ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಧ್ಯಕ್ಷರ ಲೇಖನಿಯಿಂದ: ಜೂನ್ 30, 2020

1 min read

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿವಾರಕ್ಕೆ ಶುಭಾಶಯಗಳು. ನಮ್ಮೆಲ್ಲರ ಜೀವನ ಶೈಲಿಯೇ ಆಗಿ ಹೋಗಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರೂ ಈ ಪರಿವಾರದ ಸದಸ್ಯರು. ಇದು, 2020ರ ಏಪ್ರಿಲ್ 21 ರಂದು ಸರಕಾರವು ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಪುನರ್ ರಚಿಸಿದ ನಂತರ ಹೊರಬರುತ್ತಿರುವ ಮೊದಲ ಇ-ವಾರ್ತಾಪತ್ರ, ‘ವಿಜ್ಞಾನ ವಾಹಿನಿ’ ಯ ಮೊದಲ ಸಂಚಿಕೆ.

ಈ ಸಂದರ್ಭದಲ್ಲಿ, ರಾಜ್ಯದ ಸೇವೆ ಮಾಡಲು ಒಂದು ಸದವಕಾಶವನ್ನು ಒದಗಿಸಿಕೊಟ್ಟಿರುವ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು; ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು; ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು; ಪದಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ನವರಚಿತ ಆಡಳಿತ ಮಂಡಳಿಯ ವಿಶಿಷ್ಟ ಸದಸ್ಯರೆಲ್ಲರ ಪರವಾಗಿ ಈ ವೇದಿಕೆಯ ಮೂಲಕ ನಮ್ಮ ಕೃತಜ್ಞತೆಗಳನ್ನು ಸಲ್ಲಿಸ ಬಯಸುತ್ತೇನೆ. ಸುಮಾರು 12 ವರ್ಷಗಳಿಗೂ ಹೆಚ್ಚು ಕಾಲ ಅಕಾಡೆಮಿಯ ಸಂಸ್ಥಾಪನಾ ಅಧ್ಯಕ್ಷರಾಗಿದ್ದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತ ಸರ್ಕಾರದ ಇಸ್ರೋ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ದಿವಂಗತ ಪ್ರೊಫೆಸರ್ ಯು. ಆರ್. ರಾವ್ ಮತ್ತು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಇಸ್ರೋ ಸಂಸ್ಥೆಯ ಯು. ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದ ದಿವಂಗತ ಡಾ. ಎಸ್. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಳೆದು ಬಂದ ಈ ಅಕಾಡೆಮಿಯ ಒಡನಾಟದಲ್ಲಿ ಕೆಲಸ ಮಾಡಲು ಸುವರ್ಣಾವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ.

ಅಭೂತ ಪೂರ್ವ ಸವಾಲುಗಳು, ಜೊತೆ ಜೊತೆಗೆ ಮೂಡಿ ಬರುತ್ತಿರುವ ಸಮಾಧಾನಗಳ ನಡುವೆ ನಾವು ಮಾನುಕುಲದ ಪಯಣದ ಕುತೂಹಲಕಾರಿ ಘಟ್ಟದಲ್ಲಿದ್ದೇವೆ. ಇಂದು ನಾವೆಲ್ಲರೂ ಎದುರಿಸುತ್ತಿರುವ, ನಮ್ಮನೆಲ್ಲರನ್ನು ಆವರಿಸಿರುವ  ಹಾಗೂ ವಿಜ್ಞಾನ ಮತ್ತು ಸಮಾಜ ಪರಿಹಾರಕ್ಕೆ ಯತ್ನಿಸುತ್ತಿರುವ ಕೋವಿಡ್ 19, ಅಂತಹ ಒಂದು ಜಲ್ವಂತ ಸಮಸ್ಯೆಯ ಉದಾಹರಣೆಯಾಗಿದೆ. ವಿಜ್ಞಾನ ವೈಶ್ವಿಕ, ಆದರೆ, ತಂತ್ರಜ್ಞಾನ ಪ್ರಾಸ್ತಾವಿಕ ಮತ್ತು ಭೌಗೋಳಿಕ. ಇವುಗಳೊಂದಿಗೆ ಆವಿಷ್ಕಾರವೂ ಸೇರಿಕೊಂಡು, ನಮ್ಮ ಕ್ಷಿಪ್ರ, ಸುಸ್ಥಿರ ಮತ್ತು ಅಂತರ್ಗತಮುಖಿ ಬೆಳವಣಿಗೆಯ ಮತ್ತು ಅಭಿವೃದ್ಧಿಯ ಧ್ಯೇಯ ಸಾಧನೆಗೆ ತ್ರಿಚಕ್ರ ಪೂರಕ ಸಾಧನಗಳಾಗಿವೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಹಲವಾರು ವರ್ಷಗಳಿಂದ, ಮೂಲಭೂತ ವಿಜ್ಞಾನ ಮತ್ತು ಜ್ಞಾನ ಪ್ರಸರಣ, ವೈಜ್ಞಾನಿಕ ವಿಚಾರ ಪ್ರಸಾರ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆ, ಆವಿಷ್ಕಾರ ಮತ್ತು ಸಂವಹನ ಮತ್ತಿತರ ಕೆಲಸಗಳಿಂದ ತನ್ನ ಧ್ಯೇಯಗಳನ್ನು ಪೂರ್ಣಗೊಳಿಸುತ್ತ ಬಂದಿದೆ. ‘ದೂರದೃಷ್ಟಿ-ಆವಿಷ್ಕಾರ-ಸಹಭಾಗಿತ್ವ’ಗಳು ನಮ್ಮ ಮುಂದಿನ ಕಾರ್ಯಕ್ರಮಗಳಿಗೆ ಅವಶ್ಯಕ ಹಾಗೂ ಪೂರಕ ಅಂಶಗಳು.

ತಂತ್ರಜ್ಞಾನ ಕ್ರಾಂತಿಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ, ಸರ್ಕಾರಿ ಮತ್ತು ಕಾರ್ಪೋರೇಟ್ ವಿಜ್ಞಾನ ಸಂಸ್ಥೆ-ಸಂಘಟನೆಗಳ ಉಪಸ್ಥತಿ, ಸಂದಿಹ ವರ್ಷಗಳ ಪರಿಣತಿ ಮತ್ತು ಯುವ ಶಕ್ತಿಯಿಂದಾಗಿ ಭಾರತದ ವಿಜ್ಞಾನ ನಕ್ಷೆಯಲ್ಲಿ ವಿಶಿಷ್ಟ ಸ್ಥಾನದಲ್ಲಿದೆ.

ಅಕಾಡೆಮಿಯು ಒಂದು ವಿಚಾರ ವೇದಿಕೆಯಾಗಿ, ಸಂಯೋಜಕರಾಗಿ, ಪ್ರವರ್ತಕರಾಗಿ, ಪ್ರೋತ್ಸಾಹಕರಾಗಿ, ಸಲಹೆಗಾರರಾಗಿ, ಮನೆ-ಮನಗಳಲ್ಲಿ ವಿಜ್ಞಾನದ ಪರಿಮಳವನ್ನು ಬೀರಲು ಸನ್ನದ್ಧವಾಗಿದೆ. ಒಟ್ಟಾರೆಯಾಗಿ, ಜ್ಞಾನ-ವಿಜ್ಞಾನದ ಬೆಳಕು ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾದರೆ, ಪ್ರತಿ ನಾಳೆಯೂ ಖಂಡಿತ ಉತ್ತಮವಾಗುತ್ತದೆ.

ಈ ದಿಸೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು, ನಿಮ್ಮೆಲ್ಲರಿಂದ ಸಲಹೆಗಳನ್ನು, ಕೊಡುಗೆ-ದೇಣಿಗೆಗಳನ್ನು ಮತ್ತು ಸಹಭಾಗಿತ್ವವನ್ನು ಸ್ವಾಗತಿಸುತ್ತದೆ ಮತ್ತು ಆಪೇಕ್ಷಿಸುತ್ತದೆ. ಬನ್ನಿ, ನೀವು ಎಲ್ಲೇ ಇರಿ, ಏನನ್ನೇ ಮಾಡುತ್ತಿರಿ, ಈ ಜ್ಞಾನಯಾನದಲ್ಲಿ ಭಾಗಿಯಾಗೋಣ. ವಿಜ್ಞಾನ ಎಲ್ಲರ ಸ್ವತ್ತು ಮತ್ತು ಸಂಪತ್ತು, ಕಾಳಜಿ ಮತ್ತು ಕೈಂಕರ್ಯ.

– ಎಸ್. ಅಯ್ಯಪ್ಪನ್

ಜೂನ್ 30, 2020

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content