ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಂಪಾದಕೀಯ- ಸ್ತ್ರೀ ಮತ್ತು ಡಯಾಬಿಟಿಸ್ 2

ಇಂದು ಜಗತ್ತಿನಲ್ಲಿ 199 ಮಿಲಿಯನ್ ಸ್ತ್ರೀಯರು ಡಯಾಬಿಟಿಸ್ (ಸಕ್ಕರೆ ಖಾಯಿಲೆ) ದಿಂದ ಬಳಲುತ್ತಿದ್ದಾರೆ. ಆ ಸಂಖ್ಯೆ 2040ರ ವೇಳೆಗೆ 313 ಮಿಲಿಯನ್ ಆಗುತ್ತದೆಂದು ಲೆಕ್ಕಹಾಕಲಾಗಿದೆ. ಲಿಂಗ ಮತ್ತು ಶಕ್ತಿಯ ಕಾರ್ಯವೈಖರಿಯು ವ್ಯಕ್ತಿಗಳನ್ನು ಸಕ್ಕರೆ ರೋಗಕ್ಕೆ ಈಡಾಗುವಂತೆ ಮಾಡುತ್ತದೆ. ಅವರ ಪ್ರಭಾವ ಸ್ತ್ರೀಯರಲ್ಲಿ ವಿಶೇಷವಾಗಿ ತೋರಿಬರುತ್ತದೆ.
ಜಗತ್ತಿನ ಸ್ತ್ರೀಯರ ಸಾವಿನ ಒಂಭತ್ತನೇ ಮುಖ್ಯ ಕಾರಣ ಡಯಬಿಟಿಸ್ ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರುಷ 2.1 ಮಿಲಿಯನ್ ಸ್ತ್ರೀಯರು ಅದರಿಂದ ಸಾವನ್ನಪ್ಪುತ್ತಿದ್ದಾರೆ. ಅವರಲ್ಲಿ ಅನೇಕರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಅಡೆತಡೆಗಳನ್ನು ಎದುರಿಸುತ್ತಾರೆ. ಈ ರೋಗವನ್ನು ಬೇಗ ಗುರುತಿಸಿ ಚಿಕಿತ್ಸೆ, ಆರೈಕೆಯನ್ನು ಪಡೆಯುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸ್ತ್ರೀಯರು ವಿಫಲರಾಗುತ್ತಾರೆ. ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ವಿಶೇಷವಾಗಿ ಸದೃಢವಲ್ಲದ ಆಹಾರ, ವ್ಯಾಯಾಮವಿಲ್ಲದ ದೈನಂದಿನ ಜೀವನ, ರೋಗಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಸಕ್ಕರೆ ಕಾಯಿಲೆ ಲಕ್ಷಣಗಳನ್ನು ತೋರ್ಪಡಿಸುವ ಐವರು ಸ್ತ್ರೀಯರಲ್ಲಿ ಇಬ್ಬರು ಪ್ರಜನನ ಸಾಮಥ್ರ್ಯದ ವಯೋಮಾನ ದವರಾಗಿರುತ್ತಾರೆ. ಸಕ್ಕರೆ ಖಾಯಿಲೆ ಹೊಂದಿದ ಸ್ತ್ರೀಗೆ ಗರ್ಭತಳೆಯುವಲ್ಲಿ ತೊಂದರೆಯಾಗುತ್ತದೆ. ಅಲ್ಲದೆ ಗರ್ಭ ಮುಂದುವರಿಕೆ ತೊಂದರೆದಾಯಕವಾಗುವುದು. ಗರ್ಭತಳೆಯುವ ಮೊದಲು ಯೋಗ್ಯ ರೀತಿಯ ಪರಿಹಾರ ವಿಧಾನಗಳನ್ನು ಅನುಸರಿಸದಿದ್ದಲ್ಲಿ ಅದು ತಾಯಿ ಮಗುವಿನ ನರಳಿಕೆಗೆ, ಸಾವಿಗೆ ಕಾರಣವಾಗುವುದು. ಏಳು ಹೆರಿಗೆಗಳಲ್ಲಿ ಒಬ್ಬರಾದರೂ ಗರ್ಭವತಿಯ ಸಕ್ಕರೆ ಕಾಯಿಲೆಯನ್ನು ಹೊಂದಿರುತ್ತಾರೆ. ಅದು ತಾಯಿ-ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗರ್ಭಸ್ಥ ಸ್ತ್ರೀ ಗರ್ಭಬೆಳವಣಿಗೆಗೆ ಸಂಬಂಧಿಸಿದ ಅಡ್ಡ ತೊಡಕುಗಳಾದ ಏರಿದ ರಕ್ತಒತ್ತಡ, ಹೆಚ್ಚು ತೂಕದ ಮಕ್ಕಳಿಗೆ ಜನ್ಮ, ಹೆರಿಗೆಯಲ್ಲಿ ಅಡ್ಡಿಯನ್ನು ಹೊಂದಿ ತೊಂದರೆಗೊಳಗಾಗಬಹುದು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರು ಆನಂತರ ಡಯಾಬಿಟಿಸ್ ಹೊಂದಿ ಅದರ ಅಡ್ಡ ತೊಡಕುಗಳಿಗೆ ಮತ್ತು ಖರ್ಚು ವೆಚ್ಚಕ್ಕೆ ಈಡಾಗಬಹುದು. ಸಕ್ಕರೆ ಖಾಯಿಲೆ ಹೊಂದಿದ ಸ್ತ್ರೀಯರು ತಮ್ಮ ಒಳ್ಳೆಯ ಆರೋಗ್ಯಕ್ಕೆ ಎರವಾಗುವರು ಮತ್ತು ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿಯೇ ಬದಲುಗೊಂಡಿರುತ್ತದೆ. ಅದರಿಂದ ಅವರು ಸಕಾರಾತ್ಮಕ ಸುಸ್ಥಿತಿಯನ್ನು ದೊರಕಿಸಿಕೊಳ್ಳುವಲ್ಲಿ ಕಷ್ಟಪಡಬೇಕಾಗುತ್ತದೆ.
ವಿಶ್ವ ಡಯಾಬಿಟಿಸ್ (ನವೆಂಬರ್ 14) ದಿನ ವಿಶ್ವ ಡಯಾಬಿಟಿಸ್ ಫೆಡರೇಷನ್’ ಸ್ತ್ರೀ ಮತ್ತು ಡಂiÀiಬಿಟಿಸ್: ಆರೋಗ್ಯಕರ ಭವಿಷ್ಯತ್ತು ನಮ್ಮ ಹಕ್ಕು’ ಎಂಬ ಘೋಷಣೆಯನ್ನು ಹೊರಡಿಸಿ ಎಲ್ಲರ ಗಮನವನ್ನು ಈ ಕಾಯಿಲೆಯತ್ತ ಸೆಳೆಯಿತು. ಡಯಬಿಟಿಸ್ ನಿಡುಗಾಲದ ರೋಗವಾಗಿದ್ದು ಮೇದೋ ಜೀರಕದಲ್ಲಿನ ಲ್ಯಾಂಗರ್‍ಹಾನ್ಸ್ ದೀವುಗಳು ಇನ್ಸುಲಿನ್ ರಸದೂತ ಸ್ರವಿಕೆಯನ್ನು ಮಾಡುವಲ್ಲಿ ಇಲ್ಲವೆ ತಯಾರಾದ ಇನ್ಸುಲಿನ್ ಬಳಕೆಯನ್ನು ದೇಹ ಮಾಡುವಲ್ಲಿ ವಿಫಲವಾದಾಗ ಡಯಬಿಟಿಸ್ ಬೆಳವಣಿಗೆ ಹೊಂದುತ್ತದೆ. ಇನ್ಸುಲಿನ್ ರಸದೂತವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ನಮ್ಮ ಸಮಸ್ತ ಕಾರ್ಯಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಸಕ್ಕರೆ ಜೀವಕೋಶಗಳೊಳ ಸೇರಿ ದಹನಗೊಂಡು ಶಕ್ತಿಯನ್ನು ಬಿಡುಗಡೆ ಮಾಡದಿದ್ದರೆ ಸಕ್ಕರೆ ರಕ್ತದಲ್ಲಿ ದಟ್ಟಯಿಸಿ ದೇಹಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತದೆ.
ಡಯಬಿಟಿಸ್‍ನಲ್ಲಿ ಎರಡು ಮುಖ್ಯವಾದ ವಿಧಗಳಿವೆ. ಮೊದಲ ವಿಧದ ಡಯಬಿಟಿಸ್ ಹೊಂದಿದ ವ್ಯಕ್ತಿಗಳಲ್ಲಿ ಇನ್ಸುಲಿನ್ ಸಿದ್ಧವಾಗುವುದಿಲ್ಲ. ಅವರು ಬದುಕಿ ಉಳಿಯಬೇಕಾದರೆ ಅವರಿಗೆ ಪ್ರತಿನಿತ್ಯ ಇನ್ಸುಲಿನ್ ಚುಚ್ಚುಗೆ ಅತ್ಯಗತ್ಯ. ಅದು ದೇಹದಲ್ಲಿ ಸಕ್ಕರೆಯನ್ನು ದಹಿಸಿ ಶಕ್ತಿ ಬಿಡುಗಡೆಗೆ ಎಡೆಮಾಡಿಕೊಡುತ್ತದೆ. ಎರಡನೇ ವಿಧದ ಡಯಬಿಟಿಸ್‍ನಲ್ಲಿ ಇನ್ಸುಲಿನ್ ಸ್ರವಿಕೆಯಾಗು ತ್ತಿದ್ದರೂ ಅದು ದೇಹದ ಬೇಡಿಕೆಗೆ ಅನುಗುಣವಾದ ಪ್ರಮಾಣ ದಲ್ಲಿರುವುದಿಲ್ಲ. ಮತ್ತು ದೇಹ ಅದನ್ನು ಬಳಕೆ ಮಾಡಿಕೊಳ್ಳಲು ಸಮರ್ಥವಾಗಿರುವುದಿಲ್ಲ. ಈ ಬಗೆಯ ತೊಂದರೆ ಹೊಂದಿದ ಅನೇಕ ವ್ಯಕ್ತಿಗಳು ಸ್ಥೂಲ ದೇಹಿಗಳು, ಅವರು ದೇಹಕ್ಕೆ ವ್ಯಾಯಾಮ ಕೊಡದೇ ಒಂದೆಡೆ ಸ್ಥಾಯಿಯಾಗಿ ಕುಳಿತು ಕಾಲಕಳೆಯು ವಂತಹವರು. ಅವೆರಡೂ ಸನ್ನಿವೇಶಗಳು ವ್ಯಕ್ತಿಯ ಇನ್ಸುಲಿನ್ ಆವಶ್ಯಕತೆಯನ್ನು ಹೆಚ್ಚಿಸುತ್ತವೆ. ಈ ಬಗೆಯ ಡಯಬಿಟಿಸ್ ತೊಂದರೆಯನ್ನು ಶೇಕಡಾ 90 ರಷ್ಟು ವ್ಯಕ್ತಿಗಳು ಹೊಂದಿರುತ್ತಾರೆ. ಕಾಲ ಗತಿಸಿದಂತೆ ಸಕ್ಕರೆಯ ಮಟ್ಟದಲ್ಲಿ ದೇಹದ ಪ್ರಮುಖ ಅಂಗಭಾಗಗಳು- ವ್ಯವಸ್ಥೆಗಳು ಸಮರ್ಪಕ ರೀತಿಯಲ್ಲಿ ಕಾರ್ಯ ಮಾಡುವಲ್ಲಿ ವಿಫಲವಾಗುತ್ತವೆ. ಅದರ ಫಲವಾಗಿ ಹೃದಯಾಘಾತ,
ಲಕ್ವ, ನರದೌರ್ಬಲ್ಯ, ಮೂತ್ರಪಿಂಡದ ಸೋಲುವಿಕೆ, ಅಂಧತ್ವ, ಷಂಡತನ, ಮತ್ತು ಕಾಲು ಕತ್ತರಿಸುವಂತಹ ಸೋಂಕು ರೋಗಗಳು ತಲೆದೋರುತ್ತವೆ.
ಸಕ್ಕರೆ ಕಾಯಿಲೆಯ ಬೆಳವಣಿಗೆಯನ್ನು ಉತ್ತಮ ಜೀವನಶೈಲಿಯ ಸರಳ ಸೂತ್ರಗಳನ್ನು ಅನುಸರಿಸಿದಲ್ಲಿ-ಅದೂ ಎರಡನೇ ಬಗೆಯ ಡಯಬಿಟಿಸ್ ಬೆಳವಣಿಗೆಯನ್ನು –
ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಇಲ್ಲವೆ ಅದರ ಪ್ರಕಟಣೆಯನ್ನು ನಿಧಾನಗೊಳಿಸಬಹುದು. ಸಮರ್ಪಕ ದೇಹತೂಕವನ್ನು ಕಾಯ್ದಿರಿಸುವುದು. ನಿಯಮಿತವಾಗಿ ದೈಹಿಕ
ವ್ಯಾಯಾಮವನ್ನು ಕೈಕೊಳ್ಳುವುದು ಮತ್ತು ಆರೋಗ್ಯಕರವಾದ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಡಯಬಿಟಿಸ್ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಡಯಬಿಟಿಸ್ ಕಾಯಿಲೆಗೆ ಚಿಕಿತ್ಸೆ ಮಾಡಬಹುದು. ಅದನ್ನು ನಿಯಂತ್ರಿಸಿ ತೊಡಕುಗಳು ಬೆಳವಣಿಗೆಯಾಗುವುದನ್ನು ದೂರ ಮಾಡಬಹುದು. ರೋಗ ನಿದಾನ (ಡಯಗ್ನೊಸಿಸ್)
ಮಾಡಿಕೊಳ್ಳುವ ಅವಕಾಶಗಳು, ಸ್ವಯಂರೋಗವನ್ನು ಹತೋಟಿಯಲ್ಲಿಟ್ಟು ಕೊಳ್ಳುವ ಶಿಕ್ಷಣ ಮತ್ತು ವ್ಯಕ್ತಿಗಳ ಆರ್ಥಿಕ ಮಟ್ಟಕ್ಕೆ ಸಿಲುಕುವ ಚಿಕಿತ್ಸೆ, ಉತ್ತಮ ಫಲ ದೊರಕಿಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನಾಡುತ್ತವೆ. ಗರ್ಭಾವಸ್ಥೆಯ ಸಕ್ಕರೆ ಕಾಯಿಲೆ ಎಂದರೆ ಸ್ತ್ರೀಯರಲ್ಲಿ ಗರ್ಭತಳೆದ ನಂತರ ಮೊದಲ ಬಾರಿ ಗ್ಲುಕೋಸ್
ತಾಳಿಕೆಯಿಲ್ಲವಾಗಿರುವ ಸನ್ನಿವೇಶ. ಈ ಬಗೆಯ ಡಯಬಿಟಿಸ್‍ನಲ್ಲಿ ತಾಯಿ ಮತ್ತು ಮಗು ಇಬ್ಬರೂ ಗರ್ಭ ತಳೆದ ಕಾಲದಲ್ಲಿ, ನಂತರ ಹೆರಿಗೆಯ ಕಾಲದಲ್ಲಿ ಅನೇಕ ಬಗೆಯ ತೊಡಕುಗಳನ್ನು ಹೊಂದುತ್ತಾರೆ. ಅದರಿಂದಾಗಿ ಸಹಜ ಹೆರಿಗೆಯಾಗದೇ ಸಿಸೇರಿಯನ್ ಕೊಯ್ತಕ್ಕೆ ಒಳಪಡಬೇಕಾಗುವುದು. ಕೂಸಿನ ಅಂಗಭಾಗಗಳು ಹೆಬ್ಬೆಳವಣಿಗೆಯನ್ನು ತೋರಿಸುತ್ತವೆ. ಭುಜ ಬಲಹೀನವಾಗುವುದು, ನವಜಾತ ಶಿಶುವಿನ ಗ್ಲುಕೋಸ್ ಮಟ್ಟ ಇಳಿಯುವುದು. ಪಿತ್ತವರ್ಣ (ಬಿಲಿರುಬಿನ್) ಪ್ರಮಾಣ ಏರಿಕೆಯನ್ನು ತೋರಿಸುವುದು. ಅದರಿಂದಾಗಿ ಗರ್ಭಾವಸ್ಥೆಯಲ್ಲಿ ಡಯಬಿಟಿಸ್ ಬೆಳವಣಿಗೆ ಹೊಂದಿರುವುದರ ಬಗ್ಗೆ ನಿಗಾ ಇರಿಸಬೇಕು. ಮತ್ತು ಅದನ್ನು ಚಿಕಿತ್ಸೆಗೊಳಪಡಿಸಬೇಕು.
ಭಾರತದಲ್ಲಿ ಗರ್ಭತಳೆದ ಸ್ತ್ರೀಯರಲ್ಲಿ ಮೊದಲ ಮೂರು ತಿಂಗಳಲ್ಲಿ ಅವರ ರಕ್ತದಲ್ಲಿ ಗ್ಲುಕೋಸ್ ಮಟ್ಟ ತಿಳಿಯುವುದಕ್ಕೆ ಮಹತ್ವವನ್ನುಕೊಡಲಾಗಿದೆ. ಅನೇಕ ಸ್ತ್ರೀಯರು ಬೊಜ್ಜು
ಸೇರ್ಪಡೆಯಿಂದ ಸ್ಥೂಲ ದೇಹ ಹೊಂದಿರುವುದು, ದೈಹಿಕ ಶ್ರಮವಿಲ್ಲದೆ ಒಂದೆಡೆ ಕುಳಿತು ಕಾಲಕಳೆಯುವ ಜೀವನ ವಿಧಾನ, ಆಹಾರ ಸೇವನೆಯ ತಪ್ಪು ವಿಧಾನಗಳು, ಹೆಚ್ಚು ವಯಸ್ಸಾದ ಮೇಲೆ ಗರ್ಭಧಾರಣೆಯ ಪ್ರವೃತ್ತಿ, ಅಲ್ಲದೆ ಅನೇಕ ಗರ್ಭಿಣಿಯರಲ್ಲಿ ಗುರುತಿಸಲ್ಪಡದೇ ಉಳಿದ ಡಯಬಿಟಿಸ್ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಅದರಿಂದಾಗಿ ಎಲ್ಲ ಗರ್ಭಿಣಿಯರಲ್ಲಿ ಈ ಮೊದಲೇ ಇರಬಹುದಾದ ಸಕ್ಕರೆ ಕಾಯಿಲೆಯನ್ನು ಪರೀಕ್ಷೆಗೊಳಪಡಿಸಿ ತಿಳಿದುಕೊಳ್ಳುವುದಕ್ಕೆ ಮಹತ್ವವನ್ನು ಕೊಡಲಾಗಿದೆ. ಹಾಗೆಯೇ ಗ್ಲುಕೋಸ್ ತಾಳಿಕೆಯ ವ್ಯತ್ಯಯವನ್ನು ಹೊಂದಿರುವ ಡಯಬಿಟಿಸ್ ಪೂರ್ವರೂಪವನ್ನು ಕೂಡಾ ಈ ರೀತಿಯ ಪರೀಕ್ಷೆಯಿಂದ ಅನಾವರಣಗೊಳಿಸಬಹುದು. ಹಾಗೆ ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ ಇರವನ್ನು ತಿಳಿದರೆ ಅವರನ್ನು ಯೋಗ್ಯ ಚಿಕಿತ್ಸೆಗೆ ಒಳಪಡಿಸಬಹುದು. ಅದರಿಂದ ಗರ್ಭ ಬೆಳವಣಿಗೆಯ ಪ್ರಾರಂಭದಲ್ಲಿ ಉಂಟಾಗುವ ಹಲಿವಿಳಿಕೆಯನ್ನು ತಪ್ಪಿಸಬಹುದು. ಮತ್ತು
ಬರಬಹುದಾದ ತೊಡಕುಗಳನ್ನು ಬಾರದಂತೆ ಮಾಡುವ ಕ್ರಮ ಕೈಕೊಳ್ಳಬಹುದು.
ಸಾಮಾನ್ಯವಾಗಿ ಗರ್ಭಧಾರಣೆಯ ಕಾಲದಲ್ಲಿ ತಾಯಿಯ ಊತಕಗಳು ನಿಧಾನವಾಗಿ ಇನ್ಸುಲಿನ್ ಪ್ರಭಾವಕ್ಕೆ ಪ್ರತಿಕ್ರಿಯೆ ತೋರಿಸುವಲ್ಲಿ ಸೋತು ಹೋಗುತ್ತವೆ. ಈ ಸನ್ನಿವೇಶ ಬೊಜ್ಜು ಶರೀರ ಮತ್ತು ಮಾಸು (ಪ್ಲಾಸೆಂಟ) ಸ್ರವಿಸುವ ರಸದೂತ (ಹಾರ್ಮೋನ್) ಗಳು ಬೀರುವ ಪ್ರಭಾವದಿಂದ ಮತ್ತಷ್ಟು ಬಿಗಡಾಯಿಸುತ್ತದೆ. ಸ್ತ್ರೀಯರಲ್ಲಿ ಗರ್ಭಿಣಿ ಡಯಬಿಟಿಸ್ ಬೆಳವಣಿಗೆಗೆ ಒತ್ತುಕೊಡುವ ಅಂಶಗಳು ಹೀಗಿವೆ. ಅವುಗಳೆಂದರೆ: ಸಕ್ಕರೆ ಕಾಯಿಲೆ ಬೆಳವಣಿಗೆ ಹೊಂದುವ ಸಾಧ್ಯತೆ ಹೆಚ್ಚಿರುವ ಜನಪದ, ಹಿಂದಿನ ಗರ್ಭಧಾರಣೆ ಕಾಲದಲ್ಲಿ ಸಕ್ಕರೆ ಕಾಯಿಲೆ ತೋರಿ ಬಂದಿರುವುದು. ಹಿಂದೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿರುವ ಇತಿಹಾಸ, ಏರುತ್ತಿರುವ ವಯೋಮಾನದಲ್ಲಿ ಗರ್ಭಿಣಿಯಾಗಿರುವುದು, ಡಯಬಿಟಿಸ್ ಕೌಟುಂಬಿಕ ಇತಿಹಾಸ, ಹಿಂದಿನ ಹೆರಿಗೆಯಲ್ಲಿ ಹೆಚ್ಚು ತೂಕದ ಕೂಸಿಗೆ ಜನ್ಮ ನೀಡಿರುವುದು, ಅನೇಕ ಬುಡ್ಡೆಗಳ ಅಂಡಾಶಯದ ಸ್ಥಿತಿ, ರಕ್ತಏರೊತ್ತಡ, ರಕ್ತದಲ್ಲಿ ಗ್ಲುಕೋಸ್ ಮಟ್ಟಏರಿಸುವ ಔಷಧ ಸೇವನೆ.
ಗರ್ಭಸ್ಥ ಸ್ತ್ರೀಯರಲ್ಲಿ ಡಯಬಿಟಿಸ್ ಇರುವಿಕೆಯಿಂದ ಆಕೆಯ ಮೇಲೂ ಮತ್ತು ಆಕೆ ಜನ್ಮ ನೀಡುವ ಕೂಸಿನಲ್ಲೂ ಅಡ್ಡ ತೊಡಕುಗಳು ತೋರಿಬರಬಹುದು. ಗರ್ಭಿಣಿಯಲ್ಲಿ ತೋರಿಬರುವ ತೊಡಕುಗಳು ರಕ್ತದಲ್ಲಿ ಗ್ಲುಕೋಸ್ ಮಟ್ಟದ ಏರಿಕೆ ಜೊತೆಯಲ್ಲಿ ರಕ್ತಏರೊತ್ತಡ, ಗರ್ಭನಂಜು, ಗರ್ಭನಂತರ ಪೂರ್ವಸ್ಥಿತಿ ತಲುಪದಿರುವಿಕೆ ವಿಶೇಷ. ಅವರಲ್ಲಿ ಸಿಸೇರಿಯನ್ ಕೊಯ್ತದಿಂದ ಕೂಸನ್ನು ಹೊರತೆಗೆಯ ಬೇಕಾಗುವುದು. ಕೂಸು ಸತ್ತು ಹುಟ್ಟಬಹುದು. ಅಲ್ಲದೆ ಗರ್ಭಸ್ಥ ಸಕ್ಕರೆ ಕಾಯಿಲೆ ಹೊಂದಿದ ಸ್ತ್ರೀ ಮುಂದೆ ಎರಡನೇ ಬಗೆಯ ಡಯಬಿಟಿಸ್ ಬೆಳವಣಿಗೆಯ ಸಂಭಾವ್ಯವನ್ನು ವಿಶೇಷವಾಗಿ ಪಡೆದಿರುತ್ತಾರೆ. ಅಲ್ಲದೆ, ಅವರಲ್ಲಿ ಹೃದಯ-ರಕ್ತನಾಳ ರೋಗಗಳ ಬೆಳವಣಿಗೆಯೂ ಹೆಚ್ಚು. ಅವರಲ್ಲಿ ಬೆಳೆಯುತ್ತಿರುವ ಕೂಸು ತನ್ನ ತೂಕದಲ್ಲಿ ವಿಶೇಷ ಏರಿಕೆಯನ್ನು ತೋರಿಸುವುದು. ಭುಜ ಬಲಹೀನಗೊಳ್ಳಬಹುದು. ಸತ್ತ ಕೂಸು ಹೊರಬರುವ ಸಾಧ್ಯತೆ ಹೆಚ್ಚುವುದು. ನವಜಾತ ಶಿಶು ಉಸಿರಾಟದ ತೊಂದರೆಯನ್ನು ಹೊಂದಬಹುದು. ಪಿತ್ತವರ್ಣದ ಮಟ್ಟ ರಕ್ತದಲ್ಲಿ ಹೆಚ್ಚಬಹುದು. ತಾಯಿಯಲ್ಲಿನ ಗ್ಲುಕೋಸ್ ಮಟ್ಟದ ಏರಿಕೆಯ ಫಲವಾಗಿ ನವಜಾತ ಶಿಶುವಿನ ರಕ್ತದಲ್ಲಿ ಗ್ಲುಕೋಸ್ ಗಣನೀಯವಾಗಿ ಇಳಿಯಬಹುದು. ಗರ್ಭಸ್ಥ ಡಯಬಿಟಿಸ್ ಹೊಂದಿದ ತಾಯಿಯ ಮಕ್ಕಳು ಮುಂದೆ ಬೊಜ್ಜಿನ ಸ್ಥೂಲದೇಹ ಮತ್ತು ಎಳೆತನದಲ್ಲಿಯೇ ಎರಡನೇ ಬಗೆಯ ಸಕ್ಕರೆಕಾಯಿಲೆಯನ್ನು ಹೊಂದಬಹುದು.
ಗರ್ಭಸ್ಥ ಡಯಬಿಟಿಸ್‍ನಲ್ಲಿ ಚಿಕಿತ್ಸೆಯ ಮೊದಲ ಆದ್ಯತೆ ಅವರು ಸೇವಿಸುವ ಆಹಾರದಲ್ಲಿ ಬದಲಾವಣೆಯನ್ನು ತರುವುದು. ಅಲ್ಲದೆ ಅವರ ರಕ್ತದ ಗ್ಲುಕೋಸ್ ಮಟ್ಟದ ಮೇಲೆ ನಿಗಾ ಇರಿಸಬೇಕು. ಅವರು ಸೇವಿಸುವ ಕೆಲೋರಿ ಪ್ರಮಾಣದ ಬಗ್ಗೆ ಲಕ್ಷ್ಯಗೊಟ್ಟು ಅದನ್ನು ಇಳಿಸಬೇಕು. ಅದಕ್ಕಾಗಿ ಅವರು ಸೇವಿಸುವ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ವಸ್ತುಗಳನ್ನು ಕಡಿಮೆ ಮಾಡಬೇಕು. ಆಹಾರದಲ್ಲಿ ಪ್ರೋಟಿನ್ ಮತ್ತು ನಾರೆಳೆವಸ್ತುಗಳು ಹೆಚ್ಚಿರಬೇಕು. ಹೀಗಾಗಿ ಆಹಾರ ಪಥ್ಯ ಅತ್ಯಗತ್ಯ. ಆದರೂ ಅನೇಕರಲ್ಲಿ ಸಕ್ಕರೆ ಕಾಯಿಲೆ ತಹಬಂದಿಗೆ
ಬರುವುದಿಲ್ಲವಾದುದರಿಂದ ಅವರಿಗೆ ದಿನಕ್ಕೆ ಅನೇಕ ಬಾರಿ ಇನ್ಸುಲಿನ್ ಕೊಡಬೇಕಾಗುವುದು. ಗರ್ಭಿಣಿಯರಲ್ಲಿ ರಕ್ತದ ಗ್ಲುಕೋಸ್ ಮಟ್ಟವನ್ನು ಸಹಜ ಸ್ಥಿತಿಯಲ್ಲಿಡುವತ್ತ ಆದ್ಯಗಮನವನ್ನು ನೀಡಬೇಕು. ಗ್ಲುಕೋಸ್ ಮಟ್ಟತುಂಬ ಕೆಳಗಿಳಿಯಬಾರದು. ಅವರ ಚಿಕಿತ್ಸೆಯನ್ನು ಕೈ ಕೊಂಡಾಗ ಊಟಕ್ಕಿಂತ ಮೊದಲ ಡೆಸಿಲೀಟರ್ ರಕ್ತದಲಿ ್ಲಗ್ಲುಕೋಸ್
95 ಮಿ.ಗ್ರಾಂ. ಗಿಂತ ಕಡಿಮೆಯಿರಬೇಕು; ಒಂದು ಘಂಟೆಯ ನಂತರ 140 ಮಿ.ಗ್ರಾಂ.ಗಿಂತ ಕಡಿಮೆಯಿರಬೇಕು. ಅದು ಎರಡು ಘಂಟೆಗಳ ನಂತರ 120 ಮಿ.ಗ್ರಾಂ. ಗಿಂತ ಕಡಿಮೆಯಿರಬೇಕು. ಗರ್ಭಿಣಿಯರಲ್ಲಿ ಇನ್ಸುಲಿನ್ ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ತುಂಬ ಉಪಯುಕ್ತ ಅದು ಮಾಸನ್ನು ಹಾಯ್ದು ಕೂಸನ್ನು ತಲುಪುವುದಿಲ್ಲ.
ಮೆಟ್‍ಫಾರ್ಮಿನ್‍ನಂತಹ ಗ್ಲುಕೋಸ್ ಮಟ್ಟವನ್ನು ಇಳಿಸುವ ಔಷಧಿಗಳು ಉಪಯುಕ್ತ ಪ್ರಭಾವ ಬೀರಿದರೂ ಅದು ಮಾಸನ್ನು ಹಾಯ್ದು ಕೂಸನ್ನು ತಲುಪುವುದರಿಂದ ಅದರ ಬಳಕೆಗೆ
ಪುರಸ್ಕಾರವಿಲ್ಲ. ದೇಶದಲ್ಲಿ ಡಯಬಿಟಿಸ್ ರೋಗಿಗಳ ಸಂಖ್ಯೆ ಏರುತ್ತಿದ್ದು ಅದರ ಹೆಚ್ಚಳವನ್ನು ಕಡಿಮೆ ಮಾಡುವಲ್ಲಿ ಗರ್ಭಸ್ಥ ಸ್ತ್ರೀಯರ ಡಯಬಿಟಿಸ್ ಅನ್ನು ಬೇಗ ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದು ಮಹತ್ವ ಪಡೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content