ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೃಷಿ ಮೇಲೆ ಕೋವಿಡ್-19ರ ಪರಿಣಾಮ ಮತ್ತು ಮುಂದಿನ ದಾರಿ – ಪ್ರೊ. ಕೆ. ನಾರಾಯಣ ಗೌಡ ಮತ್ತು ಪ್ರೊ. ಎಸ್. ರಾಜೇಂದ್ರ ಪ್ರಸಾದ್

1 min read

ಕೋವಿಡ್-19 ರಿಂದ ಎಲ್ಲಾ ಕ್ಷೇತ್ರಗಳೂ ಪ್ರತಿಭಾವಿತವಾಗಿದ್ದು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಬಹಳ ಗಂಭೀರ ಪರಿಣಾಮವನ್ನುಂಟು ಮಾಡಿದೆ. ರೈತರು ಹಲವು ದಶಕಗಳಿಂದ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ನಿರಂತರವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂದಿನ ಕೋವಿಡ್-19ರ ಸಮಯದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿ, ಹಲವು ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಾದ ಹಣ್ಣು, ತರಕಾರಿ, ಹೂವು ಮುಂತಾದವುಗಳನ್ನು ಕಟಾವು ಮಾಡುತ್ತಿಲ್ಲ, ಏಕೆಂದರೆ ಅವುಗಳಿಗೆ ನೀಡುವ ಬೆಲೆ ಸಾಗುವಳಿ ವೆಚ್ಚವನ್ನು ಸಹ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಅತಿರೇಕದ ಪ್ರಕರಣಗಳಲ್ಲಿ, ಹೆಚ್ಚಿನ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅಂತಹ ರೈತರ ಬಗ್ಗೆ ದಾಖಲೆಗಳು ಕರ್ನಾಟಕದಲ್ಲಾಗಲಿ ರಾಷ್ಟ್ರ ಮಟ್ಟದಲ್ಲಾಗಲಿ ಇರುವುದಿಲ್ಲ. ಕರ್ನಾಟಕ ಸರ್ಕಾರವು ಕಳೆದ ಎರಡು ತಿಂಗಳಿಂದ ಪರಿಹಾರವನ್ನು ನೀಡಿದರೂ, ನಷ್ಟವನ್ನು ಸರಿದೂಗಿಸಲು ಕಷ್ಟಸಾಧ್ಯವೇಕೆಂದರೆ ಅದಕ್ಕೆ ಹಲವು ಸಹಸ್ರಾರು ಕೋಟಿ ರೂಪಾಯಿಗಳ ಅಗತ್ಯವಿದೆ.

ಹಿಮ್ಮುಖ ವಲಸೆಯಿಂದ ಮತ್ತೊಂದು ಅನಿರೀಕ್ಷಿತ ಪರಿಸ್ಥಿತಿ ಉದ್ಬವವಾಗಿದೆ. ಗ್ರಾಮಗಳನ್ನು ತೊರೆದಿದ್ದ ಹಲವು ಯುವಕರು ಅವುಗಳನ್ನು ವೃದ್ಧಾಶ್ರಮಗಳನ್ನಾಗಿಸಿ, ಈಗ ಬೇರೆ ಬೇರೆ ಪರಿಸ್ಥಿತಿ ಮತ್ತು ಕಾರಣಗಳಿಂದ ತಮ್ಮ ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಈ ಯುವಕರು ಹಳ್ಳಿಗಳನ್ನು ತೊರೆಯಲು ಕೃಷಿ ಲಾಭಾದಾಯಕ ಉದ್ಯಮವಲ್ಲವೆಂಬ ಮುಖ್ಯ ಕಾರಣವಲ್ಲದೇ, ವಧು ಅನ್ವೇಷಣೆಗೆ ತೊಡಕಾಗಿರುವುದು, ನಿಶ್ಚಿತವಾದ ಮತ್ತು ಭರವಸೆಯ ಸಮಯೋಚಿತ ಮಾರ್ಗದರ್ಶನ ದೊರೆಯದಿರುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕಳಪೆ ಸೌಲಭ್ಯಗಳು.

ಕೋವಿಡ್-19ರ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ವಲಸೆಯಿಂದ ರೈತರು ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲಾಗದೆ, ಅದರಲ್ಲೂ ವಿಶೇಷವಾಗಿ ಕಬ್ಬು ಮತ್ತು ಇತರ ಬೆಳೆಗಳನ್ನು ಕಟಾವು ಮಾಡದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುನ್ನುಡಿ: ಕೋವಿಡ್-19ರ ಪರಿಣಾಮದಿಂದಾಗಿ ಈ ಎಲ್ಲಾ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರವನ್ನು ನೀಡಲು ಸಾಧ್ಯವಿಲ್ಲವೇಕೆಂದರೆ, ದಿನೇ ದಿನೇ ಸಾಂಕ್ರಾಮಿಕದ ಹರಡುವಿಕೆ ಹೆಚ್ಚುತ್ತಿದೆ. ಈ ಲೇಖನದಲ್ಲಿ ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಸಾಧ್ಯವಿರುವ ಪರಿಹಾರಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಯಶಸ್ವಿ ಅನುಭವಗಳನ್ನು ಆಧರಿಸಿ ನೀಡಲಾಗಿದೆ.

ಆಹಾರ ಮತ್ತು ಪೋಷಣೆ ಭದ್ರತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಏಕೆಂದರೆ ಆರೋಗ್ಯಕರ ಆಹಾರದಿಂದ ದೇಶದ ನಾಗರೀಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದಕಾರಣ, ಪ್ರತಿ ಪ್ರಯತ್ನದಲ್ಲೂ ಅಗತ್ಯವಿರುವ ಆಹಾರ ಉತ್ಪಾದನೆ ಮತ್ತು ಕೃಷಿ ಉತ್ಪನ್ನಗಳೊಂದಿಗೆ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರುವ ಹಾಲು, ಮಾಂಸ, ಮೀನು ಇತ್ಯಾದಿಗಳನ್ನು ಹೆಚ್ಚು ಉತ್ಪಾದಿಸಬೇಕಾಗುತ್ತದೆ.

1. ಹಿಮ್ಮುಖ ವಲಸೆ

ನಗರ ಪರಿಸರದ ಕೆಟ್ಟ ಅನುಭವಗಳಿಂದ ಹಳ್ಳಿಗಳಿಗೆ ಹಿಂದಿರುಗಿದ ಬಹುತೇಕ ಯುವಕರು ಅಲ್ಲೇ ಉಳಿದುಕೊಳ್ಳುವ ಇಚ್ಛೆಯನ್ನು ಹೊಂದಿದ್ದಾರೆ. ಭೂ ರಹಿತರು ಹಾಗೂ ಕಡಿಮೆ ಭೂಮಿ ಮತ್ತು ಸರಾಸರಿ ಭೂಮಿ ಹೊಂದಿರುವ ಕುಟುಂಬಕ್ಕೆ ಸೇರಿದ ವಲಸೆ ಯುವಕರು ಹಾಗೂ ಅಲ್ಪ ಮತ್ತು ಮಧ್ಯಮ ಶಿಕ್ಷಿತ ಯುವಕರು ಇವರಲ್ಲಿ ಸೇರಿದ್ದಾರೆ.

ಈಗ ಅಲ್ಪ ಮತ್ತು ಅತ್ಯಲ್ಪ ಭೂ ಒಡೆತನ ಹೊಂದಿರುವ ಎಲ್ಲಾ ಯುವಕರಿಗೆ ಸಮಗ್ರ ಕೃಷಿಯ ಬಗ್ಗೆ ತರಬೇತಿ ನೀಡುವುದು ಅವಶ್ಯವಾಗಿದೆ. ಆಯಾ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಸಮಗ್ರ ಕೃಷಿಯನ್ನು ಕೈಗೊಂಡಿರುವ ಪ್ರದೇಶಗಳಿಗೆ ತರಬೇತಿ ಮತ್ತು ಸಂದರ್ಶನ ಭೇಟಿಯನ್ನು ಕೈಗೊಳ್ಳುವುದು ಒಳಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2011 ರಿಂದ ಪ್ರತಿವರ್ಷ ಕೃಷಿ ಮೇಳದ ಸಮಯದಲ್ಲಿ ಸಮಗ್ರ ಕೃಷಿಯನ್ನು ಪಾಲಿಸುತ್ತಿರುವ ಒಬ್ಬ ಯುವಕ ಮತ್ತು ಒಬ್ಬಳು ಯುವತಿಯನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡುತ್ತಿದೆ. ಈ ಪ್ರಶಸ್ತಿ ವಿಜೇತರು ಪ್ರತಿಯೊಂದು ಪಂಚಾಯತಿಯಲ್ಲೂ ಲಭ್ಯವಿದ್ದು, ಹೊಸದಾಗಿ ತರಬೇತಿ ಪಡೆದ ಯುವಕರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತಿದ್ದಾರೆ. ಈ ರೀತಿ ತರಬೇತಿ ಹೊಂದಿದ ಯುವಕರಿಗೆ ಎಲ್ಲಾ ಅಭಿವೃದ್ಧಿ ಇಲಾಖೆಗಳು ಬೆಂಬಲ ನೀಡಬೇಕು. ಈ ಕುಟುಂಬಗಳಿಗೆ ಹೈನುಗಾರಿಗೆ, ಕೋಳಿ ಸಾಕಾಣೆ, ಕುರಿ, ಆಡು, ಹಂದಿ, ಜೇನು ಸಾಕಾಣೆ, ಅಣಬೆ ಕೃಷಿಯಲ್ಲದೇ, ಸಿರಿಧಾನ್ಯಗಳು, ದ್ವಿದಳಧಾನ್ಯಗಳು ಮತ್ತು ಎಣ್ಣೆ ಬೀಜಗಳು, ಹಿಪ್ಪನೇರಳೆ, ಮೇವು ಕೃಷಿ, ದೀರ್ಘಕಾಲಿಕ ಮರಗಳಾದ ಹಲಸು, ನೇರಳೆ ಮುಂತಾದವುಗಳನ್ನು ನೆಡುವುದು ಹಾಗೂ ಪ್ರತಿ ಕುಟುಂಬಕ್ಕೆ ಈ ಎಲ್ಲಾ ಉದ್ಯಮಗಳ ಸಂಯೋಜನೆಯ ಬಗ್ಗೆ ತಿಳಿಸಿ ಕೊಡುವುದಕ್ಕೆ ಒತ್ತು ನೀಡುವುದು. ಈ ಪ್ರಕ್ರಿಯೆಯು ಆರ್ಥಿಕತೆಯನ್ನು ಸ್ಥಿರಗೊಳಿಸಲು ನಿರಂತರವಾಗಿ ಉದ್ಯೋಗ ಸೃಷ್ಠಿಸಲು, ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಹಾಗೂ ಆಹಾರ ಮತ್ತು ಪೋಷಣೆ ಭದ್ರತೆ ಸಾಧಿಸಲು ಸಹಕಾರಿಯಾಗುವುದು.

2. ಮೌಲ್ಯ ವರ್ಧನೆ ಮತ್ತು ಸಂಸ್ಕರಣೆ

ನಿರುದ್ಯೋಗಿಗಳಿಗೆ ಉದ್ಯೋಗ, ಕಡಿಮೆ ಉದ್ಯೋಗಸ್ಥ ವಲಸಿಗರಿಗೆ ಉದ್ಯೋಗ ಹಾಗೂ ರೈತರಿಗೆ ಹೆಚ್ಚುವರಿ ಭರವಸೆ ಆದಾಯವನ್ನು ಮೌಲ್ಯ ವರ್ಧನೆ ಮತ್ತು ಸಂಸ್ಕರಣೆ ಮೂಲಕ ಹೆಚ್ಚಿಸುವ ದೊಡ್ಡ ಅವಕಾಶ ರಾಜ್ಯಕ್ಕೆ ದೊರೆತಿದೆ. ಸಾಮಾನ್ಯವಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ವಾರ್ಷಿಕವಾಗಿ ಕೊಯ್ಲೋತ್ತರ ನಷ್ಟ ಗಣನೀಯವಾಗಿದೆ. ಕೆಲವು ಕೃಷಿ ಉತ್ಪನ್ನಗಳಾದ ಜೈವಿಕ ಇಂಧನ ಮತ್ತು ಹುಣಸೆ ಹಣ್ಣಿನ ಫಸಲುಗಳ ಮೂರನೇ ಎರಡಷ್ಟನ್ನು ಕಟಾವು ಮಾಡುವುದಿಲ್ಲ.

ಹಾಗೆಯೇ ಶೇ. 50 ರಷ್ಟು ಹಲಸಿನ ಹಣ್ಣುಗಳು ಮತ್ತು ತರಕಾರಿ ಫಸಲುಗಳಲ್ಲಿನ ವ್ಯತ್ಯಯವಾಗುವ ಪ್ರಮಾಣ ಮತ್ತು ಆರ್ಥಿಕ ನಷ್ಟ ಇವೆರಡರ ಖಚಿತವಾದ ಅಂಕಿ ಅಂಶಗಳನ್ನು ಪಡೆಯಬೇಕು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಜೈವಿಕ ಇಂಧನ, ಹುಣಸೆ ಹಣ್ಣು, ಹಲಸು ಮತ್ತು ತೆಂಗು ಮುಂತಾದವುಗಳ ಕೃಷಿ ಮಾದರಿಯಂತೆ ರಾಜ್ಯಾದ್ಯಾಂತ ಕೆಲವು ಅಗತ್ಯವಾದ ಮಾರ್ಪಾಡುಗಳೊಂದಿಗೆ ಇತರೆ ಬೆಳೆಗಳಿಗೂ ಪುನರಾವರ್ತಿಸಬಹುದಾಗಿದೆ.

ಈ ಮಾದರಿಯ ಬಹು ಮುಖ್ಯ ವೈಶಿಷ್ಟ್ಯವೆಂದರೆ ಬೆಳೆಗಳ ಸಂಗ್ರಹಣೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಶೇ. 5-8 ರಷ್ಟು ಆಡಳಿತಾತ್ಮಕ ವೆಚ್ಚವನ್ನು ಭರಿಸಿ ಖರೀದಿಸುವುದಲ್ಲದೇ, ರೈತರನ್ನು ಗುಂಪುಗಳಾಗಿ ಸಂಘಟಿಸಲು ಸಹಕಾರಿಯಾಗುವುದು. ಹಾಲು ಉತ್ಪಾದಕ ಸಹಕಾರ ಸಂಘಗಳು ಬೆಳಗ್ಗೆ 2 ಗಂಟೆ ಮತ್ತು ಸಂಜೆ 2 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ರವರೆಗೆ ಬಿಡುವಾಗಿರುತ್ತವೆ. ಈ ಸಮಯದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯೊಂದಿಗೆ ಬೇರೆ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಲಭ್ಯವಿರುವ ಸೌಕರ್ಯವನ್ನು ಬಳಸಿಕೊಳ್ಳಬಹುದಾಗಿದೆ. ತೋಟಗಳ ಮಟ್ಟದಲ್ಲಿ ಸಂಗ್ರಹಿಸುವಲ್ಲಿ ನಿರತವಾಗಿರುವುದರಿಂದ ಕೃಷಿ ಉತ್ಪನ್ನಗಳನ್ನು ಸಹ ಸಂಗ್ರಹಿಸಬಹುದಾಗಿದ್ದು, ಮತ್ತೊಂದು ಮೂಲಸೌಕರ್ಯವನ್ನು ಸೃಷ್ಟಿಸುವ ಅಗತ್ಯವಿರುವುದಿಲ್ಲ. ಈ ಮಾದರಿಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಗುರುತಿಸಿದ ಯುವಕರು ಹಾಗೂ ಸ್ವಸಹಾಯ ಗುಂಪುಗಳಿಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿಯನ್ನು ನೀಡಿದರೆ, ಆಯಾ ಅಭಿವೃದ್ಧಿ ಇಲಾಖೆಗಳು ಮತ್ತು ಇತರೆ ಸಂಸ್ಥೆಗಳಾದ ನಬಾರ್ಡ್, ಹಣಕಾಸು ಸಂಸ್ಥೆಗಳು ಮುಂತಾದವುಗಳು ಅವರಿಗೆ ಬೆಂಬಲವನ್ನು ನೀಡಬಹುದಾಗಿದೆ.

3.ಅ) ಒಕ್ಕಣೆ ಅಂಗಳ ಮತ್ತು ಅಗತ್ಯಕ್ಕೆ ಅನುಸಾರವಾಗಿ ಎರವಲು ಸೇವೆಗಳು

ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಕಟಾವಿನ ನಂತರ ನಷ್ಟವಾಗುತ್ತಿದೆ. ನಿಖರವಾದ ಅಂಕಿ ಅಂಶ ಲಭ್ಯವಿಲ್ಲದಿದ್ದರು, ಕರ್ನಾಟಕದಲ್ಲೂ ಸಹ ಕಟಾವಿನ ನಂತರ ವಾರ್ಷಿಕವಾಗಿ ಹಲವಾರು ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ ಎಂದು ಅಂದಾಜಿಸಬಹುದಾಗಿದೆ.

ಹಿಂದಿನ ಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಒಕ್ಕಣೆ ಮಾಡಲು ಪ್ರತಿ ಕುಟುಂಬವು ಒಕ್ಕಣೆ ಅಂಗಳವನ್ನು ಹೊಂದಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಬಹುತೇಕ ರೈತರು ಒಕ್ಕಣೆಯನ್ನು ರಸ್ತೆಗಳಲ್ಲಿ ಮಾಡುತ್ತಿದ್ದು, ಇದಕ್ಕೆ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಳು ಹೆಚ್ಚುತ್ತಿರುವುದಲ್ಲದೇ, ವೈಯಕ್ತಿಕವಾಗಿ ಒಕ್ಕಣೆ ಅಂಗಳವನ್ನು ನಿರ್ಮಿಸಿಕೊಳ್ಳಲು ತಗಲುವ ದುಬಾರಿ ವೆಚ್ಚ ಕಾರಣವಾಗಿವೆ. ರೈತರ ಈ ಕ್ರಮದಿಂದ ಅತಿ ಹೆಚ್ಚು ಧಾನ್ಯಗಳು ನಷ್ಟವಾಗುವುದಲ್ಲದೇ, ಸೀಮಿತ ಶೇಖರಣಾ ಸಾಮರ್ಥ್ಯ, ಧಾನ್ಯಗಳ ಗುಣಮಟ್ಟ ಹಾಗೂ ಪೆಟ್ರೋಲ್, ಡೀಸೆಲ್ ಎಣ್ಣೆ, ಮೂತ್ರ, ಸಗಣಿ ಮುಂತಾದವು ಮೇವಿನೊಂದಿಗೆ ಬೆರೆಯುವ ಬೀತಿಯಿಂದ ಮಳೆಗಾಲದಲ್ಲಿ ಹತಾಶೆಯ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಧಾನ್ಯಗಳ ಸೇವನೆಯಿಂದ ಮಾನವನಿಗೆ ಹಾಗೂ ಮೇವನ್ನು ಸೇವಿಸುವ ಜಾನುವಾರುಗಳಿಗೆ ಹಲವು ಆರೋಗ್ಯಕ್ಕೆ ಸಮಸ್ಯೆಗಳು ಎದುರಾಗುತ್ತಿವೆ.

ಆದಕಾರಣ, ಮೊದಲು ಪ್ರತಿ ಪಂಚಾಯತಿಯಲ್ಲೂ ಒಕ್ಕಣೆ ಅಂಗಳವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದು, ಆನಂತರ ಪಂಚಾಯತಿಯ ಇತರೆ ಗ್ರಾಮಗಳಿಗೆ ಹಂತಹಂತವಾಗಿ ವಿಸ್ತರಿಸಬಹುದಾಗಿದೆ.

ಒಕ್ಕಣೆ ಅಂಗಳವನ್ನು ನರೇಗಾ ಮತ್ತು ಪ್ರಧಾನ ಮಂತ್ರಿ ಯಂತ್ರಧಾರ ಯೋಜನೆಯಗಳ ಸಹಾಯದಿಂದ ಸ್ಥಾಪಿಸಬಹುದಾಗಿದೆ. ಕಡಿಮೆ ವೆಚ್ಚದ ಕೊಟ್ಟಿಗೆಗಳು, ಕಾಂಪೌಂಡ್, ಸಂಗ್ರಹಣಾ ಕಟ್ಟಡ ಮತ್ತು ಇತರೆ ಅಗತ್ಯಗಳಿಗೆ ಅಲ್ಪ ಅನುದಾನವನ್ನು ನೀಡಬೇಕಾಗುವುದು. ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ ಕೃಷಿ ಉತ್ಪನಗಳನ್ನು ಪಂಚಾಯಿತಿ ಮಟ್ಟದಲ್ಲಿ ಮಾರಾಟ ಮಾಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಒಕ್ಕಣೆಯಲ್ಲದೇ, ಈ ಅಂಗಳದ ಸೌಕರ್ಯವನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಹ ಪಂಚಾಯಿತಿಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಪಂಚಾಯಿತಿ ಮಟ್ಟದಲ್ಲಿ ಉಳುಮೆ, ಬಿತ್ತನೆ, ಕುಳಿ ಮಾಡುವಿಕೆ, ನಾಟಿ, ಕಳೆ ಕೀಳುವುದು, ಸಿಂಪಡನೆ, ಕಟಾವು, ಸಾಗಣೇ ಮುಂತಾದವುಗಳಿಗೆ ಸಾಂಪ್ರದಾಯಿಕ ಕೂಲಿ ಸೇವೆಗಳನ್ನು ಪಡೆಯಬಹುದಾಗಿದೆ.

ಬಹುತೇಕ ಭೂರಹಿತರು, ಕಡಿಮೆ ಹಿಡುವಳಿ ಹೊಂದಿರುವ ಯುವಕರು ಮತ್ತು ಸ್ವಸಹಾಯ ಗುಂಪುಗಳನ್ನು ಒಕ್ಕಣೆ ಮತ್ತು ಅವಶ್ಯಕತೆಗೆ ಅನುಸಾರವಾಗಿ ಎರವಲು ಸೇವೆಗಳಿಗೆ ಬಳಸಿಕೊಳ್ಳಬಹುದು. ಈ ಯುವಕರಿಗೆ ಮತ್ತು ಸ್ವಸಹಾಯ ಗುಂಪುಗಳಿಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರೂಡ್‌ಸೆಟ್ ಮತ್ತು ಕೃಷಿ ಯಂತ್ರ ಉತ್ಪಾದಕರ ಸಹಾಯದಿಂದ ಕಾರ್ಯನಿರ್ವಹಣೆ, ನಿರ್ವಾಹ ಮತ್ತು ದುರಸ್ಥಿ ಕಾರ್ಯಗಳಲ್ಲಿ ತರಬೇತಿ ನೀಡಬಹುದಾಗಿದೆ.

ಪ್ರತಿ ಪಂಚಾಯಿತಿಯಲ್ಲೂ ಇದನ್ನು ಒಮ್ಮೆ ಅನುಷ್ಠಾನಗೊಳಿಸಿದರೆ, ರೈತರ ಆದಾಯವನ್ನು ಹೆಚ್ಚಿಸಲು, ಉತ್ತಮ ಗುಣಮಟ್ಟದ ಧಾನ್ಯಗಳನ್ನು ಗ್ರಾಹಕರಿಗೆ ನೀಡಲು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವು, 50 ರಿಂದ 60 ಯುವಕರಿಗೆ ಮತ್ತು 25 ರಿಂದ 30 ಸ್ವಸಹಾಯ ಗುಂಪುಗಳಿಗೆ ವರ್ಷಾದ್ಯಂತ ಉದ್ಯೋಗವನ್ನು ನೀಡಲು ಸಹಕಾರಿಯಾಗುವುದು. ಸಮಯಕ್ಕೆ ಸರಿಯಾಗಿ ವಿವಿಧ ಕೃಷಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು, ಕಳ್ಳತನದ ಸಮಸ್ಯೆಯನ್ನು ತಗ್ಗಿಸಲು ಹಾಗೂ ಹಳ್ಳಿಗಳಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಅನುವಾಗುವಂತೆ ಕೂಲಿ ಕಾರ್ಮಿಕರಿಗಾಗಿ ಪ್ರಯಾಸ ಪಡುತ್ತಿರುವ ಹಿರಿಯ ನಾಗರೀಕರ ಕುಟುಂಬಗಳಿಗೆ ಸಹಕಾರಿಯಾಗುವುದು.

3.ಆ) ಮೆಕ್ಕೆ ಜೋಳದ ಮೇವನ್ನು ಉತ್ತಮವಾಗಿ ಬಳಸಿಕೊಳ್ಳುವುದು

ಕರ್ನಾಟಕದಲ್ಲಿ ಮೆಕ್ಕೆ ಜೋಳವನ್ನು 2019-20 ರ ಆಥಿಕ ವರ್ಷದಲ್ಲಿ 14.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಮೆಕ್ಕೆ ಜೋಳವನ್ನು ಬೆಳೆಯುವ ಪ್ರದೇಶ ವರ್ಷಾನು ವರ್ಷ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಬಯಲು ಸೀಮೆಯಲ್ಲಿ ಹೆಚ್ಚಾಗುತ್ತಿದೆ. ಆದರೆ, ಮೆಕ್ಕೆ ಜೋಳವನ್ನು ಕಟಾವು ಮಾಡಿದ ನಂತರ ಕಾಂಡವನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಬೇಸರದ ಸಂಗತಿಯಾಗಿದೆ. ಇದು ವಾರ್ಷಿಕವಾಗಿ ಹಲವಾರು ಲಕ್ಷ ಟನ್‌ಗಳಾದರೂ, ನಷ್ಟದ ಪ್ರಮಾಣ ಎಷ್ಟೆಂಬುದು ಖಚಿತವಾಗಿ ತಿಳಿದಿಲ್ಲ. ಬೇಸಿಗೆ ತಿಂಗಳುಗಳಲ್ಲಿ ಮತ್ತು ಬರದ ವರ್ಷಗಳಲ್ಲಿ ಮೇವನ್ನು ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಲು ಬೃಹತ್ ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆಯಲ್ಲದೇ, ನಗರ ಪ್ರದೇಶಗಳಲ್ಲಿ ಗುಣಮಟ್ಟದ ಮೇವಿಗಾಗಿ ಪ್ರಯಾಸ ಪಡಲಾಗುತ್ತಿದೆ. ಆದಕಾರಣ, ಬೃಹತ್ ಪ್ರಮಾಣದ ಮೆಕ್ಕೆ ಜೋಳದ ಮೇವನ್ನು ರಾಜ್ಯದಲ್ಲಿ ವ್ಯರ್ಥ ಮಾಡುವಿದನ್ನು ತಡೆಯಲು ಬೃಹತ್ ಪ್ರಮಾಣದ ಹಗೇವನ್ನು (silage) ನಿರ್ಮಿಸಲು ಪ್ರಸ್ಥಾಪಿಸಲಾಗಿದೆ. ಈ ಉಪಕ್ರಮದಿಂದ ಜಾನುವಾರುಗಳಿಗೆ ಗುಣಮಟ್ಟದ ಮೇವನ್ನು ನೀಡಲು, ಮೆಕ್ಕೆ ಜೋಳದ ಬೆಳೆಗಾರರಿಗೆ ಹೆಚ್ಚುವರಿ ಆದಾಯ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು.

4. ಕೃಷಿಯಲ್ಲಿ ಯುವಕರನ್ನು ಆಕರ್ಷಿಸಿ ಮತ್ತು ಉಳಿಸಿಕೊಳ್ಳುವುದು

ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ‘ಆರ್ಯ’ (ARYA) ಎಂಬ ಯೋಜನೆಯನ್ನು ದೇಶದಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ2005 ರಲ್ಲಿ 15 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಅದರ ಉದ್ದೇಶ ಯುವ ಕೃಷಿಕರಿಗೆ ಹೆಚ್ಚು ಲಾಭದಾಯಕ ಮತ್ತು ನಿಶ್ಚಿತವಾದ ಆದಾಯವನ್ನು ನೀಡುವ ತಂತ್ರಜ್ಞಾನಗಳನ್ನು ಗುರುತಿಸುವುದಾಗಿದೆ. ಈ ಯೋಜನೆಯಲ್ಲಿ ಹೆಚ್ಚುವರಿ ಆದಾಯ ಮತ್ತು ಉದ್ಯೋಗವನ್ನು ಯುವಕರಿಗೆ ನೀಡುವ ಪ್ರೋತ್ಸಾಹದಾಯಕ ಫಲಿತಾಂಶ ಬಂದರೆ, ಅವರು ಹಳ್ಳಿಗಳಲ್ಲೇ ಉಳಿಯಲು ಉತ್ತೇಜಿತರಾಗುತ್ತಾರೆ, ಸದರಿ ಆರ್ಯ ಯೋಜನೆಯನ್ನು 2018ರಲ್ಲಿ ದೇಶಾದ್ಯಂತ 100 ಜಿಲ್ಲೆಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗಿದ್ದು, ಪ್ರಸಕ್ತ ವರ್ಷ (2020) 500 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಐ.ಸಿ.ಎ.ಆರ್ ವತಿಯಿಂದ 2020ರ ಜೂನ್ 16 ರಂದು ಆಯೋಜಿಸಲಾಗಿದ್ದ ಆರ್ಯ ಮೌಲ್ಯಮಾಪನ ಕಾರ್ಯಾಗಾರ ಸಭೆಯಲ್ಲಿ, ಬಹುತೇಕ ಯುವಕರು ಹಳ್ಳಿಗಳಿಗೆ ಹಿಂದಿರುಗಿರುವ ಇಂದಿನ ಕೋವಿಡ್-19ರ ಸಮಯದಲ್ಲಿ ದೇಶದ ಎಲ್ಲಾ 718 ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಆರ್ಯ ಯೋಜನೆಯನ್ನು ವಿಸ್ತರಿಸಲು ನಾನು ಸಲಹೆಯನ್ನು ನೀಡಿದೆ. ಕೆವಿಕೆಗಳು ಯುವ ಕೃಷಿಕರಿಗೆ ಸಮಗ್ರ ಕೃಷಿಯಲ್ಲಿ ತರಬೇತಿಯನ್ನು ನೀಡಲು ಹಾಗೂ ವಿವಿಧ ಉದ್ಯಮಗಳಲ್ಲಿ ಉತ್ಪನ್ನಗಳ ಮೌಲ್ಯ ವರ್ಧನೆಯನ್ನು ಮಾಡಲು ಕೆವಿಕೆ ವ್ಯವಸ್ಥೆಯಲ್ಲಿರುವ ಬಹು ಶಾಸ್ತ್ರೀಯ ತಜ್ಞರ ತಂಡ ಅನುವು ಮಾಡಿಕೊಡಲಿದೆ.

ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 33 ಕೆ.ವಿ.ಕೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ ಬೆಂಬಲಿಸಲು ಆಗ್ರಹಿಸುತ್ತೇವೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಹಿಮ್ಮುಖ ವಲಸೆ ಆಗಿರುವ ಈ ಸಂದರ್ಭದಲ್ಲಿ ಹೆಚ್ಚು ಯುವಕರು ಹೊಸ ಉದ್ಯಮಗಳನ್ನು ಪ್ರಾರಂಬಿಸಿ, ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಲು ಅನುವಾಗಲಿದೆ.

5. ಪಂಚಾಯಿತಿ ಮಟ್ಟದ ರೈತ ಮಿತ್ರ ಕೇಂದ್ರಗಳಲ್ಲಿ ನೇಮಕಾತಿ

ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸೇವಕರು ಮತ್ತು ಕೃಷಿ ಸಹಾಯಕರು ನೀಡಿದ ತಾಂತ್ರಿಕ ಮಾರ್ಗದರ್ಶನದಿಂದ ರೈತರು ತೃಪ್ತಿ ವ್ಯಕ್ತಪಡಿಸಿರುತ್ತಾರೆ. ಪ್ರಧಾನ ಕಛೇರಿಯನ್ನು ಹೋಬಳಿಗಳಿಗೆ ವರ್ಗಾಯಿಸಲಾಗಿದ್ದು, ಶೇ. 90 ಕ್ಕಿಂತ  ಹೆಚ್ಚಿರುವ ಸಣ್ಣ ಮತ್ತು ಅತಿ ಸಣ್ಣ  ರೈತರಿಗೆ ಹೆಚ್ಚು ಉಪಯುಕ್ತವಾಗಿಲ್ಲ ಹಾಗೂ  ಹೋಬಳಿಗಳಿಗೆ ವಿವಿಧ ಉದ್ದೇಶಗಳಿಗೆ ಭೇಟಿ ನೀಡುವುದು ಸಹ ಕಷ್ಟ ಸಾಧ್ಯ. ಆದಕಾರಣ, ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರ ಅಪೇಕ್ಷೆಯಂತೆ ರೈತ ಮಿತ್ರ ಕೇಂದ್ರಗಳನ್ನು ಆದಷ್ಟು ಬೇಗ ಆಯ್ಕೆ ಮಾಡಿ, ಉದ್ಯೋಗದ ತರಬೇತಿಯನ್ನು ನೀಡಿ ಪಂಚಾಯಿತಿ ಮಟ್ಟದಲ್ಲಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಬೇಕು. ಈ ವ್ಯವಸ್ಥೆಯು ಪಂಚಾಯಿತಿ ಮಟ್ಟದಲ್ಲಿ ಕೃಷಿ ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಹೆಚ್ಚಿನ  ನಿರೀಕ್ಷೆಯಿಂದ ಹಳ್ಳಿಗಳಿಗೆ ಹಿಂದಿರುಗಿರುವವರನ್ನು ಉತ್ತೇಜಿಸಿ, ಸ್ಪೂರ್ತಿ ನೀಡುವುದಲ್ಲದೇ ಸಮಯಕ್ಕೆ ಸರಿಯಾಗಿ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಿದಂತಾಗುವುದು.

ರಾಜ್ಯ ಸರ್ಕಾರದಿಂದ ಈ ಪ್ರದೇಶಗಳಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ತಾಂತ್ರಿಕ ಸಹಾಯವನ್ನು ವಿಶ್ವವಿದ್ಯಾಲಯವು ಸಂತಸದಿಂದ ನೀಡಲಿದೆ.

– ಪ್ರೊ. ಕೆ. ನಾರಾಯಣ ಗೌಡ
ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
knarayanagowda@yahoo.co.in

ಮತ್ತು

– ಪ್ರೊ. ಎಸ್. ರಾಜೇಂದ್ರ ಪ್ರಸಾದ್
ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
srprasad1989@yahoo.co.in; vcuasb1964@gmail.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content