ಅಧ್ಯಕ್ಷರ ಲೇಖನಿಯಿಂದ: ಸೆಪ್ಟೆಂಬರ್ 30, 2021
1 min readಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸ್ಮರಣಾರ್ಥ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಿಂದ ಒಟ್ಟು 11 ಉಪನ್ಯಾಸಗಳ ಸರಣಿಯನ್ನು ಆಯೋಜಿಸಲಾಗಿತ್ತು. ಈ ‘ಭಾರತ ಅಮೃತ ಮಹೋತ್ಸವ ಉಪನ್ಯಾಸ ಮಾಲೆ’ಯಲ್ಲಿ ವಿಜ್ಞಾನದ ಖ್ಯಾತನಾಮರು, ದಶಕಗಳಲ್ಲಾದ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗಳನ್ನು ಮತ್ತು ಮುಂದಿನ ಹಾದಿಯನ್ನು ಪ್ರಸ್ತುತಪಡಿಸಿ, ದೇಶಕ್ಕೆ ಗೌರವ ಸಲ್ಲಿಸಿದರು. ವಿದ್ವತ್.ಪೂರ್ಣ ಉಪನ್ಯಾಸ ನೀಡಿದ ವಿಜ್ಞಾನಿಗಳಿಗೆ ಕೃತಜ್ಞತೆಗಳನ್ನು ಹಾಗೂ ಈ ಉಪನ್ಯಾಸ ಮಾಲೆಯಲ್ಲಿ ಭಾಗವಹಿಸಿದ ಎಲ್ಲಾ ಸಹಭಾಗಿಗಳಿಗೆ ನನ್ನ ಮೆಚ್ಚುಗೆಗಳನ್ನು ಸಲ್ಲಿಸಲು ಬಯಸುತ್ತೇನೆ.
ಕೋವಿಡ್-19 ಪಿಡುಗಿನಿಂದಾಗಿ ಶಾಲೆಗಳು ಮತ್ತು ಕಾಲೇಜುಗಳು ಇನ್ನೂ ತೆರೆಯದ ಸಮಯದಲ್ಲಿ ಅಕಾಡೆಮಿಯ ವತಿಯಿಂದ ವಿವಿಧ ವಿಜ್ಞಾನ ವಿಷಯಗಳ ಬಗ್ಗೆ ವೆಬಿನಾರ್.ಗಳನ್ನು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಂದ ಉತ್ತಮವಾಗಿ ಪ್ರತಿಕ್ರಿಯೆ ಬಂದಿರುತ್ತದೆ. ಅಕಾಡೆಮಿಯು ಆಯೋಜಿಸಿದ ಹಲವಾರು ಸ್ಪರ್ಧೆಗಳಿಗೆ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಅಕಾಡೆಮಿಯ ವೆಬ್ ಸೈಟ್.ಗೆ ಭೇಟಿ ನೀಡುವ ಮತ್ತು ಅಕಾಡೆಮಿಯ ಪ್ರಕಟಣೆಗಳಿಗೆ ಸ್ಪಂದಿಸುವ ವಿಷಯದಲ್ಲಿ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು. ಇದನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಅಶ್ವಥ್.ನಾರಾಯಣ್ ಸಿ.ಎನ್. ರವರು ಸಹ ಟ್ವಿಟರ್.ನಲ್ಲಿ ಶ್ಲಾಘಿಸಿದ್ದಾರೆ.
ಅಕಾಡೆಮಿಕಯ ಸರ್ವ ಸದಸ್ಯರ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಗಳೆರಡೂ ಈ ತ್ರೈಮಾಸಿಕದಲ್ಲಿ ನಡೆದವು. ಸದಸ್ಯರಿಂದ ಪಡೆದ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಕೃತಜ್ಞತೆಯಿಂದ ಅಂಗೀಕರಿಸಲಾಗಿದೆ.
– ಎಸ್. ಅಯ್ಯಪ್ಪನ್