ಧಾತುಗಳನ್ನು ಪಟ್ಟಿ ಮಾಡುವ ಹೊಸ ವಿಧಾನ
1 min read
ಕಳೆದ ಸಾಲು ನಾವು ಆವರ್ತಕ ಧಾತುಗಳ ಕೋಷ್ಟಕದ 150ನೇ ವಾರ್ಷಿಕೋತ್ಸವವನ್ನು ಆಚರಿಸಿದೆವು. ಈ ಆವರ್ತಕೋಷ್ಟಕದ ಮೂಲ ಪರಿಕಲ್ಪನೆಯನ್ನು ರಷ್ಯನ್ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡಲೀವ್ (1834-1907) 1969ರಲ್ಲಿ ತಿಳಿಸಿಕೊಟ್ಟರು.
ಮೆಂಡಲೀವ್.ನ ಆವರ್ತಕೋಷ್ಟಕವು ಮೊದಲಿಗೆ ಒಂದೇ ತರಹದ ರಸಾಯನಿಕ ಗುಣ ಲಕ್ಷಣಗಳ ಆಧಾರದ ಮೇಲೆ ಪಟ್ಟಿ ಮಾಡಿದ ದಾತುಗಳನ್ನು ಒಳಗೊಂಡಿತ್ತು. 20ನೇ ಶತಮಾನದ ಆರಂಭದಲ್ಲಿ, ಅಣುವಿನ ರಚನೆಯ ತಿಳುವಳಿಕೆ ಮತ್ತು ಕ್ವಾಂಟಮ್ ಸಿದ್ಧಾಂತದ ಪ್ರತಿಪಾದನೆ ಮತ್ತು ಬೆಳವಣಿಗೆಯ ನಂತರ, ಧಾತುಗಳನ್ನು ಪರಮಾಣು ಸಂಖ್ಯೆಗೆ (ಧನವಿದ್ಯುದ್ವಾಹಿ ಪ್ರೊಟಾನ್ ಗಳ ಸಂಖ್ಯೆ) ಅನುಗುಣವಾಗಿ ಪಟ್ಟಿಯನ್ನು ನವೀಕರಿಸಲಾಯಿತು. ಇದು ಆಧುನಿಕ ಆವರ್ತಕೋಷ್ಟಕದ ಅಭಿವೃದ್ಧಿಗೆ ನಾಂಧಿಯಾಯಿತು. 1940ರ ಹೊತ್ತಿಗೆ, ಬಹುತೇಕ ಪಠ್ಯಪುಸ್ತಕಗಳು ನಾವು ಇಂದು ಕಾಣುವಂತಹ ಆವರ್ತಕ ಕೋಷ್ಟಕವನ್ನು ಒಳಗೊಂಡಿತ್ತು.
ಈ ಆವರ್ತಕ ಕೋಷ್ಟಕವು ಧಾತುಗಳನ್ನು ಪಟ್ಟಿ ಮಾಡುವ ಒಂದು ಅಪ್ರತಿಮ ವಿಧಾನವಾಗಿರಬಹುದು. ಆದರೆ, ಈ ಕೋಷ್ಟಕದಲ್ಲಿ ಕಡಿಮೆ ರಾಸಾಯನಿಕ ಸಾಮ್ಯತೆಯನ್ನು ಹೊಂದಿರುವ ಧಾತುಗಳು ಅಕ್ಕಪಕ್ಕದಲ್ಲಿ ಇರಿಸಲಾಗಿದೆ ಹಾಗೂ ಒಂದೇ ಕಾಲಂನಲ್ಲಿ ಕಂಡುಬರುವ ಕೆಲವು ಧಾತುಗಳು ಯಾವುದೇ ಹತ್ತಿರದ ಸಂಬಂಧಗಳನ್ನು ಪ್ರತಿಬಿಂಬಿಸುವುದಿಲ್ಲ – ಉದಾಹರಣೆಗೆ ಇಂಗಾಲ ಮತ್ತು ಸೀಸ.
ಮಾಸ್ಕೋದ ಸ್ಕೋಲ್ಕೊವೊ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಕೇಂದ್ರದ ಜಹೇದ್ ಅಲ್ಲಾಹ್ಯರಿ ಮತ್ತು ಆರ್ಟೆಮ್ ಒಗಾನೊವ್ ಧಾತುಗಳನ್ನು ಪಟ್ಟಿ ಮಾಡುವ ಹೊಸ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಮೂಲಧಾತುಗಳನ್ನು ಒಂದೇ ರೇಖಾತ್ಮಕ ಕ್ರಮದಲ್ಲಿ, ಪ್ರತಿಯೊಂದು ಅನುಕ್ರಮ ಜೋಡಿಯ ನಡುವಿನ ಗುಣಗಳಲ್ಲಿ ಅತ್ಯಲ್ಪ ಬದಲಾವಣೆ ಇರುವಂತೆ ಜೋಡಿಸುವ ಹೊಸ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಈ ರಚನಾ ಕ್ರಮವನ್ನು ಬಳಸಿಕೊಂಡು, ಯಾವ ಯಾವ ಸರಳ ಸಂಯುಕ್ತಗಳು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತವೆ ಎಂದು ಊಹಿಸಲು ಸಾಧ್ಯವಿರುವುದಾಗಿ ಹಾಗೂ ಗಡಸುತನ ಅಥವಾ ಕಾಂತೀಯ ನಡವಳಿಕೆಯಂತಹ ಉಪಯುಕ್ತ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಹೊಸ ವಸ್ತುಗಳನ್ನು ಗುರುತಿಸಲು ಸಹ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜರ್ನಲ್ ಆಫ್ ಫಿಸಿಕಲ್ ಕೆಮಿಸ್ಟ್ರಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ಜಹೇದ್ ಅಲ್ಲಾಹ್ಯರಿ ಮತ್ತು ಆರ್ಟೆಮ್ ಒಗಾನೊವ್.ರವರ ಪ್ರಸ್ತಾವನೆಯು ಇತರೆ ಹಿಂದಿನ ಪದ್ಧತಿಗಳಂತೆ ಪ್ರತಿಯೊಂದು ಮೂಲಧಾತುವಿಗೆ ಮೆಂಡಲೀವ್ ಸಂಖ್ಯೆ (MN)ಯನ್ನು ನೀಡುವುದು. ಮೆಂಡಲೀವ್ ಸಂಖ್ಯೆಯನ್ನು ಪಡೆಯಲು ಹಲವಾರು ಪದ್ಧತಿಗಳಿದ್ದು, ಇತ್ತೀಚಿನ ಇವರ ಅಧ್ಯಯನದಲ್ಲಿ ನೇರವಾಗಿ ಅಳೆಯಬಹುದಾದ ಎರಡು ಮೂಲಭೂತ ಪರಿಮಾಣಗಳ ಸಂಯೋಜನೆಯನ್ನು ಬಳಸಿಕೊಂಡಿದ್ದಾರೆ. ಒಂದು ಧಾತುವಿನ ಪರಮಾಣು ತ್ರಿಜ್ಯ (R) ಮತ್ತು ಮತ್ತೊಂದು ಒಂದು ಪರಮಾಣುವು ಎಷ್ಟು ಪ್ರಬಲವಾಗಿ ಎಲೆಕ್ಟ್ರಾನ್.ಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ ಎಂಬುದನ್ನು ವಿವರಿಸುವ ವಿದ್ಯುದೃಣತೆ (χ).
ಇವರ ಈ ಮುನ್ನಡೆಯಿಂದಾಗಿ ಆವರ್ತಕ ಕೋಷ್ಟಕ ಕೇವಲ ಒಂದು ಪ್ರಮುಖ ಶೈಕ್ಷಣಿಕ ಅಂಶವಾಗಿ ಉಳಿಯದೆ ಸಂಶೋಧಕರ ಅಗತ್ಯವಾದ ಸಾಧನವಾಗಿ ಹೊಸ ಹೊಸ ಅವಶ್ಯಕ ವಸ್ತುಗಳ ಅನ್ವೇಷಣೆಗೆ ಬಹಳ ಉಪಯುಕ್ತವಾಗಿದೆ. ಅಲ್ಲದೆ, ಧಾತುಗಳ ಗುಣಗಳು ಮತ್ತು ಅವುಗಳು ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ನಮ್ಮ ತಿಳುವಳಿಕೆಯನ್ನು ವೃದ್ಧಿಸುತ್ತದೆ. ಈಗ ಆವರ್ತಕ ಕೋಷ್ಟಕವನ್ನು ನೋಡುವುದೇ ಒಂದು ವಿನೋದವಲ್ಲವೆ ?