ಕೋವಿಡ್ ಮದ್ದಿಗಾಗಿ ಹ್ಯಾಕಥಾನ್ –  ಸಂಪಾದಕೀಯ

ಕೋವಿಡ್ ಮದ್ದಿಗಾಗಿ ಹ್ಯಾಕಥಾನ್ – ಸಂಪಾದಕೀಯ

– ನಾಡೋಜ ಡಾ. ಪಿ. ಎಸ್. ಶಂಕರ್

ಕೋವಿಡ್-19ರ ವಿರುದ್ಧ ಔಷಧ ಶೋಧಿಸುವ ಹ್ಯಾಕಥಾನ್ ಕೈಕೊಳ್ಳಲು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ವಿಭಾಗದ ನವನಿರ್ಮಿತಿ ಕೋಶ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಕೌನ್ಸಿಲ್ ಕಾರ್ಯಪ್ರವೃತ್ತವಾಗಿವೆ. ಈ ಔಷಧ ಶೋಧದ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಿ ಕೋವಿಡ್ ವಿರೋಧಿ ಔಷಧ ರೂಪಿಸುವ ಗುರಿಯನ್ನು ಸಾಧಿಸಬೇಕೆಂದು ಕರೆಕೊಟ್ಟಿವೆ.

ಸ್ಮಾರ್ಟ್ ಇಂಡಿಯ ಹ್ಯಾಕಥಾನ್ (SIH) ರಾಷ್ಟ್ರೀಯ ಉದ್ಯಮಶೀಲತೆಯ ಕಾರ್ಯಕ್ರಮವಾಗಿದ್ದು ಅದು ವಿದ್ಯಾರ್ಥಿಗಳಿಗೆ ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಅವಶ್ಯಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ವಿಧಾನಗಳನ್ನು ಪತ್ತೆಮಾಡುವುದರ ವೇದಿಕೆಯಾಗಿದೆ. ಅದು ಮಾನಸಿಕವಾಗಿ ಅವರು ಪ್ರಶ್ನೆಗಳನ್ನು ಬಿಡಿಸಿ ಹೊಸದನ್ನು ನಿರ್ಮಿಸುವ ಪ್ರಾವೀಣ್ಯತೆಯನ್ನು ದೊರಕಿಸಿಕೊಳ್ಳುವುದಕ್ಕೆ ಎಡೆಮಾಡಿಕೊಡುತ್ತದೆ.

ಹ್ಯಾಕಥಾನ್ ಎಂಬ ಶಬ್ಧ ಎರಡು ಬೇರೆ ಬೇರೆ ತುಂಡು ಶಬ್ಧಗಳ ಜೊತೆಗೂಡಿ (ಹ್ಯಾಕ್-ಹುಡುಕುವ ಕರ‍್ಯಕ್ರಮ, ಮ್ಯಾರಥಾನ್-ಸುದೀರ್ಘ ಓಟ) ರೂಪುಗೊಂಡಿದೆ. ಹ್ಯಾಕಥಾನ್‌ನ ನಿರ್ದಿಷ್ಟ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಗುಂಪುಗಳು ತಮ್ಮ ವಿಚಾರಗಳನ್ನು ಮಂಡಿಸುತ್ತವೆ. ನಂತರ ಅದರಲ್ಲಿ ಭಾಗವಹಿಸುವವರು ಹೊಸ ವಿಚಾರಗಳನ್ನು ಮುಂದಿಡುತ್ತಾರೆ. ವ್ಯಕ್ತಿಗಳು ತೋರಿಸುವ ಆಸಕ್ತಿ ಮತ್ತು ಕೌಶಲವನ್ನು ಆಧರಿಸಿ ಬೇರೆ ಬೇರೆ ಗುಂಪುಗಳಲ್ಲಿ ಸೇರಿಕೊಳ್ಳುತ್ತಾರೆ. ನಂತರ ಹ್ಯಾಕಥಾನ್‌ನ ಮುಖ್ಯ ಕಾರ್ಯ ಪ್ರಾರಂಭವಾಗುತ್ತದೆ. ಆ ಕಾರ್ಯಕ್ಕೆ ಕೆಲವು ಘಂಟೆಗಳು ಹಿಡಿಯಬಹುದು. ದಿನಗಳು, ವಾರಗಳು ಹಿಡಿಯಬಹುದು. ಅದು ಮುಗಿದ ನಂತರ ಪ್ರತಿಯೊಂದು ಗುಂಪು ತಾನು ಸಾಧಿಸಿದುದನ್ನು ಮಂಡಿಸಿ ಅದರ ಪರಿಣಾಮವನ್ನು ಹೇಳುತ್ತದೆ. ಈ ವಿಚಾರಗಳನ್ನು ಹಾಗೂ ಕಾರ್ಯಪ್ರಗತಿಯನ್ನು ವಿಡಿಯೋ ಮೂಲಕ ಪ್ರದರ್ಶಿಸಬಹುದು. ಅದನ್ನು ತೀರ್ಪುಗಾರರು ಪರಿಶೀಲಿಸಿ ಬಹುಮಾನಕ್ಕೆ ಆಯ್ಕೆ ಮಾಡುತ್ತಾರೆ.

ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡ ಹ್ಯಾಕಥಾನ್ ನಮ್ಮ ದೇಶದಲ್ಲಿ ಔಷಧವನ್ನು ಶೋಧಿಸುವ ಪ್ರಯತ್ನಕ್ಕೆ ಬೆಂಬಲಕೊಡುವ ರಾಷ್ಟ್ರೀಯ ಉಪಕ್ರಮವಾಗಿದೆ. ಅದರಲ್ಲಿ ಬೇರೆ ಬೇರೆ ವೃತ್ತಿಪರರು, ಬೋಧಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್, ಕೆಮಿಸ್ಟ್ರಿ, ಫಾರ್ಮಸಿ, ವೈದ್ಯ ವಿಜ್ಞಾನ, ಮೂಲ ವಿಜ್ಞಾನ ಮತ್ತು ಬಯೋಟೆಕ್ನಾಲಜಿ ವಿಭಾಗಗಳಿಗೆ ಸೇರಿದವರಾಗಿರುತ್ತಾರೆ.

ಇದರಲ್ಲಿ ಭಾಗವಹಿಸುವವರು ನಿರ್ದಿಷ್ಟ ಔಷಧ ಶೋಧದ ಪ್ರಶ್ನ್ ಕೊಡಮಾಡಿರುವ ಸ್ಫರ್ಧೆಯನ್ನು ಎದುರಿಸಿ ಜಯಶಾಲಿಯಾಗಬೇಕಿದೆ. ಅದಕ್ಕಾಗಿ 29 ಬೇರೆ ಬೇರೆ ಪ್ರಶ್ನೆಗಳ ಸರಮಾಲೆಯನ್ನು ಗುರುತಿಸಲಾಗಿದೆ. ಈ ಹ್ಯಾಕಥಾನ್‌ನಲ್ಲಿ ಜಗತ್ತಿನ ಬೇರೆ ಬೇರೆ ಕಡೆ ಇರುವ ವೃತ್ತಿಪರರು ಮತ್ತು ಸಂಶೋಧಕರು ಭಾಗವಹಿಸಬಹುದಾಗಿದೆ.

ಇದಕ್ಕಾಗಿ ಮೂರು ಮಾರ್ಗಗಳಿವೆ. ಮೊದಲನೆಯದು ಔಷಧದ ರಚನೆಗೆ ಸಂಬಂಧಿಸಿದೆ. ಎರಡನೆಯದು ಅದರ ವಿನ್ಯಾಸ, ಹೊಸಸಾಧನಗಳು ಮತ್ತು ಕ್ರಮಾವಳಿಯನ್ನು ರೂಪಿಸುವುದಕ್ಕೆ ಸಂಬಂಧಿಸಿದೆ. ಅದರಿಂದ ಔಷಧ ಶೋಧದ ವಿಧಾನ ಫಲಪ್ರದಮಾಡುವುದರಲ್ಲಿ ತುಂಬ ಪ್ರಭಾವಿತಗೊಳ್ಳುವುದು. ಮೂರನೆಯ ಮಾರ್ಗ ಚಂದ್ರನತ್ತ ಎಸೆದಂತೆ. ಅದು ನಿಸರ್ಗ ಹೊರಹಾಕಿದ ಗುಟ್ಟುಗಳನ್ನು ಬಿಡಿಸುವ ಕಾರ್ಯ. ಸರಕಾರವು ಈ ಎಲ್ಲ ಕಸರತ್ತುಗಳನ್ನು ಮುಂದಿನ ಬೇಸಿಗೆಯ ವೇಳೆಗೆ ಮುಗಿಸಬೇಕು.

ದೇಶದಲ್ಲಿ ಈ ಬಗೆಯ ಪ್ರಯತ್ನದಿಂದ ಲೆಕ್ಕಹಾಕಿ ಮಾಡುವ ಔಷಧ ಶೋಧನೆಯ ಸಂಸ್ಕೃತಿ ಬಲವಾಗಿ ಬೇರೂರಬಲ್ಲದು. ಅದರಿಂದ ಔಷಧ ಶೋಧನೆ ಕಾರ್ಯಕ್ರಮ ವೇಗಗತಿಯನ್ನು ಪಡೆದುಕೊಳ್ಳುತ್ತದೆ. ಈ ದಿಶೆಯಲ್ಲಿ ನವನಿರ್ಮಿತಿಕೋಶ ಮತ್ತು ತಾಂತ್ರಿಕ ಶಿಕ್ಷಣ ಕೌನ್ಸಿಲ್, ಹ್ಯಾಕಥಾನ್ ಮೂಲಕ ಅಂತಃಸತ್ವದ ಔಷಧ ಕಣಗಳನ್ನು ಗುರುತಿಸುವ ಕಾರ್ಯದತ್ತ ಕೇಂದ್ರೀಕರಿಸುವುದು, ಹೀಗೆ ಗುರುತಿಸಲ್ಪಟ್ಟ ಅಣುಗಳನ್ನು ಸಂಯೋಜನೆ ಮಾಡಿ, ಅವುಗಳ ಸಾಮರ್ಥ್ಯ, ವಿಷಾರಿ ಲಕ್ಷಣ, ನಿರ್ದಿಷ್ಟ ಪ್ರಭಾವ ಬೀರುವ ಸಾಮರ್ಥ್ಯದ ವಿವರಗಳ ಪರಿಶೀಲನೆ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಕೌನ್ಸಿಲ್‌ನಿಂದ ನಡೆಯಲಿದೆ.

ಯಾವುದೇ ಔ಼ಷಧವನ್ನು ಶೋಧಿಸುವುದು ತುಂಬ ಸಂಕೀರ್ಣಕಾಯಕ. ಅದಕ್ಕೆ ಸಾಕಷ್ಟು ವೆಚ್ಚ ತಗಲುವುದು ಅದನ್ನು ತುಂಬಾ ಪರಿಶ್ರಮದಿಂದ ಕೈಕೊಳ್ಳಬೇಕು. ಅದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಇಂದು ಕೋವಿಡ್-19ರ ಚಿಕಿತ್ಸೆಗೆ ಅನೇಕ ಔಷಧಿಗಳನ್ನು ಪ್ರಯೋಗಮಾಡಿ ನೋಡಲಾಗುತ್ತಿದೆ. ಆದರೆ ಅದು ಸಂಪೂರ್ಣ ಯಶಸ್ಸು ಕಂಡಿಲ್ಲ. ಅದಕ್ಕೆ ಹಿಂದೆ ಬೇರೆ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುತ್ತಿದ್ದ ಔಷಧಿಗಳು ಪರಿಣಾಮಕಾರಿಯೋ ಹೇಗೆ ಎಂಬುದನ್ನೂ ನೋಡಲಾಗುತ್ತಿದೆ. ಅದರ ಜೊತೆಯಲ್ಲಿ ಹೊಸ ಹೊಸ ಪ್ರಭಾವಶಾಲಿ ಔಷಧಿಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಇoದು ಕಂಡುಹಿಡಿಯಬೇಕೆಂದಿರುವ ಸಿಲಿಕೋ ಔಷಧ (ಕಂಪುಟೇಷನಲ್ ಮೆಡಿಸಿನ್) ಯಾಂತ್ರಿಕ ಕಲಿಕೆ, ಕೃತಕ ಬುದ್ಧಿಮತ್ತೆ, ಮತ್ತು ಬೃಹತ್ ಅಂಕಿ ಅಂಶಗಳನ್ನು ಬಳಕೆ ಮಾಡಲಾಗುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂಪ್ಯೂಟರ್ ಅನುಕರಣೆಯನ್ನು ಬಳಸಲಾಗುತ್ತದೆ. ಜೈವಿಕ ಮತ್ತು ವೈದ್ಯಕೀಯ ಕಾರ್ಯಕ್ರಿಯೆಗಳ ಮಾದರಿ, ಅನುಕರಣೆ (ಸಿಮ್ಯುಲೇಷನ್) ಮತ್ತು ದರ್ಶನವನ್ನು ಮಾಡಬೇಕಿದೆ. ಮಿಥ್ಯಾಪರಿಸರದಲ್ಲಿ ವಾಸ್ತವ ಜೈವಿಕ ಕ್ರಿಯೆಗಳ ಅನುಕರಣೆ ಮಾಡುವ ಗುರಿಯನ್ನು ಅದು ಇಟ್ಟುಕೊಂಡಿರುತ್ತದೆ. ಅದು ನಿಜಕ್ಕೂ ಜೈವಿಕ ವ್ಯವಸ್ಥೆಯ ಗಣಿತ ಮಾದರಿಗಳ ಮುಂದುವರಿದ ಭಾಗ. ಅದನ್ನು ತಳಿವಿಜ್ಞಾನ, ಶರೀರ ಕ್ರಿಯಾವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನದಲ್ಲಿ

ಬಳಸಲಾಗುತ್ತಿದೆ. ಇಂದು ಲಭ್ಯವಿರುವ ಕಂಪುಟೇಷನಲ್ ಮೆಡಿಸಿನ್ ಸಾಮರ್ಥ್ಯ ಸಂಕೀರ್ಣ-ವ್ಯವಸ್ಥೆಗಳ ಮಾದರಿಯನ್ನು ರೂಪಿಸಲು ಸಹಾಯಕವಾಗಿದೆ. ಅದರ ಬಳಕೆಯಿಂದ ವೈದ್ಯಕೀಯದಲ್ಲಿ ಬಳಸುವ ವಸ್ತುವಿನ ಉಪಯುಕ್ತತೆ ಮತ್ತು ಅದು ಕೊಡಮಾಡುವ ಪ್ರತಿಕೂಲ ಪರಿಣಾಮವನ್ನು, ಔಷಧ ಕಂಡುಹಿಡಿಯುವ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಮಾಡಬಹುದು. ಅದನ್ನು ಪ್ರಾಣಿಗಳ ಮೇಲಿನ ಪ್ರಯೋಗಕ್ಕೆ ಬದಲಿಯಾಗಿ ಉಪಯೋಗಿಸಬಹುದು.

ಈ ರೀತಿಯ ಹ್ಯಾಕಥಾನ್ ಅನ್ನು ಹಿಂದೆ ಈ ಸಂಸ್ಥೆಗಳು ವ್ಯವಸ್ಥೆ ಮಾಡಿದ್ದರೂ, ಇಂದು ನಮಗೆ ವೈಜ್ಞಾನಿಕವಾಗಿ ಸ್ಫರ್ಧೆಯನ್ನೊಡ್ಡಿದ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಹ್ಯಾಕಥಾನ್ ಮಾದರಿಯನ್ನು ಮೊದಲಬಾರಿ ಬಳಕೆಮಾಡಲಾಗಿದೆ. ಈ ಕಾರ್ಯದಲ್ಲಿ ದೇಶಿಯರು, ವಿದೇಶಿಯರು ಎಲ್ಲರೂ ಕೈಜೋಡಿಸಿ ಯಶಸ್ಸು ಕಾಣಬೇಕಿದೆ. ಈ ಹ್ಯಾಕಥಾನ್ ಔಷಧ ಕಂಡುಹಿಡಿಯುವ ಪ್ರಯತ್ನ ಹೊಸ ಮಾದರಿಯಾಗಿ ಪರಿಣಮಿಸುತ್ತದೆಂದು ಎಲ್ಲರೂ ಆಶಾವಾದದಿಂದ ನೋಡುತ್ತಿದ್ದಾರೆ. ಕೋವಿಡ್-19ನ್ನು ಮಣಿಸಲು ಬೇಕಾದ ಮದ್ದು ಪಡೆಯುವಲ್ಲಿ ಹ್ಯಾಕಥಾನ್ ಯಶಸ್ವಿಯಾಗಲಿ. ಈ ಸ್ಫರ್ಧೆಯ ಬೇರೆ ಬೇರೆ ಘಟ್ಟದಲ್ಲಿ ಗುಂಪುಗಳ ಕಾರ್ಯಕ್ಕೆ ಯಶಸ್ಸು ದೊರೆತು ಕೋವಿಡ್ ಸೆಣೆಸುವ ಔಷಧಿ ಅನಾವರಣಗೊಳ್ಳಲಿ.

ಕೋವಿಡ್ -19ಕ್ಕೆ ಪ್ಲಾಸ್ಮಾ ಚಿಕಿತ್ಸೆ-ಸಂಪಾದಕೀಯ

ಡಾ. ಪಿ. ಎಸ್. ಶಂಕರ್, ಪ್ರಧಾನ ಸಂಪಾದಕರು, ವಿಜ್ಞಾನ ಲೋಕ

ಯಾವುದೇ ಸೋಂಕುಜೀವಿ (ಬ್ಯಾಕ್ಟೀರಿಯಾ ಮತ್ತು ವೈರಸ್)ಯ ವಿರುದ್ಧ ನೀಡುವ ಲಸಿಕೆ (ವ್ಯಾಕ್ಸಿನ್) ಅದರೆದುರು ಸೆಣೆಸುವ ಶಕ್ತಿಯನ್ನು ದೇಹಕ್ಕೆ ಕೊಡಮಾಡುತ್ತದೆ. ಸೋಂಕು ಜೀವಿಗಳ ವಿರುದ್ಧ ತೋರಿಬರುವ ಸಾಮರ್ಥ್ಯ ನೈಸರ್ಗಿಕವಾಗಿ ವ್ಯಕ್ತಿಗೆ ಲಭಿಸಬಹುದು. ದೇಹದಲ್ಲಿ ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಸೋಂಕು ಜೀವಿಯ ಪ್ರಭಾವಕ್ಕೆ ನೈಸರ್ಗಿಕವಾಗಿ ಇಲ್ಲವೆ ಕೃತಕವಾಗಿ ಒಳಪಡುವುದರಿಂದ ದೇಹದಲ್ಲಿ ಬೆಳವಣಿಗೆ ಹೊಂದುತ್ತದೆ. ನೈಸರ್ಗಿಕ ಬೆಳವಣಿಗೆಯು ಸೋಂಕು ಜೀವಿಯ ಪ್ರಭಾವಕ್ಕೆ ಒಳಪಟ್ಟಾಗ ಗೋಚರ ಇಲ್ಲವೆ ಅಗೋಚರ ರೀತಿಯಲ್ಲಿ ದೇಹದಲ್ಲಿ ಬೆಳವಣಿಗೆ ಹೊಂದುವ ಸೋಂಕಿನಿAದ ಉಂಟಾಗುತ್ತದೆ. ಪರೋಕ್ಷವಾಗಿ ಪ್ರತಿರೋಧ ಶಕ್ತಿಯನ್ನು ಶಕ್ತಿಗುಂದಿದ ಜೀವಂತ ಇಲ್ಲವೆ ಸತ್ತ ಸೋಂಕು ಜೀವಿಯನ್ನು ಇಲ್ಲವೆ ಅದರ ಪ್ರತಿಜನಕದ ತುಂಡುಗಳನ್ನೊಳಗೊAಡ ವ್ಯಾಕ್ಸಿನ್ ನೀಡಿಕೆಯಿಂದ ಉದ್ದೀಪಿಸಬಹುದು. ಈ ರೀತಿಯ ಪ್ರತ್ಯಕ್ಷ ರೀತಿಯ ಬದಲು ಅಪ್ರತ್ಯಕ್ಷ ರೀತಿಯಲ್ಲಿ ಪ್ರತಿರೋಧ ಸಾಮರ್ಥ್ಯವನ್ನು ಯಾವುದೇ ಪ್ರತಿಜನಕದ ಸ್ಫರ್ಧೆಯನ್ನು ಪ್ರತಿರೋಧ ವ್ಯವಸ್ಥೆಗೆ ನೀಡದೆ ವ್ಯಕ್ತಿಗೆ ದೊರಕಿಸಿಕೊಡಬಹುದು. ಪರೋಕ್ಷವಾಗಿ, ನೈಸರ್ಗಿಕ ರೀತಿಯಲ್ಲಿ, ತಾಯಿಂದ ಕೂಸಿಗೆ ಮಾಸಿನ (ಪ್ಲಾಸೆಂಟ) ಮೂಲಕ ಸಾಗಿಬರುತ್ತದೆ. ಅದನ್ನೇ ಕೃತಕ ರೀತಿಯಲ್ಲಿ ಇಮ್ಯೂನೊಗ್ಲಾಬುಲಿನ್ (ಪ್ರೋಟಿನ್ವ ವಸ್ತು) ಅಥವಾ ಗಾಮಾ ಗ್ಲಾಬುಲಿನ್ ಕೊಡುಗೆಯಿಂದ ವ್ಯಕ್ತಿಯಲ್ಲಿ ಅಪ್ರತ್ಯಕ್ಷ ರೀತಿಯಲ್ಲಿ ದೊರಕಿಸಿಕೊಡಬಹುದು. ದೇಹದಲ್ಲಿ ಗೋಚರಿಸುವ ಪ್ರತಿ ವಸ್ತು (ಕಾಯ, ಆಂಟಿಜನ್)ಗಳು ಪ್ರೋಟಿನ್ ವಸ್ತುಗಳಾಗಿದ್ದು ಅವುಗಳನ್ನು ದೇಹದಲ್ಲಿ ಸದೃಢವಾಗಿರುವ ಪ್ರತಿರೋಧ ವ್ಯವಸ್ಥೆ ಸಿದ್ಧಪಡಿಸಿ ರೋಗಕಾರಕ ಜೀವಿಗಳನ್ನು ತಟಸ್ಥಗೊಳಿಸಬಲ್ಲವು ಇಲ್ಲವೆ ಅವುಗಳ ವಿಷವನ್ನು ನಾಶಪಡಿಸಬಲ್ಲವು. ಪ್ರತಿವಸ್ತುಗಳು ನಿರ್ದಿಷ್ಟರೋಗದ ವಿರುದ್ಧ ದೇಹಕ್ಕೆ ಸೆಣೆಸಬಲ್ಲ ಸಾಮರ್ಥ್ಯವನ್ನು ಕೊಡಮಾಡುತ್ತವೆ.

ವ್ಯಾಕ್ಸಿನ್ ಕೊಡುಗೆಯಿಂದ ದೇಹವಿನ್ನೂ ನಿರ್ದಿಷ್ಟ ಸೋಂಕು ಜೀವಿಯ ಪ್ರಭಾವಕ್ಕೆ ಒಳಪಡುವ ಮುನ್ನವೇ ಅದು ಉಂಟುಮಾಡುವ ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯವನ್ನು ಪಡೆಯುತ್ತದೆ. ವ್ಯಾಕ್ಸಿನ್ ಕೊಡುಗೆಯಿಂದ ದೇಹ ತನ್ನದೇ ಆದ ಪ್ರತಿವಸ್ತುಗಳನ್ನು ತಯಾರುಮಾಡಿ, ಬರಲಿರುವ ನಿರ್ದಿಷ್ಟ ಸೋಂಕಿನ ವಿರುದ್ಧ ರಕ್ಷಣೆಯನ್ನು ದೊರಕಿಸಿಕೊಡುತ್ತದೆ. ವ್ಯಾಕ್ಸಿನ್‌ಗಳು ರೋಗದ ಚಿಕಿತ್ಸೆಯ ವಸ್ತುಗಳಾಗಿರದೆ, ಆ ರೋಗ ಬಾರದಂತೆ ದೂರ ಮಾಡಲು ರೂಪುಗೊಂಡಿವೆ. ಅಪ್ರತ್ಯಕ್ಷ ರೀತಿಯಲ್ಲಿ ದೊರೆಯುವ ಪ್ರತಿರೋಧ ಸಾಮರ್ಥ್ಯ ತಾತ್ಕಾಲಿಕವಾದುದು. ಅದು ಕೂಡಲೇ ಸೋಂಕನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ದೊರಕಿಸಿಕೊಡುತ್ತದೆ. ವ್ಯಕ್ತಿಯ (ರೋಗಿಯ) ದೇಹದ ಪ್ರತಿರೋಧ ವ್ಯವಸ್ಥೆ ತನ್ನದೇ ಆದ ಪ್ರತಿವಸ್ತುಗಳನ್ನು ಸಿದ್ಧಪಡಿಸಲು ಸನ್ನದ್ಧವಾಗಿರದ ಸನ್ನಿವೇಶದಲ್ಲಿ ನಿರ್ದಿಷ್ಟ ಪ್ರತಿವಸ್ತುಗಳಿರುವ ಪ್ಲಾಸ್ಮಾ (ರಕ್ತದ್ರವ) ವನ್ನು ನೀಡಿ ವ್ಯಕ್ತಿಯ ರಕ್ಷಣೆ ಮಾಡಬಹುದಾಗಿದೆ ಇದೇ ಪ್ಲಾಸ್ಮಾ ಚಿಕಿತ್ಸೆ (ಪ್ಲಾಸ್ಮಾ ಫೆರೆಸಿಸ್) ಇದೊಂದು ರೀತಿ ಕಟ್ಟಿಕೊಂಡು ಹೋಗುವ ಬುತ್ತಿಯಿದ್ದಂತೆ. ಪ್ರಯಾಣದ ಸ್ವಲ್ಪ ಸಮಯ ಅದರಿಂದ ಹೊಟ್ಟೆ ತುಂಬಿಸಿಕೊಂಡಂತೆ.

ಪ್ಲಾಸ್ಮಾ ಕೊಡುಗೆ ಹೊಸದೇನಲ್ಲ. ಅದು ಕಳೆದ ಶತಮಾನದ ಪ್ರಾರಂಭದಲ್ಲಿ ವೈದ್ಯಕೀಯ ನೋಬಲ್ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಜರ್ಮನಿಯ ಎಮಿಲ್ ವಾನ್ ಬೆರಿಂಗ್‌ನಿಂದ ರೂಪಿಸಲ್ಪಟ್ಟಿತು. ಪ್ರಾಣಿಗಳಿಂದ ದೊರಕಿಸಿದ ಪ್ರತಿವಸ್ತುಗಳನ್ನು ಡಿಫ್ತೀರಿಯ (ಲಾಳಸಂಕೋಲೆ) ದಿಂದ ನರಳುತ್ತಿದ್ದ ರೋಗಿಗಳಿಗೆ ಚುಚ್ಚಿ ಗುಣಪಡಿಸುವ ವಿಧಾನವನ್ನು ರೂಪಿಸಿದ ಆತನೇ ಈ ರೋಗದ ವಿರುದ್ಧ ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಬೆಳೆಸುವ ವ್ಯಾಕ್ಸಿನ್‌ಕಂಡು ಹಿಡಿದಿದ್ದ. ಪ್ಲಾಸ್ಮಾ ಫೆರೆಸಿಸ್ ಶಬ್ಧ ಗ್ರೀಕ್ ಮೂಲ ಹೊಂದಿದ್ದು ಅಲ್ಲಿ ರಕ್ತದ್ರವವನ್ನು ಹೊರತೆಗೆದು ಅದನ್ನಾಗಲೀ ಇಲ್ಲವೆ ಅದರಲ್ಲಿ ಲೀನವಾದ ವಸ್ತುಗಳನ್ನಾಗಲೀ ಕೊಡಲಾಗುತ್ತದೆ. ಈ ವಿಧಾನದ ವಿವರಗಳನ್ನು ಬಾಲ್ಟಿಮೋರಿನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಅಬೆಲ್‌ರೌಂಟ್ರಿ ಮತ್ತು ಟರ್ನರ್ ೧೯೧೩ರಲ್ಲಿ ವಿವರಿಸಿದರು. ಮುಂದೆ ೧೯೫೨ರಲ್ಲಿ ಜೋಸೆಫ್ ಗ್ರಿಫೋನ್ಸ್ ಈ ವಿಧಾನವನ್ನು ಪರಿಷ್ಟರಿಸಿ ಅದನ್ನು ತನ್ನ ಮೇಲೆ ಪ್ರಯೋಗಿಸಿ ಅದು ನಿರಪಾಯಕಾರಿ ಎಂಬುದನ್ನು ದೃಢಪಡಿಸಿದ. ನಂತರ ರುಬೆನ್‌ಸ್ಟೀನ್ ಪ್ಲಾಸ್ಮಾ ಕೊಡುಗೆಯನ್ನು ಲಾಸ್‌ಏಂಜಲಿಸ್‌ನ ಕಿರುಫಲಕಗಳ ಕೊರತೆಯಿಂದ ರಕ್ತ ಹೆಪ್ಪುಗೆ, ರಕ್ತತುಂತುರು ರೋಗದ ಹತೋಟಿಗೆ ಯಶಸ್ವಿಯಾಗಿ ಬಳಸಿದ.

ಪ್ರತಿರೋಧ ವ್ಯವಸ್ಥೆಗೆ ಸಂಬAಧಿಸಿದ ಅನೇಕ ಬಗೆಯ ರೋಗಗಳ ಚಿಕಿತ್ಸೆಗೆ ಪ್ಲಾಸ್ಮಾ ಕೊಡುಗೆಯನ್ನು ಬಳಸಲಾಗಿದೆ. ಈ ವಿಧಾನದಲ್ಲಿ ದೇಹದಿಂದ ರಕ್ತಕಣಗಳನ್ನೊಳಗೊಂಡ ರಕ್ತವನ್ನು
ಹೊರತೆಗೆಯಲಾಗುತ್ತದೆ. ನಂತರ ಅದನ್ನು ಕಣ ಬೇರ್ಪಡಿಸುವ ಸಾಧನದ ಮೂಲಕ ಸಾಗಿಸಿ ರಕ್ತದ್ರವವನ್ನು ಕಣಗಳಿಂದ (ಕೆಂಪು ರಕ್ತಕಣ, ಬಿಳಿ ರಕ್ತಕಣ, ಕಿರುಫಲಕ) ಬೇರ್ಪಡಿಸಲಾಗುತ್ತದೆ. ನಂತರ ರಕ್ತಕಣಗಳನ್ನು ದಾನಿಗೆ ಮರಳಿ ನೀಡಲಾಗುತ್ತದೆ (ರಕ್ತ ಪೂರಣ ವಿಧಾನದಲ್ಲಿ ತೆಗೆದ ರಕ್ತದ ಯಾವುದೇ ಭಾಗವನ್ನು ದಾನಿಗೆ ಮರಳಿ ಕೊಡಲಾಗುವುದಿಲ್ಲ) ನಿರ್ದಿಷ್ಟರೋಗ (ಇಲ್ಲಿ ಕೋವಿಡ್-೧೯) ದಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಆ ರೋಗ ಹೊಂದಿದ ವ್ಯಕ್ತಿಗೆ ನೀಡಿ, ವ್ಯಕ್ತಿಯ ಪ್ರತಿರೋಧ ಸಾಮರ್ಥ್ಯ (ಏಕೆಂದರೆ ಆಗಿನ್ನೂ ಪ್ರತಿವಸ್ತುಗಳು ರೂಪುಗೊಂಡಿರುವುದಿಲ್ಲ) ವನ್ನು ಹೆಚ್ಚಿಸಿ ರೋಗದ ಎದುರು ಸೆಣೆಸುವ ಬಲವನ್ನು ತಂದುಕೊಡುತ್ತದೆ. ಒಮ್ಮೆ ೨೦೦ ಮಿಲೀ ರಕ್ತದ್ರವವನ್ನು ರೋಗಿಗೆ ಕೊಡಲಾಗುತ್ತದೆ. ಈ ರೋಗದಿಂದ ಚೇತರಿಸಿಕೊಂಡ ವ್ಯಕ್ತಿ ರಕ್ತದ್ರವವನ್ನು ರಕ್ತಕೊರೆ ಉಂಟಾಗುವ ಭಯವಿಲ್ಲದೆ ಪದೇ ಪದೇ ನೀಡಬಹುದು. ೧೯೧೮ರಲ್ಲಿ ತಲೆದೋರಿದ್ದ ಸ್ಪಾನಿಷ್ ಫ್ಲೂ ಖಂಡಾಂತರ ಪಿಡುಗಿನಲ್ಲಿ ಫ್ಲೂನಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಗಳ ರಕ್ತದ್ರವವನ್ನು ತೀವ್ರತರರೋಗದಿಂದ ನರಳುತ್ತಿದ್ದ ರೋಗಿಗೆ ನೀಡಿ ಉಪಯುಕ್ತ ಪರಿಣಾಮ ಪಡೆಯಲಾಯಿತು. ಪೆನ್ಸಿಲ್ವೇನಿಯಾದಲ್ಲಿ ೧೯೩೪ರಲ್ಲಿ ತಲೆದೋರಿದ್ದ ಸೀತಾಳೆ ಸಿಡುಬು (ಮೀಸಲ್ಸ್) ಪಿಡುಗಿನಲ್ಲಿ ಮೊದಲು ರೋಗದಿಂದ ನರಳಿ ಚೇತರಿಸಿಕೊಂಡ ವಿದ್ಯಾರ್ಥಿಯ ರಕ್ತದ್ರವವನ್ನು ಬೇರೆ ರೋಗಿಗಳಿಗೆ ನೀಡಿ ರೋಗದ ದುಷ್ಪçಭಾವದಿಂದ ಮುಕ್ತಿ ಪಡೆಯುವಂತೆ ಮಾಡಲಾಯಿತು.
ಈಚಿನ ವರುಷಗಳಲ್ಲಿ ತೋರಿದ ಹಕ್ಕಿ ಫ್ಲೂ ಮತ್ತು ಎಬೋಲ ವೈರಸ್ ರೋಗಗಳ ಪಿಡುಗಿನಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಲಾಗಿದ್ದಿತು. ನಿರ್ದಿಷ್ಟ ರೋಗದಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಬೆಳವಣಿಗೆ ಹೊಂದಿದ ಪ್ರತಿವಸ್ತುಗಳನ್ನು ಅದೇ ಬಗೆಯ ರೋಗದಿಂದ ನರಳುತ್ತಿರುವ ರೋಗಿಗೆ ನೀಡಿ ಆತನಲ್ಲಿ (ಅವಳಲ್ಲಿ) ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯವನ್ನು ದೊರಕಿಸಿ ಕೊಡುವುದು ಈ ಬಗೆಯ ಚಿಕಿತ್ಸೆಯ ಹಿಂದಿರುವ ಉದ್ದೇಶ.

ಕೋವಿಡ್-೧೯ರಿಂದ ನರಳಿ, ಅದರಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಇತರ ರೋಗಿಗಳಿಗೆ ದಾನವಾಗಿ ನೀಡಿ ಅವರಲ್ಲಿ ಪ್ರತಿರೋಧ ಸಾಮರ್ಥ್ಯವನ್ನು ಅಪರೋಕ್ಷವಾಗಿ ದೊರಕಿಸಿಕೊಟ್ಟ ಉದಾಹರಣೆಗಳು ಅಲ್ಲಲ್ಲಿ ವರದಿಯಾಗಿದೆ. ೨೦೨೦ರ ಫೆಬ್ರವರಿಯಲ್ಲಿ ಚೀನಿ ವೈದ್ಯರು ಕೋವಿಡ್-೧೯ ರಿಂದ ನರಳಿ ಚೇತರಿಸಿಕೊಳ್ಳುತ್ತಿದ್ದ ವ್ಯಕ್ತಿಯ ರಕ್ತದ್ರವವನ್ನು ಕೆಲವೊಂದು ರೋಗಿಗಳಿಗೆ ನೀಡಿದಾಗ. ಉತ್ತೇಜಕ ಪರಿಣಾಮಗಳನ್ನು ಕಂಡರು. ಅಂತಹದೇ ಬಗೆಯ ಚಿಕಿತ್ಸೆಯನ್ನು ಅಮೇರಿಕ ಮತ್ತು ಯೂರೋಪು ರಾಷ್ಟ್ರಗಳಲ್ಲಿ ಕೈಕೊಂಡಾಗಲೂ ಉತ್ತಮ ಪರಿಣಾಮಗಳು ಗೋಚರಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಈ ಉತ್ತೇಜಕ ಪರಿಣಾಮಗಳನ್ನು ಮನಗಂಡು ಕೋವಿಡ್-೧೯ ರೋಗದಲ್ಲಿ ಅದನ್ನು ಬಳಸಬಹುದೆಂದು ತನ್ನ ಒಪ್ಪಿಗೆಯನ್ನು ಸೂಚಿಸಿತು.

ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಬಹುಕಾಲ ಉಳಿಯುವಂತಹದು ಕೆಲವೊಮ್ಮೆ ಜೀವನ ಪರ್ಯಂತ ಉಳಿದಿರುತ್ತದೆ. ಆದರೆ ಅದು ಬೆಳವಣಿಗೆ ಹೊಂದಲು ವಾರಗಳನ್ನೇ ತೆಗೆದುಕೊಳ್ಳುತ್ತದೆ. ಅದು ಬೆಳವಣಿಗೆಯಾಗುವುದು ಸೋಂಕು ರೋಗವನ್ನು ಹೊಂದಿದಾಗ ಇಲ್ಲವೆ ರೋಗ ಉಂಟುಮಾಡುವ ಸಾಮರ್ಥ್ಯ ಕಳೆದು ಸೂಕ್ಷö್ಮ ಜೀವಿಯಿರುವ ವ್ಯಾಕ್ಸಿನ್ ನೀಡಿಕೆಯಿಂದ ಅವುಗಳ ಪ್ರಭಾವದ ಹಿನ್ನೆಲೆಯಲ್ಲಿ ದೇಹದ ಪ್ರತಿರೋಧ ವ್ಯವಸ್ಥೆ ಪ್ರತಿವಸ್ತುಗಳನ್ನು ಸೃಷ್ಟಿಸುವುದರಿಂದ ದೊರೆಯುತ್ತದೆ.
ವ್ಯಾಕ್ಸಿನ್ ಕೊಡುಗೆಯಿಂದ ವ್ಯಕ್ತಿ ರೋಗವನ್ನು ಹೊಂದದೆ ನಿರ್ದಿಷ್ಟ ಸೋಂಕು ಜೀವಿಯ ವಿರುದ್ಧ ಪ್ರತಿವಸ್ತುಗಳು ದೇಹದಲ್ಲಿ ರೂಪುಗೊಳ್ಳುತ್ತವೆ. ಇಲ್ಲಿ ವ್ಯಕ್ತಿ ರೋಗದಿಂದ ನರಳಬೇಕಿಲ್ಲ,
ರೋಗದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವ ಕೋವಿಡ್-೧೯ ರಿಂದ ನರಳುತ್ತಿರುವ ವೃದ್ಧರು ಮತ್ತು ಇತರ ಸಹ-ರೋಗಗಳಿಂದ ನರಳುತ್ತಿರುವವರು ಮೊದಲ ಹಂತದ ರಕ್ಷಣೆಯನ್ನು
ಪಡೆದುಕೊಳ್ಳಬಲ್ಲರು.

ರೋಗದಿಂದ ನರಳಿ, ಚೇತರಿಸಿಕೊಂಡಿರುವವರಲ್ಲಿ, ಅವರ ಪ್ರತಿರೋಧ ವ್ಯವಸ್ಥೆ ಸಿದ್ಧಪಡಿಸಿದ ಪ್ರತಿವಸ್ತುಗಳನ್ನು ಹೊಂದಿರುತ್ತಾರೆ. ಆ ವಸ್ತುಗಳು ರಕ್ತದ್ರವದಲ್ಲಿ ಸಂಚರಿಸುತ್ತಿರುತ್ತವೆ. ಆ
ರೀತಿಯ ರಕ್ತದ್ರವವನ್ನು ಹೊರತೆಗೆದು ಅದನ್ನು ಔಷಧದಂತೆ ಬಳಸಬಹುದು. ಅದರ ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅದನ್ನು ಶುದ್ಧೀಕರಿಸಿ ಅದರಲ್ಲಿನ ಪ್ರತಿವಸ್ತುಗಳನ್ನು
ಉಪಯೋಗಿಸಬೇಕು. ಈ ರೀತಿಯ ರಕ್ತದ್ರವವನ್ನು ದಾನವಾಗಿ ಪಡೆದ ಹೊಸ ರೋಗಿಗೆ ಅದು ಪರೋಕ್ಷವಾಗಿ ಆತನ ದೇಹದ ಪ್ರತಿರೋಧ ವ್ಯವಸ್ಥೆ ತನ್ನದೇ ಆದ ವಸ್ತುಗಳನ್ನು ಸೃಷ್ಟಿಮಾಡುವ
ಕಾಲದವರೆಗೆ ರಕ್ಷಣೆಯನ್ನು ಒದಗಿಸಿಕೊಡುತ್ತದೆ. ಕೆಲವೊಂದು ರೋಗಿಗಳಲ್ಲಿ ರೋಗದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಕೊಡಮಾಡಿದ ೧೨ ರಿಂದ ೪೮ ಘಂಟೆಗಳ ಅವಧಿಯಲ್ಲಿ ಅವರು ತೋರಿಸುತ್ತಿದ್ದ ತೀವ್ರತರ ಗುಣಲಕ್ಷಣಗಳು ದೂರವಾದುದು; ಆಕ್ಸಿಜೆನ್ ಸಂತೃಪ್ತತೆ ಹೆಚ್ಚಿದುದು ಮತ್ತು ಉರಿಯೂತ ಲಕ್ಷಣಗಳು ಹಿಮ್ಮೆಟ್ಟಿದುದು ಗೋಚರಿಸಿವೆ. ಇಂದು ಕರೋನ ವೈರಸ್‌ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇನ್ನೂವರೆಗೆ ಲಭ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಅನೇಕ ಬಗೆಯ ಚಿಕಿತ್ಸಾ ವಿಧಾನಗಳು ಪ್ರಾಯೋಗಕ ಹಂತದಲ್ಲಿದೆ. ಅದರಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಒಂದು. ಈ ಬಗೆಯ ಚಿಕಿತ್ಸೆಯನ್ನು ಕೋವಿಡ್-೧೯ ಚಿಕಿತ್ಸಾ ವಿಧಾನಗಳು ಪ್ರಾಯೋಗಕ ಹಂತದಲ್ಲಿದೆ. ಅದರಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಒಂದು. ಈ ಬಗೆಯ ಚಿಕಿತ್ಸೆಯನ್ನು ಕೋವಿಡ್-೧೯ ರೋಗದಿಂದ ತೀವ್ರಸ್ವರೂಪದ ಕಾಯಿಲೆ ಹೊಂದಿದವರಲ್ಲಿ ಪ್ರಯೋಗಿಸಬಹುದೆAದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಅಂತಹ ಪ್ರಯೋಗಗಳು ಕೇರಳ, ದಿಲ್ಲಿ, ಚಂದೀಘಡ, ಪುಣೆ, ಚನೈ ಮತ್ತು ಬೆಂಗಳೂರಿನಲ್ಲಿ ಪ್ರಾರಂಭವಾಗಿವೆ. ಇಂತಹ ಪ್ರಯೋಗಗಳನ್ನು ಡ್ರಗ್ ಕಂಟ್ರೋಲರ್ ಆಫ್ü ಇಂಡಿಯ ಮತ್ತು ನೀತಿಮತ್ತೆ (ಎಥಿಕ್ಸ್) ಸಮಿತಿಯ ಪರವಾನಗಿ ಪಡೆದು ಕೈಕೊಳ್ಳಬಹುದು. ಸೌಮ್ಯ-ಮಧ್ಯಮರೀತಿಯ ಲಕ್ಷಣಗಳನ್ನು ತೋರ್ಪಡಿಸುವ ರೋಗಿಗಳಲ್ಲಿ ಈ ವೆಚ್ಚದಾಯಕ ಚಿಕಿತ್ಸೆಯನ್ನು ಕೈಗೊಳ್ಳಲಾಗದು. ಈ ಚಿಕಿತ್ಸೆಯನ್ನು ಅತಿ ಶ್ರದ್ಧೆಯ ಶುಶ್ರೂಷಾ ಘಟಕ (ಐ.ಸಿ.ಯು.) ದಲ್ಲಿ ಉಸಿರ್ದುಂಬಿಕೆಯಂತ್ರ (ವೆಂಟಿಲೇಟರ್)ದ ಆಶ್ರಯದಲ್ಲಿರುವ ತೀವ್ರಸ್ವರೂಪದ ರೋಗಿಯಲ್ಲಿ ಮಾತ್ರ ಬಳಸಬಹುದು. ಈ ವಿಧಾನ ಯಶಸ್ವಿಯಾದರೆ ಅದು ಕೋವಿಡ್-೧೯ರಿಂದ ನರಳುವ ರೋಗಿಗಳ ಜೀವವನ್ನು ಉಳಿಸಬಲ್ಲದು. ಪ್ಲಾಸ್ಮಾ ಪೂರಣ ವ್ಯಾಕ್ಸಿನ್ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ಚಿಕಿತ್ಸೆ ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯ ಕಳೆದುಕೊಂಡಿರುವ ವ್ಯಕ್ತಿಯಲ್ಲಿ ಮಾತ್ರ ರಕ್ಷಣೆಯನ್ನು ಕೊಡಬಲ್ಲದು. ರಕ್ತದ್ರವವನ್ನು ಕೊಡುವ ಮೊದಲು ದಾನಿಯ ಮತ್ತು ಅದನ್ನು ಪಡೆಯುವ ವ್ಯಕ್ತಿಯ ರಕ್ತಗುಂಪುಗಳ ಹೊಂದಾಣಿಕೆಯಿರಬೇಕು. ಒಮ್ಮೆ ೪೦೦-೫೦೦ ಮಿಲೀ ರಕ್ತದ್ರವತೆಗೆದ ಮೇಲೆ ಅರ್ಧಭಾಗವನ್ನು ಒಬ್ಬ ರೋಗಿಗೆ, ಉಳಿದರ್ಧ ಭಾಗವನ್ನು ಮತ್ತೊಬ್ಬ ರೋಗಿಗೆ ಕೊಡಬಹುದು. ಕೆಲವೊಮ್ಮೆ ಅದನ್ನು ಸಂಗ್ರಹಿಸಿಡಲೂ ಬಹುದು. ಈ ರೀತಿಯ ಪ್ಲಾಸ್ಮಾ ಚಿಕಿತ್ಸೆಯನ್ನು ಹಿಂದೆ ಉಸಿರಾಟ ಸೋಂಕು ರೋಗಗಳಲ್ಲಿ ಬಳಸಲಾಗಿದೆ. ಅದನ್ನು ಯಶಸ್ವಿಯಾಗಿ ಹಿಂದೆ ಗೋಚರಿಸಿದ್ದ ತೀವ್ರತರ ಕೂರಾದ ಉಸಿರಾಟ ಲಕ್ಷಣಕೂಟ (ಸಾರ್ಸ್) ಮತ್ತು ಮಧ್ಯಪೂರ್ವ ಉಸಿರಾಟ ಲಕ್ಷಣಕೂಟ (ಮೆರ್ಸ್) ದಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದಿತು. ಪ್ಲಾಸ್ಮಾವನ್ನು ದಾನಮಾಡುವುದು ರಕ್ತದಾನ ಮಾಡಿದಂತೆಯೇ ಇದೆ. ಪ್ಲಾಸ್ಮಾ ದಾನಿಗಳ ಶಿರೆಗಳಿಂದ ಹರಿದುಬರುವ ಚಿಕ್ಕದೊಂದು ಸಾಧನದ ಮೂಲಕ ಹೊರಬರುವಾಗ ಅದು ರಕ್ತದ್ರವವನ್ನು ಬೇರ್ಪಡಿಸುತ್ತದೆ. ಮತ್ತು ರಕ್ತಕಣಗಳನ್ನು ರಕ್ತದಾನಿಯ ದೇಹಕ್ಕೆ ಮರಳಿಸುತ್ತದೆ. ಸಾಮಾನ್ಯ ರಕ್ತದಾನದಲ್ಲಿ ಪುನಃ ರಕ್ತದಾನ ಮಾಡಲು ಕೆಲವು ಕಾಲ ಕಾಯಬೇಕು. ಆ ಅವಧಿಯಲ್ಲಿ ರಕ್ತಕಣಗಳ ತಯಾರಿಕೆಗೆ ಅವಕಾಶ ದೊರೆಯುತ್ತದೆ. ಇಂತಹ ಸಮಸ್ಯೆ ರಕ್ತದ್ರವದ ದಾನದಲ್ಲಿಲ್ಲ ರಕ್ತದ್ರವವನ್ನು ವಾರದಲ್ಲಿ ಎರಡು ಬಾರಿ ಯಾವುದೇ ದುಷ್ಪರಿಣಾಮವಿಲ್ಲದೆ ದಾನಮಾಡಬಹುದು. ಪ್ಲಾಸ್ಮಾಚಿಕಿತ್ಸೆ ರೋಗವನ್ನು ಗುಣಪಡಿಸದು ಎಂಬುದು ಗಮನದಲ್ಲಿರಬೇಕು. ಕೋವಿಡ್-೧೯ ಆರೈಕೆಯಲ್ಲಿ ಪ್ಲಾಸ್ಮಾ ಕೊಡುಗೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದರ ಸಾರ್ವತ್ರಿಕ ಬಳಕೆಗೆ ಬಲವಾದ ಪುರಾವೆಗಳು ಬೇಕು. ಅದನ್ನು ಸಂಶೋಧನೆಗೆ ಇಲ್ಲವೆ ಪ್ರಾಯೋಗಿಕ (ಟ್ರಯಲ್) ವಾಗಿಬಳಸಬಹುದು. ಕೋವಿಡ್-೧೯ ರೋಗಿಗಳ ಆರೈಕೆಯಲ್ಲಿ ಪ್ಲಾಸ್ಮಾ ಪೂರಣ ತನ್ನ ಸಾಮರ್ಥ್ಯವನ್ನು ಇನ್ನೂ ಬಲವಾಗಿ ಪ್ರದರ್ಶಿಸಬೇಕಾಗಿದೆ.

ಕೋವಿಡ್ ರೋಗದ ಬೆಳವಣಿಗೆಗೆ ತಡೆ – ಸಂಪಾದಕೀಯ

ಕೋವಿಡ್ ರೋಗದ ಬೆಳವಣಿಗೆಗೆ ತಡೆ – ಸಂಪಾದಕೀಯ

ಈ ಪುಟದ ನವೀಕರಣ ದಿನಾಂಕ This Page was last updated on ಸೆಪ್ಟೆಂಬರ್ 28th, 2020 at 11:52 ಫೂರ್ವಾಹ್ನ

ಮೂರು ತಿಂಗಳ ಹಿಂದೆ ಚೀನಾಕ್ಕೆ ಸೀಮಿತವಾಗಿದ್ದ ಕೋವಿಡ್ ರೋಗ ಮಾರ್ಚ್ 28ರ ವೇಳೆಗೆ ಜಗತ್ತಿನ 177 ರಾಷ್ಟ್ರಗಳಲ್ಲಿ ವ್ಯಾಪಿಸಿ 6.21 ಲಕ್ಷ ಜನರು ಕೋವಿಡ್-19ರ ಸೋಂಕಿಗೆ ಒಳಗಾದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 28,658 ಜನರು ಸಾವಿಗೀಡಾಗಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಸೋಂಕಿಗೀಡಾದವರ ಸಂಖ್ಯೆ ಮತ್ತು ಮರಣಹೊಂದಿದವರ ಸಂಖ್ಯೆ (ಕಂಸದಲ್ಲಿ) ಚೀನಾ 81,907 (3,299), ಇಟಲಿ 86,498 (9134), ಸ್ಪೇನ್ 72,248 (56,690), ಫ್ರಾನ್ಸ್ 33,437 (1,998), ಜರ್ಮನಿ 53,340 (399), ಇರಾನ್ 35,408 (2,517), ಇಟಲಿ ಮತ್ತು ಸ್ಪೇನ್‍ನಲ್ಲಿ ಸಾವಿಗೀಡಾದವರ ಸಂಖ್ಯೆ ಚೀನಾವನ್ನು ಮೀರಿಸಿದೆ ಅಮೆರಿಕಾ 1,05,470 (1,710), ದಕ್ಷಿಣಕೊರಿಯಾ 9,478 (144), ಭಾರತ 933 (21) ಭಾರತದಲ್ಲಿ ಹೆಚ್ಚು ದೃಢಪಟ್ಟಿರುವ ಪ್ರಕರಣಗಳು ಮಹಾರಾಷ್ಟ್ರ (150), ಕೇರಳ (176) ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 81 ಅದರಲ್ಲಿ ಬೆಂಗಳೂರಿನಲ್ಲಿ 41 ಸೋಂಕಿತರು ಸೇರಿದ್ದಾರೆ.

ಈಗ ಭಾರತದಲ್ಲಿ. ರೋಗ ಮೂರನೇ ಹಂತಕ್ಕೆ ಸಾಗುವುದನ್ನು ತಪ್ಪಿಸಲು ಇಡೀ ಭಾರತ ಲಾಕ್‍ಡೌನ್ ಆಗಿದ್ದು, ರೈಲ್ವೆ, ವಿಮಾನ, ಬಸ್ ಸಂಚಾರ ನಿಂತು ಹೋಗಿದ್ದು, ಜನ ಮೇ 3ರವರೆಗೆ ಮನೆಯಲ್ಲಿಯೇ ಉಳಿದಿರಬೇಕಾಗಿರುವ ಆದೇಶವನ್ನು ನೀಡಲಾಗಿದೆ. ಇಂದು ಚೀನಾದಿಂದ ರೋಗ ಮಾಯವಾಗಿದೆ. ದಕ್ಷಿಣ ಕೊರಿಯ ರೋಗದ ಬೆಳವಣಿಗೆಯ ಹಂತದಲ್ಲಿಯೇ ಮೊಟಕುಗೊಳಿಸಿದುದು ಎಲ್ಲರಿಗೆ ಪಾಠವಾಗಬೇಕಿದೆ. ಕೋವಿಡ್ 19 ಯುರೋಪಿನ ಇತರ ರಾಷ್ಟ್ರಗಳಾದ ಸ್ಪೈನ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡಿನಲ್ಲಿ ವಿಶೇಷವಾಗಿ ಗೋಚರಿಸಿದೆ. ಹಾಗೆಯೇ ಅದು ಅಮೆರಿಕೆಯಲ್ಲೂ ತನ್ನ ಪ್ರಭಾವ ಬೀರಿ ದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಿದೆ. ಇಂದು ವಿಶ್ವವ್ಯಾಪಿಯಾಗಿರುವ ಕೋವಿಡ್-19 ರೋಗವನ್ನು ವಿಶ್ವಆರೋಗ್ಯ ಸಂಸ್ಥೆ ಖಂಡಾಂತರ ಪಿಡುಗು ಎಂದು ಘೋಷಿಸಿದೆ. ಈ ರೋಗದಿಂದ ನರಳಿ ಉಂಟಾಗುವ ಸಾವು-ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಜನಜೀವನದ ಪ್ರತಿಯೊಂದು ಪ್ರಕ್ರಿಯೆಯ ಮೇಲೆ ತನ್ನ ಕರಾಳ ಛಾಯೆಯನ್ನು ಬೀರಿದೆ.

ಭಾರತದಲ್ಲಿ ಜನವರಿ ಫೆಬ್ರವರಿಯಲ್ಲಿ ಕಂಡುಬಾರದ ರೋಗ ಮಾರ್ಚ್‍ನಲ್ಲಿ ಗೋಚರಿಸಿದ್ದು ರೋಗ ಪ್ರತಿರೋಧ ಕ್ರಮಗಳನ್ನು ಕೈಕೊಳ್ಳಲಾಗಿದೆ. ಕರೋನ ರೋಗದಿಂದ ನರಳಿ ಸತ್ತ ಘಟನೆ ಕಲಬುರಗಿಯಲ್ಲಿ ಮಾರ್ಚ್ 10 ರಂದು ಜರುಗಿತು. ಸೌದಿ ಅರೇಬಿಯಕ್ಕೆ ಭೇಟಿಕೊಟ್ಟು ಬಂದಿದ್ದ ರೋಗಿ ಕೋವಿಡ್‍ಗೆ ಬಲಿಯಾದುದು ದೇಶದಾದ್ಯಂತ ಸುದ್ದಿಯಾಯಿತು. ಮಾರ್ಚ್ ಕೊನೆಯ ವೇಳೆಗೆ ಕರ್ನಾಟಕದಲ್ಲಿ ಮತ್ತಿಬ್ಬರ ಸಾವಿಗೆ ಕೋವಿಡ್ ಕಾರಣವಾಯಿತು. ದೇಶದಲ್ಲಿ 1000ಕ್ಕೆ ಮೀಲ್ಪಟ್ಟು ಸೋಂಕಿತರು ಪತ್ತೆಯಾಗಿದ್ದು (ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ) 30 ಜನ ಮರಣ ಹೊಂದಿದ್ದಾರೆ. ಈ ಶ್ವಾಸಕೋಶ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ ವಾದುದರಿಂದ ವ್ಯಕ್ತಿ-ವ್ಯಕ್ತಿ ಮಧ್ಯ ಅಂತರ ಕಾಯ್ದುಕೊಳ್ಳುವುದು, ಸೀನುವಾಗ, ಕೆಮ್ಮುವಾಗ ಮೂಗು ಬಾಯಿಯನ್ನು ಮೊಣಕ್ಕೆ ಇಲ್ಲವೆ ಟಿಷ್ಯೂನಿಂದ ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ಸೋಪು-ನೀರಿನಿಂದ ಚೊಕ್ಕಟವಾಗಿ ತೊಳೆದುಕೊಳ್ಳುವುದು ಕಣ್ಣು, ಮೂಗು ಮತ್ತು ಬಾಯನ್ನು ತೊಳೆಯದ ಕೈಗಳಿಂದ ಸ್ಪರ್ಶಿಸದಿರುವುದು. ವ್ಯಕ್ತಿಗತ ಸಂಪರ್ಕವನ್ನು ನಿಷೇದಿಸಿ, ಪದೇ ಪದೇ ಸ್ಪರ್ಶಿಸುವ ವಸ್ತುಗಳನ್ನು ಆಗಾಗ್ಗೆ ಚೊಕ್ಕಟ ಮಾಡುವುದು, ಸೋಂಕು ಸೇರದಂತೆ ಜಾಗೃತಿ ವಹಿಸುವುದು. ರೋಗ ಪ್ರತಿಬಂಧದಲ್ಲಿ ಪ್ರಮುಖ ಕ್ರಮಗಳಾಗಿವೆ. ಜನರ ಓಡಾಟ, ಗುಂಪುಗೂಡಿಕೆಯನ್ನು ತಪ್ಪಿಸಲು ರೈಲು, ಬಸ್, ವಿಮಾನಯಾನ ದೇಶಾದಾದ್ಯಂತ ಮೂರು ವಾರರದ್ದಾಗಿದೆ. ಜನರು ಹೊರಬಂದು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ದೇಶಕ್ಕೆ ದೇಶವೇ ಲೌಕ್‍ಡೌನ್ ಆಗಿ ಜನ ಗೃಹಬಂಧನದಲ್ಲಿದ್ದಾರೆ. ಈ ಕ್ರಮಗಳಿಂದಾಗಿ ಕೋವಿಡ್‍ರೋಗ ಹತೋಟಿಗೆ ಬರುವಲ್ಲಿ ಯಶಸಿಯಾಗಿದೆ. ಈ ಕಾರ್ಯಕ್ರಮದಲ್ಲಿ ಜನರೆಲ್ಲರ ಸಕ್ರಿಯ ಸಹಕಾರ ಅತ್ಯಗತ್ಯ. ಕರ್ನಾಟಕ ಸರಕಾರ ಕೋವಿಡ್ 19 ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು.

ಕಳೆದ ದಶಕದ ಅಂತ್ಯದಲ್ಲಿ ಚೀನಾದ ಹೂಬೆ ಪ್ರಾಂತ್ಯದ ರಾಜಧಾನಿ ವೂಹನ್‍ನಲ್ಲಿ ಗೋಚರಿಸಿದ ಸೋಂಕಿನ ಕಾರಣ ವಾರ ಕಳೆಯುವಲ್ಲಿ ಕರೋನ ವೈರಸ್‍ನ ನಾವಿನ್ಯ ರೂಪವೆಂದು ಗುರುತಿಸಲ್ಪಟ್ಟಿತು. ಈ ರೋಗ ಕಾಡ್ಗಿಚ್ಚಿನಂತೆ ನಗರವನ್ನು ಮತ್ತು ಸುತ್ತಲ ಪ್ರದೇಶವನ್ನು ವ್ಯಾಪಿಸಿ ಜನರನ್ನು ರೋಗಿಷ್ಟರನ್ನಾಗಿ ಮಾಡಿ ಸಾವಿನ ಮೇಜವಾನಿ ಏಕಾಏಕಿ ಹೆಚ್ಚಿತು. ಚೀನಾದಲ್ಲಿ 81,659 ಜನರುಕೋವಿಡ್ 19 ರೋಗದಿಂದ ನರಳಿ 3,237 ಜನ ಅದರಿಂದ ಮರಣ ಹೊಂದಿದರು. ಈ ರೋಗ ಪಿಡುಗು ರೂಪಧಾರಣ ಮಾಡಿದುದನ್ನು ಕಂಡಕೂಡಲೇ ಆ ನಗರದಲ್ಲಿ ಚೀನಾ ದಿಗ್ಬಂಧನವನ್ನು ಹೇರಿ ಜನರನ್ನು ಗೃಹಬಂಧನದಲ್ಲಿರಿಸಿ ಜನಜೀವನವನ್ನು ವಾರಗಟ್ಟಲೆ ಸ್ತಬ್ಧಗೊಳಿಸಿತು. ಇದರ ಫಲವಾಗಿ ಜನ ಗುಂಪುಗೂಡುವುದು, ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡುವುದು ತಪ್ಪಿತು. ಎರಡೂವರೆ ತಿಂಗಳು ಕಳೆಯುವಲ್ಲಿ ರೋಗ ಸಂಪೂರ್ಣ ತಹಬಂದಿಗೆ ಬಂದಿತು. ಮಾರ್ಚ್ 20ರ ವೇಳೆಗೆ ದೇಶದಲ್ಲಿ ಯಾವುದೇ ಹೊಸ ರೋಗಿ ಕಂಡುಬರಲಿಲ್ಲ. ಈ ದಿಗ್ಭಂಧನದಿಂದ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸರಪಳಿ ಭಗ್ನಗೊಂಡಿತು ಅಲ್ಲಿ ಪ್ರಯಾಣದ ಮೇಲೆ ನಿರ್ಬಂಧ ಹಾಕಲಾಯಿತು. ಜನರು ಹೆಚ್ಚು ಸಂಖ್ಯೆಯಲ್ಲಿ ಸೇರುವುದಕ್ಕೆ ಪ್ರತಿಬಂಧ, ಸಭೆ-ಸಮ್ಮೇಳನಗಳಿಗೆ ಅವಕಾಶ ಕೊಡದಿರುವುದು, ಶಾಲಾ-ಕಾಲೇಜುಗಳನ್ನು ಬಂದು ಮಾಡುವುದು ಹೀಗೆ ಪ್ರತಿಬಂಧಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡುದರಿಂದ ರೋಗ ಅಗೋಚರವಾಯಿತು.

ಚೀನಾದ ನಂತರ ಮೆಡಿಟರೇಯನ್ ತೀರದ ರಾಷ್ಟ್ರ ಇಟಲಿಯು ಕೋವಿಡ್-19ರ ಕೇಂದ್ರವಾದುದು ಹೇಗೆ ಎಂಬುದು ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಅಲ್ಲಿಕೊವಿಡ್ ಸೋಂಕಿನಿಂದ ಸತ್ತವರ ಸಂಖ್ಯೆ 4000 ವನ್ನು ದಾಟಿ ಅದು ಸೋಂಕು ಹೊಂದಿದವರಲ್ಲಿ ಸತ್ತವರ ಸಂಖ್ಯೆ ಶೇಕಡ 8.6 ರಷ್ಟು. ಈ ರೋಗ ವೃದ್ಧರಲ್ಲಿ (ಸರಾಸರಿ 78 ವರುಷ ದಾಟಿದವರು) ಮತ್ತು ಬೇರೆ ಬೇರೆ ದೈಹಿಕ ರೋಗಗಳನ್ನು ಹೊಂದಿದವರಲ್ಲಿ ವಿಶೇಷವಾಗಿದ್ದಿತು. ಆ ತರ್ಕ ಜಪಾನ್ ದೇಶಕ್ಕೆ ಹೋಲಿಸಿದಾಗ ಸಾವಿಗೆ ವಯಸ್ಸೊಂದೇ ಕಾರಣವಲ್ಲ ಎಂಬುದನ್ನು ತೋರಿಸುತ್ತದೆ. ಅಲ್ಲೂ ವೃದ್ಧರ ಸಂಖ್ಯೆ ಹೆಚ್ಚು. ಆಲ್ಲಿ ಕೊವಿಡ್‍ನಿಂದ ಸತ್ತವರ ಸಂಖ್ಯೆ 35 ಮಾತ್ರ. ಇಟಲಿಯಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ಕೋವಿಡ್ ಪಿಡುಗು ಒಂಟೆಯ ಮೇಲೆ ಬೀಸಿದ ಕೊನೆಯ ಪೆಟ್ಟಾಯಿತು. ದೇಶ ನೋಡಲು ಬಂದ ಪ್ರವಾಸಿಗರ ಮೇಲೆ ಕಟ್ಟುನಿಟ್ಟಾಗಿ ನಿಗಾವಹಿಸುವುದು, ಸೀಮಿತ ಆರೋಗ್ಯ ಸೇವಾ ಸೌಲಭ್ಯಗಳು, ರೋಗ ತಡೆಯುವ ಪ್ರತಿರೋಧ ಕ್ರಮ ಮತ್ತು ಚಿಕಿತ್ಸೆಗೆ ಇರುವ ಸೌಲಭ್ಯಗಳ ಕೊರತೆ ಇಟಲಿಯಲ್ಲಿ ಸಾವಿನ ಪ್ರಮಾಣವನ್ನು ಏಕಾಏಕಿ ಹೆಚ್ಚಿಸಿ ಅಂತ್ಯಕ್ರಿಯೆಗೆ ಸ್ಥಳದ ಕೊರತೆಯನ್ನು ಎದುರಿಸುವಂತೆ ಮಾಡಿದೆ.

ಇಟಲಿಯಲ್ಲಿ ರೋಗದ ಸೋಂಕು ಉಗ್ರರೂಪ ತಾಳಿ ಪ್ರಕಟವಾಗುವವರೆಗೂ ದೇಶದ ತುಂಬಾ ಹರಡಿಹೋಗಿದ್ದಿತು. ಜನವರಿ ಮಧ್ಯಭಾಗದಿಂದಲೇ ರೋಗದ ಲಕ್ಷಣಗಳನ್ನು ಅಲ್ಲಿನ ಜನ ತೋರಲಾರಂಭಿಸಿದ್ದರು. ಉತ್ತರ ಇಟಲಿಯ ಲಂಬಾರ್ಡಿ ಕೋವಿಡ್-19 ಸೋಂಕಿನ ಕೇಂದ್ರವೆನಿಸಿತು . ಅಲ್ಲಿ ರೋಗಿಷ್ಟರಾದವರ ಸರಾಸರಿ ವಯಸ್ಸು 69 ರೋಗದ ಸೋಂಕಿಗೊಳಗಾದ ಶೇಕಡಾ 47ರಷ್ಟು ರೋಗಿಗಳು ಆಸ್ಪತ್ರೆ ಸೇರಬೇಕಾಯಿತು. ಅವರಲ್ಲಿ ಶೇ. 18ರಷ್ಟು ರೋಗಿಗಳು ಅತಿ ಶ್ರದ್ಧೆಯ ಶುಶ್ರೂಷಾ ಘಟಕಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇಟಲಿಯಲ್ಲಿ ರೋಗದ ಸೋಂಕು ತುಂಬಾ ವೇಗವಾಗಿ ಪ್ರಸರಣಗೊಂಡಿತು.

ಚೀನಾಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಷ್ಟರಾಗಿ ಚಿಕಿತ್ಸೆ ಗೊಳಗಾದರು. ಸೀಮಿತ ಸಂಖ್ಯೆಯಲ್ಲಿನ ಆಸ್ಪತ್ರೆಗಳು ಒಮ್ಮೆಲೇ ಸಹಸ್ರಾರು ರೋಗಿಗಳ ಚಿಕಿತ್ಸೆಯನ್ನು ಕೈಕೊಳ್ಳಬೇಕಾಯಿತು. ಅಲ್ಲಿ ಸತ್ತವರ ಸಂಖ್ಯೆ ಚೀನಾದ ಸಾವಿನ ಸಂಖ್ಯೆಯನ್ನು ಮೂರು ಪಟ್ಟು ಮೀರಿಸಿತು. ಚೀನಾದಲ್ಲಿ ರೋಗದ ಪಿಡುಗು ವ್ಯಾಪಕವಾದುದನ್ನು ಕಂಡ ದಕ್ಷಿಣ ಕೊರಿಯ ಬೇಗನೆ ಎಚ್ಚೆತ್ತು ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ವ್ಯಾಪಕ ಕಾರ್ಯಕ್ರಮ ಹಾಕಿಕೊಂಡು ರೋಗ ಪ್ರಕಟಗೊಳ್ಳುವ ಮೊದಲೇ ಹತೋಟಿಗೆ ತಂದುದು ಎಲ್ಲರಿಗೆ ಪಾಠವಾಗಬೇಕಿದೆ.

ಲಾಕ್ ಡೌನ್ ಆದ ಕಾಲದಲ್ಲಿ ಅಳವಡಿಸಿದ ನಿಯಮಗಳನ್ನು ಮುರಿಯುವುದು ಜೀವದ ಜೊತೆ ಚಲ್ಲಾಟವಾಡಿದಂತೆ ಎಂದು ಪ್ರಧಾನಿ ಮೋದಿಯವರು ಜನರ ಗಮನ ಸೆಳೆದಿದ್ದಾರೆ. ಅದಕ್ಕಾಗಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮತ್ತು ಮೂರು ವಾರಗಳ ಕಾಲ ಮನೆಯಲ್ಲಿಯೇ ಇರುವುದು ಬಹು ಮುಖ್ಯ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಅತಿ ಸೂಕ್ಷ್ಮಜೀವಿಯ ಎದುರು ಸೆಣೆಸಲು ಭಾರತವನ್ನೊಳಗೊಂಡಂತೆ ಜಗತ್ತು ತೆಗೆದುಕೊಂಡ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ದೊರೆಯದು. ಇದೊಂದು ಸಾವು-ಬದುಕಿನ ಹೋರಾಟವಾಗಿದ್ದು, ಜಗತ್ತು ಕೊರೋನಾ ವೈರಸ್ ಹೆಡಿತದಲ್ಲಿ ಸಿಲುಕಿ ಅದರ ವಿರುದ್ದ ನಿರಂತರ ಹೋರಾಟ ನಡೆಸಿದೆ.

ಜಾಗತಿಕ ತಾಪಮಾನ ಏರಿಕೆ : ಎಚ್ಚರಿಕೆಯ ಗಂಟೆ – ಡಾ. ಎಸ್. ಸುಧಾ

ಹಿಮಕರಡಿ ಬೇಟೆ

ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್‍ಜಿಯೋಗ್ರಾಫಿಕ್’ನಲ್ಲಿ ಪ್ರಕಟವಾದ ಒಂದು ಹಿಮಕರಡಿಯ ಚಿತ್ರ ಪ್ರಪಂಚದಾದ್ಯಂತ ಎಲ್ಲರ ಗಮನ ಸೆಳೆಯಿತು. ಯಾವಾಗಲೂ ದಷ್ಟಪುಷ್ಟವಾಗಿರುವ ಹಿಮಕರಡಿ ಮೂಳೆ ಕಾಣುವಂತೆ ಆಗಿತ್ತು. ಚರ್ಮ ಜೋತು ಬಿದ್ದಿತ್ತು. ವಿಜ್ಞಾನಿಗಳು ಈ ವಿಷಯದ ಬಗ್ಗೆ ಯೋಚಿಸಿದಾಗ ಜಾಗತಿಕ ತಾಪಮಾನವೇ ಇದಕ್ಕೆ ಬಹುಶಃ ಕಾರಣ ಎಂದು ಅಭಿಪ್ರಾಯ ಪಟ್ಟರು. ಹಿಮ ಕರಡಿ ಆರ್ಕ್‍ಟಿಕ್ ಅಂದರೆ ಉತ್ತರಧ್ರುವದಲ್ಲಿರುವ ಹೆಪ್ಪುಗಟ್ಟಿರುವ ಸಮುದ್ರದಲ್ಲಿರುವ ಸೀಲ್ ಅನ್ನು (ಇದೊಂದು ದೊಡ್ಡ ಸ್ತನಿ) ಆಹಾರವಾಗಿ ತಿನ್ನುತ್ತದೆ. ಸೀಲ್‍ನ ದೇಹದಲ್ಲಿ ಹೆಚ್ಚಾಗಿ ಕೊಬ್ಬೇ ಇರುತ್ತದೆ. ಇದು ಹಿಮಕರಡಿಗೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ. ಹಿಮಕರಡಿಗೆ ಪ್ರತಿದಿನ ಅಂದಾಜಿನಲ್ಲಿ 12,325 ಕ್ಯಾಲೊರಿಗಳು ಬೇಕು. ಇದು ಸೀಲ್ ಅನ್ನು ಬೇಟೆಯಾಡಲು ತುಂಬಾ ಅಲೆಯುವುದಿಲ್ಲ. ಸೀಲ್ ಸಮುದ್ರದ
ಹಿಮದ ಕೆಳಗಡೆ ಶಂಕುವಿನ ರೀತಿಯ ತೂತಿನಲ್ಲಿ ಇರುತ್ತದೆ. ಆಗಾಗ ಉಸಿರಾಡಲು ಮೇಲೆ ಬರುತ್ತದೆ. ಹತ್ತಿರದಲ್ಲೇ ಹಿಮಕರಡಿಯು ಕಾಯುತ್ತಿರುತ್ತದೆ. ಸೀಲ್ ಮೇಲೆ ಬಂದಾಗ ಹಿಮಕರಡಿ ತನ್ನ ಹಿಂಗಾಲುಗಳ ಮೇಲೆ ನಿಂತು ಸೀಲ್‍ನ ತಲೆಯ ಮೇಲೆ ತನ್ನ ಮುಂಗಾಲುಗಳಿಂದ ಜೋರಾಗಿ ಬಡಿಯುತ್ತದೆ. ಇದರಿಂದ ಗಾಬರಿಗೊಂಡ ಸೀಲ್‍ನ ಕತ್ತನ್ನು ಹಿಡಿದು ಕಚ್ಚಿ ಹಿಮದ ಮೇಲೆ ಎಳೆದುಕೊಂಡು ಹಿಮಕರಡಿ ಬೇಟೆಮುಗಿಸುತ್ತದೆ. ಆದರೆ ಜಾಗತಿಕತಾಪಮಾನದಿಂದ ಆರ್ಕ್‍ಟಿಕ್ ಸಮುದ್ರ ಕರಗುತ್ತಿದೆ. ಆದ್ದರಿಂದ ಈ ರೀತಿ ಬೇಟೆಯಾಡಲು ಹಿಮಕರಡಿಗೆ ಕಷ್ಟಸಾಧ್ಯವಾಗಿದೆ. ಸೀಲ್‍ಗಳನ್ನು ಹುಡುಕಿಕೊಂಡು ಬಹುದೂರ ಈಜಬೇಕಾಗಿದೆ ಮತ್ತು ಅಲೆಯಬೇಕಾಗಿದೆ. ಇದು ಅವುಗಳ ರೂಢಿಯಲ್ಲ. ಇದರಿಂದ ಹಿಮಕರಡಿ ಕ್ಯಾಲೊರಿಗಳನ್ನು ಅತಿಯಾಗಿ ವ್ಯಯ ಮಾಡಬೇಕಾಗಿದೆ. ಆದ್ದರಿಂದ ಬಹಳ ಸಣಕಲಾಗಿರಬಹುದು ಎಂದು ವಿಜ್ಞಾನಿಗಳ ಅಭಿಪ್ರಾಯ. ಸೀಲ್‍ಗಳು ಸಿಕ್ಕದೆ ಉಪವಾಸ ಬೀಳುತ್ತಿರಬಹುದು. ಹೀಗಾದಾಗ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಇದೆಲ್ಲಕ್ಕೂ ಕಾರಣ ಸಮುದ್ರದ ನೀರಿನ ತಾಪಮಾನ ಒಂದು ಡಿಗ್ರಿ ಸೆಂ. ಜಾಸ್ತಿಯಾಗಿರುವುದು.

ಹವಳದ ದಿಬ್ಬಗಳು

ಜಾಗತಿಕ ತಾಪಮಾನ ಹವಳದ ದಿಬ್ಬಗಳನ್ನೂ ಬಿಟ್ಟಿಲ್ಲ. ಸಮುದ್ರದ ನೀರೊಳಗಿದ್ದರೂ ಹವಳಗಳು ಹಾಳಾಗುತ್ತಿವೆ. ಭೂಮಿಯ ಮೇಲೆ ಮರಗಳು ಇರುವ ಹಾಗೆ ಸಮುದ್ರದಲ್ಲಿ
ಹವಳಗಳು ಇರುತ್ತವೆ. ಹವಳದ ದಿಬ್ಬಗಳ ಪರಿಸರ ಸೂಕ್ಷ್ಮವಾಗಿರುತ್ತದೆ. ಅನೇಕ ಜಾತಿಯ ಮೀನುಗಳು ಮತ್ತು ಇತರ ಸಮುದ್ರ ಜೀವಿಗಳಿಗೆ ವಾಸಸ್ಥಾನವಾಗಿರುತ್ತದೆ.
ಸಮುದ್ರದ ಮೇಲ್ಮೈ ನೀರು ಜಾಗತಿಕ ತಾಪಮಾನದಿಂದ ಹೆಚ್ಚು ಕಡಿಮೆ ಒಂದು ಡಿಗ್ರಿ ಸೆಂ. ಜಾಸ್ತಿಯಾಗಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿವೆ (ಬ್ಲೀಚಿಂಗ್). ಅನೇಕ ದಿನಗಳು ಸತತವಾಗಿ ಉಷ್ಣತೆ ಜಾಸ್ತಿಯಾದಾಗ ಹವಳಗಳು ತಮ್ಮಲ್ಲಿರುವ ಸಹಜೀವಿ ಪಾಚಿಯನ್ನು ಹೊರತಳ್ಳುತ್ತವೆ. ಹವಳಕ್ಕೆ ಬಣ್ಣಕೊಡುವ ಈ ಪಾಚಿಗಳ ಹೆಸರು ಜೂಜಾಂನ್ತೆಲ್ಲೆ. ಇವುಗಳು ಹವಳಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಹವಳ ಇವುಗಳನ್ನು ಹೊರತಳ್ಳಿದಾಗ ನಲುಗಿ ಸಾಯುವಂತಾಗುತ್ತದೆ. ಪರಿಣಾಮವೇ ಬಿಳಿಚಿಕೊಳ್ಳುವುದು. ಆಸ್ಟ್ರೇಲಿಯದ ಮಹಾ ಬ್ಯಾರಿಯರ್ ರೀಫ್ ಮತ್ತು ಹವಾಯ್ ದ್ವೀಪಗಳ ಹತ್ತಿರ ಈ ರೀತಿಯ ಬಿಳಿಚುವಿಕೆ ಕಂಡುಬಂದಿದೆ. ಇದರಿಂದ ಇಲ್ಲಿ ವಾಸಮಾಡುವ ಇತರ ಜೀವಿಗಳೂ ನಶಿಸುತ್ತವೆ. ಗ್ರೇಟ್ ಬ್ಯಾರಿಯರ್ ರೀಫ್‍ನಲ್ಲಿರುವ ಸುಮಾರು ಅರ್ಧದಷ್ಟು ಹವಳಗಳು 2016-17ರಲ್ಲಿ ಬಿಳಿಚುವಿಕೆಗೆ ಒಳಗಾದವು. ಜಾಗತಿಕ ತಾಪಮಾನದಿಂದ ಸಮುದ್ರದ ನೀರು
ಆಮ್ಲೀಕರಣಗೊಳ್ಳುತ್ತಿದೆ. ಹೇಗೆಂದರೆ ಗಾಳಿಯಲ್ಲಿರುವ ಹೆಚ್ಚಿನ ಇಂಗಾಲಾಮ್ಲ ಸಮುದ್ರದ ನೀರಿನಲ್ಲಿ ಸೇರುತ್ತಿದೆ. ಇದರಿಂದ ಹವಳದ ಬಿಳಿಚುವಿಕೆ ಆಗಬಹುದು. ಜೊತೆಗೆ ಮಾಲಿನ್ಯ, ಹೆಚ್ಚುವರಿ ಪೋಷಕಾಂಶಗಳು ಸಮುದ್ರದ ನೀರಿಗೆ ಸೇರುವಿಕೆ, ಜಾಸ್ತಿ ಅತಿ ನೇರಳೆ ಕಿರಣಗಳು ಕಾರಣವಾಗಬಹುದು. ಹವಳಗಳು ಅತಿ ಸೂಕ್ಷ್ಮ ಸ್ವಭಾವದವು. ಪರಿಸರದಲ್ಲಿ ಆಗುವ ಚಿಕ್ಕ ಬದಲಾವಣೆಗಳಿಗೂ ಹೊಂದಿಕೊಳ್ಳುವ ಸಾಮಥ್ರ್ಯ ಬಹಳ ಕಡಿಮೆ.

ಏನು ಮಾಡಬಹುದು?

ಜಾಗತಿಕ ತಾಪಮಾನ ಸುಮಾರು 2 ಡಿಗ್ರಿ ಸೆ. ನಷ್ಟು ಕಡಿಮೆಯಾಗಬೇಕು. ಪ್ಯಾರಿಸ್ ಒಪ್ಪಂದದ ಪ್ರಕಾರ 1.5 ಸೆಂ.ನಷ್ಟು ಕಡಿಮೆಯಾಗಬೇಕು. ಹೀಗಾದಲ್ಲಿ ಗಾಳಿಯಲ್ಲಿರುವ ಇಂಗಾಲದ (ಕಾರ್ಬನ್) ಸಂಗ್ರಹ ಕಡಿಮೆಯಾಗುತ್ತದೆ. ಇದರಿಂದ ತಾಪಮಾನ ಕಡಿಮೆಯಾಗುತ್ತದೆ. ಜಾಗತಿಕವಾಗಿ ಆಗುವ ಒಪ್ಪಂದಗಳಲ್ಲಿ ಪ್ಯಾರಿಸ್ ಒಪ್ಪಂದವನ್ನು ಅಳವಡಿಸಿಕೊಳ್ಳಬೇಕು. ಎಲ್.ನಿನೋ ಆಗುವ ಸಂದರ್ಭದಲ್ಲಿ ಪೆಸಿಫಿಕ್ ಸಾಗರವು ತನ್ನ ಮೇಲ್ಮೈ ನೀರನ್ನು ಬಿಸಿಗೊಳಿಸಿಕೊಳ್ಳುತ್ತದೆ. ಇದು ಹವಳಗಳ ಬಿಳಿಚುವಿಕೆಯನ್ನು ಉಂಟುಮಾಡುತ್ತದೆ. ಸಮುದ್ರದ ನೀರು ಬಿಸಿಯಾದಾಗ ಹವಳದ ಪಾಲಿಪ್‍ಗಳಲ್ಲಿರುವ ಜೂಜಾಂನ್ತೆಲ್ಲೆ ತಮ್ಮ ದ್ಯುತಿ ಸಂಶ್ಲೇಷಣೆಯನ್ನು ಅತಿಯಾಗಿ ಜಾಸ್ತಿ ಮಾಡುತ್ತವೆ. ಇದರಿಂದ ಬಹಳ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಈ ಆಮ್ಲಜನಕ ಪಾಲಿಪ್‍ಗೆ (ಹವಳದ ಭಾಗ) ಆಗುವುದಿಲ್ಲ. ತನ್ನನ್ನು ಉಳಿಸಿಕೊಳ್ಳಲು ಹವಳವು ಪಾಚಿಯನ್ನು ಹೊರದೂಡುತ್ತದೆ. ಇದರಿಂದ ಬಣ್ಣ ಕಳೆದುಕೊಳ್ಳುತ್ತದೆ. ಹಾಗೂ ಪೋಷಕಾಂಶಗಳ ಕೊರತೆ ಉಂಟಾಗತ್ತದೆ. ರೋಗಗಳಿಗೆ ತುತ್ತಾಗುತ್ತದೆ. ಸಮುದ್ರದ ಇತರ ಕಳೆಗಿಡಗಳು ಮತ್ತು ಪಾಚಿ ಬೆಳೆಯುತ್ತದೆ. ಪರಿಣಾಮವೇ ಹವಳಗಳ ನಿಧಾನ ಸಾವು. ಕಳೆದ ನಲವತ್ತು ವರ್ಷಗಳಲ್ಲಿ ಕ್ಯಾರಿಬಿಯನ್ ಸಮುದ್ರದಲ್ಲಿರುವ 80% ಹವಳಗಳು ನಾಶವಾಗಿವೆ (ಗಾರ್ಡನರ್ 2003). ಇಂಡೋನೇಶಿಯದಲ್ಲಿ 50% (ಬ್ರಾನೋ ಮತ್ತು ಸೆಲಿಗ್ 2007) ನಾಶವಾಗಿದೆ. ಪೆಸಿಫಿಕ್ ಸಾಗರದಲ್ಲಿ ಮತ್ತು ಗಾಲಪಾಗೋಸ್ ದ್ವೀಪಗಳಲ್ಲಿ 1982-83ರಲ್ಲಿ ಉಂಟಾದ ಎಲ್-ನಿನೋ 95% ಮಿಕ್ಕಿ ಹವಳಗಳನ್ನು ಬಿಳಿಚುವಿಕೆಯಿಂದ ನಾಶ ಮಾಡಿತು. (ಗ್ಲಿನ್ 1990) ಜಾಗತಿಕವಾಗಿ ಶೇಕಡ ಒಂದರಷ್ಟು ಹವಳಗಳು ಪ್ರತಿವರ್ಷ ನಾಶವಾಗುತ್ತಿವೆ. ಇದಕ್ಕೆ ಬಿಳಿಚುವಿಕೆ ಜೊತೆಗೆ ಮಾಲಿನ್ಯ ಮತ್ತು ಇತರ ಚಟುವಟಿಕೆಗಳೂ ಕಾರಣ.

ಹವಳದ ದಿಬ್ಬಗಳ ಪ್ರಾಮುಖ್ಯತೆ

ಹವಳ ಅನೇಕ ಸಮುದ್ರ ಜೀವಿಗಳ ಆಹಾರವಾಗಿದೆ. ಅಸಂಖ್ಯ ಸಮುದ್ರ ಜೀವಿಗಳಿಗೆ ಆಶ್ರಯತಾಣವಾಗಿದೆ. ಇದಲ್ಲದೆ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ. ಇವುಗಳಲ್ಲಿರುವ ಜೂಜಾಂನ್ತೆಲ್ಲೆ ಪಾಚಿಗಳು ದ್ಯುತಿಸಂಶ್ಲೇಷಣೆಯಿಂದ ಸಮುದ್ರದ ಆಹಾರ ಸರಪಳಿಗೆ ಆಹಾರ ಸರಬರಾಜು ಮಾಡುತ್ತವೆ. ಮರುಬಳಕೆಯೂ ಆಗುತ್ತದೆ. ಹವಳದ ದಿಬ್ಬಗಳು ಸಮುದ್ರ ಜೀವಿಗಳಲ್ಲದೆ ಮಾನವನಿಗೂ ಬೇಕಾದವು. ಅನೇಕ ದೇಶಗಳಲ್ಲಿ ಇವುಗಳು ವಾಣಿಜ್ಯದೃಷ್ಟಿಯಿಂದ ಮುಖ್ಯವಾಗಿವೆ. ಸುಮಾರು 500 ಮಿಲಿಯಜನರಿಗೆ ಹವಳದಿಂದ ಉದ್ಯೋಗ ದೊರಕುತ್ತಿದೆ. ಇದು 2100 ರ ಹೊತ್ತಿಗೆ 500 ಬಿಲಿಯನ್ ಡಾಲರ್‍ಗಳ ನಷ್ಟ ಉಂಟುಮಾಡಬಹುದು. ಹವಳದ ದಿಬ್ಬಗಳು ಸಮುದ್ರದ ಪರಿಸರವ್ಯೂಹ ಹೇಗೆ ಇದೆಎನ್ನುವುದನ್ನೂ ತಿಳಿಸಿಕೊಡುತ್ತದೆ. ಮೊನಾರ್ಕ್‍ಚಿಟ್ಟೆ ಮೊನಾರ್ಕ್ ಚಿಟ್ಟೆಗಳ ಮೇಲೆ ಜಾಗತಿಕತಾಪಮಾನದ ಪರಿಣಾಮ ಡಬ್ಲ್ಯುಡಬ್ಲ್ಯುಎಫ್ ನಡೆಸಿದ ಸಮೀಕ್ಷೆ ಕೆಳಕಂಡಂತಿದೆ.

ಮೊನಾರ್ಕ್‍ಚಿಟ್ಟೆ

ಮೊನಾರ್ಕ್ ಚಿಟ್ಟೆಗಳು ಪ್ರಪಂಚದ ಎಲ್ಲ ಭಾಗಗಳಲ್ಲಿ ಕಾಣಬರುತ್ತವೆ. ಕಿತ್ತಳೆ ಮತ್ತು ಕಪ್ಪು ಬಣ್ಣದ ರೆಕ್ಕೆಗಳ ಸುಂದರ ಚಿಟ್ಟೆ. ಇದು ಡನಾಸ್ ಪ್ಲೆಕ್ಸಿಪಸ್ (ಆಚಿಟಿಚಿus ಠಿಟexiಠಿus) ಎನ್ನುವ ಪ್ರಭೇದಕ್ಕೆ ಸೇರಿದೆ. ಇದರ ಸಾಮಾನ್ಯ ಹೆಸರು ಹಾಲು ಒಸರುವ ಕಳೆಯ ಚಿಟ್ಟೆ. ಮೊನಾರ್ಕ್‍ಚಿಟ್ಟೆಯ ವಲಸೆ ಹೋಗುವಿಕೆ ಬಹಳ ಪ್ರಸಿದ್ಧ. ಉತ್ತರ ಅಮೇರಿಕಾದಿಂದ ಮೆಕ್ಸಿಕೋಗೆ ಇವುಗಳ ವಲಸೆ ಅದ್ಭುತವಾದದ್ದು. ಸಾವಿರಗಟ್ಟಲೆ ಚಿಟ್ಟೆಗಳು ಪ್ರಯಾಣ ಬೆಳೆಸುತ್ತವೆ. ಜಾಗತಿಕ ತಾಪಮಾನದಿಂದ ಆಗಿರುವ ಹವಾಮಾನ ಬದಲಾವಣೆ ಇವುಗಳನ್ನೂ ಬಿಟ್ಟಿಲ್ಲ. ಇತರ ಚಿಟ್ಟೆಗಳಂತೆಯೇ ಮೊನಾರ್ಕ್ ಚಿಟ್ಟೆ ಕೂಡ ಹವಾಮಾನದ ವಿಷಯದಲ್ಲಿ ಬಹಳ ಸೂಕ್ಷ್ಮ. ಹೊರಗಿನ ಉಷ್ಣತೆಯೇ ಇವುಗಳ ಸಂತಾನಾಭಿವೃದ್ಧಿ, ವಲಸೆ ಮತ್ತು ಶಿಶಿರ ನಿದ್ರೆಗೆ ಕಾರಣ. ಉಷ್ಣತೆಯಲ್ಲಿನ ಏರುಪೇರು ಇವೆಲ್ಲದರ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಇವುಗಳ ಆಹಾರಕಿತ್ತರೆ ಹಾಲು ಒಸರುವ ಗಿಡಗಳ ಎಲೆಗಳು. ಇಂತಹ ಗಿಡಗಳು
ಕಡಿಮೆಯಾದರೂ ಕಷ್ಟ. ಇದಲ್ಲದೆ ಚಳಿಗಾಲದಲ್ಲಿ ಮೊನಾರ್ಕ್ ಆಶ್ರಯ ಪಡೆಯುವ ತಂಗುದಾಣಗಳೂ ಕಡಿಮೆಯಾಗುತ್ತಿವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮೊನಾರ್ಕ್‍ಚಿಟ್ಟೆಯ ಸಂತತಿ ಸುಮಾರು 95% ಕಡಿಮೆಯಾಗಿದೆ. ಪ್ರತಿವರ್ಷ ಹೊಸ ಪೀಳಿಗೆಯ ಚಿಟ್ಟೆಗಳು ತಮ್ಮ ವಂಶಜರು ತುಳಿದ ಹಾದಿಯನ್ನೇ ಹಿಡಿದು ಹೋಗುತ್ತವೆ. ಇವುಗಳ ಪ್ರಯಾಣವನ್ನು ನಿರ್ಧರಿಸುವುದು ತಾಪಮಾನ ಅಥವಾ ಉಷ್ಣತೆ. ಕೆಲವು ವರ್ಷಗಳಿಂದ ಕೆನಡಾದಿಂದ ದಕ್ಷಿಣಕ್ಕೆ ಹೋಗುವ ಮೊನಾರ್ಕ್ ಚಿಟ್ಟೆಯ ವಲಸೆಯು ಆರು ವಾರಗಳ ಕಾಲ ಮುಂದಕ್ಕೆ ಹೋಗುತ್ತಿದೆ. ಏಕೆಂದರೆ ಉಷ್ಣತೆ ಜಾಸ್ತಿಯಾಗಿಯೇ ಇರುತ್ತದೆ. ಇದು ಚಿಟ್ಟೆಗಳಿಗೆ ದಕ್ಷಿಣಕ್ಕೆ ವಲಸೆ ಹೊರಡುವ ಹುಟ್ಟುಗುಣ ಅಥವಾ ಸಹಜ ಪ್ರವೃತ್ತಿಯ ಪ್ರೇರಣೆ ನೀಡುವುದಿಲ್ಲ. ಉಷ್ಣತೆ ಕಡಿಮೆಯಾದಾಗ ಇವು ವಲಸೆ ಹೊರಡುತ್ತವೆ. ಆದರೆ ಮಧ್ಯದಲ್ಲಿ ಅತಿಯಾದ ಚಳಿ ಇರುತ್ತದೆ. ಇದರಿಂದ ಅನೇಕ ಚಿಟ್ಟೆಗಳು ಸಾವನ್ನಪ್ಪುತ್ತವೆ. ಅಕಾಲದ ಅತಿವೃಷ್ಟಿ
ಮತ್ತು ಕಡುಚಳಿಯಿಂದ 2002ರಲ್ಲಿ ಶೇಕಡ 80ರಷ್ಟು ಚಿಟ್ಟೆಗಳು ನಾಶವಾದವು. ಆಗ ಇವು ಚಳಿಗಾಲದ ಆಶ್ರಯ ತಾಣಗಳಲ್ಲಿದ್ದುವು. ಮೊನಾರ್ಕ್ ಚಿಟ್ಟೆಯ ಕಂಬಳಿಹುಳುವಿಗೆ ಬಿಸಿಯಾದ ಮತ್ತು ಒಣಹವೆ ಮಾರಕ. ಇದರಿಂದ ಅವು ಸಾಯುತ್ತವೆ. ಇದೆಲ್ಲಾ ವಿಷಯಗಳಿಂದ ಮೊನಾರ್ಕ್ ಚಿಟ್ಟೆಯ ಸಂತತಿ ಬಹಳವಾಗಿ ಕ್ಷೀಣಿಸಿದೆ. ಜೊತೆಗೆ ಹಾಲು ಒಸರುವ ಕಳೆಗಳೂ ಹವಾಮಾನ ವೈಪರೀತ್ಯದಿಂದ ಕಡಿಮೆಯಾಗಿವೆ. ಇದರಿಂದ ಚಿಟ್ಟೆಗಳಿಗೆ ಆಹಾರ ಸರಿಯಾಗಿ ದೊರಕುತ್ತಿಲ್ಲ. ಪರಿಣಾಮ ಚಿಟ್ಟೆಗಳ ಸಂತತಿಯ ಮೇಲಾಗುತ್ತದೆ. ಜೊತೆಗೆ ಕೀಟನಾಶಕಗಳು, ವ್ಯವಸಾಯ ಕೂಡ ಮೊನಾರ್ಕ್ ಚಿಟ್ಟೆಯನ್ನು ವಿನಾಶಕ್ಕೆ ದೂಡುತ್ತಿವೆ. ಮೇಲೆ ವಿವರಿಸಿರುವ ಹಿಮಕರಡಿ, ಹವಳದ ದಿಬ್ಬಗಳು ಮತ್ತು ಮೊನಾರ್ಕ್ ಚಿಟ್ಟೆ (ಕೀಟ) ಕೇವಲ ಮೂರು ಉದಾಹರಣೆಗಳಷ್ಟೇ. ಹಿಮಕರಡಿ ಉತ್ತರಧ್ರುವದಲ್ಲಿರುವ ಪ್ರಾಣಿ. ಹವಳಗಳು ಸಮುದ್ರ ಜೀವಿಗಳು. ಚಿಟ್ಟೆ ಭೂಮಿಯ ಮೇಲೆ ವಾಸಮಾಡುತ್ತದೆ.

ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದು ಹೇಗೆ?


ಧ್ರುವ ಪ್ರದೇಶಗಳಿಂದ ಹಿಡಿದು ಸಮುದ್ರ ಮತ್ತು ಭೂಮಿ ಅಂದರೆ ಎಲ್ಲಾ ರೀತಿಯ ಪರಿಸರಗಳನ್ನೂ ತನ್ನ ದುಷ್ಪರಿಣಾಮ ಗಳಿಂದ ಜಾಗತಿಕ ತಾಪಮಾನ ಹಾಳುಗೆಡವುತ್ತಿದೆ. ಜಾಗತಿಕ ತಾಪಮಾನ ಯಾವ ಗಿಡ, ಮರ, ಪಕ್ಷಿ ಮತ್ತು ಪ್ರಾಣಿಯನ್ನೂ ಬಿಟ್ಟಿಲ್ಲ. ಮಾನವ ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅವನ ವಿನಾಶವು ಖಂಡಿತ. ಪಳೆಯುಳಿಕೆ ಎಣ್ಣೆಗಳ ಉಪಯೋಗ (ಪೆಟ್ರೋಲ್, ಡೀಸೆಲ್) ಕಡಿಮೆಯಾಗ ಬೇಕು. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಹಸಿರು ಮನೆ ಅನಿಲಗಳಾದ ಇಂಗಾಲಾಮ್ಲ, ಮೀಥೇನ್ ಮತ್ತು ಹೈಡ್ರೋಕಾರ್ಬನ್ ಗಳು ಕಡಿಮೆಯಾಗುತ್ತವೆ. ಹಸಿರೀಕರಣಕ್ಕೆ ಒತ್ತುಕೊಡಬೇಕು. ಕಾಡುಗಳ ನಾಶ ನಿಲ್ಲಬೇಕು. ಇವುಗಳಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.

References:

  1. Stephen Leahy Feb 1, 2018 National GeographicIVCN reports – 2015
  2. Skeptical Science.com
  3. WWF- World wildlife.org
  4. EDF (EnviromentalDefense Fund) – David Wolfe May 26, 2016.
  5. Internet
ಸಂಪಾದಕೀಯ- ಸ್ತ್ರೀ ಮತ್ತು ಡಯಾಬಿಟಿಸ್ 2

ಸಂಪಾದಕೀಯ- ಸ್ತ್ರೀ ಮತ್ತು ಡಯಾಬಿಟಿಸ್ 2

ಇಂದು ಜಗತ್ತಿನಲ್ಲಿ 199 ಮಿಲಿಯನ್ ಸ್ತ್ರೀಯರು ಡಯಾಬಿಟಿಸ್ (ಸಕ್ಕರೆ ಖಾಯಿಲೆ) ದಿಂದ ಬಳಲುತ್ತಿದ್ದಾರೆ. ಆ ಸಂಖ್ಯೆ 2040ರ ವೇಳೆಗೆ 313 ಮಿಲಿಯನ್ ಆಗುತ್ತದೆಂದು ಲೆಕ್ಕಹಾಕಲಾಗಿದೆ. ಲಿಂಗ ಮತ್ತು ಶಕ್ತಿಯ ಕಾರ್ಯವೈಖರಿಯು ವ್ಯಕ್ತಿಗಳನ್ನು ಸಕ್ಕರೆ ರೋಗಕ್ಕೆ ಈಡಾಗುವಂತೆ ಮಾಡುತ್ತದೆ. ಅವರ ಪ್ರಭಾವ ಸ್ತ್ರೀಯರಲ್ಲಿ ವಿಶೇಷವಾಗಿ ತೋರಿಬರುತ್ತದೆ.
ಜಗತ್ತಿನ ಸ್ತ್ರೀಯರ ಸಾವಿನ ಒಂಭತ್ತನೇ ಮುಖ್ಯ ಕಾರಣ ಡಯಬಿಟಿಸ್ ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರುಷ 2.1 ಮಿಲಿಯನ್ ಸ್ತ್ರೀಯರು ಅದರಿಂದ ಸಾವನ್ನಪ್ಪುತ್ತಿದ್ದಾರೆ. ಅವರಲ್ಲಿ ಅನೇಕರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಅಡೆತಡೆಗಳನ್ನು ಎದುರಿಸುತ್ತಾರೆ. ಈ ರೋಗವನ್ನು ಬೇಗ ಗುರುತಿಸಿ ಚಿಕಿತ್ಸೆ, ಆರೈಕೆಯನ್ನು ಪಡೆಯುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸ್ತ್ರೀಯರು ವಿಫಲರಾಗುತ್ತಾರೆ. ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ವಿಶೇಷವಾಗಿ ಸದೃಢವಲ್ಲದ ಆಹಾರ, ವ್ಯಾಯಾಮವಿಲ್ಲದ ದೈನಂದಿನ ಜೀವನ, ರೋಗಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಸಕ್ಕರೆ ಕಾಯಿಲೆ ಲಕ್ಷಣಗಳನ್ನು ತೋರ್ಪಡಿಸುವ ಐವರು ಸ್ತ್ರೀಯರಲ್ಲಿ ಇಬ್ಬರು ಪ್ರಜನನ ಸಾಮಥ್ರ್ಯದ ವಯೋಮಾನ ದವರಾಗಿರುತ್ತಾರೆ. ಸಕ್ಕರೆ ಖಾಯಿಲೆ ಹೊಂದಿದ ಸ್ತ್ರೀಗೆ ಗರ್ಭತಳೆಯುವಲ್ಲಿ ತೊಂದರೆಯಾಗುತ್ತದೆ. ಅಲ್ಲದೆ ಗರ್ಭ ಮುಂದುವರಿಕೆ ತೊಂದರೆದಾಯಕವಾಗುವುದು. ಗರ್ಭತಳೆಯುವ ಮೊದಲು ಯೋಗ್ಯ ರೀತಿಯ ಪರಿಹಾರ ವಿಧಾನಗಳನ್ನು ಅನುಸರಿಸದಿದ್ದಲ್ಲಿ ಅದು ತಾಯಿ ಮಗುವಿನ ನರಳಿಕೆಗೆ, ಸಾವಿಗೆ ಕಾರಣವಾಗುವುದು. ಏಳು ಹೆರಿಗೆಗಳಲ್ಲಿ ಒಬ್ಬರಾದರೂ ಗರ್ಭವತಿಯ ಸಕ್ಕರೆ ಕಾಯಿಲೆಯನ್ನು ಹೊಂದಿರುತ್ತಾರೆ. ಅದು ತಾಯಿ-ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗರ್ಭಸ್ಥ ಸ್ತ್ರೀ ಗರ್ಭಬೆಳವಣಿಗೆಗೆ ಸಂಬಂಧಿಸಿದ ಅಡ್ಡ ತೊಡಕುಗಳಾದ ಏರಿದ ರಕ್ತಒತ್ತಡ, ಹೆಚ್ಚು ತೂಕದ ಮಕ್ಕಳಿಗೆ ಜನ್ಮ, ಹೆರಿಗೆಯಲ್ಲಿ ಅಡ್ಡಿಯನ್ನು ಹೊಂದಿ ತೊಂದರೆಗೊಳಗಾಗಬಹುದು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರು ಆನಂತರ ಡಯಾಬಿಟಿಸ್ ಹೊಂದಿ ಅದರ ಅಡ್ಡ ತೊಡಕುಗಳಿಗೆ ಮತ್ತು ಖರ್ಚು ವೆಚ್ಚಕ್ಕೆ ಈಡಾಗಬಹುದು. ಸಕ್ಕರೆ ಖಾಯಿಲೆ ಹೊಂದಿದ ಸ್ತ್ರೀಯರು ತಮ್ಮ ಒಳ್ಳೆಯ ಆರೋಗ್ಯಕ್ಕೆ ಎರವಾಗುವರು ಮತ್ತು ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿಯೇ ಬದಲುಗೊಂಡಿರುತ್ತದೆ. ಅದರಿಂದ ಅವರು ಸಕಾರಾತ್ಮಕ ಸುಸ್ಥಿತಿಯನ್ನು ದೊರಕಿಸಿಕೊಳ್ಳುವಲ್ಲಿ ಕಷ್ಟಪಡಬೇಕಾಗುತ್ತದೆ.
ವಿಶ್ವ ಡಯಾಬಿಟಿಸ್ (ನವೆಂಬರ್ 14) ದಿನ ವಿಶ್ವ ಡಯಾಬಿಟಿಸ್ ಫೆಡರೇಷನ್’ ಸ್ತ್ರೀ ಮತ್ತು ಡಂiÀiಬಿಟಿಸ್: ಆರೋಗ್ಯಕರ ಭವಿಷ್ಯತ್ತು ನಮ್ಮ ಹಕ್ಕು’ ಎಂಬ ಘೋಷಣೆಯನ್ನು ಹೊರಡಿಸಿ ಎಲ್ಲರ ಗಮನವನ್ನು ಈ ಕಾಯಿಲೆಯತ್ತ ಸೆಳೆಯಿತು. ಡಯಬಿಟಿಸ್ ನಿಡುಗಾಲದ ರೋಗವಾಗಿದ್ದು ಮೇದೋ ಜೀರಕದಲ್ಲಿನ ಲ್ಯಾಂಗರ್‍ಹಾನ್ಸ್ ದೀವುಗಳು ಇನ್ಸುಲಿನ್ ರಸದೂತ ಸ್ರವಿಕೆಯನ್ನು ಮಾಡುವಲ್ಲಿ ಇಲ್ಲವೆ ತಯಾರಾದ ಇನ್ಸುಲಿನ್ ಬಳಕೆಯನ್ನು ದೇಹ ಮಾಡುವಲ್ಲಿ ವಿಫಲವಾದಾಗ ಡಯಬಿಟಿಸ್ ಬೆಳವಣಿಗೆ ಹೊಂದುತ್ತದೆ. ಇನ್ಸುಲಿನ್ ರಸದೂತವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ನಮ್ಮ ಸಮಸ್ತ ಕಾರ್ಯಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಸಕ್ಕರೆ ಜೀವಕೋಶಗಳೊಳ ಸೇರಿ ದಹನಗೊಂಡು ಶಕ್ತಿಯನ್ನು ಬಿಡುಗಡೆ ಮಾಡದಿದ್ದರೆ ಸಕ್ಕರೆ ರಕ್ತದಲ್ಲಿ ದಟ್ಟಯಿಸಿ ದೇಹಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತದೆ.
ಡಯಬಿಟಿಸ್‍ನಲ್ಲಿ ಎರಡು ಮುಖ್ಯವಾದ ವಿಧಗಳಿವೆ. ಮೊದಲ ವಿಧದ ಡಯಬಿಟಿಸ್ ಹೊಂದಿದ ವ್ಯಕ್ತಿಗಳಲ್ಲಿ ಇನ್ಸುಲಿನ್ ಸಿದ್ಧವಾಗುವುದಿಲ್ಲ. ಅವರು ಬದುಕಿ ಉಳಿಯಬೇಕಾದರೆ ಅವರಿಗೆ ಪ್ರತಿನಿತ್ಯ ಇನ್ಸುಲಿನ್ ಚುಚ್ಚುಗೆ ಅತ್ಯಗತ್ಯ. ಅದು ದೇಹದಲ್ಲಿ ಸಕ್ಕರೆಯನ್ನು ದಹಿಸಿ ಶಕ್ತಿ ಬಿಡುಗಡೆಗೆ ಎಡೆಮಾಡಿಕೊಡುತ್ತದೆ. ಎರಡನೇ ವಿಧದ ಡಯಬಿಟಿಸ್‍ನಲ್ಲಿ ಇನ್ಸುಲಿನ್ ಸ್ರವಿಕೆಯಾಗು ತ್ತಿದ್ದರೂ ಅದು ದೇಹದ ಬೇಡಿಕೆಗೆ ಅನುಗುಣವಾದ ಪ್ರಮಾಣ ದಲ್ಲಿರುವುದಿಲ್ಲ. ಮತ್ತು ದೇಹ ಅದನ್ನು ಬಳಕೆ ಮಾಡಿಕೊಳ್ಳಲು ಸಮರ್ಥವಾಗಿರುವುದಿಲ್ಲ. ಈ ಬಗೆಯ ತೊಂದರೆ ಹೊಂದಿದ ಅನೇಕ ವ್ಯಕ್ತಿಗಳು ಸ್ಥೂಲ ದೇಹಿಗಳು, ಅವರು ದೇಹಕ್ಕೆ ವ್ಯಾಯಾಮ ಕೊಡದೇ ಒಂದೆಡೆ ಸ್ಥಾಯಿಯಾಗಿ ಕುಳಿತು ಕಾಲಕಳೆಯು ವಂತಹವರು. ಅವೆರಡೂ ಸನ್ನಿವೇಶಗಳು ವ್ಯಕ್ತಿಯ ಇನ್ಸುಲಿನ್ ಆವಶ್ಯಕತೆಯನ್ನು ಹೆಚ್ಚಿಸುತ್ತವೆ. ಈ ಬಗೆಯ ಡಯಬಿಟಿಸ್ ತೊಂದರೆಯನ್ನು ಶೇಕಡಾ 90 ರಷ್ಟು ವ್ಯಕ್ತಿಗಳು ಹೊಂದಿರುತ್ತಾರೆ. ಕಾಲ ಗತಿಸಿದಂತೆ ಸಕ್ಕರೆಯ ಮಟ್ಟದಲ್ಲಿ ದೇಹದ ಪ್ರಮುಖ ಅಂಗಭಾಗಗಳು- ವ್ಯವಸ್ಥೆಗಳು ಸಮರ್ಪಕ ರೀತಿಯಲ್ಲಿ ಕಾರ್ಯ ಮಾಡುವಲ್ಲಿ ವಿಫಲವಾಗುತ್ತವೆ. ಅದರ ಫಲವಾಗಿ ಹೃದಯಾಘಾತ,
ಲಕ್ವ, ನರದೌರ್ಬಲ್ಯ, ಮೂತ್ರಪಿಂಡದ ಸೋಲುವಿಕೆ, ಅಂಧತ್ವ, ಷಂಡತನ, ಮತ್ತು ಕಾಲು ಕತ್ತರಿಸುವಂತಹ ಸೋಂಕು ರೋಗಗಳು ತಲೆದೋರುತ್ತವೆ.
ಸಕ್ಕರೆ ಕಾಯಿಲೆಯ ಬೆಳವಣಿಗೆಯನ್ನು ಉತ್ತಮ ಜೀವನಶೈಲಿಯ ಸರಳ ಸೂತ್ರಗಳನ್ನು ಅನುಸರಿಸಿದಲ್ಲಿ-ಅದೂ ಎರಡನೇ ಬಗೆಯ ಡಯಬಿಟಿಸ್ ಬೆಳವಣಿಗೆಯನ್ನು –
ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಇಲ್ಲವೆ ಅದರ ಪ್ರಕಟಣೆಯನ್ನು ನಿಧಾನಗೊಳಿಸಬಹುದು. ಸಮರ್ಪಕ ದೇಹತೂಕವನ್ನು ಕಾಯ್ದಿರಿಸುವುದು. ನಿಯಮಿತವಾಗಿ ದೈಹಿಕ
ವ್ಯಾಯಾಮವನ್ನು ಕೈಕೊಳ್ಳುವುದು ಮತ್ತು ಆರೋಗ್ಯಕರವಾದ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಡಯಬಿಟಿಸ್ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಡಯಬಿಟಿಸ್ ಕಾಯಿಲೆಗೆ ಚಿಕಿತ್ಸೆ ಮಾಡಬಹುದು. ಅದನ್ನು ನಿಯಂತ್ರಿಸಿ ತೊಡಕುಗಳು ಬೆಳವಣಿಗೆಯಾಗುವುದನ್ನು ದೂರ ಮಾಡಬಹುದು. ರೋಗ ನಿದಾನ (ಡಯಗ್ನೊಸಿಸ್)
ಮಾಡಿಕೊಳ್ಳುವ ಅವಕಾಶಗಳು, ಸ್ವಯಂರೋಗವನ್ನು ಹತೋಟಿಯಲ್ಲಿಟ್ಟು ಕೊಳ್ಳುವ ಶಿಕ್ಷಣ ಮತ್ತು ವ್ಯಕ್ತಿಗಳ ಆರ್ಥಿಕ ಮಟ್ಟಕ್ಕೆ ಸಿಲುಕುವ ಚಿಕಿತ್ಸೆ, ಉತ್ತಮ ಫಲ ದೊರಕಿಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನಾಡುತ್ತವೆ. ಗರ್ಭಾವಸ್ಥೆಯ ಸಕ್ಕರೆ ಕಾಯಿಲೆ ಎಂದರೆ ಸ್ತ್ರೀಯರಲ್ಲಿ ಗರ್ಭತಳೆದ ನಂತರ ಮೊದಲ ಬಾರಿ ಗ್ಲುಕೋಸ್
ತಾಳಿಕೆಯಿಲ್ಲವಾಗಿರುವ ಸನ್ನಿವೇಶ. ಈ ಬಗೆಯ ಡಯಬಿಟಿಸ್‍ನಲ್ಲಿ ತಾಯಿ ಮತ್ತು ಮಗು ಇಬ್ಬರೂ ಗರ್ಭ ತಳೆದ ಕಾಲದಲ್ಲಿ, ನಂತರ ಹೆರಿಗೆಯ ಕಾಲದಲ್ಲಿ ಅನೇಕ ಬಗೆಯ ತೊಡಕುಗಳನ್ನು ಹೊಂದುತ್ತಾರೆ. ಅದರಿಂದಾಗಿ ಸಹಜ ಹೆರಿಗೆಯಾಗದೇ ಸಿಸೇರಿಯನ್ ಕೊಯ್ತಕ್ಕೆ ಒಳಪಡಬೇಕಾಗುವುದು. ಕೂಸಿನ ಅಂಗಭಾಗಗಳು ಹೆಬ್ಬೆಳವಣಿಗೆಯನ್ನು ತೋರಿಸುತ್ತವೆ. ಭುಜ ಬಲಹೀನವಾಗುವುದು, ನವಜಾತ ಶಿಶುವಿನ ಗ್ಲುಕೋಸ್ ಮಟ್ಟ ಇಳಿಯುವುದು. ಪಿತ್ತವರ್ಣ (ಬಿಲಿರುಬಿನ್) ಪ್ರಮಾಣ ಏರಿಕೆಯನ್ನು ತೋರಿಸುವುದು. ಅದರಿಂದಾಗಿ ಗರ್ಭಾವಸ್ಥೆಯಲ್ಲಿ ಡಯಬಿಟಿಸ್ ಬೆಳವಣಿಗೆ ಹೊಂದಿರುವುದರ ಬಗ್ಗೆ ನಿಗಾ ಇರಿಸಬೇಕು. ಮತ್ತು ಅದನ್ನು ಚಿಕಿತ್ಸೆಗೊಳಪಡಿಸಬೇಕು.
ಭಾರತದಲ್ಲಿ ಗರ್ಭತಳೆದ ಸ್ತ್ರೀಯರಲ್ಲಿ ಮೊದಲ ಮೂರು ತಿಂಗಳಲ್ಲಿ ಅವರ ರಕ್ತದಲ್ಲಿ ಗ್ಲುಕೋಸ್ ಮಟ್ಟ ತಿಳಿಯುವುದಕ್ಕೆ ಮಹತ್ವವನ್ನುಕೊಡಲಾಗಿದೆ. ಅನೇಕ ಸ್ತ್ರೀಯರು ಬೊಜ್ಜು
ಸೇರ್ಪಡೆಯಿಂದ ಸ್ಥೂಲ ದೇಹ ಹೊಂದಿರುವುದು, ದೈಹಿಕ ಶ್ರಮವಿಲ್ಲದೆ ಒಂದೆಡೆ ಕುಳಿತು ಕಾಲಕಳೆಯುವ ಜೀವನ ವಿಧಾನ, ಆಹಾರ ಸೇವನೆಯ ತಪ್ಪು ವಿಧಾನಗಳು, ಹೆಚ್ಚು ವಯಸ್ಸಾದ ಮೇಲೆ ಗರ್ಭಧಾರಣೆಯ ಪ್ರವೃತ್ತಿ, ಅಲ್ಲದೆ ಅನೇಕ ಗರ್ಭಿಣಿಯರಲ್ಲಿ ಗುರುತಿಸಲ್ಪಡದೇ ಉಳಿದ ಡಯಬಿಟಿಸ್ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಅದರಿಂದಾಗಿ ಎಲ್ಲ ಗರ್ಭಿಣಿಯರಲ್ಲಿ ಈ ಮೊದಲೇ ಇರಬಹುದಾದ ಸಕ್ಕರೆ ಕಾಯಿಲೆಯನ್ನು ಪರೀಕ್ಷೆಗೊಳಪಡಿಸಿ ತಿಳಿದುಕೊಳ್ಳುವುದಕ್ಕೆ ಮಹತ್ವವನ್ನು ಕೊಡಲಾಗಿದೆ. ಹಾಗೆಯೇ ಗ್ಲುಕೋಸ್ ತಾಳಿಕೆಯ ವ್ಯತ್ಯಯವನ್ನು ಹೊಂದಿರುವ ಡಯಬಿಟಿಸ್ ಪೂರ್ವರೂಪವನ್ನು ಕೂಡಾ ಈ ರೀತಿಯ ಪರೀಕ್ಷೆಯಿಂದ ಅನಾವರಣಗೊಳಿಸಬಹುದು. ಹಾಗೆ ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ ಇರವನ್ನು ತಿಳಿದರೆ ಅವರನ್ನು ಯೋಗ್ಯ ಚಿಕಿತ್ಸೆಗೆ ಒಳಪಡಿಸಬಹುದು. ಅದರಿಂದ ಗರ್ಭ ಬೆಳವಣಿಗೆಯ ಪ್ರಾರಂಭದಲ್ಲಿ ಉಂಟಾಗುವ ಹಲಿವಿಳಿಕೆಯನ್ನು ತಪ್ಪಿಸಬಹುದು. ಮತ್ತು
ಬರಬಹುದಾದ ತೊಡಕುಗಳನ್ನು ಬಾರದಂತೆ ಮಾಡುವ ಕ್ರಮ ಕೈಕೊಳ್ಳಬಹುದು.
ಸಾಮಾನ್ಯವಾಗಿ ಗರ್ಭಧಾರಣೆಯ ಕಾಲದಲ್ಲಿ ತಾಯಿಯ ಊತಕಗಳು ನಿಧಾನವಾಗಿ ಇನ್ಸುಲಿನ್ ಪ್ರಭಾವಕ್ಕೆ ಪ್ರತಿಕ್ರಿಯೆ ತೋರಿಸುವಲ್ಲಿ ಸೋತು ಹೋಗುತ್ತವೆ. ಈ ಸನ್ನಿವೇಶ ಬೊಜ್ಜು ಶರೀರ ಮತ್ತು ಮಾಸು (ಪ್ಲಾಸೆಂಟ) ಸ್ರವಿಸುವ ರಸದೂತ (ಹಾರ್ಮೋನ್) ಗಳು ಬೀರುವ ಪ್ರಭಾವದಿಂದ ಮತ್ತಷ್ಟು ಬಿಗಡಾಯಿಸುತ್ತದೆ. ಸ್ತ್ರೀಯರಲ್ಲಿ ಗರ್ಭಿಣಿ ಡಯಬಿಟಿಸ್ ಬೆಳವಣಿಗೆಗೆ ಒತ್ತುಕೊಡುವ ಅಂಶಗಳು ಹೀಗಿವೆ. ಅವುಗಳೆಂದರೆ: ಸಕ್ಕರೆ ಕಾಯಿಲೆ ಬೆಳವಣಿಗೆ ಹೊಂದುವ ಸಾಧ್ಯತೆ ಹೆಚ್ಚಿರುವ ಜನಪದ, ಹಿಂದಿನ ಗರ್ಭಧಾರಣೆ ಕಾಲದಲ್ಲಿ ಸಕ್ಕರೆ ಕಾಯಿಲೆ ತೋರಿ ಬಂದಿರುವುದು. ಹಿಂದೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿರುವ ಇತಿಹಾಸ, ಏರುತ್ತಿರುವ ವಯೋಮಾನದಲ್ಲಿ ಗರ್ಭಿಣಿಯಾಗಿರುವುದು, ಡಯಬಿಟಿಸ್ ಕೌಟುಂಬಿಕ ಇತಿಹಾಸ, ಹಿಂದಿನ ಹೆರಿಗೆಯಲ್ಲಿ ಹೆಚ್ಚು ತೂಕದ ಕೂಸಿಗೆ ಜನ್ಮ ನೀಡಿರುವುದು, ಅನೇಕ ಬುಡ್ಡೆಗಳ ಅಂಡಾಶಯದ ಸ್ಥಿತಿ, ರಕ್ತಏರೊತ್ತಡ, ರಕ್ತದಲ್ಲಿ ಗ್ಲುಕೋಸ್ ಮಟ್ಟಏರಿಸುವ ಔಷಧ ಸೇವನೆ.
ಗರ್ಭಸ್ಥ ಸ್ತ್ರೀಯರಲ್ಲಿ ಡಯಬಿಟಿಸ್ ಇರುವಿಕೆಯಿಂದ ಆಕೆಯ ಮೇಲೂ ಮತ್ತು ಆಕೆ ಜನ್ಮ ನೀಡುವ ಕೂಸಿನಲ್ಲೂ ಅಡ್ಡ ತೊಡಕುಗಳು ತೋರಿಬರಬಹುದು. ಗರ್ಭಿಣಿಯಲ್ಲಿ ತೋರಿಬರುವ ತೊಡಕುಗಳು ರಕ್ತದಲ್ಲಿ ಗ್ಲುಕೋಸ್ ಮಟ್ಟದ ಏರಿಕೆ ಜೊತೆಯಲ್ಲಿ ರಕ್ತಏರೊತ್ತಡ, ಗರ್ಭನಂಜು, ಗರ್ಭನಂತರ ಪೂರ್ವಸ್ಥಿತಿ ತಲುಪದಿರುವಿಕೆ ವಿಶೇಷ. ಅವರಲ್ಲಿ ಸಿಸೇರಿಯನ್ ಕೊಯ್ತದಿಂದ ಕೂಸನ್ನು ಹೊರತೆಗೆಯ ಬೇಕಾಗುವುದು. ಕೂಸು ಸತ್ತು ಹುಟ್ಟಬಹುದು. ಅಲ್ಲದೆ ಗರ್ಭಸ್ಥ ಸಕ್ಕರೆ ಕಾಯಿಲೆ ಹೊಂದಿದ ಸ್ತ್ರೀ ಮುಂದೆ ಎರಡನೇ ಬಗೆಯ ಡಯಬಿಟಿಸ್ ಬೆಳವಣಿಗೆಯ ಸಂಭಾವ್ಯವನ್ನು ವಿಶೇಷವಾಗಿ ಪಡೆದಿರುತ್ತಾರೆ. ಅಲ್ಲದೆ, ಅವರಲ್ಲಿ ಹೃದಯ-ರಕ್ತನಾಳ ರೋಗಗಳ ಬೆಳವಣಿಗೆಯೂ ಹೆಚ್ಚು. ಅವರಲ್ಲಿ ಬೆಳೆಯುತ್ತಿರುವ ಕೂಸು ತನ್ನ ತೂಕದಲ್ಲಿ ವಿಶೇಷ ಏರಿಕೆಯನ್ನು ತೋರಿಸುವುದು. ಭುಜ ಬಲಹೀನಗೊಳ್ಳಬಹುದು. ಸತ್ತ ಕೂಸು ಹೊರಬರುವ ಸಾಧ್ಯತೆ ಹೆಚ್ಚುವುದು. ನವಜಾತ ಶಿಶು ಉಸಿರಾಟದ ತೊಂದರೆಯನ್ನು ಹೊಂದಬಹುದು. ಪಿತ್ತವರ್ಣದ ಮಟ್ಟ ರಕ್ತದಲ್ಲಿ ಹೆಚ್ಚಬಹುದು. ತಾಯಿಯಲ್ಲಿನ ಗ್ಲುಕೋಸ್ ಮಟ್ಟದ ಏರಿಕೆಯ ಫಲವಾಗಿ ನವಜಾತ ಶಿಶುವಿನ ರಕ್ತದಲ್ಲಿ ಗ್ಲುಕೋಸ್ ಗಣನೀಯವಾಗಿ ಇಳಿಯಬಹುದು. ಗರ್ಭಸ್ಥ ಡಯಬಿಟಿಸ್ ಹೊಂದಿದ ತಾಯಿಯ ಮಕ್ಕಳು ಮುಂದೆ ಬೊಜ್ಜಿನ ಸ್ಥೂಲದೇಹ ಮತ್ತು ಎಳೆತನದಲ್ಲಿಯೇ ಎರಡನೇ ಬಗೆಯ ಸಕ್ಕರೆಕಾಯಿಲೆಯನ್ನು ಹೊಂದಬಹುದು.
ಗರ್ಭಸ್ಥ ಡಯಬಿಟಿಸ್‍ನಲ್ಲಿ ಚಿಕಿತ್ಸೆಯ ಮೊದಲ ಆದ್ಯತೆ ಅವರು ಸೇವಿಸುವ ಆಹಾರದಲ್ಲಿ ಬದಲಾವಣೆಯನ್ನು ತರುವುದು. ಅಲ್ಲದೆ ಅವರ ರಕ್ತದ ಗ್ಲುಕೋಸ್ ಮಟ್ಟದ ಮೇಲೆ ನಿಗಾ ಇರಿಸಬೇಕು. ಅವರು ಸೇವಿಸುವ ಕೆಲೋರಿ ಪ್ರಮಾಣದ ಬಗ್ಗೆ ಲಕ್ಷ್ಯಗೊಟ್ಟು ಅದನ್ನು ಇಳಿಸಬೇಕು. ಅದಕ್ಕಾಗಿ ಅವರು ಸೇವಿಸುವ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ವಸ್ತುಗಳನ್ನು ಕಡಿಮೆ ಮಾಡಬೇಕು. ಆಹಾರದಲ್ಲಿ ಪ್ರೋಟಿನ್ ಮತ್ತು ನಾರೆಳೆವಸ್ತುಗಳು ಹೆಚ್ಚಿರಬೇಕು. ಹೀಗಾಗಿ ಆಹಾರ ಪಥ್ಯ ಅತ್ಯಗತ್ಯ. ಆದರೂ ಅನೇಕರಲ್ಲಿ ಸಕ್ಕರೆ ಕಾಯಿಲೆ ತಹಬಂದಿಗೆ
ಬರುವುದಿಲ್ಲವಾದುದರಿಂದ ಅವರಿಗೆ ದಿನಕ್ಕೆ ಅನೇಕ ಬಾರಿ ಇನ್ಸುಲಿನ್ ಕೊಡಬೇಕಾಗುವುದು. ಗರ್ಭಿಣಿಯರಲ್ಲಿ ರಕ್ತದ ಗ್ಲುಕೋಸ್ ಮಟ್ಟವನ್ನು ಸಹಜ ಸ್ಥಿತಿಯಲ್ಲಿಡುವತ್ತ ಆದ್ಯಗಮನವನ್ನು ನೀಡಬೇಕು. ಗ್ಲುಕೋಸ್ ಮಟ್ಟತುಂಬ ಕೆಳಗಿಳಿಯಬಾರದು. ಅವರ ಚಿಕಿತ್ಸೆಯನ್ನು ಕೈ ಕೊಂಡಾಗ ಊಟಕ್ಕಿಂತ ಮೊದಲ ಡೆಸಿಲೀಟರ್ ರಕ್ತದಲಿ ್ಲಗ್ಲುಕೋಸ್
95 ಮಿ.ಗ್ರಾಂ. ಗಿಂತ ಕಡಿಮೆಯಿರಬೇಕು; ಒಂದು ಘಂಟೆಯ ನಂತರ 140 ಮಿ.ಗ್ರಾಂ.ಗಿಂತ ಕಡಿಮೆಯಿರಬೇಕು. ಅದು ಎರಡು ಘಂಟೆಗಳ ನಂತರ 120 ಮಿ.ಗ್ರಾಂ. ಗಿಂತ ಕಡಿಮೆಯಿರಬೇಕು. ಗರ್ಭಿಣಿಯರಲ್ಲಿ ಇನ್ಸುಲಿನ್ ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ತುಂಬ ಉಪಯುಕ್ತ ಅದು ಮಾಸನ್ನು ಹಾಯ್ದು ಕೂಸನ್ನು ತಲುಪುವುದಿಲ್ಲ.
ಮೆಟ್‍ಫಾರ್ಮಿನ್‍ನಂತಹ ಗ್ಲುಕೋಸ್ ಮಟ್ಟವನ್ನು ಇಳಿಸುವ ಔಷಧಿಗಳು ಉಪಯುಕ್ತ ಪ್ರಭಾವ ಬೀರಿದರೂ ಅದು ಮಾಸನ್ನು ಹಾಯ್ದು ಕೂಸನ್ನು ತಲುಪುವುದರಿಂದ ಅದರ ಬಳಕೆಗೆ
ಪುರಸ್ಕಾರವಿಲ್ಲ. ದೇಶದಲ್ಲಿ ಡಯಬಿಟಿಸ್ ರೋಗಿಗಳ ಸಂಖ್ಯೆ ಏರುತ್ತಿದ್ದು ಅದರ ಹೆಚ್ಚಳವನ್ನು ಕಡಿಮೆ ಮಾಡುವಲ್ಲಿ ಗರ್ಭಸ್ಥ ಸ್ತ್ರೀಯರ ಡಯಬಿಟಿಸ್ ಅನ್ನು ಬೇಗ ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದು ಮಹತ್ವ ಪಡೆದಿದೆ.

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content