Member Secretary

ಡಾ. ಪ್ರಕಾಶ್ ಎಂ. ಸೊಬರದ್

ನಿರ್ದೇಶಕರು (ತಾಂತ್ರಿಕ), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ಎಂಡಿ, ಕೆಸ್ಟೆಪ್ಸ್/ಸದಸ್ಯ ಕಾರ್ಯದರ್ಶಿಗಳು, ಕವಿತಂಅ

ಡಾ. ಪ್ರಕಾಶ್ ಎಂ.ಸೊಬರದ್ ರವರು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದು ಅಗ್ರೊನಮಿಯಲ್ಲಿ ಎಂ.ಎಸ್ಸಿ. (ಕೃಷಿ) ಪದವಿಯನ್ನು ಹಾಗೂ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಯಿಂದ ಪಿಎಚ್‌ಡಿ ಪದವಿಯನ್ನು ಗಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸ್ನಾತಕೋತ್ತರ ಡಿಪ್ಲೊಮಾವನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಹಾಗೂ ಆಹಾರ ಮತ್ತು ಪೋಷಣೆಯಲ್ಲಿ ಕೋರ್ಸ್ ಸರ್ಟಿಫಿಕೇಟ್ ಸಹ ಪಡೆದಿದ್ದಾರೆ. 

ಶ್ರೀಯುತರು ಐಸಿಎಆರ್‌ನಿಂದ ಜೂನಿಯರ್ ಮತ್ತು ಸೀನಿಯರ್ ರಿಸರ್ಚ್ ಫೆಲೋಶಿಪ್ ಪಡೆದಿದ್ದಾರೆ. ಎಂ.ಎಸ್ಸಿ (ಕೃಷಿ) ಪದವಿಯಲ್ಲಿ ಅತ್ಯಧಿಕ ಅಂಕಗಳನ್ನು ಮತ್ತು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಕ್ಕಾಗಿ ಶ್ರೀಯುತರಿಗೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜಿನ ಬೆಳ್ಳಿ ಮಹೋತ್ಸವ ಚಿನ್ನದ ಪದಕವನ್ನು ನೀಡಲಾಗಿದೆ. ಇವರಿಗೆ ಕೃಷಿ ವಿಜ್ಞಾನ ಡಾಕ್ಟರ್ ನಲ್ಲಿ ನಡೆಸಿದ ಗಮನಾರ್ಹ ಸಂಶೋಧನೆಗಾಗಿ ಪ್ರತಿಷ್ಠಿತ ಡಾ. ಜಿ. ಎ. ದಾಸ್ತಾನೆ ಚಿನ್ನದ ಪದಕ ನೀಡಲಾಗಿದೆ.

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ ಶ್ರೀಯುತರು ನಂತರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಕೊಪ್ಪಳ, ಗದಗ ಮತ್ತು ಬಾಗಲಕೋಟೆಗಳಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಮತ್ತು ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕರಾಗಿ, ಯೋಜನಾ ಜಂಟಿ ನಿರ್ದೇಶಕರಾಗಿ ಮತ್ತು ಹುಳಿಮಾವುನಲ್ಲಿರುವ ಜೈವಿಕ ತಂತ್ರಜ್ಞಾನ ಕೇಂದ್ರದ ಜಂಟಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕೆ ಅಪರ ನಿರ್ದೇಶಕರಾಗಿ ಕ್ಷೇತ್ರ ಮತ್ತು ನರ್ಸರಿಗಳು, ತಾಳೆ ಬೆಳೆ ಯೋಜನೆ ಹಾಗೂ ಪ್ರಮುಖ ಫ್ಲಾಗ್‌ಶಿಪ್ ಕಾರ್ಯಕ್ರಮಗಳಾದ ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಕೃಷಿ ಭಾಗ್ಯ ಯೋಜನೆ, ರೈತ ಉತ್ಪಾದಕರ ಸಂಘಟನೆಗಳನ್ನು ನಿರ್ವಹಿಸಿದಲ್ಲದೆ, ರಾಜ್ಯ ಮಟ್ಟದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಂತಹ ಪ್ರಮುಖ ಕಾರ್ಯಕ್ರಮಗಳ ಸಮರ್ಥ ಮೇಲ್ವಿಚಾರಣೆ ನಡೆಸಿದ್ದಾರೆ.

ಶ್ರೀಯುತರು 2008-09ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಗಾಗಿ ತೋಟಗಾರಿಕೆ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿ ತೋಟಗಾರಿಕೆ ಇಲಾಖೆಯು ಎಂಜಿಎನ್‌ಆರ್‌ಇಜಿಎ ಅನುಷ್ಠಾನದಲ್ಲಿ ರೂ. 110 ಕೋಟಿಗಳ ಅತ್ಯಧಿಕ ದಾಖಲೆ ಪ್ರಗತಿಯನ್ನು ಸಾಧಿಸಿರುವುದು ಶ್ಲಾಘನೀಯ. ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳು / ಸಿಬ್ಬಂದಿಗಳಿಗೆ ಇವರು ನಡೆಸಿದ ನಿರಂತರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಈ ಯಶಸ್ಸಿಗೆ ಕಾರಣವಾಗಿದೆ. ಶ್ರೀಯುತರು 2007 ರಿಂದ 2009ರವರೆಗೆ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತೋಟಗಾರಿಕಾ ಕಾಲೇಜಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೈಸೂರು ಮತ್ತು ದಾವಣಗೆರೆಗಳಲ್ಲಿ ಸಮಗ್ರ ಜೈವಿಕ ಕೇಂದ್ರಗಳ ಸ್ಥಾಪನೆಯಲ್ಲಿ ಇವರು ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ. ತೋಟಗಾರಿಕೆ ಇಲಾಖೆಗಳ ಕ್ಷೇತ್ರಗಳು ಮತ್ತು ನರ್ಸರಿಗಳ ಅಭಿವೃದ್ಧಿಗೆ “ಮಾದರಿ ಫಾರ್ಮ್‌ಗಳ ಅಭಿವೃದ್ಧಿ” ಎಂಬ ಹೊಸ ಪರಿಕಲ್ಪನೆಯನ್ನು ರಾಜ್ಯದಾದ್ಯಂತ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಅಲ್ಲದೆ, “ಸಸ್ಯ ಸಂತೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸುವಲ್ಲಿ  ಇವರು ಮಹತ್ತರ ಪಾತ್ರ ವಹಿಸಿದ್ದರು. ಇವರು ಅಂತರರಾಷ್ಟ್ರೀಯ ಬಾಳೆಹಣ್ಣು ಮತ್ತು ಪ್ಲಾಂಟೇನ್  ಹಾಗೂ ತರಕಾರಿ ಬೆಳೆಗಳ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ.

ಈ-ಟೀವಿ ಕನ್ನಡ, ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ 150 ಕ್ಕೂ  ಹೆಚ್ಚು ತೋಟಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ತಾಂತ್ರಿಕ ಕೃಷಿ ಸಮುದಾಯಕ್ಕೆ ನೀಡಿದ್ದಾರೆ.

ಸರ್ಕಾರಿ ನೌಕರರಲ್ಲಿನ ಅತ್ಯುತ್ತಮ ಸಾಧನೆ ಮತ್ತು ಪ್ರತಿಭೆಗಾಗಿ ಇವರಿಗೆ 2008 ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸರ್ಕಾರಿ ಆಡಳಿತದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಇವರಿಗೆ 2016 ರಲ್ಲಿ ರಾಜ್ಯ ಮಟ್ಟದ ಸರ್ವೊತ್ತಮ್ಮ ಪ್ರಶಸ್ತಿ ನೀಡಲಾಗಿದೆ.

ತೋಟಗಾರಿಕೆಗೆ ಸಂಬಂಧಿಸಿದ 5 ತಾಂತ್ರಿಕ ಪುಸ್ತಕಗಳನ್ನು ಮತ್ತು 20 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳನ್ನು ವಿವಿಧ ರಾಷ್ಟ್ರೀಯ ನಿಯತಕಾಲಿಕಗಳು ಮತ್ತು ಮ್ಯಾಗಸೀನ್ ಗಳಲ್ಲಿ ಪ್ರಕಟಿಸಿದ್ದಾರೆ.

ಪ್ರಸ್ತುತ, ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕರಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)ಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content