ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್-19 ನಂತರದ ಶಿಕ್ಷಣ, ಪ್ರಾಣಿಶಾಸ್ತ್ರದಲ್ಲಿ ಸಂಶೋಧನೆ ಮತ್ತು ಜನಾರೋಗ್ಯ ಸಂರಕ್ಷಣೆ – ಪ್ರೊ. ಕತ್ರೆ ಶಕುಂತಲಾ

1 min read

ಅ. ಶಿಕ್ಷಣ ಕ್ಷೇತ್ರ

ನಮ್ಮ ದೇಶದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಸಂಪೂರ್ಣ ನಿರ್ಬಂಧವನ್ನು ಹೇರಿದ್ದರಿಂದ (Lockdown) ವಿವಿಧ ಸ್ಥರಗಳ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಇದರಿಂದ ಮುಖಾಮುಖಿ ಬೋಧನೆಗೆ ಬದಲಾಗಿ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಹಲವಾರು ಕಾರಣಗಳಿಂದ ಈ ರೀತಿಯ ಬೋಧನೆ ತೃಪ್ತಿದಾಯಕವಾಗಿಲ್ಲ:

  • ಭಾರತೀಯ ಶಿಕ್ಷಣ ಪರಿಸರದಲ್ಲಿ ಸಾಮಾನ್ಯವಾಗಿ ಶಿಕ್ಷಣದ ಎಲ್ಲಾ ಸ್ಥರಗಳಲ್ಲೂ ಸಾಂಪ್ರದಾಯಿಕವಾದ ಮುಖಾಮುಖಿ ಬೋಧನೆ ಚಾಲ್ತಿಯಲ್ಲಿದೆ. ನಮ್ಮ ಶಿಕ್ಷಕರು ಈ ರೀತಿಯ ಬೋಧನಾ ವಿಧಾನಕ್ಕೆ ಹೊಂದಿಕೊಂಡಿದ್ದು, ಅದರಲ್ಲಿ ಮಾತ್ರ ಸಮರ್ಥರಾಗಿದ್ದಾರೆ. ಆದರೆ, ಇತ್ತೀಚಿಗೆ ಜಾಗತಿಕವಾಗಿ ಗಣಕಯಂತ್ರ-ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಗೆ ಹೆಚ್ಚಿನ ವೆಚ್ಚವಾಗುತ್ತಿರುವುದರಿಂದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗಿಂತ ಖಾಸಗಿ ಸಂಸ್ಥೆಗಳಲ್ಲಿ ಗಮನಾರ್ಹವಾಗಿ ಮತ್ತು  ತ್ವರಿತವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ವಾಸ್ತವ, ಏಕೆಂದರೆ ಹಲವಾರು ಖಾಸಗಿ ಕಂಪನಿಗಳು ತಂತ್ರಜ್ಞಾನ ಆಧಾರಿತ ಮತ್ತು ವಿಷಯಾಧಾರಿತ ವಿದ್ಯುನ್ಮಾನ ಪರಿಹಾರಗಳನ್ನು (e-solutions) ಅತಿ ಹೆಚ್ಚು ಬೆಲೆಗೆ ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದು, ಅವುಗಳನ್ನು ಕೊಂಡುಕೊಳ್ಳಲು ಸಾಧ್ಯವಿರುವ ಖಾಸಗಿ ಸಂಸ್ಥೆಗಳು ಮಾತ್ರ ಖರೀದಿಸುತ್ತಿವೆ. ಖಾಸಗಿ ಮತ್ತು ಅನುದಾನ ರಹಿತ ಸಂಸ್ಥೆಗಳಲ್ಲೂ ಸಹ, ಆದಾಯಕ್ಕೆ ಶುಲ್ಕವನ್ನೇ ಅವಲಂಭಿಸಿರುವ ಸಂಸ್ಥೆಗಳು ಸಾರ್ವಜನಿಕ ಸಂಸ್ಥೆಗಳಿಗಿಂತ ಭಿನ್ನವಾಗಿಲ್ಲ.
  • ಆದಾಗ್ಯೂ, ಸರ್ಕಾರವು ಸರ್ಕಾರಿ-ಅನುದಾನಿತ ಸಂಸ್ಥೆಗಳ ಶಿಕ್ಷಕರ ತರಬೇತಿಯನ್ನು  (ವಿಶೇಷವಾಗಿ ಶಾಲೆಗಳಲ್ಲಿ) ತಂತ್ರಜ್ಞಾನ-ಆಧಾರಿತ ಕಲಿಕಾ ಯೋಜನೆಯಡಿ (Technology Aided Learning Program– TALP) ನೀಡಲು ಪ್ರಯತ್ನಿಸುತ್ತಿದೆಯಲ್ಲದೇ, ಚಳ್ಳಕೆರೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಘಟಕವು ಸಹ ವಿಷಯಾಧಾರಿತ ಮತ್ತು ತಂತ್ರಜ್ಞಾನ-ಆಧಾರಿತ ತರಬೇತಿಯನ್ನು (ಸಿದ್ಧಾಂತ ಮತ್ತು ಪ್ರಯೋಗ) ಶಾಲಾ ಶಿಕ್ಷಕರುಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ನೀಡಿ ಸಾಕಷ್ಟು ಉತ್ತೇಜನವನ್ನು ನೀಡಿದೆ. ಈ ತರಬೇತಿಯು ಶ್ರೇಣೀಕೃತ ಪರಿಣಾಮ (Spiraling Effect) ಹೊಂದಿದ್ದು, ನಮ್ಮ ಹಲವಾರು ಶಿಕ್ಷಕರು ಮತ್ತು ಉಪನ್ಯಾಸಕರು ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮವನ್ನು (TALP) ಅನುಷ್ಠಾನಗೊಳಿಸಿರುವುದ್ದಲ್ಲದೇ, ತಮ್ಮ ಸಂಸ್ಥೆಗಳಿಗೆ ಹಿಂದಿರುಗಿದ ನಂತರ ತಮ್ಮ ಉಪನ್ಯಾಸಗಳ ಹಲವಾರು ವೀಡಿಯೋಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವುಗಳಲ್ಲಿ ಹಲವಾರು ವೀಡಿಯೋಗಳು ಬಹಳ ಜನಪ್ರಿಯವಾಗಿವೆ ಮತ್ತು ಹಲವಾರು ಸರ್ಕಾರಿ ಶಾಲಾ/ಕಾಲೇಜು ಶಿಕ್ಷಕರು ತಮ್ಮ ಇಂತಹ ಪ್ರಯತ್ನಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
  • ಕೋವಿಡ್ ಸಮಯದ ಲಾಕ್‌ಡೌನ್ ಪರಿಸ್ಥಿತಿಯಿಂದ ಶಿಕ್ಷಣದ ಎಲ್ಲಾ ಸ್ಥರಗಳ ಎಲ್ಲಾ ಶಿಕ್ಷಕರು ತಂತ್ರಜ್ಞಾನ-ಆಧಾರಿತ ಬೋಧನೆ-ಕಲಿಕೆ ಪ್ರಯತ್ನಗಳನ್ನು ಅನಿವಾರ್ಯವಾಗಿ ಮಾಡಬೇಕಾಗಿದೆ. ಆದರೆ ಶಿಕ್ಷಕರಾಗಲಿ ಅಥವಾ ಶಿಕ್ಷಣ ಸಂಸ್ಥೆಗಳಾಗಲಿ ಇದಕ್ಕೆ ಸಿಧ್ದವಾಗಿಲ್ಲವೇಕೆಂದರೆ, ಹಲವರಿಗೆ ತರಬೇತಿ/ಪರಿಣಿತಿ ಇಲ್ಲದಿರುವುದರಿಂದ ಹಾಗೂ ಮಾಹಿತಿ-ತಂತ್ರಜ್ಞಾನ ಮತ್ತು ಸಂವಹನಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯದ ಅಲಭ್ಯತೆ ಮತ್ತು ಆಡಳಿತಾತ್ಮಕ/ ತಾಂತ್ರಿಕ ಬೆಂಬಲದ ಕೊರತೆಗಳು ಕಾರಣವಾಗಿವೆ. ಅಲ್ಲದೇ, ಹಲವು ಶೈಕ್ಷಣಿಕ ಸಾಮಗ್ರಿಗಳು ಬೈಜುಸ್/ ಖಾನ್ ಅಕಾಡೆಮಿ/ ಟಾಟಾ ಸ್ಟ್ರೈಡ್ ಮುಂತಾದ ಸಂಸ್ಥೆಗಳಿಂದ ದೊರಕುತ್ತಿದ್ದು, ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಆಸಕ್ತಿಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಸೂಕ್ತ ಸರ್ಚ್ ಇಂಜಿನ್‌ಗಳಿಂದ ಮಾರ್ಗದರ್ಶನವನ್ನೂ ಸಹ ಪಡೆದುಕೊಳ್ಳುತ್ತಿದ್ದಾರೆ. ಈ ಅಭ್ಯಾಸವು ಕೆಲವು ದಶಕಗಳಿಂದ ಚಾಲ್ತಿಯಲ್ಲಿದ್ದು, ಕೋವಿಡ್ ಸಮಯದ ಲಾಕ್‌ಡೌನ್‌ಗೂ ಅದಕ್ಕೂ ಸಂಬಂಧವಿಲ್ಲ. ಇಂತಹ ಪ್ರಯತ್ನಗಳನ್ನು, ಬದಲಾವಣೆ ತರಲು ಇಚ್ಛೆಯಿರುವ ಕೆಲವು ಉತ್ಸಾಹಿ ಶಿಕ್ಷಕರು ಮಾಡಿರುವುದು ವಾಸ್ತವವಾದರೂ, ಎಲ್ಲಾ ಶಿಕ್ಷಕರು ಇಂತಹ ಪ್ರಯತ್ನಗಳನ್ನು ಮಾಡಿರುವುದಿಲ್ಲ.
  • ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ಅವಲಂಬಿಸಿದ್ದು, ಸೂಕ್ತವಾಗಿ ಯೋಜಿಸಿದ ಆನ್‌ಲೈನ್ ತಂತ್ರಜ್ಞಾನ ಕಲಿಕೆಯ ಬದಲಾಗಿ ಕೇವಲ ದುರ್ಬಲವಾದ “ತುರ್ತು ದೂರ ಬೋಧನೆ ಕಲಿಕೆ” ಯನ್ನು (Emergency Remote Teaching Learning – ERTH) ಅಳವಡಿಸಿದ್ದಾರೆ ಎಂಬುದು ಯೋಚಿಸಬೇಕಾದ ವಿಷಯವಾಗಿದೆ. ಒಂದು ಸರಿಯಾದ ಆನ್‌ಲೈನ್ ಕಲಿಕೆಗೆ ಬಹಳಷ್ಟು ಪೂರ್ವಭಾವಿ ತಯಾರಿಯ ಅಗತ್ಯವಿದ್ದು, ಚೆನ್ನಾಗಿ ಯೋಜಿಸಿ ತಯಾರಿಸಿದ ವಿಷಯಗಳು, ಯೋಜಿತ ವೇಳಾಪಟ್ಟಿ ಮತ್ತು ನಿರಂತರವಾಗಿ ಲಭ್ಯವಿರುವ ನೆಟ್‌ವರ್ಕ್ ಸಂಪರ್ಕ ಹಾಗೂ ದೂರಕಲಿಕಾ (Distance Learning) ಕಾರ್ಯಕ್ರಮಗಳಿಗೆ ಅಗತ್ಯವಿರುವ ಇತರ ಪರಿಕರಗಳ ಅವಶ್ಯಕತೆ ಇಂದು ವಿಶ್ವಾದ್ಯಂತ ಬೇಕಾಗಿರುವುದು. ಸಂಪೂರ್ಣವಾಗಿ ಆನ್‌ಲೈನ್ ಕಲಿಕೆಗೆ ಬದಲಾಗಿ ಸಂಯೋಜನೆ ಕಲಿಕೆ (Blended Learning) ಅಥವಾ ಹೈಬ್ರಿಡ್ ಕಲಿಕಾ ವಿಧಾನಗಳು  ಹೆಚ್ಚು ಪರಿಣಾಮಕಾರಿ ಎಂದು ಪ್ರತಿಪಾದಿಸಲಾಗುತ್ತಿದೆ. ಇದಕ್ಕೂ ಸಹ ವ್ಯವಸ್ಥಾಪಕರು/ಆಡಳಿತ ಮಂಡಳಿ ಮತ್ತು ಶಿಕ್ಷಕರು ಬಹಳಷ್ಷು ಯೋಜಿಸಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಆದಕಾರಣ, ಲಾಕ್‌ಡೌನ್‌ನಿಂದ ಆದಂತಹ ಅನುಭವವನ್ನು ಆಧರಿಸಿ, ಈಗ ಸೂಕ್ತ ತರಬೇತಿ ಮತ್ತು ಮೂಲಭೂತ ಸೌಕರ್ಯಗಳ ಅಳವಡಿಕೆಯಿಂದ ಸಂಸ್ಥೆಗಳಲ್ಲಿ ಯೋಜಿತ ಆನ್‌ಲೈನ್ ಶಿಕ್ಷಣಕ್ಕೆ ಕನಿಷ್ಟ ಪಕ್ಷ ಭಾಗಶ: ಬದಲಾವಣೆಗೊಳ್ಳಲು ಅನುವಾಗುವುದು. ತಂತ್ರಜ್ಞಾನ ಆಧಾರಿತ ಕಲಿಕಾ ಯೋಜನೆ ಮತ್ತು ಸಮಾನ ರೂಪದ ತರಬೇತಿ ಅಂಶಗಳನ್ನು ಎಲ್ಲ ಶಿಕ್ಷಕರಿಗೂ ಕಡ್ಡಾಯಗೊಳಿಸಿ (ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಸಂಸ್ಥೆ), ಅವರ ಬೋಧನಾ ಕೌಶಲ್ಯವನ್ನು ಉತ್ತಮಗೊಳಿಸುವುದು ಮತ್ತು ಅವರುಗಳು ತಮ್ಮ ವ್ಯಕ್ತಿ ಚಿತ್ರದ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಮಾತ್ರವಲ್ಲದೇ, ಸ್ಪರ್ಧಾತ್ಮಕ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಅನುವಾಗುವುದು.

ಈಗ ಬಹಳ ಮುಖ್ಯವಾದ ವಿಷಯವೆಂದರೆ, ಲಾಕ್‌ಡೌನ್ ತೆರವುಗೊಳಿಸಿದ ನಂತರ ಶಿಕ್ಷಣ ಸಂಸ್ಥೆಗಳನ್ನು ಪುನ: ತೆರೆಯಲು ಬಹಳಷ್ಟು ಪೂರ್ವಸಿದ್ಧತೆ ಮಾಡಿಕೊಂಡು, ಅನುಷ್ಠಾನಗೊಳಿಸಬೇಕಾಗುವುದು.  ಅಲ್ಲದೇ, ಒಂದೇ ತೆರೆನಾದ ಕಾರ್ಯತಂತ್ರ ಎಲ್ಲಾ ಪರಿಸ್ಥಿತಿಗೂ ಹೊಂದುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಪೂರ್ವ ಬಾಲ್ಯಾವಧಿ ಶಿಕ್ಷಣದಿಂದ (Early Childhood Education) ಪ್ರಾರಂಭಿಸಿ ಪ್ರತಿ ಶೈಕ್ಷಣಿಕ ಹಂತದಲ್ಲೂ, ಅಂದರೆ ನರ್ಸರಿ, ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಗಳನ್ನು ಒಳಗೊಂಡಂತೆ ಪ್ರತಿಯೊಂದು ಹಂತಕ್ಕೂ ತನ್ನದೇ ಆದ ವಿಶಿಷ್ಟ ಸನ್ನಿವೇಶ, ಅಗತ್ಯ ಮತ್ತು ಪೋಷಕರ ಆತಂಕಗಳಿರುತ್ತವೆ. ಆದಕಾರಣ, ಪ್ರತಿ ಸನ್ನಿವೇಶವನ್ನೂ ಸಂಪೂರ್ಣವಾಗಿ ಪರೀಕ್ಷಿಸಿ, ಅತ್ಯುತ್ತಮ ಫಲಿತಾಂಶವನ್ನು ನೀಡುವಂತೆ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಉಸ್ತುವಾರಿ ಶಿಕ್ಷಕರು, ಸಂಸ್ಥೆಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಗಳು ಆಯಾ ಸಂಸ್ಥೆಗಳ ಶುದ್ಥೀಕರಣ ಮತ್ತು ಸಂಸ್ಥೆಯಲ್ಲಿರುವ ಸಮಯದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಪಾಡಲು, ಕಲಿಕಾ ಸಾಮಗ್ರಿಗಳನ್ನು ಹಂಚುವಾಗ ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ಸಂಸ್ಥೆಗೆ ಪ್ರತ್ಯೇಕವಾದ ಮತ್ತು ನಿರ್ದಿಷ್ಟ ಶಿಕ್ಷಣ ಹಂತಕ್ಕೆ ಹೊಂದುವ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಮೂಲ ಸೌಕರ್ಯ ಮತ್ತು ಬೋಧಕರ ಲಭ್ಯತೆಯು ಬಹಳ ವೈವಿಧ್ಯಮಯವಾಗಿರುವುದರಿಂದ ಅಧಿಕಾರಿಗಳು ನೀಡುವ ಸಾಮಾನ್ಯ ಮಾರ್ಗಸೂಚಿಯಂತೆ ಕರಡು ಯೋಜನೆಯನ್ನು ಪ್ರತಿ ಶಿಕ್ಷಣ ಸಂಸ್ಥೆಯು ರೂಪಿಸಿ, ಸೂಕ್ತವಾದ ಕಲಿಕಾ ಪರಿಸರವನ್ನು ನಿರ್ಮಿಸಿ, ಗರಿಷ್ಠಮಟ್ಟದ ಸುರಕ್ಷತೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಯ ಇತರ ಘಟಕಗಳಿಗೆ ಒದಗಿಸಬೇಕಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಯೂ ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತು, ಎಲ್ಲಾ ಸಮಯದಲ್ಲೂ ತನಿಖೆಗೆ ಮುಕ್ತವಾಗಿರಬೇಕು, ಸಂಸ್ಥೆಗೆ ನಿರ್ದಿಷ್ಟವಾದ ಅಪಾಯ ನಿರ್ವಹಣಾ ತಂಡಕ್ಕೆ ಕಾರ್ಯತಂತ್ರವನ್ನು ಯೋಜಿಸುವ ಹೊಣೆಗಾರಿಕೆಯಿರಬೇಕು ಹಾಗೂ ಅಧಿಕಾರಿಗಳ ಮಾಹಿತಿಗಾಗಿ ಮತ್ತು ಅಗತ್ಯವಿದ್ದಾಗ ಅನುವಾಗುವಂತೆ ನಿರಂತರವಾಗಿ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಪೋಷಕರ ಮನಸ್ಸಿನಲ್ಲಿನ ಭಯ ಮತ್ತು ಮೂಲ ಸೌಕರ್ಯದ ಕೊರತೆಯಿಂದ ಕಡ್ಡಾಯ ಸಾಮಾಜಿಕ ಅಂತರವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಆತಂಕದಿಂದ ಸಂಸ್ಥೆಗಳಲ್ಲಿ ಪ್ರವೇಶ ಕಡಿಮೆಯಾಗುವ ಮುನ್ಸೂಚನೆಯನ್ನು ಗ್ರಹಿಸಿ, ಸೂಕ್ತವಾದ ಕಾರ್ಯತಂತ್ರವನ್ನು ಪ್ರತಿ ಸಂಸ್ಥೆಯು ರೂಪಿಸಿ, ಆದಾಯದಲ್ಲಿನ ನಷ್ಟವನ್ನು ತಗ್ಗಿಸುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ (ಕನಿಷ್ಟ ಪಕ್ಷ ಶಾಲಾ ಮಟ್ಟದಲ್ಲಿ) ಮಲ್ಟಿಮೀಡಿಯ ಸಾಮಗ್ರಿಗಳನ್ನು ದ್ವಿಭಾಷಾ ಮಾಧ್ಯಮದಲ್ಲಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ನೀಡುವುದು ಸೂಕ್ತ. ಅಂತಹ ಸಾಮಗ್ರಿಗಳು ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ ಅದರಿಂದಾಚೆಗಿನ ಪೂರಕ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರೆ ವಿಜ್ಞಾನ, ತಂತ್ರಜ್ಞಾನ ಹಾಗೂ ಕೌಶಲ್ಯ-ಅಭಿವೃದ್ಧಿಯನ್ನು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುಂದುವರೆಸಲು ಉತ್ತೇಜನ ನೀಡಿದಂತಾಗುವುದು. ಈ ರೀತಿಯ ಮಾಹಿತಿಯನ್ನು ಅಭಿವೃದ್ಧಿ ಪಡಿಸುವಾಗ ಅಕಾಡೆಮಿಯು ಹೆಸರಾಂತ ಶಿಕ್ಷಕರು ಮತ್ತು ವಿದ್ವಾಂಸರ ಸಲಹೆಯನ್ನು ಪ್ರತಿ ಹಂತದಲ್ಲೂ ಪಡೆದು ಮಲ್ಟಿಮೀಡಿಯಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು. ಆನಂತರ ಉನ್ನತ ಶಿಕ್ಷಣದಲ್ಲಿ ಅಭಿವೃದ್ಧಿಪಡಿಸಿದ ವಿಷಯಗಳನ್ನು ಪರಿಶೋಧಿಸಲು ಮತ್ತು ಅನುಮೋದಿಸಲು ಹೊರಗಿನ ತಜ್ಞರನ್ನು ಬಳಸಿಕೊಳ್ಳುವುದು. ಇದರಿಂದ ಶಿಕ್ಷಣದ ಎಲ್ಲಾ ಹಂತಗಳಲ್ಲೂ ಗುಣಮಟ್ಟದ ಕಲಿಕಾ ಸಂಪನ್ಮೂಲ ದೊರೆಯಲು ಅನುವಾಗುವುದು.

ತಂತ್ರಜ್ಞಾನ-ಆಧಾರಿತ ಕಲಿಕೆಗೆ ಪ್ರಾಮುಖ್ಯತೆ ನೀಡುವ ಬದಲಾವಣೆಗಳು ಆಗುತ್ತಿರುವುದರಿಂದ ಎಲ್ಲಾ ಶೈಕ್ಷಣಿಕ ಹಂತಗಳಲ್ಲೂ ತಂತ್ರಜ್ಞಾನ ಆಧುನೀಕರಣಗೊಳ್ಳಬೇಕಾಗಿದೆ. ಆದಕಾರಣ, ಅಂತಹ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗಳಿಗೆ ಸೂಕ್ತ ಕಾರ್ಯತಂತ್ರಗಳು/ಮಾದರಿಗಳನ್ನು ರೂಪಿಸುವ ಮೂಲಕ ಸಾಧ್ಯತಾ ಯೋಜನೆಯೊಂದನ್ನು ಹೊರತರುವುದು ಅಗತ್ಯವಾಗಿದೆ.

ಲಾಕ್‌ಡೌನೋತ್ತರದ ಯಾವುದೇ ಸನ್ನಿವೇಶದಲ್ಲಿ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಪ್ರವೇಶ, ಸಮಾನತೆ ಮತ್ತು ಎಲ್ಲರನ್ನು ಒಳಗೊಳ್ಳುವಿಕೆಯ ಬಗ್ಗೆ ಗಮನ ಹರಿಸಬೇಕಾಗಿರುವುದರಿಂದ ವೈಯಕ್ತಿಕ ಕಲಿಕೆ, ಸಾಮರ್ಥ್ಯ ಆಧಾರಿತ ಮತ್ತು ಫಲಿತಾಂಶ ಆಧಾರಿತ ಕಲಿಕೆಗೆ ಒತ್ತು ನೀಡುವ ಸಮಾನಾಂತರ ಬದಲಾವಣೆಯ ಅಗತ್ಯವಿದೆ. ವಿಶೇಷವಾಗಿ ಕೆಳಹಂತಗಳ ಶಿಕ್ಷಣದಲ್ಲಿ ಶಿಕ್ಷಕರಿಗೆ ಬಹು ಬುದ್ಧಿವಂತಿಕೆ ಸಿದ್ಧಾಂತವನ್ನು (Multiple Intelligence) ಅಳವಡಿಸಿಕೊಳ್ಳಲು ತರಬೇತುಗೊಳಿಸಿ, ಕಲಿಕಾ ವೈಕಲ್ಯವಿರುವ ಮತ್ತು ಅಂಗ ವೈಕಲ್ಯವಿರುವ ವಿದ್ಯಾರ್ಥಿಗಳಿಗೂ ಸಹ ಸೂಕ್ತ ತರಬೇತಿ ನೀಡಲು ಅನುವು ಮಾಡಿಕೊಡಬೇಕು. ಲಿಂಗ-ಆಧಾರಿತ ಒಳಗೊಳ್ಳುವಿಕೆಯು ಸೂಕ್ಷ್ಮ ವಿಷಯವಾಗಿದ್ದರೂ ಸಹ ಸೂಕ್ತ ಬಹು ಮುಖ್ಯ ಅಗತ್ಯವೆಂಬುವುದನ್ನು ಮನಗಾಣಬೇಕು.

ಆ) ಪ್ರಾಣಿಶಾಸ್ತ್ರದ ಸಂಶೋಧನೆ

  • ಅನುದಾನ ಸಂಸ್ಥೆಗಳು ಪ್ರಾಣಿಶಾಸ್ತ್ರಕ್ಕೆ ಸಂಬಧಿಸಿದ ಮೂಲ ಸಂಶೋಧನೆಗೆ ಅನುದಾನ ನೀಡಲು ಮುಂದೆ ಬರಬೇಕು (ಸೂಕ್ಷ್ಮ ಜೀವಿ ವಿಜ್ಞಾನ, ಸಾಂಕ್ರಮಿಕ ಅಧ್ಯಯನ, ವೈರಸ್ ಅಧ್ಯಯನ, ಕೋಶಜೀವ ವಿಜ್ಞಾನ, ಆನುವಂಶಿಕ ವಿಜ್ಞಾನ ಮುಂತಾದವುಗಳು)
  • ಮೂಲ ವಿಜ್ಞಾನ ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಸಂಶೋಧಕರ ನಡುವೆ ಹಾಗೂ ಅನ್ವಯಿಕ ಸಂಶೋಧನಾ ಸಂಸ್ಥೆಗಳು/ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೊಂದಿಗೆ ಅರ್ಥಪೂರ್ಣ ಸಂಶೋಧನಾ ಸಹಯೋಗವನ್ನು ಹೆಚ್ಚು ಪ್ರಚಾರ ನೀಡುವ ಮೂಲಕ ಉತ್ತೇಜಿಸುವುದಲ್ಲದೇ, ಸಹಯೋಗ ಹಾಗೂ ಗುರುತಿಸುವಿಕೆಗೆ ಅನುವು ಮಾಡಿಕೊಡುವುದು
  • ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಜವಾಹರಲಾಲ್ ನೆಹರು ಉನ್ನತ ಅಧ್ಯಯನಗಳ ಸಂಸ್ಥೆಗಳಲ್ಲಿ ಮಾಡಲಿಂಗ್ ಕಾರ್ಯವನ್ನು ನಿರ್ವಹಿಸುತ್ತಿರುವ ವಿಜ್ಞಾನಿಗಳಿಗೆ ಹೆಚ್ಚು ಪ್ರಚಾರವನ್ನು ದೊರಕಿಸಿಕೊಟ್ಟು ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ಆಸಕ್ತರ ಪ್ರಯೋಜನಕ್ಕಾಗಿ ಮಾಹಿತಿ ದೊರೆಯುವಂತೆ ಮಾಡುವುದು

ಇ) ಆರೋಗ್ಯ ಸಂರಕ್ಷಣೆ

  • ಹಲವು ಆರೋಗ್ಯ ಸಂರಕ್ಷಣಾ ಕ್ಷೇತ್ರದ ಪರಿಣಿತರು ಈಗಾಗಲೇ ಮಾಡಬಹುದಾದ ಮತ್ತು ಮಾಡದಿರುವ ಅಂಶಗಳ ಬಗ್ಗೆ ತಿಳಿವಳಿಕೆಯನ್ನು ನೀಡಿದ್ದಾರೆ. ಕೋವಿಡ್ ಮತ್ತು ಲಾಕ್‌ಡೌನೋತ್ತರ ಪರಿಸ್ಥಿತಿಯಲ್ಲಿ ಆರೋಗ್ಯ ಸಂರಕ್ಷಣಾ ಸಂಸ್ಥೆಗಳು ಸನ್ನದ್ಧವಾಗಿದ್ದರೆ, ಅಪೇಕ್ಷಿತ ಕಾರ್ಯತಂತ್ರಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಿದಂತಾಗುವುದು
  • ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಯ ಮುನ್ಸೂಚನೆಯನ್ನು ಬಹಳಷ್ಟು ಅಂಕಿ ಸಂಖ್ಯೆ ಮಾಹಿತಿಯ ಮೂಲಕ ನಮಗೆ ತಿಳಿಸಿದೆಯಲ್ಲದೇ, ಜನಸಾಮಾನ್ಯರು ಮತ್ತು ಅಧಿಕಾರಿಗಳು ಏನು ಮಾಡಬೇಕೆಂಬುವುದರ ಬಗ್ಗೆಯೂ ತಿಳಿದು ಬಂದಿದೆ
  • ಗಮನ ಹರಿಸದಿರುವ ಒಂದು ವಿಶೇಷ ಅಂಶವೆಂದರೆ ವಿವಿಧ ಪರಿಸ್ಥಿತಿಯಲ್ಲಿ ಜನರ ಮನಸ್ಥಿತಿ ಹೇಗಿರುವುದೆಂಬುದಾಗಿದೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರಿಗೆ ಸಂಬಂಧಿಸಿದ್ದಾಗಿದ್ದು, ಅವರಲ್ಲಿ ಅತಿ ಹೆಚ್ಚು ಪ್ರಮಾಣದ ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲಿ ಕಂಡುಬಂದಿದೆ. ಶಾಲಾ ಕಾಲೇಜುಗಳಲ್ಲಿ ಇತ್ತೀಚಿನ ಪ್ರವೃತ್ತಿಯೆಂದರೆ ವಿದ್ಯಾರ್ಥಿಗಳು ತಮ್ಮ ನಡುವೆ ಗಾಢವಾದ ಗೆಳೆತನವನ್ನು ಬೆಳೆಸಿಕೊಳ್ಳುವುದು ಹಾಗೂ ಸಂಬಂಧವನ್ನು ಸಹ ಹೊಂದುವುದಾಗಿದೆ. ಕೋವಿಡ್ ನಿರ್ದಿಷ್ಟಮಾನಕ್ಕೆ ಅನುಗುಣವಾಗಿ ಸಾಮಾಜಿಕ ಅಂತರ, ಲಾಕ್‌ಡೌನ್ ಮತ್ತು ಸೋಂಕು ತಗಲುವ ಭಯ ಸಾಕಷ್ಟು ಮಾನಸಿಕ ಪರಿಣಾಮಗಳನ್ನುಂಟುಮಾಡುತ್ತಿದೆ. ಆದಕಾರಣ, ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳ ಮಾನಸಿಕ ಆಪ್ತ ಸಮಾಲೋಚನೆಯ ಅಗತ್ಯತೆಯನ್ನು ಪೂರೈಸುವ  ಮತ್ತು ವಿಶೇಷವಾಗಿ ಗುರುತಿಸಲ್ಪಟ್ಟಿರುವ ಗಂಭೀರ ಪ್ರಕರಣಗಳಲ್ಲಿ ದುರಾದೃಷ್ಟಕರ ಘಟನೆಗಳು ನಡೆಯದಂತೆ ತಡೆಯುವ ಅಗತ್ಯವಿದೆ.
  • ಪೋಷಕರಿಗೂ ಸಹ ಆಪ್ತ ಸಮಾಲೋಚನೆ ಅಗತ್ಯವಿದ್ದು, ಶಿಕ್ಷಣ ಸಂಸ್ಥೆಗಳಿಗೆ ಇದನ್ನು ವ್ಯವಸ್ಥೆಗೊಳಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ವರ್ಚುಯಲ್ ಕಾರ್ಯಾಗಾರಗಳಲ್ಲಿ ಆಪ್ತ ಸಮಾಲೋಚನೆಯನ್ನು ನಿಯಮಿತವಾಗಿ ಏರ್ಪಡಿಸಿ, ಉತ್ತಮ ಬಾಂಧವ್ಯವನ್ನು ಹೊಂದುವ ಮತ್ತು ಉಪಯುಕ್ತವಾದ ಪ್ರತ್ಯುತ್ತರವನ್ನು ಪಡೆಯುವ ಅವಶ್ಯಕತೆಯಿದೆ.
  • ಸಾಮಾನ್ಯವಾಗಿ ಸಾರ್ವಜನಿಕರಿಗೆ ಕೋವಿಡ್ ಸೋಂಕಿಗೆ ಸಂಬಂಧಿಸಿದ ಬಹಳಷ್ಟು ಅಂಕಿ ಅಂಶಗಳನ್ನು ನೀಡಲಾಗುತ್ತಿದ್ದರೂ, ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಇದರಿಂದ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರು ಮತ್ತು ೬೦-೬೫ ವರ್ಷ ವಯಸ್ಸಿನ ವಯೋವೃದ್ಧರ ಮಾನಸಿಕ ಸಮತೋಲನದ ಮೇಲೂ ಪ್ರಭಾವ ಬೀರುತ್ತಿದೆ. ಈ ವಯೋಮಾನಗಳಲ್ಲಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಮಾತ್ರ ಮಾರಣಾಂತಿಕ ಪ್ರಕರಣಗಳು ಹೆಚ್ಚು ಎಂಬ ಮಾಹಿತಿಯನ್ನು ನೀಡಿ, ಹೆಚ್ಚಿನ ಪ್ರಚಾರವನ್ನು ನೀಡಿದರೆ ಹಿರಿಯ ನಾಗರೀಕರಲ್ಲಿ ಮನಸ್ಥೈರ್ಯ ಹೆಚ್ಚಾಗುತ್ತದೆ.
  • ವೈಯಕ್ತಿಕ ರೋಗ ನಿರೋಧಕ ಶಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿದರೆ ಓದುಗರಿಗೆ ಅನುಕೂಲವಾಗುವುದು.
  • ಮತ್ತೊಂದು ಗಂಭೀರವಾಗಿ ಆಲೋಚಿಸಬೇಕಾದ ವಿಷಯವೆಂದರೆ (ನನ್ನ ಮಟ್ಟಿಗೆ) ಪರಿಸ್ಥಿತಿಯ ಗಂಭೀರತೆಯ ಅರಿವಿಲ್ಲದೇ, ಜನಸಾಮಾನ್ಯರ ಬೇಜವಾಬ್ದಾರಿ ಮನೋಭಾವನೆ, ಧಿಕ್ಕರಿಸುವ ಪ್ರವೃತ್ತಿ ಅಥವಾ ಮಾನವ ದುರ್ಬಲತೆಯಿಂದ ವೈಯಕ್ತಿಕ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಸುಳ್ಳು ಹೇಳುವ ವರ್ತನೆಗಳಿಂದ ಸಾಂಕ್ರಾಮಿಕ ರೋಗವು ವಿವರಿಸಲಾಗದಷ್ಟು ಹೆಚ್ಚು ಹರಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಾವು ಹೇಗೆ ನಿರೀಕ್ಷಿಸುವುದು ಅಥವಾ ನಿಭಾಯಿಸುವುದು?
  • ಕೋವಿಡ್ ಪರಿಸ್ಥಿತಿಯು ಎಷ್ಟು ಕಾಲಾವಧಿಯವರೆಗೆ ಮುಂದುವರೆಯುವುದೆಂಬುದು ಅನಿಶ್ಚಿತತೆಗಳಲ್ಲೊಂದಾಗಿದೆ. ಜನಸಾಮಾನ್ಯರಿಗೆ ಬಹಳ ಹಿಂದಿನ ಕಾಲದ ಯಾವುದೇ ವೈರಸ್ ಸಾಂಕ್ರಾಮಿಕದಂತೆ ಕೋವಿಡ್ ಸಹ ಒಂದು ಎಂಬುವುದರ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸೂಕ್ತವಾಗಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಬದುಕುವುದನ್ನು ಕಲಿಯಬೇಕೆಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಈ ವಿಷಯಕ್ಕೆ ಹೆಚ್ಚಿನ ರೀತಿಯಲ್ಲಿ ಪ್ರಚಾರವನ್ನು ನೀಡಿ ಜನರಲ್ಲಿರುವ ಭಯವನ್ನು ಹೋಗಲಾಡಿಸಬೇಕು ಮತ್ತು ಅವರು ಹೆಚ್ಚು ಜವಾಬ್ಧಾರಿಯುತವಾಗಿ ಇಂತಹ ಪರಿಸ್ಥಿತಿಯಲ್ಲಿ ವರ್ತಿಸಬೇಕೇ ವಿನಹ ಭಯದಿಂದಲ್ಲ. ಇದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುವುದು.
  • ನಿಗದಿತ ಮನೋವೈಜ್ಞಾನಿಕ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ, ಜನಸಾಮಾನ್ಯರಿಗೆ ಅವಶ್ಯಕವಿರುವ ಕಡೆಗಳಲ್ಲಿ ಆನ್‌ಲೈನ್ ಸಹಾಯವನ್ನು ಪಡೆಯಲು ಅಧಿಕಾರಿಗಳು ಅನುವು ಮಾಡಿಕೊಡಬೇಕು. ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರ ಅನುಕೂಲಕ್ಕಾಗಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.

– ಪ್ರೊ. ಕತ್ರೆ ಶಕುಂತಲಾ
ನಿವೃತ್ತ ಡೀನ್ (ವಿಜ್ಞಾನ) ಮತ್ತು ಮುಖ್ಯಸ್ಥರು
ಪ್ರಾಣಿಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
skatre1946@gmail.com

ಇಂಗ್ಲೀಶ್ ಲೇಖನ “Post COVID Education, Research in Animal Sciences and Healthcare” ಅನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದಕ್ಕೆ ಡಾ. ಎ. ಎಂ. ರಮೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕವಿತಂಅ ಇವರಿಗೆ ಧನ್ಯವಾದಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content