ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

5G ಮೊಬೈಲ್ ನೆಟ್ವರ್ಕ್

1 min read
ಪ್ರಕಾಶ ಶಾನುಬೋಗ

ಮೊಬೈಲ್ ಫೋನ್‌ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿವೆ, ಮೊಬೈಲ್ ಫೋನ್ ನೆಟ್‌ವರ್ಕ್ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಗಳು ಮೊಬೈಲ್ ಫೋನ್‌ಗಳ, ಸ್ಮಾರ್ಟ್ ಫೋನ್‌ಗಳ ಅಥವಾ ಟ್ಯಾಬ್ಲೆಟ್‌ಗಳಂತಹ ವೈರ್‌ಲೆಸ್ ಸಾಧನಗಳ ಸಂವಹನವನ್ನು ಸಕ್ರಿಯಗೊಳಿಸುತ್ತವೆ. ಮೊಬೈಲ್ ಫೋನ್ ನೆಟ್‌ವರ್ಕ್ ಎನ್ನುವುದು ರೇಡಿಯೋ ಸಂವಹನ ನೆಟ್‌ವರ್ಕ್ ಆಗಿದ್ದು, ಇದು ಸೆಲ್‌ (ಕೋಶ) ಗಳು ಎಂದು ಕರೆಯಲ್ಪಡುವ ಸುಮಾರು 26 sq kms ವಿಸ್ತೀರ್ಣವುಳ್ಳ  ಭೂಪ್ರದೇಶಗಳ ತುಣುಕುಗಳ ಮೂಲಕ ಪೋನ್ ಮತ್ತು ಡೇಟ ಸೇವೆಯನ್ನು ವಿತರಿಸುತ್ತವೆ, ಪ್ರತಿಯೊಂದು ಸೆಲ್ ಭೂಪ್ರದೇಶದಲ್ಲಿ ಕನಿಷ್ಠ ಒಂದು ಸ್ಥಿರ ಟ್ರಾನ್ಸ್‌ ರಿಸೀವರ್‌ ಕಾರ್ಯನಿರತವಾಗಿರುತ್ತದೆ. ಇದನ್ನು ಬೇಸ್ ಸ್ಟೇಷನ್ ಎಂದು ಕರೆಯಲಾಗುತ್ತದೆ, ಪ್ರತಿ ಸೆಲ್ ಭೂಪ್ರದೇಶವು 30 ಕಿಮೀ ತ್ರಿಜ್ಯದ ಪ್ರದೇಶವಾಗಿರಬಹುದು. ಪ್ರತಿ ಸೆಲ್ ಭೂಪ್ರದೇಶವು ನೆರೆಯ ಸೆಲ್ ಗಿಂತ ವಿಭಿನ್ನ ರೇಡಿಯೊ ಆವರ್ತನಗಳನ್ನು ( radio frequency) ಬಳಸುತ್ತದೆ, ಸೆಲ್ ಗಳ ನಡುವೆ ಹಸ್ತಕ್ಷೇಪ ತಪ್ಪಿಸಲು ಈ ಅನನ್ಯ ರೇಡಿಯೊ ಆವರ್ತನಗಳ ಬಳಕೆಯ ಮಾರ್ಗ ಅನುಸರಿಸಲಾಗುವುದು ಮತ್ತು ಪ್ರತಿ ಸೆಲ್ ನೊಳಗೆ ಖಾತರಿಯ ಬ್ಯಾಂಡ್‌ವಿಡ್ತ್ ಅನ್ನು ಒದಗಿಸಿರಲಾಗುತ್ತದೆ.

ಮೊಬೈಲ್ ಫೋನ್ ನೆಟ್‌ವರ್ಕ್‌ಗಳು ಮೊದಲ ತಲೆಮಾರಿನ 1 ಜಿ ಯಿಂದ ಆರಂಭವಾಗಿ ಕಾಲಘಟ್ಟದಲ್ಲಿ ನಿರಂತರವಾಗಿ ವಿಕಸನಗೊಂಡಿವೆ, ಈಗಲು ವಿಕಸಿತಗೊಳ್ಳುತ್ತಿವೆ.

1 ಜಿ- ಇದು 1979 ರಲ್ಲಿ ಜಪಾನ್‌ನಲ್ಲಿ ನಿಪ್ಪಾನ್ ಟೆಲಿಗ್ರಾಫ್ ಮತ್ತು ಟೆಲಿಫೋನ್ (NTT- Nippon Telegraph and Telephone) ಮೂಲಕ ವಾಣಿಜ್ಯ ಸೆಲ್ಯುಲಾರ್ ನೆಟ್‌ವರ್ಕ್ 1 ಜಿ ಪೀಳಿಗೆಯ ಸೇವೆಯಾಗಿ ಆರಂಭವಾಯಿತು, ಆಗ ಅದು ಅನಲಾಗ್ ತಂತ್ರಜ್ಙಾನದ್ದಾಗಿತ್ತು.  1983 ರ ಹೊತ್ತಿಗೆ 1 ಜಿ ನೆಟ್‌ವರ್ಕ್ ಸೇವೆ US ದೇಶದಲ್ಲಿ ಲಭ್ಯವಾಯಿತು.

2G- ಡಿಜಿಟಲ್ ತಂತ್ರಜ್ಞಾನವು 1990 ರ ದಶಕದಲ್ಲಿ ಟೆಲ್ಕೊ ವಲಯಕ್ಕೆ ಪ್ರವೇಶಿಸಿತು ಮತ್ತು ಮೊದಲ ವಾಣಿಜ್ಯ ಡಿಜಿಟಲ್ ಸೆಲ್ಯುಲಾರ್ ನೆಟ್‌ವರ್ಕ್ 2G ಪೀಳಿಗೆಯ ಸೇವೆಯು 1991 ರಲ್ಲಿ ಆರಂಭಿಸಲಾಯಿತು. 2G ಎನ್‌ಕ್ರಿಪ್ಟ್ ಮಾಡಿದ ಕರೆಗಳಂತಹ ಕೆಲವು ಮಹತ್ವದ ಪ್ರಗತಿಯನ್ನು ಒದಗಿಸಿತು ಮತ್ತು ಒಂದು ಫೋನ್‌ನಿಂದ ಇನ್ನೊಂದಕ್ಕೆ ಡೇಟಾ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿತು.

3G- ಆವರ್ತನ ಮತ್ತು ಸಮಯ ವಿಭಾಗದ ಮಲ್ಟಿಪ್ಲೆಕ್ಸಿಂಗ್ (Frequency & Time division multiplexing) ಮತ್ತು ಪ್ರಮಾಣಿತ (standard) ಪ್ರೋಟೋಕಾಲ್‌ಗಳಂತಹ ಸುಧಾರಿತ ತಂತ್ರಗಳೊಂದಿಗೆ 3G ಸೇವೆಯು 2001 ರ ವೇಳೆಗೆ ಲಭ್ಯವಾಯಿತು, ಇದು ಇಂಟರ್ನೆಟ್ ಸರ್ಫಿಂಗ್, ಮೊಬೈಲ್ ಸಾಧನಗಳಲ್ಲಿ ಸಂಗೀತದ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸಿತು.

4G- 2009 ರಲ್ಲಿ ಪ್ರಾರಂಭವಾದ 4G ವಿಡಿಯೋ ಸ್ಟ್ರೀಮಿಂಗ್, ಆನ್‌ಲೈನ್ ಗೇಮಿಂಗ್, ಹೈ ಸ್ಪೀಡ್ ಡಾಟಾ ಟ್ರಾನ್ಸ್‌ಫರ್ ಮುಂತಾದ ಪ್ರಮಾಣಿತ (standard) ಸೇವೆಗಳನ್ನು ನೀಡುತ್ತ ವ್ಯಾಪಕವಾಗಿ ಹಬ್ಬಿಕೊಂಡಿದೆ, 4G ತನ್ನ ಸಾಮರ್ಥ್ಯದ ಮಿತಿಯನ್ನು ತಲುಪಿದೆ ಮತ್ತು ಈಗ ಪ್ರಪಂಚಕ್ಕೆ ವೇಗದ ನೆಟ್‌ವರ್ಕ್ ನ ಅಗತ್ಯವಿದೆ.

5G- ಸೇವೆ 2019 ರಲ್ಲಿ ಲಭ್ಯವಾಯಿತು, ಇದು 4G ಗಿಂತ 20 ಪಟ್ಟು ವೇಗವನ್ನು ನೀಡುವುದೆಂದು ನಿರೀಕ್ಷಿಸಲಾಗಿದೆ, ಸಾಮೂಹಿಕ IOT ನಿಯೋಜನೆಯನ್ನು ಸಕ್ರಿಯಗೊಳಿಸಬಲ್ಲದು, ಸ್ಮಾರ್ಟ್ ನಗರಗಳಂತಹ ಮತ್ತು ಇತರೆ ಉನ್ನತ ತಂತ್ರಜ಼್ಞಾನ ಒಳಗೊಂಡ ಉಪಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಾಯಕಾರಿಯಾಗಲಿದೆ.

5 ಜಿ – ವೇಗಕ್ಕಿಂತ ಹೆಚ್ಚುಗಾರಿಕೆ

5G ಇನ್ನೂ ಜಗತ್ತಿನಾದ್ಯಂತ ಲಭ್ಯವಿಲ್ಲ, ಅದರ ಹೊಸ ನೆಟ್‌ವರ್ಕ್ ಸಾಮರ್ಥ್ಯಗಳು ಮುಂದಿನ ಡಿಜಿಟಲ್ ಕ್ರಾಂತಿಗೆ ಕಾರಣವಾಗುತ್ತವೆ. 5 ಜಿ ತುಂಬಾ ವೇಗವಾಗಿದ್ದು, ಮೊಬೈಲ್ ಬಳಕೆಗೆ ಮಾತ್ರ ಅದರ ಪ್ರಭಾವ ಸೀಮಿತವಾಗಿರುವುದಿಲ್ಲ. 5 ಜಿ ತಂತ್ರಜ್ಙಾನವು ಯಂತ್ರದಿಂದ ಯಂತ್ರಕ್ಕೆ ಸಂಪರ್ಕ (machine to machine connectivity) ವರ್ಧನೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸಿ ಮುಂದಿನ ತಲೆಮಾರಿನ ವೈರ್‌ಲೆಸ್ ಸೆಲ್ಯುಲಾರ್ ಟೆಕ್ ನ ಹೊಸ ಸ್ವಯಂಚಾಲಿತ ಸಮಾಜವನ್ನು ಸೃಷ್ಟಿಸಲಿದೆ. ಎಐ(AI), ಐಒಟಿ(IOT) ಮತ್ತು ಕ್ಲೌಡ್ ಕಂಪ್ಯೂಟಿಂಗ್‌ (Cloud computing) ನಂತಹ ತಂತ್ರಜ್ಞಾನಗಳು 5 ಜಿ ನಿಂದ ಅಸಾಧಾರಣವಾದ ಪ್ರಗತಿಯನ್ನು ಸಾಧಿಸಲಿವೆ.

5 ಜಿಯು ಆರೋಗ್ಯ ಉದ್ಯಮದಲ್ಲಿ ವೈದ್ಯಕೀಯ ವೃತ್ತಿಪರರು ಮತ್ತು ರೋಗಿಗಳು ವ್ಯವಹರಿಸುವ ರೀತಿಯಲ್ಲಿ ಕ್ರಾಂತಿಕಾರಕ ಪ್ರಗತಿಪರ ಬದಲಾವಣೆಗಳನ್ನು ತರಲಿದೆ. 5G ಯ ನೆಟ್‌ವರ್ಕ್‌ನಲ್ಲಿ, ಕೃತಕ ಬುದ್ಧಿಮತ್ತೆಯು (AI) ನಿಮ್ಮ ವೈದ್ಯರು ನೀಡುವ ಆರೋಗ್ಯ ಸಮಾಲೋಚನೆಗಿಂತಲೂ ಉತ್ತಮ ರೋಗಪತ್ತೆ ಮಾಡುವ ಮತ್ತು ಚಿಕಿತ್ಸಾ ವಿಧಾನಗಳನ್ನು ತರಲಿದೆ. 5Gಯಿಂದ ಶೀಘ್ರದಲ್ಲೇ, ರೋಬೋಟ್‌ಗಳು ರೈತರ ಹೊಲಗಳಲ್ಲಿ ಅಲೆದಾಡಿ, ಬೆಳೆ ಪರಿಸ್ಥಿತಿಗಳ ಮೇಲ್ವಿಚಾರಣೆ ಮಾಡಬಹುದು.

5 ಜಿ-ಗೇಮ್‌ಚೇಂಜರ್

5 ಜಿ ಕೇವಲ ವೇಗದ ಡೌನ್‌ಲೋಡ್ ನ ವೇಗದ ಮೊಬೈಲ್ ಇಂಟರ್‌ನೆಟ್ ಮಾತ್ರವಲ್ಲ. 5 ಜಿ ಒಂದು ಗೇಮ್-ಚೇಂಜರ್ ಆಗಿದ್ದು, ನಾವು ಎಲ್ಲಾ ಉದ್ಯಮಗಳಲ್ಲಿ ಹೇಗೆ ಕೆಲಸ ಮಾಡುತ್ತೇವೆ, ನಮ್ಮ ಬದುಕನ್ನು ಹೇಗೆ ನೆಡೆಸುತ್ತೇವೆ ಎಂಬುದರಲ್ಲಿ ಕ್ರಾಂತಿಕಾರಕ ಬದಲವಾಣೆಗಳನ್ನು ತರಲಿದೆ. ನಾವು ಹೇಗೆ ವಾಹನ ಚಾಲನೆ ಮಾಡುತ್ತೇವೆ, ನಮ್ಮ ಆಹಾರವನ್ನು ಹೇಗೆ ಬೆಳೆಯುತ್ತೇವೆ ಮತ್ತು ನಮ್ಮ ನೆಚ್ಚಿನ ಕ್ರೀಡಾ ತಂಡಗಳನ್ನು ನಾವು ಹೇಗೆ ಬೆಂಬಲಿಸುತ್ತೇವೆ ಎಂಬಂತಹ ನಮ್ಮ ಜೀವನದ ಅನೇಕ ಅಂಶಗಳನ್ನು ಬದಲಾಯಿಸಲಿದೆ.

ಇನ್ನೂ ವ್ಯಾಖ್ಯಾನಿಸಿ ಅನ್ವೇಷಿಸಬೇಕಾದ ಅನೇಕ ಸಾಧ್ಯತೆಗಳ ಮೂಲಕ 5Gಯು ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ, ಇದನ್ನು 40 ವರ್ಷಗಳ ಹಿಂದೆ 1G ಯು ನಮ್ಮಜೀವನವನ್ನು ಹೇಗೆ ಬದಲಾಯಿಸಿತು ಎಂಬುದಕ್ಕೆ ಹೋಲಿಸಬಹುದು.

ಆಪಲ್, ಸ್ಯಾಮ್‌ಸಂಗ್, ಗೋಗಲ್, ಮೊಟೊರೊಲಾ ಕಂಪನಿಗಳು ಈಗಾಗಲೇ ತಮ್ಮ ಫೋನ್‌ಗಳನ್ನು 5G ಹೊಂದಾಣಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿವೆ, ಈ ಕಂಪನಿಗಳ ಕೆಲವು ಹಳೆಯ ಮಾದರಿಯ ಫೋನ್‌ಗಳು ಸಹ 5G ಗೆ ಹೊಂದಿಕೆಯಾಗುತ್ತವೆ.

5 ಜಿಯಲ್ಲಿ-ಇನ್ನೇನಿದರಲಿದೆ

5G ಯು OFDM (ಆರ್ಥೋಗೋನಲ್ ಫ್ರೀಕ್ವೆನ್ಸಿ-ಡಿವಿಷನ್ ಮಲ್ಟಿಪ್ಲೆಕ್ಸಿಂಗ್) ತಂತ್ರಜ಼್ಞಾನವನ್ನು ಆಧರಿಸಿದೆ. ಇದು ವಿಭಿನ್ನ ಚಾನೆಲ್‌ಗಳಲ್ಲಿ ಡಿಜಿಟಲ್ ಸಿಗ್ನಲ್ ಅನ್ನು ಮಾರ್ಪಡಿಸುವ (modulation) ಮೂಲಕ ಹಸ್ತಕ್ಷೇಪವನ್ನು ಕಡಿಮೆ ಮಾಡುವ ವಿಧಾನವಾಗಿದೆ. 5G ಹೊಸ ಉಧ್ಯಮಗಳಿಗೆ ಮೊಬೈಲ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುತ್ತದೆ. 5G ಯು ಮಿತಿಯಿಲ್ಲದ ವಿಪರೀತ ರಿಯಾಲಿಟಿ, ಸುಗಮ ಐಒಟಿ ಸಾಮರ್ಥ್ಯಗಳು, ಹೊಸ ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳು ಮತ್ತು ತ್ವರಿತ ಕ್ಲೌಡ್ ಆಕ್ಸೆಸ್ ಮುಂತಾದ ಉಪಯುಕ್ತತೆಗಳ ಮೂಲಕ  ಬಳಕೆದಾರರಿಗೆ ಉತ್ತಮ  ಅನುಭವಗಳ ಕೊಡುಗೆ ನೀಡುತ್ತದೆ. ಇದು ವ್ಯವಹಾರಗಳಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ, ಅದೇ ಸಮಯದಲ್ಲಿ ಬಳಕೆದಾರರಿಗೆ ಹೆಚ್ಚಿನ ಮಾಹಿತಿಗೆ ತ್ವರಿತ ಲಭ್ಯತೆಯನ್ನು ನೀಡುತ್ತದೆ.

5 ಜಿ-ಸೇನಾ ವಸ್ತುಗಳ ಇಂಟರ್ನೆಟ್

5 ಜಿಯು ನಮ್ಮನ್ನು IOT-Internet of things ನಿಂದ IOMT-Internet of Military things ಗೆ ಕರೆದೊಯ್ಯವುದು. ಮಿಲಿಟರಿಗೆ 5 ಜಿ ಹೆಚ್ಚುವರಿಯಾಗದ ಗುಪ್ತಚರ, ಮಾಹಿತಿ ವಿಶ್ಲೇಷಣೆ, ಬೇಹುಗಾರಿಕೆ ಸಾಮರ್ಥ್ಯವನ್ನು ನೀಡಲಿದೆ, ಕಣ್ಗಾವಲು ಮತ್ತು ವಿಚಕ್ಷಣ (ಐಎಸ್‌ಆರ್) ವ್ಯವಸ್ಥೆಗಳ ಮತ್ತು ಸಂಸ್ಕರಣೆಯ ಸಾಮರ್ಥ್ಯವನ್ನು  ಹೆಚ್ಚಿಸಲಿದೆ ಮತ್ತು ಹೊಸ ಆಜ್ಞಾವಿಧಾನ (commanding) ಮತ್ತು ನಿಯಂತ್ರಣದ ವಿಧಾನಗಳನ್ನು ಸಕ್ರಿಯಗೊಳಿಸಲಿದೆ. ಇದು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸುಗಮಗೊಳಿಸಿ ಬಲಪಡಿಸುವ ಮೂಲಕ ಹೆಚ್ಚಿದ ದಕ್ಷತೆಯನ್ನು ತರಲಿದೆ. ಯುದ್ಧಭೂಮಿಯಲ್ಲಿನ ಯುದ್ಧಸಾಮಗ್ರಿಗಳು, ಸಂವೇದಕಗಳು, ಆಯುಧ ಮತ್ತು ಧರಿಸಬಹುದಾದ ಸಾಧನಗಳು(wearable devices), ರೋಬೋಟ್‌ಗಳು ಸಂಪರ್ಕ ಹೊಂದಿದ್ದು ಪರಸ್ಪರ ನಿರಂತರ ಸಂವಹನ ನಡೆಸಲು ಸಾಧ್ಯವಾಗಲಿದೆ ಮತ್ತು ಇವುಗಳೆಲ್ಲ ಅಂತರ್ಜಾಲದ ಮೂಲಕ ತಮ್ಮದೇ ಸೈಬರ್ ಡೊಮೇನ್‌ಗಳಲ್ಲಿ ಸಂಪರ್ಕವನ್ನು ನೆಡೆಸಲಿವೆ. 5 ಜಿಯು ಸೇನೆಯು ಡೇಟಾವನ್ನು ಸಂಗ್ರಹಿಸಲು, ಪ್ರಕ್ರಿಯೆಗೊಳಿಸಲು ಮತ್ತು ಅರ್ಥೈಸಲು ಮತ್ತು ಸಾಧನಗಳು ಮತ್ತು ಸಂವೇದಕಗಳನ್ನು ದೂರದಿಂದಲೇ ನಿಯಂತ್ರಿಸಲು ಸಾಧ್ಯವಾಗುವ ವಿಧಾನಗಳನ್ನು, ಹೊಸ ಆಯಾಮಗಳನ್ನು ತರಲಿದೆ.

5 ಜಿ-ಭಾರತದಲ್ಲಿ

ಭಾರತದಲ್ಲಿ 5ಜಿ ಇನ್ನೂ ಆರಂಭಿಕ ಹಂತದಲ್ಲಿದೆ, ಇಲ್ಲಿಯವರೆಗೆ 5 ಜಿಯ ಯಾವುದೇ ವಾಣಿಜ್ಯ ಅಭಿವೃದ್ಧಿ, ವ್ಯವಸ್ತೆ ಕಾರ್ಯಗತವಾಗಿಲ್ಲ. 5G ತಂತ್ರಜ್ಞಾನ ಮತ್ತು AI ಅನ್ನು ಅಳವಡಿಸಿಕೊಳ್ಳುವ ಕ್ರಮವು ಸಂಪೂರ್ಣವಾಗಿ ವಿಭಿನ್ನ ಬಳಕೆಯ ಪ್ರಕರಣಗಳಿಗೆ ನಾಂದಿ ಹಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮುಂತಾದ ನೆಟ್‌ವರ್ಕ್ ಆಪರೇಟರ್‌ಗಳು ಈಗಾಗಲೇ ಜಾಗತಿಕ ಮಾರಾಟಗಾರರೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ ಮತ್ತು 5G ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದಾರೆ.

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯು ಕೃತಕ ಬುದ್ಧಿಮತ್ತೆ ಮತ್ತು ಡ್ರೋನ್‌ಗಳಂತಹ ಮಾನವರಹಿತ ವಾಹನಗಳ ಸಂಯೋಜಕ ಕಾರ್ಯಚರಣೆಯನ್ನು 5ಜಿ ಬಳಸಿ ಆರಂಭಿಸುವ ಸಾಧ್ಯತೆಯಿದೆ. ಇದರೊಂದಿಗೆ ಜಗತ್ತಿನಾದ್ಯಂತ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆವೊಂದಿರುವ ದೇಶ ಭಾರತ ಎಂಬ ಹೆಗ್ಗಳಿಕೆ ಬರಲಿದೆ.

ಈ ವರ್ಷದ ಆರಂಭದಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿಯು 2022 ರ ವೇಳೆಗೆ ನಿರ್ದಿಷ್ಟ ಬಳಕೆಗಳಿಗಾಗಿ 5G ಭಾರತದಲ್ಲಿ ಸೀಮಿತ ಮಟ್ಟಿಗೆ ಹೊರಹೊಮ್ಮಲಿದೆ, ಮತ್ತು 4G ಭಾರತದಲ್ಲಿ ಕನಿಷ್ಠ 5-6 ವರ್ಷಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ವೆಚ್ಚದ ದೃಷ್ಟಿಕೋನ

ಮೊಬೈಲ್ ಬಳಕೆದಾರರಿಗೆ 5G ಗಾಗಿ ಹೊಸ ಸಿಮ್ ನ ಅಗತ್ಯವಿಲ್ಲ, ಈಗಿರುವ 4G ಸಿಮ್ ನಿಮ್ಮ 5G ಫೋನಿನಲ್ಲಿ ಕೆಲವು ಮಿತಿಗಳೊಂದಿಗೆ ಕೆಲಸ ಮಾಡಲಿದೆ.

4G ಫೋನ್‌ಗಳು 5G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, ಆದರೆ ಅಪೇಕ್ಷಿತ 5G ವೇಗವನ್ನು ತಲುಪುವುದಿಲ್ಲ, 5G ಸಂಪೂರ್ಣವಾಗಿ ಹೊಸ ನೆಟ್‌ವರ್ಕ್ ಅಲ್ಲ, ಇದನ್ನು 4G ನೆಟ್‌ವರ್ಕ್‌ನ ಮೇಲೆ ಪೇರಿಸಿದ ಹೊಸ ತಂತ್ರಜ್ಞಾನ ಸೌಲಭ್ಯ ಎಂದು ಅರ್ಥೈಸಬಹುದು. ಒಳ್ಳೆಯ ಸುದ್ದಿಯೆಂದರೆ ನಿಮ್ಮ 4 ಜಿ ಫೋನ್ 5 ಜಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮಗೆ 5 ಜಿ ಯ ಪ್ರಖರ ವೇಗ ಬೇಕಾದರೆ ಮಾತ್ರ ನೀವು ಹೊಸ ಪೋನ್ ಖರೀದಿ ಮಾಡಬೇಕಾಗುತ್ತದೆ.

ಮೊಬೈಲ್ ತಂತ್ರಜ್ಞಾನದ ವೇಗದ ಪೀಳಿಗೆಯೆಂದು ಹೇಳಲಾಗುವ 5 ಜಿನಲ್ಲಿ ವೈರ್‌ಲೆಸ್ ಸೇವೆಯ ಡೇಟಾವನ್ನು ಬಳಸುವ ವೆಚ್ಚ ಈಗ ಭಾರತದಲ್ಲಿ 4 ಜಿಯ ಗ್ರಾಹಕರು ಪಾವತಿಸುವ ಪ್ರಸ್ತುತ ಬೆಲೆಗಳಿಂದ ಹೆಚ್ಚು ಬದಲಾಗುವುದಿಲ್ಲ. 5G ತಂತ್ರಜ್ಞಾನವು ಪ್ರಸ್ತುತ 4G ಡೇಟಾ ವೆಚ್ಚಗಳಿಗಿಂತ ಕಡಿಮೆ ವೆಚ್ಚವನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಉದ್ಯಮ ತಜ್ಞರು ನಂಬುತ್ತಾರೆ.

ಇನ್ನು ಮೊಬೈಲ್ ಸೇವೆ ನೀಡುವ ಕಂಪನಿಗಳು 5G ಯ ಮೂಲಸೌಕರ್ಯದ ಮೇಲೆ ಸಾಕಷ್ಟು ಹೂಡಿಕೆ ಮಾಡಬೇಕಾಗುತ್ತದೆ. 5G ಗೆ ಹೊಸ ಸೆಲ್ ಟವರ್‌ಗಳು ಮತ್ತು ಹತ್ತಾರು ಸಾವಿರ ಆಂಟೆನಾಗಳು ಸೇರಿದಂತೆ ಹೊಸ ಟ್ರಾನ್ಸ್‌ಮಿಟರ್ ಗಳು, ರಿಸೀವರ್ ಗಳು ಬೇಕಾಗುತ್ತವೆ – ಇದನ್ನು ಸಣ್ಣ ಕೋಶಗಳು ಮತ್ತು ವಿತರಿಸಿದ ಆಂಟೆನಾ ವ್ಯವಸ್ಥೆಗಳು ಎಂದು ಕರೆಯಲಾಗುತ್ತದೆ.

ಪ್ರಕಾಶ ಶಾನುಬೋಗ

prakasha.shanbog@gmail.com

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content