ಅಧ್ಯಕ್ಷರ ಲೇಖನಿಯಿಂದ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಅಕಾಡೆಮಿ)ಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರಕಿರುವುದು ನನಗೆ ಸಂದ ಗೌರವದ ವಿಷಯವಾಗಿದ್ದು, ಅದರೊಂದಿಗಿರುವ ಜವಾಬ್ದಾರಿಯನ್ನು ನಾನು ಗಂಭೀರವಾಗಿ ಸ್ವೀಕರಿಸುತ್ತೇನೆ. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಅಕಾಡೆಮಿಯು ರಾಜ್ಯದ ಎಲ್ಲ ಭಾಗಗಳಲ್ಲೂ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಸರಿಸುವ ಹಾಗೂ ವಿಜ್ಞಾನ ಜನಪ್ರಿಯಗೊಳಿಸುವತ್ತ ಪ್ರಮುಖ ಪಾತ್ರ ವಹಿಸುತ್ತಿದೆ.
ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಯು.ಆರ್. ರಾವ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಬಾಹ್ಯಾಕಾಶ ಇಲಾಖೆ ಇವರ ದೂರದೃಷ್ಟಿಯ ನಾಯಕತ್ವದಲ್ಲಿ ಅಕಾಡೆಮಿಯು ಸ್ಥಾಪಿತವಾಯಿತು. ನಂತರ, ಪದ್ಮಶ್ರೀ ಪುರಸ್ಕೃತ ಡಾ. ಎಸ್.ಕೆ. ಶಿವಕುಮಾರ್, ನಿರ್ದೇಶಕರು, ಯು.ಆರ್. ರಾವ್ ಉಪಗ್ರಹ ಕೇಂದ್ರ ಇವರು 2017 ರಿಂದ 2019 ರವರೆಗೆ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ನಂತರ ಪದ್ಮಶ್ರೀ ಪುರಸ್ಕೃತ ಪ್ರೊ. ಎಸ್. ಅಯ್ಯಪ್ಪನ್, ಮಹಾನಿರ್ದೇಶಕರು, ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐ.ಸಿ.ಎ.ಆರ್.), ಇವರು 2021 ರಿಂದ 2023 ರವರೆಗೆ ಸೇವೆ ಸಲ್ಲಿಸಿದರು. ಇಂತಹ ಗಣ್ಯರು ಸಾಗಿ ಬಂದ ಮಾರ್ಗವನ್ನು ನಾನು ಮುಂದುವರೆಸುವೆ ಎಂಬುದು ನನಗೆ ಹೆಮ್ಮೆ ಮತ್ತು ಜವಾಬ್ದಾರಿಯ ಸಂಗತಿಯಾಗಿದೆ.
ಮುಂದುವರಿದು, ಅಕಾಡೆಮಿಯು ತನ್ನ ಗುರಿಗಳನ್ನು ಹೊಸ ಉತ್ಸಾಹದಿಂದ ಕಾರ್ಯಗತಗೊಳಿಸುತ್ತಿದ್ದು, ವಿಜ್ಞಾನ ಸಂವಹನದ ಮೂಲಕ, ಅದರಲ್ಲೂ ಕನ್ನಡದಲ್ಲಿ, ಎಲ್ಲಾ ವರ್ಗಗಳಲ್ಲಿಯೂ ವೈಜ್ಞಾನಿಕ ಚಿಂತನೆ ಬೆಳೆಸುವುದು, ಸಾರ್ವಜನಿಕರು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ವೃದ್ಧಿಸುವುದು ಹಾಗೂ ದಿನನಿತ್ಯದ ಜೀವನದಲ್ಲಿ ವಿಜ್ಞಾನವನ್ನು ಒಳಗೊಳ್ಳುವಂತೆ ಮಾಡುವ ಯೋಜನೆಯಿದೆ. ನಮ್ಮ ಭವಿಷ್ಯದ ಕಾರ್ಯಕ್ರಮಗಳು ಕರ್ನಾಟಕದ ವೈಜ್ಞಾನಿಕ ಸಾಕ್ಷರತೆಯನ್ನು ಹೆಚ್ಚಿಸುವುದು, ವೈಜ್ಞಾನಿಕ ಕಲಿಕೆಯನ್ನು ಉತ್ತೇಜಿಸುವುದು ಹಾಗೂ ವಿಶ್ವವಿದ್ಯಾಲಯಗಳು, ಕೈಗಾರಿಕೆ ಮತ್ತು ಸಾರ್ವಜನಿಕರ ನಡುವೆ ಬಲವಾದ ಸಂಪರ್ಕವನ್ನು ನಿರ್ಮಿಸುವತ್ತ ಸಾಗಲಿವೆ. ಇವೆಲ್ಲವು ವಿಜ್ಞಾನವನ್ನು ಹೆಚ್ಚಿನ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ, ಉಪಯೋಗವಾಗುವಂತೆ ಮತ್ತು ಕ್ರಿಯಾತ್ಮಕವಾಗುವಂತೆ ಮಾಡುವುದನ್ನು ಉದ್ದೇಶಿಸಿವೆ.
ಅಕಾಡೆಮಿಯು ಆಯೋಜಿಸಿರುವ ಕಾರ್ಯಾಗಾರಗಳು, ಸಮ್ಮೇಳನಗಳು, ಸಂಶೊಧನೆಗೆ ಪ್ರೋತ್ಸಾಹ, ಪ್ರಕಟಣೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳು ಹಾಗೂ ವಿಜ್ಞಾನ ಕಾರ್ಯಕ್ರಮಗಳು ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಹಾಗೂ ಸಾರ್ವಜನಿಕರು ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಲಿವೆ. ಮುಂದಿನ ದಿನಗಳಲ್ಲಿ ಅಕಾಡೆಮಿಯು ಸಮಾಜದ ಅಗತ್ಯಗಳು/ತೊಂದರೆಗಳನ್ನು ನಿವಾರಿಸುವ ನಾವಿನ್ಯತೆಗಳು/ನವೀನ ಆಲೋಚನೆಗಳು, ಹೊಸ ಪರಿಹಾರಗಳು ಹಾಗೂ ಉದ್ಯಮಶೀಲತೆಯನ್ನು, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದಲ್ಲಿ, ಉತ್ತೇಜಿಸುವ, ಪ್ರೋತ್ಸಾಹಿಸುವ ಮತ್ತು ಬಹುಮಾನ ನೀಡಿ ಗೌರವಿಸುವ ವಾತಾವರಣವನ್ನು ಸೃಷ್ಟಿಸಲು ಬಯಸುತ್ತದೆ. ಜೊತೆಗೆ, ಪ್ರಶಸ್ತಿ ಪುರಸ್ಕಾರಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಲಾಗುವ ಕೊಡುಗೆಗಳನ್ನು ಗುರುತಿಸುವುದು. ಉದಯೋನ್ಮುಖ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡುವ ಪ್ರಮುಖ ಸಂಪನ್ಮೂಲ ಕೇಂದ್ರವಾಗಿ ಕಾರ್ಯಪಡೆಯನ್ನು ವೃದ್ಧಿಸುವ ಮತ್ತು ಸಂಸ್ಥೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ.
ಇದಲ್ಲದೆ, ಅಕಾಡೆಮಿಯು ನೀತಿ ಸಲಹಾ ಸಂಸ್ಥೆಯಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ದೂರದೃಷ್ಟಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಬದ್ಧವಾಗಿದ್ದು, ಸಕ್ರಿಯವಾಗಿ ಕೊಡುಗೆ ನೀಡಲಿದೆ. ಸಹಕಾರದ ಮನೋಭಾವನೆ ಮತ್ತು ಅಂತರ್ಗತದ ತಳಹದಿಯೊಂದಿಗೆ, ವಿಜ್ಞಾನದ ಲಾಭವನ್ನು ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಮನೆಯವರೆಗೆ ತಲುಪಿಸಲು ಹಾಗೂ ಅದೇ ಸಮಯದಲ್ಲಿ ಪ್ರಶ್ನಿಸುವ ಪ್ರವೃತ್ತಿ, ನಾವೀನ್ಯತೆ ಮತ್ತು ಸಮಗ್ರತೆಯ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸುತ್ತೇವೆ.
ಈ ಮಹತ್ತರ ಗುರಿಯನ್ನು ಸಾಧಿಸುವ ಉದ್ದೇಶದಿಂದ ನಾವು ವಿಜ್ಞಾನ ಸಮುದಾಯ, ಶಿಕ್ಷಣ ತಜ್ಞರು, ನೀತಿ ನಿರೂಪಕರು ಹಾಗೂ ಸಾರ್ವಜನಿಕರಿಂದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೋರುತ್ತೇವೆ.