ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಭಾರತೀಯ ಪ್ಯಾಂಗೋಲಿನ್ (ಚಿಪ್ಪುಹಂದಿ) – ಭೂಮಿಯ ಮೇಲಿನ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಾಣಿ

1 min read

ಡಾ. ರಾಮಕೃಷ್ಣ ಪಿಎಚ್.ಡಿ., ಡಿ.ಎಸ್ಸಿ.
ಫೆಲೋ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ನಿವೃತ್ತ ನಿರ್ದೇಶಕರು, ಝೂವಲಾಜಿಕಲ್ ಸೊಸೈಟಿ ಆಫ್ ಇಂಡಿಯಾ

ಕನ್ನಡಕ್ಕೆ ಅನುವಾದ – ಡಾ. ಆನಂದ್ ಆರ್.,
ಹಿರಿಯ ವೈಜ್ಞಾನಿಕ ಅಧಿಕಾರಿ,  
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಶ್ವ ಪ್ಯಾಂಗೋಲಿನ್ ದಿನವನ್ನು 2024ರ ಫೆಬ್ರವರಿ 17 ರಂದು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಫೆಬ್ರವರಿ ಮಾಹೆಯ ಮೂರನೇ ಶನಿವಾರದಂದು ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದ್ದು, ಚಿಪ್ಪುಹಂದಿಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗುತ್ತಿದೆ. ಚಿಪ್ಪುಹಂದಿಗಳು ಅತ್ಯಂತ ಅಮೂಲ್ಯವೆಂದು ಪರಿಗಣಿಸಲಾಗಿದ್ದು, ದುರದೃಷ್ಟವಶಾತ್ ಅನೇಕ ರೀತಿಯ ಚಿಕಿತ್ಸೆಗೆ ಇವುಗಳ ಚಿಪ್ಪುಗಳು ಸೂಕ್ತವೆಂದು ನಂಬಲಾಗಿದೆ. ಏಷ್ಯಾದ ಸಾಂಪ್ರದಾಯಿಕ ಔಷಧ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಅವುಗಳ ಚಿಪ್ಪಿಗಾಗಿ ದೊಡ್ಡ ಪ್ರಮಾಣದಲ್ಲಿ ಸಂಘಟಿತ ಅಪರಾಧ ಜಾಲಗಳಿಂದ ಕಾನೂನು ಬಾಹಿರ ಸೆರೆ, ಕಳ್ಳಸಾಗಣೆ ಮತ್ತು ಕೊಲ್ಲಲ್ಪಡುತ್ತಿವೆ. ಅಲ್ಲದೆ, ಚಿಪ್ಪುಹಂದಿಗಳ ಮಾಂಸವನ್ನು ರುಚಿಕರವೆಂದು ಪರಿಗಣಿಸಲಾಗುತ್ತದೆ. ಪ್ಯಾಂಗೋಲಿನ್ ಎಂಬ ಹೆಸರು ಮಲಯನ್ ನುಡಿಗಟ್ಟು ‘ಪೆನ್-ಗುಲಿಂಗ್’ ನಿಂದ ಬಂದಿದ್ದು, ಅದರರ್ಥ ಉರುಳುವ ಚೆಂಡು ಎಂದು. ಫೋಲಿಡೋಟಾ ಎಂಬ ಪದವು ಗ್ರೀಕ್ ಪದದಿಂದ ಬಂದಿದ್ದು, ಅದರರ್ಥ ಚಿಪ್ಪನ್ನು ಹೊಂದಿರುವ ಪ್ರಾಣಿ ಎಂದು. ಪ್ರಪಂಚದಾದ್ಯಂತ ಇವುಗಳ ಎಂಟು ಪ್ರಭೇದಗಳು ತಿಳಿದಿವೆ, ನಾಲ್ಕು ಪ್ರಭೇದಗಳು ಆಫ್ರಿಕಾದಲ್ಲಿವೆ ಮತ್ತು ಉಳಿದ ನಾಲ್ಕು ಪ್ರಭೇದಗಳು ಏಷ್ಯಾದಲ್ಲಿವೆ. ಏಷ್ಯಾದ ನಾಲ್ಕು ಪ್ರಭೇದಗಳಲ್ಲಿ, ಎರಡು ಭಾರತದಲ್ಲಿವೆ.  ಭಾರತೀಯ ಪ್ಯಾಂಗೋಲಿನ್, ಮಾನಿಸ್ ಕ್ರಾಸ್ಸಿಕೌಡಾಟಾ, ಭಾರತೀಯ ಉಪಖಂಡದಾದ್ಯಂತ ಕಂಡು ಬರುತ್ತದೆ (ಹಿಮಾಲಯ ಮತ್ತು ಈಶಾನ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ, ಅಲ್ಲಿ ಚೀನೀ ಪ್ಯಾಂಗೋಲಿನ್  ಮಾನಿಸ್ ಪೆಂಟಾಡಾಕ್ಟಿಲಾ ಕಾಣಸಿಗುತ್ತದೆ).

ವರ್ಗೀಕರಣ ಶಾಸ್ತ್ರ (ಪ್ರಾಣಿ ಸಾಮ್ರಾಜ್ಯದಲ್ಲಿ ಇದರ ಸ್ಥಾನ)

ವೈಜ್ಞಾನಿಕ ಹೆಸರು: ಮನಿಸ್ ಕ್ರಾಸ್ಸಿಕೌಡಾಟಾ  (ಇ. ಜೆಫ್ರಾಯ್, 1803)
ಸಾಮಾನ್ಯ ಹೆಸರು: ಇಂಡಿಯನ್ ಪ್ಯಾಂಗೋಲಿನ್, ಸ್ಕೇಲಿ ಆಂಟಿಯೇಟರ್ (ಕನ್ನಡ: ಚಿಪ್ಪುಹಂದಿ)
ವೈಜ್ಞಾನಿಕ ಹೆಸರು: ಮಣಿಸ್ ಪೆಂಟಾಡಾಕ್ಟಿಲಾ (ಲಿನ್ನೇಯಸ್, 1758)
ಸಾಮಾನ್ಯ ಹೆಸರು: ಚೈನೀಸ್ ಪ್ಯಾಂಗೋಲಿನ್

ಸಾಮ್ರಾಜ್ಯಫೈಲಮ್ವರ್ಗಆರ್ಡರ್ಕುಟುಂಬ
ಅನಿಮಲಿಯಾಕಾರ್ಡೇಟಾಸಸ್ತನಿಗಳುಫೋಲಿಡೋಟಾಮನಿಡೇ

ಸಾಮಾನ್ಯ ಗುಣಲಕ್ಷಣಗಳು

ಭಾರತೀಯ ಚಿಪ್ಪುಹಂದಿ (ಮನಿಸ್ ಕ್ರಾಸ್ಸಿಕೌಡಾಟಾ) 11 ರಿಂದ 13 ಸಾಲುಗಳಿಂದ ಆವೃತವಾಗಿರುವ ಒಂದು ದೊಡ್ಡ  ಇರುವೆದಿನಿಯಾಗಿದ್ದು (ಆಂಟಿಯೇಟರ್), 9 ರಿಂದ 18 ಕೆಜಿ ತೂಕವಿರುತ್ತದೆ. ತಲೆ ಮತ್ತು ದೇಹ ಸೇರಿ ಸುಮಾರು 60-70 ಸೆಂ.ಮೀ. ನಷ್ಟು ಉದ್ದವಾಗಿರುತ್ತದೆ.  ಉದ್ದವಾದ ಚೂಪಾದ ದೇಹವನ್ನು ಹೊಂದಿದ್ದು, ಮೂಗು, ಗಲ್ಲ, ಮುಖದ ಬದಿಗಳು, ಕತ್ತು, ಹೊಟ್ಟೆ ಮತ್ತು ಕೈಕಾಲುಗಳ ಒಳ ಮೇಲ್ಮೈಯನ್ನು ಹೊರತುಪಡಿಸಿ, ಕೆರಾಟಿನ್ ನಿಂದ ಮಾಡಲ್ಪಟ್ಟ ದೊಡ್ಡ-ದೊಡ್ಡದಾದ ಚಿಪ್ಪಿನಿಂದ ದೇಹವು ಆವೃತವಾಗಿದೆ. ದೇಹದ ಮೇಲಿನ ಚಿಪ್ಪುಗಳು ಅಗಾಧವಾಗಿ ವಿಸ್ತರಿಸಿದ ಮತ್ತು ಚಪ್ಪಟೆಯಾದ ಕೂದಲುಗಳು ಅಥವಾ ಬೆನ್ನುಮೂಳೆಗಳಂತೆ ಅನಿಸುತ್ತದೆ. ಚೂಪಾದ ಹಿಂಭಾಗದ ಅಂಚನ್ನು ಹೊಂದಿರುವ ಈ ಚಲಿಸುವ ಚಿಪ್ಪುಗಳು ದಪ್ಪ ಚರ್ಮದ ತಳದಲ್ಲಿ ಜೋಡಿಸಲ್ಪಟ್ಟಿದ್ದು, ಅಲ್ಲಿಂದ ಅವು ಬೆಳೆಯುತ್ತವೆ. ಸವೆತವಾದಂತೆಲ್ಲಾ ಚಿಪ್ಪಿನ ಆಕಾರ ಮತ್ತು ಮೇಲ್ಮೈ ಆಕೃತಿಯು ಬದಲಾಗುತ್ತದೆ. ಈ ಚಿಪ್ಪುಗಳು ವಿವಿಧ ಛಾಯೆಯ ಕಂದು, ಹಳದಿ ಬಣ್ಣವನ್ನು ಹೊಂದಿರುತ್ತವೆ. ದೇಹದ ಚಿಪ್ಪುರಹಿತ ಪ್ರದೇಶಗಳು ಬಿಳಿ, ಕಂದು ಅಥವಾ ಕಪ್ಪು ಬಿರುಗೂದಲುಗಳಿಂದ ಆವರಿಸಿರುತ್ತವೆ. ಈ ಚಿಪ್ಪುಗಳು ಪರಭಕ್ಷಕ ಮತ್ತು ಕೀಟಗಳ ಕಡಿತದಿಂದ ರಕ್ಷಸಿಕೊಳ್ಳಲು ಸಹಾಯ ಮಾಡುತ್ತವೆ. ಕಣ್ಣುಗಳು ಚಿಕ್ಕದಾಗಿ ದಪ್ಪವಾದ ಗಾಡವಾದ ಕಣ್ಣುರೆಪ್ಪೆಗಳನ್ನು ಹೊಂದಿರುತ್ತವೆ ಮತ್ತು ಇವುಗಳ ದೃಷ್ಟಿ ಕಡಿಮೆ. ಆದುದರಿಂದ ಇವು ಗೆದ್ದಲು ಮತ್ತು ಇರುವೆ ಗೂಡುಗಳನ್ನು ಬಲವಾದ ವಾಸನೆ ಗ್ರಹಿಕೆಯ ಮೂಲಕ ಗುರುತಿಸುತ್ತವೆ. ಐದು ಉಗುರುಗಳನ್ನು ಹೊಂದಿರುವ ಕೈಕಾಲುಗಳನ್ನು ಹೊಂದಿದ್ದು, ಅಗೆಯಲು ಅನುಕೂಲವಾಗಲು ಹಿಂಭಾಗದ ಕಾಲುಗಳು ಮುಂಭಾಗದ ಕಾಲುಗಳಿಗಿಂತ ಉದ್ದ ಮತ್ತು ದಪ್ಪವಾಗಿರುತ್ತವೆ. ಇದು ಐದು ಕಾಲ್ಬೆರಳುಗಳನ್ನು ಹೊಂದಿದೆ ಮತ್ತು ಅವುಗಳ ಮುಂಗಾಲು ಉದ್ದವಾದ, ಬಾಗಿದ ಮೂರು ಉಗುರುಗಳನ್ನು ಹೊಂದಿದ್ದು, ಗೆದ್ದಲುಗಳು ಮತ್ತು ಇರುವೆಗಳ ಗೂಡುಗಳನ್ನು ನಾಶಪಡಿಸಲು ಮತ್ತು ಗೂಡುಕಟ್ಟಲು ಮತ್ತು ಮಲಗುವ ಬಿಲಗಳನ್ನು ಅಗೆಯಲು ಬಳಸಲಾಗುತ್ತದೆ. ಚಿಕ್ಕದಾದ ಮತ್ತು ದಪ್ಪದಾದ ಬಾಲವನ್ನು ಹೊಂದಿರುವ ಚಿಪ್ಪುಹಂದಿಗಳು ಉದ್ದವಾದ ಸ್ನಾಯುಗಳಿಂದ ಕೂಡಿದ ಮತ್ತು ಜಿಗುಟಾದ ನಾಲಿಗೆಯನ್ನು ಹೊಂದಿದ್ದು, ಆಳವಾದ ಕುಳಿಗಳಲ್ಲಿ ಇರುವೆಗಳು ಮತ್ತು ಗೆದ್ದಲುಗಳನ್ನು ತಲುಪಲು ಮತ್ತು ಸೆಳೆಯಲು ಸೂಕ್ತವಾಗಿವೆ. ತಲೆಬುರುಡೆಯು ಆಯತಾಕಾರ ಅಥವಾ ಶಂಕು ಆಕಾರದಲ್ಲಿದ್ದು, ಹಲ್ಲುಗಳಿರುವುದಿಲ್ಲ. ಹೆಣ್ಣು ಚಿಪ್ಪುಹಂದಿಯು ಎದೆಗೂಡಿನ ಪ್ರದೇಶದಲ್ಲಿ ಎರಡು ಸ್ತನಗಳನ್ನು ಹೊಂದಿರುತ್ತವೆ.

ಚೈನೀಸ್ ಚಿಪ್ಪುಹಂದಿ (ಮನಿಸ್ ಪೆಂಟಾಡಾಕ್ಟಿಲಾ) 48 ರಿಂದ 58 ಸೆಂ.ಮೀ ಉದ್ದ ಮತ್ತು 1.8 ರಿಂದ 7 ಕೆಜಿ ತೂಕವಿರುತ್ತದೆ. ಗಾತ್ರದಲ್ಲಿ ಗಂಡು ಮತ್ತು ಹೆಣ್ಣು ಬಿನ್ನವಾಗಿದ್ದು, ಗಂಡು ತುಂಬಾ ದೊಡ್ಡದಾಗಿರುವುದರಿಂದ ಸುಲಭವಾಗಿ ಗುರುತಿಸಬಹುದು. ಮೂಗಿನ, ಒಳಕೈಕಾಲುಗಳು ಮತ್ತು ಕೆಳಹೊಟ್ಟೆಯನ್ನು ಹೊರತುಪಡಿಸಿ ಅದರ ಇಡೀ ದೇಹವು ಮಸುಕಾದ ಅಥವಾ ಹಳದಿ-ಕಂದು ಬಣ್ಣದ ಚಿಪ್ಪುಗಳಿಂದ ಆವೃತವಾಗಿರುತ್ತವೆ.

ಪ್ರಾಮುಖ್ಯತೆ

ಅವು ಬಯಲು ಮತ್ತು ಹುಲ್ಲುಗಾವಲುಗಳಲ್ಲಿ (ಕುರುಚಲು ಕಾಡು, ಮಳೆಕಾಡು, ಉಷ್ಣವಲಯದ ಕಾಡು, ತೇವಾಂಶದ ಕಾಡು, ಒಣ ಎಲೆಯುದುರುವ, ಆರ್ದ್ರ ಕಾಡು, ಅರೆ ನಿತ್ಯಹರಿದ್ವರ್ಣ ಕಾಡು) ಮತ್ತು ಮಾನವ ವಾಸಸ್ಥಳಗಳ ಬಳಿ ವಾಸಿಸುತ್ತವೆ (ಚಕ್ರವರ್ತಿ ಮತ್ತು ರಾಮಕೃಷ್ಣ, 2002). ಭಾರತೀಯ ಚಿಪ್ಪುಹಂದಿ ಸಾಮಾನ್ಯ ನೆಲೆಯ ಪ್ರಬೇಧವಾಗಿದ್ದು, ಅನೇಕ ಭೂ ಪರಿಸರ ವ್ಯವಸ್ಥೆಗಳಲ್ಲಿ ಕಂಡುಬರುತ್ತದೆ (ರಾಬರ್ಟ್ಸ್, 1997) ಅವು ಇರುವೆದನಿ (ಮಿರ್ಮೆಕೊಫಾಗಸ್) ಗಳಾಗಿದ್ದು (ಇರುವೆಗಳು, ಗೆದ್ದಲುಗಳನ್ನು ತಿನ್ನುತ್ತವೆ, ಗೆದ್ದಲಿನಿಂದ ಕಾಡುಗಳನ್ನು ರಕ್ಷಿಸುತ್ತವೆ; ಉದಾ. 3 ಕೆಜಿ ತೂಕದ ಚಿಪ್ಪುಹಂದಿ ಒಂದು ಹೊತ್ತಿನಲ್ಲಿ 0.30 ಕೆಜಿಗಿಂತ ಹೆಚ್ಚು ಗೆದ್ದಲುಗಳನ್ನು ತಿನ್ನಬಲ್ಲದು) ಕೆಲವು ಸಂದರ್ಭಗಳಲ್ಲಿ ಜೇನುನೊಣ ಲಾರ್ವಾಗಳು, ನೊಣಗಳು, ಹುಳುಗಳು, ಎರೆಹುಳುಗಳು ಮತ್ತು ಮಿಡತೆ ಸೇರಿದಂತೆ ವಿವಿಧ ಅಕಶೇರುಕಗಳನ್ನೂ ಸಹ ತಿನ್ನುತ್ತವೆ. ಚೀನೀ ಚಿಪ್ಪುಹಂದಿ ಕೊರೆದ ಬಿಲಗಳನ್ನು ವಿವಿಧ ಉದ್ದೇಶಗಳಿಗಾಗಿ 30 ಕ್ಕಿಂತ ಹೆಚ್ಚು ಜಾತಿಗಳ ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಅಕಶೇರುಕಗಳು ಸೇರಿದಂತೆ ಬಳಸುತ್ತವೆ ಎಂದು ವರದಿಯಾಗಿದೆ (ಸನ್, ಮತ್ತು ಇತರರು, 2021). ಅವು ಇರುವೆಗಳು, ಗೆದ್ದಲುಗಳು ಮತ್ತು ಕೀಟಗಳನ್ನು ತಿನ್ನುವ ಮೂಲಕ ಜೀವಪರಿಸರ ವ್ಯವಸ್ಥೆಯಲ್ಲಿ ನೈಸರ್ಗಿಕ ಕೀಟ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನೆಲೆಯ ಎಂಜಿನಿಯರ್ ಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಇವುಗಳು ಆಶ್ರಯಕ್ಕಾಗಿ ಬಿಲವನ್ನು ಅಗೆಯುವುದರಿಂದ ಮಣ್ಣಿನಲ್ಲಿ ಗಾಳಿಯಾಡಲು ಮತ್ತು ಖನಿಜ ಚಕ್ರ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಬಿಲಗಳನ್ನು ಉತ್ಖನನ ಮಾಡುವ ಮೂಲಕ, ಅವು ಸಾವಯವ ವಸ್ತುಗಳ ವರ್ಗಾವಣೆ ಸೇರಿದಂತೆ ಮಣ್ಣಿನ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮಣ್ಣಿನ ಚಲನೆಗೆ ಕಾರಣವಾಗುತ್ತವೆ (ಮಾರಿಸ್ ಮತ್ತು ಇತರರು, 2019). ಕೆಂಪು ವೀವರ್ ಇರುವೆ (ಒಕೊಫಿಲ್ಲಾ ಸ್ಮರಗ್ಡಿನಾ) ಭಾರತೀಯ ಚಿಪ್ಪುಹಂದಿಯ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ (ಮಹಮೂದ್ ಮತ್ತು ಇತರರು, 2013). ಭಾರತೀಯ ಚಿಪ್ಪುಹಂದಿಯು ಒಂದು ಇರುಳುಚರ ಪ್ರಾಣಿಯಾಗಿದ್ದು, ಅವು ಕೀಟಗಳ ಗೂಡುಗಳನ್ನು ಕಂಡುಹಿಡಿಯಲು ತಮ್ಮ ವಾಸನೆಯ ಪ್ರಜ್ಞೆಯನ್ನು ಅವಲಂಬಿಸಿವೆ (ಮೊಹಾಪಾತ್ರ ಮತ್ತು ಪಾಂಡಾ 2014).

ವಿಸ್ತಾರತೆ

ಭಾರತೀಯ ಚಿಪ್ಪುಹಂದಿ (ಮನಿಸ್ ಕ್ರಾಸ್ಸಿಕೌಡಾಟಾ) ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನದ ಉತ್ತರ ಮತ್ತು ಆಗ್ನೇಯ, ಭಾರತದ ಹೆಚ್ಚಿನ ಭಾಗ, ಹಿಮಾಲಯದ ದಕ್ಷಿಣ (ದೂರದ ಈಶಾನ್ಯ ಭಾಗಗಳನ್ನು ಹೊರತುಪಡಿಸಿ), ದಕ್ಷಿಣ ನೇಪಾಳ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತವೆ. ಭಾರತದಲ್ಲಿ ದೂರದ ಈಶಾನ್ಯವನ್ನು ಹೊರತುಪಡಿಸಿ, ಹಿಮಾಲಯದ ತಪ್ಪಲಿನಿಂದ ದೂರದ ದಕ್ಷಿಣದವರೆಗೆ ವ್ಯಾಪಕವಾಗಿ ಕಂಡುಬರುತ್ತವೆ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್, ದೆಹಲಿ, ರಾಜಸ್ಥಾನ, ಒರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಛತ್ತೀಸ್ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಇವುಗಳ ದಾಖಲೆಗಳಿವೆ. ಕನ್ಯಾಕುಮಾರಿ ಮತ್ತು ಕೇರಳದಲ್ಲೂ ಐತಿಹಾಸಿಕ ದಾಖಲೆಗಳಿವೆ. ಈ ಪ್ರಭೇದವು ತಮಿಳುನಾಡಿನಲ್ಲಿಯೂ ಕಂಡುಬರುತ್ತದೆ. ಶ್ರೀಲಂಕಾದಲ್ಲಿ ಭಾರತೀಯ ಚಿಪ್ಪುಹಂದಿ ಗೆದ್ದಲುಗಳಂತೆ ತಗ್ಗು ಪ್ರದೇಶಗಳಾದ್ಯಂತ 1,100 ಮೀಟರ್ ಎತ್ತರದವರೆಗೆ ಕಂಡುಬರುತ್ತದೆ (ಫಿಲಿಪ್ಸ್ 1981),  ಸಿಂಧ್, ಬಲೂಚಿಸ್ತಾನ್, ಖೈಬರ್ ಪಖ್ತುನ್ಖಾವಾ ಮತ್ತು ಪಂಜಾಬ್ ನ ಕೆಲವು ಭಾಗಗಳಲ್ಲಿ, ಪಾಕಿಸ್ತಾನದ ಪೊಟೋಹರ್ ಪ್ರಸ್ಥಭೂಮಿಯಲ್ಲೂ ಸಹ ಕಂಡುಬಹುತ್ತದೆ (ರಾಬರ್ಟ್ಸ್, 1997).

ಚೀನೀ ಚಿಪ್ಪುಹಂದಿ (ಮನಿಸ್ ಪೆಂಟಾಡಾಕ್ಟಿಲಾ) ಭಾರತದ ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ, ಭೂತಾನ್, ಚೀನಾ, ಹಾಂಗ್ ಕಾಂಗ್, ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್, ಮ್ಯಾನ್ಮಾರ್, ನೇಪಾಳ, ತೈವಾನ್, ಚೀನಾ ಪ್ರಾಂತ್ಯ, ಥೈಲ್ಯಾಂಡ್, ವಿಯೆಟ್ನಾಮ್ ಗಳಲ್ಲಿ ಕಂಡುಬರುವ ಗಂಭೀರ ಅಳಿವಿನಂಚಿನಲ್ಲಿರುವ ಜಾತಿಯಾಗಿದೆ. ಚೀನೀ ಚಿಪ್ಪುಹಂದಿಗಳು ಇರುಳುಚರ, ಒಂಟಿ ಪ್ರಾಣಿಗಳಾಗಿದ್ದು, ಅವು ತಮ್ಮ ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯುತ್ತವೆಯಾದರೂ ಅವು ಉತ್ತಮ ಆರೋಹಿಗಳು.  ಚೀನೀ ಚಿಪ್ಪುಹಂದಿಗಳು ಬಹುತೇಕ ಹೆಲ್ಮೆಟ್ ಧರಿಸಿದಂತೆ ಕಾಣುತ್ತವೆ ಮತ್ತು  ಭಾರತೀಯ ಚಿಪ್ಪುಹಂದಿಗಿಂತ ಸಣ್ಣ ಚಿಪ್ಪುಗಳನ್ನು, ದೊಡ್ಡ ಕಿವಿ ಪಿನ್ನಾ, ಗುದದ ನಂತರದ ಚರ್ಮದಲ್ಲಿ ತಗ್ಗು ಮತ್ತು ಬಾಲದ ತುದಿ ಕಿರಿದಾಗಿದೆ. ಭಾರತದಲ್ಲಿ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಪ್ರಭೇದಗಳು ವರದಿಯಾಗಿವೆ. ಚೀನೀ ಚಿಪ್ಪುಹಂದಿ ಶ್ರೇಣಿಯು ಭಾರತದ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾರತೀಯ ಚಿಪ್ಪುಹಂದಿ ಜೊತೆಗೆ ಕಂಡುಬರುತ್ತವೆ (ಚಾಲೆಂಡರ್, ಮತ್ತು ಇತರರು, 2019).

ಪ್ರಸ್ತುತ ಸ್ಥಿತಿಗತಿ

ಐಯುಸಿಎನ್ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ಕೆಂಪು ಪಟ್ಟಿ (ಸ್ಪೀಸೀಸ್ ಸರ್ವೈವಲ್ ಕಮಿಷನ್) ವರ್ಗಗಳು ಮತ್ತು ಮಾನದಂಡಗಳು ಜಾಗತಿಕ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ವರ್ಗೀಕರಿಸಲು ಇರುವ ಸರಳ ಮತ್ತು ವ್ಯಾಪಕವಾಗಿ ಬಳಸುವ ವ್ಯವಸ್ಥೆಯಾಗಿದೆ. ಐಯುಸಿಎನ್ ಅಳಿವಿನಂಚಿನ ವರ್ಗದ ಪ್ರಕಾರ, ಅತಿಯಾದ ದುರ್ಬಳಕೆಯಿಂದಾಗಿ ಭವಿಷ್ಯದಲ್ಲಿ ಮೂರು ತಲೆಮಾರುಗಳ ಕಾಲಾವಧಿಯಲ್ಲಿ (ಅಂದರೆ 2019-2043) ಇವುಗಳ ಸಂಖ್ಯೆಯು ಶೇಖಡ 50 ರಷ್ಟು ಕಡಿಮೆಯಾಗಬಹುದು ಎಂದು ಶಂಕಿಸಲಾಗಿದೆ. ಈ ಪ್ರಭೇದವು ಅದರ ವ್ಯಾಪ್ತಿ ಪ್ರದೇಶದಲ್ಲಿ ಪ್ರಾದೇಶಿಕ ಬಳಕೆಗೆ ಮತ್ತು ಅವುಗಳ ಚಿಪ್ಪನ್ನು ಅಂತರಾಷ್ಟ್ರೀಯ ಕಳ್ಳಸಾಗಣೆ ಮೂಲಕ, ಸಾಗರೋತ್ತರ ಮಾರುಕಟ್ಟೆಗಳಿಗೆ, ಮುಖ್ಯವಾಗಿ ಚೀನಾಕ್ಕೆ ರವಾನೆಯಾಗುತ್ತಿದೆ   (www.iucn.org, 2024).

ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯಗಳ ನಿಗಾವಹಿಸುವ CITES (ದಿ ಕನ್ವೆಂಶನ್ ಆನ್ ಇಂಟರ್ನಾಶನಲ್ ಟ್ರೇಡ್ ಇನ್ ಎನ್ಡೇಜರ್ಡ್ ಸ್ಪೀಸೀಸ್ ಆಪ್ ವೈಲ್ಡ್ ಫಾನಾ ಅಂಡ್ ಪ್ಲೋರಾ) ಸಹ ಈ ಪ್ರಭೇದವನ್ನು ಪಟ್ಟಿ ಮಾಡಿದೆ. ಇದರಲ್ಲಿ ಅಳಿವಿನ ಅಪಾಯದಲ್ಲಿರುವ ಎಲ್ಲಾ ಶ್ರೇಣಿಯ ಪ್ರಬೇದಗಳನ್ನು ಪಟ್ಟಿಮಾಡಲಾಗಿದ್ದು, ವಾಣಿಜ್ಯೋದ್ದೇಶವಿಲ್ಲದ ಆಮದುಗಳನ್ನು (ಉದಾಹರಣೆಗೆ ವೈಜ್ಞಾನಿಕ ಸಂಶೋಧನೆ) ಹೊರತುಪಡಿಸಿ ಇತರೆ ಎಲ್ಲಾ ಅಂತರಾಷ್ಟ್ರೀಯ ವ್ಯಾಪಾರವನ್ನು CITES ನಿಷೇಧಿಸುತ್ತದೆ. ಆದರೆ, ಅಸಾಧಾರಣ ಸಂದರ್ಭಗಳಲ್ಲಿ, ಆಮದು ಪರವಾನಗಿ ಮತ್ತು ರಫ್ತು ಪರವಾನಗಿ (ಅಥವಾ ಮರು-ರಫ್ತು ಪ್ರಮಾಣಪತ್ರ) ಎರಡನ್ನೂ ನೀಡುವ ಮೂಲಕ ಅಧಿಕಾರ ನೀಡಿದರೆ ವ್ಯಾಪಾರ ನಡೆಯಬಹುದು.

2016 ರಿಂದ (ಜನವರಿ 2017 ರಿಂದ ಜಾರಿಗೆ ಬರುವಂತೆ), ಕಾಡು ಮೂಲದ ಚಿಪ್ಪುಹಂದಿಗಳ ಎಲ್ಲಾ ಅಂತರಾಷ್ಟ್ರೀಯ ವಾಣಿಜ್ಯ ವ್ಯಾಪಾರವನ್ನು CITES ನಿಷೇಧಿಸಿದೆ (https://cites.org/eng/app/appendices.php). ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ‘ಶೆಡ್ಯೂಲ್ -1’ ರ ಅಡಿಯಲ್ಲಿ ಈ ಪ್ರಭೇದವು ರಕ್ಷಿಸಲ್ಪಟ್ಟಿದೆ (ಅತ್ಯುನ್ನತ ಮಟ್ಟದ ರಕ್ಷಣೆ). ಅನುಸೂಚಿ I ರಲ್ಲಿ ಪಟ್ಟಿ ಮಾಡಲಾದ ಪ್ರಭೇದಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಕನಿಷ್ಠ 3 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಹಾಗೂ ರೂ. 25,000 ಕ್ಕಿಂತ ಕಡಿಮೆಯಿಲ್ಲದ ದಂಡ ಮತ್ತು ನಂತರದ ಅಪರಾಧಗಳಿಗೆ ರೂ. 1.0 ಲಕ್ಷದವರೆಗೆ ದಂಡವನ್ನು ಹೆಚ್ಚಿಸಲಾಗಿದೆ.

ಚೀನೀ ಚಿಪ್ಪುಹಂದಿಯನ್ನು (ಮನಿಸ್ ಪೆಂಟಾಡಾಕ್ಟಿಲಾ) ಐಯುಸಿಎನ್ ಗಂಭೀರ ಅಳಿವಿನಂಚಿನಲ್ಲಿರುವ ವರ್ಗ, CITES ನ ಪಟ್ಟಿ ಮತ್ತು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಶೆಡ್ಯೂಲ್ -1 ರ ಅಡಿಯಲ್ಲಿ ಸೇರಿಸಲಾಗಿದೆ.

ಈ ಎಲ್ಲಾ ರಕ್ಷಣಾ ಕ್ರಮಗಳ ಹೊರತಾಗಿಯೂ, ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಭಾರತದಲ್ಲಿ ಚಿಪ್ಪುಹಂದಿಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಮತ್ತು ವ್ಯಾಪಾರ ಮಾಡಲಾಗುತ್ತಿದೆ. ಜೀವಂತ ಭಾರತೀಯ ಚಿಪ್ಪುಹಂದಿಗಳ ವ್ಯಾಪಾರದಲ್ಲಿ ಏರಿಕೆ ಕಂಡುಬಂದಿದ್ದು, ಕಾಡಿನಲ್ಲಿ ಚಿಪ್ಪುಹಂದಿಯನ್ನು ಕಂಡುಕೊಳ್ಳುವ ಸ್ಥಳೀಯರು ಸಹ ಹೆಚ್ಚಿನ ಹಣದ ನಿರೀಕ್ಷೆಯಲ್ಲಿ ಖರೀದಿದಾರರನ್ನು ಹುಡುಕುತ್ತಾರೆ. ಕಳಪೆ ಸ್ಥಿತಿಯಲ್ಲಿ ಇಟ್ಟುಕೊಂಡಿರುವ ಮತ್ತು ಅವುಗಳ ಪರಿಸರದ ಬಗ್ಗೆ ಸೀಮಿತ ಅಥವಾ ತಪ್ಪು ತಿಳುವಳಿಕೆಯಿಂದಾಗಿ ದೀರ್ಘಕಾಲದವರೆಗೆ ಹಸಿವಿನಿಂದ ಬಳಲುತ್ತಿದೆ ಹಲವಾರು ಭಾರತೀಯ ಚಿಪ್ಪುಹಂದಿಗಳನ್ನು ವಶಪಡಿಸಿಕೊಳ್ಳಲು ಕಾರಣವಾಗಿದೆ, (ವನ್ಯಜೀವಿ ಸಂರಕ್ಷಣಾ ಟ್ರಸ್ಟ್, 2022).

ಅಳಿವಿನ ಭೀತಿ

ಭಾರತೀಯ ಚಿಪ್ಪುಹಂದಿಗಳು ಪ್ರಮುಖವಾಗಿ ಅದರ ಮಾಂಸ (ಸಾಮಾನ್ಯವಾಗಿ ಬುಶ್ ಮೀಟ್ ಎಂದು ಕರೆಯಲಾಗುತ್ತದೆ) ಮತ್ತು ಚಿಪ್ಪುಗಳಿಗಾಗಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಬೇಟೆಯಾಡುವುದು ಸೇರಿದಂತೆ ಅನೇಕ ಅಪಾಯಗಳನ್ನು ಎದುರಿಸುತ್ತಿವೆ. ಹೆಚ್ಚಾಗಿ ಚಿಪ್ಪು ಮತ್ತು ದೇಹದ ಇತರ ಭಾಗಗಳ ಕಾನೂನುಬಾಹಿರ ಅಂತರಾಷ್ಟ್ರೀಯ ವ್ಯಾಪಾರ ಮತ್ತು ಸ್ಥಳೀಯವಾಗಿ ಮೂಢನಂಬಿಕೆಗಳಿಗಾಗಿ ಅತಿಯಾದ ಬಳಕೆಯಿಂದಾಗಿ ಈ ಪ್ರಭೇದವು ಅಪಾಯದಲ್ಲಿದೆ (ಭಂಡಾರಿ ಮತ್ತು ಇತರರು, 2019). ಭಾರತದಲ್ಲಿ ಚಿಪ್ಪುಹಂದಿಗಳಿಗೆ ಪ್ರಮುಖ ಬೆದರಿಕೆಗಳೆಂದರೆ, ಪ್ರಾದೇಶಿಕ ಬಳಕೆ (ಉದಾಹರಣೆಗೆ ಪ್ರೋಟೀನ್ ಮೂಲ ಮತ್ತು ಸಾಂಪ್ರದಾಯಿಕ ಔಷಧಿ) ಮತ್ತು ಅದರ ಮಾಂಸ ಮತ್ತು ಚಿಪ್ಪುಗಳ ಅಂತರಾಷ್ಟ್ರೀಯ ವ್ಯಾಪಾರ. ಪ್ರಮುಖವಾಗಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳು, ವಿಶೇಷವಾಗಿ ಚೀನಾ ಮತ್ತು ವಿಯೆಟ್ನಾಂಗಳ ಬೇಡಿಕೆಗೆ ಬೇಟೆಯಾಡುವುದು. ಭಾರತ ಮತ್ತು ಪಾಕಿಸ್ತಾನಗಳಿಂದ ಹೆಚ್ಚಾಗಿ ಮ್ಯಾನ್ಮಾರ್ ಮತ್ತು ಚೀನಾ ದೇಶಗಳನ್ನು ಗುರಿಯಾಗಿಸಿಕೊಂಡು ಇವುಗಳ ದುರ್ಬಳಕೆಯಾಗುತ್ತಿದೆ (www.wwfindia.org).

ಸಾಂಪ್ರದಾಯಿಕ ಚೀನೀ ಔಷಧ, ರುಚಿಕರ ಮಾಂಸ ಮತ್ತು ಐಷಾರಾಮಿ ಉತ್ಪನ್ನಗಳ ತಯಾರಿಕೆಗೆ ಚಿಪ್ಪು ಮತ್ತು ಬುಶ್ ಮೀಟ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಚಿಪ್ಪುಹಂದಿ ಮಾಂಸವನ್ನು ಕೆಲವು ದೇಶಗಳಲ್ಲಿ, ವಿಶೇಷವಾಗಿ ಚೀನಾ ಮತ್ತು ವಿಯೆಟ್ನಾಂನಲ್ಲಿ ರುಚಿಕರವೆಂದು ಪರಿಗಣಿಸಲಾಗುತ್ತದೆ. ಚಿಪ್ಪುಗಳು ಮತ್ತು ಚಿಪ್ಪುಹಂದಿಯ ಇತರ ದೇಹದ ಭಾಗಗಳಿಂದ ಸಾಂಪ್ರದಾಯಿಕ ಚೀನೀ ಔಷಧಿ ಮತ್ತು ಏಷ್ಯಾದ ಸಾಂಪ್ರದಾಯಿಕ ಔಷಧವು ಕಾಮೋತ್ತೇಜಕ ಮತ್ತು ಇತರ ಮಾನವ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆಂದು ನಂಬಲಾಗಿದ್ದರೂ ಅಂತಹ ನಂಬಿಕೆಗಳಿಗೆ ಪುರಾವೆಗಳ ಕೊರತೆಯಿದೆ.

ಚಿಪ್ಪುಹಂದಿಗಳ ಮಾಂಸವನ್ನು ಕೆಲವು ಬುಡಕಟ್ಟು ಸಮುದಾಯಗಳು ಸವಿಯುತ್ತವೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಂನ ಬಿಯಾಟೆ, ದಿಮಾಸಾ ಮತ್ತು ಕರ್ಬಿ ಬುಡಕಟ್ಟು ಜನಾಂಗದವರು) ಮತ್ತು ಭಾರತದ ಇತರ ಬುಡಕಟ್ಟು ಪ್ರಾಬಲ್ಯದ ರಾಜ್ಯಗಳಲ್ಲಿ ‘ಶಿಕಾರ್ ಉತ್ಸವ್’ ಸಮಯದಲ್ಲಿ ಬೇಟೆಯಾಡುವುದರಿಂದ ಈ ಚಿಪ್ಪುಹಂದಿಗಳು ತೊಂದರೆಗೀಡಾಗುತ್ತವೆ. ಚಿಪ್ಪುಹಂದಿಯ ಚಿಪ್ಪುಗಳನ್ನು ಸ್ಥಳೀಯ ಸಮುದಾಯಗಳ ಆಚರಣೆಗಳಲ್ಲಿ ಮತ್ತು ಅಲಂಕಾರಿಕ ವಸ್ತುಗಳಾಗಿಯೂ ಸಹ ಬಳಸಲಾಗುತ್ತದೆ (ಮೊಹಾಪಾತ್ರ ಮತ್ತು ಇತರರು. 2015). ಆಫ್ರಿಕಾದಲ್ಲಿ, ಚಿಪ್ಪುಗಳನ್ನು ಆಧ್ಯಾತ್ಮಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ, ತಾಯಿತಗಳನ್ನು ತಯಾರಿಸಲು, ದುಷ್ಟ ಶಕ್ತಿ ಮತ್ತು ವಾಮಾಚಾರವನ್ನು ದೂರವಿಡಲು ಬಳಸಲಾಗುತ್ತದೆ. ಚಿಪ್ಪುಹಂದಿಯ ಎಣ್ಣೆಯನ್ನು ಚರ್ಮ ಮತ್ತು ಚರ್ಮದ ಅಂಗಾಂಶಕ್ಕೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತದೆ. ಸ್ನಾಯು-ಅಸ್ಥಿಪಂಜರ ಮತ್ತು ಸಂಪರ್ಕ ಅಂಗಾಂಶ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಇವುಗಳ ಮೂಳೆಗಳನ್ನು ಬಳಸಲಾಗುತ್ತಿದೆ (ಮ್ಯಾಕ್ಸ್ವೆಲ್ ಕೆ ಬೋಕ್ಯೆ ಮತ್ತು ಇತರರು, 2014).

ವ್ಯಾಪಾರ ದತ್ತಾಂಶ

ಭಾರತದಲ್ಲಿ ಚಿಪ್ಪುಹಂದಿ ಭಾಗಗಳು ಮತ್ತು ಉತ್ಪನ್ನಗಳ ದೇಶೀಯ ವ್ಯಾಪಾರವು ಪ್ರಸಿದ್ಧವಾಗಿದೆ. ಆದರೆ, ಇದರ ವ್ಯಾಪಾರವು ಪತ್ತೆಯಾಗದೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ, ಅವುಗಳ ಚಿಪ್ಪುಗಳು ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದ್ದು, ಸಾಂಪ್ರದಾಯಿಕ ಔಷಧಿಗಳಲ್ಲಿ ಒಂದು ಅಂಶವಾಗಿ ಬಳಸಲಾಗುತ್ತದೆ ಮತ್ತು ಅವುಗಳ ಮಾಂಸವು ಸೇವಿಸಲು ರುಚಿಕರವಾಗಿರುವುದರಿಂದ ಮತ್ತು ಅದರ ಔಷಧೀಯ ಗುಣಗಳಿಗಾಗಿ ಚಿಪ್ಪುಹಂದಿಗಳನ್ನು ಬಳಸಲಾಗುತ್ತದೆ (ಚೌಧರಿ, ಮತ್ತು ಇತರರು, 2018). ಲಭ್ಯವಿರುವ ವ್ಯಾಪಾರ ದತ್ತಾಂಶದ ಪ್ರಕಾರ, ಬಹಳ ಹಿಂದೆ, ಆರು ವರ್ಷಗಳ ಅವಧಿಯಲ್ಲಿ (1958-64) ಸರಿಸುಮಾರು 50,000 ಪ್ರಾಣಿಗಳನ್ನು ಪ್ರತಿನಿಧಿಸುವ 60 ಟನ್ ಚಿಪ್ಪುಗಳನ್ನು ಸರವಾಕ್ ಸಿಂಗಾಪುರದಿಂದ ತೈವಾನ್ ಮತ್ತು ಹಾಂಗ್ ಕಾಂಗ್ ಗೆ ವಿತರಿಸಲು ರಫ್ತು ಮಾಡಲಾಯಿತು. ಹೆಚ್ಚುತ್ತಿರುವ ಸಾಂಪ್ರದಾಯಿಕ ಔಷಧದ ಬೇಡಿಕೆಯನ್ನು ಪೂರೈಸಲು 30,000 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ಅಂದಾಜಿಸಲಾಗಿದೆ (ಚಕ್ರವರ್ತಿ ಮತ್ತು ರಾಮಕೃಷ್ಣ, 2002).  ‘ಟ್ರಾಫಿಕ್’ ಎಂಬ  ವನ್ಯಜೀವಿ ವ್ಯಾಪಾರ ಮೇಲ್ವಿಚಾರಣಾ ಸಂಸ್ಥೆಯ 2018 ರ ಅಂದಾಜಿನ ಪ್ರಕಾರ, ಭಾರತದಾದ್ಯಂತ, 2009 ಮತ್ತು 2017 ರ ನಡುವೆ ಸುಮಾರು 6,000 ಚಿಪ್ಪುಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಬಹುಶಃ ಬೃಹತ್ ವ್ಯಾಪಾರದ ಒಂದು ಭಾಗ ಮಾತ್ರ.

ಅಕ್ರಮ ವ್ಯಾಪಾರ ವ್ಯವಹಾರದ ಅಂಕಿ ಅಂಶಗಳ ಪ್ರಕಾರ 2010 ರಿಂದ 2015 ರವರೆಗೆ ಅಕ್ರಮ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಕಂಡುಬರುವ ಚಿಪ್ಪುಹಂದಿಗಳ ಪ್ರಮುಖ ಮೂಲ ಭಾರತ ದೇಶವೆಂದು ಗುರುತಿಸಲಾಗಿದೆ (ಹೆನ್ರಿಕ್ ಮತ್ತು ಇತರರು. 2017).  2020 ರ ಮಾರ್ಚ್ ನಿಂದ ಆಗಸ್ಟ್ ವರೆಗೆ ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ, ಸಾಂಕ್ರಾಮಿಕ ರೋಗಕ್ಕೆ ಮುಂಚಿನ 2018 ಮತ್ತು 2019 ರ ಇದೇ ಅವಧಿಗೆ ಹೋಲಿಸಿದರೆ, ಗಮನಾರ್ಹ ಹೆಚ್ಚಳವನ್ನು ಆದಿತ್ಯ ಮತ್ತು ಇತರರು (2021)  ವರದಿ ಮಾಡಿದ್ದಾರೆ. ಲಲಿತಾ ಗೊಮೆಜ್ et.al, 2023 ರ ಪ್ರಕಾರ 1991 ರಿಂದ 2022 ರವರೆಗೆ ಭಾರತದಲ್ಲಿ ಅಂದಾಜು 8603 ಚಿಪ್ಪುಹಂದಿಗಳನ್ನು ಒಳಗೊಂಡ ಒಟ್ಟು 426 ಜಪ್ತಿಗಳು ನಡೆದಿವೆ. ಈ ಘಟನೆಗಳಲ್ಲಿ ಕನಿಷ್ಠ 5,789 ಕೆಜಿ ಮತ್ತು 4796 ಚಿಪ್ಪುಹಂದಿ ಚಿಪ್ಪುಗಳು, 30 ಕೆಜಿ ಮಾಂಸ, 192 ಜೀವಂತ ಚಿಪ್ಪುಹಂದಿಗಳು, 72 ಉಗುರುಗಳು, 7 ಚರ್ಮಗಳು, 5 ಸತ್ತ ಚಿಪ್ಪುಹಂದಿಗಳು, 1 ಸ್ಕೇಲ್ ರಿಂಗ್, 1 ಚರ್ಮ / ಸ್ಕೇಲ್ / ಮೂಳೆ ಮತ್ತು 1 ಟ್ರೋಫಿಯನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಾಫಿಕ್ ಇಂಡಿಯಾ ಈ ಅವಧಿಯಲ್ಲಿ 90 ಅಕ್ರಮ ಚಿಪ್ಪುಹಂದಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಅಸ್ಸಾಂ ಬಳಿಯ ಈಶಾನ್ಯ ರಾಜ್ಯ ಮಣಿಪುರಕ್ಕೆ ಸಂಬಂಧಿಸಿದಾಗಿದೆ. ಈಶಾನ್ಯ ಭಾರತದಿಂದ, ಚಿಪ್ಪುಗಳು ಸಾಮಾನ್ಯವಾಗಿ ನೇಪಾಳ ಮತ್ತು ಮ್ಯಾನ್ಮಾರ್ ಮೂಲಕ ಚೀನಾಕ್ಕೆ ಪ್ರಯಾಣಿಸುತ್ತವೆ ಎಂದು 2015 ರಲ್ಲಿ ವರದಿಯಾಗಿದೆ.  ಭಾರತದಲ್ಲಿ, 2018-2022 ರಲ್ಲಿ ನಡೆದ ಅಕ್ರಮ ವನ್ಯಜೀವಿ ವ್ಯಾಪಾರದಲ್ಲಿ 1000 ಕ್ಕೂ ಹೆಚ್ಚು ಚಿಪ್ಪುಹಂದಿಗಳನ್ನು ‘ಟ್ರಾಫಿಕ್’’ ಪತ್ತೆ ಮಾಡಿದೆ. ಈ ಐದು ವರ್ಷಗಳಲ್ಲಾದ 342 ಜಪ್ತಿಗಳಲ್ಲಿ 880 ಕೆಜಿ ಚಿಪ್ಪುಹಂದಿ ಉತ್ಪನ್ನಗಳು ಮತ್ತು 199 ಜೀವಂತ ಚಿಪ್ಪುಹಂದಿಗಳು ವರದಿಯಾಗಿವೆ. ವನ್ಯಜೀವಿ ಮತ್ತು ವನ್ಯಜೀವಿ ಭಾಗಗಳ ಜಪ್ತಿಗಳು ಎಷ್ಟಿದೆ ಎಂಬುದನ್ನು 2023ರ ಡಿಸೆಂಬರ್ 12ರಲ್ಲಿ ಇಂಟರ್ಪೋಲ್ ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದು, ವನ್ಯಜೀವಿ ಮತ್ತು ಮರ ಕಳ್ಳಸಾಗಣೆಯನ್ನು ತಡೆಯಲು ಇಂಟರ್ಪೋಲ್ – ವಿಶ್ವ ಕಸ್ಟಮ್ಸ್ ಸಂಸ್ಥೆ (ಡಬ್ಲ್ಯುಸಿಒ) ಜಂಟಿ ಕಾರ್ಯಾಚರಣೆಯಲ್ಲಿ ಆನೆಗಳು, ಖಡ್ಗಮೃಗಗಳು ಮತ್ತು ಚಿಪ್ಪುಹಂದಿಗಳು, ಸಂರಕ್ಷಿತ ಮರಗಳು, ವಿಶೇಷವಾಗಿ ಉಷ್ಣವಲಯದ ಗಟ್ಟಿ ಮರಗಳು ಸೇರಿದಂತೆ 2114 ಪ್ರಾಣಿಗಳು ಮತ್ತು ಸಸ್ಯಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ 17.02.2023ರ ವರದಿಯ ಪ್ರಕಾರ, ಒಡಿಶಾದಲ್ಲಿ ಗರಿಷ್ಠ ಸಂಖ್ಯೆಯ ಘಟನೆಗಳು ವರದಿಯಾಗಿದ್ದು, 74 ಜಪ್ತಿಗಳಲ್ಲಿ 154 ಚಿಪ್ಪುಹಂದಿಗಳಿದ್ದವು. ನೇಚರ್ ಇಂಡಿಯಾ 13.12.2023 ರ ವರದಿಯ ಪ್ರಕಾರ, ಮ್ಯಾನ್ಮಾರ್ ಗೆ ಕಳ್ಳಸಾಗಾಣಿಕೆ ಮಾರ್ಗಗಳೆನಿಸಿದ ಮಣಿಪುರದ ಚಂದೇಲ್ ಜಿಲ್ಲೆ ಮತ್ತು ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ಹಲವಾರು ಚಿಪ್ಪುಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ, ವಿಶೇಷವಾಗಿ ಡಾರ್ಜಿಲಿಂಗ್ ಮತ್ತು ಜಲ್ಪೈಗುರಿ ಜಿಲ್ಲೆಗಳು, ಬಾಂಗ್ಲಾದೇಶಕ್ಕೆ ಹೋಗುವ ದಾರಿಗಳು, ಭೂತಾನ್ ಗಳಲ್ಲಿ ಚಿಪ್ಪುಹಂದಿಗಳನ್ನು ವಶಪಡಿಸಿಕೊಂಡಿರುವುದು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 47 ಜಪ್ತಿ ಘಟನೆಗಳಲ್ಲಿ 135 ಚಿಪ್ಪುಹಂದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ‘ಇಂಡಿಯಾಸ್ ಪ್ಯಾಂಗೋಲಿನ್ಸ್ ಬರೀಡ್ ಇನ್ ಇಲ್ಲೀಗಲ್ ವೈಲ್ಡ್ ಲೈಫ್ ಟ್ರೇಡ್’ ಎಂಬ ಶೀರ್ಷಿಕೆಯ ಪ್ರಕಟಣೆಯು ಒಟ್ಟು 342 ಘಟನೆಗಳನ್ನು ಪತ್ತೆಹಚ್ಚಿದೆ. ಅಲ್ಲದೆ, ಆನ್ ಲೈನ್ ವ್ಯಾಪಾರದ ಎಂಟು ಘಟನೆಗಳು ಸಹ ದಾಖಲಾಗಿವೆ. ಚಿಪ್ಪುಹಂದಿಯ ಅಕ್ರಮ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಚೀನಾ ಇನ್ನೂ ಅತ್ಯಂತ ಮಹತ್ವದ ಗಮ್ಯ ತಾಣಗಳಲ್ಲಿ ಒಂದಾಗಿದೆ.

ಸಂಖ್ಯಾ ಸ್ಥಿತಿಗತಿ

ಸಂಖ್ಯಾದಟ್ಟತೆಯ ಅಂದಾಜುಗಳು ಯಾವುದೂ ಲಭ್ಯವಿಲ್ಲ, ಆದರೂ, ಈ ಎರಡೂ ಪ್ರಭೇದಗಳು ತುಂಬಾ ಅಪರೂಪವೇನಲ್ಲ ಮತ್ತು ಭಾರತೀಯ ಪ್ರಾಣಿಶಾಸ್ತ್ರೀಯ ಸಮೀಕ್ಷೆಯ ವಿಜ್ಞಾನಿಗಳು ಮತ್ತು ಇತರ ಸಂಸ್ಥೆಗಳು ಸಂರಕ್ಷಣಾ ಪ್ರದೇಶಗಳಲ್ಲಿ ಆಗಾಗ್ಗೆ ಕಂಡುಬರುತ್ತವೆಂದು ವರಿದಿ ಮಾಡಿರುತ್ತಾರೆ. ಭಾರತೀಯ ಮೃಗಾಲಯಗಳಲ್ಲಿ ಚಿಪ್ಪುಹಂದಿಗಳ ಸಂಗ್ರಹವು ಸಾಕಷ್ಟು ಉತ್ತಮ ಸಂಖ್ಯೆಯನ್ನು ಸೂಚಿಸುತ್ತದೆ. ಭಾರತೀಯ ಚಿಪ್ಪುಹಂದಿಯ ಮೊದಲ ಮಾದರಿಯನ್ನು 1962 ರ ಜನವರಿ 6 ರಂದು ಭುವನೇಶ್ವರದ ನಂದಂಕನನ್ ಮೃಗಾಲಯದಲ್ಲಿ ಸ್ವೀಕರಿಸಲಾಯಿತು. ಅಂದಿನಿಂದ, 1997 ರ ಜೂನ್ 30 ರ ಅವಧಿಯಲ್ಲಿ ಅದೇ ಮೃಗಾಲಯದಲ್ಲಿ 65 (30 ಗಂಡು ಮತ್ತು 35 ಹೆಣ್ಣು) ಖರೀದಿ ಪ್ರಕರಣಗಳು ನಡೆದಿವೆ ಹಾಗೂ 1997 ರಿಂದ 2014 ರ ನಡುವೆ ಇಂತಹ 46 ಪ್ರಕರಣಗಳ ನಿದರ್ಶನಗಳಿವೆ. ಕಾನ್ಪುರ (ಯುಪಿ), ಮಂಗಳೂರು (ಕರ್ನಾಟಕ), ಕೋಲ್ಕತಾ (ಪಶ್ಚಿಮ ಬಂಗಾಳ), ಪಿಂಪ್ರಿ (ಪುಣೆ, ಮಹಾರಾಷ್ಟ್ರ) ಮುಂತಾದ ಭಾರತದ ವಿವಿಧ ಮೃಗಾಲಯಗಳಲ್ಲಿ ಇವುಗಳ ಸಂಗ್ರಹದ ಉದಾಹರಣೆಗಳಿವೆ. ಪ್ರಸ್ತುತ ಭಾರತೀಯ ಮೃಗಾಲಯಗಳಲ್ಲಿ ಸುಮಾರು 42 ಚಿಪ್ಪುಹಂದಿಗಳು ದಾಖಲಾಗಿವೆ. ಇತ್ತೀಚೆಗೆ, ಆಂಧ್ರಪ್ರದೇಶದ ಉತ್ತರ ಪೂರ್ವ ಘಟ್ಟಗಳ ಭೂಪ್ರದೇಶದಲ್ಲಿ (750 ಚ.ಕಿಮೀ), ಡಿಸೆಂಬರ್ 2017-ಏಪ್ರಿಲ್ 2018 ರ ಅವಧಿಯಲ್ಲಿ, ಕ್ಯಾಮೆರಾ ಟ್ರ್ಯಾಪ್ ಗಳನ್ನು ಬಳಸಿಕೊಂಡು ನಡೆಸಿದ  ಭಾರತೀಯ ಚಿಪ್ಪುಹಂದಿ ಸಮೀಕ್ಷೆಯ ದಾಖಲೆಗಳು ಲಭ್ಯವಿದೆ (ವಿಕ್ರಮ್ ಆದಿತ್ಯ et.al., 2020). ಟ್ರಾಫಿಕ್ ಅಂಕಿ ಅಂಶಗಳ ಪ್ರಕಾರ, 2018-2022 ರ ಅವಧಿಯಲ್ಲಿ ಭಾರತದಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರದಲ್ಲಿ ಕನಿಷ್ಠ 1203 ಚಿಪ್ಪುಹಂದಿಗಳು ಪತ್ತೆಯಾಗಿವೆ. 342 ಜಪ್ತಿಗಳಲ್ಲಿ ಸುಮಾರು 1025 ಸಂಖ್ಯೆ ಮತ್ತು 885 ಕೆಜಿ ಚಿಪ್ಪುಹಂದಿಗಳನ್ನು ಮತ್ತು ಅವುಗಳ ಉತ್ಪನ್ನಗಳು ವಶಪಡಿಸಿಕೊಂಡಿರುವ ಘಟನೆಗಳು ಕಂಡುಬಂದಿದ್ದು, ಇದು ಕಾಡಿನಲ್ಲಿರುವ ಚಿಪ್ಪುಹಂದಿಗಳ ಬೃಹತ್ ಸಂಖ್ಯೆಯನ್ನು ತಿಳಿಸುತ್ತದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ನಡೆಸುವ ಸಂತಾನೋತ್ಪತ್ತಿ ಕಾರ್ಯಕ್ರಮಗಳನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ, ಇದು ಭಾರತದ ಒಡಿಶಾದ ಭುವನೇಶ್ವರದ ನಂದಂಕನನ್ ಮೃಗಾಲಯದಲ್ಲಿರುವ ಸಂತಾನೋತ್ಪತ್ತಿ ಕೇಂದ್ರದಲ್ಲಿ ನಡೆಯುತ್ತಿದೆ.  ಶ್ರೀಲಂಕಾದ ನೈಋತ್ಯದಲ್ಲಿರುವ ಉಷ್ಣವಲಯದ ತಗ್ಗು ಪ್ರದೇಶದ ಮಳೆಕಾಡಿನಲ್ಲಿ ಕ್ಯಾಮೆರಾ ಟ್ರ್ಯಾಪ್ ಡೇಟಾವನ್ನು ಬಳಸಿಕೊಂಡು ಭಾರತೀಯ ಚಿಪ್ಪುಹಂದಿಗಳ ವಾಸಸ್ಥಾನ, ಸಮೃದ್ಧಿ ಮತ್ತು ಸಂಖ್ಯೆಯ ಅಂದಾಜಿನ ಬಗ್ಗೆ ಮೊದಲ ಸಮಗ್ರ ಅಧ್ಯಯನವನ್ನು ಪ್ರಿಯನ್ ಪೆರೆರಾ (2022) ಪ್ರಯತ್ನಿಸಿದರು (ಶ್ರೀಲಂಕಾದ 2000 ಹೆಕ್ಟೇರ್-ಯಗಿರಾಲಾ ಅರಣ್ಯದಲ್ಲಿ 640 ಸ್ಥಳಗಳಲ್ಲಿ 4480 ಕ್ಯಾಮೆರಾ ಟ್ರ್ಯಾಪ್ ರಾತ್ರಿಗಳು) 20 ಮತ್ತು 35 ಸೆರೆಹಿಡಿಯುವಿಕೆಗಳನ್ನು ಸಾಧಿಸಲಾಯಿತು. ಭಾರತೀಯ ಚಿಪ್ಪುಹಂದಿಗಳಿಗಾಗಿ ಉತ್ತರಾಖಂಡದ ಆರು ಅರಣ್ಯ ವಿಭಾಗಗಳ ಒಟ್ಟು 15 ಅರಣ್ಯ ವಲಯಗಳಲ್ಲಿ ಅಧ್ಯಯನ ಮಾಡಲಾಯಿತು, ಅವುಗಳಲ್ಲಿ 13 ಅರಣ್ಯ ವಲಯಗಳಲ್ಲಿ ಭಾರತೀಯ ಚಿಪ್ಪುಹಂದಿ ಇರುವಿಕೆಯನ್ನು ದಾಖಲಿಸಲಾಗಿದೆ (ಲಿಂಗ್ಡೊ et.al, 2020).

ಷರಾ

ಎರಡು ಜಾತಿಯ ಚಿಪ್ಪುಹಂದಿಗಳು ಭಾರತದಲ್ಲಿವೆ, ಭಾರತೀಯ ಚಿಪ್ಪುಹಂದಿ (ಮನಿಸ್ ಕ್ರಾಸ್ಸಿಕೌಡಾಟಾ) ಮತ್ತು ಚೈನೀಸ್ ಚಿಪ್ಪುಹಂದಿ (ಮನಿಸ್ ಪೆಂಟಾಡಾಕ್ಟಿಲಾ). ಇವುಗಳು ಜೈವಿಕ-ನಿಯಂತ್ರಣ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಮಾನವ ಪ್ರಾಬಲ್ಯದ ಪ್ರದೇಶ ಮತ್ತು ನೆಡುತೋಪು, ಅರಣ್ಯದ ಅಂಚಿನ ಬಳಿ, ಕೃಷಿಭೂಮಿಗಳು ಸೇರಿದಂತೆ ವಿಭಿನ್ನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಭಾರತೀಯ ಚಿಪ್ಪುಹಂದಿಗಳು ಅನೇಕ ಒತ್ತಡಗಳಿಂದಾಗಿ ಅದರ ವಾಸ ಪ್ರದೇಶ ವ್ಯಾಪ್ತಿಯಾದ್ಯಂತ ಅಳಿವಿನ ಅಪಾಯವನ್ನು ಎದುರಿಸುತ್ತಿವೆ. ಆವಾಸಸ್ಥಾನದ ನಷ್ಟ, ಕೃಷಿಯ ವಿಸ್ತರಣೆ, ನೆಡುತೋಪುಗಳಿಂದಾದ ಆವಾಸಸ್ಥಾನದ ಬದಲಾವಣೆ, ಮಾನವ ವಸಾಹತುಗಳ ಹೆಚ್ಚಳ, ಅಣೆಕಟ್ಟುಗಳ ನಿರ್ಮಾಣ, ಕಾಡಿನ ಬೆಂಕಿ ಮತ್ತು ಕೀಟ ನಿಯಂತ್ರಣ ಅಭ್ಯಾಸಗಳು (ಕ್ಯಾಂಪ್ 2005) ಮತ್ತು ಚಿಪ್ಪುಗಳು ಮತ್ತು ಮಾಂಸಕ್ಕಾಗಿ ಬೇಟೆಯಾಡುವುದು (ಚಕ್ರವರ್ತಿ ಮತ್ತು ರಾಮಕೃಷ್ಣ, 2002; ಮೊಹಾಪಾತ್ರ ಮತ್ತು ಇತರರು., 2015) ಅವನತಿ ಹೊಂದುತ್ತಿವೆ. ಸ್ಪೀಸೀಸ್ ಡಿಸ್ಟ್ರಿಬ್ಯೂಶನ್ ಮಾಡೆಲಿಂಗ್ (ಎಸ್.ಡಿ.ಎಂ.) ಮತ್ತು ಆಕ್ಯುಪೆನ್ಸಿ ಮಾಡೆಲಿಂಗ್ ಅನ್ನು ಸಾಮಾನ್ಯವಾಗಿ ಭೌಗೋಳಿಕ ಸ್ಥಳದಾದ್ಯಂತ ಪ್ರಭೇದಗಳ ಸಂಭವನೀಯ ದತ್ತಾಂಶ ಮತ್ತು ಪರಿಸರ, ಅದರ ನಡವಳಿಕೆ, ಸಂತಾನೋತ್ಪತ್ತಿ ಮತ್ತು ಸಂರಕ್ಷಣಾ ತಂತ್ರಗಳ ಮೂಲಕ ಪ್ರಭೇದಗಳ ವ್ಯಾಪ್ತಿಯನ್ನು ಊಹಿಸಲಾಗುತ್ತದೆ. ಪ್ರಭೇದಗಳಿಗೆ ವಿಭಿನ್ನ ಸಂರಕ್ಷಣಾ ಸ್ಥಾನಮಾನವನ್ನು ನಿಗದಿಪಡಿಸಲಾಗಿದ್ದರೂ, ಪ್ರಭೇದಗಳ ಅಕ್ರಮ ಕಳ್ಳಸಾಗಾಣಿಕೆಯನ್ನು ಕಡಿಮೆ ಮಾಡಲು ಮೇಲ್ವಿಚಾರಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content