ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಕ್ಕರೆ ಸವಿಯತ್ತ ಧಾವಿಸುವ ಗಂತಿಕೋಶಗಳು

– ಡಾ. ಪಿ.ಎಸ್. ಶಂಕರ್

ಸ್ತನದ ಗಂತಿ ನಲವತ್ತು ಐವತ್ತು ವರುಷ ವಯಸ್ಸಿನ ಸ್ತ್ರೀಯರಲ್ಲಿ ಗೋಚರಿಸಬಲ್ಲದು. ಮಕ್ಕಳಾಗದ ಸ್ತ್ರೀಯರಲ್ಲಿ ಈ ರೋಗದ ಸಂಭಾವ್ಯ ಮಕ್ಕಳಾದವರಿಗಿಂತ ಹೆಚ್ಚಿರುವುದರ ಕಾರಣದಿಂದಾಗಿ ಹಾಲೂಡಿಕೆ ಬಹುಶಃ ಸ್ತನದ ಕ್ಯಾನ್ಸರ್ ಬೆಳವಣಿಗೆಯನ್ನು ಕುಗ್ಗಿಸಬಲ್ಲದೆಂಬ ತರ್ಕಕ್ಕೆ ಆಧಾರವಾಗಿದೆ. ಆದರೂ ಈ ರೋಗದ ಕಾರಣ ನಿಗೂಢವಾಗಿಯೇ ಉಳಿದಿದೆ. ಕೌಟುಂಬಿಕ ಇತಿಹಾಸವನ್ನು ಪರಿಶೀಲಿಸಿದಾಗ ಸ್ತನ ಗಂತಿ ಹೊಂದಿದ ತಾಯಂದಿರ ಹೆಣ್ಣು ಮಕ್ಕಳಲ್ಲಿ ಸ್ತನ ಗಂತಿ ಬೆಳವಣಿಗೆ ಸಾಧ್ಯತೆ ಇತರರಿಗಿಂತ ಹೆಚ್ಚೆಂದು ಕಂಡುಬAದಿದ್ದು, ಅನುವಂಶಿಕ ಅಂಶಗಳು ಅದರ ಬೆಳವಣಿಗೆಯಲ್ಲಿ ಪಾತ್ರವಹಿಸಬಹುದೆಂಬ ಶಂಕೆಗೆಡೆಮಾಡಿದೆ.

ಭಾರತದ ಸ್ತ್ರೀಯರು ಸ್ತನಗಂತಿ (ಕ್ಯಾನ್ಸರ್)ಯಿಂದ ನರಳಿ ಸಾಯುತ್ತಿರುವುದು ವಿಜ್ಞಾನಿಗಳ ಗಮನ ಸೆಳೆದಿದೆ.

ಸ್ತನದಲ್ಲಿ ತೋರಿಬರುವ ಗಂತಿಕೋಶಗಳ ಜೀವವಸ್ತುಕರಣ ಕ್ರಿಯೆಯ ಅಧ್ಯಯನದಿಂದ, ಅವು ಗ್ಲುಕೋಸ್ ಬಳಕೆಯನ್ನು ವಿಶೇಷವಾಗಿ ಮಾಡುತ್ತಿರುವುದು ಗಮನ ಸೆಳೆದಿದೆ. ಗಂತಿಕೋಶಗಳು ಗ್ಲುಕೋಸ್ ಬಳಕೆಯ ಚಟ ಬೆಳೆಸಿಕೊಂಡಿವೆ. ಗ್ಲುಕೋಸ್ ಜೀವಕೋಶದೊಳ ಸೇರಿದ ಮೇಲೆ, ಅದರ ಸಾಗು ಹಾದಿಗಳನ್ನು ಅದರಿಂದ ಸಮೃದ್ಧಗೊಳಿಸಿ ಅದು ನೀಡುವ ಶಕ್ತಿಯಿಂದ ಬೆಳವಣಿಗೆ ಹೊಂದಿ ತಮ್ಮ ಸಂಖ್ಯಾಭಿಯನ್ನು ಮಾಡಿ ಕೊಳ್ಳುತ್ತವೆ. ದೇಹದಲ್ಲಿನ ಸಹಜ ಜೀವಕೋಶಗಳು ಗ್ಲುಕೋಸನ್ನು ಶಕ್ತಿ ಬಿಡುಗಡೆಯ ಇಂಧನವಾಗಿ ಬಳಸುತ್ತವೆ. ಸಹಜ ಕೋಶಗಳು ಗಂತಿಕೋಶಗಳಾಗಿ ಮಾರ್ಪಾಟಾದಾಗ, ಗ್ಲುಕೋಸ್ ಬಳಕೆಯ ಕಾರ್ಯವಿಧಾನವು ಬದಲುಗೊಳ್ಳುವುದು ಗಮನಿಸಬೇಕಾದ ಸಂಗತಿ.

ಸ್ತನದ ಗಂತಿಕೋಶಗಳು ಗ್ಲುಕೋಸ್ ಬಳಕೆಯನ್ನು ನಿಯಂತ್ರಿಸುವಲ್ಲಿ ಎರಡು ರೀತಿಯಿಂದ ಕಾರ್ಯ ಮಾಡುವ ಎರಡು ವಿಭಿನ್ನ ಜೀನ್ (ಜನಿಕ)ಗಳನ್ನು ವಿಜ್ಞಾನಿಗಳು ಪತ್ತೆಮಾಡಿದ್ದಾರೆ. CBX2 ಎಂಬ ಹೆಸರಿನ ಜೀನ್ ಕ್ಯಾನ್ಸರ್ ಕೋಶಗಳು ಗ್ಲುಕೋಸ್ ಅನ್ನು ಪಡೆದು ಅದರ ಬಳಕೆಗೆ ಚಾಲನೆ ನೀಡಿದರೆ, ಅದರ ಜೊತೆಯ ಮತ್ತೊಂದು ಜೀನ್, CBX7 ಅದರ ವಿರುದ್ಧ ರೀತಿ ಕಾರ್ಯಮಾಡುತ್ತದೆ. ಈ ಮಾಹಿತಿಯನ್ನಧರಿಸಿ, ಈ ಜೀನ್‌ಗಳ ಮೇಲಾಗಲೀ ಅಥವಾ ಗ್ಲುಕೋಸ್ ಹಾದಿಯ ಮೇಲಾಗಲೀ ಕಾರ್ಯ ಮಾಡುವಂತಹ ಔಷಧಗಳನ್ನು ರೂಪಿಸಿ ಕ್ಯಾನ್ಸರ್ ವಿರುದ್ಧ ಸದುರ ಸಾರಬಹುದಾಗಿದೆ.

CBV ಜೀನ್‌ಗಳು ಮಾನವ ಭ್ರೂಣದ ಬೆಳವಣಗೆಯಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಭ್ರೂಣ ಬೆಳವಣಿಗೆಗೆ ಮತ್ತು ಗಂತಿಕೋಶಗಳ ಬೆಳವಣಿಗೆಯಲ್ಲಿ ತೋರಿಬರುವ ಚಯಾಪಚಯ ಕ್ರಿಯೆಗಳು ಒಂದೇ ರೀತಿಯಲ್ಲಿ ಜರುಗುವುದು ಗಮನಾರ್ಹ. ದಿಲ್ಲಿಯ ಜಾಮಿಯ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯದ ಮಹಮದ್ ಅಸ್ಕಾಂಕರ್ ಇಕ್ಬಾಲ್ ಮತ್ತು ಸಹೋದ್ಯೋಗಿಗಳು 3000 ಸ್ತನಗಂತಿಯ ಮಾದರಿಗಳ ಅಣುಮಟ್ಟದ ಅಂಶಗಳನ್ನು ಅಧ್ಯಯನ ಮಾಡಿ ಮೇಲ್ಕಂಡ ಎರಡು ಜೀನ್‌ಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಸಹಜ ಜೀವಕೋಶಗಳಲ್ಲಿ CBX2 ಪ್ರಮಾಣ ಕಡಿಮೆಯಿದ್ದು, CBX7 ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಗುರುತಿಸಿದರು. ಆದರೆ ಇವುಗಳ ಪ್ರಮಾಣ ಸ್ತನಗಂತಿ ಕೋಶಗಳಲ್ಲಿ ವಿರುದ್ಧ ತೆರನಾಗಿದ್ದಿತು. ಅಲ್ಲಿ CBX2 ಪ್ರಮಾಣ ಹೆಚ್ಚಿದ್ದರೆ, CBX7 ಕಡಿಮೆ ಪ್ರಮಾಣದಲ್ಲಿದ್ದಿತು. ಈ ರೀತಿಯ ಪ್ರಕಟಣೆಯನ್ನು ತೋರ್ಪಡಿಸಿದ ಸ್ತನ ಕ್ಯಾನ್ಸರ್ ರೋಗಿಗಳು ಹೆಚ್ಚು ಕಾಲ ಬದುಕುಳಿಯಲಿಲ್ಲ.

ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾದ ಜೀನನ್ನು (CBX2) ಗಂತಿಕೋಶಗಳಲ್ಲಿ ನಾಶಪಡಿಸಿ ಗಂತಿ ಬೆಳವಣಿಗೆಯನ್ನು ನಿಯಂತ್ರಿಸಬಹುದಾದರೂ, ಆ ಜನಿಕವನ್ನು ನಮ್ಮ ದೇಹದಿಂದ ತೆಗೆದುಹಾಕಲುಬಾರದು. ಏಕೆಂದರೆ ಆ ಜನಿಕವು ಭ್ರೂಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿರುವುದು. ಅದರ ಬದಲು ಗಂತಿಕೋಶಗಳು ಗ್ಲುಕೋಸ್ ಬಳಕೆ ಮಾಡುವ ಕಾರ್ಯಕ್ಕೆ ತಡೆಯೊಡ್ಡಿ ಕ್ಯಾನ್ಸ್ರ್ ಬೆಳವಣಿಗೆಗೆ ಅವಕಾಶ ಮಾಡಿಕೊಡದಿರುವುದು ಸುಲಭ ಮಾರ್ಗವೆಂದು ತೋರಿದೆ.

ಅಃx2 ಜೀನ್ ಪ್ರಕಟಣೆ ಹೆಚ್ಚಿದ್ದು ಮತ್ತು ಇಲ್ಲವೆ CBX7 ಪ್ರಕಟಣೆ ಕುಗ್ಗಿರುವ ಸ್ತನಗಂತಿ ಹೊಂದಿರುವ ವ್ಯಕ್ತಿಗಳಿಗೆ ಗಂತಿರೋಧಕಗಳಾದ ಮೆಥೋಟ್ರೆಕ್ಸೇಟ್ ಮತ್ತು ರ‍್ಯಾಪಾಮೈಸಿನ್ ನೀಡಿ ಚಿಕಿತ್ಸೆಗೊಳಪಡಿಸಬಹುದು. ಅವುಗಳ ಪ್ರಭಾವದಡಿಯಲ್ಲಿ ಗಂತಿಕೋಶಗಳ ಬೆಳವಣಿಗೆ ಹಿಮ್ಮೆಟ್ಟಬಹುದು.

ಇಂದು ವ್ಯಕ್ತಿಗತ ಚಿಕಿತ್ಸೆ ಮಹತ್ವ ಪಡೆದುಕೊಳ್ಳುತ್ತಿದೆ. ನಿರ್ದಿಷ್ಟ ರೋಗ ಹೊಂದಿದ ರೋಗಿ ತೋರ್ಪಡಿಸುವ ಜೈವಿಕ ಸಂಕೇತಗಳನ್ನಧರಿಸಿ, ಅದರ ಮೇಲೆ ಕಾರ್ಯ ಮಾಡುವ ಔಷಧಿಗಳನ್ನು ರೂಪಿಸಿಕೊಡುವ ವಿಧಾನ ಪ್ರಾಶಸ್ತ್ಯ ಪಡೆಯುತ್ತಿದೆ. ಹೀಗೆ ನಿರ್ದಿಷ್ಟ ರೋಗದ ಜನಿಕ ಆಧಾರದ ಹಿನ್ನೆಲೆಯನ್ನು ತಿಳಿದುಕೊಂಡು ಗ್ಲುಕೋಸ್ ಬಳಕೆಯನ್ನು ನಿಯಂತ್ರಿಸಿ, ಗಂತಿರೋಗವನ್ನು ಹಿಡಿತಕ್ಕೆ ತರುವ ದಿನಗಳು ಸನಿಹಕ್ಕೆ ಬರುತ್ತಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content