ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಜೀವನದ ಪರಿಚೆ ಪಾಲಿಮರಿಕ್ !!! – ಪ್ರೊ. ಡಿ. ಚನ್ನೇಗೌಡ

1 min read

ದೈನಂದಿನ ಜೀವನದಲ್ಲಿ ಮನುಕುಲವು ಬಳಸುವ ಪಾಲಿಮರ್.ಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಈ ಪಾಲಿಮರ್.ಗಳ ಆವಿಷ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವುಗಳ ಅನ್ವಯಿಕೆಯಿಲ್ಲದಿದ್ದಲ್ಲಿ ನಮ್ಮ ದಿನನಿತ್ಯದ ಜೀವನವು ಇಷ್ಟು ಸುಲಭ ಮತ್ತು ವರ್ಣಮಯವಾಗಿರುತ್ತಿರಲಿಲ್ಲ. ಪ್ಲಾಸ್ಟಿಕ್ ಬಕೆಟ್.ಗಳು, ಕಪ್ ಮತ್ತು ಸಾಸರ್, ಮಕ್ಕಳ ಆಟಿಕೆಗಳು, ಪ್ಯಾಕಿಂಗ್ ಬ್ಯಾಗ್.ಗಳು, ಸಂಶ್ಲೇಷಿತ ಬಟ್ಟೆಯ ವಸ್ತುಗಳು, ಆಟೋಮೊಬೈಲ್ ಟೈರ್.ಗಳು, ಗೇರ್.ಗಳು ಮತ್ತು ಸೀಲ್.ಗಳು, ವಿದ್ಯುತ್ ನಿರೋಧಕ ವಸ್ತುಗಳು ಮತ್ತು ಯಂತ್ರ ಭಾಗಗಳ ಉತ್ಪಾದನೆಯಲ್ಲಿ ಪಾಲಿಮರ್ ಬಳಕೆಯಾಗುತ್ತಿದ್ದು, ನಮ್ಮ ಜೀವನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ (ಚಿತ್ರ 1). ವಾಸ್ತವಿಕವಾಗಿ, ಪಾಲಿಮರ್.ಗಳು ಪ್ಲಾಸ್ಟಿಕ್, ಎಲಾಸ್ಟಮರ್ಸ್.ಗಳು, ಫೈಬರ್ ಮತ್ತು ಪೇಂಟ್ ಹಾಗೂ  ವಾರ್ನಿಶ್, ಈ ನಾಲ್ಕು ಪ್ರಮುಖ ಕೈಗಾರಿಕೆಗಳ ಬೆನ್ನೆಲುಬಾಗಿದೆ. ಜೀವ ವ್ಯವಸ್ಥೆಯಲ್ಲಿಯೂ ಸಹ ಕಾರ್ಬೋಹೈಡ್ರೇಟ್.ಗಳು, ಪ್ರೋಟೀನ್.ಗಳು, ನ್ಯೂಕ್ಲಿಯಿಕ್ ಆಮ್ಲಗಳು, ಲಿಪಿಡ್.ಗಳು, ಮುಂತಾದ ಜಟಿಲ ಅಣುಗಳಿಂದ (ಪಾಲಿಮರ್) ಆದಂತಹುದಾಗಿದೆ.

ಪಾಲಿಮರ್.ಗಳು ರಾತ್ರೋರಾತ್ರಿ ಪತ್ತೆಯಾದುದಲ್ಲ. ಅನೇಕ ವಿಜ್ಞಾನಿಗಳ ದೀರ್ಘ ಮತ್ತು ನಿರಂತರ ಅಧ್ಯಯನಗಳಿಂದ ಹೊರಬಂದದ್ದಾಗಿದ್ದು, ಅವರುಗಳ ಶ್ರಮ ಮಾನವನ ಜೀವನವನ್ನು ಉತ್ಕೃಷ್ಟಗೊಳಿಸಿದೆ. ಇಂದು, ಪಾಲಿಮರ್ ವಿಜ್ಞಾನ ಮತ್ತು ತಂತ್ರಜ್ಞಾನದ ಒಟ್ಟಾರೆ ತಿಳುವಳಿಕೆ ಎಷ್ಟು ಆಳವಾಗಿದೆ ಎಂದರೆ, ಒಬ್ಬ ವಸ್ತು ವಿಜ್ಞಾನಿಯು ಹೊಸ ವಸ್ತುಗಳ ಅಪರಿಮಿತ ಶ್ರೇಣಿಯನ್ನು ರಚಿಸಬಲ್ಲವರಾಗಿದ್ದಾರೆ. ಗಾಜಿನಂತೆ ಪಾರದರ್ಶಕತೆ ಮತ್ತು ಉಕ್ಕಿನ ಬಲದ ಸಂಯೋಜನೆಯನ್ನು ಹೊಂದಿರುವ ಪಾಲಿಕಾರ್ಬೊನೇಟ್.ನಂತಹ ಗುಂಡು ನಿರೋದಕ ವಸ್ತು ಇದಕ್ಕೆ ಉದಾರಣೆ. ಭವಿಷ್ಯದಲ್ಲಿ, ನಾವು ಇನ್ನೂ ಹೆಚ್ಚು ಅದ್ಭುತ  ಉಪಯುಕ್ತತೆಯುಳ್ಳ ಸಂಯೋಜನೆಗಳನ್ನು ನಿರೀಕ್ಷಿಸಬಹುದು ಹಾಗೆಯೇ ಪಾಲಿಮರ್ ರಸಾಯನಶಾಸ್ತ್ರಜ್ಞರು ಇನ್ನೂ ಉತ್ತಮ  ‘ಅಣುಗಳ ವಾಸ್ತುಶಿಲ್ಪಿ’ಗಳು ಹೊರಹೊಮ್ಮಬಹುದು.

ಪಾಲಿಮರ್.ಗಳು ಭಾರಿ ಸಂಖ್ಯೆಯ ಸರಳ ಅಣುಗಳು ಅಥವಾ ಮಾನೊಮರ್.ಗಳ ಸಂಯೋಗದಿಂದ ರೂಪುಗೊಂಡ ಅತಿ ಅಣುತೂಕದ ಸಂಯುಕ್ತಗಳಾಗಿವೆ (103-107u). ಎಲ್ಲಾ ಪಾಲಿಮರ್.ಗಳು ಸ್ಥೂಲ ಅಣುಗಳಾಗಿರುತ್ತವೆ.

ಮಾನೊಮರ್.ಗಳ ರಾಸಾಯನಿಕ ಕ್ರಿಯೆಯ ಮೂಲಕ ಪಾಲಿಮರ್.ಗಳನ್ನು ಪಡೆಯಲಾಗುತ್ತದೆ. ಸೂಕ್ತ ಪರಿಸ್ಥಿತಿಯಲ್ಲಿ ಪಾಲಿಮರ್ ಸರಪಳಿಯನ್ನು ರೂಪಿಸಲು ಒಂದೇ ರೀತಿಯ ಅಥವಾ ಬೇರೆ ರೀತಿಯ ಅಣುವಿನೊಂದಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಮಾನೊಮರ್.ಗಳು ಹೊಂದಿರುತ್ತವೆ. ಪ್ರಕೃತಿಯಲ್ಲಿ ನಡೆಯುವ ಈ ಕ್ರಿಯೆಯ ಮೂಲಕ ನೈಸರ್ಗಿಕ ಪಾಲಿಮರ್.ಗಳ ರಚನೆಯಾಗುತ್ತದೆ ಹಾಗೆಯೇ ಕೃತಕ ಪಾಲಿಮರ್.ಗಳು ಮಾನವ ನಿರ್ಮಿತ. ಇಂದು ಪಾಲಿಮರ್ ಕೈಗಾರಿಕೆಯು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತಾಮ್ರ, ಉಕ್ಕು, ಅಲ್ಯೂಮಿನಿಯಂ ಮತ್ತು ಇತರ ಕೆಲವು ಕೈಗಾರಿಕೆಗಳಿಗಿಂತ ದೊಡ್ಡದಾಗಿದೆ.

ಮಾನೊಮರ್.ಗಳನ್ನು ಅನುವುಗೊಳಿಸುವುದು ಮತ್ತು ಅಧಿಕ ಆಣ್ವ ತೂಕದ ಪಾಲಿಮರ್.ಗಳನ್ನು ಪಡೆಯುವುದು, ಪಾಲಿಮರ್ ರಸಾಯನಶಾಸ್ತ್ರದಲ್ಲಿ ಬಹಳ ಮುಖ್ಯವಾದುದು. ಸರಿಯಾಗಿ ಅನುವುಗೊಳಿಸಿದ ಮಾನೊಮರ್.ಗಳು ಉಕ್ಕಿಗಿಂತ ಪ್ರಬಲ ಮತ್ತು ಉತ್ತಮ ವಿದ್ಯುತ್ ವಾಹಕವಾಗಿವೆ. ವಿದ್ಯುತ್ ವಹನ ಶಕ್ತಿ ತಾಮ್ರಕ್ಕಿಂತ ಅಧಿಕ. ಡೈನೀಮಾ, ಅತ್ಯಂತ ಪ್ರಬಲವಾದ ವಾಣಿಜೀಕೃತ ವಸ್ತ್ರವು ಅನುವುಗೊಳಿಸಿದ ಪಾಲಿಥಿನ್ ಪಾಲಿಮರ್ ಆಗಿದೆ. ಅಣುವಿನ ತೂಕವು ಅಧಿಕ ಸಾಂದ್ರತೆಯ ಪಾಲಿಥಿನ್ (HDPE) ಗಿಂತ 100 ಪಟ್ಟು ಹೆಚ್ಚು. ಡೈನೀಮಾದಿಂದ ತಯಾರಿಸಲಾದ ಹಗ್ಗವು ಸುಮಾರು 60000 ಕಿ.ಗ್ರಾಂ ತೂಕವನ್ನು ಎತ್ತಬಲ್ಲದು, ಅದೇ ಗಾತ್ರದ ಉಕ್ಕಿನ ಹಗ್ಗವು 6500 ಕಿ.ಗ್ರಾಂ ಅನ್ನು ತಲುಪುವ ಮೊದಲೇ ವಿಫಲವಾಗುತ್ತದೆ. ಕಾರ್ಲ್ ಜೀಗ್ಲರ್ ಮತ್ತು ಗಿಯುಲಿಯೊ ನಟ್ಟಾ ರವರಿಂದಾದ ಜೀಗ್ಲರ್-ನಟ್ಟಾ ವೇಗವರ್ಧಕಗಳ (1:1 ಅನುಪಾತದಲ್ಲಿ Et3Al:TiCl4) ಪರಿಚಯವು ಪಾಲಿಮರೀಕರಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದುದಲ್ಲದೆ ಅತಿಅನುವುಗೊಂಡ ಮತ್ತು ಅಧಿಕ ಆಣ್ವ ತೂಕದ ಪಾಲಿಮರ್.ಗಳ ಉತ್ಪಾದನೆಗೆ ನಾಂದಿಯಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಪಡೆಯಲು ಕಾರಣವಾಯಿತು.

ಪಾಲಿಮರ್‌ಗಳನ್ನು ಅವುಗಳ ಮೂಲದ ಆಧಾರದ ಮೇಲೆ ನೈಸರ್ಗಿಕ, ಸಂಶ್ಲೇಷಿತ ಮತ್ತು ಅರೆ ಸಂಶ್ಲೇಷಿತ ಎಂದು; ಅವುಗಳ ಅಂತರ-ಅಣು ಶಕ್ತಿಗಳ ಆಧಾರದ ಮೇಲೆ ಫೈಬರ್.ಗಳು, ಎಲಾಸ್ಟಮರ್.ಗಳು ಮತ್ತು ಪ್ಲಾಸ್ಟಿಕ್.ಗಳೆಂದು; ಅವುಗಳಲ್ಲಿರುವ ಮಾನೊಮರ್.ಗಳ ಸ್ವರೂಪವನ್ನು ಆಧರಿಸಿ ಏಕ ಮತ್ತು ಸಹ-ಪಾಲಿಮರ್.ಗಳೆಂದು ವರ್ಗೀಕರಿಸಲಾಗಿದೆ. ಪಾಲಿಮರ್‌ಗಳು ನೈಸರ್ಗಿಕ ಅಥವಾ ಸಂಶ್ಲೇಷಿತ, ಅಜೈವಿಕ ಅಥವಾ ಜೈವಿಕವಾಗಿರಬಹುದು ಮತ್ತು ಅವು ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಅನ್ವಯಿಕೆಗಳನ್ನು ಹೊಂದಿವೆ.

ಜೈವಿಕ ಪಾಲಿಮರ್.ಗಳು ಜೀವಿಗಳಲ್ಲಿ ಮೂಲಭೂತ ರಚನಾತ್ಮಕ ವಸ್ತುಗಳನ್ನು ಒದಗಿಸುವ ಮತ್ತು ಜೀವದ ಪ್ರಮುಖ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ನಿರ್ಣಾಯಕ ಪಾತ್ರವಹಿಸುತ್ತವೆ. ಸಸ್ಯಗಳಲ್ಲಿ ಎಲ್ಲಾ ಗಡುಸಿನ  ಭಾಗಗಳು ಪಾಲಿಮರ್.ಗಳಿಂದ ಮಾಡಲ್ಪಟ್ಟಿದೆ, ಉದಾ., ಸೆಲ್ಯುಲೋಸ್, ಲಿಗ್ನಿನ್.ಗಳು ಮತ್ತು ವಿವಿಧ ರೆಸಿನ್/ರಾಳಗಳು. ಮರದ ರಾಳಗಳು ಸರಳ ಹೈಡ್ರೋಕಾರ್ಬನ್ ಆದ ಐಸೋಪ್ರಿನ್.ನ ಪಾಲಿಮರ್.ಗಳು. ರಬ್ಬರ್, ಮತ್ತೊಂದು ಪರಿಚಿತ ಐಸೋಪ್ರೆನ್ ಪಾಲಿಮರ್. ಅಮೈನೋ ಆಮ್ಲಗಳ ಪಾಲಿಮರ್ ಆದ ಪ್ರೋಟೀನ್.ಗಳು; ಮತ್ತು ನ್ಯೂಕ್ಲಿಯೊಟೈಡ್.ಗಳ (ಪ್ರತ್ಯಾಮ್ಲಗಳಿಂದ ಕೂಡಿದ ಸಾರಜನಕವನ್ನು ಹೊಂದಿರುವ ಜಟಿಲ ಅಣು) ಪಾಲಿಮರ್ ಆದ ನ್ಯೂಕ್ಲಿಯಿಕ್ ಆಮ್ಲಗಳು, ಸಕ್ಕರೆ ಮತ್ತು ರಂಜಕದ ಆಮ್ಲ ಇತರೆ ಪ್ರಮುಖ ನೈಸರ್ಗಿಕ ಪಾಲಿಮರ್.ಗಳು. ಸಸ್ಯಗಳಿಂದ ಪಡೆಯಲಾದ ಮತ್ತು ಆಹಾರ ಶಕ್ತಿಯ ಪ್ರಮುಖ ಮೂಲವಾದ ಪಿಸ್ಟ, ಗ್ಲುಕೋಸ್.ನಿಂದ ರಚಿತವಾದ ನೈಸರ್ಗಿಕ ಪಾಲಿಮರ್.ಗಳಾಗಿದೆ. ಪ್ರಾಣಿಗಳ ಶೇಖರಣೆಯ ಆಹಾರವಾದ ಗ್ಲೈಕೋಜೆನ್, ಗ್ಲುಕೋಸ್.ನ ಪಾಲಿಮರ್ ಆಗಿದೆ. ಗ್ರಾಪೈಟ್ ಮತ್ತು ವಜ್ರ, ಇಂಗಾಲದಿಂದ ರಚಿತವಾಗಿರುವ ಎರಡೂ ಅಜೈವಿಕ ನೈಸರ್ಗಿಕ ಪಾಲಿಮರ್.ಗಳಾಗಿವೆ.

ಸಂಶ್ಲೇಷಿತ ಪಾಲಿಮರ್.ಗಳು ಸಂಕಲನ ಮತ್ತು ಘನೀಕರಣದಂತಹ ವಿವಿಧ ರೀತಿಯ ರಸಾಯನಿಕ ಕ್ರಿಯೆಗಳಿಂದ ಉತ್ಪತ್ತಿಯಾಗುತ್ತವೆ. ಅವು  ಫ್ರೀ ರಾಡಿಕಲ್,  ಧನ ವಿದ್ಯುದ್ವಾಹೀಕಣ ಮತ್ತು ಋಣ ವಿದ್ಯುದ್ವಾಹೀಕಣ ಅಥವಾ ಸಮನ್ವಯ ಕಾರ್ಯವಿಧಾನವನ್ನು ಅನುಸರಿಸಬಹುದು. ಮಾನವ ನಿರ್ಮಿತ ಪಾಲಿಮರ್ (ಸಂಶ್ಲೇಷಿತ) ಸಂಶ್ಲೇಷೆಣೆಗಳು ಅಸಂಖ್ಯಾತ. ಅವು ಪಾಲಿಥೀನ್, ಪಾಲಿಪ್ರೊಪೈಲಿನ್, ಪಾಲಿಸ್ಟೈರಿನ್, ಪಾಲಿವಿನೈಲ್ ಕ್ಲೋರೈಡ್ (PVC), ಪಾಲಿಟೆಟ್ರಾಫ್ಲೂರೋಇಥಿಲೀನ್ (PTFE, TEFLON), ಪಾಲಿಅಕ್ರೊನೈಟ್ರಿಲ್ (PAN, ಓರ್ಲಾನ್), ಫಿನಾಲ್-ಫಾರ್ಮಾಲ್ಡಿಹೈಡ್ ರಾಳ (ಬೇಕಲೈಟ್, ನೊವೊಲಾಕ್), ಮೆಲಮೈನ್-ಫಾರ್ಮಾಲ್ಡಿಹೈಡ್ ರಾಳಗಳು, ಯೂರಿಯಾ-ಫಾರ್ಮಾಲ್ಡಿಹೈಡ್ ರಾಳಗಳು, ಪಾಲಿಮೀಥೈಲ್ ಮೆಟಾಕ್ರಿಲೇಟ್ಸ್ (PMMA), ಪಾಲಿಯೆಸ್ಟರ್ (ಟೆರಿಲೀನ್ ಅಥವಾ ಡಾಕ್ರೊನ್ ಅಥವಾ ಮೈಲಾರ್), ಗ್ಲೈಪ್ಟಲ್, ನೈಲಾನ್.ಗಳು, ಎಪಾಕ್ಸಿ ರಾಳಗಳು, ಪಾಲಿಕಾರ್ಬೊನೇಟ್.ಗಳು, ವಾಲ್ಕನೈಸ್ಡ್ ರಬ್ಬರ್ (ಎಬೊನೈಟ್), ನಿಯೋಪ್ರೈನ್, ಬುನಾ-ಎನ್, ಬುನಾ-ಎಸ್, ಬ್ಯುಟೈಲ್ ರಬ್ಬರ್, ಪಾಲಿಯುರೇಥೇನ್ ರಬ್ಬರ್, ಇತ್ಯಾದಿ.  ಅಜೈವಿಕ ಸಂಶ್ಲೇಷಿತ ಪಾಲಿಮರ್ ಕುಟುಂಬದ ಅತ್ಯಂತ ಪ್ರಮುಖ ಪ್ರಾತಿನಿಧ್ಯವೆಂದರೆ ಸಿಲಿಕಾನ್ ಮತ್ತು ಗಾಜು.

ಪಾಲಿಮರ್ ಗಳನ್ನು ವಿವಿಧ ರೀತಿಯ ಕ್ಷೇತ್ರಗಳಲ್ಲಿ ಅನ್ವಯಿಸಲಾಗುತ್ತಿದೆ. ಅವುಗಳಲ್ಲಿ ಕೆಲವು:

  • ಕೃಷಿ ಕ್ಷೇತ್ರ: ಮಲ್ಚಿಂಗ್ ಫಿಲ್ಮ್ಸ್.ಗಳು, ಗ್ರೀನ್ ಹೌಸ್ ಫಿಲ್ಮ್.ಗಳು, ಇತ್ಯಾದಿ.
  • ವೈದ್ಯಕೀಯ ಕ್ಷೇತ್ರ: ಸಿರಿಂಜ್.ಗಳು ಕ್ಯಾಪ್ಸೂಲ್.ಗಳು, ಔಷಧ ಪ್ಯಾಕೇಜಿಂಗ್ ಇತ್ಯಾದಿ.
  • ಸಾರಿಗೆ ಕ್ಷೇತ್ರ: ಕಾರ್ ಬಂಪರ್, ವೀಲ್ ಕವರ್.ಗಳು, ಇತ್ಯಾದಿ.
  • ವಿದ್ಯುತ್ ಕ್ಷೇತ್ರ: ವೈರ್ ಕ್ರೇಟಿಂಗ್, ಸ್ವಿಚ್.ಗಳು, ಇತ್ಯಾದಿ.
  • ಗೃಹ ಅನ್ವಯಿಕಗಳು: ಬಟ್ಟಲುಗಳು, ಅಡುಗೆ ಮನೆಯ ಪರಿಕರಗಳು, ಇತ್ಯಾದಿ.
  • ವಿಶೇಷತೆ ಪಾಲಿಮರ್.ಗಳು: ವಿಮಾನ, ಇತ್ಯಾದಿ.

ನಾವು ಮರ, ಲೋಹ, ಗಾಜು ಅಥವಾ ಪಿಂಗಾಣಿಗಳ ಬದಲಿಗೆ ವಸ್ತುಗಳನ್ನು ತಯಾರಿಸಲು ಹೆಚ್ಚಾಗಿ ಪಾಲಿಮರ್.ಗಳನ್ನು ಬಳಸಬಯಸುತ್ತೇವೆ, ಇದು ಪಾಲಿಮರ್.ಗಳ ಹಿರಿಮೆಯನ್ನು ತೋರಿಸುತ್ತದೆ. ಬಹುತೇಕ  ಪಾಲಿಮರ್.ಗಳು ಹಗುರವಾಗಿರುತ್ತವೆ, ಮುರಿಯಲು ಕಠಿಣ, ದೀರ್ಘಕಾಲ ಬಾಳಿಕೆ ಬರುತ್ತವೆ, ಮರುಬಳಕೆ ಮಾಡಿಕೊಳ್ಳಬಹುದು, ಆಕಾರಕ್ಕೆ ಸುಲಭವಾಗಿ ರೂಪುಗೊಳ್ಳಬಲ್ಲವು, ಸುರಕ್ಷಿತ, ವಿಷಕಾರಿಯಲ್ಲ ಮತ್ತು ಅಗ್ಗವಾಗಿವೆ. ಸರಿಯಾದ ರೀತಿಯ ಪಾಲಿಮರ್.ನ ಆಯ್ಕೆ ಮಾಡುವ ಮೂಲಕ, ಮೃದು ಅಥವಾ ಗಟ್ಟಿ, ಬಳುಕುವ ಅಥವಾ ಬಳುಕದ, ಹೀಗೆ ನಮಗೆ ಬೇಕಾದ ರೀತಿಯಲ್ಲಿ ಉತ್ಪನ್ನಗಳನ್ನು ಹೊಂದಬಹುದು.  ಬಹುತೇಕ ಪಾಲಿಮರ್.ಗಳು ಬಹಳ ಬಹಳ ವರ್ಷ ಬಾಳಿಕೆ ಬರುತ್ತವೆ. ವಿಶೇಷವಾಗಿ ಬಟ್ಟೆ, ಜಾರ್.ಗಳು, ಕುರ್ಚಿಗಳು ಇತ್ಯಾದಿಗಳನ್ನು ತಯಾರಿಸಲು ಬಳಸಿದರೆ ಅವುಗಳು ಲಾಭದಾಯಕ. ಆದರೆ, ಅವುಗಳನ್ನು ಎಸೆದರೆ ಹಾನಿಕಾರಕ. ಕೆಲವು ಪಾಲಿಮರ್.ಗಳನ್ನು ಮರುಬಳಕೆ ಮಾಡುವುದು ಸುಲಭ. ತ್ಯಾಜ್ಯ ಭೂಭರ್ತಿಗಳು ಬೇಗ ಭರ್ತಿಗೊಳ್ಳದಂತೆ ತಡೆಯಲು ಪಾಲಿಮರ್ ವಸ್ತುಗಳನ್ನು ಮರುಬಳಕೆ ಮಾಡುವುದು ಮುಖ್ಯ.

ಸಂಶ್ಲೇಷಿಯ ಪಾಲಿಮಾರ್.ಗಳ ಅತಿ ದೊಡ್ಡ ಅನ್ವಯಿಕವು ಪ್ಲಾಸ್ಟಿಕ್. ಇದರಲ್ಲಿ ಕೆಲವೊಂದು ಭಾಗ ಬಿಸಾಡುವ ಪಾತ್ರೆಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಾಗಿ ಬಳಸಲಾಗುತ್ತದೆ. ಪ್ಲಾಸ್ಟಿಕ್ ತಾವಾಗಿಯೇ ವಿಘಟನೆಯನ್ನು ಹೊಂದುವುದಿಲ್ಲ. ಅಂದರೆ, ಅವು ಜೈವಿಕವಿಘಟನೀಯವಲ್ಲ. ಈ  ಪಾಲಿಮರ್.ಗಳು ಪರಿಸರಕ್ಕೆ  ಹಾನಿಯನ್ನುಂಟುಮಾಡುತ್ತವೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುತ್ತಿವೆ. ಪ್ಲಾಸ್ಟಿಕ್.ಗಳು ಪ್ರಾಣಿಗಳ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತವೆ, ವಿಶೇಷವಾಗಿ ಸಮುದ್ರ ಜಗತ್ತಿನ ಪರಿಸರವು ಪ್ಲಾಸ್ಟಿಕ್.ನಿಂದ ತುಂಬಿರುವುದರಿಂದ ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಮುಖ್ಯವಾಗಿ ಉಸಿರುಗಟ್ಟುವಿಕೆಯ ಕಾರಣದಿಂದ ಜಲಚರಗಳ ಸಾವಿಗೆ ಕಾರಣವಾಗಿವೆ. ಪೆಟ್ರೋಲಿಯಂನಿಂದ ಪ್ಲಾಸ್ಟಿಕ್.ಗಳನ್ನು ತಯಾರಿಸುತ್ತಿರುವುದರಿಂದ  ಆವಾಸಸ್ಥಾನದ ನಾಶ, ಕಚ್ಚಾ ತೈಲ ಹೊರತೆಗೆಯುವುದು, ಭದ್ರತಾ ಸಮಸ್ಯೆಗಳು, ರಾಸಾಯನಿಕ ನಿರ್ವಹಣೆ, ಇತ್ಯಾದಿ ಹಲವಾರು ಸಮಸ್ಯೆಗಳನ್ನು ತರುತ್ತದೆ  (ಚಿತ್ರ 2).

ಈ ಬೆಳವಣಿಗೆ ಬೌದ್ಧಿಕ ಮಾನವ ಸಂಪನ್ಮೂಲದ ಬಳಕೆ ಮತ್ತು ಸಾಕಷ್ಟು ಅನುದಾನದ ವ್ಯಯವಾಗುತ್ತದೆ. ಇದರರ್ಥ, ಪ್ಲಾಸ್ಟಿಕ್.ಗೆ ಸಮಾಜದಲ್ಲಿ ಸ್ಥಾನವಿಲ್ಲವೆಂದಲ್ಲ, ಅದರ ಸರಿಯಾದ ಬಳಕೆ, ವಿಲೇವಾರಿ ಮತ್ತು ನಿರ್ವಹಣೆಯಿಂದ ಸಮಾಜವನ್ನು ಆರೋಗ್ಯಕರವಾಗಿರಿಸಬಹುದು. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದರ ಬದಲು ಅವುಗಳ ವಿಲೇವಾರಿಗೆ ಪರಿಹಾರ ಕಂಡು ಹಿಡಿಯುವುದನ್ನು ಸಂಶೋಧನೆಯ ಮೂಲಕ ಮುಂದುವರಿಸಬೇಕು. ಉತ್ಪನ್ನಕ್ಕೆ ಮುನ್ನ ಒಂದು ಉತ್ತಮ ಯೋಜನೆಯು ಅತ್ಯಗತ್ಯವಾಗಿದೆ. ಉತ್ತಮ ಯೋಜನೆಯ ಕೊರತೆಯಿಂದ ಉತ್ಪನ್ನವನ್ನು ಕಾರ್ಯಗತಗೊಳಿಸಿದ್ದರಿಂದಾದ ಪರಿಣಾಮಕ್ಕೆ ಉದಾ.,  LHRH (ಲ್ಯೂಟಿನೈಸಿಂಗ್ ಹಾರ್ಮೋನು ರಿಲೀಸಿಂಗ್ ಹಾರ್ಮೋನ್).

1980ರ ದಶಕದಲ್ಲಿ, ಪ್ರಪಂಚದ ಬಹುತೇಕ ಪ್ರಯೋಗಾಲಯಗಳು ಫಲವತ್ತತೆಯನ್ನು ನಿಯಂತ್ರಿಸಲು LHRH ಸಾದೃಶ್ಯಗಳನ್ನು ಸಂಶ್ಲೇಷಿಸುವಲ್ಲಿ ನಿರತವಾಗಿದ್ದವು. ಫಲವತ್ತತೆಗೆ ಕಾರಣವಾದ LH ಮತ್ತು FSH ಅನ್ನು ಪ್ರತಿಬಂಧಿಸಲು ವಿಜ್ಞಾನಿಗಳು ವೈರುಧ್ಯವನ್ನು ಸಂಶ್ಲೇಷಿಸುವಲ್ಲಿ ಯಶಸ್ವಿಯಾದರು. ಆದರೆ, LH (ಲ್ಯೂಟಿನೈಸಿಂಗ್ ಹಾರ್ಮೋನ್) ಮತ್ತು FSH (ಫಾಲಿಕಲ್-ಪ್ರಚೋದಕ ಹಾರ್ಮೋನ್)   ಬಿಡುಗಡೆಯಾಗದಿದ್ದರೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಅವರು ಎಂದೂ ಯೋಚಿಸಲಿಲ್ಲ. ಈ ಹಾರ್ಮೋನುಗಳು ಪ್ರತಿಬಂಧಿಸಲ್ಪಟ್ಟಾಗ ಅಡ್ಡ ಪರಿಣಾಮವಾಗಿ ಎಡಿಮಾ ರಚನೆಯಾಗಿ ಅನೇಕ ತೊಡಕುಗಳಿಗೆ ಎಡೆಮಾಡಿಕೊಟ್ಟಿತು. ಅಂತಿಮವಾಗಿ, ಸಾದೃಶ್ಯಗಳು ಉದ್ದೇಶವನ್ನು ಪೂರೈಸದೆ ಇದ್ದ ಕಾರಣ, ಅವುಗಳ ಬಳಕೆ ನಿಂತುಹೋಯಿತು. ಆದ್ದರಿಂದ,  ಯಾವುದೇ ವಿಚಾರವನ್ನು ಕಾರ್ಯರೂಪಕ್ಕೆ ತರುವ ಮೊದಲು ಸರಿಯಾದ ಯೋಜನೆಯು ಅತ್ಯಂತ ಅವಶ್ಯಕವಾಗಿದೆ. ತಿಳಿದವರು ಹೇಳುವಂತೆ “ಸರಿಯಾದ ಯೋಜಿಸಿದ ಕೆಲಸವು ಅರ್ಧಮುಗಿದಂತೆ”.

ಒಟ್ಟಾರೆಯಾಗಿ, ಕೆಲವು ಪಾಲಿಮರ್.ಗಳನ್ನು (ಪ್ಲಾಸ್ಟಿಕ್ ನಂತಹ) ಅವುಗಳ ಬಹುಆಯಾಮ ಅನ್ವಯಿಕತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ನಿಷೇಧಿಸಲು ಸಾಧ್ಯವಿಲ್ಲ. ಇಂದು ಪಾಲಿಮರ್.ಗಳು ಮಾನವ ಜೀವನದ ಒಂದು ಭಾಗವಾಗಿ ಹೋಗಿರಬಹುದು ಆದರೆ, ಮುಂಬರುವ ದಿನಗಳಲ್ಲಿ ಜನರು ವಿವೇಕರಾಗಬೇಕು ಹಾಗೂ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ನಮ್ಮ ಜೀವನವು ಸುಂದರ, ಅರ್ಥಪೂರ್ಣ ಮತ್ತು ವರ್ಣರಂಜಿತವಾಗಿದೆ. ಏಕೆಂದರೆ, ಪ್ರಕೃತಿ ಮಾತೆ ನಮಗೆ ‘ಪಾಲಿಮರ್’ ಎಂಬ ಅದ್ಭುತ ಉಡುಗೊರೆಯನ್ನು ನೀಡಿದ್ದಾರೆ. ನಾವು ಮಾನವರಾಗಿ ಅವುಗಳನ್ನು ಜಾಣ್ಮೆಯಿಂದ ನಿಭಾಯಿಸಿ ಭವಿಷ್ಯಕ್ಕೂ ಉಳಿಸಿಟ್ಟು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ.

ಪ್ರೊ. ಡಿ. ಚನ್ನೇಗೌಡ
ಪ್ರಾಧ್ಯಾಪಕರು (ನಿವೃತ್ತ) ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು-570 006
ಇ-ಮೇಲ್: dchannegowda@yahoo.co.in

ಇಂಗ್ಲೀಶ್ ಲೇಖನ “Life is Polymeric in Nature !!!” ಅನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದಕ್ಕೆ ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ, ಕವಿತಂಅ ಇವರಿಗೆ ಧನ್ಯವಾದಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content