ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 30, 2005 (ಸರ್ಕಾರಿ ಆದೇಶ ಸಂಖ್ಯೆ: ವಿಯಇ 70 ವಿತ್ರಮ 2004)ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸರ್ಕಾರವು ಸ್ಥಾಪಿಸಿತ್ತು. ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾಯಿದೆ 1960 ರಡಿಯಲ್ಲಿ ಏಪ್ರಿಲ್ 06, 2009 ರಂದು ನೊಂದಾಯಿಸಿರುತ್ತದೆ.
ಅಕಾಡೆಮಿಯು, ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವ ಮತ್ತು ಈ ಕ್ಷೇತ್ರಗಳಲ್ಲಾದ ಪ್ರಗತಿಯ ಬಗ್ಗೆ ತಿಳುವಳಿಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.
ಪ್ರಸ್ತುತ ಅಕಾಡೆಮಿಯು ಪ್ರಮುಖ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರು ಮತ್ತು ವಿಶೇಷ ಆಹ್ವಾನಿತರು ಸೇರಿ ಒಟ್ಟು 15 ಸದಸ್ಯರನ್ನು ಹೊಂದಿದೆ.