ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್ ರೋಗದ ಬೆಳವಣಿಗೆಗೆ ತಡೆ – ಸಂಪಾದಕೀಯ

ಮೂರು ತಿಂಗಳ ಹಿಂದೆ ಚೀನಾಕ್ಕೆ ಸೀಮಿತವಾಗಿದ್ದ ಕೋವಿಡ್ ರೋಗ ಮಾರ್ಚ್ 28ರ ವೇಳೆಗೆ ಜಗತ್ತಿನ 177 ರಾಷ್ಟ್ರಗಳಲ್ಲಿ ವ್ಯಾಪಿಸಿ 6.21 ಲಕ್ಷ ಜನರು ಕೋವಿಡ್-19ರ ಸೋಂಕಿಗೆ ಒಳಗಾದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 28,658 ಜನರು ಸಾವಿಗೀಡಾಗಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಸೋಂಕಿಗೀಡಾದವರ ಸಂಖ್ಯೆ ಮತ್ತು ಮರಣಹೊಂದಿದವರ ಸಂಖ್ಯೆ (ಕಂಸದಲ್ಲಿ) ಚೀನಾ 81,907 (3,299), ಇಟಲಿ 86,498 (9134), ಸ್ಪೇನ್ 72,248 (56,690), ಫ್ರಾನ್ಸ್ 33,437 (1,998), ಜರ್ಮನಿ 53,340 (399), ಇರಾನ್ 35,408 (2,517), ಇಟಲಿ ಮತ್ತು ಸ್ಪೇನ್‍ನಲ್ಲಿ ಸಾವಿಗೀಡಾದವರ ಸಂಖ್ಯೆ ಚೀನಾವನ್ನು ಮೀರಿಸಿದೆ ಅಮೆರಿಕಾ 1,05,470 (1,710), ದಕ್ಷಿಣಕೊರಿಯಾ 9,478 (144), ಭಾರತ 933 (21) ಭಾರತದಲ್ಲಿ ಹೆಚ್ಚು ದೃಢಪಟ್ಟಿರುವ ಪ್ರಕರಣಗಳು ಮಹಾರಾಷ್ಟ್ರ (150), ಕೇರಳ (176) ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 81 ಅದರಲ್ಲಿ ಬೆಂಗಳೂರಿನಲ್ಲಿ 41 ಸೋಂಕಿತರು ಸೇರಿದ್ದಾರೆ.

ಈಗ ಭಾರತದಲ್ಲಿ. ರೋಗ ಮೂರನೇ ಹಂತಕ್ಕೆ ಸಾಗುವುದನ್ನು ತಪ್ಪಿಸಲು ಇಡೀ ಭಾರತ ಲಾಕ್‍ಡೌನ್ ಆಗಿದ್ದು, ರೈಲ್ವೆ, ವಿಮಾನ, ಬಸ್ ಸಂಚಾರ ನಿಂತು ಹೋಗಿದ್ದು, ಜನ ಮೇ 3ರವರೆಗೆ ಮನೆಯಲ್ಲಿಯೇ ಉಳಿದಿರಬೇಕಾಗಿರುವ ಆದೇಶವನ್ನು ನೀಡಲಾಗಿದೆ. ಇಂದು ಚೀನಾದಿಂದ ರೋಗ ಮಾಯವಾಗಿದೆ. ದಕ್ಷಿಣ ಕೊರಿಯ ರೋಗದ ಬೆಳವಣಿಗೆಯ ಹಂತದಲ್ಲಿಯೇ ಮೊಟಕುಗೊಳಿಸಿದುದು ಎಲ್ಲರಿಗೆ ಪಾಠವಾಗಬೇಕಿದೆ. ಕೋವಿಡ್ 19 ಯುರೋಪಿನ ಇತರ ರಾಷ್ಟ್ರಗಳಾದ ಸ್ಪೈನ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡಿನಲ್ಲಿ ವಿಶೇಷವಾಗಿ ಗೋಚರಿಸಿದೆ. ಹಾಗೆಯೇ ಅದು ಅಮೆರಿಕೆಯಲ್ಲೂ ತನ್ನ ಪ್ರಭಾವ ಬೀರಿ ದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಿದೆ. ಇಂದು ವಿಶ್ವವ್ಯಾಪಿಯಾಗಿರುವ ಕೋವಿಡ್-19 ರೋಗವನ್ನು ವಿಶ್ವಆರೋಗ್ಯ ಸಂಸ್ಥೆ ಖಂಡಾಂತರ ಪಿಡುಗು ಎಂದು ಘೋಷಿಸಿದೆ. ಈ ರೋಗದಿಂದ ನರಳಿ ಉಂಟಾಗುವ ಸಾವು-ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಜನಜೀವನದ ಪ್ರತಿಯೊಂದು ಪ್ರಕ್ರಿಯೆಯ ಮೇಲೆ ತನ್ನ ಕರಾಳ ಛಾಯೆಯನ್ನು ಬೀರಿದೆ.

ಭಾರತದಲ್ಲಿ ಜನವರಿ ಫೆಬ್ರವರಿಯಲ್ಲಿ ಕಂಡುಬಾರದ ರೋಗ ಮಾರ್ಚ್‍ನಲ್ಲಿ ಗೋಚರಿಸಿದ್ದು ರೋಗ ಪ್ರತಿರೋಧ ಕ್ರಮಗಳನ್ನು ಕೈಕೊಳ್ಳಲಾಗಿದೆ. ಕರೋನ ರೋಗದಿಂದ ನರಳಿ ಸತ್ತ ಘಟನೆ ಕಲಬುರಗಿಯಲ್ಲಿ ಮಾರ್ಚ್ 10 ರಂದು ಜರುಗಿತು. ಸೌದಿ ಅರೇಬಿಯಕ್ಕೆ ಭೇಟಿಕೊಟ್ಟು ಬಂದಿದ್ದ ರೋಗಿ ಕೋವಿಡ್‍ಗೆ ಬಲಿಯಾದುದು ದೇಶದಾದ್ಯಂತ ಸುದ್ದಿಯಾಯಿತು. ಮಾರ್ಚ್ ಕೊನೆಯ ವೇಳೆಗೆ ಕರ್ನಾಟಕದಲ್ಲಿ ಮತ್ತಿಬ್ಬರ ಸಾವಿಗೆ ಕೋವಿಡ್ ಕಾರಣವಾಯಿತು. ದೇಶದಲ್ಲಿ 1000ಕ್ಕೆ ಮೀಲ್ಪಟ್ಟು ಸೋಂಕಿತರು ಪತ್ತೆಯಾಗಿದ್ದು (ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ) 30 ಜನ ಮರಣ ಹೊಂದಿದ್ದಾರೆ. ಈ ಶ್ವಾಸಕೋಶ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ ವಾದುದರಿಂದ ವ್ಯಕ್ತಿ-ವ್ಯಕ್ತಿ ಮಧ್ಯ ಅಂತರ ಕಾಯ್ದುಕೊಳ್ಳುವುದು, ಸೀನುವಾಗ, ಕೆಮ್ಮುವಾಗ ಮೂಗು ಬಾಯಿಯನ್ನು ಮೊಣಕ್ಕೆ ಇಲ್ಲವೆ ಟಿಷ್ಯೂನಿಂದ ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ಸೋಪು-ನೀರಿನಿಂದ ಚೊಕ್ಕಟವಾಗಿ ತೊಳೆದುಕೊಳ್ಳುವುದು ಕಣ್ಣು, ಮೂಗು ಮತ್ತು ಬಾಯನ್ನು ತೊಳೆಯದ ಕೈಗಳಿಂದ ಸ್ಪರ್ಶಿಸದಿರುವುದು. ವ್ಯಕ್ತಿಗತ ಸಂಪರ್ಕವನ್ನು ನಿಷೇದಿಸಿ, ಪದೇ ಪದೇ ಸ್ಪರ್ಶಿಸುವ ವಸ್ತುಗಳನ್ನು ಆಗಾಗ್ಗೆ ಚೊಕ್ಕಟ ಮಾಡುವುದು, ಸೋಂಕು ಸೇರದಂತೆ ಜಾಗೃತಿ ವಹಿಸುವುದು. ರೋಗ ಪ್ರತಿಬಂಧದಲ್ಲಿ ಪ್ರಮುಖ ಕ್ರಮಗಳಾಗಿವೆ. ಜನರ ಓಡಾಟ, ಗುಂಪುಗೂಡಿಕೆಯನ್ನು ತಪ್ಪಿಸಲು ರೈಲು, ಬಸ್, ವಿಮಾನಯಾನ ದೇಶಾದಾದ್ಯಂತ ಮೂರು ವಾರರದ್ದಾಗಿದೆ. ಜನರು ಹೊರಬಂದು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ದೇಶಕ್ಕೆ ದೇಶವೇ ಲೌಕ್‍ಡೌನ್ ಆಗಿ ಜನ ಗೃಹಬಂಧನದಲ್ಲಿದ್ದಾರೆ. ಈ ಕ್ರಮಗಳಿಂದಾಗಿ ಕೋವಿಡ್‍ರೋಗ ಹತೋಟಿಗೆ ಬರುವಲ್ಲಿ ಯಶಸಿಯಾಗಿದೆ. ಈ ಕಾರ್ಯಕ್ರಮದಲ್ಲಿ ಜನರೆಲ್ಲರ ಸಕ್ರಿಯ ಸಹಕಾರ ಅತ್ಯಗತ್ಯ. ಕರ್ನಾಟಕ ಸರಕಾರ ಕೋವಿಡ್ 19 ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು.

ಕಳೆದ ದಶಕದ ಅಂತ್ಯದಲ್ಲಿ ಚೀನಾದ ಹೂಬೆ ಪ್ರಾಂತ್ಯದ ರಾಜಧಾನಿ ವೂಹನ್‍ನಲ್ಲಿ ಗೋಚರಿಸಿದ ಸೋಂಕಿನ ಕಾರಣ ವಾರ ಕಳೆಯುವಲ್ಲಿ ಕರೋನ ವೈರಸ್‍ನ ನಾವಿನ್ಯ ರೂಪವೆಂದು ಗುರುತಿಸಲ್ಪಟ್ಟಿತು. ಈ ರೋಗ ಕಾಡ್ಗಿಚ್ಚಿನಂತೆ ನಗರವನ್ನು ಮತ್ತು ಸುತ್ತಲ ಪ್ರದೇಶವನ್ನು ವ್ಯಾಪಿಸಿ ಜನರನ್ನು ರೋಗಿಷ್ಟರನ್ನಾಗಿ ಮಾಡಿ ಸಾವಿನ ಮೇಜವಾನಿ ಏಕಾಏಕಿ ಹೆಚ್ಚಿತು. ಚೀನಾದಲ್ಲಿ 81,659 ಜನರುಕೋವಿಡ್ 19 ರೋಗದಿಂದ ನರಳಿ 3,237 ಜನ ಅದರಿಂದ ಮರಣ ಹೊಂದಿದರು. ಈ ರೋಗ ಪಿಡುಗು ರೂಪಧಾರಣ ಮಾಡಿದುದನ್ನು ಕಂಡಕೂಡಲೇ ಆ ನಗರದಲ್ಲಿ ಚೀನಾ ದಿಗ್ಬಂಧನವನ್ನು ಹೇರಿ ಜನರನ್ನು ಗೃಹಬಂಧನದಲ್ಲಿರಿಸಿ ಜನಜೀವನವನ್ನು ವಾರಗಟ್ಟಲೆ ಸ್ತಬ್ಧಗೊಳಿಸಿತು. ಇದರ ಫಲವಾಗಿ ಜನ ಗುಂಪುಗೂಡುವುದು, ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡುವುದು ತಪ್ಪಿತು. ಎರಡೂವರೆ ತಿಂಗಳು ಕಳೆಯುವಲ್ಲಿ ರೋಗ ಸಂಪೂರ್ಣ ತಹಬಂದಿಗೆ ಬಂದಿತು. ಮಾರ್ಚ್ 20ರ ವೇಳೆಗೆ ದೇಶದಲ್ಲಿ ಯಾವುದೇ ಹೊಸ ರೋಗಿ ಕಂಡುಬರಲಿಲ್ಲ. ಈ ದಿಗ್ಭಂಧನದಿಂದ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸರಪಳಿ ಭಗ್ನಗೊಂಡಿತು ಅಲ್ಲಿ ಪ್ರಯಾಣದ ಮೇಲೆ ನಿರ್ಬಂಧ ಹಾಕಲಾಯಿತು. ಜನರು ಹೆಚ್ಚು ಸಂಖ್ಯೆಯಲ್ಲಿ ಸೇರುವುದಕ್ಕೆ ಪ್ರತಿಬಂಧ, ಸಭೆ-ಸಮ್ಮೇಳನಗಳಿಗೆ ಅವಕಾಶ ಕೊಡದಿರುವುದು, ಶಾಲಾ-ಕಾಲೇಜುಗಳನ್ನು ಬಂದು ಮಾಡುವುದು ಹೀಗೆ ಪ್ರತಿಬಂಧಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡುದರಿಂದ ರೋಗ ಅಗೋಚರವಾಯಿತು.

ಚೀನಾದ ನಂತರ ಮೆಡಿಟರೇಯನ್ ತೀರದ ರಾಷ್ಟ್ರ ಇಟಲಿಯು ಕೋವಿಡ್-19ರ ಕೇಂದ್ರವಾದುದು ಹೇಗೆ ಎಂಬುದು ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಅಲ್ಲಿಕೊವಿಡ್ ಸೋಂಕಿನಿಂದ ಸತ್ತವರ ಸಂಖ್ಯೆ 4000 ವನ್ನು ದಾಟಿ ಅದು ಸೋಂಕು ಹೊಂದಿದವರಲ್ಲಿ ಸತ್ತವರ ಸಂಖ್ಯೆ ಶೇಕಡ 8.6 ರಷ್ಟು. ಈ ರೋಗ ವೃದ್ಧರಲ್ಲಿ (ಸರಾಸರಿ 78 ವರುಷ ದಾಟಿದವರು) ಮತ್ತು ಬೇರೆ ಬೇರೆ ದೈಹಿಕ ರೋಗಗಳನ್ನು ಹೊಂದಿದವರಲ್ಲಿ ವಿಶೇಷವಾಗಿದ್ದಿತು. ಆ ತರ್ಕ ಜಪಾನ್ ದೇಶಕ್ಕೆ ಹೋಲಿಸಿದಾಗ ಸಾವಿಗೆ ವಯಸ್ಸೊಂದೇ ಕಾರಣವಲ್ಲ ಎಂಬುದನ್ನು ತೋರಿಸುತ್ತದೆ. ಅಲ್ಲೂ ವೃದ್ಧರ ಸಂಖ್ಯೆ ಹೆಚ್ಚು. ಆಲ್ಲಿ ಕೊವಿಡ್‍ನಿಂದ ಸತ್ತವರ ಸಂಖ್ಯೆ 35 ಮಾತ್ರ. ಇಟಲಿಯಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ಕೋವಿಡ್ ಪಿಡುಗು ಒಂಟೆಯ ಮೇಲೆ ಬೀಸಿದ ಕೊನೆಯ ಪೆಟ್ಟಾಯಿತು. ದೇಶ ನೋಡಲು ಬಂದ ಪ್ರವಾಸಿಗರ ಮೇಲೆ ಕಟ್ಟುನಿಟ್ಟಾಗಿ ನಿಗಾವಹಿಸುವುದು, ಸೀಮಿತ ಆರೋಗ್ಯ ಸೇವಾ ಸೌಲಭ್ಯಗಳು, ರೋಗ ತಡೆಯುವ ಪ್ರತಿರೋಧ ಕ್ರಮ ಮತ್ತು ಚಿಕಿತ್ಸೆಗೆ ಇರುವ ಸೌಲಭ್ಯಗಳ ಕೊರತೆ ಇಟಲಿಯಲ್ಲಿ ಸಾವಿನ ಪ್ರಮಾಣವನ್ನು ಏಕಾಏಕಿ ಹೆಚ್ಚಿಸಿ ಅಂತ್ಯಕ್ರಿಯೆಗೆ ಸ್ಥಳದ ಕೊರತೆಯನ್ನು ಎದುರಿಸುವಂತೆ ಮಾಡಿದೆ.

ಇಟಲಿಯಲ್ಲಿ ರೋಗದ ಸೋಂಕು ಉಗ್ರರೂಪ ತಾಳಿ ಪ್ರಕಟವಾಗುವವರೆಗೂ ದೇಶದ ತುಂಬಾ ಹರಡಿಹೋಗಿದ್ದಿತು. ಜನವರಿ ಮಧ್ಯಭಾಗದಿಂದಲೇ ರೋಗದ ಲಕ್ಷಣಗಳನ್ನು ಅಲ್ಲಿನ ಜನ ತೋರಲಾರಂಭಿಸಿದ್ದರು. ಉತ್ತರ ಇಟಲಿಯ ಲಂಬಾರ್ಡಿ ಕೋವಿಡ್-19 ಸೋಂಕಿನ ಕೇಂದ್ರವೆನಿಸಿತು . ಅಲ್ಲಿ ರೋಗಿಷ್ಟರಾದವರ ಸರಾಸರಿ ವಯಸ್ಸು 69 ರೋಗದ ಸೋಂಕಿಗೊಳಗಾದ ಶೇಕಡಾ 47ರಷ್ಟು ರೋಗಿಗಳು ಆಸ್ಪತ್ರೆ ಸೇರಬೇಕಾಯಿತು. ಅವರಲ್ಲಿ ಶೇ. 18ರಷ್ಟು ರೋಗಿಗಳು ಅತಿ ಶ್ರದ್ಧೆಯ ಶುಶ್ರೂಷಾ ಘಟಕಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇಟಲಿಯಲ್ಲಿ ರೋಗದ ಸೋಂಕು ತುಂಬಾ ವೇಗವಾಗಿ ಪ್ರಸರಣಗೊಂಡಿತು.

ಚೀನಾಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಷ್ಟರಾಗಿ ಚಿಕಿತ್ಸೆ ಗೊಳಗಾದರು. ಸೀಮಿತ ಸಂಖ್ಯೆಯಲ್ಲಿನ ಆಸ್ಪತ್ರೆಗಳು ಒಮ್ಮೆಲೇ ಸಹಸ್ರಾರು ರೋಗಿಗಳ ಚಿಕಿತ್ಸೆಯನ್ನು ಕೈಕೊಳ್ಳಬೇಕಾಯಿತು. ಅಲ್ಲಿ ಸತ್ತವರ ಸಂಖ್ಯೆ ಚೀನಾದ ಸಾವಿನ ಸಂಖ್ಯೆಯನ್ನು ಮೂರು ಪಟ್ಟು ಮೀರಿಸಿತು. ಚೀನಾದಲ್ಲಿ ರೋಗದ ಪಿಡುಗು ವ್ಯಾಪಕವಾದುದನ್ನು ಕಂಡ ದಕ್ಷಿಣ ಕೊರಿಯ ಬೇಗನೆ ಎಚ್ಚೆತ್ತು ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ವ್ಯಾಪಕ ಕಾರ್ಯಕ್ರಮ ಹಾಕಿಕೊಂಡು ರೋಗ ಪ್ರಕಟಗೊಳ್ಳುವ ಮೊದಲೇ ಹತೋಟಿಗೆ ತಂದುದು ಎಲ್ಲರಿಗೆ ಪಾಠವಾಗಬೇಕಿದೆ.

ಲಾಕ್ ಡೌನ್ ಆದ ಕಾಲದಲ್ಲಿ ಅಳವಡಿಸಿದ ನಿಯಮಗಳನ್ನು ಮುರಿಯುವುದು ಜೀವದ ಜೊತೆ ಚಲ್ಲಾಟವಾಡಿದಂತೆ ಎಂದು ಪ್ರಧಾನಿ ಮೋದಿಯವರು ಜನರ ಗಮನ ಸೆಳೆದಿದ್ದಾರೆ. ಅದಕ್ಕಾಗಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮತ್ತು ಮೂರು ವಾರಗಳ ಕಾಲ ಮನೆಯಲ್ಲಿಯೇ ಇರುವುದು ಬಹು ಮುಖ್ಯ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಅತಿ ಸೂಕ್ಷ್ಮಜೀವಿಯ ಎದುರು ಸೆಣೆಸಲು ಭಾರತವನ್ನೊಳಗೊಂಡಂತೆ ಜಗತ್ತು ತೆಗೆದುಕೊಂಡ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ದೊರೆಯದು. ಇದೊಂದು ಸಾವು-ಬದುಕಿನ ಹೋರಾಟವಾಗಿದ್ದು, ಜಗತ್ತು ಕೊರೋನಾ ವೈರಸ್ ಹೆಡಿತದಲ್ಲಿ ಸಿಲುಕಿ ಅದರ ವಿರುದ್ದ ನಿರಂತರ ಹೋರಾಟ ನಡೆಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content