ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್ ಮದ್ದಿಗಾಗಿ ಹ್ಯಾಕಥಾನ್ – ಸಂಪಾದಕೀಯ

– ನಾಡೋಜ ಡಾ. ಪಿ. ಎಸ್. ಶಂಕರ್

ಕೋವಿಡ್-19ರ ವಿರುದ್ಧ ಔಷಧ ಶೋಧಿಸುವ ಹ್ಯಾಕಥಾನ್ ಕೈಕೊಳ್ಳಲು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ವಿಭಾಗದ ನವನಿರ್ಮಿತಿ ಕೋಶ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಕೌನ್ಸಿಲ್ ಕಾರ್ಯಪ್ರವೃತ್ತವಾಗಿವೆ. ಈ ಔಷಧ ಶೋಧದ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಿ ಕೋವಿಡ್ ವಿರೋಧಿ ಔಷಧ ರೂಪಿಸುವ ಗುರಿಯನ್ನು ಸಾಧಿಸಬೇಕೆಂದು ಕರೆಕೊಟ್ಟಿವೆ.

ಸ್ಮಾರ್ಟ್ ಇಂಡಿಯ ಹ್ಯಾಕಥಾನ್ (SIH) ರಾಷ್ಟ್ರೀಯ ಉದ್ಯಮಶೀಲತೆಯ ಕಾರ್ಯಕ್ರಮವಾಗಿದ್ದು ಅದು ವಿದ್ಯಾರ್ಥಿಗಳಿಗೆ ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಅವಶ್ಯಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ವಿಧಾನಗಳನ್ನು ಪತ್ತೆಮಾಡುವುದರ ವೇದಿಕೆಯಾಗಿದೆ. ಅದು ಮಾನಸಿಕವಾಗಿ ಅವರು ಪ್ರಶ್ನೆಗಳನ್ನು ಬಿಡಿಸಿ ಹೊಸದನ್ನು ನಿರ್ಮಿಸುವ ಪ್ರಾವೀಣ್ಯತೆಯನ್ನು ದೊರಕಿಸಿಕೊಳ್ಳುವುದಕ್ಕೆ ಎಡೆಮಾಡಿಕೊಡುತ್ತದೆ.

ಹ್ಯಾಕಥಾನ್ ಎಂಬ ಶಬ್ಧ ಎರಡು ಬೇರೆ ಬೇರೆ ತುಂಡು ಶಬ್ಧಗಳ ಜೊತೆಗೂಡಿ (ಹ್ಯಾಕ್-ಹುಡುಕುವ ಕರ‍್ಯಕ್ರಮ, ಮ್ಯಾರಥಾನ್-ಸುದೀರ್ಘ ಓಟ) ರೂಪುಗೊಂಡಿದೆ. ಹ್ಯಾಕಥಾನ್‌ನ ನಿರ್ದಿಷ್ಟ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಗುಂಪುಗಳು ತಮ್ಮ ವಿಚಾರಗಳನ್ನು ಮಂಡಿಸುತ್ತವೆ. ನಂತರ ಅದರಲ್ಲಿ ಭಾಗವಹಿಸುವವರು ಹೊಸ ವಿಚಾರಗಳನ್ನು ಮುಂದಿಡುತ್ತಾರೆ. ವ್ಯಕ್ತಿಗಳು ತೋರಿಸುವ ಆಸಕ್ತಿ ಮತ್ತು ಕೌಶಲವನ್ನು ಆಧರಿಸಿ ಬೇರೆ ಬೇರೆ ಗುಂಪುಗಳಲ್ಲಿ ಸೇರಿಕೊಳ್ಳುತ್ತಾರೆ. ನಂತರ ಹ್ಯಾಕಥಾನ್‌ನ ಮುಖ್ಯ ಕಾರ್ಯ ಪ್ರಾರಂಭವಾಗುತ್ತದೆ. ಆ ಕಾರ್ಯಕ್ಕೆ ಕೆಲವು ಘಂಟೆಗಳು ಹಿಡಿಯಬಹುದು. ದಿನಗಳು, ವಾರಗಳು ಹಿಡಿಯಬಹುದು. ಅದು ಮುಗಿದ ನಂತರ ಪ್ರತಿಯೊಂದು ಗುಂಪು ತಾನು ಸಾಧಿಸಿದುದನ್ನು ಮಂಡಿಸಿ ಅದರ ಪರಿಣಾಮವನ್ನು ಹೇಳುತ್ತದೆ. ಈ ವಿಚಾರಗಳನ್ನು ಹಾಗೂ ಕಾರ್ಯಪ್ರಗತಿಯನ್ನು ವಿಡಿಯೋ ಮೂಲಕ ಪ್ರದರ್ಶಿಸಬಹುದು. ಅದನ್ನು ತೀರ್ಪುಗಾರರು ಪರಿಶೀಲಿಸಿ ಬಹುಮಾನಕ್ಕೆ ಆಯ್ಕೆ ಮಾಡುತ್ತಾರೆ.

ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡ ಹ್ಯಾಕಥಾನ್ ನಮ್ಮ ದೇಶದಲ್ಲಿ ಔಷಧವನ್ನು ಶೋಧಿಸುವ ಪ್ರಯತ್ನಕ್ಕೆ ಬೆಂಬಲಕೊಡುವ ರಾಷ್ಟ್ರೀಯ ಉಪಕ್ರಮವಾಗಿದೆ. ಅದರಲ್ಲಿ ಬೇರೆ ಬೇರೆ ವೃತ್ತಿಪರರು, ಬೋಧಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್, ಕೆಮಿಸ್ಟ್ರಿ, ಫಾರ್ಮಸಿ, ವೈದ್ಯ ವಿಜ್ಞಾನ, ಮೂಲ ವಿಜ್ಞಾನ ಮತ್ತು ಬಯೋಟೆಕ್ನಾಲಜಿ ವಿಭಾಗಗಳಿಗೆ ಸೇರಿದವರಾಗಿರುತ್ತಾರೆ.

ಇದರಲ್ಲಿ ಭಾಗವಹಿಸುವವರು ನಿರ್ದಿಷ್ಟ ಔಷಧ ಶೋಧದ ಪ್ರಶ್ನ್ ಕೊಡಮಾಡಿರುವ ಸ್ಫರ್ಧೆಯನ್ನು ಎದುರಿಸಿ ಜಯಶಾಲಿಯಾಗಬೇಕಿದೆ. ಅದಕ್ಕಾಗಿ 29 ಬೇರೆ ಬೇರೆ ಪ್ರಶ್ನೆಗಳ ಸರಮಾಲೆಯನ್ನು ಗುರುತಿಸಲಾಗಿದೆ. ಈ ಹ್ಯಾಕಥಾನ್‌ನಲ್ಲಿ ಜಗತ್ತಿನ ಬೇರೆ ಬೇರೆ ಕಡೆ ಇರುವ ವೃತ್ತಿಪರರು ಮತ್ತು ಸಂಶೋಧಕರು ಭಾಗವಹಿಸಬಹುದಾಗಿದೆ.

ಇದಕ್ಕಾಗಿ ಮೂರು ಮಾರ್ಗಗಳಿವೆ. ಮೊದಲನೆಯದು ಔಷಧದ ರಚನೆಗೆ ಸಂಬಂಧಿಸಿದೆ. ಎರಡನೆಯದು ಅದರ ವಿನ್ಯಾಸ, ಹೊಸಸಾಧನಗಳು ಮತ್ತು ಕ್ರಮಾವಳಿಯನ್ನು ರೂಪಿಸುವುದಕ್ಕೆ ಸಂಬಂಧಿಸಿದೆ. ಅದರಿಂದ ಔಷಧ ಶೋಧದ ವಿಧಾನ ಫಲಪ್ರದಮಾಡುವುದರಲ್ಲಿ ತುಂಬ ಪ್ರಭಾವಿತಗೊಳ್ಳುವುದು. ಮೂರನೆಯ ಮಾರ್ಗ ಚಂದ್ರನತ್ತ ಎಸೆದಂತೆ. ಅದು ನಿಸರ್ಗ ಹೊರಹಾಕಿದ ಗುಟ್ಟುಗಳನ್ನು ಬಿಡಿಸುವ ಕಾರ್ಯ. ಸರಕಾರವು ಈ ಎಲ್ಲ ಕಸರತ್ತುಗಳನ್ನು ಮುಂದಿನ ಬೇಸಿಗೆಯ ವೇಳೆಗೆ ಮುಗಿಸಬೇಕು.

ದೇಶದಲ್ಲಿ ಈ ಬಗೆಯ ಪ್ರಯತ್ನದಿಂದ ಲೆಕ್ಕಹಾಕಿ ಮಾಡುವ ಔಷಧ ಶೋಧನೆಯ ಸಂಸ್ಕೃತಿ ಬಲವಾಗಿ ಬೇರೂರಬಲ್ಲದು. ಅದರಿಂದ ಔಷಧ ಶೋಧನೆ ಕಾರ್ಯಕ್ರಮ ವೇಗಗತಿಯನ್ನು ಪಡೆದುಕೊಳ್ಳುತ್ತದೆ. ಈ ದಿಶೆಯಲ್ಲಿ ನವನಿರ್ಮಿತಿಕೋಶ ಮತ್ತು ತಾಂತ್ರಿಕ ಶಿಕ್ಷಣ ಕೌನ್ಸಿಲ್, ಹ್ಯಾಕಥಾನ್ ಮೂಲಕ ಅಂತಃಸತ್ವದ ಔಷಧ ಕಣಗಳನ್ನು ಗುರುತಿಸುವ ಕಾರ್ಯದತ್ತ ಕೇಂದ್ರೀಕರಿಸುವುದು, ಹೀಗೆ ಗುರುತಿಸಲ್ಪಟ್ಟ ಅಣುಗಳನ್ನು ಸಂಯೋಜನೆ ಮಾಡಿ, ಅವುಗಳ ಸಾಮರ್ಥ್ಯ, ವಿಷಾರಿ ಲಕ್ಷಣ, ನಿರ್ದಿಷ್ಟ ಪ್ರಭಾವ ಬೀರುವ ಸಾಮರ್ಥ್ಯದ ವಿವರಗಳ ಪರಿಶೀಲನೆ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಕೌನ್ಸಿಲ್‌ನಿಂದ ನಡೆಯಲಿದೆ.

ಯಾವುದೇ ಔ಼ಷಧವನ್ನು ಶೋಧಿಸುವುದು ತುಂಬ ಸಂಕೀರ್ಣಕಾಯಕ. ಅದಕ್ಕೆ ಸಾಕಷ್ಟು ವೆಚ್ಚ ತಗಲುವುದು ಅದನ್ನು ತುಂಬಾ ಪರಿಶ್ರಮದಿಂದ ಕೈಕೊಳ್ಳಬೇಕು. ಅದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಇಂದು ಕೋವಿಡ್-19ರ ಚಿಕಿತ್ಸೆಗೆ ಅನೇಕ ಔಷಧಿಗಳನ್ನು ಪ್ರಯೋಗಮಾಡಿ ನೋಡಲಾಗುತ್ತಿದೆ. ಆದರೆ ಅದು ಸಂಪೂರ್ಣ ಯಶಸ್ಸು ಕಂಡಿಲ್ಲ. ಅದಕ್ಕೆ ಹಿಂದೆ ಬೇರೆ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುತ್ತಿದ್ದ ಔಷಧಿಗಳು ಪರಿಣಾಮಕಾರಿಯೋ ಹೇಗೆ ಎಂಬುದನ್ನೂ ನೋಡಲಾಗುತ್ತಿದೆ. ಅದರ ಜೊತೆಯಲ್ಲಿ ಹೊಸ ಹೊಸ ಪ್ರಭಾವಶಾಲಿ ಔಷಧಿಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.

ಇoದು ಕಂಡುಹಿಡಿಯಬೇಕೆಂದಿರುವ ಸಿಲಿಕೋ ಔಷಧ (ಕಂಪುಟೇಷನಲ್ ಮೆಡಿಸಿನ್) ಯಾಂತ್ರಿಕ ಕಲಿಕೆ, ಕೃತಕ ಬುದ್ಧಿಮತ್ತೆ, ಮತ್ತು ಬೃಹತ್ ಅಂಕಿ ಅಂಶಗಳನ್ನು ಬಳಕೆ ಮಾಡಲಾಗುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂಪ್ಯೂಟರ್ ಅನುಕರಣೆಯನ್ನು ಬಳಸಲಾಗುತ್ತದೆ. ಜೈವಿಕ ಮತ್ತು ವೈದ್ಯಕೀಯ ಕಾರ್ಯಕ್ರಿಯೆಗಳ ಮಾದರಿ, ಅನುಕರಣೆ (ಸಿಮ್ಯುಲೇಷನ್) ಮತ್ತು ದರ್ಶನವನ್ನು ಮಾಡಬೇಕಿದೆ. ಮಿಥ್ಯಾಪರಿಸರದಲ್ಲಿ ವಾಸ್ತವ ಜೈವಿಕ ಕ್ರಿಯೆಗಳ ಅನುಕರಣೆ ಮಾಡುವ ಗುರಿಯನ್ನು ಅದು ಇಟ್ಟುಕೊಂಡಿರುತ್ತದೆ. ಅದು ನಿಜಕ್ಕೂ ಜೈವಿಕ ವ್ಯವಸ್ಥೆಯ ಗಣಿತ ಮಾದರಿಗಳ ಮುಂದುವರಿದ ಭಾಗ. ಅದನ್ನು ತಳಿವಿಜ್ಞಾನ, ಶರೀರ ಕ್ರಿಯಾವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನದಲ್ಲಿ

ಬಳಸಲಾಗುತ್ತಿದೆ. ಇಂದು ಲಭ್ಯವಿರುವ ಕಂಪುಟೇಷನಲ್ ಮೆಡಿಸಿನ್ ಸಾಮರ್ಥ್ಯ ಸಂಕೀರ್ಣ-ವ್ಯವಸ್ಥೆಗಳ ಮಾದರಿಯನ್ನು ರೂಪಿಸಲು ಸಹಾಯಕವಾಗಿದೆ. ಅದರ ಬಳಕೆಯಿಂದ ವೈದ್ಯಕೀಯದಲ್ಲಿ ಬಳಸುವ ವಸ್ತುವಿನ ಉಪಯುಕ್ತತೆ ಮತ್ತು ಅದು ಕೊಡಮಾಡುವ ಪ್ರತಿಕೂಲ ಪರಿಣಾಮವನ್ನು, ಔಷಧ ಕಂಡುಹಿಡಿಯುವ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಮಾಡಬಹುದು. ಅದನ್ನು ಪ್ರಾಣಿಗಳ ಮೇಲಿನ ಪ್ರಯೋಗಕ್ಕೆ ಬದಲಿಯಾಗಿ ಉಪಯೋಗಿಸಬಹುದು.

ಈ ರೀತಿಯ ಹ್ಯಾಕಥಾನ್ ಅನ್ನು ಹಿಂದೆ ಈ ಸಂಸ್ಥೆಗಳು ವ್ಯವಸ್ಥೆ ಮಾಡಿದ್ದರೂ, ಇಂದು ನಮಗೆ ವೈಜ್ಞಾನಿಕವಾಗಿ ಸ್ಫರ್ಧೆಯನ್ನೊಡ್ಡಿದ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಹ್ಯಾಕಥಾನ್ ಮಾದರಿಯನ್ನು ಮೊದಲಬಾರಿ ಬಳಕೆಮಾಡಲಾಗಿದೆ. ಈ ಕಾರ್ಯದಲ್ಲಿ ದೇಶಿಯರು, ವಿದೇಶಿಯರು ಎಲ್ಲರೂ ಕೈಜೋಡಿಸಿ ಯಶಸ್ಸು ಕಾಣಬೇಕಿದೆ. ಈ ಹ್ಯಾಕಥಾನ್ ಔಷಧ ಕಂಡುಹಿಡಿಯುವ ಪ್ರಯತ್ನ ಹೊಸ ಮಾದರಿಯಾಗಿ ಪರಿಣಮಿಸುತ್ತದೆಂದು ಎಲ್ಲರೂ ಆಶಾವಾದದಿಂದ ನೋಡುತ್ತಿದ್ದಾರೆ. ಕೋವಿಡ್-19ನ್ನು ಮಣಿಸಲು ಬೇಕಾದ ಮದ್ದು ಪಡೆಯುವಲ್ಲಿ ಹ್ಯಾಕಥಾನ್ ಯಶಸ್ವಿಯಾಗಲಿ. ಈ ಸ್ಫರ್ಧೆಯ ಬೇರೆ ಬೇರೆ ಘಟ್ಟದಲ್ಲಿ ಗುಂಪುಗಳ ಕಾರ್ಯಕ್ಕೆ ಯಶಸ್ಸು ದೊರೆತು ಕೋವಿಡ್ ಸೆಣೆಸುವ ಔಷಧಿ ಅನಾವರಣಗೊಳ್ಳಲಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content