ್ ಅವರ ಮಾತುಗಳಲ್ಲಿ, ‘ವಿಜ್ಞಾನಿಯು ಪ್ರಕೃತಿಯನ್ನು ಅದು ಉಪಯುಕ್ತವಾಗಿದೆ ಎಂದು ಅಧ್ಯಯನ ಮಾಡುವುದಿಲ್ಲ, ಅದರಿಂದ ಖುಷಿಯನ್ನು ಪಡೆಯಲು ಅವರು ಅಧ್ಯಯನ ಮಾಡುತ್ತಾರೆ  ಮತ್ತು ಅದು ಸುಂದರವಾಗಿರುವುದರಿಂದ ಅವರು ಅದರಲ್ಲಿ ಖುಷಿ ಪಡೆಯುತ್ತಾರೆ. ಪ್ರಕೃತಿ ಸುಂದರವಾಗಿರದಿದ್ದರೆ, ಅದನ್ನು ಅರಿಯುಲು ಯೋಗ್ಯವಾಗಿರುತ್ತಿರಲಿಲ್ಲ ಮತ್ತು ಈ ಜೀವನ ಜೀವಿಸಲು ಯೂಗ್ಯವಾಗಿರುತ್ತಿರಲಿಲ್ಲ. ವಿಜ್ಞಾನವು ನಮ್ಮ ವಿಶ್ವದೃಷ್ಟಿಯ ಮೇಲೆ ಪ್ರಭಾವ ಬೀರಿದರೂ, ಧರ್ಮದೊಂದಿಗಿನ ಅದರ ಬಂಧನವು ಸೂಕ್ಷ್ಮವಾಗಿದೆ ಮತ್ತು ಅನೇಕ ವೇಳೆ ಸಂಘರ್ಷಾತ್ಮಕವಾಗಿ ಕಾಣುತ್ತದೆ. ಧರ್ಮದ ಅಂತರಂಗದಲ್ಲಿ ನಂಬಿಕೆ ಇದೆ. ವಿಜ್ಞಾನದಲ್ಲೂ ನಂಬಿಕೆಗಳನ್ನು ವಿಜ್ಞಾನಿಗಳು ಹಿಡಿದಿದ್ದಾರೆ. ವಿಜ್ಞಾನವು ಪರಿಶೀಲಿಸಬಹುದಾದ ಪುರಾವೆಗಳಿಂದ ಬಂಧಿಸಲ್ಪಟ್ಟಿದೆ, ಧರ್ಮದಲ್ಲಿ ಅದು ಭಾವನಾರೂಢ. ಇಲ್ಲಿ ಐನ್.ಸ್ಟೈನ್ ಹೇಳಿರುವುದನ್ನು ಪರಿಗಣಿಸುವುದು ಮುಖ್ಯ: ಒಬ್ಬ ಧಾರ್ಮಿಕ ವ್ಯಕ್ತಿಯು ಆ ವಿಶಿಷ್ಟವಾದ ವೈಯಕ್ತಿಕ ವಸ್ತುಗಳು ಮತ್ತು ಗುರಿಗಳ ಮಹತ್ವದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂಬ ಅರ್ಥದಲ್ಲಿ ಧರ್ಮನಿಷ್ಠನಾಗಿರುತ್ತಾನೆ ಮತ್ತು ಅದಕ್ಕೆ ಯಾವುದೇ ತರ್ಕಬದ್ಧ ಅಡಿಪಾಯದ ಅಗತ್ಯತೆ ಅಥವಾ ಸಮರ್ಥತೆ ಇರುವುದಿಲ್ಲ. ವಿಜ್ಞಾನ ಮತ್ತು ಧರ್ಮಗಳ ನಡುವೆ ನ್ಯಾಯಯುತವಾದ ಸಂಘರ್ಷವು ಅಸ್ತಿತ್ವದಲ್ಲಿರಲಾರದು. ಧರ್ಮವಿಲ್ಲದ ವಿಜ್ಞಾನವು ಕುಂಟು, ವಿಜ್ಞಾನವಿಲ್ಲದ ಧರ್ಮ ಕುರುಡು’. ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದೊಂದಿಗೆ ವೈಜ್ಞಾನಿಕ ದೃಷ್ಟಿಕೋನವನ್ನು ಸಂಯೋಜಿಸುವ ಅಗತ್ಯತೆ ಇದೆ, ಈ ತತ್ವಬೋಧನೆ ಸದೃಢ ಭಾರತವನ್ನು ನಿರ್ಮಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನವು (42ನೇ ತಿದ್ದುಪಡಿ ಕಾಯಿದೆ, 1976) ಅನುಚ್ಛೇದ 51ಎ ಅನ್ನು ಸೇರಿಸಿ, ಭಾರತದ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ವೈಜ್ಞಾನಿಕ ಮನೋಭಾವ, ಮಾನವತಾವಾದ ಹಾಗೂ ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿರುವುದು ಉಲ್ಲೇಖನಾತ್ಮಕವಾಗಿದೆ.

ಭಾರತವು ಬಡವರು ವಾಸಿಸುವ ಶ್ರೀಮಂತ ದೇಶವಾಗಿದೆ. ಏಕೆಂದರೆ, ನಮಗೆ ಸಂಪತ್ತನ್ನು ಸೃಷ್ಟಿಸುವ ಜ್ಞಾನ ಸಂಪತ್ತಿನ ಸಾಮರ್ಥ್ಯ ಅರ್ಥವಾಗಿಲ್ಲ. ನಾವು ಜ್ಞಾನದ ಗ್ರಾಹಕರಾಗಿದ್ದೇವೆಯೇ ಹೊರತು ಜ್ಞಾನದ ಸೃಷ್ಟಿಕರ್ತರಲ್ಲ. ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಯ ಅವಶ್ಯಕತೆಯನ್ನು ನಾವು ಹೇಗೆ ಪರಿಹರಿಸುತ್ತೇವೆ? ಪಾಶ್ಚಾತ್ಯರಿಗಿಂದ ಕೀಳು ಎಂಬ ಭಾವನೆಯಿಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಸೃಜನಶೀಲತೆಯ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವಿದೆ. ರಾಮನ್.ರವರು ಈ ಆತ್ಮವಿಶ್ವಾಸದ ಕೊರತೆಯನ್ನು ಪ್ರಶಂಸನೀಯವಾಗಿ ವ್ಯಕ್ತಪಡಿಸಿದ್ದಾರೆ: ಭಾರತದಲ್ಲಿ ಮಾನವ ಸಂಪನ್ಮೂಲಗಳು ಹೇರಳವಾಗಿವೆ. ಒಬ್ಬ ಶಿಕ್ಷಕನಾಗಿ 24 ವರ್ಷಗಳ ಅನುಭವದಿಂದ ಮಾತನಾಡುತ್ತಿದ್ದೇನೆ. ನಾನು, ಭಾರತೀಯ ಮನಸ್ಸಿನ ಗುಣಮಟ್ಟವು ಯಾವುದೇ ಟ್ಯುಟೋನಿಕ್, ನಾರ್ಡಿಕ್ ಅಥವಾ ಆಂಗ್ಲೋ-ಸ್ಯಾಕ್ಸನ್ ಮನಸ್ಸಿನ ಗುಣಮಟ್ಟಕ್ಕೆ ಸಮಾನವಾಗಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಬಹುಶಃ ನಮಲ್ಲಿರುವ ಕೊರತೆಯು ಧೈರ್ಯ ಮತ್ತು ಎಲ್ಲಿಂದೆಲ್ಲಿಗೋ ಕರೆದೊಯ್ಯಬಲ್ಲ ಪ್ರೇರಕ ಶಕ್ತಿ. ನಾವು ಕೀಳರಿಮೆಯನ್ನು ಬೆಳಸಿಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಇಂದು ಬೇಕಾಗಿರುವುದು ಆ ಸೋಲಿನ ಮನೋಭಾವದ ನಾಶ. ನಮಗೆ ಜಯದ ಚೈತನ್ಯ ಬೇಕು, ನಮ್ಮನ್ನು ಈ ಭೂಮಿಯ ಮೇಲೆ ನಮ್ಮ ಹಕ್ಕಿನ ಸ್ಥಾನಕ್ಕೆ ಕೊಂಡೊಯ್ಯುವ ಚೈತನ್ಯ ಬೇಕು. ಆ ಅದಮ್ಯ ಚೇತನವು ಉದಯಿಸಿದರೆ, ನಾವು ಸರಿಯಾದ ಗುರಿಯನ್ನು ಸಾಧಿಸುವುದನ್ನು ಯಾವುದೂ ತಡೆಯಲಾರದು.

ಖ್ಯಾತ ಖಭೌತ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ರವರು 1920 ರಿಂದ 1925ರ ಅವಧಿಯಲ್ಲಿ, ಜೆ.ಸಿ. ಬೋಸ್, ಸಿ.ವಿ.ರಾಮನ್, ಎಂ.ಎನ್. ಸಹಾ, ಎಸ್.ಎನ್. ಬೋಸ್, ಪಿ.ಸಿ. ರೇ ಹೀಗೆ ಮುಂತಾದವರು ಅನೇಕ ಶ್ರೇಷ್ಟ್ರೋತ್ತಮರ ಹಠಾತ್ ಉಗಮಕ್ಕೆ ಸ್ವ-ಅಭಿವ್ಯಕ್ತಿ ಮತ್ತು ಭಾರತೀಯರು ತಮ್ಮದೇ ಆದ ಕ್ಷೇತ್ರದಲ್ಲಿ ಪಾಶ್ಚಿಮಾತರಿಗೆ ಸಮಾನವೆಂದು ತೋರಿಸುವ ಉದ್ದೇಶವೇ ಕಾರಣವೆಂದು ವಿಶೇಷಿಸಿರುವುದು ನಾವು ಇಲ್ಲಿ ತಿಳಿದುಕೊಳ್ಳಬೇಕು. ಕೆಲವರನ್ನು ಉಲ್ಲೇಖಿಸುವುದಾದರೆ, ರಾಮನ್.ರವರಿಂದೀಚೆಗೆ ವಿಕ್ರಮಸರಾಬಾಯಿ, ವೆರ್ಘೇಸ್ ಕುರಿಯನ್, ಸತೀಶ್ ಧವನ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ಎಂ..ಎಸ್. ಸ್ವಾಮಿನಾಥನ್, ಡಾ. ಯಶ್ಪಾಲ್ ಮತ್ತು ಡಾ.ರಘುನಾಥ ಮಶೇಲ್ಕರ್ ರವರುಗಳ ಕುಂದಿಲ್ಲದ ಉತ್ಸಾಹ, ದೂರದೃಷ್ಟಿ ಮತ್ತು ಬದ್ಧತೆ ಭಾರತವನ್ನು ಅನೇಕ ಸಾಧನೆಗಳ ರಾಷ್ಟ್ರವನ್ನಾಗಿ ಮಾರ್ಪಡಿಸಿತು ಎಂಬುದನ್ನು ನಾವು ಒಪ್ಪಲೇಬೇಕು. ಬಾಹ್ಯಾಕಾಶ ವಿಜ್ಞಾನ ಮತ್ತು ಸಂವಹನದ ಪರಂಪರೆಗೆ ಕಾರಣರಾದವರು ವಿಕ್ರಮ್ ಸಾರಾಬಾಯಿ ಮತ್ತು ಸತೀಶ್ ಧವನ್. ವರ್ಘೇಸ್ ಕುರಿಯನ್ ಅವರು ‘ವೈಟ್ ರೆವಲ್ಯೂಷನ್’ ಅಡಿ ಅತಿ ದೊಡ್ಡ ಡೈರಿ ಕಾರ್ಯಕ್ರಮವನ್ನು ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್.ಗಳನ್ನು ಯಶಸ್ವಿಯಾಗಿ ಎದುರಿಸಿದ ‘ಅಮುಲ್’ ಬ್ರ್ಯಾಂಡ್ ಅನ್ನು ಹುಟ್ಟುಹಾಕಿದರು. ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಡಾ. ಅಬ್ದುಲ್ ಕಲಾಂ ಅವರು ನಾಯಕತ್ವ ನೀಡಿದರು. ‘ಹಸಿರು ಕ್ರಾಂತಿ’ಗೆ ಭಾರತ ಡಾ. ಸ್ವಾಮಿನಾಥನ್.ರವರನ್ನು ಸ್ಮರಿಸಲಾಗುತ್ತದೆ. ಡಾ.ಮಶೇಲ್ಕರ್.ರವರು ಪೇಟೆಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಶಾಸನಾತ್ಮಕ ಚೌಕಟ್ಟಿನ ರೂವಾರಿಯಾಗಿದ್ದು, ‘ಪ್ರಕಾಶಿಸಿ ಮತ್ತು ನಶಿಸಿ’ ಎಂಬುದನ್ನು ‘ಪೇಟೆಂಟ್, ಪ್ರಕಾಶಿಸಿ ಮತ್ತು ಸಮೃದ್ಧಿ ಹೊಂದಿ’ ಎಂಬುದಾಗಿ ಬದಲಿಸಿದರು. ಅವರು ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯನ್ನು ಸಾಧಿಸಲು ವಿಜ್ಞಾನದ ನೇತೃತ್ವದಲ್ಲಿ ನಾವಿನ್ಯತೆ ಎಂಬುದನ್ನು  ಬಲವಾಗಿ ಪ್ರತಿಪಾದಿಸಿದರು. ನಾವು ದುರ್ಬಲವಾಗಿರುವ ದೇಶೀಯ ತಂತ್ರಜ್ಞಾನದಲ್ಲಿ ಸಾಧನೆ ಮಾಡಲು ಯಶಸ್ಸು ಸಾಧಿಸಿರುವ ಕ್ಷೇತ್ರಗಳಾದ ಜೈವಿಕ ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ, ವ್ಯವಹಾರ, ಫಾರ್ಮಾ ಮತ್ತು ಟೆಲಿಕಾಂ ಕ್ಷೇತ್ರಗಳು ಅನುಕರಣೀಯ ಎಂದು ಅವರು ಉದಾಹರಿಸಿದ್ದಾರೆ. ವಿಜ್ಞಾನದಲ್ಲಿ ಪರೀದಿಯಿಂದ ಹೊರಗೆ ಯೋಚಿಸುವ ಸಂಸ್ಕೃತಿಯಿಂದ ತಾಂತ್ರಿಕ ಆವಿಷ್ಕಾರಗಳನ್ನು ಸೃಷ್ಟಿಸುತ್ತದೆ ಎಂದು ಅವರು ವಾದಿಸುತ್ತಾರೆ. ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕರಾಗಿ ಡಾ. ಮಶೇಲ್ಕರ್.ರವರು ಕೈಟ್ ಪ್ಲೈಯಿಂಗ್ ಫಂಡ್ ಮೂಲಕ ಈ ಸಂಸ್ಕೃತಿಯನ್ನು ಪರಿಚಯಿಸಿದರು, ಇದು ಯಶಸ್ಸನ್ನು ಲೆಕ್ಕಿಸದೆ ಹೊಸ ಸಂಭಾವ್ಯ ವಿಚಾರಗಳನ್ನು ಉತ್ತೇಜಿಸಿದವು. ಸಿಎಸ್ಐಆರ್.ನ ಮಹಾ ನಿರ್ದೇಶಕರಾಗಿ ಅವರು ಇದೇ ರೀತಿಯಲ್ಲಿ ನ್ಯೂ ಐಡಿಯಾ ಫಂಡ್ ಅನ್ನು ಪ್ರಾರಂಭಿಸಿದರು, ಇದು ಹೊಸ ಆಲೋಚನೆಗಳ ಕೊರತೆಯನ್ನು ಹೊರತಂದಿತು. ಹೀಗಾಗಿ ಡಾ. ಮಶೆಲ್ಕರ್ ಹೊಸ ಮೌಲ್ಯ ವ್ಯವಸ್ಥೆಯನ್ನು ಪ್ರಸ್ತಾಪಿಸಿದರು. ಇದು ಸಮಸ್ಯೆಗಳನ್ನು ಪರಿಹರಿಸುವ ವಿಜ್ಞಾನ, ಪರಿವರ್ತನೆ ಮಾಡುವ ತಂತ್ರಜ್ಞಾನ ಮತ್ತು ಸಮಾಜದ ಮೇಲೆ ಪ್ರಭಾವ ಬೀರುವ ನಾವಿನ್ಯತೆಗಳನ್ನು ಗುರುತಿಸುತ್ತದೆ ಮತ್ತು ವೈಜ್ಞಾನಿಕ ಜ್ಞಾನವನ್ನು ಆರ್ಥಿಕ ಜ್ಞಾನವಾಗಿ ಪರಿವರ್ತಿಸುವ ಪರಿಣಾಮವನ್ನು ತರುತ್ತದೆ. ಇವೆಲ್ಲವೂ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪುನರ್ ವಿಮರ್ಷಿಸುವ ಅಗತ್ಯವನ್ನು ಎತ್ತಿ ಸೂಚಿಸುತ್ತದೆ. ಈ ಲೇಖನದಲ್ಲಿನ ಅಂಶವನ್ನು ಸ್ವತಂತ್ರೋತ್ತರ ಭಾರತದ ಖ್ಯಾತ ವಿಜ್ಞಾನಿ ಮತ್ತು ವಿಜ್ಞಾನ ಶಿಕ್ಷಣ ತಜ್ಞ ಪ್ರೊ. ಯಶ್ಪಾಲ್.ರವರು ಬಹಳ ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯದಲ್ಲಿ ಹೀಗೆ ವ್ಯಕ್ತ ಪಡಿಸಿದ್ದಾರೆ: “ಕಿಂಡರ್ ಗಾರ್ಟನ್.ನಿಂದ ವಿಶ್ವವಿದ್ಯಾಲಯದ ಮಟ್ಟದವರೆಗೆ ನಮ್ಮ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಸ್ವರೂಪವನ್ನು ತೀವ್ರವಾಗಿ ಬದಲಾಯಿಸುವ ಒಂದು ಪ್ರಮುಖ ನಿರ್ದೇಶನವನ್ನು ಹೆಸರಿಸಲು ನನಗೆ ಕೇಳಿದರೆ: “ವೈಯಕ್ತಿಕ ಸಾಮರ್ಥ್ಯ ಮತ್ತು ಪರಿಶೋಧನೆಯ ಮೇಲೆ ರೂಪಿಸಿ ಮತ್ತು ನಿಮ್ಮ ಸುತ್ತಲಿರುವ ಜೀವನದೊಂದಿಗೆ ಜೊತೆಗೂಡಿಸಿ” ಎಂದು ಹೇಳುತ್ತೇನೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದರೆ, ಕಲಿಕೆಯನ್ನು ತಲುಪಿಸಲಾಗುವುದಿಲ್ಲ; ಅದನ್ನು ಸೃಜಿಸಲಾಗುತ್ತದೆ ಎಂಬುದಾದ ಅರ್ಥಕೊಡುತ್ತದೆ. ‘ಸ್ವಾವಲಂಬನೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಲಿಪ್ತತೆ ಮತ್ತು ಆವಿಷ್ಕಾರ ಎಂಬ ಧ್ಯೇಯದೊಂದಿಗೆ 1990ರಲ್ಲಿ ನಡೆಸಿದ ಭಾರತೀಯ ವಿಜ್ಞಾನ ಕಾಂಗ್ರೆಸ್.ನ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ ಪ್ರೊ. ಯಶ್ಪಾಲ್.ರವರು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವಿನ್ಯತೆ ತರುವುದು ಎಂದರೆ ಅರ್ಥವೇನು? ಎಂದು ಕೇಳಿ, ತಾವೇ ಹೀಗೆ ಉತ್ತರಿಸಿದರು: ‘ನಮ್ಮ ಬೋಧನೆಯು ಅತ್ಯಂತ ಸರಳವಾಗಿರಲಿ ಅಥವಾ ಅತ್ಯಾಧುನಿಕವಾಗಿರಲಿ, ನಮ್ಮ ಸಮಸ್ಯೆಗಳನ್ನು ನಿರ್ದಿಷ್ಟವಾಗಿ ಪರಿಹರಿಸಬೇಕು’ ಎಂದು ಅರ್ಥ. ಈ ನಿಟ್ಟಿನಲ್ಲಿ ನಾವು ನಮ್ಮ ಸಾಧನೆಗಳನ್ನು ಈಗ ಹಿಮ್ಮುಖವಾಗಿ ಪರಿಶೀಲಿಸಬೇಕಿದೆ. ಇದಕ್ಕೆ ಡಾ. ಮಶೇಲ್ಕರ್ ಮತ್ತು ಇತರರು ಒತ್ತಿ ಹೇಳಿದಂತೆ, ನಮ್ಮ ಮುಂದಿರುವ ಅತ್ಯಂತ ಪ್ರಮುಖ ಸವಾಲು, ಅವಿಧೇಯತೆ ಅಂದರೆ ಪ್ರಶ್ನಾತೀತತೆಯನ್ನು ಉತ್ತೇಜಿಸುವುದು. ಇದು ‘ನಾವೀನ್ಯತೆ ಪರಿಸರ ವ್ಯವಸ್ಥೆ’ಯ ಸೃಷ್ಟಿಗೆ ನಾಂದಿಯಾಗುತ್ತದೆ. ಸರಿಯಾದ ಚಿಂತನೆಯೊಂದಿಗೆ ಪ್ರಶ್ನಿಸುವ ಮನೋಭಾವವು ವಿದ್ಯಾರ್ಥಿಗಳನ್ನು ಸೃಜನಶೀಲ/ನಾವಿನ್ಯತೆಯ ವಿಜ್ಞಾನಿಗಳಾಗಲು ಪ್ರೋತ್ಸಾಹಿಸುವುದು. ಸರಿಯಾದ ರೀತಿಯ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವು,  ಕಾಲ್ಪನಿಕವಾಗಿಯಾದರೂ ಕೂಡ, ಸಮಸ್ಯೆಗಳ ಪರಿಹಾರಕ್ಕಿಂತಲೂ ಮುಖ್ಯವಾಗಿರುತ್ತದೆ ಎಂದು ಹೇಳಬಹುದು. ‘ಜ್ಞಾನಕ್ಕಿಂತ ಕಲ್ಪನೆ ಮುಖ್ಯ’ ಎನ್ನುತ್ತಾರೆ ಐನ್.ಸ್ಟೈನ್.

ಭಾರತವನ್ನು ನಿರ್ಮಿಸುವ ತನ್ನ ದೃಷ್ಟಿಕೋನದಲ್ಲಿ ರಾಮನ್ ಅವರು ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ಹೀಗೆ ಹೇಳಿದ್ದಾರೆ: ಶುದ್ಧ ವಿಜ್ಞಾನದ ನಿಜವಾದ ಪ್ರಾಮುಖ್ಯತೆ ಮತ್ತು ಎಲ್ಲ ಜ್ಞಾನದ ಪ್ರಗತಿಯಲ್ಲಿ ಅದರ ಮೂಲಭೂತ ಪ್ರಭಾವವನ್ನು ಸಾಕಾರಗೊಳಿಸದ ಮತ್ತು ಕ್ರಮಕೈಗೊಳ್ಳದ ಹೊರತು, ಭಾರತವು ಯಾವುದೇ ದಿಕ್ಕಿನಲ್ಲಿ ಮುನ್ನಡೆಯಲಾರದು ಮತ್ತು ಜಗತ್ತಿನ ರಾಷ್ಟ್ರಗಳ ನಡುವೆ ತನ್ನ ಸರಿಯಾದ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಮುಂದುವರಿದು, ಭಾರತಕ್ಕೆ ಬೇಕಾಗಿರುವುದು ವಿಜ್ಞಾನ, ಹೆಚ್ಚು ವಿಜ್ಞಾನ ಮತ್ತು ಮತ್ತಷ್ಟು ವಿಜ್ಞಾನ ಎಂದು ಅವರು ಆರ್ಗಹಿಸಿದರು. ರಾಮನ್.ರವರ ದೃಷ್ಟಿಕೋನದ ನಿಜವಾದ ಹುರುಪನ್ನು ಅರ್ಥಮಾಡಿಕೊಂಡರೆ ‘ರಾಮನ್ ಎಫೆಕ್ಟ್’ ಆವಿಷ್ಕಾರದ ಸವಿನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವುದಕ್ಕೆ ಸಾರ್ಥಕತೆ ತರುತ್ತದೆ.

ಪ್ರತಿಯೊಂದು ಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿಯನ್ನು ಕಾಣುತ್ತಿರುವ ಹಿನ್ನಲೆಯಲ್ಲಿ ವಿಜ್ಞಾನವನ್ನು ಒಂದು ಚಿಂತನಾ ಪ್ರಕ್ರಿಯೆಯಾಗಿ ಕಲಿಸಬೇಕು ಮತ್ತು, ವಿಜ್ಞಾನ ಬೋಧನೆಯನ್ನು ಕಲಿಕೆಯ ಒಂದು ಪ್ರಕ್ರಿಯೆ ಎಂದು ಪರಿಗಣಿಸಬೇಕು – ಕಲಿಯುವ ಒಂದು ವಿಧಾನ ಮತ್ತು ಹೇಗೆ ಆಲೋಚಿಸುವುದು ಎಂದು ಆಲೋಚಿಸುವ ವಿಧಾನ ‘ಥಿಂಕಿಂಗ್ ಅಬೋಟ್ ಥಿಂಕಿಂಗ್ ಈಸ್ ಥಿಂಕಿಂಗ್’. ಈ ಸಂದರ್ಭದಲ್ಲಿ ನಮ್ಮ ಪ್ರಾಚೀನ ಜ್ಞಾನವಾಕ್ಯಗಳನ್ನು ನೆನಪಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಯುಜಿಸಿಯು ‘ನಹಿ ಜ್ಞಾನೇನ ಸದೃಶಂ (ಜ್ಞಾನಕ್ಕೆ ಹೋಲಿಕೆ ಯಾವುದೂ ಇಲ್ಲ) ಎಂಬ ಧ್ಯೇಯವಾಕ್ಯವನ್ನು ಅಚ್ಚೊತ್ತಿದ್ದಾರೆ. ಜ್ಞಾನವಿಜ್ಞಾನಂ ವಿಮುಕ್ತಯೇ (ಜ್ಞಾನ ದಿಂದ ವಿಮುಕ್ತತೆ) ಮತ್ತು ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’  (ಎಲ್ಲ ಕಡೆಯಿಂದಲೂ ಉದಾತ್ತ ಚಿಂತನೆಗಳು ನಮಗೆ ಬರಲಿ) ನಮ್ಮ ಪ್ರಯತ್ನಗಳಿಗೆ ಮಾರ್ಗದರ್ಶನಕವಾಗಿವೆ.

ಅಂತಿಮವಾಗಿ, ವಿದ್ಯಾರ್ಥಿಗಳನ್ನು ಉತ್ಕೃಷ್ಟತೆಯತ್ತ ಮುನ್ನಡೆಯಿಸಲು, ಅವರು ಸಂಶೋಧನಾ ವೃತ್ತಿಯನ್ನು ಆರಂಭಿಸುವ ಮುನ್ನ ಮಹಾನ್ ಮನಸ್ಸುಗಳ ಕೃತಿಗಳನ್ನು ಬೋಧಿಸಬೇಕು ಅಥವಾ ಅದರ ಪ್ರಭಾವಕ್ಕೆ ಒಳಪಡಿಸಬೇಕು. ಈ ಬಗ್ಗೆ ಐನ್.ಸ್ಟೈನ್, ನನ್ನಂತಹ ವ್ಯಕ್ತಿಯ ಅಸ್ತಿತ್ವದ ಅತ್ಯಗತ್ಯತೆಯು ಅವನು ಏನು ಯೋಚಿಸುತ್ತಾನೆ ಮತ್ತು ಅವನು ಹೇಗೆ ಯೋಚಿಸುತ್ತಾನೆ ಎಂಬುದರ ಮೇಲೆ ಅಡಗಿದೆ, ಅವನು ಏನು ಮಾಡುತ್ತಾನೆ ಅಥವಾ ಯಾತನೆ ಪಡುತ್ತಾನೆ ಎಂಬುದಲ್ಲ. ವಿದ್ಯಾರ್ಥಿಗಳಲ್ಲಿ ಆವಿಷ್ಕಾರ/ನಾವಿನ್ಯತೆ ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ಬೆಳೆಸುವುದಕ್ಕಾಗಿ ಶಿಕ್ಷಕರು ಬೋಧನಾ-ಕಲಿಕೆಯನ್ನು ಒಂದು ಪ್ರಕ್ರಿಯೆಯಾಗಿ ಸಂಘಟಿಸಬೇಕು. ನಮ್ಮ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಭಾರತದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಸಂಶೋಧನೆ, ಆವಿಷ್ಕಾರ ಮತ್ತು ನಾವಿನ್ಯತೆಗಳ ಕೇಂದ್ರವಾಗಬೇಕು.

ಇಂಗ್ಲೀಶ್ ಲೇಖನ “Nurturing Excellence in Science Education and Research” ಅನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದಕ್ಕೆ ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ, ಕವಿತಂಅ ಇವರಿಗೆ ಧನ್ಯವಾದಗಳು

ಉಲ್ಲೇಖ ಗ್ರಂಥಗಳು:

  • C.N.R. Rao, Life In Science, 2016, Penguin Random House India.
  • Matt Ridley, The Evolution of Everything, 2015, Fourth Estate, London.
  • Ragunath Mashelkar, Reinventing India, 2011, Sahyadri Prakashan, Pune; www.mashelkar.com.
  • Gautam R. Desiraju, Science Education and Research in India, 2008, pp37-43, Economic and Political Weekly
  • Biman Basu, Yash Pal: A Life in Science, 2006, Yigyan Prasar, Dept of Science and Technology, New Delhi.
  • Verghese Kurien, Too had a Dream, 2005, Rolli Books.
  • A.P.J. Abdul Kalam with Y.S. Rajan, India 2020: A vision for the New Millennium, 1998, Penguin Books India.
  • G.Venkataraman, Bhabha and His Magnificent Obsessions,1994, Universities Press Hyderabad (India).
  • Kameshawar C. Wali, CHANDRA: A Biography of S.Chandrasekhar, 199l, Viking Penguin, India.
  • G. Venkataraman, Journey Into Light, 1988, Indian Academy of Sciences, Bangalore.
  • T. Abraham Pais, Subtle Is the Lord: The science and the life of Albert Einstein, 1982, Oxford University Press, New York.
  • Bertrand Russell, The Scientific Outlook, l931, George Allen &Unwin Ltd, London.

ಪ್ರೊ. ಬಿ. ಜಿ. ಮೂಲಿಮನಿ
ಸದಸ್ಯರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ವಿಶ್ರಾಂತ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾನಿಲಯ, ಕಲಬುರಗಿ
ಇ-ಮೇಲ್: bgmulimani70@gmail.com

ಪ್ರೊ. ಜೆ. ತೊಣ್ಣನ್ನವರ್
ನಿವೃತ್ತ ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ,
ಕರ್ನಾಟಕ ವಿಶ್ವವಿದ್ಯಾನಿಲಯ, ಕಲಬುರಗಿ
ಇ-ಮೇಲ್ : : jtonannavar.kud.phys@gmail.com 

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content