ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್ -19ಕ್ಕೆ ಪ್ಲಾಸ್ಮಾ ಚಿಕಿತ್ಸೆ-ಸಂಪಾದಕೀಯ

ಡಾ. ಪಿ. ಎಸ್. ಶಂಕರ್, ಪ್ರಧಾನ ಸಂಪಾದಕರು, ವಿಜ್ಞಾನ ಲೋಕ

ಯಾವುದೇ ಸೋಂಕುಜೀವಿ (ಬ್ಯಾಕ್ಟೀರಿಯಾ ಮತ್ತು ವೈರಸ್)ಯ ವಿರುದ್ಧ ನೀಡುವ ಲಸಿಕೆ (ವ್ಯಾಕ್ಸಿನ್) ಅದರೆದುರು ಸೆಣೆಸುವ ಶಕ್ತಿಯನ್ನು ದೇಹಕ್ಕೆ ಕೊಡಮಾಡುತ್ತದೆ. ಸೋಂಕು ಜೀವಿಗಳ ವಿರುದ್ಧ ತೋರಿಬರುವ ಸಾಮರ್ಥ್ಯ ನೈಸರ್ಗಿಕವಾಗಿ ವ್ಯಕ್ತಿಗೆ ಲಭಿಸಬಹುದು. ದೇಹದಲ್ಲಿ ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಸೋಂಕು ಜೀವಿಯ ಪ್ರಭಾವಕ್ಕೆ ನೈಸರ್ಗಿಕವಾಗಿ ಇಲ್ಲವೆ ಕೃತಕವಾಗಿ ಒಳಪಡುವುದರಿಂದ ದೇಹದಲ್ಲಿ ಬೆಳವಣಿಗೆ ಹೊಂದುತ್ತದೆ. ನೈಸರ್ಗಿಕ ಬೆಳವಣಿಗೆಯು ಸೋಂಕು ಜೀವಿಯ ಪ್ರಭಾವಕ್ಕೆ ಒಳಪಟ್ಟಾಗ ಗೋಚರ ಇಲ್ಲವೆ ಅಗೋಚರ ರೀತಿಯಲ್ಲಿ ದೇಹದಲ್ಲಿ ಬೆಳವಣಿಗೆ ಹೊಂದುವ ಸೋಂಕಿನಿAದ ಉಂಟಾಗುತ್ತದೆ. ಪರೋಕ್ಷವಾಗಿ ಪ್ರತಿರೋಧ ಶಕ್ತಿಯನ್ನು ಶಕ್ತಿಗುಂದಿದ ಜೀವಂತ ಇಲ್ಲವೆ ಸತ್ತ ಸೋಂಕು ಜೀವಿಯನ್ನು ಇಲ್ಲವೆ ಅದರ ಪ್ರತಿಜನಕದ ತುಂಡುಗಳನ್ನೊಳಗೊAಡ ವ್ಯಾಕ್ಸಿನ್ ನೀಡಿಕೆಯಿಂದ ಉದ್ದೀಪಿಸಬಹುದು. ಈ ರೀತಿಯ ಪ್ರತ್ಯಕ್ಷ ರೀತಿಯ ಬದಲು ಅಪ್ರತ್ಯಕ್ಷ ರೀತಿಯಲ್ಲಿ ಪ್ರತಿರೋಧ ಸಾಮರ್ಥ್ಯವನ್ನು ಯಾವುದೇ ಪ್ರತಿಜನಕದ ಸ್ಫರ್ಧೆಯನ್ನು ಪ್ರತಿರೋಧ ವ್ಯವಸ್ಥೆಗೆ ನೀಡದೆ ವ್ಯಕ್ತಿಗೆ ದೊರಕಿಸಿಕೊಡಬಹುದು. ಪರೋಕ್ಷವಾಗಿ, ನೈಸರ್ಗಿಕ ರೀತಿಯಲ್ಲಿ, ತಾಯಿಂದ ಕೂಸಿಗೆ ಮಾಸಿನ (ಪ್ಲಾಸೆಂಟ) ಮೂಲಕ ಸಾಗಿಬರುತ್ತದೆ. ಅದನ್ನೇ ಕೃತಕ ರೀತಿಯಲ್ಲಿ ಇಮ್ಯೂನೊಗ್ಲಾಬುಲಿನ್ (ಪ್ರೋಟಿನ್ವ ವಸ್ತು) ಅಥವಾ ಗಾಮಾ ಗ್ಲಾಬುಲಿನ್ ಕೊಡುಗೆಯಿಂದ ವ್ಯಕ್ತಿಯಲ್ಲಿ ಅಪ್ರತ್ಯಕ್ಷ ರೀತಿಯಲ್ಲಿ ದೊರಕಿಸಿಕೊಡಬಹುದು. ದೇಹದಲ್ಲಿ ಗೋಚರಿಸುವ ಪ್ರತಿ ವಸ್ತು (ಕಾಯ, ಆಂಟಿಜನ್)ಗಳು ಪ್ರೋಟಿನ್ ವಸ್ತುಗಳಾಗಿದ್ದು ಅವುಗಳನ್ನು ದೇಹದಲ್ಲಿ ಸದೃಢವಾಗಿರುವ ಪ್ರತಿರೋಧ ವ್ಯವಸ್ಥೆ ಸಿದ್ಧಪಡಿಸಿ ರೋಗಕಾರಕ ಜೀವಿಗಳನ್ನು ತಟಸ್ಥಗೊಳಿಸಬಲ್ಲವು ಇಲ್ಲವೆ ಅವುಗಳ ವಿಷವನ್ನು ನಾಶಪಡಿಸಬಲ್ಲವು. ಪ್ರತಿವಸ್ತುಗಳು ನಿರ್ದಿಷ್ಟರೋಗದ ವಿರುದ್ಧ ದೇಹಕ್ಕೆ ಸೆಣೆಸಬಲ್ಲ ಸಾಮರ್ಥ್ಯವನ್ನು ಕೊಡಮಾಡುತ್ತವೆ.

ವ್ಯಾಕ್ಸಿನ್ ಕೊಡುಗೆಯಿಂದ ದೇಹವಿನ್ನೂ ನಿರ್ದಿಷ್ಟ ಸೋಂಕು ಜೀವಿಯ ಪ್ರಭಾವಕ್ಕೆ ಒಳಪಡುವ ಮುನ್ನವೇ ಅದು ಉಂಟುಮಾಡುವ ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯವನ್ನು ಪಡೆಯುತ್ತದೆ. ವ್ಯಾಕ್ಸಿನ್ ಕೊಡುಗೆಯಿಂದ ದೇಹ ತನ್ನದೇ ಆದ ಪ್ರತಿವಸ್ತುಗಳನ್ನು ತಯಾರುಮಾಡಿ, ಬರಲಿರುವ ನಿರ್ದಿಷ್ಟ ಸೋಂಕಿನ ವಿರುದ್ಧ ರಕ್ಷಣೆಯನ್ನು ದೊರಕಿಸಿಕೊಡುತ್ತದೆ. ವ್ಯಾಕ್ಸಿನ್‌ಗಳು ರೋಗದ ಚಿಕಿತ್ಸೆಯ ವಸ್ತುಗಳಾಗಿರದೆ, ಆ ರೋಗ ಬಾರದಂತೆ ದೂರ ಮಾಡಲು ರೂಪುಗೊಂಡಿವೆ. ಅಪ್ರತ್ಯಕ್ಷ ರೀತಿಯಲ್ಲಿ ದೊರೆಯುವ ಪ್ರತಿರೋಧ ಸಾಮರ್ಥ್ಯ ತಾತ್ಕಾಲಿಕವಾದುದು. ಅದು ಕೂಡಲೇ ಸೋಂಕನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ದೊರಕಿಸಿಕೊಡುತ್ತದೆ. ವ್ಯಕ್ತಿಯ (ರೋಗಿಯ) ದೇಹದ ಪ್ರತಿರೋಧ ವ್ಯವಸ್ಥೆ ತನ್ನದೇ ಆದ ಪ್ರತಿವಸ್ತುಗಳನ್ನು ಸಿದ್ಧಪಡಿಸಲು ಸನ್ನದ್ಧವಾಗಿರದ ಸನ್ನಿವೇಶದಲ್ಲಿ ನಿರ್ದಿಷ್ಟ ಪ್ರತಿವಸ್ತುಗಳಿರುವ ಪ್ಲಾಸ್ಮಾ (ರಕ್ತದ್ರವ) ವನ್ನು ನೀಡಿ ವ್ಯಕ್ತಿಯ ರಕ್ಷಣೆ ಮಾಡಬಹುದಾಗಿದೆ ಇದೇ ಪ್ಲಾಸ್ಮಾ ಚಿಕಿತ್ಸೆ (ಪ್ಲಾಸ್ಮಾ ಫೆರೆಸಿಸ್) ಇದೊಂದು ರೀತಿ ಕಟ್ಟಿಕೊಂಡು ಹೋಗುವ ಬುತ್ತಿಯಿದ್ದಂತೆ. ಪ್ರಯಾಣದ ಸ್ವಲ್ಪ ಸಮಯ ಅದರಿಂದ ಹೊಟ್ಟೆ ತುಂಬಿಸಿಕೊಂಡಂತೆ.

ಪ್ಲಾಸ್ಮಾ ಕೊಡುಗೆ ಹೊಸದೇನಲ್ಲ. ಅದು ಕಳೆದ ಶತಮಾನದ ಪ್ರಾರಂಭದಲ್ಲಿ ವೈದ್ಯಕೀಯ ನೋಬಲ್ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಜರ್ಮನಿಯ ಎಮಿಲ್ ವಾನ್ ಬೆರಿಂಗ್‌ನಿಂದ ರೂಪಿಸಲ್ಪಟ್ಟಿತು. ಪ್ರಾಣಿಗಳಿಂದ ದೊರಕಿಸಿದ ಪ್ರತಿವಸ್ತುಗಳನ್ನು ಡಿಫ್ತೀರಿಯ (ಲಾಳಸಂಕೋಲೆ) ದಿಂದ ನರಳುತ್ತಿದ್ದ ರೋಗಿಗಳಿಗೆ ಚುಚ್ಚಿ ಗುಣಪಡಿಸುವ ವಿಧಾನವನ್ನು ರೂಪಿಸಿದ ಆತನೇ ಈ ರೋಗದ ವಿರುದ್ಧ ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಬೆಳೆಸುವ ವ್ಯಾಕ್ಸಿನ್‌ಕಂಡು ಹಿಡಿದಿದ್ದ. ಪ್ಲಾಸ್ಮಾ ಫೆರೆಸಿಸ್ ಶಬ್ಧ ಗ್ರೀಕ್ ಮೂಲ ಹೊಂದಿದ್ದು ಅಲ್ಲಿ ರಕ್ತದ್ರವವನ್ನು ಹೊರತೆಗೆದು ಅದನ್ನಾಗಲೀ ಇಲ್ಲವೆ ಅದರಲ್ಲಿ ಲೀನವಾದ ವಸ್ತುಗಳನ್ನಾಗಲೀ ಕೊಡಲಾಗುತ್ತದೆ. ಈ ವಿಧಾನದ ವಿವರಗಳನ್ನು ಬಾಲ್ಟಿಮೋರಿನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಅಬೆಲ್‌ರೌಂಟ್ರಿ ಮತ್ತು ಟರ್ನರ್ ೧೯೧೩ರಲ್ಲಿ ವಿವರಿಸಿದರು. ಮುಂದೆ ೧೯೫೨ರಲ್ಲಿ ಜೋಸೆಫ್ ಗ್ರಿಫೋನ್ಸ್ ಈ ವಿಧಾನವನ್ನು ಪರಿಷ್ಟರಿಸಿ ಅದನ್ನು ತನ್ನ ಮೇಲೆ ಪ್ರಯೋಗಿಸಿ ಅದು ನಿರಪಾಯಕಾರಿ ಎಂಬುದನ್ನು ದೃಢಪಡಿಸಿದ. ನಂತರ ರುಬೆನ್‌ಸ್ಟೀನ್ ಪ್ಲಾಸ್ಮಾ ಕೊಡುಗೆಯನ್ನು ಲಾಸ್‌ಏಂಜಲಿಸ್‌ನ ಕಿರುಫಲಕಗಳ ಕೊರತೆಯಿಂದ ರಕ್ತ ಹೆಪ್ಪುಗೆ, ರಕ್ತತುಂತುರು ರೋಗದ ಹತೋಟಿಗೆ ಯಶಸ್ವಿಯಾಗಿ ಬಳಸಿದ.

ಪ್ರತಿರೋಧ ವ್ಯವಸ್ಥೆಗೆ ಸಂಬAಧಿಸಿದ ಅನೇಕ ಬಗೆಯ ರೋಗಗಳ ಚಿಕಿತ್ಸೆಗೆ ಪ್ಲಾಸ್ಮಾ ಕೊಡುಗೆಯನ್ನು ಬಳಸಲಾಗಿದೆ. ಈ ವಿಧಾನದಲ್ಲಿ ದೇಹದಿಂದ ರಕ್ತಕಣಗಳನ್ನೊಳಗೊಂಡ ರಕ್ತವನ್ನು
ಹೊರತೆಗೆಯಲಾಗುತ್ತದೆ. ನಂತರ ಅದನ್ನು ಕಣ ಬೇರ್ಪಡಿಸುವ ಸಾಧನದ ಮೂಲಕ ಸಾಗಿಸಿ ರಕ್ತದ್ರವವನ್ನು ಕಣಗಳಿಂದ (ಕೆಂಪು ರಕ್ತಕಣ, ಬಿಳಿ ರಕ್ತಕಣ, ಕಿರುಫಲಕ) ಬೇರ್ಪಡಿಸಲಾಗುತ್ತದೆ. ನಂತರ ರಕ್ತಕಣಗಳನ್ನು ದಾನಿಗೆ ಮರಳಿ ನೀಡಲಾಗುತ್ತದೆ (ರಕ್ತ ಪೂರಣ ವಿಧಾನದಲ್ಲಿ ತೆಗೆದ ರಕ್ತದ ಯಾವುದೇ ಭಾಗವನ್ನು ದಾನಿಗೆ ಮರಳಿ ಕೊಡಲಾಗುವುದಿಲ್ಲ) ನಿರ್ದಿಷ್ಟರೋಗ (ಇಲ್ಲಿ ಕೋವಿಡ್-೧೯) ದಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಆ ರೋಗ ಹೊಂದಿದ ವ್ಯಕ್ತಿಗೆ ನೀಡಿ, ವ್ಯಕ್ತಿಯ ಪ್ರತಿರೋಧ ಸಾಮರ್ಥ್ಯ (ಏಕೆಂದರೆ ಆಗಿನ್ನೂ ಪ್ರತಿವಸ್ತುಗಳು ರೂಪುಗೊಂಡಿರುವುದಿಲ್ಲ) ವನ್ನು ಹೆಚ್ಚಿಸಿ ರೋಗದ ಎದುರು ಸೆಣೆಸುವ ಬಲವನ್ನು ತಂದುಕೊಡುತ್ತದೆ. ಒಮ್ಮೆ ೨೦೦ ಮಿಲೀ ರಕ್ತದ್ರವವನ್ನು ರೋಗಿಗೆ ಕೊಡಲಾಗುತ್ತದೆ. ಈ ರೋಗದಿಂದ ಚೇತರಿಸಿಕೊಂಡ ವ್ಯಕ್ತಿ ರಕ್ತದ್ರವವನ್ನು ರಕ್ತಕೊರೆ ಉಂಟಾಗುವ ಭಯವಿಲ್ಲದೆ ಪದೇ ಪದೇ ನೀಡಬಹುದು. ೧೯೧೮ರಲ್ಲಿ ತಲೆದೋರಿದ್ದ ಸ್ಪಾನಿಷ್ ಫ್ಲೂ ಖಂಡಾಂತರ ಪಿಡುಗಿನಲ್ಲಿ ಫ್ಲೂನಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಗಳ ರಕ್ತದ್ರವವನ್ನು ತೀವ್ರತರರೋಗದಿಂದ ನರಳುತ್ತಿದ್ದ ರೋಗಿಗೆ ನೀಡಿ ಉಪಯುಕ್ತ ಪರಿಣಾಮ ಪಡೆಯಲಾಯಿತು. ಪೆನ್ಸಿಲ್ವೇನಿಯಾದಲ್ಲಿ ೧೯೩೪ರಲ್ಲಿ ತಲೆದೋರಿದ್ದ ಸೀತಾಳೆ ಸಿಡುಬು (ಮೀಸಲ್ಸ್) ಪಿಡುಗಿನಲ್ಲಿ ಮೊದಲು ರೋಗದಿಂದ ನರಳಿ ಚೇತರಿಸಿಕೊಂಡ ವಿದ್ಯಾರ್ಥಿಯ ರಕ್ತದ್ರವವನ್ನು ಬೇರೆ ರೋಗಿಗಳಿಗೆ ನೀಡಿ ರೋಗದ ದುಷ್ಪçಭಾವದಿಂದ ಮುಕ್ತಿ ಪಡೆಯುವಂತೆ ಮಾಡಲಾಯಿತು.
ಈಚಿನ ವರುಷಗಳಲ್ಲಿ ತೋರಿದ ಹಕ್ಕಿ ಫ್ಲೂ ಮತ್ತು ಎಬೋಲ ವೈರಸ್ ರೋಗಗಳ ಪಿಡುಗಿನಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಲಾಗಿದ್ದಿತು. ನಿರ್ದಿಷ್ಟ ರೋಗದಿಂದ ನರಳಿ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಬೆಳವಣಿಗೆ ಹೊಂದಿದ ಪ್ರತಿವಸ್ತುಗಳನ್ನು ಅದೇ ಬಗೆಯ ರೋಗದಿಂದ ನರಳುತ್ತಿರುವ ರೋಗಿಗೆ ನೀಡಿ ಆತನಲ್ಲಿ (ಅವಳಲ್ಲಿ) ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯವನ್ನು ದೊರಕಿಸಿ ಕೊಡುವುದು ಈ ಬಗೆಯ ಚಿಕಿತ್ಸೆಯ ಹಿಂದಿರುವ ಉದ್ದೇಶ.

ಕೋವಿಡ್-೧೯ರಿಂದ ನರಳಿ, ಅದರಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಇತರ ರೋಗಿಗಳಿಗೆ ದಾನವಾಗಿ ನೀಡಿ ಅವರಲ್ಲಿ ಪ್ರತಿರೋಧ ಸಾಮರ್ಥ್ಯವನ್ನು ಅಪರೋಕ್ಷವಾಗಿ ದೊರಕಿಸಿಕೊಟ್ಟ ಉದಾಹರಣೆಗಳು ಅಲ್ಲಲ್ಲಿ ವರದಿಯಾಗಿದೆ. ೨೦೨೦ರ ಫೆಬ್ರವರಿಯಲ್ಲಿ ಚೀನಿ ವೈದ್ಯರು ಕೋವಿಡ್-೧೯ ರಿಂದ ನರಳಿ ಚೇತರಿಸಿಕೊಳ್ಳುತ್ತಿದ್ದ ವ್ಯಕ್ತಿಯ ರಕ್ತದ್ರವವನ್ನು ಕೆಲವೊಂದು ರೋಗಿಗಳಿಗೆ ನೀಡಿದಾಗ. ಉತ್ತೇಜಕ ಪರಿಣಾಮಗಳನ್ನು ಕಂಡರು. ಅಂತಹದೇ ಬಗೆಯ ಚಿಕಿತ್ಸೆಯನ್ನು ಅಮೇರಿಕ ಮತ್ತು ಯೂರೋಪು ರಾಷ್ಟ್ರಗಳಲ್ಲಿ ಕೈಕೊಂಡಾಗಲೂ ಉತ್ತಮ ಪರಿಣಾಮಗಳು ಗೋಚರಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಈ ಉತ್ತೇಜಕ ಪರಿಣಾಮಗಳನ್ನು ಮನಗಂಡು ಕೋವಿಡ್-೧೯ ರೋಗದಲ್ಲಿ ಅದನ್ನು ಬಳಸಬಹುದೆಂದು ತನ್ನ ಒಪ್ಪಿಗೆಯನ್ನು ಸೂಚಿಸಿತು.

ಚೈತನ್ಯಶೀಲ ಪ್ರತಿರೋಧ ಸಾಮರ್ಥ್ಯ ಬಹುಕಾಲ ಉಳಿಯುವಂತಹದು ಕೆಲವೊಮ್ಮೆ ಜೀವನ ಪರ್ಯಂತ ಉಳಿದಿರುತ್ತದೆ. ಆದರೆ ಅದು ಬೆಳವಣಿಗೆ ಹೊಂದಲು ವಾರಗಳನ್ನೇ ತೆಗೆದುಕೊಳ್ಳುತ್ತದೆ. ಅದು ಬೆಳವಣಿಗೆಯಾಗುವುದು ಸೋಂಕು ರೋಗವನ್ನು ಹೊಂದಿದಾಗ ಇಲ್ಲವೆ ರೋಗ ಉಂಟುಮಾಡುವ ಸಾಮರ್ಥ್ಯ ಕಳೆದು ಸೂಕ್ಷö್ಮ ಜೀವಿಯಿರುವ ವ್ಯಾಕ್ಸಿನ್ ನೀಡಿಕೆಯಿಂದ ಅವುಗಳ ಪ್ರಭಾವದ ಹಿನ್ನೆಲೆಯಲ್ಲಿ ದೇಹದ ಪ್ರತಿರೋಧ ವ್ಯವಸ್ಥೆ ಪ್ರತಿವಸ್ತುಗಳನ್ನು ಸೃಷ್ಟಿಸುವುದರಿಂದ ದೊರೆಯುತ್ತದೆ.
ವ್ಯಾಕ್ಸಿನ್ ಕೊಡುಗೆಯಿಂದ ವ್ಯಕ್ತಿ ರೋಗವನ್ನು ಹೊಂದದೆ ನಿರ್ದಿಷ್ಟ ಸೋಂಕು ಜೀವಿಯ ವಿರುದ್ಧ ಪ್ರತಿವಸ್ತುಗಳು ದೇಹದಲ್ಲಿ ರೂಪುಗೊಳ್ಳುತ್ತವೆ. ಇಲ್ಲಿ ವ್ಯಕ್ತಿ ರೋಗದಿಂದ ನರಳಬೇಕಿಲ್ಲ,
ರೋಗದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವ ಕೋವಿಡ್-೧೯ ರಿಂದ ನರಳುತ್ತಿರುವ ವೃದ್ಧರು ಮತ್ತು ಇತರ ಸಹ-ರೋಗಗಳಿಂದ ನರಳುತ್ತಿರುವವರು ಮೊದಲ ಹಂತದ ರಕ್ಷಣೆಯನ್ನು
ಪಡೆದುಕೊಳ್ಳಬಲ್ಲರು.

ರೋಗದಿಂದ ನರಳಿ, ಚೇತರಿಸಿಕೊಂಡಿರುವವರಲ್ಲಿ, ಅವರ ಪ್ರತಿರೋಧ ವ್ಯವಸ್ಥೆ ಸಿದ್ಧಪಡಿಸಿದ ಪ್ರತಿವಸ್ತುಗಳನ್ನು ಹೊಂದಿರುತ್ತಾರೆ. ಆ ವಸ್ತುಗಳು ರಕ್ತದ್ರವದಲ್ಲಿ ಸಂಚರಿಸುತ್ತಿರುತ್ತವೆ. ಆ
ರೀತಿಯ ರಕ್ತದ್ರವವನ್ನು ಹೊರತೆಗೆದು ಅದನ್ನು ಔಷಧದಂತೆ ಬಳಸಬಹುದು. ಅದರ ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅದನ್ನು ಶುದ್ಧೀಕರಿಸಿ ಅದರಲ್ಲಿನ ಪ್ರತಿವಸ್ತುಗಳನ್ನು
ಉಪಯೋಗಿಸಬೇಕು. ಈ ರೀತಿಯ ರಕ್ತದ್ರವವನ್ನು ದಾನವಾಗಿ ಪಡೆದ ಹೊಸ ರೋಗಿಗೆ ಅದು ಪರೋಕ್ಷವಾಗಿ ಆತನ ದೇಹದ ಪ್ರತಿರೋಧ ವ್ಯವಸ್ಥೆ ತನ್ನದೇ ಆದ ವಸ್ತುಗಳನ್ನು ಸೃಷ್ಟಿಮಾಡುವ
ಕಾಲದವರೆಗೆ ರಕ್ಷಣೆಯನ್ನು ಒದಗಿಸಿಕೊಡುತ್ತದೆ. ಕೆಲವೊಂದು ರೋಗಿಗಳಲ್ಲಿ ರೋಗದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ್ರವವನ್ನು ಕೊಡಮಾಡಿದ ೧೨ ರಿಂದ ೪೮ ಘಂಟೆಗಳ ಅವಧಿಯಲ್ಲಿ ಅವರು ತೋರಿಸುತ್ತಿದ್ದ ತೀವ್ರತರ ಗುಣಲಕ್ಷಣಗಳು ದೂರವಾದುದು; ಆಕ್ಸಿಜೆನ್ ಸಂತೃಪ್ತತೆ ಹೆಚ್ಚಿದುದು ಮತ್ತು ಉರಿಯೂತ ಲಕ್ಷಣಗಳು ಹಿಮ್ಮೆಟ್ಟಿದುದು ಗೋಚರಿಸಿವೆ. ಇಂದು ಕರೋನ ವೈರಸ್‌ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇನ್ನೂವರೆಗೆ ಲಭ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಅನೇಕ ಬಗೆಯ ಚಿಕಿತ್ಸಾ ವಿಧಾನಗಳು ಪ್ರಾಯೋಗಕ ಹಂತದಲ್ಲಿದೆ. ಅದರಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಒಂದು. ಈ ಬಗೆಯ ಚಿಕಿತ್ಸೆಯನ್ನು ಕೋವಿಡ್-೧೯ ಚಿಕಿತ್ಸಾ ವಿಧಾನಗಳು ಪ್ರಾಯೋಗಕ ಹಂತದಲ್ಲಿದೆ. ಅದರಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಒಂದು. ಈ ಬಗೆಯ ಚಿಕಿತ್ಸೆಯನ್ನು ಕೋವಿಡ್-೧೯ ರೋಗದಿಂದ ತೀವ್ರಸ್ವರೂಪದ ಕಾಯಿಲೆ ಹೊಂದಿದವರಲ್ಲಿ ಪ್ರಯೋಗಿಸಬಹುದೆAದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಅಂತಹ ಪ್ರಯೋಗಗಳು ಕೇರಳ, ದಿಲ್ಲಿ, ಚಂದೀಘಡ, ಪುಣೆ, ಚನೈ ಮತ್ತು ಬೆಂಗಳೂರಿನಲ್ಲಿ ಪ್ರಾರಂಭವಾಗಿವೆ. ಇಂತಹ ಪ್ರಯೋಗಗಳನ್ನು ಡ್ರಗ್ ಕಂಟ್ರೋಲರ್ ಆಫ್ü ಇಂಡಿಯ ಮತ್ತು ನೀತಿಮತ್ತೆ (ಎಥಿಕ್ಸ್) ಸಮಿತಿಯ ಪರವಾನಗಿ ಪಡೆದು ಕೈಕೊಳ್ಳಬಹುದು. ಸೌಮ್ಯ-ಮಧ್ಯಮರೀತಿಯ ಲಕ್ಷಣಗಳನ್ನು ತೋರ್ಪಡಿಸುವ ರೋಗಿಗಳಲ್ಲಿ ಈ ವೆಚ್ಚದಾಯಕ ಚಿಕಿತ್ಸೆಯನ್ನು ಕೈಗೊಳ್ಳಲಾಗದು. ಈ ಚಿಕಿತ್ಸೆಯನ್ನು ಅತಿ ಶ್ರದ್ಧೆಯ ಶುಶ್ರೂಷಾ ಘಟಕ (ಐ.ಸಿ.ಯು.) ದಲ್ಲಿ ಉಸಿರ್ದುಂಬಿಕೆಯಂತ್ರ (ವೆಂಟಿಲೇಟರ್)ದ ಆಶ್ರಯದಲ್ಲಿರುವ ತೀವ್ರಸ್ವರೂಪದ ರೋಗಿಯಲ್ಲಿ ಮಾತ್ರ ಬಳಸಬಹುದು. ಈ ವಿಧಾನ ಯಶಸ್ವಿಯಾದರೆ ಅದು ಕೋವಿಡ್-೧೯ರಿಂದ ನರಳುವ ರೋಗಿಗಳ ಜೀವವನ್ನು ಉಳಿಸಬಲ್ಲದು. ಪ್ಲಾಸ್ಮಾ ಪೂರಣ ವ್ಯಾಕ್ಸಿನ್ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ಚಿಕಿತ್ಸೆ ರೋಗದ ವಿರುದ್ಧ ಸೆಣೆಸುವ ಸಾಮರ್ಥ್ಯ ಕಳೆದುಕೊಂಡಿರುವ ವ್ಯಕ್ತಿಯಲ್ಲಿ ಮಾತ್ರ ರಕ್ಷಣೆಯನ್ನು ಕೊಡಬಲ್ಲದು. ರಕ್ತದ್ರವವನ್ನು ಕೊಡುವ ಮೊದಲು ದಾನಿಯ ಮತ್ತು ಅದನ್ನು ಪಡೆಯುವ ವ್ಯಕ್ತಿಯ ರಕ್ತಗುಂಪುಗಳ ಹೊಂದಾಣಿಕೆಯಿರಬೇಕು. ಒಮ್ಮೆ ೪೦೦-೫೦೦ ಮಿಲೀ ರಕ್ತದ್ರವತೆಗೆದ ಮೇಲೆ ಅರ್ಧಭಾಗವನ್ನು ಒಬ್ಬ ರೋಗಿಗೆ, ಉಳಿದರ್ಧ ಭಾಗವನ್ನು ಮತ್ತೊಬ್ಬ ರೋಗಿಗೆ ಕೊಡಬಹುದು. ಕೆಲವೊಮ್ಮೆ ಅದನ್ನು ಸಂಗ್ರಹಿಸಿಡಲೂ ಬಹುದು. ಈ ರೀತಿಯ ಪ್ಲಾಸ್ಮಾ ಚಿಕಿತ್ಸೆಯನ್ನು ಹಿಂದೆ ಉಸಿರಾಟ ಸೋಂಕು ರೋಗಗಳಲ್ಲಿ ಬಳಸಲಾಗಿದೆ. ಅದನ್ನು ಯಶಸ್ವಿಯಾಗಿ ಹಿಂದೆ ಗೋಚರಿಸಿದ್ದ ತೀವ್ರತರ ಕೂರಾದ ಉಸಿರಾಟ ಲಕ್ಷಣಕೂಟ (ಸಾರ್ಸ್) ಮತ್ತು ಮಧ್ಯಪೂರ್ವ ಉಸಿರಾಟ ಲಕ್ಷಣಕೂಟ (ಮೆರ್ಸ್) ದಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದಿತು. ಪ್ಲಾಸ್ಮಾವನ್ನು ದಾನಮಾಡುವುದು ರಕ್ತದಾನ ಮಾಡಿದಂತೆಯೇ ಇದೆ. ಪ್ಲಾಸ್ಮಾ ದಾನಿಗಳ ಶಿರೆಗಳಿಂದ ಹರಿದುಬರುವ ಚಿಕ್ಕದೊಂದು ಸಾಧನದ ಮೂಲಕ ಹೊರಬರುವಾಗ ಅದು ರಕ್ತದ್ರವವನ್ನು ಬೇರ್ಪಡಿಸುತ್ತದೆ. ಮತ್ತು ರಕ್ತಕಣಗಳನ್ನು ರಕ್ತದಾನಿಯ ದೇಹಕ್ಕೆ ಮರಳಿಸುತ್ತದೆ. ಸಾಮಾನ್ಯ ರಕ್ತದಾನದಲ್ಲಿ ಪುನಃ ರಕ್ತದಾನ ಮಾಡಲು ಕೆಲವು ಕಾಲ ಕಾಯಬೇಕು. ಆ ಅವಧಿಯಲ್ಲಿ ರಕ್ತಕಣಗಳ ತಯಾರಿಕೆಗೆ ಅವಕಾಶ ದೊರೆಯುತ್ತದೆ. ಇಂತಹ ಸಮಸ್ಯೆ ರಕ್ತದ್ರವದ ದಾನದಲ್ಲಿಲ್ಲ ರಕ್ತದ್ರವವನ್ನು ವಾರದಲ್ಲಿ ಎರಡು ಬಾರಿ ಯಾವುದೇ ದುಷ್ಪರಿಣಾಮವಿಲ್ಲದೆ ದಾನಮಾಡಬಹುದು. ಪ್ಲಾಸ್ಮಾಚಿಕಿತ್ಸೆ ರೋಗವನ್ನು ಗುಣಪಡಿಸದು ಎಂಬುದು ಗಮನದಲ್ಲಿರಬೇಕು. ಕೋವಿಡ್-೧೯ ಆರೈಕೆಯಲ್ಲಿ ಪ್ಲಾಸ್ಮಾ ಕೊಡುಗೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದರ ಸಾರ್ವತ್ರಿಕ ಬಳಕೆಗೆ ಬಲವಾದ ಪುರಾವೆಗಳು ಬೇಕು. ಅದನ್ನು ಸಂಶೋಧನೆಗೆ ಇಲ್ಲವೆ ಪ್ರಾಯೋಗಿಕ (ಟ್ರಯಲ್) ವಾಗಿಬಳಸಬಹುದು. ಕೋವಿಡ್-೧೯ ರೋಗಿಗಳ ಆರೈಕೆಯಲ್ಲಿ ಪ್ಲಾಸ್ಮಾ ಪೂರಣ ತನ್ನ ಸಾಮರ್ಥ್ಯವನ್ನು ಇನ್ನೂ ಬಲವಾಗಿ ಪ್ರದರ್ಶಿಸಬೇಕಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content