ಅಧ್ಯಕ್ಷರ ಲೇಖನಿಯಿಂದ: ಡಿಸೆಂಬರ್ 31, 2021
1 min read2021 ವರ್ಷವು ಕೊನೆಗೊಳ್ಳುತ್ತಿದ್ದಂತೆ, ಮಹತ್ಸಾಧನೆಗಳು ಮತ್ತು ಹಾನಿಗಳ ಮಿಶ್ರ ಭಾವನೆಗಳಿವೆ. ಹೊಸ ಪೀಳಿಗೆಯ ಲಸಿಕೆಗಳು ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನಗಳ ಮೂಲಕ ಕೋವಿಡ್-19 ಪಿಡುಗಿನ ನಿರ್ವಹಣೆಯನ್ನು ಸರ್ವಾಂಗೀಣವಾಗಿ ಶ್ಲಾಘಿಸಲಾಗಿದೆ. ವೈದ್ಯಕೀಯ ಮತ್ತು ಮಾಹಿತಿ ತಂತ್ರಜ್ಞಾನಗಳು ವಿಜ್ಞಾನದ ಶಕ್ತಿಯನ್ನು ಪ್ರದರ್ಶಿಸಿದ್ದು, ಪ್ರತಿ ಮನೆ ಮನಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿವೆ. ಜೊತೆಗೆ, ಇತರ ನೈಸರ್ಗಿಕ ವಿಪತ್ತುಗಳಾದ ಚಂಡಮಾರುತಗಳು ಮತ್ತು ದೀರ್ಘಕಾಲದ ಮಳೆಯ ವಿದ್ಯಾಮಾನಗಳು ಸಹ ಹವಾಮಾನ ಬದಲಾವಣೆಯ ಮುನ್ನೆಣಿಕೆಗಳನ್ನು ಸಾಬೀತುಪಡಿಸಿವೆ. ಯುನೈಟೆಡ್ ಕಿಂಗ್ಡಮ್.ನ ಗ್ಲಾಸ್ಗೋದಲ್ಲಿ 2021.ರ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆದ ಯುಎನ್.ಎಫ್.ಸಿಸಿಸಿ ಹವಾಮಾನ ಬದಲಾವಣೆಯ ಸಿಒಪಿ 26 ಸಭೆಯಲ್ಲಿ ಮತ್ತೊಮ್ಮೆ ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಹವಾಮಾನ ವೈಪರೀತ್ಯತೆಯನ್ನು ತಗ್ಗಿಸುವ ಕ್ರಮಗಳ ಅಗತ್ಯತೆಯನ್ನು ಕೇಂದ್ರೀಕರಿಸಲಾಗಿತ್ತು. 2021ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯು ಸಹ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಮೂಲಭೂತ ಸಂಶೋಧನೆಯ ಕ್ಷೇತ್ರದಲ್ಲಿ ವಿಜ್ಞಾನಿಗಳನ್ನು ಗುರುತಿಸಿತು. ಅಕಾಡೆಮಿಯು ಹಿಂದಿನ ವರ್ಷದಂತೆ, ನೊಬೆಲ್ ಪ್ರಶಸ್ತಿ ವಿಜೇತ ಉಪನ್ಯಾಸ ಮಾಲೆಯನ್ನು ಆಯೋಜಿಸಿತು, ಪ್ರಸಿದ್ಧ ವಿಜ್ಞಾನಿಗಳು ನೋಬೆಲ್ ಪುರಸ್ಕೃತರ ಮತ್ತು ವಿಷಯಗಳ ಬಗ್ಗೆ ಮಾತನಾಡಿದರು.
ವಿವಿಧ ಬಳೆಕದಾರರಿಗೆ ಒಂದು ಉಲ್ಲೇಖ ದಾಖಲೆಯನ್ನು ಒದಗಿಸುವ ಸಲುವಾಗಿ ರಾಜ್ಯದ ಸಾಮರ್ಥ್ಯಗಳನ್ನು ಬಿಂಬಿಸುವ ‘ಕರ್ನಾಟಕದ ಸಂಶೋಧನೆ ಮತ್ತು ಅಭಿವೃದ್ಧಿ ಚಿತ್ರಣ’ ವನ್ನು ಅಕಾಡೆಮಿಯು ಹೊರತಂದಿತು. ಹಣ್ಣು ಮತ್ತು ತರಕಾರಿಗಳ ಅಂತಾರಾಷ್ಟ್ರೀಯ ವರ್ಷದ ಸ್ಮರಣಾರ್ಥ ‘ಆರೋಗ್ಯ ಮತ್ತು ಪೌಷ್ಟಿಕತೆಗಾಗಿ ಹಣ್ಣುಗಳು ಮತ್ತು ತರಕಾರಿಗಳು’ ಎಂಬ ರಾಷ್ಟ್ರೀಯ ಸಮ್ಮೇಳನವು ಈ ತ್ರೈಮಾಸಿಕದಲ್ಲಿ ಪ್ರಮುಖ ಕಾರ್ಯಕ್ರಮವಾಗಿತ್ತು. ‘ಕಪ್ಪು ಶಿಲೀಂದ್ರ ನಿರ್ವಹಣೆ’ ಕುರಿತು ತಜ್ಞರ ಸಮಾಲೋಚನೆ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮದಡಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಲೆಯನ್ನು ನಡೆಸಲಾಯಿತು.
ಅಕಾಡೆಮಿಯ ಕಾರ್ಯಕಾರಿ ಸಮಿತಿ ಈ ತ್ರೈಮಾಸಿಕದಲ್ಲಿ ಸಭೆ ಸೇರಿತ್ತು. ಸದಸ್ಯರಿಂದ ಪಡೆದ ಮಾರ್ಗದರ್ಶನ ಮತ್ತು ಕೊಡುಗೆಗಳನ್ನು ಕೃತಜ್ಞತೆಯಿಂದ ಅಂಗೀಕರಿಸಲಾಗಿದೆ.
– ಎಸ್. ಅಯ್ಯಪ್ಪನ್